ಒಂದೊಳ್ಳೆ ಮಾತು
rgururaj628@gmail.com
ಸ್ವಾಮಿ ವಿವೇಕಾನಂದರು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡುವ ಸಂದರ್ಭದಲ್ಲಿ, ರಾಜಸ್ಥಾನ ದಲ್ಲಿರುವ ಅಲ್ವಾರ್ ರಾಜ್ಯಕ್ಕೆ ಬಂದರು. ಅಲ್ಲಿ ಅವರನ್ನು ರಾಜ ಮಂಗಲ್ ಸಿಂಗ್ ಸ್ವಾಗತ ಮಾಡಿದ. ರಾಜ ಮಂಗಲ್ ಸಿಂಗ್ ಸ್ವಾಮಿ ವಿವೇಕಾನಂದರ ಜೊತೆ ದೇವರು, ಧರ್ಮ, ನಂಬಿಕೆಗಳ ಬಗ್ಗೆ ಮಾತಾಡುವಾಗ ವಿಗ್ರಹಗಳನ್ನು ಪೂಜಿಸುವುದು ಸರಿಯಾದ ಅಭ್ಯಾಸ ಎನ್ನಿಸುವುದಿಲ್ಲ ಹಾಗು ಅವಗಳನ್ನೂ ನಾನು ನಂಬುವುದಿಲ್ಲ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ.
ಮೂಲತ: ರಾಜನು ದೇವರು ನಿರಾಕಾರ ಎಂದು ನಂಬುವವನಾಗಿದ್ದು ವಿಗ್ರಹ ಪೂಜೆಯನ್ನು ನಂಬುತ್ತಿರಲಿಲ್ಲ. ಹೀಗಾಗಿ ತನ್ನ ಅಭಿಪ್ರಾಯವನ್ನು ನಿಸ್ಸಂಕೋಚವಾಗಿ ಸ್ವಾಮಿ ವಿವೇಕಾನಂದರ ಮುಂದೆ ಹೇಳಿದ. ಇದಕ್ಕೆ ವಿವೇಕಾನಂದರು ಹೆಚ್ಚು ಪ್ರತಿಕ್ರಿಯೆಸದೆ ಮುಗುಳ್ನಕ್ಕು ಸುಮ್ಮನಾದರು. ಆದರೆ ಅವರ ಮನಸ್ಸಿನಲ್ಲಿ ಒಂದು ವಿಚಾರ ಓಡುತ್ತಿತ್ತು.
ನಮ್ಮ ಸನಾತನ ಭಾರತೀಯ ಪದ್ಧತಿಯಿಂದ ನಡೆದುಕೊಂಡು ಬಂದಂತಹ ವಿಗ್ರಹ ಪೂಜೆಯಲ್ಲಿ ಯಾವ ತಪ್ಪೂ ಇಲ್ಲ. ಇದು ಹಲವಾರು ಶತಮಾನಗಳ ನಂಬಿಕೆ ಮತ್ತು ಅದಕ್ಕೆ ಅದರದ್ದೇ ಆದ ಅರ್ಥವಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಆ ರಾಜನಿಗೆ ಹೇಗೆ ತಿಳಿಸುವುದು ಎಂದು ಯೋಚಿಸಿದರು. ರಾಜ ತನ್ನ ಅರಮನೆಯನ್ನು ಅವರಿಗೆ ಬಹಳ ಹೆಮ್ಮೆಯಿಂದ ತೋರಿಸುವಾಗ ಸ್ವಾಮಿ ವಿವೇಕಾನಂದರು ಅಲ್ಲೇ ಇದ್ದ ದಿವಾನರನ್ನು ಕರೆದು, ವಿಚಿತ್ರವಾದ ಒಂದು ಮಾತನ್ನು ಹೇಳಿದರು.
ಇದನ್ನೂ ಓದಿ: Roopa Gururaj Column: ದೈವತ್ವದ ಅಭಾವವೇ ದೆವ್ವಗಳ ನೆಲೆ, ಬೆಳಕಿನ ಅಭಾವವೇ ಕತ್ತಲೆ
“ದಯವಿಟ್ಟು ಅಲ್ಲಿ ನೇತಾಡುತ್ತಿರುವ ರಾಜನ ತಂದೆಯ ಚಿತ್ರದ ಮೇಲೆ ಉಗುಳಿವಿರಾ?" ಎಂದು ಹೇಳಿ ರಾಜ ಮಂಗಲ್ ಸಿಂಗ್ ನ ತಂದೆಯ ಛಾಯಾಚಿತ್ರದ ಕಡೆ ಕೈ ತೋರಿಸಿ ಮನವಿ ಮಾಡಿದರು. ಅಲ್ಲಿ ಅವರ ಜೊತೆ ನಡೆದು ಬರುತ್ತಿದ್ದವರಿಗೆಲ್ಲಾ ಬೆವರು ಇಳಿಯಲು ಪ್ರಾರಂಭಿಸಿತು.
ರಾಜನಿಗಂತೂ ನಖ ಶಿಖಾಂತ ಸಿಟ್ಟು. ಇವರು ಏನನ್ನು ಮಾತನಾಡುತ್ತಿದ್ದಾರೆ ಎಂದು ತಿಳಿದಿದೆಯೇ? ಬೇರೆಯವರಾಗಿದ್ದರೆ ಇದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮನದಲ್ಲೇ ಕೋಪವನ್ನು ನಿಗ್ರಹಿಸಿಕೊಳ್ಳುತ್ತಾ ನಿಂತಿದ್ದರು. ದಿವಾನರಿಗೆ ನಿಂತ ನೆಲವೇ ಬಾಯಿ ಬಿಟ್ಟಂತಾ ಯಿತು.
ವಿವೇಕಾನಂದರ ಬಗ್ಗೆ ಗೌರವ, ಅನ್ನ ಹಾಕಿದ ರಾಜನ ಬಗ್ಗೆ ಅತಿಯಾದ ನಿಷ್ಠೆ ಜೊತೆಗೆ ಅಲ್ಲಿಯ ರಾಜನ ಪಠಕ್ಕೆ ಹಾಗೆ ಮಾಡಲು ಸಾಧ್ಯವೇ? ಇವರು ಹೀಗೇಕೆ ಹೇಳುತ್ತಿದ್ದಾರೆ ಎಂದು ಗೊಂದಲ, ಭಯ. ಕೈಮುಗಿದು ನಾನು ಇದನ್ನ ಮಾಡಲಾರೆ ಎಂದು ಹೇಳಿದರು.
ಆಗ ಸ್ವಾಮಿ ವಿವೇಕಾನಂದರು ರಾಜರ ಕಡೆ ತಿರುಗಿ ನೋಡಿ, “ಆ ಚಿತ್ರವು ನಿಮ್ಮ ತಂದೆಯದಾಗಿ ದ್ದರೂ ಅದು ಕೇವಲ ಚಿತ್ರ ಹಾಗು ನಿಜವಾದ ತಂದೆಯಲ್ಲ. ಆದರೂ ದಿವಾನರು ಅದರ ಮೇಲೆ ಉಗುಳುವುದಕ್ಕೆ ಹಿಂಜರಿದರು ಏಕೆಂದರೆ ಆ ಚಿತ್ರ ನಿಮ್ಮ ತಂದೆಯನ್ನು ನೆನಪಿಸುವಂತೆಯೇ, ಅವರ ಮೇಲಿನ ಗೌರವವನ್ನು ನೆನಪಿಸುತ್ತದೆ. ಅದೇ ರೀತಿ ದೇವರ ಚಿತ್ರಗಳು, ವಿಗ್ರಹಗಳು ನಮಗೆ ದೇವರನ್ನು ನೆನಪಿಸುತ್ತವೆ ಹಾಗೂ ದೇವರ ಆದರ್ಶ ಮತ್ತು ಗುಣಗಳನ್ನು ನಾವು ಅವುಗಳ ಮೂಲಕ ಆರಾಧಿಸುತ್ತೇವೆ ಎಂದು ನಗುತ್ತಾ ನುಡಿದರು.
ರಾಜ ಮಂಗಲ್ ಸಿಂಗ್ ಕಣ್ಣೆದುರೇ ನಡೆದ ಘಟನೆಯಿಂದ ವಿಗ್ರಹ ಪೂಜೆಯಲ್ಲಿ ತಪ್ಪಿಲ್ಲ ಎಂದು ಅರಿವಾಯಿತು. ತನಗೆ ಸಮ್ಮತ ವಾಗುವಂತೆ ವಿಷಯ ತಿಳಿಸಲು ಅವರು ಈ ರೀತಿ ಮಾಡಿದ್ದಾರೆ ಎಂದು ಕೂಡ ತಿಳಿಯಿತು. ವಿಗ್ರಹ ಪೂಜೆಯ ಬಗ್ಗೆ ತನಗಿದ್ದ ತಪ್ಪು ತಿಳುವಳಿಕೆಯನ್ನು ಅಂದಿನಿಂದ ರಾಜ ಬದಲಿಸಿಕೊಂಡ.
ಕೆಲವೊಮ್ಮೆ ನಾವು ಕೂಡ ಪಾಶ್ಚಾತ್ಯರನ್ನು ನೋಡಿ, ಅವರಂತೆ ಅಂಧಾನುಕರಣೆ ಮಾಡುತ್ತಾ ನಮ್ಮ ಸಂಸ್ಕೃತಿ ಸಂಸ್ಕಾರವನ್ನೇ ಮರೆತು ಬಿಡುತ್ತೇವೆ. ನಮ್ಮ ಸನಾತನ ಭಾರತೀಯ ಸಂಸ್ಕೃತಿ ಯಲ್ಲಿ ಪ್ರತಿಯೊಂದು ಆಚರಣೆಗೂ ತನ್ನದೇ ಆದ ಅರ್ಥ ಮತ್ತು ಮಹತ್ವವಿದೆ. ನಮಗೆ ತಿಳಿದಿರ ದಿದ್ದರೆ ಅದಕ್ಕೆ ಬೆಲೆ ಇಲ್ಲ ಎಂದಲ್ಲ. ಮೊದಲು ನಾವು ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಸುತ್ತಲಿನ ವಿಷಯಗಳು ನಮಗೆ ಹೆಚ್ಚು ಅರ್ಥವಾಗುತ್ತದೆ.