ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahalli Column: ಬದುಕಿನಲ್ಲಿ ಅಂಕಿ ಸಂಖ್ಯೆಗಳದ್ದೆ ಸಾಮ್ರಾಜ್ಯ !

ನನ್ನ ಬಾಲ್ಯದಲ್ಲಿ ಹಿರಿಯರು ಅಂದರೆ ಅಜ್ಜಿ-ತಾತಂದಿರು ಈ ಮಟ್ಟಕ್ಕೆ ಸಂಖ್ಯೆಗಳ ವ್ಯಾಮೋ ಹಕ್ಕೆ ಬಿದ್ದಿರಲಿಲ್ಲ. ನಿವೃತ್ತಿ ನಂತರ ದೇವರ ಸ್ಮರಣೆಯಲ್ಲಿ ದಿನವನ್ನು ದೂಡುತ್ತಿದ್ದರು. ಯಾವಾಗ ಭೂಮಿಗೆ ಚಿನ್ನವನ್ನೂ ಮೀರಿಸಿದ ಬೆಲೆ ಬಂತು ನೋಡಿ, ಅಂದಿನಿಂದ ಮನೆ ಮನೆಯಲ್ಲಿ ಸಂಖ್ಯೆಗಳ ಗುದ್ದಾಟ ಶುರುವಾಯ್ತು

ಬದುಕಿನಲ್ಲಿ ಅಂಕಿ ಸಂಖ್ಯೆಗಳದ್ದೆ ಸಾಮ್ರಾಜ್ಯ !

-

ವಿಶ್ವರಂಗ

ಒಮ್ಮೆ ಹಾಗೆ ಗಮನಿಸಿ ನೋಡಿ ಬದುಕಿನಲ್ಲಿ ಸಂಖ್ಯೆಗಳದ್ದೇ ಸಾಮ್ರಾಜ್ಯ. ವ್ಯಕ್ತಿ ಎಷ್ಟೇ ಶ್ರೀಮಂತನಿರಲಿ ಅಥವಾ ಬಡವನಿರಲಿ ಎಲ್ಲರ ಬದುಕಿನಲ್ಲೂ ಸಂಖ್ಯೆ ಮಾತ್ರ ಇದ್ದೇ ಇರುತ್ತದೆ. ಸಂಖ್ಯೆಗಳಿಲ್ಲದ ಬದುಕನ್ನು ಇಂದಿಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ವ್ಯಕ್ತಿ ಹುಟ್ಟಿದ ದಿನಾಂಕದಿಂದ ಶುರುವಾಗುವ ಈ ಸಂಖ್ಯೆಗಳ ಆಟ ನಿಲ್ಲುವುದು ಕೂಡ ಸಂಖ್ಯೆಯೊಂದಿಗೆ.

ಸಂಖ್ಯೆ ಅಥವಾ ನಂಬರ್‌ಗಳು ಬದುಕಿನ ಅತಿ ಮುಖ್ಯ ಭಾಗವಾಗಿದೆ. ಕೆಲವೊಮ್ಮೆ ನಾವು ಅದರ ಬಗ್ಗೆ ಮಾತನಾಡದೆ ಇದ್ದರೂ ಅದು ನಮ್ಮ ಜೀವನದಲ್ಲಿ ಮಾತ್ರ ಇದ್ದೇ ಇರುತ್ತದೆ. ಮಕ್ಕಳಿದಾಗ ಶಾಲೆಯಲ್ಲಿ ತೆಗೆಯುವ ಅಂಕ ಮುಖ್ಯವಾದರೆ, ಯವ್ವನದಲ್ಲಿ ಗಳಿಸುವ ಆದಾಯ, ಮಧ್ಯ ವಯಸ್ಸಿನಲ್ಲಿ ಬಿಪಿ ಶುಗರ್ ಸಂಖ್ಯೆ, ಮುಪ್ಪು ಆವರಿಸುತ್ತಾ ತಿನ್ನುವ ಗುಳಿಗೆಗಳ ಲೆಕ್ಕ ಒಟ್ಟಿನಲ್ಲಿ ಬದುಕೆಂದರೆ ಅದೊಂದು ಗಣಿತ. ಎಲ್ಲವೂ ಸಂಖ್ಯಾಶಾಸ್ತ್ರ!

ನಿತ್ಯವೂ ನಡೆಯುವ ಅಭ್ಯಾಸ ಇರುವ ಕಾರಣ ನಡಿಗೆಯಲ್ಲಿ ಹಲವಾರು ರೀತಿಯ ಮಾತುಗಳು ಬೇಡವೆಂದರೂ ಕಿವಿಗೆ ಬೀಳುತ್ತವೆ. ಅಲ್ಲಿ ಬಹಳ ಮುಖ್ಯವಾಗಿ ಕೇಳಿಸುವುದು ಸಂಖ್ಯೆಗಳು. ಇವತ್ತಿನ ದಿನದಲ್ಲಿ ಎಲ್ಲರ ಬಾಯಲ್ಲೂ ಕೋಟಿಗಳು ಸರಾಗವಾಗಿ ಉದುರು ತ್ತವೆ.

ಒಂದು ಪುಟಾಣಿ ಮನೆಯನ್ನು ಹೊಂದಬೇಕು ಎಂದರೆ ಕೋಟಿಗಿಂತ ಕಡಿಮೆ ಹಣವಿದ್ದಲ್ಲಿ ಹೇಗೆ ಸಾಧ್ಯ? ಇನ್ನು ಜಮೀನು ಮಾರಿದೆ ಅಷ್ಟು ಬಂತು ಇಷ್ಟು ಬಂತು ಎನ್ನುವ ಮಾತು ಗಳು, ಮಗ ಹೊಸದಾಗಿ ವ್ಯಾಪಾರ ಶುರು ಮಾಡಲು ನೀಡಿದ ಹಣ, ಹೀಗೆ ಎಲ್ಲವೂ ದುಡ್ಡಿನ ಮಯ. ಸಂಖ್ಯೆ, ಸಂಖ್ಯೆ, ಸಂಖ್ಯೆ!

ನನ್ನ ಬಾಲ್ಯದಲ್ಲಿ ಹಿರಿಯರು ಅಂದರೆ ಅಜ್ಜಿ-ತಾತಂದಿರು ಈ ಮಟ್ಟಕ್ಕೆ ಸಂಖ್ಯೆಗಳ ವ್ಯಾಮೋಹಕ್ಕೆ ಬಿದ್ದಿರಲಿಲ್ಲ. ನಿವೃತ್ತಿ ನಂತರ ದೇವರ ಸ್ಮರಣೆಯಲ್ಲಿ ದಿನವನ್ನು ದೂಡು ತ್ತಿದ್ದರು. ಯಾವಾಗ ಭೂಮಿಗೆ ಚಿನ್ನವನ್ನೂ ಮೀರಿಸಿದ ಬೆಲೆ ಬಂತು ನೋಡಿ, ಅಂದಿನಿಂದ ಮನೆ ಮನೆಯಲ್ಲಿ ಸಂಖ್ಯೆಗಳ ಗುದ್ದಾಟ ಶುರುವಾಯ್ತು. ಅದು ಸಂಖ್ಯೆಗೆ ಮಾತ್ರ ಸೀಮಿತ ವಾಗದೆ ಸಂಬಂಧಗಳಲ್ಲಿಗೂ ವಿಸ್ತರಿಸಿತು. ಸಂಖ್ಯೆಗಳು ಮನುಷ್ಯನ ಸಂಬಂಧ ಗಳನ್ನು ಬೆಸೆಯುವ, ಹೊಡೆಯುವ ಮಟ್ಟಕ್ಕೆ ಮುಖ್ಯವಾದವು. ಈಗ ಚುನಾವಣೆ ಸಮಯ ಬೇರೆ!

ಇದನ್ನೂ ಓದಿ: Rangaswamy Mookanahalli Column: ಕನ್ನಡ ಎನ್ನುವುದು ನಮ್ಮ ಗುರುತಾಗಬೇಕು..

ಸಂಖ್ಯೆಗಳು ಇನ್ನಷ್ಟು ಮಹತ್ವದ ಪಾತ್ರ ವಹಿಸುತ್ತವೆ. ಈ ಸಂಖ್ಯೆಗಳನ್ನ ಸರಿಯಾಗಿ ಬಳಸಿ ಕೊಳ್ಳುವ ಸಾಮರ್ಥ್ಯವುಳ್ಳವರು ಜಯಗಳಿಸುತ್ತಾರೆ. ಇದನ್ನು ಡೇಟಾ ಕಲೆಕ್ಷನ್ ಅಂತಲೂ ಕರೆಯುತ್ತೇವೆ. ಕೊನೆಗೂ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಫಲಿತಾಂಶ ಏನಾಯಿತು ಎನ್ನುವುದು ಕೂಡ ಸಂಖ್ಯೆಯಲ್ಲಿ ನಮೂದಿಸಿಸಲ್ಪಡುತ್ತವೆ.

ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಕಾವು ಜೋರಾಗಿದೆ. ದಾವಣಗೆರೆಯಲ್ಲಿ ಉಪಚುನಾವಣೆ ಬಹಳ ಸುದ್ದಿಯಾಗುತ್ತಿದೆ. ಇಲ್ಲಿ ಜಾತಿ, ಧರ್ಮದ ಸಮೀಕರಣಗಳ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಆದರೆ, ಇಲ್ಲೂ ಪ್ರಮುಖ ಪಾತ್ರಧಾರಿ ಸಂಖ್ಯೆ. ನೀವೇ ಗಮನಿಸಿ ನೋಡಿ, ಅಲ್ಲಿ ಅಲ್ಪಸಂಖ್ಯಾತರು ಇಂದಿಗೆ ಅಲ್ಪಸಂಖ್ಯಾತರಾಗಿ ಉಳಿದಿಲ್ಲ.

ಹೀಗಾಗಿ ನಮ್ಮವರಿಗೆ ಸೀಟು ಕೊಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಮನೆತನಕ್ಕೆ ಇರುವ ಗೌರವದ ಬಗ್ಗೆ ವಿಶೇಷವಾಗಿ ಹೇಳಬೇಕಾದ ಅವಶ್ಯಕತೆ ಯಿಲ್ಲ. ಅಲ್ಲಿ ಸಂಖ್ಯಾಬಲದ ಆಧಾರದ ಮೇಲೆ ವಿಭಜನೆ ಶುರುವಾಗಿದೆ. ಚುನಾವಣೆಗೆ ಬೇಕಾಗುವ ಅತಿ ಮುಖ್ಯ ಅಂಕಿಅಂಶಗಳೇನು ಎನ್ನುವುದನ್ನು ಅವಲೋಕಿಸೋಣ.

1) ಎಲ್ಲಕ್ಕೂ ಮೊದಲು ಎಷ್ಟು ಜನ ವೋಟ್ ಮಾಡುವ ಅಧಿಕಾರ ಪಡೆದಿದ್ದಾರೆ ಎನ್ನುವುದು ಅತಿ ಮುಖ್ಯ ಮಾಹಿತಿಯಾಗುತ್ತದೆ. ಈ ಬಾರಿ ಎಷ್ಟು ಕೋಟಿ ಜನ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ?

2) ಎರಡು ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆಯೇ?

3) ಎಷ್ಟು ಜನ ಅನಿವಾಸಿ ಭಾರತೀಯರು ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿ ದ್ದಾರೆ?

4) ಮತದಾನ ದಿನಾಂಕ ಯಾವುದು?

5) ಮತ ಎಣಿಕೆ ದಿನಾಂಕ ಯಾವುದು?

6) ಒಟ್ಟು ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ? ಈ ಸ್ಥಾನಗಳನ್ನು ಪಡೆಯುವ ಆಕಾಂಕ್ಷೆ ಹೊಂದಿರುವ ಉಮೇದುವಾರರ ಸಂಖ್ಯೆಯೆಷ್ಟು?

7) ಮತದಾರರಲ್ಲಿ ಹೆಂಗಸರ ಸಂಖ್ಯೆಯೆಷ್ಟು? ಗಂಡಸರ ಸಂಖ್ಯೆಯೆಷ್ಟು? ಉಮೇದು ವಾರರಲ್ಲಿ ಈ ಅನುಪಾತ ಎಷ್ಟು? ಮೀಸಲಾತಿ ಕ್ಷೇತ್ರಗಳೆಷ್ಟು?

8) ಸೂಕ್ಷ್ಮ ಮತಗಟ್ಟೆಗಳ ಲೆಕ್ಕಾಚಾರ, ಚುನಾವಣೆಯ ಅಧಿಕಾರಿಗಳ ಸಂಖ್ಯೆ, ಒಟ್ಟು ಮತಗಟ್ಟೆಗಳೆಷ್ಟು?

Screenshot_2

ಮೇಲೆ ಹೇಳಿದ ಅಂಶಗಳು ಅತ್ಯಂತ ಮೂಲಭೂತ ಅಂಶಗಳು. ಇದರೊಂದಿಗೆ ಪ್ರತಿ ಹಂತ ದಲ್ಲೂ ಅವುಗಳನ್ನು ಮತ್ತಷ್ಟು ಆಳವಾಗಿ ವಿಭಾಗಿಸಲಾಗುತ್ತದೆ. ಉದಾಹರಣೆಗೆ ಕೋಟಿ 18 ಅಥವಾ 19 ವರ್ಷದ ಹೊಸ ಮತದಾರರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೆಷ್ಟು? ಗಂಡು ಮಕ್ಕಳ ಸಂಖ್ಯೆಯೆಷ್ಟು? ಇವರಲ್ಲಿ ಎಷ್ಟು ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ? ಎಷ್ಟು ಜನ ಹಳ್ಳಿಗಳಲ್ಲಿ? ಅವರ ಎಕನಾಮಿಕ್ ಬ್ಯಾಕ್‌ಗ್ರೌಂಡ್, ಅವರ ಕಲ್ಚರಲ್ ಬ್ಯಾಕ್‌ ಗ್ರೌಂಡ್? ಹೀಗೆ ಪ್ರತಿಯೊಂದನ್ನು ಅತ್ಯಂತ ಸೂಕ್ಷ್ಮವಾಗಿ ವಿಭಜಿಸಿ ವಿಶ್ಲೇಷಣೆ ಮಾಡಲಾಗು ತ್ತದೆ.

ಹೊಸ ತಲೆಮಾರು ಟ್ವಿಟ್ಟರ್(ಎಕ್ಸ್), ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಸದಾ ಕ್ರಿಯಾ ಶೀಲರಾಗಿರುತ್ತಾರೆ. ಎಷ್ಟು ಕೋಟಿ ಜನ ಇಂಟರ್‌ನೆಟ್ ಬಳಕೆದಾರರಿದ್ದಾರೆ. ಇವರೆ ನಿತ್ಯವೂ ತಮಗೆ ಅರಿವಿಲ್ಲದೆ ತಮ್ಮ ಬದುಕುವ ರೀತಿಯನ್ನ, ತಮ್ಮ ಇಷ್ಟ ಅನಿಷ್ಟಗಳನ್ನ, ಬೇಕು ಬೇಡಗಳನ್ನು ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದಾರೆ. ಇದನ್ನ ಡಿಜಿಟಲ್ ಫೂಟ್‌ ಪ್ರಿಂಟ್ ಎನ್ನಲಾಗುತ್ತದೆ.

ನಮ್ಮ ಮಾಹಿತಿಗಳನ್ನ ಕಲೆ ಹಾಕಿ ಅವುಗಳನ್ನು ನಮ್ಮ ಪ್ರಚೋದನೆಗೆ ಬಳಸಲಾಗುತ್ತದೆ. ಭಾರತದಲ್ಲಿ ಇಂದು 112 ಕೋಟಿ ಮೊಬೈಲ್ ಫೋನ್‌ಗಳಿವೆ. ಆದರೆ, ಅವುಗಳಲ್ಲಿ ಸ್ಮಾರ್ಟ್ ಫೋನ್‌ಗಳ ಸಂಖ್ಯೆ 70 ಕೋಟಿ. 2027ರ ವೇಳೆಗೆ ಇದು 120 ಕೋಟಿ ತಲುಪಲಿದೆ ಎನ್ನುತ್ತದೆ ಅಂಕಿಅಂಶ. ಅಂದರೆ ಗಮನಿಸಿ ಇಂಟರ್‌ನೆಟ್ ಮತ್ತು ಸೋಶಿಯಲ್ ಮೀಡಿಯಾಗಳು ಅತ್ಯಂತ ಪ್ರಬಲ ಅಸ್ತ್ರಗಳಾಗುತ್ತವೆ. ಅದು ಚುನಾವಣೆ ಇರಬಹದು ಅಥವಾ ಮತ್ಯಾವುದೇ ಪ್ರಮುಖ ಘಟನೆಯಾಗಿರಬಹದು.

ಸೋಶಿಯಲ್ ಮೀಡಿಯಾ ಅಲ್ಲಿನ ಫಲಿತಾಂಶದ ಮೇಲೆ ಬೃಹತ್ ಪರಿಣಾಮ ಬೀರುತ್ತದೆ. ಏಕೆಂದರೆ ಸೋಶಿಯಲ್ ಮೀಡಿಯಾ ಸಹಿತ ಒಟ್ಟಾರೆ ಡಿಜಿಟಲ್ ಲೋಕದಲ್ಲಿ ನಾವು ಉಳಿಸುವ ಕುರುಹುಗಳನ್ನು ಬಳಸಿಕೊಂಡು, ಪ್ರತಿಯೊಬ್ಬ ವ್ಯಕ್ತಿಯ ಪ್ರೊಫೈಲ್ ಬಿಲ್ಡ್‌ ಮಾಡಲಾಗುತ್ತದೆ. ಅದಕ್ಕೆಂದೆ ನೂರಾರು ಕೋಟಿ ರುಪಾಯಿಗಳನ್ನು ವ್ಯಯಿಸುವ ಜನರಿದ್ದಾರೆ. ನೂರಾರು ಕೋಟಿ ವ್ಯಯಿಸುವುದು ಸಾವಿರಾರು ಕೋಟಿ ಗಳಿಸಲು ಎನ್ನುವ ಸೂಕ್ಷ್ಮ ನಿಮಗೀ ಗಾಗಲೇ ಅರ್ಥವಾಗಿರುತ್ತದೆ.

ಹಾಗೆ ನೋಡಲು ಹೋದರೆ 2014ರಲ್ಲಿ ಶ್ರೀ ನರೇಂದ್ರ ಮೋದಿಯವರ ಗೆಲುವಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿಗೆ , ಬ್ರೆಕ್ಸಿಟ್ ಎನ್ನುವ ಹೊಸ ನಾಟಕ ಶುರುವಿಗೆ ಎಲ್ಲಕ್ಕೂ ಸೋಶಿಯಲ್ ಮೀಡಿಯಾದ ಕಾಣಿಕೆ ಬಳಷ್ಟಿದೆ. ‌ಆದರೂ ಭಾರತದ ಬಹಳ ಪ್ರದೇಶಗಳಲ್ಲಿ ಇಂದಿಗೂ ಮನೆ ಮನೆಗೂ ಹೋಗಿ ಜನರನ್ನು ಭೇಟಿ ಮಾಡಿ ದಕ್ಷಿಣೆ ನೀಡುವ ಸಂಪ್ರದಾಯ ಕೂಡ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಎಲ್ಲಿಯವರೆಗೆ ನಮ್ಮ ಸಮಾಜ ಜಾತಿ, ಧರ್ಮ ಮತ್ತು ಹಣದ ಆಮಿಷದಲ್ಲಿ ವೋಟ್ ಮಾರುವುದು ನಿಲ್ಲಿಸುವುದಿಲ್ಲ ಅಲ್ಲಿಯ ತನಕ ಖರೀದಿದಾರರು ಕಡಿಮೆ ಯಾಗುವುದಿಲ್ಲ.

ತಂತ್ರಜ್ಞಾನದ ಸಹಾಯದಿಂದ ಮಾಹಿತಿ ಜನರನ್ನು ಮಾಹಿತಿ ಅತಿ ವೇಗದಲ್ಲಿ ತಲುಪುತ್ತಿದೆ. ಹೀಗೆ ತಲುಪುವ ಮಾಹಿತಿ ಸರಿಯೋ ತಪ್ಪೋ ಎಂದು ನೋಡುವರಾರು? ಒಂದು ವಾಟ್ಸ್ಯಾಪ್ ಗ್ರೂಪ್ ನಲ್ಲಿ 256 ಜನರನ್ನ ಸೇರಿಸಬಹದು. ಮಾಹಿತಿಯನ್ನು ಫಾರ್ವರ್ಡ್ ಮಾಡುವುದನ್ನ ಐದು ಸಂಖ್ಯೆಗೆ ಸೀಮಿತಗೊಳಿಸಲಾಗಿದೆ. ಹೀಗಿದ್ದೂ 1280 ಜನರನ್ನ ರೆಗಳಿಗೆಯಲ್ಲಿ ಸುಮ್ಮನೆ ಒಂದು ಸಣ್ಣ ಬಟನ್ ಒತ್ತುವುದರ ಮೂಲಕ ತಲುಪಿ ಬಿಡಬಹುದು.

ಚುನಾವಣೆ ಬರುತ್ತದೆ ಹೋಗುತ್ತದೆ. ಆ ವಿಷಯ ಹಾಗಿರಲಿ, ಜನಸಂಖ್ಯಾ ಸ್ಫೋದೊಂದಿಗೆ ಮಾಹಿತಿ ಸ್ಫೋವಾಗುತ್ತಿದೆ. ಸರಿಯೋ ತಪ್ಪೋ ತಿಳಿಯದ ವಯಸ್ಸಿನ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ರಾರಾಜಿಸುತ್ತಿದೆ. ಈ ವಿಸೋಟವನ್ನು ತಡೆಯುವರಾರು? ನಮ್ಮಲ್ಲಿ ಚುನಾವಣೆಯನ್ನು ಪ್ರಣಾಳಿಕೆ ಅವಲಂಬಿಸಿ ಮಾಡುವುದೆಂದು? ಯಾವುದೇ ರಾಜಕೀಯ ಪಕ್ಷ ಇಂತಹ ವಿಸ್ಫೋವನ್ನು ತಡೆಯುತ್ತೇವೆ ಎನ್ನುವ ಪ್ರಣಾಳಿಕೆಯನ್ನು ಏಕೆ ಬಿಡುಗಡೆ ಮಾಡುವುದಿಲ್ಲ? ಕೈಲಿರುವ ಫೋನ್ ಸ್ಮಾರ್ಟ್ ಆದರೆ ಸಾಕೆ? ನಾವೆ ಧಾವಂತದಿಂದ ಓಡುತ್ತಿದ್ದೇವೆ, ವಿಪರ್ಯಾಸ ವೆಂದರೆ ಎಲ್ಲಿಗೆ ಎಂದು ಯಾರಿಗೂ ಗೊತ್ತಿಲ್ಲ. ಓಡುವ ಆತುರದಲ್ಲಿ ಎಲ್ಲಿಗೆ ಎಂದು ಕೇಳುವ ಯೋಚನೆಯೂ ನಮಗಿಲ್ಲ.

ಮಗು ಊಟ ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಮೊಬೈಲ್ ಕೈಲಿಡುವುದರಿಂದ ಇದು ಶುರುವಾಗುತ್ತೆ. ಆಮೇಲೆ ಗಲಾಟೆ ಮಾಡುತ್ತೆ ಎಂದು ಸುಮ್ಮನಿರಿಸಲು ಮೊಬೈಲ್ ನೀಡುತ್ತೇವೆ. ಆಮೇಲೆ ಅದು ಅಡಿಕ್ಷನ್ ಹಂತವನ್ನು ತಲುಪುತ್ತದೆ. ಸ್ಮಾರ್ಟ್ ಫೋನ್ ಬಳಸುತ್ತ ಬೆಳೆಯುವ ಇಂದಿನ ಯುವ ಜನತೆಗೆ ತಮ್ಮದು ಎನ್ನುವ ಅನುಭವಗಳು ಕಡಿಮೆ.

ಯುಟ್ಯೂಬ್ ವಿಡಿಯೋದಲ್ಲಿ ತೋರಿಸಿದ್ದು, ಹೇಳಿದ್ದು, ಇಂಟರ್‌ನೆಟ್‌ನಲ್ಲಿ ಓದಿದ್ದು, ನೋಡಿದ್ದು ಗ್ರಹಿಸಿಕೊಳ್ಳುತ್ತಾ ಮತ್ತು ಅದನ್ನೇ ಸತ್ಯವೆಂದು ನಂಬುತ್ತಾ ಹೋಗುತ್ತವೆ. ಇವತ್ತಿನ ದಿನದಲ್ಲಿ ಒಂದು ವರ್ಗದ ಜನರನ್ನು ಬಹಳ ಸುಲಭವಾಗಿ ಬೇಕಾದ ಕಡೆಗೆ ಎಳೆದುಕೊಂಡು ಬಿಡಬಹುದು. ಇವತ್ತಿನ ಕಾಲಘಟ್ಟದಲ್ಲಿ ವಿದ್ಯಾವಂತರಿಗೆ ಕೆಲಸ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ.

ಒಂದು ದಶಕದ ಹಿಂದೆ ಚನ್ನಾಗಿ ಓದಿದರೆ ಉತ್ತಮ ಭವಿಷ್ಯವಿದೆ ಎಂದು ಮಕ್ಕಳಿಗೆ ಹೇಳುತ್ತಿದ್ದರು. ಹೇಳಬಹುದಾದ ಸನ್ನಿವೇಶವಿತ್ತು. ಇವತ್ತು ಪೋಷಕರು ಕೂಡ ಧೈರ್ಯ ವಾಗಿ ವಿದ್ಯಾಭ್ಯಾಸ ಮಾಡಿದವರಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಲು ಸಾಧ್ಯ ವಿಲ್ಲ.

ಎರಡು ಸಾವಿರ ಇಸವಿಯಿಂದ ಈಚೆಗೆ ಹುಟ್ಟಿದ ಮಕ್ಕಳ ಸಂಖ್ಯೆಯೆಷ್ಟು? ನಮ್ಮ ದೇಶದಲ್ಲಿ ಯಾವ ಸಂಖ್ಯೆಯೂ ನಿಖರವಾಗಿ ಹೇಳಲಾಗುವುದಿಲ್ಲ ಎನ್ನುವುದು ಮಾತ್ರ ತಂತ್ರಜ್ಞಾನ ಇಷ್ಟೊಂದು ಬೆಳೆದಿರುವ ಸಮಯದಲ್ಲಿ ವಿಪರ್ಯಾಸವೇ ಸರಿ.

ಅಂದಾಜಿನ ಪ್ರಕಾರ ಆ ಸಂಖ್ಯೆ 35 ಕೋಟಿ ಮೀರುತ್ತದೆ. ಅಂದರೆ ಒಂದು ದೇಶದ 1/4 ಭಾಗ ಮತದಾರರು ಅದೆಷ್ಟು ಸುಲಭದ ತುತ್ತು ಎನ್ನುವುದನ್ನು ಊಹಿಸಿಕೊಳ್ಳಿ. ಹೆಚ್ಚಿನದನ್ನು ಹೇಳುವ, ಬರೆಯುವ ಅವಶ್ಯಕತೆಯಿಲ್ಲ ಎಂದುಕೊಳ್ಳುವೆ.

ರಾಜಕೀಯದಲ್ಲಿ ಪರ್ಮನೆಂಟ್ ಶತ್ರು ಅಥವಾ ಮಿತ್ರರಿಲ್ಲ ಎಂದು ಹೇಳಿ ನಮ್ಮನ್ನು ನಂಬಿಸಲಾಗಿದೆ. ನಂಬಿಸುವ ಅವಶ್ಯಕತೆಯಿಲ್ಲ. ನಾವು ಸುಲಭಕ್ಕೆ ನಂಬಿ ಬಿಡುತ್ತೇವೆ. ಹೀಗಾಗಿ ಚುನಾವಣೆ ಸಮಯದಲ್ಲಿ ಅಂಕಿ ಸಂಖ್ಯೆಯೆಗಳ ಲೆಕ್ಕಾಚಾರ ಜೋರಾಗುತ್ತದೆ. ಲಾಭ- ನಷ್ಟದ ಆಧಾರದ ಮೇಲೆ ಮಾತುಗಳು, ಭಾಷಣಗಳು, ಕಪ್ಪೆ ಜಿಗಿತಗಳು ಶುರುವಾಗು ತ್ತವೆ. ಆದರೆ, ಕಾರ್ಯಕರ್ತನ ಮನಸ್ಥಿತಿ ಮಾತ್ರ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ.

ಮೇಲೆ ಕುಳಿತವರು ಕ್ಷಣ ಮಾತ್ರದಲ್ಲಿ ಅಂಕಿ ಸಂಖ್ಯೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡು ಬಿಡುತ್ತಾರೆ. ಆದರೆ ಕಾರ್ಯಕರ್ತ? ಇದು ಇಲ್ಲಿಯವರೆಗಿನ ಕಥೆಯಾದರೆ, ದಾವಣಗೆರೆ ಇದಕ್ಕೂ ಹೊಸ ಭಾಷ್ಯ ಬರೆಯುತ್ತಿದೆ.

ಅಲ್ಪ ಸಮುದಾಯದ ನಾಯಕರು ತಮ್ಮ ಸಮುದಾಯದ ಜನರಿಗೆ ತಮ್ಮ ಸಮುದಾಯದ ಉಮೇದುವಾರನಿಗೆ ವೋಟ್ ಮಾಡಬೇಡಿ ಎನ್ನುತ್ತಿದ್ದಾರೆ! ಈಗ ಹೇಳಿ ಬದುಕನ್ನು ಆಳುತ್ತಿರುವುದು ಅಂಕಿ ಸಂಖ್ಯೆಯಲ್ಲದೆ ಬೇರೇನು?