ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಪಂಚತಂತ್ರ ಕತೆಗಳು: ಕತ್ತೆ, ನರಿ ಮತ್ತು ಸಿಂಹ

ವೈದ್ಯರು ‘ಕತ್ತೆಯ ಕಿವಿ ಮತ್ತು ಹೃದಯದ ಮಾಂಸ ವನ್ನು ತಿಂದರೆ ಈ ರೋಗ ವಾಸಿಯಾಗುತ್ತದೆ’ ಎಂದಿದ್ದಾರೆ. ನೀನು ಹೇಗಾ ದರೂ ಮಾಡಿ ಒಂದು ಕತ್ತೆಯನ್ನು ಇಲ್ಲಿಗೆ ಕರೆದು ಕೊಂಡು ಬಾ’ ಎಂದು ಆಜ್ಞಾಪಿಸಿತು. ನರಿಯು ಆಹಾರ ಹುಡುಕುತ್ತಾ ಹತ್ತಿರದ ಹಳ್ಳಿಗೆ ಬಂತು. ಅಲ್ಲಿ ಒಣ ಹುಲ್ಲು ತಿನ್ನುತ್ತಾ ನಿಂತಿದ್ದ ಲಂಬಕರ್ಣ ಎಂಬ ಬಡಕಲು ಕತ್ತೆಯನ್ನು ಕಂಡ ನರಿಗೆ ಉಪಾಯವೊಂದು ಹೊಳೆಯಿತು.

ಪಂಚತಂತ್ರ ಕತೆಗಳು: ಕತ್ತೆ, ನರಿ ಮತ್ತು ಸಿಂಹ

-

ಒಂದೊಳ್ಳೆ ಮಾತು

ದಟ್ಟವಾದ ಅರಣ್ಯವೊಂದರಲ್ಲಿ ಕರಾಲಕೇಸರ ಎಂಬ ಬಲಿಷ್ಠ ಸಿಂಹವೊಂದು ವಾಸವಾಗಿತ್ತು. ಅದಕ್ಕೆ ಸದಾ ಜೊತೆಯಾಗಿ ಧೂಸರಕ ಎಂಬ ಚತುರ ನರಿಯೊಂದು ಸೇವೆ ಮಾಡುತ್ತಾ, ಸಿಂಹ ಬೇಟೆಯಾಡಿ ಬಿಟ್ಟ ಉಳಿದ ಮಾಂಸವನ್ನು ತಿಂದು ಬದುಕುತ್ತಿತ್ತು. ಒಂದು ದಿನ ಸಿಂಹಕ್ಕೆ ಚರ್ಮರೋಗ ಅಂಟಿಕೊಂಡು, ಅದು ನಿತ್ರಾಣವಾಗಿ ನಡೆಯಲೂ ಆಗದ ಸ್ಥಿತಿಗೆ ತಲುಪಿತು. ಸಿಂಹಕ್ಕೆ ಬೇಟೆಯಾಡಲು ಸಾಧ್ಯವಾಗದಿದ್ದಾಗ, ಜೊತೆಯಲ್ಲಿದ್ದ ನರಿಗೂ ಹಸಿವು ಕಾಡಲಾರಂಭಿಸಿತು. ಆಗ ಸಿಂಹವು ನರಿಯನ್ನು ಕರೆದು, ‘ಮಿತ್ರನೇ, ನನಗೆ ತೀವ್ರ ನಿಶ್ಯಕ್ತಿಯಾಗಿದೆ.

ವೈದ್ಯರು ‘ಕತ್ತೆಯ ಕಿವಿ ಮತ್ತು ಹೃದಯದ ಮಾಂಸ ವನ್ನು ತಿಂದರೆ ಈ ರೋಗ ವಾಸಿಯಾಗುತ್ತದೆ’ ಎಂದಿದ್ದಾರೆ. ನೀನು ಹೇಗಾ ದರೂ ಮಾಡಿ ಒಂದು ಕತ್ತೆಯನ್ನು ಇಲ್ಲಿಗೆ ಕರೆದು ಕೊಂಡು ಬಾ’ ಎಂದು ಆಜ್ಞಾಪಿಸಿತು. ನರಿಯು ಆಹಾರ ಹುಡುಕುತ್ತಾ ಹತ್ತಿರದ ಹಳ್ಳಿಗೆ ಬಂತು. ಅಲ್ಲಿ ಒಣ ಹುಲ್ಲು ತಿನ್ನುತ್ತಾ ನಿಂತಿದ್ದ ಲಂಬಕರ್ಣ ಎಂಬ ಬಡಕಲು ಕತ್ತೆಯನ್ನು ಕಂಡ ನರಿಗೆ ಉಪಾಯವೊಂದು ಹೊಳೆಯಿತು.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಹಾವು ಮತ್ತು ಕಪ್ಪೆಗಳ ರಾಜ

ನರಿಯು ಕತ್ತೆಯ ಬಳಿಗೆ ಹೋಗಿ ನಮ್ರವಾಗಿ, ‘ಅಯ್ಯೋ ಮಿತ್ರನೇ, ನೀನೇಕೆ ಈ ಬಿಸಿಲಿನಲ್ಲಿ ಒಣ ಹುಲ್ಲು ತಿನ್ನುತ್ತಾ ಒಡೆಯನಿಂದ ಪೆಟ್ಟು ತಿಂದು ಕಷ್ಟ ಪಡುತ್ತಿದ್ದೀಯಾ? ನನ್ನೊಂದಿಗೆ ಕಾಡಿಗೆ ಬಾ, ಅಲ್ಲಿ ಹಚ್ಚಹಸಿರಿನ ಮೃದುವಾದ ಹುಲ್ಲುಗಾವಲಿದೆ ಮತ್ತು ನಿನ್ನಂತಹ ಸುಂದರವಾದ ಮೂರು ಹೆಣ್ಣು ಕತ್ತೆಗಳು ನಿನ್ನ ಬರುವಿಕೆಗಾಗಿ ಕಾಯುತ್ತಿವೆ!’ ಎಂದು ಸಿಹಿ ಮಾತುಗಳಿಂದ ಪುಸಲಾಯಿಸಿತು.

ನರಿಯ ಬಲೆಗೆ ಬಿದ್ದ ಕತ್ತೆಯು ಅದನ್ನು ಹಿಂಬಾಲಿಸಿತು. ಗುಹೆಯ ಬಳಿ ಕಾದು ಕುಳಿತಿದ್ದ ಸಿಂಹವು ಕತ್ತೆಯನ್ನು ಕಂಡ ತಕ್ಷಣ ಆತುರದಿಂದ ಅದರ ಮೇಲೆ ಎರಗಿತು. ಆದರೆ ನಿಶ್ಯಕ್ತಿಯಲ್ಲಿದ್ದ ಸಿಂಹದ ಗುರಿ ತಪ್ಪಿ, ಕತ್ತೆಗೆ ಸಣ್ಣ ಗಾಯವಷ್ಟೇ ಆಯಿತು. ಜೀವಭಯದಿಂದ ಬೆಚ್ಚಿಬಿದ್ದ ಕತ್ತೆಯು ಒಂದೇ ಸಮನೆ ಓಡಿ ಮತ್ತೆ ಹಳ್ಳಿಯನ್ನು ಸೇರಿ ಕೊಂಡಿತು. ನರಿಯು ಸಿಂಹದ ಮೇಲೆ ಕೋಪಗೊಂಡು, ‘ಪ್ರಭು, ಇಷ್ಟು ಆತುರಪಟ್ಟರೆ ಹೇಗೆ? ಈ ಬಾರಿ ನಾನು ಮತ್ತೆ ಕತ್ತೆಯನ್ನು ಕರೆತರುತ್ತೇನೆ, ಆದರೆ ನೀವು ತಾಳ್ಮೆಯಿಂದ ಕಾದಿದ್ದು ಸರಿಯಾದ ಸಮಯಕ್ಕೆ ದಾಳಿ ಮಾಡಬೇಕು’ ಎಂದು ಹೇಳಿ ಮತ್ತೆ ಹಳ್ಳಿಯತ್ತ ಹೊರಟಿತು.

ಹಳ್ಳಿಯಲ್ಲಿ ಗಾಯಗೊಂಡು ನಿಂತಿದ್ದ ಕತ್ತೆಯನ್ನು ಕಂಡ ನರಿಯು ಎಳ್ಳಷ್ಟೂ ಅಂಜದೆ ನಗುತ್ತಾ, ‘ಅಯ್ಯೋ ಮಿತ್ರನೇ, ನೀನೇಕೆ ಹೆದರಿ ಓಡಿಬಂದೆ? ಅಲ್ಲಿದ್ದದ್ದು ಸಿಂಹವಲ್ಲ, ನಿನ್ನನ್ನು ಪ್ರೀತಿಯಿಂದ ಅಪ್ಪಿಕೊಳ್ಳಲು ಓಡಿಬಂದ ಹೆಣ್ಣು ಕತ್ತೆ! ನೀನು ಓಡಿಹೋದದ್ದಕ್ಕೆ ಅದು ಬಹಳ ದುಃಖಿಸುತ್ತಿದೆ, ಮತ್ತೆ ಬಾ’ ಎಂದು ಮತ್ತೊಮ್ಮೆ ಸುಳ್ಳಿನ ಬಲೆ ಹೆಣೆಯಿತು. ಒಮ್ಮೆ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರೂ, ಬುದ್ಧಿ ಕಲಿಯದ ಮೂರ್ಖ ಕತ್ತೆಯು ಮತ್ತೆ ನರಿಯ ಮಾತುಗಳನ್ನು ನಂಬಿ ಕಾಡಿಗೆ ಮರಳಿತು. ಈ ಬಾರಿ ಎಚ್ಚರಿಕೆಯಿಂದ ಕಾದಿದ್ದ ಸಿಂಹವು ಒಂದೇ ಏಟಿಗೆ ಕತ್ತೆಯನ್ನು ಕೊಂದುಹಾಕಿತು. ಸಿಂಹವು ಸ್ನಾನ ಮಾಡಿ ಬರುವಷ್ಟರಲ್ಲಿ, ಹಸಿದಿದ್ದ ನರಿಯು ಕತ್ತೆಯ ಕಿವಿ ಮತ್ತು ಹೃದಯವನ್ನು ತಿಂದು ಮುಗಿಸಿತ್ತು!

ಸಿಂಹ ಹಿಂತಿರುಗಿ ಬಂದು, ‘ಕತ್ತೆಯ ಕಿವಿ ಮತ್ತು ಹೃದಯ ಎಲ್ಲಿ?’ ಎಂದು ಗರ್ಜಿಸಿದಾಗ, ಚತುರ ನರಿಯು ನಸುನಗುತ್ತಾ, ‘ಪ್ರಭು, ಈ ಕತ್ತೆಗೆ ಕಿವಿ ಮತ್ತು ಹೃದಯ (ಬುದ್ಧಿ) ಇದ್ದಿದ್ದರೆ, ಒಮ್ಮೆ ನಿಮ್ಮಿಂದ ಪೆಟ್ಟು ತಿಂದು ಪ್ರಾಣ ಉಳಿಸಿಕೊಂಡ ಮೇಲೂ ಮತ್ತೆ ಇಲ್ಲಿಗೆ ಬರುತ್ತಿತ್ತೇ?’ ಎಂದು ಉತ್ತರಿಸಿತು. ಸಿಂಹಕ್ಕೂ ಆ ಮಾತು ನಿಜವೆನಿಸಿ ಸುಮ್ಮನಾಯಿತು. ಅನುಭವವೇ ಜೀವನದ ಅತ್ಯಂತ ದೊಡ್ಡ ಪಾಠ. ಒಮ್ಮೆ ಒಂದು ಮೋಸದಿಂದ ಪೆಟ್ಟು ತಿಂದ ಮೇಲೆ, ಅದರಿಂದ ಪಾಠ ಕಲಿತು ಎಚ್ಚೆತ್ತುಕೊಳ್ಳುವುದು ಜಾಣತನ. ಆದರೆ ಹಳೆಯ ಕಹಿ ಅನುಭವವನ್ನು ಮರೆತು, ಮತ್ತೆ ಅದೇ ಸಿಹಿ ಮಾತುಗಳಿಗೆ ಮರುಳಾಗಿ ಅದೇ ತಪ್ಪನ್ನು ಪುನರಾವರ್ತಿಸಿದರೆ ನಮ್ಮಷ್ಟು ದಡ್ಡರು ಯಾರೂ ಇರುವುದಿಲ್ಲ. ಸಂಸ್ಕೃತದ ಸುಭಾಷಿತ ಹೇಳುವಂತೆ ‘ಸಕೃದ್ದುಷ್ಟಂ ತು ಯೋ ಮಿತ್ರಂ ಪುನಃ ಸಂಧಾತುಮಿಚ್ಛತಿ | ಸ ಮೃತ್ಯುಮೇವ ಗೃಹ್ಣಾತಿ ಗರ್ಭಮಶ್ವತರೀ ಯಥಾ’ (ಒಮ್ಮೆ ದ್ರೋಹ ಬಗೆದ ಅಥವಾ ಅಪಾಯ ತಂದೊಡ್ಡಿದವರನ್ನು ಯಾರು ಮತ್ತೆ ಕುರುಡಾಗಿ ನಂಬಿ ಜೊತೆಯಾಗುತ್ತಾರೋ, ಅವರು ತಮ್ಮ ಸಾವನ್ನು ತಾವೇ ಆಹ್ವಾನಿಸಿಕೊಳ್ಳುತ್ತಾರೆ).

ಇಂದಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳಿಂದ ಹಿಡಿದು ನಿತ್ಯದ ವ್ಯವಹಾರಗಳವರೆಗೆ, ಅತಿಯಾದ ಆಸೆ ಮತ್ತು ಸಿಹಿ ಮಾತುಗಳಿಗೆ ಮರುಳಾಗಿ ಒಮ್ಮೆ ಮೋಸ ಹೋದ ಮೇಲೂ ಮತ್ತೆ ಅದೇ ಬಲೆಗೆ ಬೀಳುವ ಪ್ರವೃತ್ತಿ ಎಲ್ಲೆಲ್ಲೂ ಕಾಣುತ್ತೇವೆ. ಮಕ್ಕಳಿಗೆ ಬಾಲ್ಯದಿಂದಲೇ ‘ಆಮಿಷಗಳಿಗೆ ಬಲಿಯಾಗದ ವಿವೇಚನೆ ಮತ್ತು ಒಮ್ಮೆ ಆದ ತಪ್ಪಿನಿಂದ ಪಾಠ ಕಲಿಯುವ ಬುದ್ಧಿವಂತಿಕೆ’ಯನ್ನು ಕಲಿಸಲು ಈ ಕಥೆ ಸಮಂಜಸ ವಾದದ್ದು.