Raghav Sharma Nidle Column: ಇಂಡಿ ಮೈತ್ರಿಕೂಟದ ಮೆದುಳು ನಿಷ್ಕ್ರಿಯಗೊಂಡಿದೆಯೇ ?
ತಮ್ಮ ನಿಲುವು-ಆಲೋಚನೆಗಳನ್ನು ಅನುಮೋದಿಸುವ ತೀರ್ಪುಗಳು ಕೋರ್ಟಿನಿಂದ ಹೊರ ಬೀಳದಿ ದ್ದಾಗ ನ್ಯಾಯಾಧೀಶರನ್ನು ವಾಗ್ದಂಡನೆಗೆ ಒಳಪಡಿಸಬೇಕು ಎನ್ನುವುದೇ ಇಂಡಿಯಾ ಒಕ್ಕೂಟ ಪಕ್ಷಗಳ ಪ್ರತಿಪಾದನೆಯಾದರೆ ; ರಾಹುಲ್ ಗಾಂಧಿ ಅಪರಾಧಿ ಎಂಬ ಸೂರತ್ ನ್ಯಾಯಾಲ ಯದ ತೀರ್ಪಿಗೆ ತಡೆ ನೀಡಿದ್ದ (2023) ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೂ ವಾಗ್ದಂಡನೆಗೆ ಒಳಪಡಿಸಬೇಕು ಎಂದೇ ವಾದಿಸಬೇಕಾಗುತ್ತದೆ ಅಲ್ಲವೇ? ಆದರೆ, ವಾಸ್ತವ ಏನೆಂದರೆ ಶೂನ್ಯ ವಿವೇಚನೆ ಇರುವವರಷ್ಟೇ ಆ ರೀತಿ ಯೋಚಿಸುತ್ತಾರಷ್ಟೇ.
-
ಜನಪಥ
ನ್ಯಾಯಾಧೀಶರೊಬ್ಬರ ಆದೇಶ ಅಥವಾ ತೀರ್ಪಿನ ಬಗ್ಗೆ ಆಕ್ಷೇಪಣೆಗಳಿದ್ದಾಗ ಅದನ್ನು ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು. ಆದರೆ, ಸರಕಾರದ ನಿಲುವಿಗೆ ಪೂರಕವಾಗಿ ತೀರ್ಪು ನೀಡಲಿಲ್ಲ ಎಂಬ ಕಾರಣಕ್ಕಾಗಿ ನ್ಯಾಯಾಧೀಶರನ್ನು ವಾಗ್ದಂಡನೆಗೆ ಒಳಪಡಿಸ ಬೇಕು ಎಂದು ಪ್ರತಿಪಾದಿಸುವುದು ಅಪಾಯಕಾರಿ ಬೆಳವಣಿಗೆ ಮತ್ತು ಅತಿಕೆಟ್ಟ ಮೇಲ್ಪಂಕ್ತಿ ಯನ್ನು ಹಾಕುತ್ತದೆ. ಕಾರ್ತಿಕ ದೀಪಂ ಪ್ರಕರಣದಲ್ಲಿ ಡಿಎಂಕೆ ತಾಳಕ್ಕೆ ಕಾಂಗ್ರೆಸ್ ಕುಣಿದಿರುವುದು ಆ ಪಕ್ಷದ ರಾಜಕೀಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.
ನ್ಯಾಯಾಂಗ ಸ್ವಾತಂತ್ರ್ಯವನ್ನು ಪ್ರಶ್ನೆ ಮಾಡುವ ಮತ್ತು ಅದರ ಸಾರ್ವಭೌಮ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ ನ್ಯಾಯಮೂರ್ತಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಎರಡು ಪ್ರಯತ್ನಗಳು ಕಳೆದೊಂದು ವಾರದಲ್ಲಿ ನಡೆದಿದೆ. ಒಂದು ಸುಪ್ರೀಂಕೋರ್ಟ್ ಸಿಜೆಐ ಸೂರ್ಯಕಾಂತ್‌ರಿಗೆ ಸಂಬಂಧಿಸಿದ್ದಾದರೆ, ಮತ್ತೊಂದು ತಮಿಳುನಾಡಿನ ನ್ಯಾ.ಸ್ವಾಮಿನಾಥನ್‌ರಿಗೆ ಸಂಬಂಧಿಸಿದ್ದು.
ಮ್ಯಾನ್ಮಾರ್‌ನಿಂದ ಅಕ್ರಮವಾಗಿ ವಲಸೆ ಬಂದ ರೋಹಿಂಗ್ಯಾಗಳಿಗೆ ಭಾರತದಲ್ಲಿ ಇನ್ನೆಷ್ಟು ಕಾಲ ಆಶ್ರಯ ನೀಡಬೇಕು ಎಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪ್ರಶ್ನೆ ಮಾಡಿದ್ದನ್ನೇ ಅಪರಾಧ ಎಂದು ಬಿಂಬಿಸಿ ಅವರಿಗೆ ಬಹಿರಂಗ ಪತ್ರ ಬರೆದ ಕೆಲ ಕಾನೂನು ಪಂಡಿತರು, ಆ ಮೂಲಕ ಸಿಜೆಐ ಅವರಿಗೆ ಅನಿಸಿಕೆ ವ್ಯಕ್ತಪಡಿಸುವ ಸ್ವಾತಂತ್ರ್ಯವೇ ಇಲ್ಲ ಎಂಬಂತೆ ವಿಚಿತ್ರ ರೀತಿಯಲ್ಲಿ ವರ್ತಿಸಿದ್ದರು.
ರೋಹಿಂಗ್ಯಾಗಳು ಅಕ್ರಮ ವಾಸಿಗಳಲ್ಲವೇ ಎಂದು ಕೇಳಿದ್ದಕ್ಕೇ ಕೆಂಡಕಾರಿದ್ದ ಅಲ್ಪಸಂಖ್ಯಾತಪ್ರಿಯ ಕಾನೂನು ಪಂಡಿತರು, ಆ ಮೂಲಕ ಸಿಜೆಐ ಸೂರ್ಯಕಾಂತ್‌ರ ವರ್ಚಸ್ಸಿಗೇ ಧಕ್ಕೆ ತರುವ ಯತ್ನ ಮಾಡಿದರು ಮತ್ತು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ, ಅವರ ವಿರುದ್ಧ ವ್ಯವಸ್ಥಿತ ನರೇಟಿವ್ ರೂಪಿಸುವ ಕಾರ್ಯಾಚರಣೆಗೂ ಚಾಲನೆ ನೀಡಿದರು.
ಇದನ್ನೂ ಓದಿ: Raghav Sharma Nidle Column: ರೋಹಿಂಗ್ಯಾಗಳನ್ನು ಸಾಕುತ್ತಲೇ ಇರಲು ಭಾರತ ಧರ್ಮಛತ್ರವೇ ?
ಆದರೆ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಕೆಲ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯವಾದಿ ಗಳು ಈ ವಿರೋಧಿ ಗ್ಯಾಂಗಿನ ಒಳಸಂಚಿಗೆ ತಕ್ಷಣವೇ ಪ್ರತಿಕ್ರಯಿಸಿ, ಸಿಜೆಐ ಬೆನ್ನಿಗೆ ನಿಂತರು. ಅವರೂ ಪ್ರತಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ನ್ಯಾಯಾಂಗ ಪ್ರಕ್ರಿಯೆಗಳು ತಾರ್ಕಿಕ ಟೀಕೆಗೆ ಒಳಪಡುವುದಕ್ಕೆ ಅಡ್ಡಿಯಿಲ್ಲ. ಆದರೆ, ಇಲ್ಲಿ ಕಾಣುತ್ತಿರುವುದು ತಾತ್ವಿಕ ಭಿನ್ನಾಭಿಪ್ರಾಯವಲ್ಲ.
ಬದಲಿಗೆ, ಸಾಮಾನ್ಯ ನ್ಯಾಯಾಂಗ ಕಲಾಪದ ವಿಚಾರಣೆಯೊಂದನ್ನು ಪೂರ್ವಗ್ರಹದಿಂದ ನೋಡಿ, ನ್ಯಾಯಾಂಗವನ್ನೇ ಅಮಾನ್ಯಗೊಳಿಸುವ ಪ್ರಯತ್ನ. ಕಾನೂನಾತ್ಮಕ ಪ್ರಶ್ನೆಯೊಂದನ್ನು ಕೇಳಿದ್ದ ಕ್ಕಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಾಗ್ದಾಳಿ ನಡೆಸಲಾಗಿದೆ.
ರೋಹಿಂಗ್ಯಾಗಳು ಭಾರತದ ಕಾನೂನಿನ ಅಡಿಯಲ್ಲಿ ನಿರಾಶ್ರಿತರಲ್ಲ. ಅವರಿಗೆ ಶಾಸನಬದ್ಧವಾಗಿ ಭಾರತಕ್ಕೆ ಪ್ರವೇಶವನ್ನೂ ನೀಡಲಾಗಿಲ್ಲ. ಅವರು ಇಲ್ಲಿರುವುದೇ ಕಾನೂನುಬಾಹಿರ. 1951ರ ವಿಶ್ವಸಂಸ್ಥೆಯ ನಿರಾಶ್ರಿತರ ಒಪ್ಪಂದ ಅಥವಾ ಅದರ 1967ರ ಶಿಷ್ಟಾಚಾರಕ್ಕೆ (ಪ್ರೊಟೊಕಾಲ್) ಸಹಿ ಹಾಕಿದ ಸದಸ್ಯ ರಾಷ್ಟ್ರವೂ ಭಾರತ ಅಲ್ಲ.
ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ವ್ಯಕ್ತಿಗಳು ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಇತರೆ ದಾಖಲೆಗಳನ್ನು ಹೇಗೆ ಪಡೆದುಕೊಂಡರು ಎನ್ನುವುದೇ ಗಂಭೀರ ಆತಂಕದ ವಿಷಯ ಎಂದು ವಿವರಣೆ ನೀಡಿದ್ದರು.
ತಮ್ಮ ದೃಷ್ಟಿಕೋನಗಳಿಗೆ ಪೂರಕ ನಿಲುವುಗಳನ್ನು ವ್ಯಕ್ತಪಡಿಸದ ನ್ಯಾಯಮೂರ್ತಿಗಳನ್ನು ಗುರಿಯಾಗಿಸಿ, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರಗಳು ಭಾರತೀಯ ನ್ಯಾಯಾಂಗ ಕ್ಕೆ ಹೊಸದೇನಲ್ಲ. ಇದನ್ನು ಇತ್ತೀಚಿನ ವರ್ಷಗಳಲ್ಲಿ ನಿವೃತ್ತ ಸಿಜೆಐಗಳಾದ ದೀಪಕ್ ಮಿಶ್ರಾ, ಡಿ.ವೈ.ಚಂದ್ರಚೂಡ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಅರುಣ್ ಮಿಶ್ರಾ ಮತ್ತಿತರರು ಖುದ್ದಾಗಿ ಅನುಭವಿಸಿದ್ದಾರೆ ಕೂಡ.
ಅಷ್ಟಕ್ಕೂ ರೋಹಿಂಗ್ಯಾಗಳ ವಿರುದ್ಧ ಸಿಜೆಐ ಸೂರ್ಯಕಾಂತ್ ಯಾವ ತೀರ್ಪನ್ನೂ ನೀಡಿಲ್ಲ. ತಮ್ಮ ಮುಂದಿರುವ ಐದು ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಚಾರಣೆ ಮುಂದುವರಿಸಿದ್ದಾರೆ. ಒಂದುವೇಳೆ, ಸಿಜೆಐ ಸೂರ್ಯಕಾಂತ್ ರೋಹಿಂಗ್ಯಾಗಳ ವಿರುದ್ಧ ತೀರ್ಪು ನೀಡಿ, ನಂತರ ಅದಕ್ಕೆ ಕಾನೂನು ಪಂಡಿತರು ಆಕ್ಷೇಪ ತೆಗೆದಿದ್ದರೆ ಒಪ್ಪಬಹುದಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ವಿಮರ್ಶೆ, ಟೀಕೆಗಳಿಗೆ ಸ್ವಾಗತವಿದೆ. ಆದರೆ, ಇವರು ಮಾಡಿದ್ದೇನು? ಕೇಸಿನ ವಿಚಾರಣೆ ಹಂತದಲ್ಲಿ ಸಿಜೆಐ ಆಡಿದ ಮಾತುಗಳೇ ಸರಿ ಇಲ್ಲ ಎಂಬಂತೆ ಪತ್ರ ಬರೆದು, ದೇಶದ ಸಂವಿಧಾನವು ಸುಪ್ರೀಂಕೋರ್ಟ್‌ಗೆ ನೀಡಿರುವ ಸಾರ್ವಭೌಮ ಅಧಿಕಾರವನ್ನೇ ಪ್ರಶ್ನಿಸಿದರು...!
ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಕೂಡ ಇಂಥ ದ್ದೇ ರೀತಿಯ ಅವಮಾನಕ್ಕೆ ಗುರಿಯಾದರು. ಕಾರ್ತಿಕ ದೀಪಂ ಪ್ರಕರಣದಲ್ಲಿ ಅವರ ತೀರ್ಪನ್ನು ಖಂಡಿಸಿ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಸಲಹೆ ಪ್ರಕಾರ ಇಂಡಿಯಾ ಮೈತ್ರಿ ಕೂಟದ 107 ಸಂಸದರು ನ್ಯಾ.ಸ್ವಾಮಿನಾಥನ್‌ರನ್ನು ವಾಗ್ದಂಡನೆಗೆ ಒಳಪಡಿಸಬೇಕು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದರು.
ವಾಗ್ದಂಡನೆಗೆ ಇದು ಅರ್ಹ ಅರ್ಜಿ ಅಲ್ಲ ಎನ್ನುವುದು ಇಂಡಿಯಾ ಒಕ್ಕೂಟದ ಸಂಸದರಿಗೆ ತಿಳಿದಿತ್ತು. ಹಾಗಾಗಿಯೇ, ಸೈದ್ಧಾಂತಿಕ ವಿರೋಧ, ರಾಜಕೀಯ ಲಾಭ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಓಲೈಕೆಗೆಂದೇ ಹೀಗೆ ಮಾಡಿದರು ಎಂಬ ಆರೋಪ ಎಡೆಯಿಂದ ಕೇಳಿ ಬಂತು.
ತಮಿಳುನಾಡಿನ ತಿರುಪಾರನುಕುಂಡ್ರಮ್‌ನಲ್ಲಿ ಹಿಂದೂ ಭಕ್ತರು ಶತಮಾನಗಳಿಂದಲೂ ಪರಂಪರಾ ನುಗತವಾಗಿ ಕಾರ್ತಿಕ ದೀಪಂ ಉತ್ಸವವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸುತ್ತಾ ಬಂದಿದ್ದಾರೆ. ಸ್ವತಃ ವಕ್ಫ್ ಮಂಡಳಿ ಕೂಡ ಆಚರಣೆಗೆ ಆಕ್ಷೇಪ ತೆಗೆದಿರಲಿಲ್ಲ. ಆದರೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರಕ್ಕೆ ಉತ್ಸವಕ್ಕೆ ಅವಕಾಶ ನೀಡಲು ಸಹಮತವಿರಲಿಲ್ಲ.
ತಿರುಪ್ಪರಂಕುಂಡ್ರಂ ಮುರುಗನ್ ದೇವಾಲಯ ತಮಿಳುನಾಡಿನ ಪವಾಡ ಸ್ಥಳಗಳಂದು ಎಂದು ನಂಬಲಾಗಿದೆ. ಇದು ಮಲೆಯ ಅಡಿಭಾಗದಲ್ಲಿದೆ. ಮಲೆಯ ತುದಿಯಲ್ಲಿ ಸಿಕಂದರ ಬಾದ್ ಶಾ ಎಂಬ ದರ್ಗಾವಿದೆ. ಕಾರ್ತಿಕ ದೀಪಂ ದಿನದಂದು ಮಲೆಯ ಮೇಲಿನ ಉಚ್ಚಿ ಪಿಳ್ಳಯಾರ್ ದೇವಾಲಯದ ಬಳಿಯ ದೀಪ ಮಂಟಪದಲ್ಲಿ ದೀಪ ಹಚ್ಚಲಾಗುತ್ತದೆ.
ಪುರಾತನ ಕಲ್ಲಿನ ದೀಪತೂಣ್ ಅಥವಾ ದೀಪಸ್ತಂಭದಲ್ಲಿ ದೀಪ ಹಚ್ಚಲು ಅನುಮತಿ ನೀಡಬೇಕು ಎಂದು ಕೆಲ ಹಿಂದು ಶ್ರದ್ಧಾಳುಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದೀಪಸ್ತಂಭವು ದರ್ಗಾಕ್ಕೆ ಸನಿಹದಲ್ಲಿಯೇ ಇದೆ. ದೀಪ ಹಚ್ಚುವುದರಿಂದ ದರ್ಗಾಕ್ಕೇನೂ ಸಮಸ್ಯೆ ಆಗುತ್ತಿರಲಿಲ್ಲ.
ಡಿ.1ರಂದು ನೀಡಿದ್ದ ತೀರ್ಪಿನಲ್ಲಿ ನ್ಯಾ.ಜಿ.ಆರ್.ಸ್ವಾಮಿನಾಥನ್ ಅವರು ದೀಪ ಹಚ್ಚಲು ಅನುಮತಿ ನೀಡಿದ್ದರು. ಇದು ಹಿಂದು ನಂಬಿಕೆಗಳಿಗೆ ಪೂರಕವಾಗಿದ್ದು, ಯಾರ ಸಂವೇದನೆಗಳನ್ನೂ ಹಾನಿ ಮಾಡುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿದ್ದರು. ಆದರೆ, ಡಿಎಂಕೆ ಸರಕಾರಕ್ಕೆ ಹೈಕೋರ್ಟ್ ತೀರ್ಪು ಅಪಥ್ಯವೆನಿಸಿತು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಲಿದೆ ಎಂಬ ಆತಂಕ ಹೊರ ಹಾಕಿತು. ರಾಜ್ಯ ಸರಕಾರ ಈ ತೀರ್ಪನ್ನು ವಿಭಾಗೀಯ ಪೀಠದ ಎದುರು ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಿತು. ಆದರೆ, ಅಲ್ಲೂ ಹಿನ್ನಡೆ ಅನುಭವಿಸಿತು.
ನ್ಯಾ.ಸ್ವಾಮಿನಾಥನ್ ಆದೇಶ ಎತ್ತಿ ಹಿಡಿದ ವಿಭಾಗೀಯ ನ್ಯಾಯ ಪೀಠ, ನ್ಯಾಯಾಂಗ ನಿಂದನೆ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಟೀಕಿಸಿತು. ಅಷ್ಟಕ್ಕೇ ಸುಮ್ಮನಾಗದ ರಾಜ್ಯ ಸರಕಾರ, ನ್ಯಾ.ಜಿ.ಆರ್.ಸ್ವಾಮಿನಾಥನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ಹಲವು ಪ್ರಕರಣಗಳಲ್ಲಿ ಹಿರಿಯ ವಕೀಲ ಎಂ.ಶ್ರೀಚರಣ್ ರಂಗನಾಥನ್ ಅವರ ಪರವಾಗಿ ಆದೇಶ ನೀಡಲಾಗಿದೆ.
ನ್ಯಾಯಾಧೀಶರು ನಿಷ್ಪಕ್ಷಪಾತತೆ, ಪಾರದರ್ಶಕತೆ ಮತ್ತು ನ್ಯಾಯಾಂಗ ಜಾತ್ಯತೀತತೆ ಕಾಯ್ದು ಕೊಂಡಿಲ್ಲ ಎಂದು ಆರೋಪಿಸಿತು. ವಾಗ್ದಂಡನೆಗೆಂದು ಸಲ್ಲಿಸಲಾದ ಮನವಿಯಲ್ಲಿ ಈ ಎಲ್ಲಾ ಅಂಶಗಳನ್ನು ದಾಖಲು ಮಾಡಲಾಯಿತು. ವಿಚಿತ್ರ ಎಂದರೆ - ಡಿಎಂಕೆ ಪ್ರೇರಿತ ವಾಗ್ದಂಡನೆಗೆ ಕಾಂಗ್ರೆಸ್ ಸೇರಿ ಇತರೆ ವಿಪಕ್ಷಗಳೂ ಕೈಜೋಡಿಸಿದವು. ಕರ್ನಾಟಕ ಕಾಂಗ್ರೆಸ್‌ನ ಮೂವರು ಸಂಸದ ರೂ ಇದಕ್ಕೆ ಸಹಿ ಹಾಕಿದ್ದು, ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಯಿತು.
ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡುವ ಬದಲು ವಾಗ್ದಂಡನೆಯ ಹಾದಿ ಹಿಡಿದದ್ದು ಇಂಡಿಯಾ ಒಕ್ಕೂಟದ ಮೆದುಳು ನಿಷ್ಕ್ರಿಯಗೊಂಡಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಹಲವು ಕಾನೂನು ವಿಶ್ಲೇಷಕರೂ ಕಿಡಿಕಾರಿದರು. ನ್ಯಾಯಾಧೀಶರೊಬ್ಬರ ಆದೇಶ ಅಥವಾ ತೀರ್ಪಿನ ಬಗ್ಗೆ ಆಕ್ಷೇಪಣೆಗಳಿದ್ದಾಗ ಅದನ್ನು ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸುವ ಕಾನೂನಾತ್ಮಕ ಅಧಿಕಾರ ಎಲ್ಲರಿಗೂ ಇದೆ.
ಆದರೆ, ರಾಜ್ಯ ಸರಕಾರದ ಧೋರಣೆಗೆ ಪೂರಕವಾಗಿ ನ್ಯಾಯಾಧೀಶರು ತೀರ್ಪು ನೀಡಲಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ವಾಗ್ದಂಡನೆಗೆ ಒಳಪಡಿಸಬೇಕು ಎಂದು ಪ್ರತಿಪಾದಿಸುವುದು ಅಪಾಯಕಾರಿ ಬೆಳವಣಿಗೆ ಮತ್ತು ಅತಿಕೆಟ್ಟ ಮೇಲ್ಪಂಕ್ತಿಯನ್ನು ಹಾಕುತ್ತದೆ. ಈ ಪ್ರಕರಣದಲ್ಲಿ ಡಿಎಂಕೆ ತಾಳಕ್ಕೆ ಕಾಂಗ್ರೆಸ್ ಕುಣಿದದ್ದು ಆ ಪಕ್ಷದ ರಾಜಕೀಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಯಿತು.
ನ್ಯಾ.ಜಿ.ಆರ್.ಸ್ವಾಮಿನಾಥನ್ ಆದೇಶ ಸಂವಿಧಾನ ವಿರೋಧಿ ಎನ್ನುವುದಾದರೆ ಅದನ್ನು ಸುಪ್ರೀಂ ಕೋರ್ಟ್ ಕೂಡ ಅಮಾನ್ಯಗೊಳಿಸಬಹುದು. ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಈಗಾಗಲೇ ಡಿಎಂಕೆ ಸರಕಾರ ಪ್ರಶ್ನಿಸಿದೆ. ಆದರೆ, ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯಲು ಇಂಡಿ ಒಕ್ಕೂಟಕ್ಕೆ ತಾಳ್ಮೆ ಇಲ್ಲವೇ? ಅಥವಾ ಸುಪ್ರೀಂಕೋರ್ಟ್ ನಲ್ಲೂ ಕೇಸು ಬಿದ್ದು ಹೋಗಲಿದೆ ಎಂಬ ಅನುಮಾನವೇ? ಇದೇ ಕಾರಣಕ್ಕೆ ವಾಗ್ದಂಡನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದೇ ಎಂಬೆ ಪ್ರಶ್ನೆಗಳಿಗೆ ಇಂಡಿ ಒಕ್ಕೂಟದವರೇ ಉತ್ತರಿಸಬೇಕು.
ಏತನ್ಮಧ್ಯೆ, ನ್ಯಾ.ಸ್ವಾಮಿನಾಥನ್ ವಾಗ್ದಂಡನೆ ನೊಟೀಸ್ ವಿರೋಧಿಸಿ ದೇಶದ 56 ಮಾಜಿ ನ್ಯಾಯಾ ಧೀಶರು ಪತ್ರ ಬರೆದರು. ಈ ನೊಟೀಸು ಸಮಾಜದ ನಿರ್ದಿಷ್ಟ ವರ್ಗದ ಸೈದ್ಧಾಂತಿಕ ಅಥವಾ ರಾಜಕೀಯ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳದ ನ್ಯಾಯಾಧೀಶರನ್ನು ಬೆದರಿಸುವ ನಾಚಿಕೆ ಗೇಡಿನ ಪ್ರಯತ್ನ ಎಂದು ಆಕ್ರೋಶ ಹೊರಹಾಕಿದರು.
ತಮ್ಮ ನಿಲುವು-ಆಲೋಚನೆಗಳನ್ನು ಅನುಮೋದಿಸುವ ತೀರ್ಪುಗಳು ಕೋರ್ಟಿನಿಂದ ಹೊರ ಬೀಳದಿದ್ದಾಗ ನ್ಯಾಯಾಧೀಶರನ್ನು ವಾಗ್ದಂಡನೆಗೆ ಒಳಪಡಿಸಬೇಕು ಎನ್ನುವುದೇ ಇಂಡಿಯಾ ಒಕ್ಕೂಟ ಪಕ್ಷಗಳ ಪ್ರತಿಪಾದನೆಯಾದರೆ ; ರಾಹುಲ್ ಗಾಂಧಿ ಅಪರಾಧಿ ಎಂಬ ಸೂರತ್ ನ್ಯಾಯಾಲ ಯದ ತೀರ್ಪಿಗೆ ತಡೆ ನೀಡಿದ್ದ (2023) ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೂ ವಾಗ್ದಂಡನೆಗೆ ಒಳಪಡಿಸಬೇಕು ಎಂದೇ ವಾದಿಸಬೇಕಾಗುತ್ತದೆ ಅಲ್ಲವೇ? ಆದರೆ, ವಾಸ್ತವ ಏನೆಂದರೆ ಶೂನ್ಯ ವಿವೇಚನೆ ಇರುವವರಷ್ಟೇ ಆ ರೀತಿ ಯೋಚಿಸುತ್ತಾರಷ್ಟೇ.
ಎಲ್ಲಾ ಕಳ್ಳರಿಗೆ ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ ಬರುತ್ತದೆ ಎಂದು 2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರಚಾರ ಭಾಷಣ ಮಾಡಿದ್ದರು. ಈ ಮಾನನಷ್ಟ ಪ್ರಕರಣದಲ್ಲಿ ಅವರನ್ನು ಸೂರತ್ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿ, ೨ ವರ್ಷಗಳ ಶಿಕ್ಷೆ ಪ್ರಕಟಿಸಿತ್ತು.
ಆದರೆ, ಸುಪ್ರೀಂಕೋರ್ಟ್ ಈ ತೀರ್ಪಿಗೆ ತಡೆ ನೀಡಿದ್ದರಿಂದ ರಾಹುಲ್ ಗಾಂಧಿ ಸಂಸದ ಸದಸ್ಯತ್ವ ಮರುಸ್ಥಾಪನೆಯಾಗಿತ್ತು. ಸುಪ್ರೀಂಕೋರ್ಟ್‌ನ ನಿವೃತ್ತ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿತ್ತು. ಹಾಗೆ ನೋಡಿದರೆ, ನಿವೃತ್ತ ನ್ಯಾ.ಬಿ.ಆರ್.ಗವಾಯಿ ಅವರ ತಂದೆ ಆರ್.ಎಸ್.ಗವಾಯಿ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಮುಖ್ಯವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರಾಗಿದ್ದರು.
2006-2011ರ ಅವಧಿ ಮಧ್ಯೆ ಕೇರಳ, ಸಿಕ್ಕಿಂ ಮತ್ತು ಬಿಹಾರದ ರಾಜ್ಯಪಾಲರಾಗಿದ್ದರು ಕೂಡ. ಹಾಗೆಂದ ಮಾತ್ರಕ್ಕೆ ಸುಪ್ರೀಂಕೋರ್ಟ್ ನ್ಯಾ.ಬಿ.ಆರ್.ಗವಾಯಿ ಅವರ ನ್ಯಾಯಿಕ ವಿಶ್ವಾಸಾರ್ಹತೆ ಪ್ರಶ್ನಿಸುವುದು ಸಾಧ್ಯವೇ/ಸರಿಯೇ? ಈ ತೀರ್ಪನ್ನು ಒಪ್ಪದವರು, ಎಲ್ಲಾ ನ್ಯಾಯಮೂರ್ತಿಗಳನ್ನು ವಾಗ್ದಂಡನೆಗೆ ಒಳಪಡಿಸಬೇಕು ಎನ್ನುತ್ತಾ ಕೂರುತ್ತಿದ್ದರೆ ಆಗ ಪರಿಸ್ಥಿತಿ ಏನಾಗುತ್ತಿತ್ತು? ಡಿಎಂಕೆ ಬಿಡಿ. ಆದರೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೇನಾಗಿದೆ? ಅಲ್ಲಿ ಕಾನೂನಿನ ಆಳ-ಅಗಲ ಬಲ್ಲ ಪ್ರಕಾಂಡ ಪಂಡಿತರಿದ್ದರೂ, ಅವರು ತಲೆಗೆ ಮಂಕು ಕವಿದಂತೆ ವರ್ತಿಸುತ್ತಿರುವುದೇಕೆ?