Kiran Upadhyay Column: ಪ್ರಶಸ್ತಿ, ಪ್ರಶಸ್ತಿ ! ಕೊಡುವುದು ಯಾವಾಗ ?
ಕರ್ನಾಟಕದ ಪಾಲಿಗೆ ಈ ವಾರ ಪ್ರಶಸ್ತಿಗಳ ಸುರಿಮಳೆ. ಒಂದು ಕಡೆ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಗಳನ್ನು ಘೋಷಿಸಿದರೆ, ಅದಕ್ಕೂ ನಾಲ್ಕು ದಿನ ಮೊದಲು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯ ಘೋಷಣೆ ಆಯಿತು. ಅದರ ಬೆನ್ನ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರು ತಮಗೆ ಒಲಿದಿದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಯವಾಗಿಯೇ ನಿರಾಕರಿಸಿದರು

ಅಂಕಣಕಾರ ಕಿರಣ್ ಉಪಾಧ್ಯಾಯ

ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ಪ್ರಶಸ್ತಿ... ಪ್ರಶಸ್ತಿ... ಪ್ರಶಸ್ತಿ...!
ಕರ್ನಾಟಕದ ಪಾಲಿಗೆ ಈ ವಾರ ಪ್ರಶಸ್ತಿಗಳ ಸುರಿಮಳೆ. ಒಂದು ಕಡೆ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಗಳನ್ನು ಘೋಷಿಸಿದರೆ, ಅದಕ್ಕೂ ನಾಲ್ಕು ದಿನ ಮೊದಲು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯ ಘೋಷಣೆ ಆಯಿತು. ಅದರ ಬೆನ್ನ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರು ತಮಗೆ ಒಲಿದಿದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಯವಾಗಿಯೇ ನಿರಾಕರಿಸಿದರು. ಎಕ್ಸ್ (ಟ್ವಿಟರ್)ನಲ್ಲಿ ಅವರು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.
“ಗೌರವಾನ್ವಿತ ಕರ್ನಾಟಕ ಸರಕಾರ ಮತ್ತು ತೀರ್ಪುಗಾರರೇ, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆಯುವುದು ನಿಜಕ್ಕೂ ಒಂದು ಸೌಭಾಗ್ಯ. ಈ ಗೌರವಕ್ಕಾಗಿ ತೀರ್ಪುಗಾರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದರೆ ನಾನು ಹಲವಾರು ವರ್ಷಗಳಿಂದ ಪ್ರಶಸ್ತಿ ಪಡೆಯುವುದನ್ನು ನಿಲ್ಲಿಸಲು ನಿರ್ಣಯಿಸಿದ್ದೇನೆ.
ವಿವಿಧ ವೈಯಕ್ತಿಕ ಕಾರಣಗಳಿಂದಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಲೆಗಾಗಿ ತಮ್ಮ ಹೃದಯವನ್ನೇ ಧಾರೆ ಎರೆದ ಅನೇಕ ನಟರಿದ್ದಾರೆ ಮತ್ತು ಅವರು ನನಗಿಂತಲೂ ಹೆಚ್ಚು ಅರ್ಹರಾಗಿದ್ದಾರೆ. ಅಂಥವರಲ್ಲಿ ಯಾರಾದರೂ ಒಬ್ಬರು ಈ ಪ್ರಶಸ್ತಿ ಸ್ವೀಕರಿಸುವುದನ್ನು ನೋಡು ವುದು ನನಗೆ ಇನ್ನೂ ಹೆಚ್ಚಿನ ಸಂತೋಷವನ್ನು ನೀಡುತ್ತದೆ.
ಇದನ್ನೂ ಓದಿ: Kiran Upadhyay Column: ಅನಿವಾಸಿಗಳನ್ನು ಮನಃವಾಸಿಗಳನ್ನಾಗಿಸಿದ ಸಮ್ಮೇಳನ
ನಾನು ಯಾವುದೇ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ಜನರನ್ನು ರಂಜಿಸುವ ಕೆಲಸ ಮಾಡಿದ್ದೇನೆ. ತೀರ್ಪುಗಾರರು ನನ್ನ ಅಭಿನಯಕ್ಕೆ ನೀಡಿರುವ ಮನ್ನಣೆ, ನಾನು ಇನ್ನಷ್ಟು ಶ್ರಮಿಸಲು ಉತ್ತೇಜನ ನೀಡುತ್ತದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರತಿಯೊಬ್ಬ ತೀರ್ಪುಗಾರರಿಗೂ ನಾನು ಕೃತಜ್ಞ ನಾಗಿದ್ದೇನೆ. ನನ್ನ ನಿರ್ಧಾರ ಉಂಟುಮಾಡಬಹುದಾದ ಯಾವುದೇ ನಿರಾಸೆಗಾಗಿ ನಾನು ತೀರ್ಪು ಗಾರರ ಮತ್ತು ರಾಜ್ಯ ಸರಕಾರದ ಕ್ಷಮೆ ಯಾಚಿಸುತ್ತೇನೆ.
ಹಾಗೆಯೇ, ನೀವು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಮತ್ತು ನನ್ನ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬುತ್ತೇನೆ" ಎಂದು ತಮ್ಮ ಅನಿಸಿಕೆಯನ್ನು, ನಿರ್ಣಯವನ್ನು ಹಂಚಿ ಕೊಂಡಿದ್ದಾರೆ. ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸುದೀಪ್ ಈ ಮೊದಲೇ ಹೇಳಿ ದ್ದರೇ? ಗೊತ್ತಿಲ್ಲ.
ಏಕೆಂದರೆ ಬಹುತೇಕ ಪ್ರಶಸ್ತಿಗಳಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಪ್ರಶಸ್ತಿ ಪಡೆಯಲು ಅರ್ಜಿ ಸಲ್ಲಿಸುವಂಥ ದುರ್ದೈವ ಇನ್ನೊಂದಿಲ್ಲ. ಬಿಡಿ, ಪ್ರಶಸ್ತಿ ಬೇಡ ಎನ್ನುವವರು ಅರ್ಜಿಯನ್ನಂತೂ ಸಲ್ಲಿಸಿರಲಿಕ್ಕಿಲ್ಲ. ಆದರೆ ಸುದೀಪ್ ಹೇಳಿದ ಮಾತಿನಿಂದ ಕೆಲವರಾದರೂ ಪಾಠ ಕಲಿಯಬಹುದು ಎಂದು ನಂಬುತ್ತೇನೆ. ಕೆಲವು ಜನರನ್ನು ನೋಡಬೇಕು, ಯಾರೋ ಮಾಡಿದ್ದನ್ನು ತಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಾ, ಪ್ರಶಸ್ತಿಗಾಗಿ ಯಾರದ್ದೇ ಮುಂದೆ ಕೈಮುಗಿದು, ಶಿರ ಬಾಗಿಸಿ, ಮಂಡಿಯೂರಿ ಕುಳಿತುಕೊಳ್ಳುತ್ತಾರೆ.
ಬೆಣ್ಣೆ ಹೊಸೆದು, ಹಲ್ಲು ಕಿಸಿದು, ಶರಣಾಗತರಾಗುತ್ತಾರೆ. ಅಥವಾ ಹಿಂದೆ ಮುಂದೆ ಸುತ್ತಿ, ಕಾಡಿ-ಬೇಡಿಯಾದರೂ ಪ್ರಶಸ್ತಿ-ಸನ್ಮಾನದ ಭಿಕ್ಷೆ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತಾರೆ. “ನಾನು ಅಂಥವನು, ಇಂಥವನು, ಸಂತೆಯಲ್ಲಿ ಮೆಂತೆ ಕದ್ದವನು" ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರ ಮಾತನ್ನು ಕೇಳಿದರೆ, ಈ ಪ್ರಪಂಚ ನಡೆಯುತ್ತಿರುವುದೇ ಅವರಿಂದ ಎನ್ನುವಂತಿರುತ್ತದೆ.
ಅವರೇನಾದರೂ ಹುಟ್ಟದಿದ್ದರೆ ಪ್ರಾಯಶಃ ಈ ಭೂಮಿಯೂ ಸುತ್ತುತ್ತಿರಲಿಲ್ಲ ಎನ್ನುವಂತೆ ಮಾತ ನಾಡುತ್ತಾರೆ. ಆ ಕಾರಣಕ್ಕಾಗಿ ತಮಗೆ ಪ್ರಶಸ್ತಿ ಕೊಡಿ ಎಂದು ಗೋಗರೆಯುತ್ತಾರೆ. ‘ತಾವು ಮಾಡುವ ಕೆಲಸ ಮಾತನಾಡಬೇಕೇ ವಿನಾ ಮಾತನಾಡುವುದೇ ಕೆಲಸವಾಗಬಾರದು’ ಎನ್ನುವ ಲವಮಾತ್ರದ ಅರಿವೂ ಇಂಥವರಿಗೆ ಇರುವುದಿಲ್ಲ.
ಯಾರಾದರೂ ಈ ರೀತಿಯ ಮಾತನ್ನಾಡಿದರೆ, ಅಲ್ಲಿಯೇ ಅವರನ್ನು ಪ್ರಶಸ್ತಿ-ಸನ್ಮಾನಗಳಿಗೆ ಅನರ್ಹ ರೆಂದು ಪರಿಗಣಿಸಬೇಕು. ಅಥವಾ, ಪ್ರಶಸ್ತಿ-ಸನ್ಮಾನ ನೀಡುವ ಸಂಸ್ಥೆಯವರು ‘ಸನ್ಮಾನ ಬಯಸು ವವರಿಗಾಗಿ ಸನ್ಮಾನ’, ‘ಪ್ರಶಸ್ತಿ ಬಯಸುವವರಿಗಾಗಿ ಪ್ರಶಸ್ತಿ’ ಎಂಬ ಪ್ರತ್ಯೇಕ ವಿಭಾಗ ಇಟ್ಟುಕೊಂಡು, ಆ ವಿಭಾಗದ ಅಡಿಯಲ್ಲಿ ಅಂಥವರಿಗೆ ಸನ್ಮಾನ ಮಾಡಬೇಕು, ಪ್ರಶಸ್ತಿ ನೀಡಬೇಕು.
ಇವರಿಗೆಲ್ಲ ತಾವು ಮಾಡಿದ್ದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಕೆಲಸ ಬೇರೆಯವರು ಮಾಡಿದ್ದಾರೆ ಎನ್ನುವ ಸಣ್ಣ ಕಲ್ಪನೆಯೂ ಇರುವುದಿಲ್ಲ. ತಾವು ಮಾಡಿದ್ದೇ ಶ್ರೇಷ್ಠ ಎನ್ನುವ ತಪ್ಪು ಕಲ್ಪನೆಯಲ್ಲಿ ಯೋ ಅಥವಾ ಧಿಮಾಕಿನಲ್ಲಿಯೋ ಮುಳುಗಿರುತ್ತಾರೆ. ಇಂಥವರ ಪರಿಚಯದಲ್ಲಿ ಎಲ್ಲಿ, ಯಾವಾಗ, ಎಷ್ಟೆಷ್ಟು ಪ್ರಶಸ್ತಿ-ಸನ್ಮಾನ ದೊರಕಿದೆ ಎಂಬ ವಿಷಯ ಅಗಾಧವಾಗಿ ತುಂಬಿಕೊಂಡಿರು ತ್ತದೆಯೇ ವಿನಾ ಆ ಪ್ರಶಸ್ತಿಗಳೆಲ್ಲ ಯಾವ ಕೆಲಸಕ್ಕಾಗಿ ದೊರಕಿದ್ದು ಎಂಬುದರ ಕಿಂಚಿತ್ ಮಾಹಿತಿಯೂ ಇರುವುದಿಲ್ಲ.
ಸಮಸ್ಯೆ ಎಂದರೆ, ಇಂಥವರು ಕಣ್ಣು ಬಿಟ್ಟು ತಮ್ಮ ಅಕ್ಕ-ಪಕ್ಕದಲ್ಲಿ ಆಗುತ್ತಿರುವುದನ್ನು ಗಮನಿಸು ವುದೇ ಇಲ್ಲ. ಒಮ್ಮೆ ಕಣ್ಣು ತೆರೆದು ನೋಡಿದರೆ ಅವರಿಗೆ ತಾವು ಎಷ್ಟು ಕುಬ್ಜರು ಎಂಬ ಅರಿವಾಗ ಬಹುದು. ಆಗ ಆ ಸನ್ಮಾನಗಳಿಗೆಲ್ಲ ತಾವು ಅರ್ಹರಲ್ಲ ಎಂಬುದರ ಅರಿವೂ ಆಗಬಹುದು.ಇರಲಿ, ಇಂಥ ಪ್ರಶಸ್ತಿಗೆಲ್ಲ ಯಾರು ಅರ್ಹರು, ಯಾರು ಅರ್ಹರಲ್ಲ ಎಂಬುದರ ಕುರಿತಾಗಿ ಈಗ ಇಲ್ಲಿ ಚರ್ಚೆ ಬೇಡ. ಸದ್ಯಕ್ಕೆ ನಮ್ಮ ಮುಂದಿರುವ ವಿಷಯ ಬೇರೆ.
ರಾಜ್ಯ ಸರಕಾರದ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಿ ಆಗಿದೆ. ಅದು 2019ರ ರಾಜ್ಯ ಚಲನಚಿತ್ರ ಪ್ರಶಸ್ತಿ. ಅದೂ ಬರೋಬ್ಬರಿ ಐದು ವರ್ಷದ ನಂತರ ಘೋಷಣೆಯಾಗಿದೆ. ನಡುವೆ ಎರಡು ವರ್ಷ ಕೋವಿಡ್ ಮಹಾಮಾರಿಯಿಂದಾಗಿ ವಿಳಂಬವಾಯಿತು ಎಂದು ಹೇಳಿದರೂ, ಪ್ರಶಸ್ತಿಯನ್ನು ಘೋಷಿಸುವುದಕ್ಕೆ ಯಾವ ಅಡೆ-ತಡೆಯೂ ಇರಲಿಲ್ಲ. ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಮಾತ್ರ ಆ ಸಂದರ್ಭದಲ್ಲಿ ತೊಂದರೆಯಾಗಿತ್ತು. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, 2018ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವೇ ಇನ್ನೂ ನಡೆದಿಲ್ಲ.
ಹಾಗಿರುವಾಗ, 2019ರ ಪ್ರಶಸ್ತಿ ಪ್ರದಾನ ಯಾವಾಗ ಆಗುತ್ತದೆಯೋ ದೇವರೇ ಬಲ್ಲ! ಇನ್ನು ನಂತರದ 2020, 21, ... ಹೀಗೆ ಇನ್ನೂ ಐದು ವರ್ಷಗಳ ಪ್ರಶಸ್ತಿಗಳ ಘೋಷಣೆ ಆಗುವುದರ ಜತೆಗೆ, ಅದರ ವಿತರಣೆಯೂ ಆಗಬೇಕಾಗಿದೆ. ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿರುವಾಗಲೇ 2018ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಾಗಿತ್ತು. ಆದರೆ ಸಮಾರಂಭ ನಡೆಯಬೇಕಾದ ದಿನವೇ ಮಂಡ್ಯದಲ್ಲಿ ಒಂದು ದುರ್ಘಟನೆ ನಡೆದಿತ್ತು.
ಆ ದುರ್ಘಟನೆಯಲ್ಲಿ ಸಾಕಷ್ಟು ಸಾವು ನೋವುಗಳೂ ಆಗಿದ್ದವು. ಆದ್ದರಿಂದ ಸಮಾರಂಭ ಮುಂದೂ ಡಲ್ಪಟ್ಟಿತ್ತು. ಇಡೀ ರಾಜ್ಯವೇ ದುಃಖದಲ್ಲಿರುವ ಸಂದರ್ಭದಲ್ಲಿ ಸಭೆ-ಸಮಾರಂಭಗಳನ್ನು ಮಾಡು ವುದು ಸರಿಯಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಪ್ರಶಸ್ತಿ ವಿತರಣೆಗೆ ಕಳೆದ ಆರು ವರ್ಷ ದಲ್ಲಿ ಒಂದು ದಿನವೂ ಸಿಗಲಿಲ್ಲವೇ? ಅಥವಾ ಇದರ ವಿತರಣೆ ಅಷ್ಟು ಅವಶ್ಯಕ ಎಂದು ಯಾರಿಗೂ ಅನಿಸಲಿಲ್ಲವೇ? ಅವಶ್ಯಕ ಅಲ್ಲವಾಗಿದ್ದರೆ ಇಂಥ ಪ್ರಶಸ್ತಿಗಳನ್ನು ಘೋಷಿಸಿಯಾದರೂ ಏನು ಪ್ರಯೋಜನ? ಒಮ್ಮೆ ಯೋಚಿಸಿ, ಆರು ವರ್ಷದ ಹಿಂದೆ ಉತ್ತಮ ಬಾಲನಟ, ನಟಿ ಪ್ರಶಸ್ತಿ ಪಡೆದ ವರು ಇಂದು ಯುವಕರಾಗಿ ಕಾಲೇಜು ಮುಗಿಸಿರಲಿಕ್ಕೂ ಸಾಕು.
ಅತ್ಯುತ್ತಮ ನಾಯಕ-ನಾಯಕಿ ಪ್ರಶಸ್ತಿ ಪಡೆದವರು ಬಹುಶಃ ಈಗ ಪೋಷಕ ಪಾತ್ರ ಮಾಡುತ್ತಿರ ಬಹುದು. ಉತ್ತಮ ಪೋಷಕ ಪಾತ್ರ ಪ್ರಶಸ್ತಿಗೆ ಭಾಜನರಾದವರು ಇಂದು ಪ್ರಶಸ್ತಿ ಸ್ವೀಕರಿಸುವ ಸ್ಥಿತಿಯಲ್ಲಿ ಇದ್ದಾರೋ-ಇಲ್ಲವೋ, ಕೊನೆ ಪಕ್ಷ ಅವರಲ್ಲಿ ನಡೆದಾಡುವ ತ್ರಾಣವಾದರೂ ಇದೆಯೋ ಗೊತ್ತಿಲ್ಲ. ಇದರಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಪ್ರಶಸ್ತಿಯೂ ಸೇರಿರುತ್ತದೆ. ಪ್ರಶಸ್ತಿ ಘೋಷಿ ಸಿದ ನಂತರ, ಪಡೆಯಬೇಕಾದವರು ಶಿವನಪಾದ ಸೇರುವುದಕ್ಕಿಂತ ಮುಂಚೆ ವಿತರಣೆ ಆಗಬೇಕ ಲ್ಲವೇ? ಇಲ್ಲವಾದರೆ ಆ ಪ್ರಶಸ್ತಿಗೂ ಸಂತೆಯಲ್ಲಿರುವ ತರಕಾರಿಗೂ ಏನು ವ್ಯತ್ಯಾಸ? ಎಲ್ಲರಿಗೆ ಅಲ್ಲ ದಿದ್ದರೂ, ಕೆಲವರಿಗಾದರೂ ಪ್ರಶಸ್ತಿಯ ಜತೆಗೆ ಸಿಗುವ ಹಣದ ಅವಶ್ಯಕತೆ ಇರುತ್ತದೆ.
ಅದನ್ನು ಅವರು ಪುನಃ ತೊಡಗಿಸಿಕೊಳ್ಳಬಹುದು ಅಥವಾ ಅವರ ಮುಂದಿನ ಜೀವನಕ್ಕೆ ಅದು ಯಾವುದೋ ಒಂದು ರೀತಿಯಲ್ಲಿ ಉಪಯೋಗವಾಗಬಹುದು. ಈ ಹಣ ಸರಕಾರದ ಬಳಿಯೇ ಐದು-ಆರು ವರ್ಷ ಉಳಿದುಕೊಂಡರೆ, ಪ್ರಶಸ್ತಿ ಪಡೆದವನಿಗೆ ಏನು ಲಾಭ? ಇದು ಕೇವಲ ಚಲನಚಿತ್ರ ಪ್ರಶಸ್ತಿಗೆ ಸೀಮಿತವಲ್ಲ.
2015-16ರ ಕರಕುಶಲ ಅಭಿವೃದ್ಧಿ ನಿಗಮದ ಪ್ರಶಸ್ತಿಯನ್ನು ಈಗ ಒಂದು ವರ್ಷದ ಹಿಂದೆ ನೀಡಲಾ ಯಿತು. ಈ ಪ್ರಶಸ್ತಿ ಪ್ರದಾನ ಸಮಾರಂಭ ಎರಡೋ-ಮೂರೋ ಬಾರಿ ನಿಗದಿಯಾಗಿ ಮುಂದೂಡ ಲ್ಪಟ್ಟಿತ್ತು. ಇನ್ನೂ ಎಷ್ಟು ಪ್ರಶಸ್ತಿಗಳು ಇದೇ ಸ್ಥಿತಿಯಲ್ಲಿ ಇವೆಯೋ ಯಾರಿಗೆ ಗೊತ್ತು? ರಾಜ್ಯದಲ್ಲಿ ಇಂದು ಹುಡುಕಿದರೆ, ಬೇರೆ ವಿಭಾಗದಲ್ಲಿಯೂ ಇಂಥ ಅಪಸವ್ಯ ಕಂಡುಬರಬಹುದು.
ಕೆಲವು ವರ್ಷಗಳ ನಂತರ ಪ್ರಶಸ್ತಿಯನ್ನು ಘೋಷಿಸುತ್ತಾರೆ, ಆದರೆ ಸಮಯಕ್ಕೆ ಸರಿಯಾಗಿ ಅದನ್ನು ಅವರಿಗೆ ತಲುಪಿಸುವುದಿಲ್ಲ. ಸಮಾರಂಭಕ್ಕಾಗಿ ಕಾಯಿಸುತ್ತಾರೆ. ಸಮಾರಂಭವನ್ನು ಏರ್ಪಡಿಸಿ, ಪ್ರಶಸ್ತಿ ಪ್ರದಾನ ಮಾಡಿದರೆ ಒಳ್ಳೆಯದೇ. ಆದರೆ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟರೆ, 3 ತಿಂಗಳ ಒಳಗೋ, 6 ತಿಂಗಳ ಒಳಗೋ ಅದನ್ನು ಹೇಗಾದರೂ ವಿತರಿಸಿದರೆ ಒಳ್ಳೆಯದು.
ಇಲ್ಲವಾದರೆ, ಸಂಬಂಧಪಟ್ಟ ಕಚೇರಿಯಲ್ಲಿಯೇ, ಅ ಇರುವ ಗಣ್ಯರನ್ನು ಕರೆದು, ಪ್ರಶಸ್ತಿಯನ್ನು ಯಾಕೆ ವಿತರಿಸುವುದಿಲ್ಲ ಎಂದು ಅರ್ಥವಾಗುವುದಿಲ್ಲ. ಸಮಾರಂಭಗಳಿಗೆ ಅಂಥ ಖರ್ಚು ಹಾಕಲು ಆಗುವುದಿಲ್ಲವೆಂದೋ, ಮುಖ್ಯಮಂತ್ರಿಯವರನ್ನೋ, ಸಂಬಂಧಪಟ್ಟ ಮಂತ್ರಿಗಳನ್ನೋ, ತಮಗೆ ಇಷ್ಟವಾದವರನ್ನೋ ಕರೆಸಿ ಅವರ ಜತೆ ತಾವೂ ವೇದಿಕೆಯಲ್ಲಿ ಕುಳಿತು, ಅವರ ಮುಂದೆ ತಾವೂ ಮೆರೆಯಲು ಆಗುವುದಿಲ್ಲವೆಂದೋ, ಸರಕಾರಿ ಖರ್ಚಿನಲ್ಲಿ ಒಂದು ಊಟ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೋ ಗೊತ್ತಿಲ್ಲ.
ಇದಕ್ಕೆ ಉತ್ತರವನ್ನು ಸಂಬಂಧಪಟ್ಟವರೇ ಹೇಳಬೇಕು. ಕೋವಿಡ್ ಮಹಾಮಾರಿಯ ನಂತರ 2-3 ವರ್ಷದ ಪ್ರಶಸ್ತಿಯನ್ನು ಒಟ್ಟಾಗಿ ಸೇರಿಸಿ ಕೊಟ್ಟ ಉದಾಹರಣೆ ಇದೆ. ಆ ಸಂದರ್ಭ ಹಾಗಿತ್ತು ಬಿಡಿ, ಅದಾಗಿ ಈಗ 3 ವರ್ಷ ಕಳೆಯಿತಲ್ಲ? ಈಗಲೂ ಯಾಕೆ ಹೀಗೆ? 2020ರ ನಂತರದ ಪ್ರಶಸ್ತಿಗಳ ಘೋಷಣೆ, ವಿತರಣೆ ಯಾವಾಗ? ಇನ್ನು ಇದನ್ನೆಲ್ಲ ಒಟ್ಟೊಟ್ಟಿಗೆ ಸೇರಿಸಿ ಕೊಡುತ್ತಾರೆಯೇ? ಕೋವಿ ಡ್ ಸಂದರ್ಭದದರೆ ಸರಿ, ಈಗ?ಇತ್ತೀಚೆಗಿನ ಕೆಲವು ಪ್ರಶಸ್ತಿಗಳನ್ನು ನೀವು ನೋಡಿದರೆ ಇಂಥ ಪ್ರಶಸ್ತಿ-ಸನ್ಮಾನಗಳು ಅರ್ಥವಿಲ್ಲದ್ದು ಎಂದು ನಿಮಗೆ ಅರ್ಥವಾಗುತ್ತದೆ.
100-200 ಜನರನ್ನು ಆಯ್ಕೆ ಮಾಡುವುದು, ಅವರನ್ನೆಲ್ಲ ಒಟ್ಟಿಗೆ ಕೂರಿಸಿ, ಒಬ್ಬರು ಶಾಲು ಹಾಕು ವುದು, ಒಬ್ಬರು ಟೋಪಿ ತೊಡಿಸುವುದು, ಇನ್ನೊಬ್ಬರು ಮಾಲೆ ಹಾಕುವುದು, ಮತ್ತೊಬ್ಬರು ಸ್ಮರಣಿಕೆ ನೀಡುವುದು. ಇದೇನು ಪ್ರಶಸ್ತಿ ಪ್ರದಾನ ಸಮಾರಂಭವೇ ಅಥವಾ ಸಾಮೂಹಿಕ ವಿವಾಹವೇ? ಕೊಟ್ಟಿಗೆಯಲ್ಲಿ ಕಟ್ಟಿದ ದನಕ್ಕೆ ಹುಲ್ಲು ಹಾಕುವಂತೆ ಪ್ರಶಸ್ತಿಗಳನ್ನು ನೀಡುತ್ತಾ ಹೋದರೆ, ಅದಕ್ಕೆ ಯಾವ ಬೆಲೆ ಇರುತ್ತದೆ? ಅದನ್ನು ಸನ್ಮಾನ ಎನ್ನುವುದಕ್ಕಿಂತ ಅವಮಾನ ಎನ್ನುವುದೇ ಸರಿ.
ಅಷ್ಟಕ್ಕೂ ಈ ರೀತಿಯ ಪ್ರಶಸ್ತಿ-ಸನ್ಮಾನಗಳನ್ನು ನೀಡುವುದು ಯಾಕಾಗಿ? ಅವರವರು ತಮ್ಮ ಕ್ಷೇತ್ರ ದಲ್ಲಿ ಮಾಡಿದ ಕೆಲಸವನ್ನು ಗುರುತಿಸಿ ಪ್ರಶಂಸಿಸಲು, ಹಾಗೆಯೇ ಅವರನ್ನೂ ಸೇರಿದಂತೆ ಇನ್ನಷ್ಟು ಜನರಿಗೆ ಇದರಿಂದ sfpUರ್ತಿ ಬರುವಂತಾಗಲಿ ಎಂದು. ಪ್ರಶಸ್ತಿ ಪಡೆದವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಿ, ಇನ್ನೊಂದಿಷ್ಟು ಸೇವೆ ಸಲ್ಲಿಸಲಿ ಎನ್ನುವ ಕಾರಣ ಕ್ಕಾಗಿ, ಅಲ್ಲವೇ? ಸಮಯಕ್ಕೆ ಸರಿಯಾಗಿ ಆ ಪ್ರಶಸ್ತಿಯನ್ನು ಕೊಡದೇ ಇದ್ದರೆ, ಪ್ರಶಸ್ತಿ ಕೊಡುವ ಉದ್ದೇಶ ಈಡೇರಿದಂತಾಗುತ್ತದೆಯೇ? ಒಂದು ಸಿನಿಮಾ ಮಾಡಿ 5-6 ವರ್ಷ ಖಾಲಿ ಕುಳಿತಿದ್ದ ನಂತರ, ಆ ನಿರ್ದೇಶಕನಿಗೂ ನಿರ್ಮಾಪಕನಿಗೂ ಪ್ರಶಸ್ತಿ ಕೊಟ್ಟು, ಅವನ ವಯಸ್ಸು ಹೆಚ್ಚಾಗಿ, ಉತ್ಸಾಹ ಕುಗ್ಗಿದಾಗ ಅವನಲ್ಲಿ ಯಾವ ರೀತಿಯ ಸ್ಪೂರ್ತಿಯನ್ನು ಪುನಃ ತುಂಬಬಹುದು? ಆತ ಮಾನಸಿಕ ವಾಗಿ ಸಿದ್ಧನಾಗಿರಬಹುದಾದರೂ ದೇಹ ಸಹಕರಿಸುತ್ತದೆಯೇ? ಸಿನಿಮಾ, ಪುಸ್ತಕ, ಇವೆಲ್ಲ ಬಿಸಿಬಿಸಿ ದೋಸೆಯಂತೆ. ದೋಸೆಯನ್ನು ಹೇಗೆ ಬಿಸಿ ಇರುವಾಗಲೇ ತಿನ್ನಬೇಕೋ, ಸಿನಿಮಾ ಹಾಗೂ ಪುಸ್ತಕ ಗಳನ್ನೂ ಬಿಡುಗಡೆಯಾದಾಗಲೇ ನೋಡಬೇಕು, ಕೊಳ್ಳಬೇಕು, ಓದಬೇಕು.
ಬಿಡುಗಡೆಯಾಗಿ 6 ತಿಂಗಳು, ಒಂದು ವರ್ಷದವರೆಗೆ ಜನ ಅದರ ಕಡೆಗೆ ಮುಖ ಮಾಡಬಹುದು. ಅದನ್ನು ಬಿಟ್ಟು, 5-6 ವರ್ಷದ ನಂತರ ಪ್ರಶಸ್ತಿ ಬಂದಿದೆ ಎಂಬ ಕಾರಣಕ್ಕೆ ಹಳೆಯ ಸಿನಿಮಾವನ್ನು ಹುಡುಕಿಕೊಂಡು ಜನ ಎಲ್ಲಿ ಹೋಗಬೇಕು? ಹಳೆಯ ಪುಸ್ತಕವನ್ನು ಹುಡುಕಿಕೊಂಡು ಜನ ಎಲ್ಲಿ ಅಲೆಯಬೇಕು? ಬಿಸಿಬಿಸಿ ಚಹಾ, ಕಾಫಿ ಕುಡಿಯಲು ಬಯಸುವವನು, ಆರಿಹೋದ ಉಪ್ಪಿಟ್ಟನ್ನೇ ತಿನ್ನಲು ಬಯಸದವನು, ಸ್ಮೃತಿಪಟಲದಿಂದ ಹಾರಿಹೋದ ಚಲನಚಿತ್ರವನ್ನು ಪುನಃ ನೋಡಲು ಬಯಸುತ್ತಾನೆಯೇ? ಪ್ರಶಸ್ತಿ-ಸನ್ಮಾನಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಬಾರದು!