Dr Vijay Darda Column: ಈ ಮೈಲುಗಲ್ಲು ತಲುಪಿದ್ದು ಸುಲಭದ ಹಾದಿಯಾಗಿರಲಿಲ್ಲ !
ಆ ದಿನದ ಸಮಾರಂಭವನ್ನು ನೋಡಿದಾಗ ನನಗೆ ಜೈ ಶಾ ಅವರ ಚಾಣಾಕ್ಷ ತಂತ್ರಗಾರಿಕೆ, ಅದರಲ್ಲೂ ಕ್ರಿಕೆಟ್ ಬಗ್ಗೆ ಅವರಿಗಿರುವ ಬದ್ಧತೆ, ಜೊತೆಗೆ ಇಷ್ಟು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಹಿಳಾ ಕ್ರಿಕೆಟ್ ಆಟವನ್ನು ಅವರು ಹಟಕ್ಕೆ ಬಿದ್ದು ಮೇಲೆತ್ತಿದ ಪರಿ ನೆನಪಾಯಿತು.
-
ಸಂಗತ
ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರೋತ್ಸಾಹ ನಿಜಕ್ಕೂ ಕೆಲಸ ಮಾಡುತ್ತಿದೆ. ಜೈ ಶಾ ಹೆಣೆದ ತಂತ್ರಗಾರಿಕೆ ಮಹಿಳಾ ಕ್ರಿಕೆಟ್‌ನ ಗತಿಯನ್ನೇ ಬದಲಿ ಸಿದೆ. ಇಂದು ಹಳ್ಳಿಹಳ್ಳಿಗಳಲ್ಲೂ ಗಂಡುಮಕ್ಕಳಂತೆ ಹೆಣ್ಣುಮಕ್ಕಳು ಕೂಡ ಕ್ರಿಕೆಟ್ ಆಡತೊಡಗಿ ದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭವಾಗಿದೆ.
ಇತ್ತೀಚೆಗೆ ಭಾರತಕ್ಕೆ ಐಸಿಸಿ ಮಹಿಳಾ ವಿಶ್ವಕಪ್ ತಂದುಕೊಟ್ಟ ಈ ಮಣ್ಣಿನ ಹೆಣ್ಣುಮಕ್ಕಳು ನಮ್ಮೆಲ್ಲರ ಎದೆ ಉಬ್ಬುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅವರನ್ನೆಲ್ಲ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಖುದ್ದಾಗಿ ಎಲ್ಲರನ್ನೂ ಬರಮಾಡಿಕೊಂಡು ಆತಿಥ್ಯ ನೀಡಿದ್ದನ್ನು ನೋಡಿ ನಿಜಕ್ಕೂ ಕಣ್ಣು ತುಂಬಿ ಬಂತು. ಅದು ಈ ದೇಶದ ಕ್ರೀಡಾ ಇತಿಹಾಸದಲ್ಲಿ ದಾಖಲಾಗುವ ಸುವರ್ಣ ಕ್ಷಣಗಳಲ್ಲೊಂದು.
ಆ ದಿನದ ಸಮಾರಂಭವನ್ನು ನೋಡಿದಾಗ ನನಗೆ ಜೈ ಶಾ ಅವರ ಚಾಣಾಕ್ಷ ತಂತ್ರಗಾರಿಕೆ, ಅದರಲ್ಲೂ ಕ್ರಿಕೆಟ್ ಬಗ್ಗೆ ಅವರಿಗಿರುವ ಬದ್ಧತೆ, ಜೊತೆಗೆ ಇಷ್ಟು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಹಿಳಾ ಕ್ರಿಕೆಟ್ ಆಟವನ್ನು ಅವರು ಹಟಕ್ಕೆ ಬಿದ್ದು ಮೇಲೆತ್ತಿದ ಪರಿ ನೆನಪಾಯಿತು.
ಹೀಗಾಗಿ ನಮ್ಮ ವೀರ ವನಿತೆಯರ ಜೊತೆಗೆ ಇದು ಕ್ರಿಕೆಟ್‌ಗೆ ಸಂಬಂಧಪಟ್ಟ ಎಲ್ಲರ ವಿಜಯ. ವಿಶ್ವಕಪ್ ಗೆಲುವಿಗೆ ಅಭಿನಂದನೆ ಹೇಳುವಾಗ ನಾವು ಎಲ್ಲ ಕಾರಣಕರ್ತರನ್ನೂ ನೆನೆಯ ಬೇಕು. ರಾಜಕಾರಣದಲ್ಲಿ ನಮ್ಮ ಪ್ರಧಾನಿ ಒಬ್ಬ ನುರಿತ ಆಟಗಾರನೆಂಬುದು ಈಗಾಗಲೇ ಸಾಬೀತಾಗಿದೆ. ದೊಡ್ಡ ದೊಡ್ಡ ಸವಾಲಿನ ಸಂದರ್ಭಗಳಲ್ಲೂ ಅವರು ಅದ್ಭುತ ಆಟಗಳನ್ನು ಆಡಿ ಗೆದ್ದಿದ್ದಾರೆ.
ಇದನ್ನೂ ಓದಿ: Dr Vijay Darda Column: ಅಪರೂಪದ ಖನಿಜಗಳ ಅತಿದೊಡ್ಡ ಜಾಗತಿಕ ಮೇಲಾಟ
ಬಹುಶಃ ಗೆಲುವನ್ನು ಸಂಭ್ರಮಿಸುವುದರಲ್ಲಿನ ಖುಷಿಯನ್ನು ಅವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವರು ಯಾರೂ ಇರಲಿಕ್ಕಿಲ್ಲ. ಈ ದೇಶದ ಮಕ್ಕಳು ಯಾವಾಗ ಏನೇ ದೊಡ್ಡ ಸಾಧನೆ ಮಾಡಿದರೂ ಅವರನ್ನು ಖುದ್ದಾಗಿ ಅಭಿನಂದಿಸಿ ಪ್ರೋತ್ಸಾಹಿಸುವುದನ್ನು ಮೋದಿ ಮರೆಯುವುದಿಲ್ಲ. ಈ ಹಿಂದೆ ಬೇರೆ ಪ್ರಧಾನಿಗಳು ಇದನ್ನು ಮಾಡಿಲ್ಲ ಎಂದಲ್ಲ. ಆದರೆ ಮೋದಿ ಅಂತಹ ಯಾವ ಅವಕಾಶವನ್ನೂ ಮಿಸ್ ಮಾಡುವುದಿಲ್ಲ.
ಸೋತಾಗ ಕೂಡ ಅವರು ಪ್ರೋತ್ಸಾಹದಾಯಕ ಮಾತುಗಳನ್ನಾಡಿ ಕ್ರೀಡಾಪಟುಗಳಿಗೆ ಧೈರ್ಯ ತುಂಬಿದ್ದಾರೆ. ಕ್ರೀಡೆ ಮತ್ತು ಕ್ರೀಡಾ ಸ್ಪೂರ್ತಿಯ ಬಗ್ಗೆ ಮೋದಿಯವರಿಗೆ ಇರುವ ಗೌರವ ಏನೆಂಬುದು ನನಗೆ ಗೊತ್ತು. ಒಂದು ಸೂಕ್ಷ್ಮ ಸಂಗತಿ ಹೇಳುತ್ತೇನೆ, ಕೇಳಿ. ನಮ್ಮ ಹೆಣ್ಣುಮಕ್ಕಳು ವಿಶ್ವಕಪ್‌ನೊಂದಿಗೆ ಮೋದಿಯವರ ಜೊತೆ ಹೋಗಿ ನಿಂತು ಫೋಟೋಗೆ ಪೋಸ್ ನೀಡುವಾಗ ಮೋದಿ ತಮ್ಮ ಕೈಗಳಿಂದ ಟ್ರೋಫಿಯನ್ನು ಎತ್ತಲು ಹೋಗಲಿಲ್ಲ.
ಬದಲಿಗೆ ಅದು ಕ್ರಿಕೆಟಿಗರ ಕೈಯಲ್ಲೇ ಇರುವಂತೆ ನೋಡಿಕೊಂಡರು. ಈ ಹಿಂದೆ ಪುರುಷರ ತಂಡ ವಿಶ್ವಕಪ್ ತಂದಾಗಲೂ ಅವರು ಹೀಗೇ ಮಾಡಿದ್ದರು. ಮಹಿಳಾ ವಿಶ್ವಕಪ್‌ನ ಫೈನಲ್ ದಿನ ನಾನು ಪದೇ ಪದೆ ಜೈ ಶಾ ಅವರನ್ನು ನೆನಪಿಸಿಕೊಂಡಿದ್ದೆ.
ಅಹಮದಾಬಾದ್‌ನಲ್ಲಿ ಹಿಂದೊಮ್ಮೆ ಅವರನ್ನು ಭೇಟಿಯಾಗಿದ್ದಾಗ, ‘ನೋಡ್ತಾ ಇರಿ, ನಾನು ಪುರುಷರ ಮತ್ತು ಮಹಿಳೆಯರಿಬ್ಬರ ವಿಶ್ವಕಪ್‌ಗಳನ್ನೂ ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದರು. ನಮ್ಮ ಗೃಹ ಮಂತ್ರಿ ಹಾಗೂ ರಾಜಕೀಯ ರಂಗದ ಚಾಣಕ್ಯ ಅಮಿತ್ ಶಾ ಅವರ ಮಗ ಜೈ ಶಾ. ಆಲದ ಮರದ ನೆರಳಿನಲ್ಲಿ ಆಲದ ಗಿಡ ಬೆಳೆಯುವುದಿಲ್ಲ ಎಂಬ ಮಾತಿದೆ. ಆದರೆ ಈ ಮಾತು ಸುಳ್ಳೆಂದು ಜೈ ಶಾ ಸಾಬೀತು ಮಾಡಿದ್ದಾರೆ.
ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಚೇರ್ಮನ್ ಆದಾಗ ಜನರು ‘ಅರೆ, ಇವರ‍್ಯಾರು? ಎಲ್ಲಿಂದ ಬಂದರು? ಬಿಸಿಸಿಐ ಅಧ್ಯಕ್ಷರಾಗುವುದಕ್ಕೆ ಈತನಿಗೆ ಏನು ಅರ್ಹತೆಯಿದೆ? ಎಂದು ಕೇಳಿದ್ದರು. ಆದರೆ ಜೈ ಶಾ ತಾನು ಕೂಡ ತಂದೆಯಂತೆ ಚಾಣಾಕ್ಷ ತಂತ್ರಗಾರ, ಅಪ್ಪಟ ಚಾಣಕ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅವರು ಕ್ರಿಕೆಟ್‌ನ ಆಡಳಿತವನ್ನೇ ಆಮೂಲಾಗ್ರವಾಗಿ ಬದಲಿಸಿದ್ದಾರೆ. ದೇಶದ ಕ್ರಿಕೆಟ್ ಆಡಳಿತವನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದ ಎಲ್ಲಾ ಸ್ವಯಂಘೋಷಿತ ‘ಕ್ರಿಕೆಟ್ ದಿಗ್ಗಜ’ರನ್ನೂ ದೂರ ಸರಿಸಿ, ಆಡಳಿತದ ಗಮನ ಕೇವಲ ಕ್ರಿಕೆಟ್ ಮೇಲೆ ಮಾತ್ರ ಇರುವಂತೆ ಮಾಡಿದ್ದಾರೆ!
ಜೈ ಶಾ ಅಧಿಕಾರ ಸ್ವೀಕರಿಸಿದ ನಂತರ ಭಾರತೀಯ ಕ್ರಿಕೆಟ್ ತಂಡ ಸದಾ ಯಶಸ್ಸಿನ ಹಾದಿಯಲ್ಲೇ ಸಾಗುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಿದ್ದಾರೆ. ಆದರೆ, ಮಹಿಳಾ ಕ್ರಿಕೆಟ್ಟನ್ನು ಮೇಲೆತ್ತುವುದು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ, ಭಾರತದಲ್ಲಿ ಪುರುಷರ ಕ್ರಿಕೆಟ್‌ಗೂ ಮಹಿಳಾ ಕ್ರಿಕೆಟ್‌ಗೂ ಅಜಗಜಾಂತರ ವ್ಯತ್ಯಾಸವಿತ್ತು.
ಪುರುಷರ ಕ್ರಿಕೆಟ್ ಆಗರ್ಭ ಶ್ರೀಮಂತರ ಮನೆಯ ಅದ್ಧೂರಿ ಮದುವೆಯಂತಿದ್ದರೆ, ಮಹಿಳೆ ಯರ ಕ್ರಿಕೆಟ್ ಬಡವರ ಮನೆಯ ಸೊರಗಿದ ಮದುವೆಯಂತಿತ್ತು. ಮಹಿಳಾ ಕ್ರಿಕೆಟಿಗರು ತೀವ್ರ ನಿರ್ಲಕ್ಷ್ಯ, ಅವಮಾನ ಹಾಗೂ ಶೋಷಣೆಗೆ ತುತ್ತಾಗುತ್ತಿದ್ದರು. ಅವರು ಆಡಿದ ಪಂದ್ಯಗಳಿಗೆ ಸರಿಯಾಗಿ ಗೌರವಧನವನ್ನೂ ನೀಡುತ್ತಿರಲಿಲ್ಲ. ಅವರಿಗೆ ವಿಮಾನ ಟಿಕೆಟ್ ಕೊಂಡು ಕೊಳ್ಳುವುದಕ್ಕೂ ಕಷ್ಟವಿತ್ತು.
ವಿಶೇಷ ಬಸ್‌ಗಳ ಸೌಕರ್ಯವಿರಲಿಲ್ಲ. ವಿಮಾನ ನಿಲ್ದಾಣಗಳಲ್ಲಿ ಎಲ್ಲರಂತೆ ಕ್ಯೂ ನಿಲ್ಲಬೇಕಿತ್ತು. ನಾನು ಇದನ್ನೆಲ್ಲ ಕಣ್ಣಾರೆ ನೋಡಿದ್ದೇನೆ. ಹಾಗಾಗಿಯೇ ನಮ್ಮ ಹೆಣ್ಣು ಮಕ್ಕಳ ಕ್ರಿಕೆಟ್ ಯಾನ ಎಷ್ಟು ಕಷ್ಟದ್ದು ಎಂಬುದನ್ನು ಅಧಿಕಾರಯುತವಾಗಿ ಹೇಳಬಲ್ಲೆ. ಡಯಾನಾ ಎಡುಲ್ಜಿ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ ಅವರ ಹೋರಾಟಗಳನ್ನು ನಾನು ನೋಡಿದ್ದೇನೆ.
ನಮ್ಮ ಲೋಕಮತ ಮೀಡಿಯಾ ಗ್ರೂಪ್‌ನಿಂದ ಬಹಳ ಹಿಂದೆಯೇ ನಾವು ಸ್ಮೃತಿ ಮಂಧನಾ ಅವರ ಪ್ರತಿಭೆಯನ್ನು ಗುರುತಿಸಿ ‘ಲೋಕಮತ್ ಮಹಾರಾಷ್ಟ್ರಿಯನ್ ವರ್ಷದ ವ್ಯಕ್ತಿ’ ಪ್ರಶಸ್ತಿ ನೀಡಿದ್ದೆವು ಎಂಬುದು ನಿಜಕ್ಕೂ ನನಗೆ ಹೆಮ್ಮೆಯ ಸಂಗತಿ.
ಗಮನಾರ್ಹ ಸಂಗತಿಯೆಂದರೆ, ಜೈ ಶಾ ಬಿಸಿಸಿಐ ಅಧ್ಯಕ್ಷರಾದ ನಂತರ ಕೇವಲ ಪುರುಷರ ಕ್ರಿಕೆಟ್‌ಗೆ ಸೀಮಿತಗೊಳ್ಳದೆ, ದಯನೀಯ ಸ್ಥಿತಿಯಲ್ಲಿದ್ದ ಮಹಿಳಾ ಕ್ರಿಕೆಟ್ಟನ್ನು ರೂಪಾಂತರ ಗೊಳಿಸುವ ಕೆಲಸಕ್ಕೆ ಕೈಹಾಕಿದರು. ಮಹಿಳಾ ಕ್ರಿಕೆಟಿಗರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದರು.
ಅವರಿಗೂ ಪುರುಷ ಕ್ರಿಕೆಟಿಗರಿಗೆ ನೀಡುವ ಸೌಲಭ್ಯಗಳನ್ನೇ ಕೊಡಿಸಿದರು. ಇಂದು ನಮ್ಮ ಮಹಿಳಾ ಕ್ರಿಕೆಟಿಗರಿಗೂ ಪಂಚತಾರಾ ಸೌಲಭ್ಯಗಳು, ಹೆಚ್ಚುಕಮ್ಮಿ ಪುರುಷ ಕ್ರಿಕೆಟಿಗರಿಗೆ ಸಿಗುವಷ್ಟೇ ಪಂದ್ಯದ ವೇತನಗಳು ಸಿಗುತ್ತಿವೆ. ಆದರೆ, ವಾರ್ಷಿಕ ಗುತ್ತಿಗೆ ಮೊತ್ತದಲ್ಲಿ ಈಗಲೂ ಪುರುಷರ ಮತ್ತು ಮಹಿಳೆಯರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಏಕೆ ಆ ತಾರತಮ್ಯ ಇನ್ನೂ ಹಾಗೇ ಇದೆ? ಜೈ ಶಾ ಅದನ್ನು ಕೂಡ ನಿವಾರಣೆ ಮಾಡಿ, ಇಬ್ಬರಿಗೂ ಸಮಾನ ವೇತನ ಸಿಗುವಂತೆ ಮಾಡುತ್ತಾರೆಂದು ಆಶಿಸೋಣ. ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆರಂಭಿಸಿದ್ದು ಜೈ ಶಾ. ಅದರಿಂದಾಗಿ ಮಹಿಳಾ ಕ್ರಿಕೆಟಿಗರಿಗೆ ತಮ್ಮ ಕೌಶಲಗಳನ್ನು ದೇಸಿ ಮಟ್ಟದಲ್ಲಿ ಪ್ರದರ್ಶಿಸಲು ವೇದಿಕೆ ದೊರೆಯಿತು.
ಜೈ ಶಾ ಮಹಿಳಾ ಕ್ರಿಕೆಟ್‌ನ ಮೂಲಸೌಕರ್ಯವನ್ನು ಬಲಗೊಳಿಸಲು ಸಾಕಷ್ಟು ಆರ್ಥಿಕ ನೆರವು ನೀಡಿದರು. ಅವರಿಗಿರುವ ದೂರದೃಷ್ಟಿಯಿಂದಾಗಿಯೇ 2023ರ ಅಕ್ಟೋಬರ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅಮೋಲ್ ಮಜುಂದಾರ್ ಕೋಚ್ ಆಗಿ ನೇಮಕ ಗೊಂಡರು. ಆ ಸಮಯದಲ್ಲಿ ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದ್ದರು.
‘ಅಮೋಲ್ ಯಾವತ್ತೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನೇ ಆಡಿಲ್ಲ. ಅಂತಹವ ರನ್ನು ಕೋಚ್ ಹುದ್ದೆಗೆ ನೇಮಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದರು. ಆದರೆ ಅದನ್ನೆಲ್ಲ ಜೈ ಶಾ ನಿರ್ಲಕ್ಷಿಸಿದರು. ಅಮೋಲ್ ಮಜುಂದಾರ್ ಬಗ್ಗೆ ಅವರಿಗೆ ಸಂಪೂರ್ಣ ವಿಶ್ವಾಸವಿತ್ತು. ಪರಿಣಾಮ ಏನಾಯಿತು ಎಂಬುದು ಇಂದು ನಮ್ಮ ಕಣ್ಮುಂದೆಯೇ ಇದೆ.
ಮಹಿಳಾ ವಿಶ್ವಕಪ್ ಗೆಲ್ಲುವುದರೊಂದಿಗೆ ಹರ್ಮನ್‌ಪ್ರೀತ್ ಕೌರ್ ಪಡೆ ಭಾರತೀಯ ಕ್ರೀಡಾಲೋಕದಲ್ಲಿ ನಮ್ಮ ಹೆಣ್ಣುಮಕ್ಕಳಿಗೆ ಹೊಸ ಅವಕಾಶಗಳ ದೊಡ್ಡದೊಂದು ಲೋಕದ ಬಾಗಿಲು ತೆರೆದಿದೆ. ಹಿಂದೆಲ್ಲ ಹಳ್ಳಿಗಳಲ್ಲಿ ಗಂಡು ಮಕ್ಕಳಷ್ಟೇ ಕ್ರಿಕೆಟ್ ಆಡುತ್ತಿದ್ದರು. ಕೆಲ ವರ್ಷಗಳಿಂದ ನಮ್ಮ ದೇಶದ ಮಹಿಳಾ ಕ್ರಿಕೆಟ್ ತಂಡ ಜನಪ್ರಿಯತೆ ಗಳಿಸಿದ ಪರಿಣಾಮ ಇಂದು ಹಳ್ಳಿಗಳಲ್ಲಿ ಹೆಣ್ಣುಮಕ್ಕಳೂ ಕ್ರಿಕೆಟ್ ಆಡತೊಡಗಿದ್ದಾರೆ.
ಯಾವುದೇ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಆಟಗಾರರು ದೇಶದ ಯುವಕ ಯುವತಿಯರಲ್ಲಿ ಸ್ಪೂರ್ತಿ ತುಂಬುತ್ತಿದ್ದಾರೆಂಬುದು ಸಾಬೀತಾಗುವುದೇ ಹಳ್ಳಿಹಳ್ಳಿಗಳಲ್ಲಿ ಅವರಿಗೆ ಯುವಕರು ಅಭಿಮಾನಿಗಳಾದಾಗ ಮತ್ತು ಅವರೂ ಆ ಆಟವನ್ನು ಆಡತೊಡಗಿದಾಗ. ಮಹಿಳಾ ಕ್ರಿಕೆಟ್ ವಿಷಯದಲ್ಲಿ ಇಂದು ಈ ಗುರಿ ಸಾಧನೆಯಾಗಿದೆ.
ಈ ಅದ್ಭುತ ಜಯದ ಹೊಸ್ತಿಲಿನಲ್ಲಿ ನಾವು ಭಾರತೀಯ ಮಹಿಳಾ ಕ್ರಿಕೆಟ್‌ನ ಆರಂಭಿಕ ಆಟಗಾರರನ್ನು ಮರೆಯುವಂತಿಲ್ಲ. ಅವರೇ ಮಹಿಳಾ ಕ್ರಿಕೆಟ್‌ಗೆ ಬಲವಾದ ತಳಪಾಯ ಹಾಕಿಕೊಟ್ಟವರು. ಶಾಂತಾ ರಂಗಸ್ವಾಮಿ, ಡಯಾನಾ ಎಡುಲ್ಜಿ, ಅಂಜುಂ ಚೋಪ್ರಾ, ಮಿಥಾಲಿ ರಾಜ್, ಪೂರ್ಣಿಮಾ ರಾವ್, ಜೂಲನ್ ಗೋಸ್ವಾಮಿ, ನೀತು ಡೇವಿಡ್, ಶುಭಾಂಗಿ ಕುಲಕರ್ಣಿ, ವೇದಾ ಕೃಷ್ಣಮೂರ್ತಿ ಮತ್ತು ಶಿಖಾ ಪಾಂಡೆ ನೀಡಿದ ಕೊಡುಗೆಯನ್ನು ಹೇಗೆ ಮರೆಯಲಾದೀತು? ಅವರ ಹೋರಾಟದ ಪ್ರತಿಫಲವೇ ಇಂದು ನಮ್ಮ ಹೆಣ್ಣುಮಕ್ಕಳು ವಿಶ್ವಕಪ್ ಗೆದ್ದುಕೊಂಡು ಬರುವ ಮಟ್ಟಕ್ಕೆ ಬೆಳೆದಿದ್ದಾರೆ.
ಅದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಹೆಣ್ಣು ಮಕ್ಕಳು ಗಂಡುಮಕ್ಕಳಿಗಿಂತ ಯಾವುದರಲ್ಲಿ ಕಮ್ಮಿಯಿದ್ದಾರೆ ಎಂದು ನಾವೆಲ್ಲ ಇಂದು ಹೆಮ್ಮೆಯಿಂದ ಕೇಳುವಂತಾಗಿದೆ. ಮಹಿಳಾ ಕ್ರಿಕೆಟಿಗರ ಸಾಧನೆಯನ್ನು ಇಂದು ಇಡೀ ದೇಶವೇ ಕೊಂಡಾಡುತ್ತಿದೆ. ಈ ಸಂತಸದ ಸಮಯದಲ್ಲೇ ದೇಶಕ್ಕೆ ನಾನೊಂದು ಮನವಿ ಮಾಡುತ್ತೇನೆ.
ದಯವಿಟ್ಟು ನಿಮ್ಮ ಹೆಣ್ಣುಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ. ಅವರಿಗೆ ಅವರಿಷ್ಟದ ಕ್ಷೇತ್ರದಲ್ಲಿ ಬೆಳೆಯಲು ಬೇಕಾದ ಹಣಕಾಸಿನ ನೆರವು ಸಿಗುವಂತೆ ನೋಡಿಕೊಳ್ಳಿ. ನಾವೆಲ್ಲರೂ ಇದೊಂದು ಕೆಲಸ ಮಾಡಿದರೆ ನಮ್ಮ ಹೆಣ್ಣುಮಕ್ಕಳು ದೇಶಕ್ಕೇ ಹೆಮ್ಮೆ ತರುವಂತಹ ಸಾಧನೆಗಳನ್ನು ಮಾಡುತ್ತಾರೆ. ನಮ್ಮ ಹೆಣ್ಣುಮಕ್ಕಳೇನು ಕಮ್ಮಿ ಪ್ರತಿಭಾವಂತರು ಅಂದುಕೊಂಡಿರಾ? ಖಂಡಿತ ಇಲ್ಲ.
ಹೆಣ್ಣುಮಕ್ಕಳು ನಮ್ಮ ಶಕ್ತಿಪುಂಜ, ನಮ್ಮ ಗೌರವದ ಪ್ರತೀಕ, ಅವರಿಗೆ ಮುಕ್ತ ಅವಕಾಶ ಗಳನ್ನು ಕೊಟ್ಟು ನೋಡಿ, ಆಗಸದ ತಾರೆಗಳನ್ನೇ ತಂದು ಕೈಗೆ ಕೊಡುತ್ತಾರೆ, ಏಕೆಂದರೆ ಅವರೇ ನೀಲಾಗಸದ ಪ್ರತೀಕವಾಗಿದ್ದಾರೆ!