ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ದೈವತ್ವದ ಅಭಾವವೇ ದೆವ್ವಗಳ ನೆಲೆ, ಬೆಳಕಿನ ಅಭಾವವೇ ಕತ್ತಲೆ

ಕತ್ತಲ ಸಾಮ್ರಾಜ್ಯದಲ್ಲಿ ನಕಾರಾತ್ಮಕ ಆಲೋಚನೆಗಳು, ಖಿನ್ನತೆ, ಅಪನಂಬಿಕೆ, ಅನುಮಾನ ಇವೆಲ್ಲವುಗಳ ಜನನ. ಇದರಿಂದ ಹೊರ ಬರಲು ಬೆಳಕಿನೆಡೆಗೆ ನಾವು ಮುಖ ಮಾಡಲೇಬೇಕು. ಬೆಳಕು ಭಗವಂತನ ರೂಪದಲ್ಲಿ ಕೈ ಹಿಡಿದು ನಮ್ಮನ್ನು ಒಳಿತಿ ನಡೆಗೆ ನಡೆಸುವ ಸಾಮರ್ಥ್ಯವಿರುವ ಶಕ್ತಿ. ಆದ್ದರಿಂದಲೇ ದೇವಸ್ಥಾನಗಳು, ಮಠ ಮಂದಿರಗಳು ಮನುಷ್ಯರ ಮನಸ್ಸಿಗೆ ಸಾಂತ್ವನ ನೀಡಲು ಇರುವ ಅದ್ಭುತವಾದ ತಾಣಗಳು. ದೇವರಲ್ಲಿ ನನ್ನ ನಂಬಿಕೆ, ಸಮರ್ಪಣಾ ಭಾವ, ಮತ್ತು ಶ್ರದ್ಧೆ ಎಂದಿಗೂ ನಮ್ಮನ್ನು ತಪ್ಪು ದಾರಿಯಲ್ಲಿ ಅಥವಾ ಕೆಟ್ಟ ದಾರಿಯಲ್ಲಿ ನಡೆಸಲು ಸಾಧ್ಯವಿಲ್ಲ.

ದೈವತ್ವದ ಅಭಾವವೇ ದೆವ್ವಗಳ ನೆಲೆ, ಬೆಳಕಿನ ಅಭಾವವೇ ಕತ್ತಲೆ

ಒಂದೊಳ್ಳೆ ಮಾತು

rgururaj628@gmail.com

ಒಂದು ಸಲ ಕತ್ತಲೆ ಭಗವಂತನ ಬಳಿಗೆ ಬಂದು, ‘ದೇವಾ ನಾನು ಸೂರ್ಯನಿಗೆ ಯಾವ ಕೆಡುಕನ್ನೂ ಉಂಟು ಮಾಡಿಲ್ಲ. ಆದರೆ ಅವನು ಪ್ರತಿ ದಿನ ಬೆಳಗ್ಗೆ ಬಂದು ನನ್ನನ್ನು ಓಡಿಸುತ್ತಾನೆ ಅವನು ಬಂದ ತಕ್ಷಣ ನಾನು ಓಡಬೇಕು. ಇದ್ಯಾವ ನ್ಯಾಯ? ನಿರಂತರವಾಗಿ ಇದು ನಡೆಯುತ್ತಲೇ ಇದೆ, ನಾನು ಮಾಡಿರುವ ತಪ್ಪಾದರೂ ಏನು? ನೀವಾದರೂ ಸೂರ್ಯನಿಗೆ ಸ್ವಲ್ಪ ಬುದ್ಧಿ ಹೇಳಿ’ ಎಂದು ದೂರು ಹೇಳಿತು.

ಆಗ ದೇವರು ಸೂರ್ಯನ ಬಳಿಗೆ ಬಂದು ‘ಸೂರ್ಯ, ನೀನೇಕೆ ಅನಾವಶ್ಯಕವಾಗಿ ಕತ್ತಲೆಗೆ ತೊಂದರೆ ಕೊಡುತ್ತಿರುವೆ? ನಿರಂತರವಾಗಿ ಅದನ್ನು ಓಡಿಸುವೆಯಲ್ಲಾ ಕತ್ತಲೆ, ನಿನಗೇನು ತೊಂದರೆ ಮಾಡಿತ್ತು?’ ಎಂದು ಕೇಳಿದ. ಆಗ ಸೂರ್ಯನಿಗೆ ಆಶ್ಚರ್ಯವಾಯಿತು! ‘ದೇವಾ ನಾನು ಕತ್ತಲೆ ಎಂಬುದನ್ನು ನೋಡಿಯೇ ಇಲ್ಲವಲ್ಲ.

ಇನ್ನು ತೊಂದರೆ ಕೊಡುವುದು ಎಲ್ಲಿಂದ ಬಂತು? ಬೇಕಾದರೆ ಅವನನ್ನು ಕರೆಸಿ, ಎಲ್ಲವೂ ನಿಮ್ಮ ಮುಂದೆಯೇ ನಿರ್ಣಯವಾಗಲಿ’ ಎಂದ ಸೂರ್ಯ. ದೇವರ ಮುಂದಿಟ್ಟಿರುವ ಇವರಿಬ್ಬರ ನ್ಯಾಯ ಇನ್ನೂ ಇತ್ಯರ್ಥವಾಗಿಲ್ಲ. ದೇವರು ಇಂದಿಗೂ ಪ್ರಯತ್ನಿಸುತ್ತಲೇ ಇದ್ದಾನೆ, ಆದರೆ ಸೂರ್ಯನ ಮುಂದೆ ಕತ್ತಲು ಎಂದೂ ಬಂದೇ ಇಲ್ಲ. ಅದು ಸಾಧ್ಯವೂ ಇಲ್ಲ.

ಇದನ್ನೂ ಓದಿ: Roopa Gururaj Column: ಭಗವಂತನಿಗೆ ಸಮರ್ಪಿಸಿಕೊಂಡರೆ ಬದುಕು ಸಹನೀಯ

ಸೂರ್ಯನಿದ್ದಲ್ಲಿ ಕತ್ತಲು ಎಂದೂ ಬರುವುದಿಲ್ಲ. ಹಾಗೆಯೇ ದೆವ್ವ, ಭೂತ ಪಿಶಾಚಿಗಳೆಂಬ ದುಷ್ಟ ಶಕ್ತಿಗಳೆಲ್ಲಾ ಕತ್ತಲೆ ಇದ್ದಂತೆ. ಅವು ದೇವರ ಅಭಾವದಲ್ಲಿ ಹುಟ್ಟಿ ಬಿಡುವ ನಕಾರಾತ್ಮಕ ಶಕ್ತಿಗಳು. ಬೆಳಕಿನ ಅಭಾವ ಕತ್ತಲೆ ಹೇಗೋ ಹಾಗೆಯೇ ದೇವರ ಅಭಾವ ದೆವ್ವ ದುಷ್ಟಶಕ್ತಿಗಳು ಎನ್ನುವುದು. ಹೇಗೆ ಬೆಳಕಿದ್ದರೆ ಕತ್ತಲಿಗೆ ಜಾಗವಿಲ್ಲವೋ .. ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆಗಳು, ದೈವದ ಆಚರಣೆಯ ಒಂದು ಶಿಸ್ತು, ಬದುಕಿನಲ್ಲಿ ಸದಾ ಚಟುವಟಿಕೆಯಿಂದ ಇರುವ ಜೀವನ ಶೈಲಿ ಇದ್ದಾಗ ಅಲ್ಲಿ ಖಿನ್ನತೆಗೆ ಜಾಗವಿರುವುದಿಲ್ಲ.

ಪರಮಾತ್ಮ ಎನ್ನುವ ಆಲೋಚನೆಯೇ ನಮ್ಮೊಳಗೊಂದು ಸಕಾರಾತ್ಮಕ ಭರವಸೆಯನ್ನು, ಆಚಾರ ವಿಚಾರಗಳೆಂಬ ಶಿಸ್ತನ್ನು ನಮಗೆ ನೀಡುತ್ತದೆ. ಭಗವಂತನಲ್ಲಿ ಅಪರಿಮಿತವಾದ ನಂಬಿಕೆ ಮತ್ತು ಸಮರ್ಪಣಾ ಭಾವವಿದ್ದಾಗ ಎಲ್ಲವನ್ನೂ ಅವನಿಗೆ ಅರ್ಪಿಸಿ ಕಷ್ಟ ಸುಖ ಎರಡನ್ನು ಕೂಡ ಸಮಚಿತ್ತ ದಿಂದ ಸ್ವೀಕರಿಸುವ ಮನೋಭಾವ ರೂಢಿಯಾಗುತ್ತದೆ. ಏನೇ ಕಷ್ಟ ಎದುರಾದರು ಪ್ರಾರ್ಥನೆಯ ಮೂಲಕ ಅವನಿಗೆ ಅರಿಕೆ ಮಾಡಿ ಬಂದದ್ದನ್ನು ಎದುರಿಸುವ ಮಾನಸಿಕ ಧೈರ್ಯವನ್ನು ಭಗವಂತನ ಪ್ರಾರ್ಥನೆಯಲ್ಲಿ ಪಡೆದುಕೊಳ್ಳುತ್ತೇವೆ.

ಪರಿಸ್ಥಿತಿ ಅದೆಷ್ಟೇ ಕೈ ಮೀರಿದರೂ ಎಲ್ಲವನ್ನು ಮೀರಿದ ದೇವರಿದ್ದಾನೆ, ಅವನಿಗೆ ಸೋಲಿಲ್ಲ ಎನ್ನುವ ಆತ್ಮಸ್ಥೈರ್ಯವಿರುತ್ತದೆ. ಇದೇ ಅಲ್ಲವೇ ನಮ್ಮೊಳಗಿರುವ ಬೆಳಕು. ಮಾನಸಿಕವಾಗಿ ಸದೃಢ ರಾಗಿದ್ದಾಗ ಏನನ್ನಾದರೂ ಸ್ವೀಕರಿಸಿ ನಿಭಾಯಿಸುವ ಶಕ್ತಿ ನಮಗಿರುತ್ತದೆ.

ನಮ್ಮೊಳಗೆ ದೈವತ್ವದ ನೆಲೆ ಇಲ್ಲದಿದ್ದಾಗ ಆತಂಕದ ಪರಿಸ್ಥಿತಿಯಲ್ಲಿ, ಕಷ್ಟಗಳನ್ನು ತೋಡಿ ಕೊಳ್ಳಲು ನಮ್ಮನ್ನು ಸಮರ್ಪಿಸಿಕೊಳ್ಳಲು, ಮಾನಸಿಕವಾಗಿ ಧೈರ್ಯ ತುಂಬಲು ಸಲಹುವ ಶಕ್ತಿಯೇ ಇಲ್ಲದಂತಾಗುತ್ತದೆ. ಯಾರು ಸಲಹಲು ಇಲ್ಲದ ಅನಾಥ ಜೀವದಂತೆ, ಆತ್ಮ ಅನಾಥ ಪ್ರಜ್ಞೆಯಿಂದ ಬಳಲುತ್ತದೆ. ಆಗ ಬೆಳಗ್ಗೆ ಇಲ್ಲದ ಕತ್ತಲಿನಲ್ಲಿ ಸಿಲುಕಿದ ಅನುಭವ.

ಕತ್ತಲ ಸಾಮ್ರಾಜ್ಯದಲ್ಲಿ ನಕಾರಾತ್ಮಕ ಆಲೋಚನೆಗಳು, ಖಿನ್ನತೆ, ಅಪನಂಬಿಕೆ, ಅನುಮಾನ ಇವೆಲ್ಲವುಗಳ ಜನನ. ಇದರಿಂದ ಹೊರ ಬರಲು ಬೆಳಕಿನೆಡೆಗೆ ನಾವು ಮುಖ ಮಾಡಲೇಬೇಕು. ಬೆಳಕು ಭಗವಂತನ ರೂಪದಲ್ಲಿ ಕೈಹಿಡಿದು ನಮ್ಮನ್ನು ಒಳಿತಿ ನಡೆಗೆ ನಡೆಸುವ ಸಾಮರ್ಥ್ಯವಿರುವ ಶಕ್ತಿ.

ಆದ್ದರಿಂದಲೇ ದೇವಸ್ಥಾನಗಳು, ಮಠ ಮಂದಿರಗಳು ಮನುಷ್ಯರ ಮನಸ್ಸಿಗೆ ಸಾಂತ್ವನ ನೀಡಲು ಇರುವ ಅದ್ಭುತವಾದ ತಾಣಗಳು. ದೇವರಲ್ಲಿ ನನ್ನ ನಂಬಿಕೆ, ಸಮರ್ಪಣಾ ಭಾವ, ಮತ್ತು ಶ್ರದ್ಧೆ ಎಂದಿಗೂ ನಮ್ಮನ್ನು ತಪ್ಪು ದಾರಿಯಲ್ಲಿ ಅಥವಾ ಕೆಟ್ಟ ದಾರಿಯಲ್ಲಿ ನಡೆಸಲು ಸಾಧ್ಯವಿಲ್ಲ.

ಹೇಗೆ ಕತ್ತಲೆ ಬೆಳಕು ಜೊತೆಯಾಗಿರಲಾರವೊ ಹಾಗೆಯೇ ದೇವರು ಮತ್ತು ದೆವ್ವ ಭೂತ ದುಷ್ಟ ಶಕ್ತಿಗಳು ಮುಖಾಮುಖಿಯಾಗಲು ಸಾಧ್ಯವಿಲ್ಲ. ಬೆಳಕು ಬಂದೊಡನೆ ಕತ್ತಲು ಇಲ್ಲವಾಗುವಂತೆ, ನಮ್ಮೊಳಗಿನ ದೈವತ್ವದ ಎದುರು ದೆವ್ವ ಭೂತ ಎನ್ನುವ ದುಷ್ಟಶಕ್ತಿಗಳು ಇಲ್ಲವಾಗುವುದು.