ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಕಥಾಸರಿತ್ಸಾಗರ: ಬ್ರಾಹಣ, ಅವನ ಹೆಂಡತಿ ಮತ್ತು ಮೂರು ವರಗಳು

ಹೆಂಡತಿಯ ಮಾತು ಕೇಳಿದ ಬ್ರಾಹ್ಮಣನು ಮೊದಲನೇ ವರವನ್ನು ಬಳಸಿ ಆಕೆಗೆ ಅದ್ಭುತ ಲಾವಣ್ಯ ವನ್ನು ಕೋರಿದನು. ತಕ್ಷಣವೇ ಆಕೆ ಅಪ್ಸರೆಯಂತೆ ಸುಂದರಿಯಾಗಿ ಮಾರ್ಪಟ್ಟಳು. ಆದರೆ ದುರಂತ ವೆಂದರೆ, ಆಕೆಯ ಈ ಅತಿರೇಕದ ಸೌಂದರ್ಯದ ಸುದ್ದಿ ಹರಡಿ, ಆ ಊರಿನ ರಾಜನ ಕಿವಿಗೆ ಬಿತ್ತು. ರಾಜನು ತಕ್ಷಣವೇ ಸೈನಿಕರನ್ನು ಕಳುಹಿಸಿ ಆಕೆಯನ್ನು ಅರಮನೆಗೆ ಎತ್ತಿಸಿಕೊಂಡು ಹೋಗಿ ಬಿಟ್ಟನು!

ಕಥಾಸರಿತ್ಸಾಗರ: ಬ್ರಾಹಣ, ಅವನ ಹೆಂಡತಿ ಮತ್ತು ಮೂರು ವರಗಳು

-

ಒಂದೊಳ್ಳೆ ಮಾತು

‘ಕಥಾಸರಿತ್ಸಾಗರ’ದಲ್ಲಿ ಒಟ್ಟು 18 ಲಂಬಕಗಳು (ಭಾಗಗಳು) ಹಾಗೂ ನೂರಾರು ಉಪಕಥೆಗಳಿದ್ದು, ಅವುಗಳಲ್ಲಿ ವ್ಯಕ್ತಿತ್ವ ವಿಕಸನ, ನೈತಿಕತೆ, ಸಂಬಂಧಗಳು ಮತ್ತು ಬುದ್ಧಿವಂತಿಕೆಯನ್ನು ಸಾರುವ ಅತ್ಯಂತ ಪ್ರಸಿದ್ಧ ಹಾಗೂ ಮೌಲ್ಯಯುತ ಕಥೆಗಳಿವೆ. ಅವುಗಳನ್ನ ಒಂದೊಳ್ಳೆ ಮಾತಿನಲ್ಲಿ ಜೋಡಿಸಿಕೊಡುವ ಪ್ರಯತ್ನ ನನ್ನದು. ‘ಕಥಾಸರಿತ್ಸಾಗರ’ದಲ್ಲಿ ಬರುವ ಬ್ರಾಹ್ಮಣ ಮತ್ತು ಮೂರು ವರಗಳ ಕಥೆ, ಮನುಷ್ಯನ ಮೂರ್ಖತನಕ್ಕೆ ಕನ್ನಡಿ ಹಿಡಿಯುವ ಅತ್ಯಂತ ಮಾರ್ಮಿಕ ಹಾಗೂ ನಗೆಯುಕ್ಕಿಸುವ ಒಂದು ಕಥೆ. ಹಿಂದೆ ಹಳ್ಳಿಯೊಂದರಲ್ಲಿ ಬಡ ಬ್ರಾಹ್ಮಣನೊಬ್ಬ ವಾಸವಾಗಿದ್ದನು.

ಆತನಿಗೆ ದಾರಿದ್ರ್ಯದ ಬೇಗೆ ತಡೆಯಲಾರದೆ ತಪಸ್ಸಿಗೆ ಕುಳಿತನು. ಆತನ ನಿಷ್ಠೆಗೆ ಮೆಚ್ಚಿದ ದೇವತೆಯು ಪ್ರತ್ಯಕ್ಷಳಾಗಿ, ಭಕ್ತನೇ, ನಿನ್ನ ಭಕ್ತಿಗೆ ಮೆಚ್ಚಿದೆ. ನಿನಗೆ ಬೇಕಾದ ಮೂರು ವರಗಳನ್ನು ಕೇಳು, ದಯ ಪಾಲಿಸುತ್ತೇನೆ ಎಂದು ಅನುಗ್ರಹಿಸಿದಳು. ಇದ್ದಕ್ಕಿದ್ದಂತೆ ಒಲಿದು ಬಂದ ಅದೃಷ್ಟವನ್ನು ಕಂಡು ಬ್ರಾಹ್ಮಣನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆ ಕ್ಷಣದಲ್ಲಿ ಏನು ಕೇಳಬೇಕೆಂಬ ಗೊಂದಲ ಮೂಡಿ, ಅಮ್ಮಾ, ನಾನು ಮನೆಗೆ ಹೋಗಿ ನನ್ನ ಹೆಂಡತಿಯೊಂದಿಗೆ ಸಮಾಲೋಚಿಸಿ ಈ ವರಗಳನ್ನು ಕೇಳಿಕೊಳ್ಳುತ್ತೇನೆ ಎಂದು ಮನೆಗೆ ಓಡಿದನು.

ಇದನ್ನೂ ಓದಿ: Roopa Gururaj Column: ಪಂಚತಂತ್ರ, ಹಿತೋಪದೇಶ, ವಿಕ್ರಮ ಕಥೆಗಳ ಪ್ರೇರಣೆ ಕಥಾಸರಿತ್ಸಾಗರ

ಮನೆಗೆ ಬಂದವನೇ ಪತ್ನಿಗೆ ನಡೆದದ್ದನ್ನೆಲ್ಲ ವಿವರಿಸಿ, ನಮಗೆ ಮೂರು ವರಗಳು ಸಿಕ್ಕಿವೆ; ಅಮರತ್ವ, ಅಪಾರ ಸಂಪತ್ತು, ಸುಖ-ಶಾಂತಿ-ಹೀಗೆ ಬದುಕಿಗೆ ಶ್ರೇಷ್ಠವಾದುದನ್ನು ಕೇಳೋಣ ಎಂದನು. ಆದರೆ ಆತನ ಪತ್ನಿಗೆ ಇದ್ದದ್ದು ಕೇವಲ ಬಾಹ್ಯ ಸೌಂದರ್ಯದ ಮೇಲಿನ ವ್ಯಾಮೋಹ. ಆಕೆ, ಸಂಪತ್ತು ಇದ್ದರೆ ಸಾಲದು, ಜಗತ್ತಿನಲ್ಲಿ ನನ್ನನ್ನು ಮೀರಿಸುವ ಸುಂದರಿ ಇರಬಾರದು. ನನ್ನ ರೂಪವನ್ನು ಕಂಡು ದೇವತೆಗಳೂ ಅಸೂಯೆ ಪಡಬೇಕು. ಆದ್ದರಿಂದ ಮೊದಲನೇ ವರದಲ್ಲಿ ನನಗೆ ಅಪ್ರತಿಮ ಸೌಂದರ್ಯ ಮತ್ತು ಯೌವನವನ್ನು ದಯಪಾಲಿಸುವಂತೆ ಕೇಳಿ! ಎಂದು ಹಠ ಹಿಡಿದಳು.

ಹೆಂಡತಿಯ ಮಾತು ಕೇಳಿದ ಬ್ರಾಹ್ಮಣನು ಮೊದಲನೇ ವರವನ್ನು ಬಳಸಿ ಆಕೆಗೆ ಅದ್ಭುತ ಲಾವಣ್ಯ ವನ್ನು ಕೋರಿದನು. ತಕ್ಷಣವೇ ಆಕೆ ಅಪ್ಸರೆಯಂತೆ ಸುಂದರಿಯಾಗಿ ಮಾರ್ಪಟ್ಟಳು. ಆದರೆ ದುರಂತ ವೆಂದರೆ, ಆಕೆಯ ಈ ಅತಿರೇಕದ ಸೌಂದರ್ಯದ ಸುದ್ದಿ ಹರಡಿ, ಆ ಊರಿನ ರಾಜನ ಕಿವಿಗೆ ಬಿತ್ತು. ರಾಜನು ತಕ್ಷಣವೇ ಸೈನಿಕರನ್ನು ಕಳುಹಿಸಿ ಆಕೆಯನ್ನು ಅರಮನೆಗೆ ಎತ್ತಿಸಿಕೊಂಡು ಹೋಗಿ ಬಿಟ್ಟನು! ಬಡತನವಾದರೂ ಸರಿ, ಕಷ್ಟ ಸುಖಗಳಲ್ಲಿ ಸಹಭಾಗಿಯಾಗಿದ್ದ ಹೆಂಡತಿ ಕೂಡ ಕೈ ಬಿಟ್ಟು ಹೋದಂತೆ ಆಯಿತು.

ಜೊತೆಗೆ ಮೊದಲ ವರವೂ ವ್ಯರ್ಥವಾಯಿತು ಎಂದು ಗಾಬರಿಗೊಂಡ ಬ್ರಾಹ್ಮಣನಿಗೆ ಏನೂ ತೋಚದಂತಾಯಿತು. ಆವೇಶ, ಆತಂಕದಲ್ಲಿ ಆತ ಎರಡನೇ ವರವನ್ನು ಬಳಸಿ, ರಾಜನ ಅಂತಃಪುರ ಸೇರಿರುವ ನನ್ನ ಹೆಂಡತಿ ತಕ್ಷಣವೇ ಒಂದು ವಿಕಾರವಾದ ಹೆಣ್ಣು ಹಂದಿಯಾಗಿ ಬದಲಾಗಲಿ! ಎಂದು ಬೇಡಿದನು. ತಕ್ಷಣವೇ ಅರಮನೆಯಲ್ಲಿ ಆಕೆ ಹಂದಿಯಾಗಿ ಮಾರ್ಪಟ್ಟು, ಹೆದರಿದ ರಾಜಭಟರು ಆಕೆಯನ್ನು ಬೆತ್ತಗಳಿಂದ ಹೊಡೆದು ಅರಮನೆಯಿಂದ ಹೊರದಬ್ಬಿದರು.

ತನ್ನ ಮನೆ ಬಾಗಿಲಿಗೆ ಹಂದಿಯ ರೂಪದಲ್ಲಿ ಅಳುತ್ತಾ ಓಡಿಬಂದ ಹೆಂಡತಿಯನ್ನು ನೋಡಿ ಬ್ರಾಹ್ಮಣನಿಗೆ ಕರುಳು ಚುರುಕ್ ಎಂದಿತು. ಈಗ ಕೈಯಲ್ಲಿ ಉಳಿದದ್ದು ಕೇವಲ ಒಂದೇ ಒಂದು ಕೊನೆಯ ವರ. ಆ ವರದಿಂದ ಆತ ಐಶ್ವರ್ಯವನ್ನಾಗಲಿ, ರಾಜಪದವಿಯನ್ನಾಗಲಿ ಕೇಳಲು ಸಾಧ್ಯವೇ ಇರಲಿಲ್ಲ; ಹೆಂಡತಿಯನ್ನು ಆ ಸ್ಥಿತಿಯ ಬಿಡಲೂ ಆಗಲಿಲ್ಲ. ಅನಿವಾರ್ಯವಾಗಿ ಆತ ತನ್ನ ಮೂರನೇ ವರವನ್ನು ಬಳಸಿ, ನನ್ನ ಹೆಂಡತಿ ಮೊದಲಿನಂತೆ ಸಾಮಾನ್ಯ ಮಾನವ ರೂಪಕ್ಕೆ ಮರಳಲಿ ಎಂದು ಬೇಡಿಕೊಂಡನು. ಆಕೆ ಮರಳಿ ಮೊದಲಿನಂತಾದಳು.

ದೇವತೆ ನೀಡಿದ ಮೂರು ವರಗಳೂ ಮುಗಿದೇ ಹೋದವು; ಇಬ್ಬರೂ ಮತ್ತೆ ಅದೇ ಹಳೆಯ ಬಡತನ, ಅದೇ ಹಳೆಯ ಜೋಪಡಿಯಲ್ಲಿ ಮೊದಲಿನಂತೆಯೇ ಇರುವಂತಾಯಿತು. ಬದುಕಿನಲ್ಲಿ ನಮಗೆ ಹಲವು ಬಾರಿ ಅದ್ಭುತ ಅವಕಾಶಗಳು ಎದುರಾಗುತ್ತವೆ. ಆದರೆ ಆ ಕ್ಷಣದಲ್ಲಿ ಕ್ಷಣಿಕ ಆಡಂಬರ ಅಥವಾ ಅಹಂಕಾರ ನಮ್ಮ ಬುದ್ಧಿ ಮಂಕಾಗಿಸಿದ್ದರೆ ಬಂದ ಅತ್ಯುತ್ತಮ ಅವಕಾಶಗಳೂ ವ್ಯರ್ಥ ವಾಗಿ ಕರಗಿಹೋಗುತ್ತವೆ.

ಏನು ಬೇಕು ಎಂಬುದಕ್ಕಿಂತ, ಯಾವುದು ಶಾಶ್ವತ ಮತ್ತು ಹಿತಕರ ಎಂಬುದನ್ನು ಅರಿಯುವ ವಿವೇಕ ನಮ್ಮಲ್ಲಿರಬೇಕು. ಅವಕಾಶ ಸಿಕ್ಕಾಗ ಕೇವಲ ಹೊರಗಿನ ಆಡಂಬರವನ್ನು ಬೆನ್ನಟ್ಟುವ ಮನಸ್ಥಿತಿ ನಮ್ಮನ್ನು ಮತ್ತಷ್ಟು ಪಾತಾಳಕ್ಕೆ ತಳ್ಳುತ್ತದೆ. ಕೈಲಿದ್ದ ಅಮೂಲ್ಯ ವರಗಳನ್ನು ಕಳೆದುಕೊಂಡು ಮತ್ತೆ ಶೂನ್ಯಕ್ಕೆ ಮರಳುವ ಮುನ್ನ, ನಮ್ಮ ಆಸೆಗಳ ಮೇಲೆ ವಿವೇಕದ ಲಗಾಮು ಹಾಕಿಕೊಳ್ಳುವುದೇ ಜಾಣತನ. ದೊರೆತ ಸದವಕಾಶವನ್ನು ಸನ್ಮಾರ್ಗಕ್ಕೆ ಬಳಸುವುದೇ ನಿಜವಾದ ಸಾರ್ಥಕತೆ.