Dr T S Vasudevamurthy Column: ಭಾಷಾನೀತಿ: ಪ್ರತ್ಯೇಕಿಸುವ ಗೋಡೆಯಲ್ಲ, ಸಂಪರ್ಕ ಸೇತುವಾಗಲಿ
ತನ್ನ ದೇಸೀ ಭಾಷೆಯ ಮೂಲಕವೇ ಮಾರ್ಗಭಾಷೆಯಾದ ಸಂಸ್ಕೃತದೊಂದಿಗೆ ಬೆಸುಗೆ ಹೊಂದುವ ಪ್ರಯತ್ನವನ್ನು ಪಂಪ ಮಾಡಿದ್ದ (ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗ ದೊಳ್ ತಳ್ವುದು- ಪಂಪಭಾರತ 1.8). 2ನೇ ನಾಗವರ್ಮ ‘ಕರ್ಣಾಟಕ ಭಾಷಾ ಭೂಷಣ’ದ ಮೂಲಕ ಕನ್ನಡ ವ್ಯಾಕರಣವನ್ನು ಸಂಸ್ಕೃತ ಲೋಕಕ್ಕೆ ಪರಿಚಯಿಸಿದ.
-
ಭಾಷೆ-ಭಾವ
ಡಾ.ಟಿ.ಎಸ್.ವಾಸುದೇವಮೂರ್ತಿ
ಸಂವಿಧಾನವು 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಗುರುತಿಸಿದೆ. ನಮ್ಮ ಶಿಕ್ಷಣ ವ್ಯವಸ್ಥೆಗಳು ಸಹಜವಾಗಿಯೇ ಈ ಅಧಿಕೃತ ಭಾಷಾ ಮಾಧ್ಯಮಗಳಲ್ಲಿ ಶಿಕ್ಷಣ ನೀಡುತ್ತವೆಯೇ ವಿನಾ ಸಾವಿರಾರು ಮಾತೃಭಾಷೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತಿಲ್ಲ.
ತಾರತಮ್ಯ, ಭೇದಬುದ್ಧಿ, ಪ್ರತ್ಯೇಕತಾ ಭಾವ ಇವೇ ಮುಂತಾದ ಮಾನಸಿಕ ರೋಗಗಳು ನಮ್ಮ ಸಾಮಾಜಿಕ ವ್ಯವಸ್ಥೆಯನ್ನಷ್ಟೇ ಅಲ್ಲ ಮನುಷ್ಯ ಬದುಕಿನ ಸಮಸ್ತ ಆಯಾಮ ಗಳನ್ನೂ ನರಳಿಸುತ್ತಿವೆ. ಉದಾಹರಣೆಗೆ, ಸಂವಹನಕ್ಕಾಗಿ ನುಡಿಯುವ ಭಾಷೆಯಲ್ಲೂ ಪ್ರಧಾನಭಾಷೆ, ಅಧೀನಭಾಷೆ, ಜನಭಾಷೆ, ಪ್ರಭುತ್ವ ಭಾಷೆ ಎಂಬಿತ್ಯಾದಿ ವರ್ಗೀಕರಣ ಉಂಟಾಗಿದೆ.
ನಮ್ಮ ರಾಜಕಾರಣಿಗಳು ಆಡಳಿತದ ಅನುಕೂಲಕ್ಕಾಗಿಯೋ ಅಥವಾ ರಾಜಕೀಯ ಸ್ವಾರ್ಥ ಕ್ಕಾಗಿಯೋ ಭಾಷೆ ಭಾಷೆಗಳ ನಡುವೆ ಬಿರುಕು ಮೂಡಿಸಿ ವೈಷಮ್ಯವನ್ನು ಬಿತ್ತಬಹುದು. ಆದರೆ ‘ಸರ್ವಭಾಷಾಮಯೀ ಸರಸ್ವತೀ’ (ಸರಸ್ವತಿಯು ಎಲ್ಲ ಭಾಷೆಗಳನ್ನೂ ಒಳಗೊಂಡ ವಳು) ಎಂಬುದು ಪ್ರಾಚೀನ ಕಾಲದಿಂದಲೂ ಭಾರತೀಯರು ಅನುಸರಿಸುತ್ತ ಬಂದಿರುವ ವಿವೇಕವಾಗಿದೆ.
ನಮ್ಮ ನಡುವಿನ ಒಂದು ಭಾಷೆಗೆ ಹಾನಿಯಾದರೂ ಸರಸ್ವತಿಯ ಒಂದು ಅಂಶಕ್ಕೆ ಹಾನಿ ಯಾದಂತೆ. ಇದನ್ನು ಮನಗಂಡೇ ನಮ್ಮ ಪ್ರಾಚೀನ ಕವಿಗಳು ಭಾಷಾ ದ್ವೇಷವನ್ನು ಬೆಳೆಸಿ ಕೊಳ್ಳಲಿಲ್ಲ, ಭಾಷೆಗಳ ನಡುವೆ ಸಮನ್ವಯತೆಯನ್ನು ಬೆಸೆಯುವ ನಿಟ್ಟಿನಲ್ಲಿ ಪ್ರಯತ್ನಿಸಿ ದರು.
ತನ್ನ ದೇಸೀ ಭಾಷೆಯ ಮೂಲಕವೇ ಮಾರ್ಗಭಾಷೆಯಾದ ಸಂಸ್ಕೃತದೊಂದಿಗೆ ಬೆಸುಗೆ ಹೊಂದುವ ಪ್ರಯತ್ನವನ್ನು ಪಂಪ ಮಾಡಿದ್ದ (ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗ ದೊಳ್ ತಳ್ವುದು- ಪಂಪಭಾರತ 1.8). 2ನೇ ನಾಗವರ್ಮ ‘ಕರ್ಣಾಟಕ ಭಾಷಾ ಭೂಷಣ’ದ ಮೂಲಕ ಕನ್ನಡ ವ್ಯಾಕರಣವನ್ನು ಸಂಸ್ಕೃತ ಲೋಕಕ್ಕೆ ಪರಿಚಯಿಸಿದ.
“ಕಸವರಮೆಂಬುದು ಸೈರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮಮುಮಂ" ಎಂದು ಕವಿರಾಜಮಾರ್ಗಕಾರ ನುಡಿದ. ಬೇಂದ್ರೆ, ಮಾಸ್ತಿ, ನಾ. ಕಸ್ತೂರಿ, ತರಾಸು ಮುಂತಾದ ಕನ್ನಡೇತರ ಮಾತೃಭಾಷಾ ಹಿನ್ನೆಲೆಯುಳ್ಳ ಯಾವ ಸಾಹಿತಿಗೂ ಮತ್ತೊಂದು ಭಾಷೆ ಸಮಸ್ಯೆಯಾಗಲಿಲ್ಲ. ಇಂದು ಭಾಷೆಗಳ ನಡುವಿನ ಈ ಸೌಹಾರ್ದಭಾವ ಕ್ಷೀಣಿಸುತ್ತಿದೆ. ತತ್ಪರಿಣಾಮವಾಗಿ ಭಾಷೆಗಳೂ ಪರಸ್ಪರ ಗೋಡೆಗಳನ್ನು ನಿರ್ಮಿಸಿಕೊಂಡು ನಶಿಸುತ್ತಿವೆ.
2010ರಲ್ಲಿ ತೈವಾನ್ನ ‘ಪಜೇ’ ಭಾಷೆಯನ್ನು ಮಾತನಾಡುವವರ ಪೈಕಿ 12 ಜನ ಮಾತ್ರ ಉಳಿದಿದ್ದರು. ಇದರ ಮರುವರ್ಷ ಅಂದರೆ 2011ರಲ್ಲಿ ಆ ಭಾಷೆಯನ್ನು ನುಡಿಯುತ್ತಿದ್ದ ಏಕಮಾತ್ರ ವ್ಯಕ್ತಿ ತೀರಿಕೊಂಡ, ಅವನೊಂದಿಗೆ ಆ ಭಾಷೆಯೂ ಸತ್ತಿತು. ಇದು ಒಂದು ಭಾಷೆಯ ಕತೆಯಲ್ಲ, ಜಗತ್ತಿನಾದ್ಯಂತ ಸಾವಿರಾರು ಭಾಷೆಗಳು ಹೀಗೆ ಸತ್ತಿವೆ, ನೂರಾರು ಭಾಷೆಗಳು ಅವಸಾನದ ಅಂಚಿನಲ್ಲಿವೆ. ಅದರಲ್ಲೂ ಭಾರತದಲ್ಲಿ ಇರುವಷ್ಟು ಭಾಷೆಗಳು ಜಗತ್ತಿನ ಇನ್ನಾವ ದೇಶದಲ್ಲೂ ಇಲ್ಲ.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ಸರ್ವೇಕ್ಷಣೆಯ ಪ್ರಕಾರ ಭಾರತದ 197 ಭಾಷೆಗಳು ಅಪಾಯದಂಚಿನಲ್ಲಿವೆ. ಜಗತ್ತಿನ ಮತ್ತಾವ ಪ್ರಾದೇಶಿಕ ಸಮುದಾಯದಲ್ಲೂ ಇಷ್ಟೊಂದು ಸಂಖ್ಯೆಯ ಭಾಷೆಗಳು ಅವನತಿಯ ದಿಕ್ಕಿನಲ್ಲಿ ಸಾಗುತ್ತಿಲ್ಲ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ 1652 ಮಾತೃಭಾಷೆಗಳಿವೆ. ಇವುಗಳ ಪೈಕಿ ಎಷ್ಟೋ ಭಾಷೆಗಳನ್ನು 10000ಕ್ಕಿಂತಲೂ ಕಡಿಮೆ ಜನ ಮಾತನಾಡುತ್ತಿದ್ದಾರೆ. ಅಂಡಮಾ ನಿನ ಆಡುಭಾಷೆಯಾದ ‘ಅಕಾಬೋ’ ಈಗಾಗಲೇ ನಷ್ಟವಾಗಿದೆ, ಆ ಭಾಷೆಯನ್ನು ಬಳಸು ತ್ತಿದ್ದ ಜನಗಳಾರೂ ಇಂದು ಬದುಕಿಲ್ಲ. ಭಾರತದ ಒಳಗೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಏನೂ ಇಲ್ಲ.
ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗದ ಕೆಲವು ಪ್ರಾಂತ್ಯಗಳಲ್ಲಿ ಹರಡಿರುವ ಬೃಹಚ್ಚರಣ’ ಭಾಷೆಯನ್ನು (ಡಿವಿಜಿ ಅವರ ಮಾತೃಭಾಷೆ) ಮಾತನಾಡುವವರ ಸಂಖ್ಯೆ ಕೇವಲ 2000ಕ್ಕೆ ಇಳಿದಿದೆ. ಭಾಷೆಯ ಅಳಿವಿಗೆ ಹಲವು ಕಾರಣಗಳಿರಬಹುದು.
ಉದಾಹರಣೆಗೆ ಭಾಷಿಕ ಅಲ್ಪಸಂಖ್ಯಾತರು ಜೀವನೋಪಾಯಕ್ಕಾಗಿ ಪ್ರಧಾನ ಭಾಷೆಯ ಪ್ರದೇಶಗಳಿಗೆ ವಲಸೆ ಹೋಗಬಹುದು, ಅಲ್ಲಿಯ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿಸಿ ಕೊಳ್ಳಬಹುದು. ಆಧುನಿಕತೆಯ ಹಿಂದೆ ಬಿದ್ದು ತಮ್ಮ ಸ್ಥಳೀಯ ಭಾಷೆ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳುವ ಆಸಕ್ತಿ, ಇಚ್ಛಾಶಕ್ತಿಗಳನ್ನು ಕಳೆದುಕೊಳ್ಳಬಹುದು.
ಎಷ್ಟೋ ಭಾಷೆಗಳಿಗೆ ಸಮೂಹ ಮಾಧ್ಯಮ, ಡಿಜಿಟಲ್ ಉಪಕರಣಗಳು, ಸಾಂಸ್ಥಿಕ ಬೆಂಬಲ ಇವುಗಳ ಕೊರತೆ ಇದೆ. ಈ ಕೊರತೆಯೂ ಭಾಷೆಯ ಅಳಿವಿಗೆ ಕಾರಣವಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿತ್ತು.
ಇಂಗ್ಲಿಷ್ ಮಾತನಾಡುವುದು ಪ್ರತಿಷ್ಠೆಯ ವಿಷಯವಾಗಿತ್ತು. ಆಗ ಕನ್ನಡ ಮಾತನಾಡಲು ನಮ್ಮ ಜನ ಕೀಳರಿಮೆ ಅನುಭವಿಸುತ್ತಿದ್ದರು. ಮುಂದೆ, ಬಿಎಂಶ್ರೀ, ಕುವೆಂಪು, ಅನಕೃ, ಆಲೂರು ವೆಂಕಟರಾಯ ಮುಂತಾದ ಸಾಹಿತಿ, ಚಳವಳಿಗಾರರ ಪ್ರಯತ್ನದಿಂದಾಗಿ ಕನ್ನಡ ಮಾತು ತಲೆಯೆತ್ತುವಂತಾಯಿತು.
ಇಂದು ಭಾಷಿಕ ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆಯ ವಿಷಯದಲ್ಲಿ ಇದೇ ಕೀಳರಿಮೆ ಬೆಳೆಸಿಕೊಂಡಿದ್ದಾರೆ. ತಮ್ಮ ಮಾತೃಭಾಷೆಯನ್ನು ತಮ್ಮ ಬಳಗದ ಒಳಗೆ ಬಳಸಲೂ ಹಿಂಜರಿಯುತ್ತಿದ್ದಾರೆ. ಈ ಕೀಳರಿಮೆಯೂ ಭಾಷಾ ಅವನತಿಗೆ ಕಾರಣವಾಗಿದೆ. ಇಂಥ ಕೀಳರಿಮೆಯಿಂದ ಹೊರಬರಬೇಕಾದ ಅಗತ್ಯವಿದೆ. ಇಂದು ಅಂಥ ಪ್ರಯತ್ನಗಳೂ ಅಲ್ಲಲ್ಲಿ ಕಾಣಿಸುತ್ತಿವೆ.
‘ಸಂತಾಲಿ’ ಭಾಷೆಯು ಸಂವಿಧಾನದ ೮ನೇ ಪರಿಚ್ಛೇದದ ಅಡಿಯಲ್ಲಿ 2003ರಲ್ಲಿ ಅಧಿಕೃತ ಸ್ಥಾನಮಾನವನ್ನು ಪಡೆಯುವಂತೆ ಮಾಡುವಲ್ಲಿ ಈಶಾನ್ಯ ಭಾಗದ ಜನರು ಯಶಸ್ವಿ ಯಾದರು. ಅಸ್ಸಾಮಿನ ‘ಬೋಡೋ’ ಭಾಷೆಯೂ 2002ರಲ್ಲಿ ಅಧಿಕೃತ ಭಾಷೆಯಾಯಿತು. ಅಷ್ಟು ದೂರವೇಕೆ ಪಕ್ಕದ ಗೋವಾ ರಾಜ್ಯವೂ ತೊಂಬತ್ತರ ದಶಕದಲ್ಲಿ ಈ ನಿಟ್ಟಿನಲ್ಲಿ ಯಶಸ್ವಿಯಾಯಿತು.
ಶಾಲಾ ಕಾಲೇಜುಗಳಲ್ಲಿ ಕೊಂಕಣಿ ಪಠ್ಯವನ್ನು ಅಳವಡಿಸಿತು (ಈ ನಿಟ್ಟಿನಲ್ಲಿ ತುಳು ಭಾಷಿಕರೂ ಹಲವು ದಶಕಗಳಿಂದ ಹೋರಾಡುತ್ತಿದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದನ್ನು ಸಾಧಿಸಲು ಸಾಧ್ಯವಾಗದಿರುವುದು ವಿಷಾದಕರ).
ಸಂವಿಧಾನವು 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಗುರುತಿಸಿದೆ. ನಮ್ಮ ಶಿಕ್ಷಣ ವ್ಯವಸ್ಥೆಗಳು ಸಹಜವಾಗಿಯೇ ಈ ಅಧಿಕೃತ ಭಾಷಾ ಮಾಧ್ಯಮಗಳಲ್ಲಿ ಶಿಕ್ಷಣ ನೀಡುತ್ತ ವೆಯೇ ವಿನಾ ಸಾವಿರಾರು ಮಾತೃಭಾಷೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುತ್ತಿಲ್ಲ. ಆ ಕೆಲಸ ಹಾಲಿ ಶಿಕ್ಷಣ ವ್ಯವಸ್ಥೆಯಿಂದ ಸಾಧ್ಯವೂ ಇಲ್ಲ, ಆಯಾ ಭಾಷೆಗಳನ್ನು ಬಳಸುವ ಸಮುದಾಯಗಳೇ ತಮ್ಮ ತಮ್ಮ ಭಾಷೆಗಳನ್ನು ಸಂರಕ್ಷಿಸಿ ಕೊಳ್ಳುವ ಪ್ರಯತ್ನ ಮಾಡಬೇಕಿದೆ.
ಸರಕಾರಗಳ ಇಚ್ಛಾಶಕ್ತಿಯಿಂದ ಇಂಥ ಭಾಷೆಗಳ ಪ್ರವರ್ಧನೆ ಸಾಧ್ಯವಿದೆ. ಇದಕ್ಕೆ ಸಂವಿಧಾನದ ಬೆಂಬಲವೂ ಇದೆ. ಭಾಷಿಕ ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದನ್ನು ಸಂವಿಧಾನದ ಪರಿಚ್ಛೇದ 350 ಮತ್ತು 350-ಎ ಬೆಂಬಲಿಸುತ್ತವೆ. ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಲು ಸಹ ಸಂವಿಧಾನ ಸೂಚಿಸುತ್ತದೆ. ಆದ್ದರಿಂದ ಭಾಷೆಯ ಬೆಳವಣಿಗೆಗೆ ಹಾಗೂ ಭಾಷೆ ಭಾಷೆಗಳ ನಡುವಣ ಸೌಹಾರ್ದತೆಯ ಸಾಧನೆಗೆ ಸರಕಾರದ ನೀತಿ ನಿಯಮಾವಳಿಗಳು ಪರಿಣಾಮಕಾರಿಯಾಗಿ ನೆರವಾಗಬಲ್ಲವು.
ಇಂದು ಭಾರತದ ಉದ್ದಗಲಕ್ಕೂ ರಾಜ್ಯ ರಾಜ್ಯಗಳ ನಡುವಿನ ಗಡಿಗಳ ದ್ವಿಭಾಷಿಕ ಪ್ರದೇಶ ಗಳು ಪ್ರಧಾನವಾಗಿ ರಾಜಕೀಯ ಹಸ್ತಕ್ಷೇಪದಿಂದಷ್ಟೇ ಉದ್ಭವವಾಗುವ ಸಮಸ್ಯೆಗಳನ್ನು ಎದುರಿಸುತ್ತಿವೆ. ಅದು ಈಶಾನ್ಯ ರಾಜ್ಯಗಳಿರಬಹುದು, ಜಮ್ಮು -ಕಾಶ್ಮೀರವಿರಬಹುದು ಅಥವಾ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಪ್ರದೇಶವಿರ ಬಹುದು.
ದ್ವಿಭಾಷಿಕ ಪ್ರದೇಶಗಳಲ್ಲಿ ಎರಡಲ್ಲ, ಹಲವು ಭಾಷೆಗಳನ್ನಾಡುವ ಜನಗಳು ಸಮಸ್ಯೆಯೇ ಇಲ್ಲದಂತೆ ಜೀವಿಸುತ್ತಾರೆ. ಆದರೆ ರಾಜಕಾರಣಿಗಳು ಭಾಷೆಯನ್ನು ಒಂದು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮುನ್ನೆಲೆಗೆ ತಂದು ಇಲ್ಲದ ಸಮಸ್ಯೆಯನ್ನು ಹುಟ್ಟು ಹಾಕುತ್ತಾರೆ. ಇಂದು ಕೇರಳ ಸರಕಾರ ಮಂಡಿಸಲಿರುವ ಮಾತೃಭಾಷೆಯ ಮಸೂದೆಯನ್ನು ಈ ಹಿನ್ನೆಲೆಯಲ್ಲಿ ಅವಲೋಕಿಸಬೇಕಾಗುತ್ತದೆ.
ರಾಜಕಾರಣಿಗಳೇ ಹುಟ್ಟುಹಾಕಿರುವ ಇಂಥ ಸಮಸ್ಯೆಗಳ ಪರಿಹಾರಕ್ಕೆ ಪುನಃ ರಾಜಕಾರಣಿ ಗಳಿಗೇ ಮೊರೆಹೋಗುವುದು ಜಾಣತನವಲ್ಲ. ಭಾಷಾತಜ್ಞರು ಹಾಗೂ ಕಾನೂನುತಜ್ಞರು ಈ ಕುರಿತು ಚರ್ಚಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಮೊದಲ ಪರಿಹಾರೋಪಾಯವೆಂದರೆ ದ್ವಿಭಾಷಿಕ ಆಡಳಿತ ನೀತಿ. ಗಡಿಪ್ರದೇಶದ ಸ್ಥಳೀಯ ಆಡಳಿತದಲ್ಲಿ ದ್ವಿಭಾಷಿಕ ನೀತಿಯನ್ನು ಜಾರಿಗೆ ತರಬಹುದು.
ಶಿಕ್ಷಣ, ಆಡಳಿತ, ಸಾರ್ವಜನಿಕ ಫಲಕಗಳು ಹಾಗೂ ವ್ಯವಹಾರಗಳಲ್ಲಿ ಎರಡೂ ಭಾಷೆಗಳ ಬಳಕೆಯನ್ನು ಜಾರಿಗೆ ತರುವುದು. ಈ ಬಗೆಯ ಆಡಳಿತ ಕ್ರಮವನ್ನು ಸಂವಿಧಾನದ 29 ಹಾಗೂ 30ನೇ ಪರಿಚ್ಛೇದಗಳೂ ಅನುಮೋದಿಸುತ್ತದೆ.
ಎರಡನೆಯದಾಗಿ, ಸ್ವಾತಂತ್ರ್ಯಾನಂತರ ಭಾಷೆಯ ಆಧಾರದ ಮೇಲೆ ರಾಜ್ಯಗಳ ಏಕೀಕರಣ ವಾದರೂ ಗಡಿರೇಖೆಗಳ ರೂಪುರೇಷೆ ಒಂದೇ ಸಲಕ್ಕೆ ನಿರ್ಣಯವಾಗುವ ಸಂಗತಿಯಲ್ಲ. ಆದ್ದರಿಂದಲೇ ಕೇಂದ್ರ ಸರಕಾರವು ಏಕೀಕರಣವಾದ ಮೇಲೆ ಫಸಲ್ ಅಲಿ ಆಯೋಗವನ್ನು ರೂಪಿಸಿತ್ತು. ಇಂಥ ರಾಜ್ಯಗಳ ಪುನರ್ವಿಂಗಡಣಾ ಆಯೋಗಗಳು ಕಾಲಕಾಲಕ್ಕೆ ರೂಪು ಗೊಂಡು ಭಾಷಿಕ ಸರ್ವೇಕ್ಷಣೆಯ ಮೂಲಕ ಗಡಿವಿವಾದವನ್ನು ಬಗೆಹರಿಸಬೇಕಾಗಿದೆ. ಸ್ಥಳೀಯ ಆಡಳಿತದೊಂದಿಗೆ ಗಡಿ ಪ್ರದೇಶಗಳ ವ್ಯಾಪ್ತಿಯನ್ನು ಪುನರ್ವಿಂಗಡಣೆ ಮಾಡ ಬೇಕಾಗಿದೆ.
ಮೂರನೆಯದಾಗಿ ಕೇಂದ್ರ ಸರಕಾರದ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಅಭಿಯಾನದ ಅಡಿಯಲ್ಲಿ ರಾಜ್ಯ ರಾಜ್ಯಗಳು ತಮ್ಮ ಭಾಷಿಕ, ಆರ್ಥಿಕ, ನೈಸರ್ಗಿಕ, ಸಾಂಸ್ಕೃತಿಕ ಸಂಪತ್ತನ್ನು ಪರಸ್ಪರ ಪರಿಚಯಿಸುವ, ವಿನಿಮಯ ಮಾಡಿಕೊಳ್ಳುವ ಸಾಧ್ಯತೆಯನ್ನು ಶೋಧಿಸಿಕೊಳ್ಳಬಹುದು.
ಜಾಗತೀಕರಣದ ಪ್ರಭಾವದಿಂದಾಗಿ ಇಂಗ್ಲಿಷ್ ಭಾಷೆ ಬೆಳೆಯುತ್ತಿದೆಯಾದರೂ ಈ ಬೆಳವಣಿಗೆ ಕೇವಲ ಭಾರತೀಯ ಭಾಷೆಗಳ ಮೇಲಷ್ಟೇ ಅಲ್ಲ, ಸ್ವತಃ ಯುರೋಪಿನ ಹಲವು ಸ್ಥಳೀಯ ಭಾಷೆ, ಉಪಭಾಷೆಗಳಿಗೂ ಮಾರಕವಾಗಿ ಪರಿಣಮಿಸಿದೆ. ಇಂಥ ಸನ್ನಿವೇಶದಲ್ಲಿ ನಮ್ಮ ರಾಜ್ಯಗಳು ಕ್ಷುಲ್ಲಕ ರಾಜಕೀಯ ಉದ್ದೇಶಕ್ಕಾಗಿ ಗಡಿಭಾಗದ ಹೊರನಾಡಿನ ಭಾಷೆಗಳನ್ನು- ಅದು ಬೆಳಗಾವಿ ಇರಬಹುದು, ಬಳ್ಳಾರಿ ಇರಬಹುದು, ಅಥವಾ ಕಾಸರ ಗೋಡು ಇರಬಹುದು- ನಿರ್ಲಕ್ಷಿಸದೇ ಪಂಪ-ನಾಗವರ್ಮರಂತೆ ಭಾಷೆಗಳ ನಡುವೆ ಸೇತುವೆ ಕಟ್ಟುವ ಪ್ರಯತ್ನ ಮಾಡಬೇಕಾಗಿದೆ.
ಯಾವುದೇ ನೀತಿಯನ್ನು ಜಾರಿಗೆ ತರುವಾಗಲೂ ಗಡಿಭಾಗದ ಜನಸಾಮಾನ್ಯರ ಮತ್ತು ಭಾಷೆ ಹಾಗೂ ಕಾನೂನುತಜ್ಞರ ಅಭಿಮತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ.
(ಲೇಖಕರು ಸಹ-ಪ್ರಾಧ್ಯಾಪಕರು, ಆದಿಚುಂಚನಗಿರಿ ವಿಶ್ವವಿದ್ಯಾಲಯ)