Gudibande News: ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ : ಆಸ್ತಿ ಮಾಲೀಕರೊಡನೆ ಅಧಿಕಾರಿಗಳ ಸಭೆ
ರಸ್ತೆ ಅಗಲೀಕರಣಕ್ಕೆ ಶಾಸಕರೂ ಸಹ ಸಹಮತಿ ಸೂಚಿಸಿದ್ದಾರೆ. ರಸ್ತೆ ಅಗಲೀಕರಣದ ವೇಳೆ ಸಂಪೂರ್ಣವಾಗಿ ಆಸ್ತಿ ಕಳೆದುಕೊಂಡವರಿಗೆ ನಿವೇಶನ ಹಾಗೂ ಮನೆ ನೀಡುವ ಭರವಸೆ ಯನ್ನೂ ಸಹ ಶಾಸಕರು ನೀಡಿದ್ದಾರೆ. ಆದರೆ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಪೂರ್ವ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು.
-
ಗುಡಿಬಂಡೆ : ಪಟ್ಟಣದ ಹೃದಯ ಭಾಗದಲ್ಲಿರುವ ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿ ಸಭಾಂಗಣದಲ್ಲಿ ಆಸ್ತಿ ಮಾಲೀಕರೊಡನೆ ತಹಸೀ ಲ್ದಾರ್ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿದ್ದು ಸಭೆಯಲ್ಲಿ ರಸ್ತೆ ಅಗಲೀಕರಣದ ಸಂಬಂಧ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು.
ಸಭೆಯಲ್ಲಿ ಆಸ್ತಿ ಮಾಲೀಕರೊಡನೆ ಸಭೆ ನಡೆಸಿದ ಅಧಿಕಾರಿಗಳು ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿರುವ ಕಾರಣ ಆ ರಸ್ತೆಯಲ್ಲಿ ವಾಹನ ಸಂಚಾರ ತುಂಬಾನೆ ಕಷ್ಟಕರ ವಾಗಿದೆ. ಇದರ ಜೊತೆಗೆ ಈ ಭಾಗದಲ್ಲಿಯೇ ಡಿಗ್ರಿ, ಪಿಯುಸಿ ಹಾಗೂ ಐಟಿಐ ಸೇರಿದಂತೆ ಎರಡು ಖಾಸಗಿ ಶಾಲೆಗಳೂ ಸಹ ಬರುತ್ತದೆ. ಶಾಲಾ ಸಮಯದಲ್ಲಿ ಈ ರಸ್ತೆಯಲ್ಲಿ ಓಡಾಡು ವಂತಹ ಮಕ್ಕಳು ಪ್ರಾಣ ಭಯದಿಂದ ಓಡಾಡಬೇಕಿದೆ. ಆದ್ದರಿಂದ ಅಂಗಡಿ ಮಾಲೀಕರು ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು. ಮಧ್ಯ ರಸ್ತೆಯಿಂದ 20 ಅಡಿ ಅಗಲೀಕರಣಕ್ಕೆ ತಾವೇ ಮುಂದಾಗಬೇಕು. ಆದಷ್ಟು ಶೀಘ್ರವಾಗಿ ಈ ಕೆಲಸವನ್ನು ಮಾಡಿ ಮುಗಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಆಸ್ತಿ ಮಾಲೀಕರ ಬಳಿ ಮನವಿ ಮಾಡಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಈ ವೇಳೆ ಸ್ಥಳೀಯರಾದ ಮಂಜುನಾಥರೆಡ್ಡಿ ಮಾತನಾಡಿ, ನಾವು ಈಗಾಗಲೇ ಶಾಸಕರ ಬಳಿ ಚರ್ಚೆ ನಡೆಸಿ ಮಧ್ಯ ರಸ್ತೆಯಿಂದ 20 ಅಡಿ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದ್ದೇವೆ ಎಂದರು.
ರಸ್ತೆ ಅಗಲೀಕರಣಕ್ಕೆ ಶಾಸಕರೂ ಸಹ ಸಹಮತಿ ಸೂಚಿಸಿದ್ದಾರೆ. ರಸ್ತೆ ಅಗಲೀಕರಣದ ವೇಳೆ ಸಂಪೂರ್ಣವಾಗಿ ಆಸ್ತಿ ಕಳೆದುಕೊಂಡವರಿಗೆ ನಿವೇಶನ ಹಾಗೂ ಮನೆ ನೀಡುವ ಭರವಸೆ ಯನ್ನೂ ಸಹ ಶಾಸಕರು ನೀಡಿದ್ದಾರೆ. ಆದರೆ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಪೂರ್ವ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು. ಮಧ್ಯ ರಸ್ತೆಯಿಂದ 20 ಅಡಿ ಅಂದರೇ ನಮ್ಮ ಆಸ್ತಿಗಳು ಎಲ್ಲಿಯವರೆಗೂ ಹೋಗುತ್ತದೆ ಎಂಬುದನ್ನು ಸರ್ವೆ ಮಾಡಿಸಿ ಸ್ಪಷ್ಟ ಪಡಿಸಬೇಕು ಎಂದರು.
ರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಅಧಿಕಾರಿಗಳು ಸಂಬಂಧಪಟ್ಟವರಿಗೆ ಪತ್ರ ಬರೆಯಬೇಕು. ರಸ್ತೆ ಅಗಲೀಕರಣದ ಬಳಿಕ ಮೂಲಭೂತ ಸೌಕರ್ಯಗಳಾದ ನೀರು ಹಾಗೂ ವಿದ್ಯುತ್ ಸಮಸ್ಯೆಯಾಗದಂತೆ ಅಧಿಕಾರಿ ಗಳು ಎಚ್ಚರಿಕೆ ವಹಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಮತ್ತೊಂದು ಸಭೆ ಕರೆದು ಅಂತಿಮಗೊಳಿಸಬೇಕೆಂದು ಮನವಿ ಮಾಡಿದರು.
ರಸ್ತೆ ಅಗಲೀಕರಣಕ್ಕೆ ಕೆಲವರ ವಿರೋಧ : ಇನ್ನೂ ಈ ರಸ್ತೆಯಲ್ಲಿ ಬರುವಂತಹ ಕೆಲ ಆಸ್ತಿ ಮಾಲೀಕರು ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆ ಅಗಲೀಕರಣಗೊಂಡು 10 ವರ್ಷಗಳು ಕಳೆದರೂ ಇನ್ನೂ ಆಸ್ತಿ ಕಳೆದುಕೊಂಡವರಿಗೆ ನಿವೇಶನ ಕೊಟ್ಟಿಲ್ಲ. ಮುಖ್ಯರಸ್ತೆಯಲ್ಲಿ ಕೋಟ್ಯಂತರ ರೂಪಾಯಿ ಬೆಳೆಬಾಳುವ ಆಸ್ತಿ ಕಳೆದುಕೊಂಡವರಿಗೆ ಕಡಿಮೆ ಅಳತೆಯ ನಿವೇಶನ ಕೊಟ್ಟಿದ್ದಾರೆ, ಕೆಲವರಿಗೆ ಅದೂ ಸಹ ಇಲ್ಲ. ರಸ್ತೆ ಅಗಲೀಕರಣಕ್ಕೆ ನಮ್ಮದೇನೂ ತಕರಾರು ಇಲ್ಲ, ನಮಗೆ ಪರಿಹಾರ ಕೊಡುವ ಬಗ್ಗೆ ಖಚಿತಪಡಿಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿ ಎಂದು ಕೆಲವರು ಆಗ್ರಹಿಸಿದರು.
ಈ ಸಮಯದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್, ಬೆಸ್ಕಾಂ ಇಲಾಖೆಯ ವಿಶ್ವಾಸ್, ಕೃಷ್ಣೇ ನಾಯಕ್, ಲೋಕೋಪಯೋಗಿ ಇಲಾಖೆಯ ಪೂಜಪ್ಪ, ಪಪಂ ಸಿಬ್ಬಂದಿಯಾದ ಬಾಲಪ್ಪ ಸೇರಿದಂತೆ ಹಲವರು ಹಾಜರಿದ್ದರು.