ShankaraNarayana Bhat Column: ಸ್ವಲ್ಪ ಕಾಯಬೇಕು, ಅಷ್ಟೇ ?
ಎಪ್ಪತ್ತೈದರ ವಯಸ್ಸಿನಲ್ಲೂ ಇಪ್ಪತ್ತೈದರ ಯುವಕರಂತೆ ಕ್ರಿಯಾಶೀಲರಾಗಿರುವವರೂ ಇರಬಹುದು. ಆದರೆ ಅಂಥವರ ಸಂಖ್ಯೆ ಎಷ್ಟಿದ್ದೀತು? ಹೀಗಾಗಿ ಅಂಥ ಯಾರಾದರೂ ಸಿಕ್ಕಾಗ ಸಾಮಾನ್ಯ ಪದ್ಧತಿ ಯನ್ನು ಗಾಳಿಗೆ ತೂರಲು ಸಾಧ್ಯವೇ? ಈ ಹಿಂದೆ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಅಷ್ಟೇಕೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೂ ಎಷ್ಟೊಂದು ಚುರುಕಾಗಿ ದ್ದರು, ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಕ್ಷಮತೆ ಉಳ್ಳವರಾಗಿದ್ದರು.


ಪ್ರತಿಸ್ಪಂದನ
ಶಂಕರನಾರಾಯಣ ಭಟ್
ವಯಸ್ಸೆಂಬುದು ಬರೀ ಸಂಖ್ಯೆಯಷ್ಟೇ, ಬಿಡಿ!’ ಎಂಬ ವಿಜಯ್ ದರಡಾ ಅವರ ಅಂಕಣಬರಹ (ಜು.೧೭) ಚಿಂತನ-ಮಂಥನಕ್ಕೆ ಎಡೆಮಾಡಿಕೊಡುವಂಥದ್ದೇ. ಹೌದು, ಯಾರಿಗೋ ವಯಸ್ಸಾಗುತ್ತಿದೆ, ಶರೀರದಲ್ಲಿ ಶಕ್ತಿಯಿಲ್ಲ, ಮನಸ್ಸು ಸ್ಥಿಮಿತದಲ್ಲಿಲ್ಲ ಎಂಬ ಕಾರಣಕ್ಕೆ ಅಂಥವರಿಗೆ ಜವಾಬ್ದಾರಿ ಕೊಡದಿರುವುದನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್‌ನ ಮೋಹನ್ ಭಾಗ್ವತ್ ಅಂಥವರ ವಿಷಯದಲ್ಲಿ ಇದು ಕೆಲವರು ತಿಳಿದಷ್ಟು ಸರಳ ಮತ್ತು ಸಹಜವಲ್ಲ.
ಬಿಜೆಪಿಯಲ್ಲಿ ಅದು ಹೇಗೋ, ಅದ್ಯಾಕೋ ಈ ಅಲಿಖಿತ ನಿಯಮ ತೂರಿಕೊಂಡುಬಿಟ್ಟಿತು, ಅದು ಜಾರಿಯೂ ಆಗಿದೆ. ಅದನ್ನು ‘ಕಾನೂನು’ ಅನ್ನಲೂ ಆಗದು, ‘ಪದ್ಧತಿ’ ಅನ್ನಲೂ ಆಗದು. ರಾಜಕೀಯ ಕ್ಷೇತ್ರದಲ್ಲಿರುವವರೂ ನಿವೃತ್ತಿ ಹೊಂದಬೇಕು, ಹೊಸಬರಿಗೆ ಅವಕಾಶ ಕಲ್ಪಿಸಿ ಕೊಡಬೇಕು.
ಇದನ್ನೂ ಓದಿ: Roopa Gururaj Column: ಸದ್ಗುಣ ಸಂಪನ್ನ ವಿಭೀಷಣ
ಇದಕ್ಕೆ ಮಾನದಂಡವೇ ವಯಸ್ಸು. ವಯಸ್ಸಾದಂತೆ ಜನ ಎಂದಿನ ಶಕ್ತಿಯನ್ನು ಕಳೆದುಕೊಳ್ಳುತ್ತ ಬರುವುದರಿಂದ, 75 ವಯಸ್ಸು ಆಗಿಬಿಟ್ಟಿತೆಂದರೆ ‘ಏನೂ ಮಾಡಲಾಗದವರು’ ಎಂಬ ಸಾಮೂಹಿಕ ತೀರ್ಮಾನಕ್ಕೆ ಬಂದು ಈ ರೀತಿ ಆಗಿದ್ದಿರಬಹುದು. ಯಾವುದೇ ಕ್ಷೇತ್ರವಾಗಲಿ ಕೆಲ ಅಪವಾದಗಳು ಇದ್ದೇ ಇರುತ್ತವೆ.

ಎಪ್ಪತ್ತೈದರ ವಯಸ್ಸಿನಲ್ಲೂ ಇಪ್ಪತ್ತೈದರ ಯುವಕರಂತೆ ಕ್ರಿಯಾಶೀಲರಾಗಿರುವವರೂ ಇರಬಹುದು. ಆದರೆ ಅಂಥವರ ಸಂಖ್ಯೆ ಎಷ್ಟಿದ್ದೀತು? ಹೀಗಾಗಿ ಅಂಥ ಯಾರಾದರೂ ಸಿಕ್ಕಾಗ ಸಾಮಾನ್ಯ ಪದ್ಧತಿಯನ್ನು ಗಾಳಿಗೆ ತೂರಲು ಸಾಧ್ಯವೇ? ಈ ಹಿಂದೆ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಅಷ್ಟೇಕೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೂ ಎಷ್ಟೊಂದು ಚುರುಕಾಗಿದ್ದರು, ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಕ್ಷಮತೆ ಉಳ್ಳವರಾಗಿದ್ದರು.
ಆದರೂ ಅವರನ್ನೆಲ್ಲ ಬದಿಗೆ ಸರಿಸಲು ಕಾರಣವಾಗಿದ್ದು ‘ಅವರಿಗೆ ವಯಸ್ಸಾಗಿದೆ’ ಎಂಬ ಅಂಶ! ಹೌದು, ಲೇಖಕರು ಹೇಳಿದಂತೆ ವಯಸ್ಸು ಎಪ್ಪತ್ತೈದಾಗುತ್ತಿದ್ದರೂ ನರೇಂದ್ರ ಮೋದಿ, ಮೋಹನ್ ಭಾಗ್ವತ್ ಅವರು ಬಸವಳಿದಿಲ್ಲ, ಅವರ ಮುಖ ಸ್ವಲ್ಪವೂ ಬಾಡಿಲ್ಲ. ದೇಶಕ್ಕಾಗಿ ಇನ್ನೂ ಏನೇನೋ ಮಾಡಬೇಕೆಂಬ ತುಡಿತ ಅವರಲ್ಲಿ ಇನ್ನೂ ಜೀವಂತವಾಗಿದೆ.
ಇದು ಸಾಮಾನ್ಯರಿಗೂ ತಿಳಿದ ವಿಷಯವೇ. ಆದರೇನು, ತನ್ನನ್ನು ‘ಶಿಸ್ತಿನ ಪಕ್ಷ’ ಎಂದು ಕರೆದು ಕೊಳ್ಳುವ ಬಿಜೆಪಿಯಂಥ ರಾಷ್ಟ್ರೀಯ ಪಕ್ಷವು ತಾನು ಮಾಡಿದ ಕಾನೂನನ್ನು ತಾನೇ ಮುರಿದರೆ ಜನಾಭಿಪ್ರಾಯ ಹೇಗಿದ್ದೀತು? ಇದು ಮುಖ್ಯವಾಗಿ ಯೋಚಿಸಬೇಕಾದ ಸಂಗತಿ. ಏಕೆಂದರೆ, ತಮಗೆ ಬೇಡವಾದವರನ್ನು ದೂರವಿಡಲು ಏನೇನೋ ಕುತಂತ್ರ ನಡೆದಿತ್ತು ಎಂಬ ಅಪವಾದಕ್ಕೆ ಕೆಲವರು ಗುರಿಯಾಗಲೇಬೇಕಾಗುತ್ತದೆ.

ಇದು ಪ್ರಧಾನಿಯಾಗಲಿ, ಆರೆಸ್ಸೆಸ್ ಮುಖ್ಯಸ್ಥರಾಗಲಿ ಅಥವಾ ಆಯಕಟ್ಟಿನ ಹುದ್ದೆಯನ್ನು ಹೊಂದಿರುವ ಇನ್ನಾರೇ ಆಗಿರಲಿ ಅವರಿಗೆ ಅನ್ವಯವಾಗುವಂತಿರಬೇಕು. ತಮಗೆ ಬೇಕಾದ ಹಾಗೆ ಬದಲು ಮಾಡುವ ಪದ್ಧತಿಯು ನಗೆಪಾಟಲಿಗೆ ದಾರಿಯಾದೀತು. ಇಲ್ಲಿ ಇನ್ನೊಂದು ವಿಚಾರವನ್ನು ಹೇಳಬೇಕು. ನರೇಂದ್ರ ಮೋದಿಯವರ ಕಾರ್ಯವೈಖರಿಯ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ.
ಇಷ್ಟೊಂದು ದಕ್ಷತೆಯಿಂದ ದೇಶವನ್ನು ಮುನ್ನಡೆಸಿಕೊಂಡು ಹೋಗಬಲ್ಲ ಇನ್ನೊಬ್ಬ ನಾಯಕ ಇರಬಹುದೇ? ಎಂಬ ಸಂಶಯ ಬರುವುದೂ ಸಹಜವೇ. ಆದರೆ ಕಾಲಚಕ್ರ ಉರುಳಿದಂತೆ, ಅವಕ್ಕೆಲ್ಲ ಸೂಕ್ತ ಪರಿಹಾರ ಬಂದೊದಗಿದ್ದನ್ನೂ ನಾವೇ ಕಂಡಿಲ್ಲವೇ? ಇಂದಿರಾ ಗಾಂಧಿ ನಂತರ ಯಾರು? ಗೋಳ್ವಲ್ಕರ್ ನಂತರ ಯಾರು? ವಾಜಪೇಯಿ ನಂತರ ಯಾರು? ಹೀಗೆ ಹಲವು ಬಾರಿ ಪ್ರಶ್ನೆಗಳು ಎದುರಾದಾಗಲೂ ಪರಿಹಾರಗಳು ಒದಗಿದ್ದಿದೆ.
ಅಷ್ಟೇಕೆ, ಒಂದು ಕುಟುಂಬದ ಯಜಮಾನನಿಗೆ ವಯಸ್ಸಾದಾಗಲೂ ಇಂಥದೇ ಪ್ರಶ್ನೆ ಆ ಕುಟುಂಬದಲ್ಲಿ ಏಳುತ್ತದೆ. ಇವಕ್ಕೆಲ್ಲ ಪರಿಹಾರ ಸಿಗುತ್ತಿದೆಯಲ್ಲಾ... ಇದು ಜಗದ ಅಥವಾ ಪ್ರಕೃತಿಯ ನಿಯಮ. ಈಗಲೂ ಹಾಗೆಯೇ, ಇನ್ನೊಬ್ಬ ವ್ಯಕ್ತಿ ಎಲ್ಲೋ, ಯಾವುದೋ ರೂಪದಲ್ಲಿ ತಯಾರಾಗಿಯೇ ಇರುತ್ತಾನೆ.
ಮೋದಿಯವರ ನಂತರ ಯಾರು ಎಂಬ ಪ್ರಶ್ನೆಗೆ ಅವನು ಉತ್ತರವಾಗಿ ನಿಲ್ಲುತ್ತಾನೆ. ಸ್ವಲ್ಪ ಕುತೂಹಲ, ಊಹೆ, ಚರ್ಚೆ, ಸಂಶಯ, ಹೆದರಿಕೆ ಇದ್ದೇ ಇರುತ್ತವೆ. ಒಂದು ದಿನ ಅವೆಲ್ಲ ಅರಿಯದಂತೆ ಮಾಯವಾಗಿಬಿಡುತ್ತವೆ! ಇಲ್ಲಿ ಅವಶ್ಯವಿರುವುದು- ಸ್ವಲ್ಪ ಕಾಯುವಿಕೆ, ತಾಳ್ಮೆ, ಅಷ್ಟೇ!
(ಲೇಖಕರು ಹವ್ಯಾಸಿ ಬರಹಗಾರರು)