Viral Video: ಶಾಲೆಯಲ್ಲಿ ಬಾಡೂಟ ಪಾರ್ಟಿ- ವಿಡಿಯೊ ವೈರಲಾಗ್ತಿದ್ದಂತೆ ಪ್ರಾಂಶುಪಾಲರು ಸಸ್ಪೆಂಡ್
Non-Veg Party at Surat School: ಸರ್ಕಾರಿ ಶಾಲೆಯ ಆವರಣದಲ್ಲಿ ಅಧಿಕಾರಿಗಳ ಅನುಮತಿಯಿಲ್ಲದೆ ಮಾಂಸಾಹಾರಿ ಪಾರ್ಟಿ ಆಯೋಜಿಸಿದ್ದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

-

ಸೂರತ್: ಅಧಿಕಾರಿಗಳ ಅನುಮತಿಯಿಲ್ಲದೆ ಆವರಣದಲ್ಲಿ ಮಾಂಸಾಹಾರಿ ಪಾರ್ಟಿ (non-veg party) ಆಯೋಜಿಸಿದ್ದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಗುಜರಾತ್‍ನ ಗೋದಾದರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲರು ಇಲಾಖಾ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ. ಗೋದಾದರ ಪ್ರದೇಶದ ಪ್ರಾಥಮಿಕ ಶಾಲೆ ಸಂಖ್ಯೆ 342ರಲ್ಲಿ ನಡೆದ ಕೂಟದಲ್ಲಿ ಜನರು ಕೋಳಿ ಮತ್ತು ಮಟನ್ ಭಕ್ಷ್ಯಗಳನ್ನು ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆದ ನಂತರ ಈ ವಿವಾದ ಹುಟ್ಟಿಕೊಂಡಿದೆ.
ಈ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ನಡೆದಿದ್ದು, ಶಾಲೆಯ ಮುಖ್ಯ ದ್ವಾರದಲ್ಲಿ ಬ್ಯಾನರ್‌ನಲ್ಲಿ ಹಾಕಲಾಗಿತ್ತು. ಅದರಲ್ಲಿ 1987 ಮತ್ತು 1991ರ ನಡುವೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪುನರ್ಮಿಲನ ಎಂದು ಬರೆಯಲಾಗಿತ್ತು. ಬಾಡೂಟದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಂತೆ, ತೀವ್ರ ಟೀಕೆಗೆ ಗುರಿಯಾಗಿದೆ. ಶಾಲೆಯ ಮೇಲ್ವಿಚಾರಣೆ ವಹಿಸಿರುವ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (SMC) ನ ಪ್ರಾಥಮಿಕ ಶಿಕ್ಷಣ ಸಮಿತಿ (PEC) ಭಾನುವಾರ ಸಂಜೆ ತನಿಖೆಯನ್ನು ಪ್ರಾರಂಭಿಸಿತು.
ವಿಡಿಯೊ ವೀಕ್ಷಿಸಿ:
Surat Govt School Controversy: Principal Suspended After Non-Veg Party for Alumni Goes Viral | TV9Gujarati#Surat #GovernmentSchool #NonVegControversy #PrincipalSuspended #SchoolEvent #AlumniParty #SuratNews #TV9Gujarati pic.twitter.com/aYq7K9ukqW
— Tv9 Gujarati (@tv9gujarati) October 13, 2025
ತನಿಖೆಯ ಆಧಾರದ ಮೇಲೆ, ಪಿಇಸಿ ಸೋಮವಾರ ಶಾಲೆಯ ಪ್ರಾಂಶುಪಾಲ ಪ್ರಭಾಕರ್ ಎಲಿಗಾಟಿನ್ ಅವರನ್ನು ಅಮಾನತುಗೊಳಿಸಿದೆ. ಸಮಿತಿಯ ಅಧ್ಯಕ್ಷ ರಾಜೇಂದ್ರ ಕಪಾಡಿಯಾ, ಸಭೆಯ ಸಮಯದಲ್ಲಿ ಜನರಿಗೆ ಮಾಂಸಾಹಾರವನ್ನು ಬಡಿಸಲಾಗಿದ್ದರಿಂದ ಇದು ನಿಜಕ್ಕೂ ಖಂಡನೀಯ ಕೃತ್ಯ. ಶಾಲೆಯ ಒಳಗೆ ಈ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯಲಾಗಿಲ್ಲ. ನಮ್ಮ ಮಾನ ಹಾಳು ಮಾಡಿದ್ದಕ್ಕಾಗಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಯನ್ನೂ ನಡೆಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Viral Video: ಕರ್ವಾ ಚೌತ್ ದಿನದಂದು ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಮಹಿಳೆ ಸಾವು; ವಿಡಿಯೊ ಇಲ್ಲಿದೆ
ಮಾಂಸಾಹಾರಿ ಭಕ್ಷ್ಯವನ್ನು ಶಾಲೆಯ ಹೊರಗಿನಿಂದ ತರಲಾಗಿದ್ದು, ಹಳೆ ವಿದ್ಯಾರ್ಥಿಗಳಿಗೆ ಅವುಗಳನ್ನು ಬಡಿಸುವಾಗ ತಾನು ಆ ಸ್ಥಳದಲ್ಲಿ ಇರಲಿಲ್ಲ ಎಂದು ಪ್ರಾಂಶುಪಾಲ ಎಲಿಗಾಟಿನ್ ಹೇಳಿದ್ದಾರೆ. ಇದು ಹಳೆ ವಿದ್ಯಾರ್ಥಿಗಳ ಪುನರ್ಮಿಲನವಾಗಿತ್ತು. ಅವರಲ್ಲಿ ಅನೇಕರು ವಿದೇಶದಿಂದ ತಮ್ಮ ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದರು. ನಾವು ಫಾರ್ಮ್‌ಹೌಸ್‌ನಲ್ಲಿ ಈ ಸಭೆಯನ್ನು ಆಯೋಜಿಸಲು ಯೋಜಿಸಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಅದನ್ನು ರದ್ದುಗೊಳಿಸಲಾಯಿತು ಎಂದು ಅಮಾನತುಗೊಂಡ ಪ್ರಾಂಶುಪಾಲರು ಹೇಳಿದರು.
ನಂತರ ಭಾನುವಾರ ಶಾಲೆಯ ಹಿಂಭಾಗದಲ್ಲಿ ಪುನರ್ಮಿಲನವನ್ನು ಆಯೋಜಿಸಲು ನಿರ್ಧರಿಸಲಾಯಿತು. ಅವರು ಹೊರಗಿನಿಂದ ಮಾಂಸಾಹಾರಿ ಭಕ್ಷ್ಯಗಳನ್ನು ತಂದಿದ್ದರು. ಆ ಸಮಯದಲ್ಲಿ ನಾನು ಹಾಜರಿರಲಿಲ್ಲ ಎಂದು ಎಲಿಗಾಟಿನ್ ಹೇಳಿದರು.