ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಭಾಷೆ ಎಂಬುದು ಬುದ್ಧಿವಂತಿಕೆಯ ಲಕ್ಷಣವಲ್ಲ

ಭಾರತದಲ್ಲಿ 2 ಯೂನಿಕಾರ್ನ್ ಸಂಸ್ಥೆಗಳನ್ನು ಕಟ್ಟಿದ ಏಕೈಕ ವ್ಯಕ್ತಿ ಸಂದೀಪ್. ಸದ್ಯದ ಮಟ್ಟಿಗೆ ಆ ದಾಖಲೆಯನ್ನು ಯಾರೂ ಮುರಿದಿಲ್ಲ. 2024ರಲ್ಲಿ ಈ ಸಂಸ್ಥೆಗಳ ವಹಿವಾಟು ಕುಸಿತ ಕಂಡಿದೆ. ಪ್ರತಿ ಕುಸಿತವೂ ಹೊಸ ಜಿಗಿತಕ್ಕೆ ಮುನ್ನುಡಿ ಎನ್ನು ವಂತೆ, ಸಂದೀಪ್ ಮುಂದೆ ಇನ್ನಷ್ಟು ಎತ್ತರ ವನ್ನು ಏರುವುದರಲ್ಲಿ ಸಂಶಯವಿಲ್ಲ.

ಭಾಷೆ ಎಂಬುದು ಬುದ್ಧಿವಂತಿಕೆಯ ಲಕ್ಷಣವಲ್ಲ

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

Profile Ashok Nayak Mar 25, 2025 6:49 AM

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಹರಿಯಾಣದ ಮಧ್ಯಮ ವರ್ಗದ ಒಬ್ಬ ಹುಡುಗನಿಗೆ ಹರಿಯಾಣ್ವಿ ಮತ್ತು ಹಿಂದಿ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಬಂದರೂ, ಇಂಗ್ಲಿಷ್ ಭಾಷೆ ಯಲ್ಲಿ ಹೇಳಿಕೊಳ್ಳುವಂಥ ಪ್ರೌಢಿಮೆ ಇರಲಿಲ್ಲ. ಭಾಷೆ ಎಂಬುದು ಬುದ್ಧಿವಂತಿಕೆಯ ಲಕ್ಷಣ ವಲ್ಲ, ಅದು ಸಂವಹನ ಮಾಧ್ಯಮ ಅಂತ ಸಾಬೀತುಪಡಿಸುತ್ತದೆ ಈ ಕಥೆ, ಕ್ಷಮಿಸಿ ನೈಜ ಗಾಥೆ. ಇಂಗ್ಲಿಷ್ ಬರದಿದ್ದರೇನು? ಕನಸು ಕಾಣುವುದು, ನಮ್ಮೊಂದಿಗೆ ನಾವು ಚರ್ಚಿಸುವುದು ನಮ್ಮ ಮಾತೃಭಾಷೆಯಲ್ಲಿ ತಾನೇ? ಹುಡುಗನ ಕಣ್ಣುಗಳಲ್ಲಿ ಕನಸಿತ್ತು, ಕಸುವಿತ್ತು, ದೊಡ್ಡ ದಾಗಿ ಬೆಳೆಯಬೇಕು ಎನ್ನುವ ಹಸಿವಿತ್ತು. ಇವೆಲ್ಲಕ್ಕೂ ಪುಟವಿಟ್ಟಂತೆ ಕಷ್ಟಪಟ್ಟು ದುಡಿ ಯುವ ಮನಸ್ಸಿತ್ತು, ಹಂಬಲವಿತ್ತು. ಇಷ್ಟೆಲ್ಲಾ ಇದ್ದಾಗ ದೈವದ ಬೆಂಬಲ ಸಿಕ್ಕೇ ಸಿಗುತ್ತದೆ. ಈ ಹುಡುಗನ ವಿಷಯದಲ್ಲೂ ಹೀಗೇ ಆಯ್ತು ಕಣ್ರೀ!

ಈ ಹುಡುಗ ಭಾರತದಲ್ಲಿ ಒಂದಲ್ಲ ಎರಡು ಯೂನಿಕಾರ್ನ್ ಸಂಸ್ಥೆಗಳನ್ನು ಕಟ್ಟಿದ ಭೂಪ. ಖಾಸಗಿ ಸಂಸ್ಥೆಯ ಮೌಲ್ಯವು ಒಂದು ಬಿಲಿಯನ್ ಡಾಲರ್ ಅನ್ನು ಮೀರಿದರೆ (ಭಾರತೀಯ ಕರೆನ್ಸಿಯಲ್ಲಿ ಇದು 8400 ಕೋಟಿ ರುಪಾಯಿ ಆಗುತ್ತದೆ) ಅದನ್ನು ‘ಯೂನಿಕಾರ್ನ್’ ಎನ್ನ ಲಾಗುತ್ತದೆ.

‘ಶಾಪ್ ಕ್ಲೂ’ ಎಂಬ ‘ಇ-ಮಾರ್ಕೆಟ್’ ಮತ್ತು ಹಳೆಯ ಅಥವಾ ಬಳಸಿದ ಕಾರುಗಳನ್ನು ಕೊಳ್ಳಲು-ಮಾರಲು ಇರುವ ‘ಡ್ರೂಮ್’ ಎಂಬ ಒಂದು ‘ಆನ್‌ಲೈನ್ ಪ್ಲಾಟ್ ಫಾರ್ಮ್’ ಇವೇ ಆ ಎರಡು ಯೂನಿಕಾರ್ನ್ ಸಂಸ್ಥೆಗಳಾಗಿದ್ದವು. ‘ಡ್ರೂಮ್’ನ ‘ಗ್ರಾಸ್ ಮರ್ಚಂಡೈಸ್ ವ್ಯಾ ಲ್ಯೂ’ 20 ಸಾವಿರ ಕೋಟಿ ರುಪಾಯಿ ಮೀರಿದ್ದು, ಇದರಿಂದ ಬರುತ್ತಿರುವ ಆದಾಯವೇ 700 ಕೋಟಿ ರುಪಾಯಿ ಮುಟ್ಟಿದೆ. ಈ ವೇಳೆಗೆ ಆ ಹುಡುಗನ ಹೆಸರು ನಿಮಗೆ ಗೊತ್ತಾಗಿರುತ್ತದೆ.

ಇದನ್ನೂ ಓದಿ: Rangaswamy Mookanahalli Column: ದಿನವೂ ರಜೆಯಾದರೆ, ಭಾನುವಾರಕ್ಕೆಲ್ಲಿ ಮಜಾ ? !

ಹೌದು, ಪುಟ್ಟ ಹಳ್ಳಿಯಿಂದ ದೊಡ್ಡ ಕನಸು ಹೊತ್ತು ತಂದು, ಅದನ್ನು ಸಾಕಾರಗೊಳಿಸಿದ ಆ ಹುಡುಗನ ಹೆಸರು ಸಂದೀಪ್ ಅಗರ್‌ವಾಲ್. ಸಂದೀಪ್ ಹೆತ್ತವರಿಗೆ ನಾಲ್ವರು ಮಕ್ಕಳು, ಸಂದೀಪ್ ಕೊನೆಯವರು. ಚಂಡೀಘಡ ನಗರದಿಂದ 100 ಕಿ.ಮೀ.ಗೂ ಹೆಚ್ಚು ದೂರದಲ್ಲಿ ರುವ ಗುಹ್ಲಾ ಎಂಬ ಹಳ್ಳಿಯಲ್ಲಿ ಬಾಲ್ಯವನ್ನು ಕಳೆಯುತ್ತಾರೆ. ನಂತರ, ಚಂಡೀಘಡ ನಗರಕ್ಕೆ ಅತಿ ಸಮೀಪದಲ್ಲಿರುವ ಪುಟಾಣಿ ನಗರ ಕಲ್ಕದಲ್ಲಿ ಕಳೆಯುತ್ತಾರೆ.

ಅವರ ತಂದೆ ಹರಿಯಾಣ ಸರಕಾರದ ಅಧೀನದಲ್ಲಿ ಬರುವ ಪಿಡಬ್ಲ್ಯೂಡಿಯಲ್ಲಿ ಎಂಜಿನಿ ಯರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಅವರಿಗೆ ವರ್ಗಾವಣೆ ಆದ ಕಡೆಗೆ ಸಂಸಾರ ಹೋಗುತ್ತಿರುತ್ತದೆ. ಈ ಕಾರಣದಿಂದ ಸಂದೀಪ್ ಓದು-ಬರಹವೆಲ್ಲಾ ಆದದ್ದು ಸಣ್ಣಪುಟ್ಟ ಶಾಲೆಗಳಲ್ಲಿ. ಭಾರತದಲ್ಲಿ ಪದವಿಯನ್ನು ಪಡೆದು ತಮ್ಮ 25ರ ಹರೆಯದಲ್ಲಿ ಎಂಬಿಎ ಪದವಿ ಪಡೆಯಲು ಅಮೆರಿಕಕ್ಕೆ ಹೋಗುತ್ತಾರೆ.

lang ok

ಅಲ್ಲಿ ಮಾಸ್ಟರ್ಸ್ ಪದವಿ ಪಡೆದು ಕೆಲಸಕ್ಕಾಗಿ ಅಲೆದಾಡುತ್ತಾರೆ. 1998-99ರ ಸಮಯದಲ್ಲಿ ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆ ಹೋದವರಿಗೆ ಅದರ ನೋವು ತಿಳಿದಿರುತ್ತದೆ. 2001ರಲ್ಲಿ ಅಮೆ ರಿಕದ ‘ಟ್ವಿನ್ ಟವರ್’ ಉಗ್ರರ ದಾಳಿಗೆ ತುತ್ತಾಗಿರುತ್ತದೆ. ಆರ್ಥಿಕ ಕುಸಿತದ ಜತೆಗೆ ರೇಸಿಸಂ ಕೂಡ ಹೆಚ್ಚಾಗಿರುತ್ತದೆ. ಆದರೆ ಸಂದೀಪ್ ಅವರ ಅದೃಷ್ಟ ಚೆನ್ನಾಗಿತ್ತು. ಈ ರೀತಿ ದಾಳಿ ಆಗುವುದಕ್ಕೆ ಕೇವಲ 6 ದಿನ ಮುಂಚೆ ಅವರಿಗೆ ಕೆಲಸ ಸಿಕ್ಕಿರುತ್ತದೆ. ಅವರು ಮೊದಲು ಕೆಲಸಕ್ಕೆ ಸೇರಿದ ಸಂಸ್ಥೆ Charles Schwab ನಲ್ಲಿ 26 ಸಾವಿರ ಜನ ಕೆಲಸ ಮಾಡುತ್ತಿರುತ್ತಾರೆ.

ಆರ್ಥಿಕ ಕುಸಿತದ ಕಾರಣ ಆ ಸಂಖ್ಯೆ 14 ಸಾವಿರಕ್ಕೆ ಇಳಿಯುತ್ತದೆ. 12 ಸಾವಿರ ಜನ ಕೆಲಸ ವನ್ನು ಕಳೆದುಕೊಳ್ಳುತ್ತಾರೆ. ಸಂದೀಪ್ ಅಲ್ಲಿ ಕೂಡ ಕೆಲಸವನ್ನು ಉಳಿಸಿಕೊಳ್ಳುತ್ತಾರೆ. 2004ರಲ್ಲಿ ಮೈಕ್ರೋಸಾಫ್ಟ್ ಸೇರುತ್ತಾರೆ. ಎರಡು ವರ್ಷ ಅಲ್ಲಿ ಕೆಲಸ ಮಾಡಿ ನಂತರ ವಾಲ್ ಸ್ಟ್ರೀಟ್‌ನಲ್ಲಿ ಈಕ್ವಿಟಿ ರಿಸರ್ಚ್ ಅನಲಿಸ್ಟ್ ಆಗಿ ಕೆಲಸಕ್ಕೆ ಸೇರುತ್ತಾರೆ. ‌

ಇಲ್ಲಿಯವರೆಗಿನ ಬದುಕಿನಲ್ಲಿ ಸಣ್ಣಪುಟ್ಟ ಅಡೆತಡೆಗಳನ್ನು ಎದುರಿಸಿ ಅದರಲ್ಲಿ ಗೆದ್ದು ಬಂದಿದ್ದ ಸಂದೀಪ್ ಅವರಿಗೆ ಸಿಕ್ಕ ದೊಡ್ಡ ತಿರುವು ವಾಲ್ ಸ್ಟ್ರೀಟ್ ಕೆಲಸ. ಫಸ್ಟ್ ಆಂಡ್ ಬಿಗ್ ರೈಸ್. ಕೋಟ್ಯಂತರ ಜನರ ಕನಸು ಇಲ್ಲಿ ಕೆಲಸ ಮಾಡುವುದು, ಅದನ್ನು ಸಂದೀಪ್ ಗಳಿಸಿಕೊಳ್ಳುತ್ತಾರೆ.

ಗೂಗಲ್, ಅಮೆಜಾನ್, ನೆಟ್ ಫ್ಲಿಕ್ಸ್, ಇ-ಬೇ, ಎಕ್ ಪಿಡಿಯಂಥ ಸಂಸ್ಥೆಗಳಿಗೆ ಅನಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಾರೆ. 2007ರಲ್ಲಿ ಅಮೆರಿಕದ ಆರ್ಥಿಕತೆಗೆ ಇನ್ನೊಂದು ಹೊಡೆತ ಬೀಳುತ್ತದೆ. ಲಿಮನ್ ಬ್ರದರ್ ಬ್ಯಾಂಕಿನ ಕುಸಿತವು ವಾಲ್ ಸ್ಟ್ರೀಟ್‌ನಲ್ಲಿ ತಲ್ಲಣವನ್ನು ಉಂಟು ಮಾಡು ತ್ತದೆ. 2008 ಮತ್ತು 2009ರಲ್ಲಿ ಘಟಾನುಘಟಿ ಅನಲಿಸ್ಟ್‌ಗಳು ನೆಲ ಕಚ್ಚುತ್ತಾರೆ. ಹಳೆ ಹುಲಿಗಳು ಮನೆ ಸೇರುತ್ತಾರೆ. ಸಂದೀಪ್ 2008ರ ವೇಳೆಗೆ ವಾಲ್ ಸ್ಟ್ರೀಟ್ ‘ಟಾಪ್ ರ‍್ಯಾಂಕ್ಡ್ ಅನಲಿಸ್ಟ್’ ಎನ್ನುವ ಹೆಸರನ್ನು ಗಳಿಸಿಕೊಳ್ಳುತ್ತಾರೆ.

ಬದುಕು ಇನ್ನೊಂದು ಮಹಾದೊಡ್ಡ ತಿರುವಿಗೆ ಸಿದ್ಧವಾಗುತ್ತಿರುತ್ತದೆ. ಅದು ಸಂದೀಪ್ ಅವರಿಗೆ ಗೊತ್ತಿರುವುದಿಲ್ಲ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕುಳಿತು ದೊಡ್ಡ ಸಂಸ್ಥೆಗಳಿಗೆ ವಾಲ್ ಸ್ಟ್ರೀಟ್ ರಿಸರ್ಚ್ ಸೇವೆ ನೀಡುತ್ತಿದ್ದ ವ್ಯಕ್ತಿಯ ಮುಂದೆ, ಭಾರತದ ‘ಮೇಕ್ ಮೈ ಟ್ರಿಪ್’ ಎನ್ನುವ ಸಂಸ್ಥೆಯನ್ನು ಅನಲೈಸ್ ಮಾಡಿ ರಿಪೋರ್ಟ್ ನೀಡುವಂತೆ ಮನವಿ ಬರುತ್ತದೆ.

ಮೇಕ್ ಮೈ ಟ್ರಿಪ್ ಹೇಗೆ ಕೆಲಸ ಮಾಡುತ್ತದೆ ಇತ್ಯಾದಿಗಳ ತಳಮಟ್ಟದ ಅನಾಲಿಸಿಸ್ ಮಾಡಲು ಸಂದೀಪ್ ಭಾರತಕ್ಕೆ ಬರುತ್ತಾರೆ. ಅಂದಿಗೆ ಭಾರತವಾಗಲೇ ಬದಲಾವಣೆಯ ಹಾದಿಯಲ್ಲಿ ರುತ್ತದೆ. ಇಂಟರ್ನೆಟ್ ಜನಪ್ರಿಯವಾಗಿರುತ್ತದೆ. ಹೀಗಾಗಿ ಆನ್‌ಲೈನ್ ಉದ್ಯಮ ಕೂಡ ಬೆಳವಣಿಗೆಯ ಹಂತದಲ್ಲಿರುತ್ತದೆ. ತೀಕ್ಷ್ಣ ಬುದ್ಧಿಯ ಸಂದೀಪ್ ಅವರಿಗೆ ಭಾರತದಲ್ಲಿ, ಅದರಲ್ಲೂ ಆನ್ ಲೈನ್ ವ್ಯಾಪಾರದಲ್ಲಿರುವ ಅವಕಾಶದ ಅರಿವಾಗುತ್ತದೆ.

ವಾಪಸ್ ಅಮೆರಿಕಕ್ಕೆ ಹೋದ ಸಂದೀಪ್ 2011ರಲ್ಲಿ ವಾಲ್ ಸ್ಟ್ರೀಟ್‌ನ ಕೆಲಸಕ್ಕೆ ರಾಜೀ ನಾಮೆ ನೀಡಿ ಹೊಸ ಉದ್ದಿಮೆ ಕಟ್ಟುವ ಕನಸು ಹೊತ್ತು ಭಾರತಕ್ಕೆ ಮರಳುತ್ತಾರೆ. ಹೀಗೆ ಅವರು ತ್ಯಜಿಸಿ ಬಂದ ಕೆಲಸದಿಂದ ಅವರಿಗೆ ವಾರ್ಷಿಕವಾಗಿ 1 ಮಿಲಿಯನ್ ಡಾಲರ್ ಸಂಬಳ ಬರುತ್ತಿರುತ್ತದೆ. ಭಾರತದ ರುಪಾಯಿ ಲೆಕ್ಕಾಚಾರದಲ್ಲಿ ಎಂಟೂವರೆ ಕೋಟಿ ರುಪಾಯಿ!

ಸಂದೀಪ್ ಅವರಿಗೆ ಅಮೆರಿಕದಲ್ಲಿ ಕುಳಿತು ಬೇರೆಯವರಿಗೆ ರಿಸರ್ಚ್ ಮಾಡಿ, ಅನಲೈಸ್ ಮಾಡಿ ಜೀವನ ಕಳೆಯುವುದಕ್ಕಿಂತ ಪ್ರಾಯೋಗಿಕವಾಗಿ ಉದ್ದಿಮೆ ಮಾಡುವುದು ಉತ್ತಮ ಎನಿಸುತ್ತದೆ. ಹೀಗಾಗಿ ಹೆಚ್ಚು ಚಿಂತೆ ಮಾಡದೆ ಕೈತುಂಬಾ ದುಡ್ಡು ನೀಡುತ್ತಿದ್ದ ಕೆಲಸವನ್ನು ಬಿಟ್ಟು ಬರುತ್ತಾರೆ. ‘ಶಾಪ್ ಕ್ಲೂಸ್’ ಎಂಬ ಇ-ಮಾರ್ಕೆಟ್ ಪ್ಲೇಸ್ ಸಂಸ್ಥೆಯನ್ನು ತೆರೆಯುತ್ತಾರೆ.

ಅದು ನಾಲ್ಕು ವರ್ಷದಲ್ಲಿ ಯೂನಿಕಾರ್ನ್ ಪಟ್ಟವನ್ನು ಪಡೆದುಕೊಳ್ಳುತ್ತದೆ. ಅಂದಿಗೆ ಭಾರತದಲ್ಲಿ ಅತಿವೇಗವಾಗಿ ಯೂನಿಕಾರ್ನ್ ಪಟ್ಟ ಪಡೆದುಕೊಂಡ ಸಂಸ್ಥೆ ಎನ್ನುವ ಹೆಗ್ಗಳಿಕೆಯನ್ನೂ ಅದು ಪಡೆದುಕೊಳ್ಳುತ್ತದೆ. 2013ರ ಜುಲೈನ ಒಂದು ದಿನ ಸಂದೀಪ್ ತಮ್ಮ ಹೆಂಡತಿ ಮತ್ತು ಮಕ್ಕಳ ಜತೆಯಲ್ಲಿ ಅಮೆರಿಕ ಪ್ರವಾಸಕ್ಕೆಂದು ಹೋಗಿರುತ್ತಾರೆ. ಅವರು ವಿಮಾನ ನಿಲ್ದಾಣದಲ್ಲಿ ಇಳಿದಾಕ್ಷಣ ಎಫ್‌ ಬಿಐ ಅವರನ್ನು ಬಂಧಿಸುತ್ತದೆ.

ಹೆಂಡತಿ-ಮಕ್ಕಳ ಮುಂದೆ ಅವರ ಕೈಗೆ ಕೋಳವನ್ನು ತೊಡಿಸಿ ಕರೆದುಕೊಂಡು ಹೋಗಲಾ ಗುತ್ತದೆ, ಬಂಧಿಸಿ ಜೈಲಿನಲ್ಲಿ ಇರಿಸಲಾಗುತ್ತದೆ. ಸಂಜೆ ಆರರಿಂದ ಬೆಳಗಿನ ಒಂಬತ್ತರವರೆಗಿನ ಜೈಲುವಾಸದ ಅನುಭವವನ್ನು ಅವರು ಮರೆಯಲಾಗುವುದಿಲ್ಲ. ಜೈಲಿನಲ್ಲಿ 30 ಜನರಿದ್ದ ಒಂದೇ ಸೆಲ್‌ನಲ್ಲಿ ಇವರನ್ನು ಇರಿಸಲಾಗುತ್ತದೆ. ಅವರಲ್ಲಿ ಬಹು ಪಾಲು ಖೈದಿಗಳು ಮಾದಕ ವಸ್ತುಗಳ ವ್ಯಸನಿಗಳಾಗಿರುತ್ತಾರೆ. ವಾಲ್‌ಸ್ಟ್ರೀಟ್‌ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಇನ್‌ಸೈಡರ್ ಟ್ರೇಡಿಂಗ್ ಮಾಡಿದ ಅಪರಾಧದ ಮೇಲೆ ಅವರನ್ನು ಬಂಧಿಸಲಾಗಿರುತ್ತದೆ.

ಒಂದು ರಾತ್ರಿ ಅಲ್ಲಿ ಕಳೆದು ಮಾರನೆಯ ದಿನ ಜಾಮೀನಿನ ಮೇಲೆ ಹೊರಬಂದಿರುತ್ತಾರೆ. ಆದರೆ ಭಾರತಕ್ಕೆ ಮರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೆಂಡತಿ ಮತ್ತು ಮಕ್ಕಳನ್ನು ಭಾರತಕ್ಕೆ ವಾಪಸ್ ಕಳಿಸುತ್ತಾರೆ, ‘ಶಾಪ್ ಕ್ಲೂಸ್’ ಅನ್ನು ನೋಡಿಕೊಳ್ಳುವಂತೆ ಹೆಂಡತಿಗೆ ತಿಳಿಸುತ್ತಾರೆ. ಮುಂದಿನ 15 ತಿಂಗಳು ಅವರ ಬದುಕಿನಲ್ಲಿ ಬಹಳ ಕಷ್ಟದ ದಿನಗಳು. ಆ ಅವಧಿಯ ನಂತರ ಕೊನೆಗೆ ಅಲ್ಲಿನ ಕೋರ್ಟು ಭಾರತಕ್ಕೆ ಹೋಗಲು ಅನುಮತಿಯನ್ನು ನೀಡುತ್ತದೆ, ಆದರೆ ಅವರನ್ನು ನಿರಪರಾಧಿ ಎಂದು ಘೋಷಿಸಿ ಪ್ರಕರಣವನ್ನು ಮುಗಿಸುವು ದಿಲ್ಲ.

‘ವಿಚಾರಣೆಯಲ್ಲಿರುವ ವ್ಯಕ್ತಿ’ ಎನ್ನುವಂತೆ ಹೇಳಿ ಅವರನ್ನು ಬಿಡುಗಡೆ ಮಾಡಿರುತ್ತದೆ. ಬೇರೆ ಎಲ್ಲರಂತೆ ಸಂದೀಪ್ ಕೂಡ ಬೇಸರ, ನಿರುತ್ಸಾಹದಲ್ಲಿ ಒಂದಿಷ್ಟು ತಿಂಗಳು ಕಳೆಯುತ್ತಾರೆ. ಆದರೆ ಒಂದು ದಿನ ಅವರಿಗೆ, ‘ಸ್ವಾನುಪಂಕ, ಬೇಸರ, ನಿರುತ್ಸಾಹದಿಂದ ಏನನ್ನೂ ಸಾಧಿಸ ಲಾಗುವುದಿಲ್ಲ.

ಎಲ್ಲಕ್ಕೂ ಮೊದಲು ಜೀವನೋತ್ಸಾಹವನ್ನು ಬಿಡಬಾರದು’ ಎಂಬುದು ಅರಿವಾಗುತ್ತದೆ. ಸಂದೀಪ್ ಇಲ್ಲದ ಕಾರಣ ‘ಶಾಪ್ ಕ್ಲೂಸ್’ ಸೊರಗಿರುತ್ತದೆ; ಅದರ ಮೇಲಿನ ಹಿಡಿತವನ್ನು ಕೂಡ ಅವರು ಕಳೆದುಕೊಳ್ಳುತ್ತಿರುತ್ತಾರೆ. ಇಂಥ ಸಮಯದಲ್ಲಿ ಅವರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಾರೆ: ‘ನಾನು ಈಗಾಗಲೇ ಇಂಥ ಸಂಸ್ಥೆಯನ್ನು ಕಟ್ಟಿದ್ದೇನೆ ಎಂದ ಮೇಲೆ, ಇಂಥದೇ ಅಥವಾ ಇದಕ್ಕಿಂತ ದೊಡ್ಡದಾದ, ಉತ್ತಮವಾದ ಸಂಸ್ಥೆಯನ್ನೂ ಕಟ್ಟಬಲ್ಲೆ’.

ನಂತರ ಅವರು ಒಂದೆಡೆ ಕುಳಿತು ತಮ್ಮ ಹಳೆಯ ವೃತ್ತಿಯ ರಿಸರ್ಚ್ ಮಾಡುತ್ತಾರೆ. ಭಾರತ ವು ಅಂದಿಗೆ ಅಮೆರಿಕ ಮತ್ತು ಚೀನಾ ದೇಶಗಳ ಆಟೋಮೊಬೈಲ್ ಮಾರುಕಟ್ಟೆಗಳ ಪ್ರಮು ಖ ಪಾಲುದಾರನಾಗಿರುತ್ತದೆ. ಭಾರತದಲ್ಲಿ ಆಟೋಮೊಬೈಲ್ ವಲಯಕ್ಕಿರುವ ದೊಡ್ಡ ಮಾರುಕಟ್ಟೆ ಮತ್ತು ಅದರಲ್ಲಿನ ಸಾಮರ್ಥ್ಯದ ಅರಿವಾಗುತ್ತದೆ. 2011ರ ನವೆಂಬರ್ 11 ರಂದು ಯಾವ ಜಾಗದಲ್ಲಿ ‘ಶಾಪ್ ಕ್ಲೂಸ್’ಗೆ ಚಾಲನೆ ನೀಡಿದ್ದರೋ ಅದೇ ಜಾಗದಿಂದ 2014ರ ನವೆಂಬರ್ 11ರಂದು ತಮ್ಮ ಹೊಸ ಕನಸು ‘ಡ್ರೂಮ್’ಗೆ ಚಾಲನೆ ನೀಡುತ್ತಾರೆ.

ಏಪ್ರಿಲ್ 2021ರಂದು ‘ಡ್ರೂಮ್’ ಮತ್ತೊಂದು ಯೂನಿಕಾರ್ನ್ ಸಂಸ್ಥೆ ಎನ್ನುವ ಹೆಗ್ಗಳಿಕೆ ಯನ್ನು ಪಡೆದುಕೊಳ್ಳುತ್ತದೆ. ‘ಶಾಪ್ ಕ್ಲೂಸ್’ ಭಾರತದ 5ನೇ ಯೂನಿಕಾರ್ನ್ ಆಗಿದ್ದರೆ, ‘ಡ್ರೂಮ್’ 55ನೇ ಯೂನಿಕಾರ್ನ್ ಆಗಿರುತ್ತದೆ. ಇಂದಿಗೆ, ಅಂದರೆ 2025ರಲ್ಲಿ ಭಾರತದಲ್ಲಿ ಒಟ್ಟು 116 ಯೂನಿಕಾರ್ನ್ ಸಂಸ್ಥೆಗಳಿದ್ದರೆ, ಜಗತ್ತಿನಾದ್ಯಂತದ ಇವುಗಳ ಸಂಖ್ಯೆ 2400.

ಭಾರತದಲ್ಲಿ ಎರಡು ಯೂನಿಕಾರ್ನ್ ಸಂಸ್ಥೆಗಳನ್ನು ಕಟ್ಟಿದ ಏಕೈಕ ವ್ಯಕ್ತಿ ಸಂದೀಪ್. ಸದ್ಯದ ಮಟ್ಟಿಗೆ ಆ ದಾಖಲೆಯನ್ನು ಯಾರೂ ಮುರಿದಿಲ್ಲ. 2024ರಲ್ಲಿ ಈ ಸಂಸ್ಥೆಗಳ ವಹಿವಾಟು ಕುಸಿತವನ್ನು ಕಂಡಿದೆ. ಪ್ರತಿ ಕುಸಿತವೂ ಹೊಸ ಜಿಗಿತಕ್ಕೆ ಮುನ್ನುಡಿ ಎನ್ನು ವಂತೆ, ಸಂದೀಪ್ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎತ್ತರವನ್ನು ಏರುವುದರಲ್ಲಿ ಸಂಶಯವಿಲ್ಲ.

ಈ ಮಧ್ಯೆ, ಭಾರತದ ‘ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ’ (ಸೆಬಿ) ಇವರ ಮೇಲೆ ಕೆಲವು ಸಿವಿಲ್ ಕೇಸುಗಳನ್ನು ದಾಖಲಿಸಿತು. ಈ ಕೇಸುಗಳಿಂದ ಅವರು ಈಗ ಖುಲಾಸೆಯಾಗಿದ್ದಾರೆ. ಫೆಬ್ರವರಿ 2020ರಂದು, ಅಂದರೆ ಬರೋಬ್ಬರಿ 6 ವರ್ಷಗಳ ನಂತರ ಅಮೆರಿಕ ಫೆಡರಲ್ ನ್ಯಾಯಾಲಯವು ಕೇಸಿನಲ್ಲಿ ಇವರನ್ನು ನಿರ್ದೋಷಿ ಎಂದು ತೀರ್ಮಾನ ನೀಡುತ್ತದೆ.

ಇಷ್ಟೂ ವರ್ಷಗಳಲ್ಲಿ ಇವರನ್ನು ‘ಅಪರಾಧಿ, ಕಳ್ಳ, ಅನ್ಯಾಯ ಮಾಡಿ ಹಣ ಸಂಪಾದನೆ ಮಾಡಿದವನು’ ಎನ್ನುವಂತೆ ಸಮಾಜ ನೋಡಿರುತ್ತದೆ. ‘ಶಾಪ್ ಕ್ಲೂಸ್’ ಸಂಸ್ಥೆಯ ಸಿಇಒ ಸ್ಥಾನಕ್ಕೆ ಸಂದೀಪ್ ರಾಜೀನಾಮೆ ನೀಡಬೇಕಾಗುತ್ತದೆ. ಅವರ ಹೆತ್ತವರು ಹತ್ತು ವರ್ಷ ಜಾಸ್ತಿ ವಯಸ್ಸಾದವರಂತೆ ಕಾಣುತ್ತಾರೆ. ಮಗನ ಒಳಿತಿಗಾಗಿ ಅವರು ಎಡತಾಕದ ದೇವಸ್ಥಾನ ಗಳಿರಲಿಲ್ಲ. 2018ರಲ್ಲಿ ಪತ್ನಿ ರಾಧಿಕಾ ಅಗರ್‌ವಾಲ್ ಇವರಿಂದ ವಿಚ್ಛೇದನ ಪಡೆಯುತ್ತಾರೆ.

ಇವೆಲ್ಲದರ ನಡುವೆಯೇ ‘ಡ್ರೂಮ್’ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಅವಮಾನ, ಅಪಮಾನ, ಹತಾಶೆ, ಬೇಸರ, ನಿರುತ್ಸಾಹ ಇವೆಲ್ಲ ಸ್ಥಿತಿಗಳಿಗೂ ಸಾಕ್ಷಿಯಾದ ಸಂದೀಪ್ ಅವರಿಗೂ ಈ ಬದುಕು ಸಾಕಪ್ಪ ಅನ್ನಿಸಿದೆ. ಅವರೇ ಹೇಳುವಂತೆ, ಕೊನೆಗೂ ಗೆಲ್ಲುವುದು ಜೀವನಪ್ರೀತಿ, ಮನಸ್ಥಿತಿ, ಸಂಕಷ್ಟದ ಸಮಯವನ್ನು ನಿಭಾಯಿಸುವ ಕಲೆ. ಹತ್ತತ್ತಿರ 53ರ ಹರೆಯದ ಸಂದೀಪ್ ಅವರೆದುರು ಹೊಸ ಸವಾಲುಗಳು ನಿಂತಿವೆ. ಆಟ ಈಗಷ್ಟೇ ಶುರುವಾಗಿದೆ, ಸಾಗುವ ದಾರಿ ಇನ್ನೂ ಸಾಕಷ್ಟಿದೆ...