Roopa Gururaj Column: ಎಲ್ಲರನ್ನೂ ಯಾವಾಗಲೂ ವಂಚಿಸಲು ಸಾಧ್ಯವಿಲ್ಲ
ಕುರಿಯ ಚರ್ಮವನ್ನು ತೋಳ ಹೊದ್ದುಕೊಂಡಿದ್ದರಿಂದ, ಕುರಿಗಳ ಯಜಮಾನನಿಗೆ ಇದು ತೋಳ ವೆಂದು ಗೊತ್ತಾಗಲಿಲ್ಲ. ತೋಳ ಬಹಳ ಸಂತೋಷದಿಂದ, ರಾತ್ರಿ ಇಡೀ ಕುರಿಗಳನ್ನು ತಿನ್ನಬಹು ದೆಂಬ ಆಸೆಯಿಂದ ಕನಸು ಕಾಣುತ್ತಾ, ಕುರಿಗಳ ಗುಂಪಿನ ಜೊತೆಯಲ್ಲಿ ಹೆಜ್ಜೆ ಹಾಕುತ್ತ, ಕುರಿಗಳ ಕೊಟ್ಟಿಗೆ ಯನ್ನು ಸೇರಿಕೊಂಡಿತು.


ಒಂದೊಳ್ಳೆ ಮಾತು
rgururaj628@gmail.com
ಕಾಡಿನ ದಾರಿಯಲ್ಲಿ ಒಂದು ತೋಳ ಆಹಾರ ಹುಡುಕುತ್ತಾ ನಡೆದು ಹೋಗುತ್ತಿದ್ದಾಗ ಅದಕ್ಕೆ ದಾರಿಯಲ್ಲಿ ಆಶ್ಚರ್ಯವೆನಿಸುವಂತೆ ಕುರಿ ಚರ್ಮವೊಂದು ಹರಿದು ಬಿದ್ದಿರುವುದು ಕಾಣಿಸಿತು. ಅದನ್ನು ನೋಡಿ ಅದಕ್ಕೆ ಒಂದು ಉಪಾಯ ಹೊಳೆಯಿತು. ಅದೇ ಕಾಡಿನ ಒಂದು ತುದಿಯಲ್ಲಿ, ಕುರಿಗಳ ಗುಂಪು ದಿನಾ ಮೇಯಲು ಬರುವುದನ್ನು ಅದು ನೋಡಿತ್ತು, ಆದರೆ ಕುರಿಗಳನ್ನು ಹಿಡಿದು ತಿನ್ನಲು ಅದಕ್ಕೆ ಸಾಧ್ಯವಾಗಿರಲ್ಲಿಲ್ಲ. ಏಕೆಂದರೆ ಕುರಿಗಳನ್ನು ಕಾಯಲು ಬರುತ್ತಿದ್ದ ಅವುಗಳ ಯಜಮಾನ ಬಹಳ ಬಲಶಾಲಿಯಾಗಿದ್ದ. ಅವನ ಕಣ್ಣು ತಪ್ಪಿಸಿ ಕುರಿಯನ್ನು ಹಿಡಿಯುವುದು ಅದಕ್ಕೆ ಬಹಳ ಕಷ್ಟವಾಗಿತ್ತು. ಈಗ ಈ ಕುರಿ ಚರ್ಮವನ್ನು ಹೊದ್ದುಕೊಂಡು, ಅವುಗಳ ಜೊತೆ ಸೇರಿಕೊಂಡರೆ, ತನ್ನ ಕೆಲಸ ಸುಗಮವಾಗಬಹುದೆಂದುಕೊಂಡು, ಕುರಿ ಚರ್ಮವನ್ನು ಹೊದ್ದು ಕೊಂಡು, ಸಂಜೆ ಕುರಿಗಳ ಗುಂಪಿನ ಜೊತೆ ಕೂಡಿಕೊಂಡು ಊರನ್ನು ಸೇರಿಕೊಂಡಿತ್ತು.
ಕುರಿಯ ಚರ್ಮವನ್ನು ತೋಳ ಹೊದ್ದುಕೊಂಡಿದ್ದರಿಂದ, ಕುರಿಗಳ ಯಜಮಾನನಿಗೆ ಇದು ತೋಳ ವೆಂದು ಗೊತ್ತಾಗಲಿಲ್ಲ. ತೋಳ ಬಹಳ ಸಂತೋಷದಿಂದ, ರಾತ್ರಿ ಇಡೀ ಕುರಿಗಳನ್ನು ತಿನ್ನಬಹು ದೆಂಬ ಆಸೆಯಿಂದ ಕನಸು ಕಾಣುತ್ತಾ, ಕುರಿಗಳ ಗುಂಪಿನ ಜೊತೆಯಲ್ಲಿ ಹೆಜ್ಜೆ ಹಾಕುತ್ತ, ಕುರಿಗಳ ಕೊಟ್ಟಿಗೆಯನ್ನು ಸೇರಿಕೊಂಡಿತು.
ಯಜಮಾನನಿಗೆ ಸುಳಿವು ಸಿಗದಂತೆ ಒಂದೆರಡು ದಿನ ಪ್ರತಿ ರಾತ್ರಿ ಒಂದೊಂದೇ ಕುರಿಯನ್ನೇ ಹೊರಗೆ ಎಳೆದುಕೊಂಡು ಹೋಗಿ ತಿನ್ನತೊಡಗಿತು. ಇದರ ಆಟ ಹೆಚ್ಚು ದಿನ ನಡೆಯಲಿಲ್ಲ. ಒಂದು ದಿನ ರಾತ್ರಿ ಯಜಮಾನನ ಮನೆಗೆ ಸ್ವಲ್ಪ ಜನ ನೆಂಟರು ಬಂದರು. ಅವರನ್ನು ಸತ್ಕರಿಸಲು ಊಟಕ್ಕೆ ಕುರಿ ಮಾಂಸದ ಅಡಿಗೆ ಮಾಡಲು ನಿರ್ಧರಿಸಿದ. ಕುರಿಗಳ ಕೊಟ್ಟಿಗೆಗೆ ಬಂದು ಯಾವ ಕುರಿಯನ್ನು ಕಡಿಯಲಿ ಎಂದು ಹುಡುಕತೊಡಗಿದ.
ಇದನ್ನೂ ಓದಿ: Roopa Gururaj Column: ಹಸುವಿನ ಶಾಪಕ್ಕೆ ಈಡಾದ ಮನುಷ್ಯನ ಮಕ್ಕಳು
ಕತ್ತಲೆಯಲ್ಲಿ ಕೊಟ್ಟಿಗೆಗೆ ಬಂದ ಯಜಮಾನನಿಗೆ, ದಷ್ಟ ಪುಷ್ಟವಾಗಿದ್ದ, ತೋಳ, ಚೆನ್ನಾಗಿ ಕೊಬ್ಬಿದ ಕುರಿಯಂತೆ ಕಾಣಿಸಿತು. ರುಚಿಕರ ಭೋಜನಕ್ಕೆ ಇದು ಯೋಗ್ಯವಾಗಿದೆ ಎಂದುಕೊಂಡು, ಕತ್ತಿಯಿಂದ ಒಂದೇ ಏಟಿಗೆ ಹೊಡೆದು ಅದರ ದೇಹದಿಂದ ತಲೆಯನ್ನು ತುಂಡು ಮಾಡಿದ. ಮೋಸದಿಂದ ಕುರಿಗಳನ್ನು ತಿನ್ನಲೆಂದು ಬಂದ ತೋಳ ತಾನೇ ಬಲಿಯಾಯಿತು.
ನಮಗೆ ಸಹಾಯ ಮಾಡುವ ನೆಪದಲ್ಲಿ ಅನೇಕರು ನಮ್ಮ ಜೀವನದಲ್ಲಿ ಈ ತೋಳದ ರೂಪದಲ್ಲೇ ಸೇರಿಕೊಳ್ಳುತ್ತಾರೆ. ಸದಾ ನಮಗೆ ಸಹಾನುಭೂತಿ ತೋರಿಸುತ್ತಾ, ನಮ್ಮ ಒಳಿತಿಗಾಗಿ ಅವರು ಶ್ರಮಿಸು ತ್ತಿದ್ದಾರೆ ಎನ್ನುವ ರೀತಿ ನಟಿಸುತ್ತಿರುತ್ತಾರೆ. ಇಂತಹವರ ಲಕ್ಷಣಗಳು ಸರಾಸರಿ ಒಂದೇ, ನಮಗೆ ಯಾವ ರೀತಿಯ ಹಣ ಸಹಾಯವನ್ನೂ ಮಾಡುವುದಿಲ್ಲ, ಬರಿ ಬಾಯುಪಚಾರದ ಮಾತುಗಳು, ನಿಜವಾದ ಕಷ್ಟ ಎದುರಾದಾಗ ಇವರು ಅಚಾನಕ್ಕಾಗಿ ಮಾಯವಾಗಿರುತ್ತಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಸುಳ್ಳಿನ ಮೇಲೆ ಸುಳ್ಳನ್ನು ಪೋಣಿಸುತ್ತಿರುತ್ತಾರೆ. ನಮ್ಮ ಮನಸ್ಸು ಕೂಡ ಇಂತಹವರ ಬಗ್ಗೆ ನಮಗೆ ಎಚ್ಚರಿಕೆ ಕೊಡುತ್ತಲೇ ಇರುತ್ತದೆ. ಅದನ್ನು ನಿರ್ಲಕ್ಷಿಸಿದರೆ ಇವರಿಂದ ಒಂದಲ್ಲ ಒಂದು ದಿನ ನಮಗೆ ಆಪತ್ತು ಕಟ್ಟಿಟ್ಟ ಬುತ್ತಿ. ಬದುಕಿನಲ್ಲಿ “ದಿಢೀರ್ ಸ್ವಂತ" ಅಂತ ಯಾವುದೂ ಇರುವುದಿಲ್ಲ. ಯಾರಾದರೂ ಅತ್ಯಂತ ಕಡಿಮೆ ಸಮಯದಲ್ಲಿ ನಮಗೆ ಬಹಳ ಹತ್ತಿರ ವಾಗಿದ್ದಾರೆ ಎಂದರೆ ನಾವು ಸ್ವಲ್ಪ ಜಾಗರೂಕರಾಗಿರಬೇಕು.
ಅತಿಯಾದ ಒಳ್ಳೆತನ, ಅತಿ ವಿನಯ ಇಂತಹ ನಡವಳಿಕೆಗಳು ನಮ್ಮ ಮೈ ಮರೆಸದೆ ಅಂತಹವರ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಅನಗತ್ಯವಾಗಿ ನಮಗೆ ಯಾರಾದರೂ ಸಹಾಯ ಮಾಡುತ್ತಿ ದ್ದಾರೆ ಎಂದರೆ ಕಣ್ಮುಚ್ಚಿ ಅದನ್ನು ಸ್ವೀಕರಿಸುವ ಬದಲು, ದೂರ ಸರಿದು ಬಿಡುವುದು ವಾಸಿ. ಏಕೆಂದರೆ ಅವರ ಸಹಾಯದ ಹತ್ತರಷ್ಟು ಬೆಲೆಯನ್ನು ನಾವು ನಂತರ ಅದಕ್ಕೆ ತೆರಬೇಕಾಗುತ್ತದೆ.
ಅದರ ಹಿಂದಿನ ಉದ್ದೇಶ ಬೇರೆಯೇ ಇರುತ್ತದೆ. ನಾವು ಸ್ಥಿತಪ್ರಜ್ಞರಾಗಿದ್ದಾಗ ಇಂತಹವರನ್ನು ಅಲ್ಲಲ್ಲೇ ನಮ್ಮ ಜೀವನದಿಂದ ದೂರವಿರಿಸಿ ಅನಗತ್ಯವಾಗಿ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳ ಬಹುದು.