Janamejaya Umarji Column: ಜನಪದದಲ್ಲಿ ಮಾರ್ಕ್ಸ್‌ವಾದಿಗಳ ಅಪಲಾಪ
ಒಟ್ಟಿನಲ್ಲಿ, ಎಲ್ಲಿಗೇ ಹೋದರೂ ಹೀಗೆ ಹೊಂದಿಸಿಕೊಂಡು ಮಾತನಾಡುವುದು. ನೀರು ಒಂದೇ, ಆದರೆ ಪಾತ್ರೆಗಳು ಮಾತ್ರ ಬೇರೆ ಬೇರೆ ಧಾತುಗಳಿಂದ ಮಾಡಿದಂಥವು ಹಾಗೂ ಬೇರೆ ಬೇರೆ ಗಾತ್ರದವು!ಸ್ವಯಂ ಘೋಷಿತ ವಿಚಾರವಾದಿಗಳು ಅಲಿಯಾಸ್ ಪ್ರಗತಿಪರರು ಉರು- ಮಾರ್ಕ್ಸ್‌ವಾದಿಗಳದ್ದೂ ಇದೇ ಕಥೆಯೇ!

ಅಂಕಣಕಾರ ಜನಮೇಜಯ ಉಮರ್ಜಿ

ಚರ್ಚಾ ವೇದಿಕೆ
ಜನಮೇಜಯ ಉಮರ್ಜಿ
ಪುಢಾರಿಗಳ ಭಾಷಣದ ಫಜೀತಿ ಏನ್ ಕೇಳ್ತೀರಿ- ದಿನಕ್ಕೆ ಹತ್ತಾರು ಸಮಾರಂಭ, ಎಲ್ಲಾ ಕಡೆ ಮಾತ ನಾಡಬೇಕು. ಹೀಗಾಗಿ ಭಾಷಣದ ಸಿದ್ಧಮಾದರಿ ಒಂದನ್ನು ಇಟ್ಟುಕೊಂಡಿರುತ್ತಾರೆ. ಶಾಲೆಗೆ ಹೋದರೆ, ‘ಇಂಥ ಶಾಲೆಗಳು ಪ್ರತಿ ಊರಲ್ಲೂ ಇರಬೇಕು, ಜನರು ಇದರ ಸದುಪಯೋಗವನ್ನು ಪಡೆದು ಕೊಳ್ಳ ಬೇಕು’ ಅನ್ನೋದು, ಆಸ್ಪತ್ರೆಗೆ ಹೋದರೆ ಅದನ್ನೇ ಕೊಂಚ ಬದಲಿಸಿ, ‘ಇಂಥ ಆಸ್ಪತ್ರೆಗಳು ಪ್ರತಿ ಊರಲ್ಲೂ ಇರಬೇಕು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಅನ್ನೋದು.
ಒಟ್ಟಿನಲ್ಲಿ, ಎಲ್ಲಿಗೇ ಹೋದರೂ ಹೀಗೆ ಹೊಂದಿಸಿಕೊಂಡು ಮಾತನಾಡುವುದು. ನೀರು ಒಂದೇ, ಆದರೆ ಪಾತ್ರೆಗಳು ಮಾತ್ರ ಬೇರೆ ಬೇರೆ ಧಾತುಗಳಿಂದ ಮಾಡಿದಂಥವು ಹಾಗೂ ಬೇರೆ ಬೇರೆ ಗಾತ್ರದವು!ಸ್ವಯಂಘೋಷಿತ ವಿಚಾರವಾದಿಗಳು ಅಲಿಯಾಸ್ ಪ್ರಗತಿಪರರು ಉರು- ಮಾರ್ಕ್ಸ್‌ವಾದಿಗಳದ್ದೂ ಇದೇ ಕಥೆಯೇ!
ಸಮಯ-ಸಂದರ್ಭ, ಊರು-ಕೇರಿ, ವಿಷಯ-ಆಶಯ ಯಾವುದೇ ಇರಲಿ, ಇವರದ್ದು ಅದೇ ಮಾತು ಅದೇ ಬರಹ. ವಿಷ್ಣು-ಶಿವ, ನಿರಾಕಾರ-ಸಾಕಾರ ಪೂಜೆ, ಉತ್ತರ-ದಕ್ಷಿಣ, ಆರ್ಯ-ದ್ರಾವಿಡ, ಮೂಲ ನಿವಾಸಿ-ವಲಸೆಗಾರದಂಥ ಭೇದಕಲ್ಪನೆಗಳು ಮಾತ್ರವಲ್ಲದೆ, ‘ಶ್ರೇಣೀಕೃತ ವ್ಯವಸ್ಥೆ’, ‘ಶೋಷಿತ ಸಮಾಜ’, ‘ಸ್ಥಾಪಿತ ನಂಬಿಕೆಯನ್ನು ಧಿಕ್ಕರಿಸುವ ಕ್ರಾಂತಿ’ ಹೀಗೆ ಕಂಠಪಾಠ ಮಾಡಿದ ಪದಗುಚ್ಛ ಗಳಂತೆ ಕಾಣುವಂಥ ವಿಷಯಗಳು ಇವರ ಮಾತಿನಲ್ಲಿ ಹೇರಳ.
ಇದನ್ನೂ ಓದಿ: L P Kulkarni Column: ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುವ ಐದು ವಿಶಿಷ್ಟ ಗಿಡಮೂಲಿಕೆಗಳು
ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ಇತ್ತೀಚೆಗೆ ಕರ್ನಾಟಕದ ಜನಪದ ಕಲೆಗಳ ಬಗ್ಗೆ ಬರೆಯ ಬೇಕಾಗಿ ಬಂತು. ಬಹುಪಾಲು ಪುಸ್ತಕಗಳನ್ನು ತಡಕಾಡಿದಾಗ, ಅಧಿಕೃತ ಜಾಲತಾಣಗಳನ್ನು ಜಾಲಾ ಡಿದಾಗ ಕಂಡುಬಂದದ್ದು ಇದೇ ರೀತಿಯ ಅಪಲಾಪಗಳು. ಉದಾಹರಣೆಗೆ, ಪುರವಂತಿಕೆ ಅಥವಾ ವೀರಗಾಸೆ ಮೇಳ. ಇದಕ್ಕೆ ಪ್ರಗತಿಪರರ ಲೇಪ ಇಂತಿದೆ: ‘ಆರ್ಯ ಭಾಷಿಕರಾದ ವೈದಿಕರು ಪಾರ್ಸಿ ಗಳೊಂದಿಗೆ ಬದುಕಲಾರದೆ, ವಾಯವ್ಯ ಭಾಗದಿಂದ ಭಾರತವನ್ನು ಪ್ರವೇಶಿಸುವಾಗ, ಅವರು ಮೊದಲು ಎದುರುಗೊಂಡಿದ್ದು ಹರಪ್ಪಾ ನಾಗರಿಕತೆಯ ಜನರನ್ನೇ.
ಈ ಹರಪ್ಪಾ ನಾಗರಿಕತೆಯು ದ್ರಾವಿಡರದು ಎಂಬ ವಾದ ಇರುವಂತೆಯೇ, ದ್ರಾವಿಡ ಮೂಲದ್ದಲ್ಲ ಎಂಬ ವಾದವೂ ಇದೆ. ಆದರೂ ಪುರವಂತಿಕೆಯ ಮೂಲವಂತೂ ಹರಪ್ಪಾ ನಾಗರಿಕತೆಯಲ್ಲೇ ಇದೆ. ಇದು ಈ ಕಲೆಗೆ ಇರುವ ಚರಿತ್ರೆಯ ಆಯಾಮ. ಈ ಪುರವಂತಿಕೆಗೆ ಪೌರಾಣಿಕ ಆಯಾಮವೂ ಇದೆ. ಅಂದಿನ ಆರ್ಯರ ರಾಜನಾಗಿದ್ದ ದಕ್ಷನ ‘ನಿರೀಶ್ವರ ಯಾಗ’ವನ್ನು, ಶಿವನ ಜಟೆಯ ಕೂದಲಿನಿಂದ ಜನಿಸಿದ ವೀರಭದ್ರನ ಮೂಲ ಈರಭದ್ರ ಧ್ವಂಸಗೊಳಿಸಿದ ಪ್ರಸಂಗ, ಚರಿತ್ರೆಯಲ್ಲಿ ಘಟಿಸಿದ್ದಿರ ಬಹುದಾದ ದಕ್ಷಯಜ್ಞ ಧ್ವಂಸ ಪ್ರಸಂಗಗಳು ಸಮರ ಮತ್ತು ಹಿಂಸೆಯ ಸಂಕೇತಗಳೇ ಆಗಿವೆ.
ಆದ್ದರಿಂದಲೇ ಒಂದರ್ಥದಲ್ಲಿ ಪುರವಂತಿಕೆಯನ್ನು ಸಾಂಸ್ಕೃತಿಕವಾದ ಸಮರಕಲೆ ಎಂದೇ ನಾವು ಗುರುತಿಸಬೇಕಿದೆ. ಪುರವನ್ನು ಹಾಳುಮಾಡುವವರು ಪುರಂದರರು. ಪುರವನ್ನು ರಕ್ಷಿಸಲು ಶಸ್ತ್ರ ಹಿಡಿದವರು ಪುರವಂತರು. ವೀರಗಾಸೆಯು ಇವರಿಬ್ಬರ ನಡುವಿನ ಸಂಘರ್ಷದ ಆಚರಣೆ". ಇದೇ ರೀತಿಯಲ್ಲಿ, ಡೊಳ್ಳುವಾದನದ ಬಗ್ಗೆ ಇರುವ ವಿವರವನ್ನೂ ನೋಡೋಣ.
ಅದು ಹೀಗಿದೆ: “ಇದು ಬೀರೇ ದೇವರ ಭಜನೆ. ಬೀರೇದೇವರೆಂದರೆ ಈರೇದೇವರೆಂದೇ ಅರ್ಥ. ‘ಈರ’ ಎಂದರೆ ನೀರು. ದ್ರಾವಿಡ ಸಂಸ್ಕೃತಿಯಲ್ಲಿ ನೀರಿನ ಈರೇದೇವರೆಂದರೆ ಶಿವನೇ. ಡೊಳ್ಳಿಗೆ ಸಂಬಂಧಿ ಸಿದಂತೆ ಇರುವ ಜಾನಪದೀಯ ಪುರಾಣಗಳಲ್ಲಿ, ಶಿವನೇ ಜಗತ್ತಿನ ಪ್ರಥಮ ಡೊಳ್ಳು ತಯಾರಕ, ವಾದಕ ಮತ್ತು ನರ್ತಕ. ಸೂಜಿಮೊನೆಯ ಮೇಲೆ ನಿಂತು ತನ್ನನ್ನು ಕುರಿತು ತಪಸ್ಸು ಮಾಡಿದ ಡೊಳ್ಳುಹೊಟ್ಟೆಯ ಡೊಳ್ಳಾಸುರ ಎಂಬುವವನಿಗೆ ಶಿವನು ತನ್ನನ್ನೇ ನುಂಗುವ ವರವನ್ನು ನೀಡಿದ ನಂತೆ.
ಆದರೆ, ಹೊಟ್ಟೆಯಲ್ಲಿನ ಶಿವನ ಭಾರ ತಡೆಯಲಾಗದ ಅಸುರನು, ಹೊರಬರುವಂತೆ ಶಿವನನ್ನು ಕೋರಿದ. ಅಸುರನ ಹೊಟ್ಟೆ ಸೀಳಿಕೊಂಡು ಹೊರಬಂದ ಶಿವನು, ಅಸುರನ ಡಿಂಬವನ್ನೇ ಡೊಳ್ಳು ಮಾಡಿ, ಚರ್ಮ ಸುಲಿದು ಎರಡೂ ಬದಿಗೆ ಹೊದಿಸಿ, ಕರುಳನ್ನೇ ಹಗ್ಗ ಮಾಡಿ ಬಿಗಿದು, ಕೈಗಳನ್ನೇ ಬಿದಿರುಕೋಲಿನ ಗುಣಿ ಮಾಡಿ ಬಡಿದು ನರ್ತಿಸಿದನಂತೆ. ಈ ಡೊಳ್ಳಾಸುರನಿಗೆ ಸಂಬಂಧಿಸಿದ ಪುರಾಣಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನಪಠ್ಯಗಳಲ್ಲಿದ್ದು, ಇಲ್ಲಿ ವಿಷ್ಣುವಿನ ಅನಗತ್ಯ ಮಧ್ಯ ಪ್ರವೇಶವೂ ಸೇರಿಕೊಂಡಿದೆ.
ಯಾಕೆಂದರೆ, ಜಾನಪದ ಸಂಸ್ಕೃತಿಯಲ್ಲಿ ಶಿವ, ಗಂಗೆ, ಗೌರಿ, ಪಾರ್ವತಿಯರ ಪ್ರಸ್ತಾಪಗಳೇ ಪ್ರಧಾನ ವಾಗಿ ಕಂಡುಬರುವಂಥವು. ಜಾನಪದಕ್ಕೆ ಹೊರತಾದ ವೈದಿಕ ಮೂಲದ ವಿಷ್ಣುವಿನ ಸೇರ್ಪಡೆ ಗಳೆಲ್ಲವೂ ನಿಸ್ಸಂಶಯವಾಗಿ ‘ಪ್ರಕ್ಷಿಪ್ತ’ಗಳೇ. ಅದರೊಂದಿಗೆ ‘ಅಸುರ’ ಎಂಬುದರ ಮೂಲವು, ಪರ್ಷಿ ಯನ್ ಭಾಷೆಯ ‘ಅಹುರ’ ಎಂಬ ಪದವೇ. ಪಾರ್ಸಿಗಳ ಸರ್ವಶಕ್ತ ದೇವರೇ ‘ಅಹುರ್ ಮಜ್ದಾ’. ಆದರೆ, ಭಾರತೀಯ ಆರ್ಯ ವೈದಿಕರ ಕಡುವೈರಿ ದಾಯಾದಿಗಳಾದ ಪಾರ್ಸಿಗಳ ದೈವವಾದ ‘ಅಹುರ’ ನನ್ನೇ ದುಷ್ಟನನ್ನಾಗಿ ರೂಪಿಸಿ, ಅಸುರನನ್ನಾಗಿಸಿ ಪುರಾಣ ಹೊಸೆದವರು ವೈದಿಕರೇ".
ಒಂದು ಕಡೆ ಪುರಾಣಗಳನ್ನು ‘ಅಂತೆ-ಕಂತೆ’ ಎನ್ನುತ್ತಾ, ಇನ್ನೊಂದು ಕಡೆ ಅದನ್ನೇ ‘ಚರಿತ್ರೆ’ ಎನ್ನುತ್ತಾ, ತಥಾಕಥಿತ ವಿರಾಸತ್ತಿನ ವಾರಸುದಾರರು ಕಲೆಗಳಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಬಹು ಪಾಲು ಜನಪದ ಕಲೆಗಳಿಗೆ ಪುರಾಣ-ಪುಣ್ಯಕಥೆಗಳೇ ಮೂಲ. ಭಾಗವತ ಪುರಾಣವಂತೂ ಆಸೇತು ಹಿಮಾಚಲ ನೃತ್ಯ, ಸಂಗೀತ, ನಾಟಕ ಹೀಗೆ ಹಲವು ಕಲೆಗಳನ್ನು ಪ್ರವರ್ತಿಸಿದೆ.
ಪುರವಂತಿಕೆಯು ವೀರಭದ್ರನ ಆಟ. ಇದಕ್ಕೆ ಪುರಾಣವೇ ತಲೆ, ಬುಡ ಮತ್ತು ದೇಹ. ‘ಅಹಹಾ ವೀರ ಅಹಹಾ ಭದ್ರ, ಕಡೆ ಕಡೆ’ ಎನ್ನುತ್ತಾ ಮಾಡುವ ಶಿವನ ರುದ್ರರೂಪದ, ವೀರರೂಪದ ಆರಾಧನೆ ಇಲ್ಲಿದೆ. ಶಸ್ತ್ರವನ್ನು ಚುಚ್ಚಿಸಿಕೊಳ್ಳುವ ಮೂಲಕ ಭಕ್ತಿಯ ಪರಾಕಾಷ್ಠೆ ಸಾರುವ ಕಲೆಯಾಗಿರುವ ಇದು, ಇಂದಿಗೂ ಸಂಪ್ರದಾಯವಾಗಿ ಉಳಿದು ಶಿರೋಧಾರ್ಯವಾಗಿದೆ.
‘ಆರ್ಯರು ಮೂರ್ತಿಪೂಜಕರು’ ಎಂದೆಲ್ಲ ಹೇಳುತ್ತಿದ್ದವರು ಇಲ್ಲಿ ಮಾತ್ರ ದಕ್ಷನನ್ನು ನಿರೀಶ್ವರವಾದಿ ಯಾಗಿ ಮಾಡಿದ್ದಾರೆ. ನಿರೀಶ್ವರವಾದಿ ಎಂದರೆ ಶಿವನವಿರೋಧಿ ಎಂದು ಅರ್ಥ ಮಾಡಲಾಗಿದೆ. ಇದೊಂದು ರೀತಿಯಲ್ಲಿ, ‘ಆಸ್ತಿ ಇದ್ದವನೇ ಆಸ್ತಿಕ’ ಎಂದಂತೆ. ಪುರಾಣ-ಪುಣ್ಯಕಥೆಗೆ ‘ಪುರಂದರ-ಪುರವಂತರ’ ಸಂಘರ್ಷದ ಕಥೆ ಕಟ್ಟಲಾಗಿದೆ. ಇನ್ನು, ಪಾರ್ಸಿ ಡೊಳ್ಳಾಸುರನನ್ನು ದ್ರಾವಿಡ ಶಿವನು ಸಂಹರಿಸಿ ಡೊಳ್ಳು ಮಾಡಿದ ಕಥೆಗೆ ಬರೋಣ. ಇವರ ಕಥೆಯಲ್ಲಿ ಆರ್ಯ ವಿಷ್ಣುವು ಪ್ರವೇಶ ಮಾಡಿ ಪ್ರಕ್ಷಿಪ್ತ ಎನಿಸಿಕೊಂಡ. ಬೀರದೇವರು ವೀರನಾರಾಯಣನೆಂದು, ಬೀರೇಶ್ವರನೆಂದು, ಹರಿಹರ ಪುತ್ರನೆಂದು, ಮೂಲದೈವನೆಂದು ಹಲವು ರೀತಿಯಾಗಿ ಪುರಾಣಗಳಲ್ಲಿದೆ.
ಇವೆಲ್ಲವೂ ನಮ್ಮ ಶ್ರದ್ಧೆ, ಭಕ್ತಿಭಾವಗಳು. “ಡೊಳ್ಳಿನ್ ಮ್ಯಾಲ್ ಕೈ ಭರಮಪ್ಪ ಹಾಕ್ಯಾನು ತಾಳವ ಶಿವನಪ್ಪ ತಟ್ಟಾನ್ಮ್ಯಾ, ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು ಚೆಲುವ ಕನಕಪ್ಪ ಕುಣಿದಾ ನ್ಮ್ಯಾ" ಎಂದು ಕನಕದಾಸರು ಸಾಮರಸ್ಯ ಮಾಡಿ ಸ್ವಾರಸ್ಯವಾಗಿ ಹೇಳಿದಂತೆ, ಹಣೆಗೆ ಭಂಡಾರ ಹಚ್ಚಿ ಬೀರೆದೇವರನ್ನು ಕುರಿತು ಡೊಳ್ಳಿನ ಲಯದಲ್ಲಿ ಭಕ್ತಿಯಿಂದ ಹಾಡುವ, ಹಿಗ್ಗಿನಿಂದ ಕುಣಿ ಯುವ, ಭಾವಪರವಶರಾಗುವ ಕಲೆಗೆ ಆರ್ಯ, ದ್ರಾವಿಡ, ಪಾರ್ಸಿ ತ್ರಿಕೋನ ಕಥೆ ಸೇರಿಸಿದ್ದೇ ಅಪಲಾಪ. ಜನಪದಗಳು ಎಂದರೆ ಗ್ರಾಮೀಣ ಜಗತ್ತಿನ ಹೃದಯ.
ಇವು ಬದುಕಿನೊಂದಿಗೆ ಹೊಂದಿಕೊಂಡಿರುವ ಮೌಲ್ಯಗಳು. ಜೀವನ, ಉಜ್ಜೀವನದ ಪರಿವೆ ಇಲ್ಲದ ಸಾಮ್ಯವಾದಿಗಳು, ಬದುಕು ಪ್ರೀತಿಸುವ ಜನಪದಗಳನ್ನು ಎಂದು ತಿಳಿದಾರು? ಆಧ್ಯಾತ್ಮಿಕತೆ, ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ವೈರುದ್ಧ್ಯ ಬಿತ್ತುವಲ್ಲಿ ಏನು ಲಾಭವಿದೆಯೋ ದೇವನೇ ಬಲ್ಲ! ಮಾರ್ಕ್ಸ್ವಾದ ಜಗತ್ತಿನ ಎಲ್ಲ ಸಂಸ್ಕೃತಿಗಳಿಗೆ, ಬಹುತ್ವಕ್ಕೆ ಮಾರಕ. ಇವರನ್ನು ಹೊರಗಿಟ್ಟು ನಮ್ಮ ಪಾರಂಪರಿಕ ಕಲೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಗ್ರಾಮೀಣ ಜೀವನದ ಮೂಲಭೂತ ಆಶಯ ಗಳನ್ನು ಆಳವಾಗಿ ಅರಿತುಕೊಂಡು, ಸ್ಥಳೀಯತೆ, ಸಾಂಸ್ಕೃತಿಕ ವಿಶೇಷತೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಗುರುತಿಸಿ, ಅದಕ್ಕೆ ಪೂರಕ ದಿಕ್ಕಿನಲ್ಲಿ ಸಾಗಬೇಕಾಗಿದೆ.
(ಲೇಖಕರು ಚಿಂತಕರು)