ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಒಂದು ದೇಶ ಒಂದು ಬ್ಯಾಂಕ್‌ ಆಶಯದ ನೆರವೇರಿಕೆಯೇ ?

ಸ್ಟೇಟ್ ಬ್ಯಾಂಕ್ ಸಂಗಡ ಇನ್ನೊಂದು ಬ್ಯಾಂಕ್ ಮಾತ್ರ ಉಳಿಯುತ್ತಿದ್ದು, ಇದು ‘ಒಂದು ದೇಶ, ಒಂದು ತೆರಿಗೆ’, ‘ಒಂದು ರೇಷನ್ ಕಾರ್ಡ್’, ‘ಒಂದು ನಾಗರಿಕ ಸಂಹಿತೆ’, ‘ಒಂದು ಗುರುತಿನ ಚೀಟಿ’ ಯಂತೆ ‘ಒಂದು ದೇಶ, ಒಂದು ಬ್ಯಾಂಕ್’ ಎಂದಾಗಬಹುದೇ? ಎಂಬ ಚಿಂತನೆಯು ಮುಖ್ಯವಾಗಿ ಬ್ಯಾಂಕಿಂಗ್ ವಲಯ ದಲ್ಲಿ ಕೇಳಿ ಬರುತ್ತಿದೆ.

ಯಕ್ಷಪ್ರಶ್ನೆ

ರಮಾನಂದ ಶರ್ಮಾ

ಸಾರ್ವಜನಿಕ ರಂಗದ ಸಣ್ಣ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಬೃಹತ್ ಯೋಜನೆಯನ್ನು ಸರಕಾರ ರೂಪಿಸುತ್ತಿದ್ದು, 2027ರ ಅಂತ್ಯದೊಳಗೆ ಅದನ್ನು ಪೂರ್ಣ ಗೊಳಿಸಲು ಕಾರ್ಯಪ್ರವೃತ್ತವಾಗಿದೆ ಎನ್ನಲಾಗುತ್ತಿದೆ. ಈಗ ಸಾರ್ವಜನಿಕ ರಂಗದ 12 ಬ್ಯಾಂಕು ಗಳಿದ್ದು, ಪ್ರಸ್ತಾವಿತ ವಿಲೀನ ಕಾರ್ಯಗತವಾದರೆ ಬ್ಯಾಂಕುಗಳ ದೊಡ್ಡಣ್ಣ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ವನ್ನು (ಎಸ್‌ಬಿಐ) ಹೊರತುಪಡಿಸಿ ಅವುಗಳ ಸಂಖ್ಯೆಯು ೨-೩ಕ್ಕೆ ಇಳಿಯಬಹುದು. ‌

ಇದು ‘ವಿಕಸಿತ ಭಾರತ 2047’ ಪರಿಕಲ್ಪನೆಯ ಭಾಗ ಎನ್ನಲಾಗುತ್ತಿದೆ. ಕಡಿಮೆ ಸಂಖ್ಯೆಯ, ಆರ್ಥಿಕ ವಾಗಿ ಬಲಿಷ್ಠವಾಗಿರುವ ದೊಡ್ಡ ಬ್ಯಾಂಕುಗಳನ್ನು ರಚಿಸಿ, ದೇಶದ ಮುಂದಿನ ಹಂತದ ಸಾಲ ವಿಸ್ತರಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಇಂಬು ನೀಡುವುದು ಈ ವಿಲೀನದ ಹಿಂದಿನ ಉದ್ದೇಶ ಎನ್ನಲಾಗುತ್ತಿದೆ.

ಕೆಲವು ವದಂತಿಗಳ ಪ್ರಕಾರ, ಸ್ಟೇಟ್ ಬ್ಯಾಂಕ್ ಸಂಗಡ ಇನ್ನೊಂದು ಬ್ಯಾಂಕ್ ಮಾತ್ರ ಉಳಿಯು ತ್ತಿದ್ದು, ಇದು ‘ಒಂದು ದೇಶ, ಒಂದು ತೆರಿಗೆ’, ‘ಒಂದು ರೇಷನ್ ಕಾರ್ಡ್’, ‘ಒಂದು ನಾಗರಿಕ ಸಂಹಿತೆ’, ‘ಒಂದು ಗುರುತಿನ ಚೀಟಿ’ ಯಂತೆ ‘ಒಂದು ದೇಶ, ಒಂದು ಬ್ಯಾಂಕ್’ ಎಂದಾಗಬಹುದೇ? ಎಂಬ ಚಿಂತನೆಯು ಮುಖ್ಯವಾಗಿ ಬ್ಯಾಂಕಿಂಗ್ ವಲಯದಲ್ಲಿ ಕೇಳಿ ಬರುತ್ತಿದೆ.

ಕಳೆದ ತಿಂಗಳು ನಡೆದ ಹಿರಿಯ ಬ್ಯಾಂಕರ್‌ಗಳು ಮತ್ತು ಹಣಕಾಸು ಮಂತ್ರಾಲಯದ ಅಧಿಕಾರಿಗಳ ‘ಚಿಂತನ-ಮಂಥನ’ ಸಭೆಯಲ್ಲಿ ಈ ನಿಟ್ಟಿನಲ್ಲಿ ವಿಸ್ತೃತ ಚರ್ಚೆಯಾಗಿದ್ದು, ಮುಂದಿನ ದಿನಗಳಲ್ಲಿ ವಿಲೀನದ ರೂಪರೇಷೆಗಳು ಹೊರ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Ramanand Sharma Column: ಕರ್ನಾಟಕ ಜಾತಿ ಗಣತಿ: ಮುಂದೈತೆ ಗೊಂದಲ ?

ಬ್ಯಾಂಕಿಂಗ್ ಉದ್ಯಮದಲ್ಲಿ ಇಂಥ ವಿಲೀನ ಚಟುವಟಿಕೆಯು ದಿಢೀರ್ ಬೆಳವಣಿಗೆಯಲ್ಲ; 1993ರಲ್ಲಿ, ಸಂಕಷ್ಟದಲ್ಲಿದ್ದ ‘ನ್ಯೂ ಬ್ಯಾಂಕ್ ಆಫ್ ಇಂಡಿಯಾ’ವನ್ನು ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ನಲ್ಲಿ ವಿಲೀನಗೊಳಿಸಿ ಠೇವಣಿದಾರರ ಹಿತವನ್ನು ರಕ್ಷಿಸಲಾಯಿತು. ರಿಸರ್ವ್ ಬ್ಯಾಂಕ್‌ನ ನಿವೃತ್ತ ಗವರ್ನರ್ ನರಸಿಂಹನ್ ಅವರು ಬ್ಯಾಂಕುಗಳ ವಿಲೀನದ ಬಗ್ಗೆ 1993 ಮತ್ತು 1998ರಲ್ಲಿ ವಿಸ್ತೃತ ವರದಿ ನೀಡಿದರೂ, ಬ್ಯಾಂಕುಗಳ ವಿಲೀನದ ವಿಷಯವು 2017ರವರೆಗೆ ಆಗೊಮ್ಮೆ ಈಗೊಮ್ಮೆ ಸದ್ದುಮಾಡಿ ತಣ್ಣ ಗಾಯಿತೇ ವಿನಾ, ವಿಲೀನ ಪ್ರಕ್ರಿಯೆಯಲ್ಲಿ ಪ್ರಗತಿಯಾಗಲಿಲ್ಲ. ‌

ಆದರೆ 2017ರಲ್ಲಿ ಸರಕಾರವು ದಿಢೀರ್ ಎಂದು ಬ್ಯಾಂಕುಗಳ ವಿಲೀನಕ್ಕೆ ಮುಂದಾಯಿತು; ಬಹುತೇಕ ಒಂದೇ ರೀತಿಯ ಸಾಫ್ಟ್‌ ವೇರ್/ಕಾರ್ಯವಿಧಾನವನ್ನು ನೆಚ್ಚಿರುವ ಎಸ್‌ಬಿಐನ ಐದು ಸಹವರ್ತಿ ಬ್ಯಾಂಕುಗಳನ್ನು ಮತ್ತು ನಿರೀಕ್ಷೆಗೆ ತಕ್ಕಂತೆ ವಿಸ್ತರಣೆಗೊಳ್ಳದ ಭಾರತೀಯ ಮಹಿಳಾ ಬ್ಯಾಂಕನ್ನು ಎಸ್ ಬಿಐನಲ್ಲಿ ವಿಲೀನಗೊಳಿಸಲಾಯಿತು.

Screenshot_2 ಋ

ಉದ್ಯೋಗಿಗಳಿಂದ ಅಂಥದ್ದೇನೂ ವಿರೋಧ ವ್ಯಕ್ತವಾಗದೆ ಸದರಿ ವಿಲೀನ ಪ್ರಕ್ರಿಯೆಯು ಸಲೀಸಾಗಿ ಕೈಗೂಡಿದ್ದನ್ನು, ವಿಲೀನದ ನಂತರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದನ್ನು ಕಂಡು ಸರಕಾರ ವು 2019ರಲ್ಲಿ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್‌ಗಳನ್ನು (ಇವೆರಡೂ ಸಣ್ಣ ಗಾತ್ರದವು), ದೊಡ್ಡ ಗಾತ್ರದ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಿತು. ‌

ಇಂಥ ವಿಲೀನದಿಂದಾಗಿ ನಿರ್ವಹಣಾ ವೆಚ್ಚದಲ್ಲಿ ಭಾರಿ ಕಡಿತವಾಗಿದ್ದನ್ನು ಮನಗಂಡ ಸರಕಾರವು 2020ರಲ್ಲಿ ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್‌ನಲ್ಲಿ, ಓರಿಯೆಂಟಲ್ ಬ್ಯಾಂಕ್ ಮತ್ತು ಯುನೈ ಟೆಡ್ ಬ್ಯಾಂಕ್‌ಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊ ರೇಷನ್ ಬ್ಯಾಂಕ್‌ಗಳನ್ನು ಯೂನಿಯನ್ ಬ್ಯಾಂಕ್‌ನಲ್ಲಿ, ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿತು.

ಇದರಿಂದಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳ ಸಂಖ್ಯೆಯು 27 ರಿಂದ 12ಕ್ಕೆ ಇಳಿಯಿತು. ಈಗ, ಯುಕೋ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್‌ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಯೂನಿ ಯನ್ ಬ್ಯಾಂಕ್‌ಗಳು ಕೆನರಾ ಬ್ಯಾಂಕ್‌ನಲ್ಲೂ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲೂ ವಿಲೀನವಾಗಬಹುದು ಎನ್ನಲಾಗುತ್ತಿದೆ. ‌

ವಿಲೀನದ ನಂತರ ಈ ೩ ಬ್ಯಾಂಕುಗಳು ಜಗತ್ತಿನ 20 ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳ ಬಹುದು. ಸದ್ಯ ಜಗತ್ತಿನ 100 ಅಗ್ರಗಣ್ಯ ಬ್ಯಾಂಕುಗಳ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ ಇದೆ (43ನೇ ಸ್ಥಾನ). ಈ ವಿಲೀನದ ನಂತರ ದೇಶದಲ್ಲಿ, ಸಾರ್ವಜನಿಕ ರಂಗದ ಬ್ಯಾಂಕುಗಳ ಸಂಖ್ಯೆಯಷ್ಟೇ ಅಲ್ಲದೆ, ಅವುಗಳ ಶಾಖೆಗಳ ಸಂಖ್ಯೆಯೂ ಕಡಿತವಾಗುವುದು ಅನಿವಾರ್ಯ.

ಶಾಖೆಗಳ ratonalization ಪ್ರಕ್ರಿಯೆಯಲ್ಲಿ ಕೆಲವು ಶಾಖೆಗಳು ಮುಚ್ಚುವುದು ಸಾಮಾನ್ಯ. ಹಾಗೆಯೇ ಸಿಬ್ಬಂದಿಯ ಹೆಚ್ಚಳವೂ ಸಮಸ್ಯೆಯಾಗಬಹುದು. ವಿಲೀನ ಪ್ರಕ್ರಿಯೆಯಲ್ಲಿ ಯಾವುದೇ ಸಿಬ್ಬಂದಿಗೆ ‘ಕೆಂಪುಚೀಟಿ’ ನೀಡದಿರುವ ನಿಬಂಧನೆಯನ್ನು ಈವರೆಗೆ ಪಾಲಿಸಿದ್ದು ಅದು ಮುಂದುವರಿಯ ಬಹುದು. ಯಾರಿಗೂ ಉದ್ಯೋಗ ನಷ್ಟದ ಭಯವಿರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಉದ್ಯಮದಲ್ಲಿ ಉದ್ಯೋಗಾವಕಾಶ ಕ್ಷೀಣಿಸಬಹುದು ಎಂಬ ಭಯ ಕಾಡುತ್ತಿದೆ.

ವಿಲೀನಪೂರ್ವದಲ್ಲಿ ಮಾನವ ಸಂಪನ್ಮೂಲದಂಥ ಸಂಕೀರ್ಣ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿದರೂ, ಈ ನಿಟ್ಟಿನಲ್ಲಿ ಒಂದಿಷ್ಟು ಗೊಂದಲಗಳು ಉದ್ಭವಿಸಿ ನ್ಯಾಯಾಲಯದ ಮೆಟ್ಟಲೇರು ವಂಥ ಪರಿಸ್ಥಿತಿ ಎದುರಾಗುವುದನ್ನು ಅಲ್ಲಗಳೆಯಲಾಗದು. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯ ವಿಲ್ಲ, ಅಂತೆಯೇ ಕೆಲವು ಅತೃಪ್ತಿಯನ್ನು ಸಹಿಸಿಕೊಳ್ಳಲೇಬೇಕು.

ಈ ವಿಲೀನದಿಂದಾಗಿ ಬ್ಯಾಂಕಿಂಗ್ ಉದ್ಯಮವು ಕೆಲವು ಪ್ರಾದೇಶಿಕ ಮತ್ತು ಭಾಷಾ ಶಕ್ತಿಗಳ ಹಿಡಿತ ದಿಂದ ಮುಕ್ತಿ ಪಡೆಯುತ್ತದೆ ಎನ್ನಲಾಗುತ್ತಿದೆ. ಬ್ಯಾಂಕಿನ ಮುಖ್ಯ ಕಚೇರಿಯಿರುವ ರಾಜ್ಯ ದವರು ಮತ್ತು ಭಾಷೆಯವರು ಆ ಬ್ಯಾಂಕುಗಳಲ್ಲಿ ಮೇಲುಗೈ ಸಾಧಿಸುತ್ತಾರೆ ಎನ್ನುವ ಆರೋಪ ಇನ್ನು ಮುಂದೆ ಕೇಳದು ಮತ್ತು ಎಲ್ಲಾ ಬ್ಯಾಂಕುಗಳಲ್ಲಿ ‘ಅಖಿಲ ಭಾರತ’ ಸ್ವರೂಪ ಕಾಣಬಹುದು ಎನ್ನಲಾಗುತ್ತದೆ.

ವಿಲೀನ ಪ್ರಕ್ರಿಯೆಯಲ್ಲಿ ಬ್ಯಾಂಕುಗಳ ಷೇರು ಬಂಡವಾಳ ಹೆಚ್ಚಿಸುವುದು, ತನ್ಮೂಲಕ ಅವನ್ನು ಬಲಾಢ್ಯವಾಗಿಸುವುದು, ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವಂತೆ ವರ್ಧಿಸುವುದು, ದೊಡ್ಡ ಗ್ರಾಹಕರ ಸಾಲದ ಅವಶ್ಯಕತೆಯನ್ನು ಇನ್ನೊಂದು ಬ್ಯಾಂಕಿನ ಸಹಾಯವಿಲ್ಲದೆ ( consortium arrangement) ಪೂರೈಸುವುದು, ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸುವುದು ಮುಖ್ಯ ವಾಗಿರುತ್ತದೆ.

ದೇಶದಲ್ಲಿ ಸಾಕಷ್ಟು ಸಣ್ಣ ಬ್ಯಾಂಕುಗಳಿವೆ. ಅವುಗಳ ‘ಬಂಡವಾಳ ಮೂಲ’ ತುಂಬಾ ಸಣ್ಣದಾಗಿದ್ದು ಸದಾ ಸರಕಾರದ ನೆರವಿನ ಅಗತ್ಯವಿರುತ್ತದೆ. ವಿಲೀನದಿಂದಾಗಿ ಬಂಡವಾಳ ಮೂಲ ವರ್ಧಿಸಿ ಅಂತಾರಾಷ್ಟ್ರೀಯ ಮಾನದಂಡಕ್ಕೆ ಹತ್ತಿರವಾಗುತ್ತದೆ ಮತ್ತು ಬ್ಯಾಂಕಿನ ದಕ್ಷತೆ ಹೆಚ್ಚಿ ಹಣಕಾಸು ಸ್ಥಿರತೆಯಲ್ಲಿ ಸುಧಾರಣೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ವಿಲೀನವನ್ನು ವಿರೋಧಿಸುತ್ತಿರುವ ಬ್ಯಾಂಕ್ ಕಾರ್ಮಿಕ ಸಂಘಗಳು, “ಇದರ ಹಿಂದೆ ಖಾಸಗೀಕರಣದ ಗುಪ್ತ ಕಾರ್ಯಸೂಚಿಯಿದೆ. ಈವರೆಗೆ ಇದ್ದ ಸಾಮಾಜಿಕ ಬ್ಯಾಂಕಿಂಗ್ ಪರಿಕಲ್ಪನೆ ಹಳ್ಳ ಹಿಡಿದು, ಬ್ಯಾಂಕುಗಳು ನೂರಕ್ಕೆ ನೂರು ಕಮರ್ಷಿಯಲ್ ಆಗುತ್ತವೆ.

ವಿಲೀನ ಪ್ರಕ್ರಿಯೆಯಿಂದ ಹಲವು ಶಾಖೆಗಳು ಮುಚ್ಚುವ, ಹೆಚ್ಚು ಲಾಭ ತರದ ಗ್ರಾಮಾಂತರ ಶಾಖೆ ಗಳು ಬಲಿ ಬೀಳುವ ಮತ್ತು ಆರ್ಥಿಕವಾಗಿ ಕೆಳಸ್ತರದಲ್ಲಿರುವವರು ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ" ಎಂದು ಎಚ್ಚರಿಸುತ್ತಿವೆ.

ಕಾರ್ಮಿಕ ಸಂಘಗಳ ವಿರೋಧದಿಂದಾಗಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಿಲ್ಲುತ್ತದೆ ಎನ್ನಲಾಗದು. ಈ ಹಿಂದೆಯೂ ಅವು ಬ್ಯಾಂಕುಗಳಲ್ಲಿನ ಗಣಕೀಕರಣವನ್ನು ಮತ್ತು 2017ರಲ್ಲಿ ಆರಂಭವಾದ ವಿಲೀನ ಪ್ರಕ್ರಿಯೆಯನ್ನು ಕೂಡ ವಿರೋಧಿಸಿದ್ದವು. ಆದರೂ ಸರಕಾರ ತನ್ನ ಕಾರ್ಯಸೂಚಿಯನ್ನು ಪೂರ್ಣಗೊಳಿಸಿತು.

ಸದ್ಯದ ವಿಲೀನದ ಮಾತುಕತೆಗಳು ಇನ್ನೂ ಪೂರ್ವಭಾವಿ ಹಂತದಲ್ಲಿದ್ದು, ಯಾವುದೂ ಅಧಿಕೃತ ವಾಗಿ ಹೊರಹೊಮ್ಮಿಲ್ಲ. ಅಂತಿಮ ಹೆಜ್ಜೆ ಇಡುವ ಹೊತ್ತಿಗೆ ಕಾವೇರಿಯಲ್ಲಿ ಇನ್ನೆಷ್ಟು ನೀರು ಹರಿಯುತ್ತದೋ? ಆದರೆ, ಸ್ವಲ್ಪ ವಿಳಂಬವಾದರೂ ಬ್ಯಾಂಕುಗಳ ವಿಲೀನ ಮಾತ್ರ ನಿಶ್ಚಿತ ಎನ್ನ ಬಹುದು.

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)