ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಉಳ್ಳವರ ಪಾಲಾಗುತ್ತಿದೆಯೇ ನಮ್ಮ ಬೆಂಗಳೂರು ?

ಸರಕಾರ ಉಚಿತ ಘೋಷಣೆಗಳ ಮೂಲಕ ಆಯ್ದ ಕೆಲವರ ನೆರವಿಗೆ ಬರಬಹುದು. ಆದರೆ ಬದುಕು ಹೊರೆಯಾಗದಿರಬೇಕಾದರೆ ಎಲ್ಲರಿಗೂ ಅನ್ವಯಿಸುವ ಕೆಲವೊಂದು ನೀತಿಗಳನ್ನು ಅಳವಡಿಸಿಕೊಳ್ಳಲೇ ಬೇಕು. ದೈನಂದಿನ ಬಳಕೆಯ ಆಹಾರ ವಸ್ತುಗಳ ಬೆಲೆ ತೀರಾ ಏರದಂತೆ ನೋಡಿಕೊಳ್ಳು ವುದು, ವಿದ್ಯುತ್, ನೀರು, ಸಾರಿಗೆ ಸೌಕರ್ಯ ಜನರಿಗೆ ಎಟುಕುವಂತೆ ಮಾಡುವುದು, ಮಿತದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಇವುಗಳಲ್ಲಿ ಮುಖ್ಯವಾದವುಗಳು.

ಲೋಕಮತ

kaayarga@gmail.com

ಶ್ರೀ ಸಾಮಾನ್ಯನಿಗೆ ಬದುಕು ಹೊರೆಯಾಗದಿರಬೇಕಾದರೆ ಸರಕಾರ ಜನಪರವಾಗಿರಬೇಕು. ಅದು ರೂಪಿಸುವ ಕೆಲವು ಯೋಜನೆಗಳು ಜಾತಿ, ಮತ, ಅಂತಸ್ತಿನ ಭೇದವಿಲ್ಲದೆ ಎಲ್ಲ ನಾಗರಿಕರಿಗೂ ಲಭ್ಯವಾಗಬೇಕು.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದೇಶದ ದುಬಾರಿ ನಗರ ಯಾವುದು ಎನ್ನುವುದರ ಬಗ್ಗೆ ಚರ್ಚೆ ನಡೆದಿತ್ತು. ಹಲವರ ಪ್ರಕಾರ ಬೆಂಗಳೂರು ಅತ್ಯಂತ ದುಬಾರಿ ನಗರ. ಇದಕ್ಕೆ ಹಲವು ಕಾರಣ ಗಳನ್ನು ನೀಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಉದ್ಯಾನನಗರಿಯ ಬದುಕು ದಿನದಿಂದ ದಿನಕ್ಕೆ ದುರ್ಭರವಾಗುತ್ತಲೇ ಸಾಗಿದೆ. ವರ್ಷದ ಕೆಳಗೆ ನಗರದಲ್ಲಿ 2 ಬೆಡ್‌ರೂಮ್ ಮನೆ ಬಾಡಿಗೆ 18ರಿಂದ 25 ಸಾವಿರ ರು.ಗಳ ಒಳಗಿತ್ತು. ಈಗ ಕೋರಮಂಗಲ, ಸದಾಶಿವನಗರ, ಇಂದಿರಾನಗರ ದಂತಹ ಪ್ರತಿಷ್ಠಿತ ಬಡಾವಣೆಗಳಲ್ಲಿ 2 ಬಿಎಚ್‌ಕೆ ಮನೆ ಬಾಡಿಗೆ ಮಾಸಿಕ 60 ಸಾವಿರ ತಲುಪಿದೆ. ಮನೆ ಮಾಲೀಕರನ್ನು ಈ ಬಗ್ಗೆ ಪ್ರಶ್ನಿಸಿದರೆ ಬೆಂಗಳೂರಿನಲ್ಲಿ ಒಂದು ಸೈಟ್ ಖರೀದಿಸಿ, ಮನೆ ಕಟ್ಟಿ ನೋಡಿ, ನಿಮಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸುತ್ತಾರೆ. ಇಲ್ಲಿ ಬಾಡಿಗೆ ಹೆಚ್ಚಿಸುವವರಿಗೂ, ಬಾಡಿಗೆ ಕಟ್ಟುವವರಿಗೂ ನೂರೆಂಟು ದೂರು-ದುಮ್ಮಾನಗಳಿವೆ.

ಸದ್ಯಕ್ಕೆ ಕೋಟ್ಯಧಿಪತಿಗಳ ಹೊರತಾಗಿ ಇನ್ನಾರೂ ಬೆಂಗಳೂರಿನಲ್ಲಿ ಸೈಟ್ ಖರೀದಿಸಲಾಗದು. ಇನ್ನು ಮನೆ ಕಟ್ಟಬೇಕಾದರೆ ದುಡ್ಡಿನ ಚೀಲದ ಜತೆ ಸ್ಥಳೀಯ ಸಂಸ್ಥೆಗಳ ಜತೆ ‘ವ್ಯವಹಾರ’ ನಡೆಸಿ ಕಟ್ಟಡ ನಕ್ಷೆ, ಸಿಆರ್, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ವಾಸ್ತವ್ಯ ಯೋಗ್ಯ ಪ್ರಮಾಣ ಪತ್ರ, ಇ-ಖಾತೆ.. ಇತ್ಯಾದಿಗಳೆಲ್ಲವನ್ನೂ ಪಡೆಯುವ ತಾಕತ್ತು ಹೊಂದಿರಬೇಕು. ದುಡ್ಡಿದ್ದವರೂ ಮಧ್ಯವರ್ತಿಗಳ ಸಹಾಯವಿಲ್ಲದೆ ತಮ್ಮ ಮನೆಗೆ ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಿಲ್ಲ ಎನ್ನು ವುದು ಬಹುತೇಕರ ಅನುಭವ.

ಬಿಡಿಎ, ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಕಟ್ಟಡ ನಿರ್ಮಿಸುವುದು ಸಾಧ್ಯವೇ ಇಲ್ಲ ಬಿಡಿ. ಇವೆಲ್ಲವೂ ಉಲ್ಲಂಘನೆಗಾಗಿಯೇ ಇರುವ ನಿಯಮಗಳು. ಈ ಮೂಲಕ ಸರಕಾರ ಬೊಕ್ಕಸ ತುಂಬುವ ಮಾರ್ಗ ಕಂಡುಕೊಂಡಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಬಹುತೇಕ ಸ್ಥಳೀಯಾಡಳಿತ ಸಂಸ್ಥೆಗಳು ಇತ್ತೀಚೆಗೆ ವಾರ್ಷಿಕ ಮತ್ತು ನಿಗದಿತ ತೆರಿಗೆಗಿಂತ ದಂಡ ರೂಪದಲ್ಲಿ ಕಟ್ಟಿಸಿಕೊಂಡ ತೆರಿಗೆ ಪ್ರಮಾಣವೇ ಹೆಚ್ಚಿರುವುದು ಇದಕ್ಕೆ ಸಾಕ್ಷಿ.

ಇದನ್ನೂ ಓದಿ: Lokesh Kaayarga Column: ಗ್ರಾಹಕರ ಲೂಟಿಯೇ ಬ್ಯಾಂಕ್‌ ಗಳ ಪರಮ ಧ್ಯೇಯ !

ಇದರ ಜೊತೆಗೆ ಆಗಾಗ ಬದಲಾಗುವ ನಿಯಮಗಳು, ನಿರ್ಬಂಧಗಳು ಮನೆ ಮಾಲೀಕರನ್ನು ತುದಿಗಾಲಿನಲ್ಲಿಯೇ ಇರಿಸುತ್ತಿವೆ. ವಾಸಯೋಗ್ಯ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಬಾರದೆಂಬ ಸುಪ್ರೀಂಕೋರ್ಟ್ ನಿಯಮವನ್ನು ಮುಂದಿಟ್ಟು ಕೊಂಡು ಕಳೆದ ಒಂದು ವರ್ಷದಿಂದ ಸಂಪರ್ಕ ನೀಡಿಲ್ಲ. ಹೀಗಾಗಿ ಕಟ್ಟಡ ಪೂರ್ಣಗೊಂಡರೂ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲಾಗದೆ ಬೆಂಗಳೂರಿನಲ್ಲಿ ಸಾವಿರಾರು ಕಟ್ಟಡಗಳು ಬಾವಲಿ, ಪಾರಿವಾಳಗಳ ಆವಾಸಸ್ಥಾನವಾಗಿವೆ.

ಕಳೆದ ಒಂದು ವರ್ಷದಲ್ಲಿ ಆಸ್ತಿ ಖರೀದಿ ಮತ್ತು ವರ್ಗಾವಣೆ ಮೇಲಿನ ಸ್ಟ್ಯಾಂಪ್ ಫೀ, ನೋಂದಣಿ ಶುಲ್ಕ, ಆಸ್ತಿ ತೆರಿಗೆ, ನೀರು ಮತ್ತು ಕರೆಂಟ್ ಬಿಲ್ಲು ಇವೆಲ್ಲವೂ ದುಪ್ಪಟ್ಟಾಗಿವೆ. ಪ್ರತಿ ತೆರಿಗೆಯಲ್ಲೂ ಹೊಸ ಬಾಬ್ತುಗಳನ್ನು ಸೇರಿಸಲಾಗಿದೆ. ಮೊದಲು ಬೋರ್‌ವೆಲ್ ಇದ್ದವರಿಗೆ ನೀರಿನ ಬಿಲ್ ಬಗ್ಗೆ ಹೆಚ್ಚು ಚಿಂತೆ ಇರಲಿಲ್ಲ. ಈಗ ವಿದ್ಯುತ್ ಬಿಲ್ ಅಲ್ಲದೆ ಬೋರ್‌ವೆಲ್ ಬಳಕೆದಾರರಿಗೆ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ. ನಗರದಲ್ಲಿ ಮನೆ ಕಟ್ಟಿಕೊಂಡವರೆಲ್ಲರೂ ಆಗರ್ಭ ಶ್ರೀಮಂತರೆಂಬ ಧೋರಣೆ ನಮ್ಮ ಸರಕಾರ ಮತ್ತು ಪೌರಾಡಳಿತ ಸಂಸ್ಥೆಗಳದ್ದು.

7 R

ಬೆಂಗಳೂರಿನಲ್ಲಿ ಎಲ್ಲಕ್ಕಿಂತ ದುಬಾರಿಯಾಗಿರುವುದು ಸಾರ್ವಜನಿಕ ಸಾರಿಗೆ. ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತ ಸಾರಿಗೆಯ ಖುಷಿ ಅನುಭವಿಸುತ್ತಿರುವಾಗಲೇ ಉಳಿದವರಿಗೆ ಟಿಕೆಟ್ ದರ ಏರಿಕೆಯ ಬರೆ ಎಳೆಯಲಾಯಿತು. ಇದರ ಜತೆಗೆ ಮೆಟ್ರೋ ಪ್ರಯಾಣ ದರವನ್ನು ಎರಡು ಪಟ್ಟು ಹೆಚ್ಚಿಸಲಾಯಿತು. ಸಣ್ಣ ಕಂಪನಿ ಯಾಗಲಿ, ದೊಡ್ಡ ಕಂಪನಿಯಾಗಲಿ ಬಹುತೇಕ ಉದ್ಯೋಗಸ್ಥ ಮಹಿಳೆಯರು ಮೆಟ್ರೋ ರೈಲನ್ನು ಅವಲಂಬಿಸಿದ್ದರು. ಇದೀಗ 10 ರಿಂದ 15 ಕಿ.ಮೀ ಪಯಣಕ್ಕೆ 60 ರಿಂದ 70 ರು. ತೆರಬೇಕಾಗಿದೆ. ಗರಿಷ್ಠ ದರವನ್ನು 90 ರು. ಗಳಿಗೆ ಏರಿಸಲಾಗಿದೆ. ಇತ್ತೀಚೆಗೆ ಬಾಡಿಗೆ ಆಟೋಗಳ ಕನಿಷ್ಠ ಪ್ರಯಾಣ ದರವನ್ನೂ 36ರು.ಗಳಿಗೆ ಏರಿಸಲಾಗಿದೆ. ಆದರೆ ಆಟೋ ಚಾಲಕರು ವರ್ಷದ ಹಿಂದೆಯೇ 50 ರು.ಗಳ ಕನಿಷ್ಠ ದರ ನಿಗದಿ ಮಾಡಿದ್ದಾರೆ. ಊಬರ್, ಓಲಾದಂತಹ ಅಗ್ರಿಗೇಟರ್ ಕಂಪನಿಗಳು ಕೂಡ ಕನಿಷ್ಠ ದರ 50 ರು. ವಸೂಲಿ ಮಾಡುತ್ತಿವೆ.

ಆಟೋ ಚಾಲಕರ ಒತ್ತಾಯಕ್ಕೆ ಮಣಿದು ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಕಡಿವಾಣ ಹಾಕಿದ ಬಳಿಕ, ಅಗ್ಗದ ಸಾರಿಗೆಗೆ ಅವಲಂಬಿಸಿದ್ದವರೂ ದುಬಾರಿ ಆಟೋ ಆಶ್ರಯಿಸುವಂತಾಗಿತ್ತು. ಇದೀಗ ಬೈಕ್ ಟ್ಯಾಕ್ಸಿ ಮತ್ತೆ ಆರಂಭಗೊಂಡಿದ್ದರೂ ದರ ಮೊದಲಿಗಿಂತ ಹೆಚ್ಚಾಗಿದೆ. ಸರಕಾರದ ಸ್ಪಷ್ಟ ನೀತಿ ಇಲ್ಲದ ಕಾರಣ ಈ ಸೇವೆಗೆ ಯಾವಾಗ ಬ್ರೇಕ್ ಬೀಳುತ್ತೋ ಗೊತ್ತಿಲ್ಲ. ಉತ್ತರಪ್ರದೇಶ ಸೇರಿ 12ಕ್ಕೂ ರಾಜ್ಯಗಳಲ್ಲೂ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ. ಇದರಿಂದ ಅಲ್ಲಿನ ಸಾರ್ವಜನಿಕ ಸಾರಿಗೆ ಈಗಲೂ ಸ್ಪರ್ಧಾತ್ಮಕವಾಗಿದೆ. ಆದರೆ ರಾಜ್ಯದಲ್ಲಿ ಅದರಲ್ಲೂ ಮಹಾನಗರಗಳಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸರಕಾರಕ್ಕೆ ಯಾವ ಸಮಸ್ಯೆ ಇದೆಯೋ ಗೊತ್ತಿಲ್ಲ.

ಬೆಂಗಳೂರು ನಗರ ದೇಶದ ಅತಿ ದುಬಾರಿ ನಗರವಾಗಿದೆಯೋ ಇಲ್ಲವೋ, ಒತ್ತಟ್ಟಿಗಿರಲಿ. ಸಾರ್ವಜನಿಕ ಸಾರಿಗೆ ವಿಷಯದಲ್ಲಿ ಇದು ಅತ್ಯಂತ ದುಬಾರಿ ನಗರ ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ. ದೇಶದ ಯಾವ ನಗರದಲ್ಲೂ ಮೆಟ್ರೋ ಪ್ರಯಾಣ ದರ ಒಪ್ಪೊತ್ತಿನ ಊಟದ ದರಕ್ಕಿಂತ ಹೆಚ್ಚಿಲ್ಲ. ನಮ್ಮಲ್ಲಿ ಮೆಟ್ರೋ ಆರಂಭಿಕ ದರ 10 ರು. ಗಳಾಗಿದ್ದರೆ ಗರಿಷ್ಠ ದರ 90 ರು.ಗಳಿಗೆ ನಿಗದಿ ಮಾಡಲಾಗಿದೆ. ಮೊನ್ನೆ ತಾನೇ ಸಂಚಾರ ಆರಂಭಿಸಿರುವ ಕೋಲ್ಕತ್ತಾ ಮೆಟ್ರೋ ಹೊಸ ಮಾರ್ಗದ ಕನಿಷ್ಠ ಪ್ರಯಾಣ ದರ 5 ರು. ಇದೆ. 30 ಕಿ.ಮೀ. ಮೀರಿದ ಗರಿಷ್ಠ ದರ 50 ರು. ನಿಗದಿ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೆರೆಯ ಹೈದರಾಬಾದ್ ನಗರದಲ್ಲೂ ಗರಿಷ್ಠ ದರ 60 ರು.ಗಳಾಗಿವೆ. ಮುಂಬೈ ಮಹಾನಗರಿಯಲ್ಲೂ ಗರಿಷ್ಠ ದರ 80 ರು. ಮೀರಿಲ್ಲ. ಅಲ್ಲಿ ತಿಂಗಳಿಗೆ 300 ರು. ಕೊಟ್ಟು ತಿಂಗಳಿಡೀ ಸಬ್ ಅರ್ಬನ್ ರೈಲಿನಲ್ಲಿ ಸಂಚರಿಸುವ ಅವಕಾಶವೂ ಇದೆ. ಹಾಗಿದ್ದರೆ ಈ ನಗರಗಳ ಮೆಟ್ರೋಗಿಂತಲೂ ಬೆಂಗಳೂರು ಮೆಟ್ರೋ ದುಬಾರಿಯಾಗಿದ್ದು ಏಕೆ ?

ಈ ಪ್ರಶ್ನೆಯನ್ನು ನಾವು ಕೇಳುವಂತೆಯೇ ಇಲ್ಲ. ಏಕೆಂದರೆ ಮೆಟ್ರೋ ದರ ಹೆಚ್ಚಳ ತಮಗೆ ಸಂಬಂಧಿ ಸಿಲ್ಲ ಎಂದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಎರಡೂ ಹೇಳಿಕೊಂಡಿವೆ. ನಮ್ಮ ನಾಯಕ ರೂ ಇದನ್ನೇ ಹೇಳಿದ್ದಾರೆ. ಬೆಂಗಳೂರಿಗರ ಪಾಲಿಗೆ ಬಿಎಂಆರ್‌ಸಿಎಲ್ ಎನ್ನುವುದು ಈಸ್ಟ್‌ ಇಂಡಿಯಾ ಕಂಪನಿ ಇದ್ದಂತೆ. ಇದು ನಮ್ಮ ಸರಕಾರದ ನಿಯಂತ್ರಣದಿಂದ ಹೊರತಾಗಿದೆ. ಸ್ವತ: ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕೇಳಿದ ಪ್ರಶ್ನೆಗೂ ಬಿಎಂಆರ್‌ ಸಿಎಲ್ ಉತ್ತರಿಸುವುದಿಲ್ಲ ಎಂದಾದರೆ ಇನ್ನೇನು ಹೇಳಲು ಸಾಧ್ಯ ?

ಮೆಟ್ರೋ ಮಾತ್ರವಲ್ಲ, ಟೋಲ್ ದರಕ್ಕೆ ಸಂಬಂಧಿಸಿಯೂ ನಮ್ಮ ನಗರ ಬೇರೆಡೆಗಿಂತ ದುಬಾರಿ ಯಾಗಿದೆ. ಕೇವಲ 5 ಕಿ.ಮೀ. ಉದ್ದದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ನಲ್ಲಿ ಬೈಕ್ ಸವಾರರು ಏಕಮುಖವಾಗಿ ಸಂಚರಿಸಬೇಕಾದರೂ 25 ರು. ತೆರಬೇಕು. ಕಾರಿನಲ್ಲಿ ಸಂಚರಿಸುವವರು 65 ರು. ಪಾವತಿಸಬೇಕು. ಬೆಂಗಳೂರು-ಮೈಸೂರು ಮಧ್ಯೆ ಒಂದು ಬಾರಿ ಕಾರಿನಲ್ಲಿ ಹೋಗಿ ಬಂದರೂ 710 ರು. ಟೋಲ್ ಪಾವತಿಸಬೇಕಾಗಿದೆ. ವರ್ಷಕ್ಕೆರಡು ಬಾರಿ ಈ ಮೊತ್ತ ಏರಿಕೆ ಕಂಡಿದೆ. ಎಲ್ಲೂ ಇಲ್ಲದ ದರ ನಮ್ಮಲ್ಲಿ ಮಾತ್ರ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಹಾಗೆಯೇ ಒಂದು ಕ್ಷಣ ಯೋಚಿಸಿ. ಮಾಸಿಕ 60 ಸಾವಿರ ಬಾಡಿಗೆ ವಸೂಲಿ ಮಾಡುವ ಏರಿಯಾ ಗಳಲ್ಲಿ ಇರುವವರೆಲ್ಲರೂ ಶ್ರೀಮಂತರೇ ಆಗಿರಲು ಸಾಧ್ಯವೇ ? ಇಲ್ಲಿ ಆರಂಕಿಗಿಂತ ಹೆಚ್ಚಿನ ಸಂಬಳ ಪಡೆಯುವವರ ಜತೆ ಐದಂಕಿಯ ಪಗಾರ ಪಡೆದು ಬದುಕುವವರಿಲ್ಲವೇ ? ಕೂಲಿ ನಾಲಿ ಬದುಕುವವ ರಿಗೆ ಸರಕಾರದ ಪಡಿತರ ಸೌಲಭ್ಯ ಸಿಗಬಹುದು ಎಂದುಕೊಳ್ಳೋಣ. ಉಳಿದವರು ಬದುಕು ಕಟ್ಟಿಕೊಳ್ಳುವುದು ಹೇಗೆ ? ಅಧ್ಯಯನವೊಂದರ ಪ್ರಕಾರ ಬೆಂಗಳೂರು ನಗರದಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಪದವೀಧರನೊಬ್ಬನ ಮಾಸಿಕ ಸಂಬಳ 16 ಸಾವಿರದಿಂದ 21 ಸಾವಿರ. ಇದಕ್ಕಿಂತ ಕಡಿಮೆ ಸಂಬಳಕ್ಕೆ ದುಡಿಯುವವರೂ ಇದ್ದಾರೆ. ಇವರು ಬಾಡಿಗೆ ಮನೆ ಅಥವಾ ಪಿಜಿ ಹಿಡಿಯಬೇಕಾದರೆ ಕನಿಷ್ಠ 10 ಸಾವಿರ ರು. ಪಾವತಿಸಬೇಕು. ಉಳಿದ ಆರೇಳು ಸಾವಿರ ರು.ಗಳಲ್ಲಿ ಊಟ, ಓಡಾಟ ಮತ್ತು ಬಟ್ಟೆಬರೆಯ ಖರ್ಚು ನೋಡಿಕೊಳ್ಳಲು ಸಾಧ್ಯವೆ ?

ಇಷ್ಟರ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರಕ್ಕೆ ಸುರಂಗ ಮಾರ್ಗದ ಕನಸು ಬಿತ್ತಿದ್ದಾರೆ. ಸದ್ಯದ ವರ್ತಮಾನ ಪ್ರಕಾರ ಇದರ ಅಂದಾಜು ವೆಚ್ಚ 17,780 ಕೋಟಿ ರೂ.ಗಳು. ಎತ್ತಿನ ಹೊಳೆ, ಮೆಟ್ರೊ ಕಾಮಗಾರಿಗಳ ಅನುಭವದಿಂದ ಹೇಳುವುದಾದರೆ ಈ ವೆಚ್ಚ ದುಪ್ಟಟ್ಟಾದರೂ ಅಚ್ಚರಿ ಇಲ್ಲ. ಸುರಂಗ ಮಾರ್ಗ ಸಾಕಾರಗೊಂಡರೆ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ ಸುಮಾರು 16.7 ಕಿ.ಮೀ. ಸುರಂಗ ಮಾರ್ಗಕ್ಕೆ ಕಾರುಗಳ ಏಕಮುಖ ಸಂಚಾರಕ್ಕೆ 320ರಿಂದ 330 ರು. ಟೋಲ್ ದರ ಇರಬಹುದೆನ್ನುವುದು ಸದ್ಯದ ಅಂದಾಜು. ಕಾಮಗಾರಿ ವೆಚ್ಚ ಹೆಚ್ಚಿದಂತೆ ಈ ದರವೂ ಏರಬಹುದು. ಬೆಂಗಳೂರಿನಲ್ಲಿ ಮಾಸಿಕ ಏಳಂಕಿಗಿಂತ ಹೆಚ್ಚು ವೇತನ ಪಡೆಯುವ ಕಾರ್ಪೋರೇಟ್ ಉದ್ಯೋಗಿಗಳೂ ಇದ್ದಾರೆ. ಇವರು ದಿನವೊಂದಕ್ಕೆ 600ರಿಂದ 700 ರು. ಟೋಲ್ ಪಾವತಿಸಿ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳದವರೆಗೆ ಈ ರಸ್ತೆಯಲ್ಲಿ ಆರಾಮವಾಗಿ ಸಂಚರಿಸಬಹುದು. ಉಳಿದವರು ಇವರ ಐಷಾರಾಮಿ ಕಾರುಗಳು ಸುಂಯ್ಯನೇ ಸುರಂಗದೊಳಗೆ ನುಗ್ಗುವ ಮತ್ತು ಅದೇ ವೇಗದಲ್ಲಿ ಹೊರಬರುವ ದೃಶ್ಯಗಳನ್ನು ಕಣ್ತುಂಬಿಕೊಳ್ಳ ಬಹುದು!

ಸರಕಾರ ಉಚಿತ ಘೋಷಣೆಗಳ ಮೂಲಕ ಆಯ್ದ ಕೆಲವರ ನೆರವಿಗೆ ಬರಬಹುದು. ಆದರೆ ಬದುಕು ಹೊರೆಯಾಗದಿರಬೇಕಾದರೆ ಎಲ್ಲರಿಗೂ ಅನ್ವಯಿಸುವ ಕೆಲವೊಂದು ನೀತಿಗಳನ್ನು ಅಳವಡಿಸಿ ಕೊಳ್ಳಲೇಬೇಕು. ದೈನಂದಿನ ಬಳಕೆಯ ಆಹಾರ ವಸ್ತುಗಳ ಬೆಲೆ ತೀರಾ ಏರದಂತೆ ನೋಡಿಕೊಳ್ಳು ವುದು, ವಿದ್ಯುತ್, ನೀರು, ಸಾರಿಗೆ ಸೌಕರ್ಯ ಜನರಿಗೆ ಎಟುಕುವಂತೆ ಮಾಡುವುದು, ಮಿತದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಇವುಗಳಲ್ಲಿ ಮುಖ್ಯವಾದವುಗಳು. ಆದರೆ ಈ ಎಲ್ಲವೂ ಈಗ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿವೆ. ಸರಕಾರ ಜನಪರ ಎನಿಸಿಕೊಳ್ಳಬೇಕಾದರೆ ಅದು ರೂಪಿ ಸುವ ಯೋಜನೆಗಳು ಜಾತಿ, ಮತ, ಅಂತಸ್ತಿನ ಭೇದವಿಲ್ಲದೆ ಎಲ್ಲ ನಾಗರಿಕರಿಗೂ ಲಭ್ಯವಾಗಬೇಕು.

ಲೋಕೇಶ್​ ಕಾಯರ್ಗ

View all posts by this author