ಯಕ್ಷ ಪ್ರಶ್ನೆ
ರಮಾನಂದ ಶರ್ಮಾ
‘ಒಂದು ರಾಷ್ಟ್ರ, ಒಂದು ವೇತನ’ ಎಂಬ ಪರಿಕಲ್ಪನೆಯಂತೆ ಕಾಣುವ ಈ ನೂತನ ಕಾರ್ಮಿಕ ಸಂಹಿತೆಯಲ್ಲಿ ಮೇಲ್ನೋಟಕ್ಕೆ ಕಾರ್ಮಿಕರ ಹಿತರಕ್ಷಣೆ ಎದ್ದುಕಾಣುತ್ತಿದ್ದರೂ, ಆಳವಾಗಿ ವಿಶ್ಲೇಷಿಸಿ ದಾಗ ಅದರಲ್ಲಿ ಅಹಿತವೇ ಹೆಚ್ಚು ಎನ್ನುವುದು ಕಾರ್ಮಿಕ ಸಂಘಟನೆಗಳ ಅಭಿಪ್ರಾಯ. ‘ಕಾರ್ಮಿಕರ ಮೂಗಿಗೆ ತುಪ್ಪ ಸವರಲಾಗಿದೆ’ ಎಂಬುದು ಅವುಗಳ ಆಕ್ರೋಶ.
ವಸಾಹತುಶಾಹಿಗಳಿಂದ ರೂಪಿತವಾಗಿ 1930ರಿಂದ ಜಾರಿಯಲ್ಲಿದ್ದ ಕಾರ್ಮಿಕ ಕಾನೂನುಗಳನ್ನು ಕ್ರೋಡೀಕರಿಸಿ, ಈ ನಿಟ್ಟಿನಲ್ಲಿ ಇದ್ದ 29 ಕಾನೂನುಗಳನ್ನು ಪರಿಷ್ಕರಿಸಿರುವ ಕೇಂದ್ರ ಸರಕಾರವು, ಅವುಗಳ ಸಂಖ್ಯೆಯನ್ನು ೪ಕ್ಕೆ ಇಳಿಸಿ, ಹೊಸ ಕಾರ್ಮಿಕ ಸಂಹಿತೆಗಳ ಜಾರಿಗೆ ಸಂಬಂಧಿಸಿದಂತೆ ನವೆಂಬರ್ 21ರಂದು ಅಧಿಸೂಚನೆ ಹೊರಡಿಸಿದೆ.
ಕೈಗಾರಿಕಾ ವ್ಯವಹಾರಗಳ ಸಂಹಿತೆ (2019), ಸಾಮಾಜಿಕ ಭದ್ರತಾ ಸಂಹಿತೆ (2020), ಉದ್ಯೋಗ ಸಂಹಿತೆ (2020), ಆರೋಗ್ಯ ಮತ್ತು ಕೆಲಸಗಳ ಸ್ಥಿತಿಗತಿಗಳ ಸಂಹಿತೆ (2020) ಇವು ಸಂಸತ್ತಿನಲ್ಲಿ ಐದು ವರ್ಷಗಳ ಹಿಂದೆಯೇ ಅಂಗೀಕಾರವನ್ನು ಪಡೆದಿದ್ದು, 2025ರ ನವೆಂಬರ್ 21ರಿಂದ ಕಾನೂನು ಗಳಾಗಿವೆ.
ಸ್ಥೂಲವಾಗಿ ಹೇಳುವುದಾದರೆ, ಇಂಗ್ಲಿಷ್ ವಸಾಹತುಶಾಹಿ ಕಾನೂನುಗಳನ್ನು ಬಹುತೇಕ ರದ್ದು ಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ವೇತನ ನೀಡುವ, ಸಾಮಾಜಿಕ ಭದ್ರತೆ ಒದಗಿಸುವ, ವೇತನ ಮತ್ತು ಇತರ ಸೌಲಭ್ಯಗಳ ವಿಷಯದಲ್ಲಿ ಮಹಿಳೆಯರನ್ನು ಪುರುಷರಿಗೆ ಸಮನಾಗಿ ನೋಡುವ ನಿಟ್ಟಿನಲ್ಲಿ ಈ ಕಾನೂನುಗಳು ಬಹುದೂರ ಸಾಗುತ್ತವೆ ಎಂದು ನಿರೀಕ್ಷಿಸಲಾಗಿದೆ.
ಈ ಕಾನೂನುಗಳನ್ನು ಹಾರ್ದಿಕವಾಗಿ ಸ್ವಾಗತಿಸಿರುವ India Inc, ‘ಉದ್ಯಮದ ದಶಕಗಳ ಬೇಡಿಕೆ ಯು ಈಡೇರಿದೆ’ ಎಂದು ಸಂತಸಪಟ್ಟಿದೆ. ಆದರೆ, ಒಬ್ಬರ ಸಂತಸದಲ್ಲಿ ಇನ್ನೊಬ್ಬರ ಸಂಕಷ್ಟ ಇರುತ್ತದೆ ಎನ್ನುವಂತೆ, ಈ ಸಂಹಿತೆಗಳ ವಿರುದ್ಧ ಕಾರ್ಮಿಕ ವಲಯದಲ್ಲಿ ಪ್ರತಿಭಟನೆಯ ದನಿ, ಅಪಸ್ವರಗಳು ಕೇಳಿಬರುತ್ತಿವೆ.
ಇದನ್ನೂ ಓದಿ: Ramanand Sharma Column: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿದೇಶಿ ನೇರ ಹೂಡಿಕೆ: ಸ್ವಂತಿಕೆ ಉಳಿಯಬಹುದೇ ?
ಇವುಗಳ ಪರ ಮತ್ತು ವಿರುದ್ಧವಾಗಿರುವ ಚರ್ಚೆಗಳು ದೇಶಾದ್ಯಂತ ನಡೆಯುತ್ತಿವೆ. ಕಾರ್ಮಿಕ ಸಂಘಟನೆಗಳು ಈಗಾಗಲೇ ನವೆಂಬರ್ 26ರಂದು ಒಂದು ದಿನದ ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಇದು ಮುಂದುವರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ದುಡಿಯುವ ವರ್ಗದ ಮೇಲೆ ಸರಕಾರವು ಯುದ್ಧ ಸಾರಿದೆ ಎಂದು ಅವು ಆರೋಪಿಸಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ. ಈ ಸಂಹಿತೆಗಳನ್ನು ರೂಪಿಸುವಾಗ ಸರಕಾರವು ಕಾರ್ಮಿಕ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಮತ್ತು ದೇಶವನ್ನು ಮಾಲೀಕ-ಸೇವಕ ಸಂಬಂಧದ ದಿನಗಳಿಗೆ ಕೊಂಡೊಯ್ಯುತ್ತಿದೆ ಎಂದು ಕಾರ್ಮಿಕ ಸಂಘಟನೆಗಳವರು ದೂರುತ್ತಿದ್ದಾರೆ.
ಕಾರ್ಮಿಕರ ಅಸಂತೋಷಕ್ಕೆ ಕಾರಣಗಳೇನು?
ಈ ಸಂಹಿತೆಯನ್ವಯ ಕಾರ್ಮಿಕರ ಕೆಲಸದ ಅವಧಿಯು ಮೊದಲಿನ ೯ ತಾಸಿನಿಂದ ೧೨ ತಾಸುಗಳಿಗೆ ಏರಲಿದೆ. ದಿನದ ಕಾರ್ಯಾವಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿಯವರು ಹಿಂದೊಮ್ಮೆ ವ್ಯಕ್ತಪಡಿಸಿದ್ದ ಅಭಿಪ್ರಾಯವು ಇದರೊಳಗೆ ನುಸುಳಿದಂತಿದೆ ಎನ್ನಲಾಗುತ್ತಿದೆ. ಗುತ್ತಿಗೆ ಆಧಾರಿತ ಉದ್ಯೋಗಿಗಳನ್ನು ಕಾಯಂಗೊಳಿಸುವುದು ಕ್ಲಿಷ್ಟದಾಯಕ. ಉದ್ಯೋಗಿಗಳು ಆಡಳಿತ ವರ್ಗದ ಯಾವುದೇ ಧೋರಣೆ, ನೀತಿ-ನಿಯಮಾವಳಿಯನ್ನು ಪ್ರತಿಭಟಿಸ ಬೇಕಿದ್ದರೆ ಅವರಿಗೆ ಶೇ.75ರಷ್ಟು ಸಹವರ್ತಿಗಳ ಬೆಂಬಲವಿರಲೇಬೇಕು.
ಕಂಪನಿಗಳು ಸರಕಾರದ ಅನುಮತಿಯಿಲ್ಲದೆಯೇ 300 ಉದ್ಯೋಗಿಗಳನ್ನು ಕೆಲಸದಿಂದ ವಜಾ ಗೊಳಿಸಬಹುದು (ಈ ಮೊದಲು ಇದು 100 ಕಾರ್ಮಿಕರಿಗೆ ಸೀಮಿತವಾಗಿತ್ತು), ಕಾರ್ಖಾನೆಗಳಲ್ಲಿ ಶಿಫ್ಟ್ ಅವಧಿಯನ್ನು ಹೆಚ್ಚಿಸಬಹುದು. ದೇಶದ ೬೦-೭೦ ಉದ್ಯಮಗಳಲ್ಲಿ ಉದ್ಯೋಗಿಗಳ ಸಂಖ್ಯೆ 300ಕ್ಕಿಂತ ಕಡಿಮೆ ಇದ್ದು, ಇದು ಕಾರ್ಮಿಕರಿಗೆ ಮಾರಕವಾಗುತ್ತದೆ ಎಂದು ಕಾರ್ಮಿಕ ಸಂಘಟನೆ ‘ಐಟಕ್’ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಈ ಸಂಹಿತೆಯ ಪ್ರಕಾರ ಉದ್ಯೋಗಿಗಳಿಗೆ ಗ್ಯಾಚುಯಿಟಿ, ಪಿಎಫ್ ಕಡ್ಡಾಯವಾಗಿರುವುದರಿಂದ, ಕಾರ್ಮಿಕರ ಕೈಗೆ ಲಭಿಸುವ ವೇತನದಲ್ಲಿ ಕಡಿತವಾಗುತ್ತದೆ ಎಂದು ಆ ಸಂಘಟನೆಯವರು ಆರೋ ಪಿಸುತ್ತಾರೆ. ಯಾವುದೇ ಕಾನೂನು, ನೀತಿ-ನಿಯಮಾವಳಿಗಳು ಸಂಬಂಧಪಟ್ಟ ಎಲ್ಲರನ್ನೂ ಸಂತುಷ್ಟಗೊಳಿಸಲು ಸಾಧ್ಯವಿಲ್ಲ.
ಕಾರ್ಮಿಕ ಸಂಘಟನೆಗಳು ಸಂಹಿತೆಯಲ್ಲಿನ ನಕಾರಾತ್ಮಕ ಅಂಶಗಳನ್ನು ಪಟ್ಟಿಮಾಡಿ ಎತ್ತಿ ತೋರಿಸುತ್ತಿವೆ. ಕಾರ್ಮಿಕರ ಕಳವಳ, ಆಕ್ರೋಶವನ್ನು ತಳ್ಳಿಹಾಕುವಂತಿಲ್ಲ. ಇದರಲ್ಲಿ ಸತ್ಯವೂ ಇಲ್ಲದಿಲ್ಲ. ಹಾಗೆಯೇ, ಕಾರ್ಮಿಕರ ಒಳಿತು ಮತ್ತು ಕಲ್ಯಾಣಗಳ ಕುರಿತೂ ಹೊಸ ಕಾನೂನಿನಲ್ಲಿ ಒತ್ತು ನೀಡಿರುವುದನ್ನು ಅಲ್ಲಗಳೆಯಲಾಗದು.
ಈ ಹೊಸ ಸಂಹಿತೆಯ ಪ್ರಕಾರ, ಕಾಯಂ ನೌಕರರಿಗೆ ಸಮನಾಗಿರುವ ರಜೆ, ವಿಮೆ, ಗ್ರಾಚುಯಿಟಿ ಸೌಲಭ್ಯಗಳು ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೂ ದೊರಕುತ್ತದೆ ಎಂಬುದು ಗಮನಾರ್ಹ ಅಂಶ. ಕಂಪನಿಯೊಂದರಲ್ಲಿ ೫ ವರ್ಷದ ಬದಲಿಗೆ ಕೇವಲ ಒಂದು ವರ್ಷ ಕೆಲಸ ಮಾಡಿದರೂ ಅವರು ಗ್ರಾಚುಯಿಟಿಗೆ ಅರ್ಹರಾಗುತ್ತಾರೆ. ಕಾಯಂ ನೌಕರರಿಗೆ ದೊರಕುವಷ್ಟು ವೇತನವು, ನಿಗದಿತ ಅವಧಿಗೆ ನೇಮಕವಾದವರಿಗೂ ಲಭ್ಯವಾಗುತ್ತದೆ.
೪೦ ವರ್ಷ ದಾಟಿದವರಿಗೆ ಉಚಿತ ಆರೋಗ್ಯ ತಪಾಸಣೆ, ‘ಗಿಗ್’ ಕಾರ್ಮಿಕರಿಗೆ ಎಲ್ಲಿ ಬೇಕಾದರೂ ಕೆಲಸಮಾಡಲು ಅನುವಾಗುವಂತೆ ‘ಯೂನಿವರ್ಸಲ್ ಅಕೌಂಟ್ ನಂಬರ್’ (ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚುಯಿಟಿಯನ್ನು ಜಮಾ ಮಾಡಲು) ನೀಡುವುದು ಮತ್ತು ಅವರಿಗೆ ಕನಿಷ್ಠ ವೇತನದ ಖಾತ್ರಿ ನೀಡುವುದು ಇಲ್ಲಿ ಕಡ್ಡಾಯವಾಗಿರುತ್ತದೆ. ಈವರೆಗೆ ಕಾಯಂ ನೌಕರರಿಗೆ ಮಾತ್ರ ನೀಡುತ್ತಿದ್ದ ಪಿಎಫ್, ಇಎಸ್‌ಐಸಿ, ವಿಮೆ, ಹೆರಿಗೆ ರಜೆ, ಪಿಂಚಣಿ ಇತ್ಯಾದಿಗಳನ್ನು ಗುತ್ತಿಗೆ ನೌಕರರಿಗೂ ವಿಸ್ತರಿಸ ಲಾಗುತ್ತದೆ.
ಇನ್ನು, ಕಂಪನಿಗಳ ನೋಂದಣಿ ಮತ್ತು ಪರವಾನಗಿಗೆಂದು ಒಂದೇ ವೇದಿಕೆಯನ್ನು ರಚಿಸಲಾಗಿದ್ದು, ಈ ನಿಟ್ಟಿನಲ್ಲಿ ಬಹುಕಾಲದಿಂದ ಅನುಸರಿಸುತ್ತಿದ್ದ ೧೨ ಪ್ರಕ್ರಿಯೆಗಳಿಗೆ ತಿಲಾಂಜಲಿ ನೀಡಲಾಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಖಚಿತಪಡಿಸಲು ‘ನ್ಯಾಷನಲ್ ಫಾರ್ ವೇಜ್’ ರಚನೆಯಾಗಿದೆ.
ಪತ್ರಕರ್ತರು, ಡಬ್ಬಿಂಗ್ ಕಲಾವಿದರಿಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲಾಗಿದೆ. ಹಾಗೆಯೇ ಈ ಸಂಹಿತೆಯಲ್ಲಿ, ಬೀಡಿ ಮತ್ತು ಸಿಗರೇಟು ಉದ್ಯಮದಲ್ಲಿನ ಕೆಲಸಗಾರರನ್ನು ವಿಶೇಷ ವಾಗಿ ನೋಡಿದ್ದು, ಅವರಿಗೆ ದಿನಕ್ಕೆ ೮-೧೨ ತಾಸು ಕೆಲಸ ಮತ್ತು ವಾರಕ್ಕೆ ಗರಿಷ್ಠ ೪೮ ತಾಸುಗಳ ಕೆಲಸವನ್ನು ನಿಗದಿಪಡಿಸಲಾಗಿದೆ.
ಓವರ್‌ಟೈಮ್ ಕೆಲಸ ಮಾಡಿದವರಿಗೆ ದುಪ್ಪಟ್ಟು ಸಂಬಳ, ವರ್ಷಕ್ಕೆ ೩೦ ದಿನ ಕೆಲಸ ಮಾಡಿದರೂ ಬೋನಸ್ ಮತ್ತು ನಿಗದಿತ ಸಮಯಕ್ಕೆ ಸಂಬಳ ನೀಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಹಿತೆಯಲ್ಲಿ ‘ವೈಟ್ ಕಾಲರ್’ ಉದ್ಯೋಗಿಗಳನ್ನು ಗಮನಿಸಿರುವುದು ಇನ್ನೊಂದು ವಿಶೇಷ. ಇಂಥ ಉದ್ಯೋಗಿಗಳಿಗೆ ಪ್ರತಿ ತಿಂಗಳ ೭ನೇ ತಾರೀಖಿನೊಳಗೆ ಸಂಬಳ ನೀಡುವುದು, ಪ್ರತಿಯೊಬ್ಬರಿಗೂ ನೇಮಕಾತಿ ಪತ್ರ ನೀಡುವುದು ಕಡ್ಡಾಯ.
ಇಂಥ ಉದ್ಯೋಗಿಗಳ ಸಿಟಿಸಿಯಲ್ಲಿ (cost to company) ಮೂಲವೇತನವು ಶೇ.೫೦ರಷ್ಟು ಇರಲೇ ಬೇಕು ಎಂಬ ನಿಬಂಧನೆ ಹಾಕಲಾಗಿದೆ. ಅಗತ್ಯ ಸುರಕ್ಷತಾ ಕ್ರಮದೊಂದಿಗೆ ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸಕ್ಕೆ ಅನುಮತಿ, ಮಹಿಳೆಯರಿಗೂ ಪುರುಷರಷ್ಟೇ ಸಮಾನ ವೇತನ, ಕುಂದು ಕೊರತೆ ಸಮಿತಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಮುಂತಾದ ಅಂಶಗಳಿಗೆ ಒತ್ತು ನೀಡಲಾಗಿದೆ.
ಈವರೆಗೆ ನಿರ್ಲಕ್ಷಿಸಲ್ಪಟ್ಟಿದ್ದ ಎಂಎಸ್‌ಎಂಇ ಕೆಲಸಗಾರರನ್ನೂ ಈ ಸಂಹಿತೆಯಲ್ಲಿ ಗಣನೆಗೆ ತೆಗೆದು ಕೊಂಡಿದ್ದು ಇಲ್ಲಿ ಕಾಣಬರುವ ಇನ್ನೊಂದು ಮಹತ್ವದ ಅಂಶ. ಉದ್ಯೋಗಿಗಳ ಸಂಖ್ಯೆಯ ಆಧಾರದ ಮೇಲೆ ಸಾಮಾಜಿಕ ಭದ್ರತಾ ಸೌಕರ್ಯ ನೀಡುವುದು, ಪ್ರತಿ ಕೆಲಸಗಾರರಿಗೆ ಕನಿಷ್ಠ ವೇತನ, ನೀರು-ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು, ಹೆಚ್ಚಿನ ಅವಧಿಗೆ ಕೆಲಸ ಮಾಡಿದರೆ ಓವರ್ ಟೈಮ್ ವೇತನ ನೀಡುವುದು ಹಾಗೂ ವೇತನಸಹಿತ ರಜೆ ನೀಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
‘ಒಂದು ರಾಷ್ಟ್ರ, ಒಂದು ವೇತನ’ ಎಂಬ ಪರಿಕಲ್ಪನೆಯಂತೆ ಕಾಣುವ ಈ ನೂತನ ಕಾರ್ಮಿಕ ಸಂಹಿತೆಯಲ್ಲಿ ಮೇಲ್ನೋಟಕ್ಕೆ ಕಾರ್ಮಿಕರ ಹಿತರಕ್ಷಣೆ ಎದ್ದು ಕಾಣುತ್ತಿದ್ದರೂ, ಆಳವಾಗಿ ವಿಶ್ಲೇಷಿಸಿ ದಾಗ ಅದರಲ್ಲಿ ಅಹಿತವೇ ಹೆಚ್ಚು ಎನ್ನುವುದು ಕಾರ್ಮಿಕ ಸಂಘಟನೆಗಳ ಅಭಿಪ್ರಾಯ. ‘ಕಾರ್ಮಿಕರ ಮೂಗಿಗೆ ತುಪ್ಪ ಸವರಲಾಗಿದೆ’ ಎಂಬುದು ಅವುಗಳ ಆಕ್ರೋಶ.
ಹೀಗಾಗಿ ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂಬ ಕೂಗು ಕಾರ್ಮಿಕ ವರ್ಗದಲ್ಲಿ ಕೇಳುತ್ತಿದೆ. ‘ಟೇಕ್ ಹೋಮ್’ ವೇತನದಲ್ಲಿ ಕಡಿತ, ಕೆಲಸದ ಡಿಡಿ ಅವಧಿ ಹೆಚ್ಚಳ, ಶೇ.75ರಷ್ಟು ನೌಕರರ ಬೆಂಬಲವಿಲ್ಲದೆ ಪ್ರತಿಭಟನೆಗೆ ಇಳಿಯಲಾಗದಿರುವಿಕೆ, ಕಂಪನಿಗಳು ಸರಕಾರದ ಅನುಮತಿಯಿಲ್ಲದೆ ಯೇ 300 ನೌಕರರನ್ನು ವಜಾಗೊಳಿಸಬಹುದು ಎಂಬೆಲ್ಲಾ ಅಂಶಗಳು ಕಾರ್ಮಿಕರನ್ನು ರೊಚ್ಚಿ ಗೆಬ್ಬಿಸಿವೆ.
ಜತೆಗೆ, ‘ಮುಷ್ಕರ ನಡೆಸುವ ಮೊದಲು ಕಾರ್ಮಿಕರು ೧೪ ದಿನಗಳ ನೋಟಿಸ್ ನೀಡಬೇಕು’ ಎಂಬ ಹೊಸ ನಿಯಮ ಅವರನ್ನು ರೊಚ್ಚಿಗೆಬ್ಬಿಸಿದೆ. ಈ ಮೊದಲು ಸರಕಾರಿ ಸ್ವಾಮ್ಯದ ಕಂಪನಿಗಳಿಗಷ್ಟೇ ಅನ್ವಯವಾಗುತ್ತಿದ್ದ ಇಂಥ ನಿಯಮಾವಳಿಯು ತಮ್ಮ ಹಕ್ಕು ಮತ್ತು ಅಧಿಕಾರವನ್ನು ಕಸಿದು ಕೊಂಡಿದೆ ಎಂಬುದು ಕಾರ್ಮಿಕರ ಅಭಿಪ್ರಾಯ.
ವಿಚಿತ್ರವೆಂದರೆ, ಶೇ.50ಕ್ಕಿಂತ ಹೆಚ್ಚು ಕಾರ್ಮಿಕರು ಒಂದೇ ದಿನ ‘ಕ್ಯಾಷುಯಲ್ ಲೀವ್’ ತೆಗೆದು ಕೊಂಡರೆ ಅದನ್ನು ಮುಷ್ಕರ ಎಂದು ಪರಿಗಣಿಸಲಾಗುತ್ತದೆ. ಇವು ತಮ್ಮ ಹಕ್ಕು, ಅಧಿಕಾರ ಮತ್ತು ಬಲವನ್ನು ಹತ್ತಿಕ್ಕುವ ಅಂಶಗಳು ಎಂದು ಕಾರ್ಮಿಕರು ಎತ್ತಿ ತೋರಿಸುತ್ತಿದ್ದಾರೆ. ದೇಶದ ಕಾರ್ಪೊ ರೇಟ್ ವಲಯ ಮತ್ತು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಲೆಂದು, ಕಾರ್ಮಿಕ ವರ್ಗದ ಧಿರೋದಾತ್ತ ಹೋರಾಟಗಳ ಮೂಲಕ ರೂಪುಗೊಂಡ ೨೯ ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸಮಾಧಿ ಮಾಡಿ, ಅದನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಲಾಗಿದೆ; ಇದು ಕಾರ್ಮಿಕ ವರ್ಗವನ್ನು ಪುನಃ ಗುಲಾಮಗಿರಿಯತ್ತ ಕೊಂಡೊಯ್ಯುವ ಪಿತೂರಿ ಎಂದು ಪ್ರಮುಖ ಕಾರ್ಮಿಕ ನಾಯಕರು ಬಣ್ಣಿಸುತ್ತಿದ್ದಾರೆ.
ವಿದೇಶಿ ಉದ್ಯಮಗಳ ಸ್ಥಾಪನೆಗಾಗಿ ಕಾನೂನನ್ನು ಬದಲಾಯಿಸಿ, ಕಾರ್ಮಿಕರ ಹಿತವನ್ನು ಬಲಿಗೊಡ ಲಾಗುತ್ತದೆ ಎಂದೂ ಹೇಳುವ ಕಾರ್ಮಿಕರಿದ್ದಾರೆ. ‘ಇದು ಮಾಲೀಕರ ಪರ ಹೆಚ್ಚು ವಾಲಿದೆ, ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸುವ ನಿರ್ಧಾರವನ್ನು ಮಾಲೀಕರಿಗೆ ನೀಡಿರುವುದು ಆತಂಕಕಾರಿ ಬೆಳವಣಿಗೆ’ ಎನ್ನುತ್ತಾರೆ ಅವರು.
ಇನ್ನು, ಉದ್ಯಮಿಗಳು ಕೂಡ ಒಂದಷ್ಟು ಅಂಶಗಳ ಬಗ್ಗೆ ಗೊಣಗುತ್ತಿದ್ದಾರೆ. ಕನಿಷ್ಠ ವೇತನದ ನಿಗದಿ, ಶೇ.೫೦ರಷ್ಟು ಮೂಲವೇತನ, ಗ್ರಾಚುಯಿಟಿ, ಪ್ರಾವಿಡೆಂಟ್ ಫಂಡ್, ಓವರ್ ಟೈಮ್ ವೇತನ; ಕಾಯಂ ನೌಕರರು ಮತ್ತು ನಿಗದಿತ ಅವಧಿಗೆ ಕೆಲಸ ಮಾಡುವ ನೌಕರರು ಇಬ್ಬರಿಗೂ ಸಮಾನ ವೇತನ; ಗುತ್ತಿಗೆ ನೌಕರರಿಗೂ ಇಎಸ್‌ಐ, ವಿಮೆ, ಗ್ರಾಚುಯಿಟಿ, ಹೆರಿಗೆ ರಜೆ ಮತ್ತು ಪಿಂಚಣಿ ನೀಡುವಿಕೆ; ಬೀಡಿ ಕಾರ್ಮಿಕರಿಗೆ ಅವರು ವರ್ಷಕ್ಕೆ ೩೦ ದಿನ ಕೆಲಸ ಮಾಡಿದರೂ ಬೋನಸ್ ನೀಡುವಿಕೆ; ಎಂಎಸ್ ಎಂಇ ವಲಯದಲ್ಲಿನ ಕಾರ್ಮಿಕರಿಗೆ ನೀಡಬೇಕಾಗಿ ಬರುವ ಸೌಲಭ್ಯಗಳು- ಈ ಎಲ್ಲ ಅಂಶಗಳು ಉದ್ಯಮಿಗಳ ಅತೃಪ್ತಿ ಮತ್ತು ಅಸಮಾಧಾನಗಳಿಗೆ ಕಾರಣವಾಗಿವೆ.
ಒಟ್ಟಾರೆ ಹೇಳುವುದಾದರೆ. ಚಿಂತಕರ ಮೂಸೆಯಿಂದ ಹೊರಹೊಮ್ಮಿದ ಭಾರಿ ಮಹತ್ವಾಕಾಂಕ್ಷಿ ಉಪಕ್ರಮ ಎಂದು ಬಣ್ಣಿಸಲ್ಪಡುತ್ತಿರುವ ನೂತನ ಕಾರ್ಮಿಕ ಸಂಹಿತೆಯು, ಮಾಲೀಕರು ಮತ್ತು ಕಾರ್ಮಿಕರು ಎರಡೂ ವಲಯಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎನ್ನುವ ಅಭಿಪ್ರಾಯದಲ್ಲಿ ತೂಕ ಕಾಣುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರಿ ಸಂಘರ್ಷ ಹುಟ್ಟಿಕೊಂಡರೆ ಅದರಲ್ಲೇ ನೂ ಅಚ್ಚರಿಯಿಲ್ಲ.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)