ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿದೇಶಿ ನೇರ ಹೂಡಿಕೆ: ಸ್ವಂತಿಕೆ ಉಳಿಯಬಹುದೇ ?

ಸರಕಾರಿ ಸ್ವಾಮ್ಯದ ೧೨ ಬ್ಯಾಂಕುಗಳನ್ನು ವಿಲೀನಗೊಳಿಸಿ ಅವುಗಳ ಸಂಖ್ಯೆಯನ್ನು ೨-೩ಕ್ಕೆ ಇಳಿಸುವ ಮತ್ತು ಜಗತ್ತಿನ ೨೦ ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ ಅವನ್ನು ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ವಿತ್ತ ಮಂತ್ರಾಲಯದಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆ, ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಪ್ರಸ್ತುತ ಇರುವ ಶೇ.೨೦ರಿಂದ ಶೇ.೪೯ರವರೆಗೆ ಏರಿಸುವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಚಿಂತನ-ಮಂಥನ ಆರಂಭವಾಗಿದೆ ಎನ್ನಲಾಗುತ್ತಿದೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿದೇಶಿ ನೇರ ಹೂಡಿಕೆ: ಸ್ವಂತಿಕೆ ಉಳಿಯಬಹುದೇ ?

-

Ashok Nayak
Ashok Nayak Nov 14, 2025 11:48 AM

ವಿಶ್ಲೇಷಣೆ

ರಮಾನಂದ ಶರ್ಮ

ಸರಕಾರಿ ಬ್ಯಾಂಕುಗಳಲ್ಲಿ ಸಾಲದ ಬೇಡಿಕೆಯನ್ನು ನೀಗಿಸುವಷ್ಟು ಬಂಡವಾಳ ಇಲ್ಲದಿರುವು ದರಿಂದ, ದೊಡ್ಡ ಮಟ್ಟದ ಸಾಲಗಳ ನೀಡಿಕೆಗೆ ಬೇಕಾಗುವ ಈ ಬಂಡವಾಳಕ್ಕಾಗಿ ಅವು ಕೇಂದ್ರ ಸರಕಾರದತ್ತಲೇ ಸದಾ ನೋಡುತ್ತಿರುತ್ತವೆ. ಹಾಗಂತ, ಬ್ಯಾಂಕುಗಳು ಕೇಳಿದಾಗೆಲ್ಲಾ ಬಂಡವಾಳ ನೀಡಲು ಸರಕಾರಕ್ಕೆ ಸಾಧ್ಯ ವಾಗುತ್ತಿಲ್ಲ. ಅಂತೆಯೇ ಸರಕಾರವು ಬ್ಯಾಂಕುಗಳಲ್ಲಿ ‘ಎಫ್‌ ಡಿಐ’ಗೆ ಇರುವ ಶೇ.20ರ ಮಿತಿಯನ್ನು ಸಡಿಲಿಸಿ ಶೇ.49ರವರೆಗೆ ಹೂಡಿಕೆಗೆ ಚಿಂತನೆ ನಡೆಸುತ್ತಿದೆ.

ಸರಕಾರಿ ಸ್ವಾಮ್ಯದ ೧೨ ಬ್ಯಾಂಕುಗಳನ್ನು ವಿಲೀನಗೊಳಿಸಿ ಅವುಗಳ ಸಂಖ್ಯೆಯನ್ನು ೨-೩ಕ್ಕೆ ಇಳಿಸುವ ಮತ್ತು ಜಗತ್ತಿನ ೨೦ ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ ಅವನ್ನು ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ವಿತ್ತ ಮಂತ್ರಾಲಯದಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆ, ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಪ್ರಸ್ತುತ ಇರುವ ಶೇ.೨೦ರಿಂದ ಶೇ.೪೯ರವರೆಗೆ ಏರಿಸುವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಚಿಂತನ-ಮಂಥನ ಆರಂಭವಾಗಿದೆ ಎನ್ನಲಾಗುತ್ತಿದೆ.

ಭಾರತೀಯ ಕಂಪನಿಗಳಲ್ಲಿ ವಿದೇಶಿ ಕಂಪನಿಗಳು ನೇರವಾಗಿ ಬಂಡವಾಳ ಹೂಡುವುದು ಹೊಸ ಬೆಳವಣಿಗೆಯೇನಲ್ಲ. ಇದನ್ನು ‘ವಿದೇಶಿ ನೇರ ಬಂಡವಾಳ ಹೂಡಿಕೆ’ ( Foreign Direct Investment- FDI) ಎನ್ನಲಾಗುತ್ತದೆ. ಇದು ೯೦ರ ದಶಕದಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ವಿತ್ತ ಸಚಿವ ಮನಮೋಹನ್ ಸಿಂಗ್‌ರ ಆರ್ಥಿಕ ಸುಧಾರಣೆ-ಉದಾರೀಕರಣ -ಜಾಗತೀಕರಣ ನೀತಿಯ ದಿನಗಳಿಂದ ಆರಂಭವಾಗಿ ಮುಂಚೂ ಣಿಗೆ ಬಂದಿರುವಂಥದ್ದು. ಉದಾರೀಕರಣದ ಫಲವಾಗಿ ಸರಕಾರವು ‘ಎಫ್‌ ಡಿಐ’ ಮೇಲಿನ ಗರಿಷ್ಠ ಮಿತಿಯನ್ನು ಸಡಿಲಿಸಿದ್ದು, ಕೆಲವು ವಲಯಗಳಲ್ಲಿ (ರೇಲ್ವೇ ಮತ್ತು ಫಾರ್ಮಾ) ಶೇ.100 ರಷ್ಟು ವಿದೇಶಿ ಹೂಡಿಕೆಗೆ ಅನುಮತಿಸಿದ್ದರೆ, ಮತ್ತೆ ಕೆಲ ವಲಯಗಳಲ್ಲಿ ಶೇ.೨೬ರಿಂದ ಶೇ.೪೯ರವರೆಗೆ ‘ಆಟೋಮ್ಯಾಟಿಕ್ ರೂಟ್’ನಲ್ಲಿ ಮತ್ತು ಹೆಚ್ಚಿನ ಹೂಡಿಕೆ ಮಿತಿಯನ್ನು ಸರಕಾರದ ಅನುಮತಿಯೊಂದಿಗೆ ಪಡೆಯಬಹುದಾಗಿದೆ.

ಮುದ್ರಣ ಮಾಧ್ಯಮದಲ್ಲಿ ಇದು ಶೇ.೨೬ರವರೆಗೆ ಇದೆ. ಸದ್ಯದ ಪರಿಸ್ಥಿತಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸದ್ಯ ‘ಎಫ್‌ ಡಿಐ’ ಪ್ರಮಾಣ ಶೇ.೨೦ಕ್ಕೆ ಸೀಮಿತವಾಗಿದೆ. ಈ ಮಿತಿಯನ್ನು ಶೇ.೪೯ಕ್ಕೆ ಏರಿಸಲು ಸರಕಾರ ಮುಂದಾಗಿದೆ. ಈ ಮಿತಿಯು ಖಾಸಗಿ ಬ್ಯಾಂಕುಗಳಲ್ಲಿ ಶೇ.೪೯ ರಷ್ಟು ಇದ್ದು, ಅವು ಸರಕಾರದ ಅನುಮತಿಯೊಂದಿಗೆ ಈ ಮಿತಿಯನ್ನು ಶೇ.೭೪ರವರೆಗೂ ಏರಿಸಬಹುದಾಗಿದೆ.

ಆದರೆ,ಸದ್ಯ ಖಾಸಗಿ ಬ್ಯಾಂಕುಗಳು ಈ ನಿಟ್ಟಿನಲ್ಲಿ ದಿಢೀರ್ ಎಂದು ಹೆಜ್ಜೆಯಿಡದೆ ತಮ್ಮ ಮಿತಿಯಲ್ಲೇ ವ್ಯವಹಾರವನ್ನು ನಡೆಸುತ್ತಿದ್ದು ‘ಕಾದು ನೋಡುವ ಮಾರ್ಗವನ್ನು’ ಅನು ಸರಿಸುತ್ತಿವೆ. ಬ್ಯಾಂಕು ಗಳು ಸರಕಾರಿ ಸ್ವಾಮ್ಯದ್ದೇ ಆಗಿರಲಿ, ಖಾಸಗಿಯವೇ ಆಗಿರಲಿ, ಒಟ್ಟು ಬಂಡವಾಳದಲ್ಲಿ ಕನಿಷ್ಠ ಶೇ.೨೬ರಷ್ಟು ಹೂಡಿಕೆಯು ನಿವಾಸಿ ಭಾರತೀಯರದ್ದಾಗಿರಬೇಕು ಎನ್ನುವ ಕಟ್ಟಳೆಯಿದೆ; ಬ್ಯಾಂಕುಗಳು ಈ ಲಕ್ಷ್ಮಣ ರೇಖೆಯನ್ನು ದಾಟಲಾರವು.

ಬ್ಯಾಂಕುಗಳ ವಿಲೀನದ ವಿಚಾರದಲ್ಲಿ, ದೊಡ್ಡ ಬಂಡವಾಳ ಹೊಂದಿರುವ, ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ದೊಡ್ಡ ಬ್ಯಾಂಕುಗಳು ಇರಬೇಕು, ಕೈಗಾರಿಕೋದ್ಯಮಿಗಳಿಗೆ ವ್ಯಾಪಕ ವಾಗಿ ಸ್ವಶಕ್ತಿಯ ಮೇಲೆ ಸಾಲದ ನೆರವು ನೀಡುವಂತಿರಬೇಕು ಎನ್ನುವುದು ಉದ್ದೇಶವಾಗಿದೆ; ಇದರ ಮುಂದಿನ ಹಂತವಾಗಿದೆ ಬ್ಯಾಂಕುಗಳಲ್ಲಿನ ‘ಎಫ್‌ ಡಿಐ’ ಎನ್ನಲಾಗುತ್ತದೆ.

ಸರಕಾರಿ ಬ್ಯಾಂಕುಗಳಲ್ಲಿ ಸಾಲದ ಬೇಡಿಕೆಯನ್ನು ನೀಗಿಸುವಷ್ಟು ಬಂಡವಾಳ ಇಲ್ಲದಿ ರುವುದರಿಂದ, ದೊಡ್ಡ ಮಟ್ಟದ ಸಾಲಗಳ ನೀಡಿಕೆಗೆ ಬೇಕಾಗುವ ಈ ಬಂಡವಾಳಕ್ಕಾಗಿ ಅವು ಕೇಂದ್ರ ಸರಕಾರದತ್ತಲೇ ಸದಾ ನೋಡುತ್ತಿರುತ್ತವೆ. ಹಾಗಂತ, ಬ್ಯಾಂಕುಗಳು ಕೇಳಿದಾಗೆಲ್ಲಾ ಬಂಡವಾಳ ನೀಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಂತೆಯೇ ಸರಕಾರವು ಬ್ಯಾಂಕು ಗಳಲ್ಲಿ ‘ಎಫ್‌ ಡಿಐ’ಗೆ ಇರುವ ಶೇ.೨೦ರ ಮಿತಿಯನ್ನು ಸಡಿಲಿಸಿ ಶೇ.49ರವರೆಗೆ ಹೂಡಿಕೆಗೆ ಚಿಂತನೆ ನಡೆಸುತ್ತಿದೆ. ಈ ಮೂಲಕ ಹೆಚ್ಚಿನ ಬಂಡವಾಳಕ್ಕಾಗಿ ಬ್ಯಾಂಕುಗಳು ಸರಕಾರದ ಕದ ತಟ್ಟುವುದು ನಿಲ್ಲುತ್ತದೆ ಮತ್ತು ಅವು ತಮ್ಮ ಸಾಲದ ಪೋರ್ಟ್ ಫೋಲಿಯೋವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಸರಕಾರದ ಚಿಂತನೆಯ ಸಾರ.

ವಿದೇಶಿ ಹೂಡಿಕೆಗಳು ಬರುವಾಗ ಜತೆಯಲ್ಲಿ ಅವುಗಳ ಉನ್ನತ ತಂತ್ರಜ್ಞಾನ, ಕೌಶಲ, ಕಾರ್ಯವೈಖರಿ ಕೂಡ ಬರುವುದು ತೀರಾ ಸಾಮಾನ್ಯವಾಗಿದ್ದು, ಭಾರತೀಯ ಬ್ಯಾಂಕುಗಳು ಅವನ್ನು ಬಳಸಿಕೊಂಡು ತಮ್ಮ ಕಾರ್ಯಕ್ಷಮತೆಯನ್ನು ಇನ್ನೂ ಹೆಚ್ಚಿಸಿಕೊಳ್ಳಬಹುದು ಎನ್ನಲಾಗುತ್ತದೆ.

ಆದರೆ, ವಿದೇಶಿ ಹೂಡಿಕೆದಾರರು ಕೇವಲ ಹೂಡಿಕೆ ಮಾಡಿ, ಬ್ಯಾಂಕುಗಳ ದಿನನಿತ್ಯದ ವಹಿವಾಟಿನ ಏರಿಳಿತಗಳನ್ನು, ಲಾಭ-ನಷ್ಟಗಳನ್ನು ಮಾತ್ರ ನೋಡದೆ, ಆಡಳಿತದಲ್ಲೂ ಕೈಹಾಕುವ ಸಾಧ್ಯತೆ ಇರುತ್ತದೆ; ಹೀಗಾಗಿ ಬ್ಯಾಂಕುಗಳು ಕಾಲಕ್ರಮೇಣ ತಮ್ಮ ಸ್ವಂತಿಕೆ ಯನ್ನು ಕಳೆದುಕೊಳ್ಳುವ ಭಯವನ್ನು ತಳ್ಳಿಹಾಕಲಾಗದು.

ಹಾಗೊಮ್ಮೆ ಆದಲ್ಲಿ, ನಮ್ಮ ಬ್ಯಾಂಕುಗಳು ಭಾರತೀಯ ಬ್ಯಾಂಕುಗಳಾಗೇ ಉಳಿಯ ಬಹುದೇ? ಈವರೆಗೆ ಅವು ನಡೆಸಿಕೊಂಡು ಬಂದಿರುವ ಸರಕಾರದ ಹಲವಾರು ಜನಹಿತ ಕಾರ್ಯಕ್ರಮಗಳು ಮುಂದುವರಿಯಬಹುದೇ? ಎಂಬ ಜಿಜ್ಞಾಸೆಗಳೂ ಕೇಳಿ ಬರುತ್ತಿವೆ.

ಹಿಡುವಳಿಯ ಸಿಂಹಪಾಲು ಸರಕಾರದ ಕೈಯಲ್ಲಿದ್ದರೂ, ಶೇ.49ರಷ್ಟು ಹೂಡಿಕೆ ಮಾಡಿ ದವರು ಅಡಚಣೆ ಉಂಟುಮಾಡುವುದನ್ನು ತಡೆಯಲಾಗದು. ಕೆಲವು ಕಟ್ಟಳೆ ಮತ್ತು ನಿಬಂಧನೆಗಳಿಲ್ಲದೆ ಬ್ಯಾಂಕುಗಳಲ್ಲಿನ ವಿದೇಶಿ ಹೂಡಿಕೆಗೆ ಆಸ್ಪದ ನೀಡುವ ಸಾಧ್ಯತೆ ಕಡಿಮೆ; ಆದರೂ ಬ್ಯಾಂಕುಗಳ ಓಟಕ್ಕೆ ಒಂದಿಷ್ಟು ಅಡೆತಡೆ ಒದಗುವ ಸಾಧ್ಯತೆಯಂತೂ ಇದೆ.

ಬ್ಯಾಂಕುಗಳಿಂದ ಗ್ರಾಹಕರಿಗೆ ನೀಡಲ್ಪಟ್ಟ ಸಾಲವು ಸಮಯ ಪರಿಮಿತಿಯೊಳಗೆ ಸಂಪೂರ್ಣ ವಾಗಿ ಮರುಪಾವತಿಯಾದರೆ, ಅವಕ್ಕೆ ಫಂಡ್ಸ್ ಸಮಸ್ಯೆಯಾಗುವುದಿಲ್ಲ ಮತ್ತು ಬಂಡವಾಳದ ಬಗ್ಗೆ ಚಿಂತಿಸಬೇಕಾಗಿ ಬರುವುದಿಲ್ಲ. ಹೆಚ್ಚಿನ ಸಾಲವನ್ನು ನೀಡಲೆಂದು ರಿಸರ್ವ್ ಬ್ಯಾಂಕ್‌ನಿಂದ ಫಂಡ್ಸ್ ಕೇಳಲು ಕೆಲವು ಕಟ್ಟಳೆಗಳಿವೆ. ದುರ್ದೈವದಿಂದಾಗಿ ಸಾಲ ವಸೂಲಾತಿ ನಿರೀಕ್ಷೆಯಷ್ಟು ಇರದೆ, ಅನುತ್ಪಾದಕ ಆಸ್ತಿಯ ಪ್ರಮಾಣವು ಏರಿ ಲಾಭವನ್ನು ಕಬಳಿಸುವುದರಿಂದ, ಬ್ಯಾಂಕುಗಳ ಲಾಭದ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.

ಗಳಿಸಿದ ಲಾಭದಲ್ಲಿ ಬಹುಪಾಲನ್ನು ಅನುತ್ಪಾದಕ ಸಾಲಕ್ಕೆ ಪ್ರಾವಿಷನ್ ಮಾಡಬೇಕಾಗು ತ್ತದೆ. ಕೆಲ ವರದಿಗಳ ಪ್ರಕಾರ, ಬ್ಯಾಂಕಿಂಗ್ ಉದ್ಯಮದಲ್ಲಿ 2014-24ರ ಅವಧಿಯಲ್ಲಿ ೧೬.೬೬ ಲಕ್ಷ ಕೋಟಿ ರುಪಾಯಿ ಸಾಲವನ್ನು ರೈಟ್ ಆಫ್ ಮಾಡಲಾಗಿದೆ ಮತ್ತು ೨೪.೯೫ ಲಕ್ಷ ಕೋಟಿ ರು. ಸಾಲವನ್ನು‌ ಮನ್ನಾ ಮಾಡಲಾಗಿದೆ.

ಕೆಲವು ಆರ್ಥಿಕ ತಜ್ಞರ ಪ್ರಕಾರ, ಈ ಅನುತ್ಪಾದಕ ಸಾಲಗಳಲ್ಲಿ ಕನಿಷ್ಠ ಶೇ.೫೦ರಷ್ಟು ವಸೂಲಾದರೂ ಬಂಡವಾಳಕ್ಕಾಗಿ ಬ್ಯಾಂಕುಗಳು ಹಾತೊರೆಯುವ ಅಗತ್ಯವಿರುವುದಿಲ್ಲ. ‘ವಿದೇಶಿ ಕೂಡಿಕೆಯನ್ನು ಸ್ವೀಕರಿಸಿ ನಮ್ಮತನವನ್ನು ಕಳೆದುಕೊಳ್ಳುವುದಕ್ಕಿಂತ, ಬ್ಯಾಂಕಿನ ಲ್ಲಿ ಸಾಲ ವಸೂಲಿ ಪ್ರಕ್ರಿಯೆಯನ್ನು ಚುರುಕುಗೊಳಿಸಬಾರದೇ?’ ಎಂದು ಕೆಲವು ಆರ್ಥಿಕ ತಜ್ಞರು ಸಲಹೆ ನೀಡುತ್ತಿದ್ದಾರೆ.

‘ಈ ಹೂಡಿಕೆ ಪರಿಕಲ್ಪನೆಯಲ್ಲಿ, ನಮ್ಮ ದೇಶದ ಹಣವೇ ವಿದೇಶಕ್ಕೆ ಹೋಗಿ ‘ಎಫ್‌ ಡಿಐ’ ಹೆಸರಿನಲ್ಲಿ ಮರಳಬಹುದು, ಇದು ಆತ್ಮನಿರ್ಭರತೆಗೆ ಮಾಡಿದ ದ್ರೋಹವಾಗುತ್ತದೆ’ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ‘ಎಫ್‌ ಡಿಐ’ ಪೂರ್ಣ ವಾಗಿ ರೂಪುಗೊಳ್ಳುವ ಮೊದಲೇ, ಕೆಲವು ಖಾಸಗಿ ಬ್ಯಾಂಕುಗಳಲ್ಲಿ ಇಂಥ ಹೂಡಿಕೆ ಮತ್ತು ವಿಲೀನಗಳನ್ನು ಕಾಣಬಹುದಾಗಿದೆ. ಆರ್ ಬಿಎಲ್ ಬ್ಯಾಂಕಿನಲ್ಲಿ ದುಬೈನ ಎನ್‌ಬಿಡಿ ೩ ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

ಲಕ್ಷ್ಮೀವಿಲಾಸ ಬ್ಯಾಂಕನ್ನು ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕು ವಿಲೀನ ಮಾಡಿ ಕೊಂಡಿದ್ದು ಹಳೆಯ ಸುದ್ದಿ. ಇನ್ನು, ದಕ್ಷಿಣ ಭಾರತದ ಮತ್ತೊಂದು ಖಾಸಗಿ ಬ್ಯಾಂಕ್ ‘ಕೆಥೋಲಿಕ್ ಸಿರಿಯನ್ ಬ್ಯಾಂಕ್’ನಲ್ಲಿ ಕೆನಡಾ ಮೂಲದ ‘ಫೇರ್ ಫಾಕ್ಸ್’ ಶೇ.೫೧ರಷ್ಟು ಷೇರು ಖರೀದಿಸಿ, ಬ್ಯಾಂಕ್‌ನ ಹೆಸರನ್ನು ‘ಸಿಎಸ್‌ಬಿ ಬ್ಯಾಂಕ್’ ಎಂದು ಬದಲಿಸಿದೆ.

ಪ್ರಸ್ತುತ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ‘ಎಫ್‌ ಡಿಐ’ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಸರಕಾರವು ಬ್ಯಾಂಕುಗಳಲ್ಲಿನ ‘ಎಫ್ಡಿಐ’ ಪ್ರಮಾಣಕ್ಕೆ ಶೇ.೪೯ರವರೆಗೆ ಅನುಮತಿ ನೀಡಿದರೆ ಹೂಡಿಕೆಯ ಪ್ರವಾಹ‌ ಹರಿದು ಬರುವುದರಲ್ಲಿ ಸಂಶಯವಿಲ್ಲ.

ಕೆಲವು ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ, ದೇಶದ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಶುಭ್ರವಾಗಿದೆ; ಅನುತ್ಪಾದಕ ಆಸ್ತಿಗಳು ನಿಯಂತ್ರಣದಲ್ಲಿದ್ದು ಕೆಟ್ಟ ಸಾಲ ಗಳನ್ನು ಹತೋಟಿಗೆ ತೆಗೆದುಕೊಂಡು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ವಿದೇಶಿ ಬ್ಯಾಂಕುಗಳನ್ನು ಮೀರಿಸುವಷ್ಟು ಡಿಜಿಟಲೈಸೇಷನ್, ಗಣಕೀಕರಣವನ್ನು ಇಲ್ಲಿ ಕಾಣಬಹು ದಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಸಿಬ್ಬಂದಿಗಳ ಸಂಖ್ಯೆ ಇರುವುದನ್ನು ಮತ್ತು ಈ ಬ್ಯಾಂಕುಗಳು ಲಾಭದಲ್ಲಿರುವುದನ್ನು ಕಾಣಬಹುದಾಗಿದೆ.

ಸುಮಾರು 10000 ಜನಸಂಖ್ಯೆಗೆ ಒಂದು ಶಾಖೆ, ವ್ಯವಹಾರಗಳ ಮೇಲೆ ಸರಕಾರದ ಮತ್ತು ರಿಸರ್ವ್ ಬ್ಯಾಂಕ್‌ನ ಬಿಗಿಯಾದ ನಿಯಂತ್ರಣ ಇವು ವಿದೇಶಿ ನೇರ ಹೂಡಿಕೆದಾರರನ್ನು ಆಕರ್ಷಿಸಲು ಬೇಕಾದ ಪ್ಲಸ್ ಪಾಯಿಂಟ್‌ಗಳು ಅಥವಾ ‘ರೆಡ್ ಕಾರ್ಪೆಟ್’ಗಳಾಗಿವೆ.

ಬದಲಾವಣೆ ಜಗದ ನಿಯಮ; ಅದು ಹರಿಯುವ ನೀರಿನಂತೆ ಬದಲಾಗುತ್ತಿರುತ್ತದೆ. ‘ಬದಲಾಗು, ಇಲ್ಲದಿದ್ದರೆ ನಾಶವಾಗು’ ಎನ್ನುವುದು ರೂಢಿಯಲ್ಲಿರುವ ಮಾತು. ಅದರನ್ವಯ, ಬ್ಯಾಂಕಿಂಗ್ ಉದ್ಯಮದಲ್ಲಿ ಆಗಿರುವ ಮತ್ತು ಆಗುತ್ತಿರುವ ಬದಲಾವಣೆ ಗಮನಾರ್ಹವಾದುದು. 1770ರಲ್ಲಿ ‘ಬ್ಯಾಂಕ್ ಆಫ್ ಹಿಂದೂಸ್ತಾನ್’ನ ಆರಂಭದೊಂದಿಗೆ ಬ್ಯಾಂಕಿಂಗ್‌ ಉದ್ಯಮವು ಭಾರತದಲ್ಲಿ ಕಾಲಿರಿಸಿದ್ದು, ಇಂದು 1.65 ಲಕ್ಷ ಶಾಖೆಗಳು, ೨೨೯.೯೦ ಲಕ್ಷ ಕೋಟಿ ರು. ಠೇವಣಿ, ೧೬.೪೫ ಲಕ್ಷ ಉದ್ಯೋಗಿಗಳೊಂದಿಗೆ ದೇಶದಲ್ಲಿ ‘ಐಟಿ’ ನಂತರದ ದೊಡ್ಡ ಉದ್ಯೋಗದಾತ ಎಂಬ ಹೆಸರನ್ನು ಪಡೆದಿದೆ.

ತನ್ನ 300 ವರ್ಷಗಳ ಇತಿಹಾಸದಲ್ಲಿ ಬ್ಯಾಂಕಿಂಗ್ ಉದ್ಯಮವು ಸಮಯಕ್ಕೆ ತಕ್ಕಂತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ತನ್ನ ನೀತಿ- ನಿಯಮ ಮತ್ತು ಕಾರ್ಯವೈಖರಿಯಲ್ಲಿ ಬದಲಾವಣೆಗಳನ್ನು ಮೈಗೂಡಿಸಿಕೊಂಡು, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ.

ತ್ವರಿತ ಸೇವೆಗಾಗಿ ಬ್ಯಾಂಕ್ ಚಟುವಟಿಕೆಗಳ ಗಣಕೀಕರಣ, ಕೋರ್ ಬ್ಯಾಂಕಿಂಗ್, ಡಿಜಿಟಲ್ ಬ್ಯಾಂಕಿಂಗ್ ಹೀಗೆ ವೈವಿಧ್ಯಮಯ ಉಪಕ್ರಮಗಳಿಗೆ ಒಡ್ಡಿಕೊಂಡಿದೆ. ಅಂತೆಯೇ, ಬದಲಾ ವಣೆಯ ಸಂಪುಟಕ್ಕೆ ಹೊಸ ಅಧ್ಯಾಯವೆಂಬಂತೆ ಈಗ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯ ಹೆಚ್ಚಳಕ್ಕೂ ಈ ಉದ್ಯಮವು ಸಾಕ್ಷಿಯಾಗಲಿರುವುದು ಗಮನಾರ್ಹ ಬೆಳವಣಿಗೆಯೇ ಸರಿ...

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)