ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Lokesh Kayarga Column: ಸಾಲ ಭಾರ, ಸಾಯ ಬಾರ ಆಗಬಾರದು

ಸಾಲದ ವಿಚಾರ ಬಂದಾಗ ನಮ್ಮ ಹಿರಿಯರು ಹಿಂದಿನಿಂದಲೂ ಎಚ್ಚರಿಕೆಯ ಮಾತುಗಳನ್ನು ಆಡುತ್ತಾ ಬಂದವರು. ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’, ‘ಕೂತು ತಿಂದರೆ ಕುಡಿಕೆ ಹೊನ್ನು ಸಾಲದು’ ಇತ್ಯಾದಿ ಹತ್ತಾರು ಗಾದೆ ಮಾತುಗಳು ನಮ್ಮ ಹಿರಿಯರ ಜೀವನಾನುಭವದ ಸಾರವೂ ಹೌದು

Lokesh Kayarga Column: ಸಾಲ ಭಾರ, ಸಾಯ ಬಾರ ಆಗಬಾರದು

ಕಾರ್ಯನಿರ್ವಾಹಕ ಸಂಪಾದಕ, ಅಂಕಣಕಾರ ಲೋಕೇಶ ಕಾಯರ್ಗ

Profile Ashok Nayak Jan 29, 2025 7:20 AM

ಎಂಎಫ್‌ಸಿಗಳಿಂದ ಕಿರು ಸಾಲ ಪಡೆದು ಜೀವನವನ್ನು ಬೆಳಗಿಸಿಕೊಂಡ ಸಾವಿರಾರು ಕುಟುಂಬ ಗಳೂ ಇವೆ. ಆದರೆ ಆರ್ಥಿಕ ಸಾಕ್ಷರತೆಯ ಅರಿವಿಲ್ಲದ ಕುಟುಂಬಗಳು ಸಮಸ್ಯೆ ಯಲ್ಲಿ ಸಿಲುಕಿವೆ. ಅಧಿಕ ಬಡ್ಡಿಯ ಮರ್ಮ ತಿಳಿಯದೆ ತಮ್ಮ ಆರ್ಥಿಕ ಸಾಮರ್ಥ್ಯವನ್ನು ಮೀರಿ ಸಾಲ ಪಡೆದವರು, ಪಡೆದ ಸಾಲವನ್ನು ಸದುಪಯೋಗಪಡಿಸಿಕೊಳ್ಳದೇ ಆನ್‌ಲೈನ್ ಜೂಜು, ಲಾಟರಿ ಖರೀದಿಗೆ ಬಳಸಿ ದವರು, ಕುಡಿತದ ದಾಸರಾದವರು, ಕೌಟುಂಬಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರು ಸಾಲ ವಾಪಸ್ ನೀಡಲಾಗದೆ, ಅವಮಾನ ತಾಳ ಲಾರದೆ ತಲೆ ಮರೆಸಿಕೊಂಡು ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ.

ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ!

ಸರ್ವಜ್ಞನ ಈ ವಚನವನ್ನು ಸಾಲಗಾರರು ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಾಲಿಗರು ಈ ವಚನವನ್ನು ಅಕ್ಷರಶ: ಪಾಲಿಸಲು ಹೊರಟಿದ್ದಾರೆ. ಇವರು ಸಾಲವನ್ನು ಸಕಾಲಕ್ಕೆ ಹಿಂತಿರುಗಿಸದ ಸುಸ್ತಿದಾರರನ್ನು ಹಿಡಿದು ಮನಬಂದಂತೆ ಥಳಿಸಿ ದ್ದಾರೆ. ಮಹಿಳೆಯೊಬ್ಬರ ತಲೆ ಬೋಳಿಸಿದ್ದಾರೆ. ಬಾಣಂತಿ ಸಮೇತ ಕುಟುಂಬ ಸದಸ್ಯರನ್ನು ಮನೆ ಯಿಂದ ಹೊರ ದಬ್ಬಿದ್ದಾರೆ. ಕಳೆದ ಮೂರ‍್ನಾಲ್ಕು ವಾರಗಳಲ್ಲಿ ನಮ್ಮದೇ ರಾಜ್ಯದಲ್ಲಿ ನಡೆದ ಘಟನೆಗಳಿವು.

ಇದನ್ನೂ ಓದಿ: ‌Lokesh Kayarga Column: ರಕ್ಷಣೆಯ ಕಾನೂನೇ ಶೋಷಣೆಯ ಅಸ್ತ್ರ

ಸಾಲದ ವಿಚಾರ ಬಂದಾಗ ನಮ್ಮ ಹಿರಿಯರು ಹಿಂದಿನಿಂದಲೂ ಎಚ್ಚರಿಕೆಯ ಮಾತುಗಳನ್ನು ಆಡುತ್ತಾ ಬಂದವರು. ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’, ‘ಕೂತು ತಿಂದರೆ ಕುಡಿಕೆ ಹೊನ್ನು ಸಾಲದು’ ಇತ್ಯಾದಿ ಹತ್ತಾರು ಗಾದೆ ಮಾತುಗಳು ನಮ್ಮ ಹಿರಿಯರ ಜೀವನಾನುಭವದ ಸಾರವೂ ಹೌದು. ಆದರೆ ‘ಸಾಲ ಮಾಡಿಯಾದರೂ ಗಡಿಗೆ ತುಪ್ಪ ತಿನ್ನು’ ಎಂಬ ಚಾರ್ವಾಕ ಋಷಿ ಪರಂಪರೆಯೂ ನಮ್ಮದೇ.

ನಾವೀಗ ಹಿರಿಯರ ವಿವೇಕದ ಮಾತುಗಳನ್ನು ಬಿಟ್ಟು, ದುಡ್ಡಿನ ವಿಚಾರದಲ್ಲಿ ಚಾರ್ವಾಕ ಪಂಥದ ಅನುಯಾಯಿಗಳಾಗಿದ್ದೇವೆ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲದ ಪಡೆದ ರಾಜ್ಯದ ಏಳೆಂಟು ಮಂದಿ ಆತ್ಮಹತ್ಯೆಗೆ ಶರಣಾದ ಘಟನೆಯ ಒಳಹೊಕ್ಕು ನೋಡಿದರೆ ಇಲ್ಲಿ ಸಾಲವಷ್ಟೇ ಪ್ರಮುಖವಲ್ಲ.

ಬದಲಾದ ನಮ್ಮ ಜೀವನಶೈಲಿ, ಮನೋಧರ್ಮ ಮತ್ತು ಅಭಿರುಚಿಗಳೂ ಈ ಸಾವಿನಲ್ಲಿ ತಳುಕು ಹಾಕಿಕೊಂಡಿವೆ. ಕೇವಲ ಮೂರು ದಶಕಗಳ ಹಿಂದೆ ಸಾಲದ ಪಡೆಯುವುದೇ ಕಷ್ಟದ ಬಾಬ್ತು ಆಗಿತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಆರಂಕಿ ಮೊತ್ತದ ಸಾಲವಂತೂ ಶ್ರೀಮಂತರಿಗಷ್ಟೇ ಲಭ್ಯ ವಿದ್ದ ಸವಲತ್ತಾಗಿತ್ತು. ಬಡವರು ಬ್ಯಾಂಕ್‌ಗಳ ಸಮೀಪಕ್ಕೆ ಹೋಗಲು ಹೆದರುತ್ತಿದ್ದರು. ಇನ್ನು ಗ್ರಾಮೀಣ ಪತ್ತಿನ ಸಹಕಾರಿ ಸಂಘಗಳು ಬಡವರ ಪಾಲಿಗೆ ಅಕ್ಕಿ, ಗೋಧಿ, ಸೀಮೆಎಣ್ಣೆ ವಿತರಣೆಗಷ್ಟೇ ಸೀಮಿತವಾಗಿದ್ದವು.

ಶ್ರೀಮಂತ ರೈತರೂ ಭೂ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆಯಬೇಕಾದರೆ ಸಾಕಷ್ಟು ಹೆಣಗಾಡ ಬೇಕಿತ್ತು. ಕೈಯಲ್ಲಿ ಹಣದ ಥೈಲಿ ಇಲ್ಲದ ಆ ದಿನಗಳಲ್ಲಿ ನಮ್ಮ ಕನಸುಗಳೂ ಊಟ, ಬಟ್ಟೆಗೆ ಸೀಮಿತ ವಾಗಿದ್ದವು. ಇಂತಹ ಕಾಲ ಘಟ್ಟದಲ್ಲಿ ಸಾಲ ಮೇಳ ನಡೆಸಿ, ಒಂದೆರಡು ಸಾವಿರ ರು. ಸಾಲ ಕೊಡಿ ಸಿದ ಅಂದಿನ ಸಹಾಯಕ ಹಣಕಾಸು ಸಚಿವ ಜನಾರ್ದನ ಪೂಜಾರಿ ಬಡವರ ಪಾಲಿನ ಹೀರೋ ಆಗಿದ್ದರು.

ಪೂಜಾರಿ ಕಾರಣದಿಂದ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದಿದೆ ಎಂದು ಅಂದು ಹುಯಿಲೆಬ್ಬಿಸ ಲಾಗಿತ್ತು. ಆದರೆ ಪೂಜಾರಿ ಕಾರಣದಿಂದ ರೈತರು, ಬಡವರು ಅಂದು ಬ್ಯಾಂಕ್ ಮೆಟ್ಟಿಲು ಏರಿದ್ದು ಸುಳ್ಳಲ್ಲ.

ಬದಲಾದ ಸಾಲ ವ್ಯವಸ್ಥೆ

ಇಂದು ಅಂದಿನಂತಿಲ್ಲ. ಉದಾರೀಕರಣದ ಕೃಪೆಯೋ, ಕಾಲದ ಮಹಿಮೆಯೋ ಗೊತ್ತಿಲ್ಲ. ಈಗ ಯಾರು ಬೇಕಿದ್ದರೂ ಸಾಲ ಪಡೆಯಬಹುದು. ದಿನಕ್ಕೆ ಹತ್ತಾರು ಸಲ ನಿಮ್ಮ ಮೊಬೈಲ್‌ಗೆ ಕರೆ ಮಾಡಿ ಸಾಲ ಬೇಕೇ ಎಂದು ಕೇಳುವವರಿದ್ದಾರೆ. ಮೊಬೈಲ್‌ನಲ್ಲಿ ಆಪ್ ಓಪನ್ ಮಾಡಿ ಫಟಾಪಟ್ ದುಡ್ಡು ಪಡೆದುಕೊಂಡು ರಮ್ಮಿ ಆಡಬಹುದು. ಕ್ರೆಡಿಟ್ ಕಾರ್ಡ್ ಉಜ್ಜಿಯೂ ಸಾಲ ಎತ್ತಬಹುದು. ಕೈಯಲ್ಲಿ ದುಡ್ಡಿಲ್ಲದಿದ್ದರೂ ಪ್ರಾಜೆಕ್ಟ್ ರೆಡಿ ಮಾಡಿಕೊಂಡು ಮುದ್ರಾ ಹೆಸರಿನಲ್ಲಿ ಕೋಟಿಗೆ ಮೀರಿದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಮನೆ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಜೋಳಿಗೆ ತುಂಬಲು ನೂರೆಂಟು ಬ್ಯಾಂಕುಗಳಿವೆ. ಪಹಣಿಯೊಂದಿದ್ದರೆ (ಆರ್‌ಟಿಸಿ) ಸಾಕು, ಕಿಸಾನ್ ಕ್ರೆಡಿಟ್ ಹೆಸರಿನಲ್ಲಿ ನಮ್ಮ ಗ್ರಾಮೀಣ ಪತ್ತಿನ ಸಹಕಾರ ಸಂಘಗಳು, ಬ್ಯಾಂಕುಗಳು ಕೂಡ 2 ಲಕ್ಷ ರು. ತನಕ ಬಡ್ಡಿ ರಹಿತ ಬೆಳೆಸಾಲ ನೀಡುತ್ತವೆ. ಸ್ವಯಂ ಸೇವಾ ಸಂಘಗಳನ್ನು ಕಟ್ಟಿಕೊಂಡು ಮಹಿಳೆಯರೂ ಬಡ್ಡಿ ರಹಿತ ಸಾಲ ಪಡೆಯಬಹುದು. ಇದಾವುದೂ ಸಿಗದೇ ಹೋದರೆ ಮೀಟರ್ ಬಡ್ಡಿಯಲ್ಲಿ ದುಡ್ಡು ಕೊಡುವ ಕುಳಗಳಿದ್ದಾರೆ!

ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಹೊಸ ಸೇರ್ಪಡೆ ಮೈಕ್ರೋ ಫೈನಾನ್ಸ್ ಕಂಪನಿಗಳು. ಇವು ಹೊಸ ದೇನೂ ಅಲ್ಲ. ಗ್ರಾಮೀಣ ಭಾಗದ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 80ರ ದಶಕ ದಲ್ಲಿಯೇ ಈ ಬ್ಯಾಂಕುಗಳಿಗೆ ಚಾಲನೆ ನೀಡಲಾಗಿತ್ತು. ಗ್ರಾಮೀಣ ಸ್ವಸಹಾಯ ಗುಂಪುಗಳಿಗೆ ನೆರವಾಗುವ ದೃಷ್ಟಿಯಿಂದ ನಬಾರ್ಡ್ ಇದಕ್ಕೆ ಸಹಯೋಗ ನೀಡಿತ್ತು.

ಸದ್ಯ 3 ಲಕ್ಷ ರು. ಮಿತಿಯಲ್ಲಿ ಸುಲಭ ಷರತ್ತುಗಳಲ್ಲಿ ಸಾಲ ನೀಡಲು ಈ ಬ್ಯಾಂಕುಗಳಿಗೆ ಆರ್‌ಬಿಐ ಅವಕಾಶ ನೀಡಿದೆ. ಆದರೆ ‘ಸುಲಭ’ ಸಾಲವೇ ಈಗ ಜನರ ಪಾಲಿಗೆ ಶೂಲವಾಗಿ ಪರಿಣಮಿಸಿದೆ. 10 ವರ್ಷಗಳ ಹಿಂದೆ ಬೆರಳೆಣಿಕೆಯಷ್ಟಿದ್ದ ಎಂಎ-ಸಿಗಳ ಸಂಖ್ಯೆ ಈಗ 250 ದಾಟಿವೆ ಎಂದರೆ ಇವುಗಳ ಜನಪ್ರಿಯತೆಯನ್ನು ಅರ್ಥ ಮಾಡಿಕೊಳ್ಳಬಹುದು.

ಇದಕ್ಕೆ ಕಾರಣ ಮತ್ತೇನಿಲ್ಲ. ಇವು ನೀಡುವ ಸಾಲಕ್ಕೆ ಜಾಮೀನುದಾರರು ಬೇಕಿಲ್ಲ. ಸಿಬಿಲ್ ರೇಟಿಂಗ್ ಗೊಡವೆ ಇಲ್ಲ. ಕೇವಲ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ ಪಡೆದು ಇವು ಸಾಲ ನೀಡುತ್ತವೆ. ಸಾಲ ಪಡೆಯಲು ಜಾಮೀನು ಹೊಂದಿಸಲು ಸಾಧ್ಯವಾಗದವರಿಗೆ, ಕೃಷಿ ಭೂಮಿ ಇಲ್ಲದ ಬಡವರಿಗೆ, ಕಿರಾಣಿ ಅಂಗಡಿದಾರರಿಗೆ, ತರಕಾರಿ ವ್ಯಾಪಾರಸ್ಥರಿಗೆ, ಮನೆಗೆಲಸ ಮಾಡಿ ಜೀವನ ನಿರ್ವಹಿಸುವ ಮಹಿಳೆಯರಿಗೆ ಈ ಕಂಪನಿಗಳ ಸಾಲ ಆಕರ್ಷಕವಾಗಿ ಕಂಡಿದ್ದರೆ ಆಶ್ಚರ್ಯವೇನೂ ಇಲ್ಲ.

ರಾಜ್ಯದಲ್ಲಿ ಮುಖ್ಯವಾಗಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳು ಈ ಬ್ಯಾಂಕುಗಳಲ್ಲಿ ಸಾಲ ಪಡೆ ಯಲು ಮುಗಿಬಿದ್ದಿವೆ. ಕಾರಣ ಒಂದಷ್ಟು ದಾಖಲೆಗಳು ಕಡಿಮೆ ಬಿದ್ದರೂ ಇವು ಸಾಲ ನಿರಾಕರಿಸು ವುದಿಲ್ಲ. ಸದ್ಯ ದೇಶದಲ್ಲಿ ಈ ಬ್ಯಾಂಕುಗಳಿಂದ ಸಾಲ ಪಡೆಯುವ ಸ್ವ ಸಂಘಗಳ ಸಂಖ್ಯೆಯೇ ಒಂದೂವರೆ ಕೋಟಿಯಷ್ಟಿದೆ.

ಈ ಪೈಕಿ ಅರ್ಧದಷ್ಟು ನಮ್ಮ ರಾಜ್ಯದಲ್ಲಿವೆ !. ಅಂದರೆ ನಮ್ಮ ರಾಜ್ಯದ ಎಂಎ-ಸಿ ಗ್ರಾಹಕರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾಲದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶಿಕ್ಷಕಿ ಸೇರಿದಂತೆ ಮಹಿಳೆಯರೂ ಸೇರಿರುವುದು ಗಮನಾರ್ಹ. ಸಾಲಗಾರರನ್ನು ಮಾತ್ರವಲ್ಲ ಹೂಡಿಕೆದಾರರನ್ನೂ ಈ ಬ್ಯಾಂಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದಿವೆ. ರಾಷ್ಟ್ರೀಕೃತ ಬ್ಯಾಂಕುಗಳು ಠೇವಣಿಗಳಿಗೆ ಗರಿಷ್ಠ 7.5 ರಷ್ಟು ಬಡ್ಡಿ ನೀಡಿದರೆ. ಈ ಕಿರು ಸಾಲ ಬ್ಯಾಂಕುಗಳು ಶೇ. 8ರಿಂದ 9ರ ತನಕವೂ ಬಡ್ಡಿ ನೀಡಲು ಮುಂದಾಗಿವೆ.

ರಾಷ್ಟ್ರೀಕೃತ ಬ್ಯಾಂಕುಗಳು ಉಳಿತಾಯ/ ಹೂಡಿಕೆ ಯೋಜನೆಗಳಿಗೆ ಗ್ರಾಹಕರಿಲ್ಲದೆ ಪರದಾಡು ತ್ತಿದ್ದರೆ, ಈ ಬ್ಯಾಂಕುಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಹೂಡಿಕೆ ಮಾಡುವವರಿದ್ದಾರೆ. ಇಲ್ಲಿನ ಲಾಭ ಮತ್ತು ಅಗಾಧ ಗ್ರಾಹಕರ ಸಂಖ್ಯೆಯನ್ನು ನೋಡಿ ಇಂಡಸ್ ಬ್ಯಾಂಕ್, ಐಡಿಎಫ್ಸಿ ಸೇರಿದಂತೆ ಹಲವು ಖಾಸಗಿ ಬ್ಯಾಂಕುಗಳು, ಏರ್‌ಟೆಲ್, ಬಜಾಜ್ ಸಮೂಹ ಸೇರಿದಂತೆ ಹಲವು ಕಾರ್ಪೋರೇಟ್ ಕಂಪನಿ ಗಳು ಮೈಕ್ರೋ ಫೈನಾನ್ಸ್ ವಲಯಕ್ಕೆ ಕಾಲಿಟ್ಟಿವೆ. ‌

ಬಂಧನ್ ಬ್ಯಾಂಕ್, ಪೇಟಿಎಂ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಇಕ್ವಿಟಾಸ್ ಸ್ಮಾಲ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್, ಭಾರತ್‌ಪೇ, ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಮುಂತಾದ ಹೆಸರಿ ನಲ್ಲಿ ನಗರ ಮಾತ್ರವಲ್ಲ ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಈಗ ಎಂಎಫ್‌ ಸಿ ಶಾಖೆಗಳನ್ನು ಕಾಣಬಹುದು. ಎಸ್‌ಬಿಐ, ಐಸಿಐಸಿಐನಂತಹ ದೊಡ್ಡ ಮಟ್ಟದ ಬ್ಯಾಂಕುಗಳು ನಡೆಸುವ ಎಲ್ಲ ರೀತಿಯ ಬ್ಯಾಂಕಿಂಗ್ ವಹಿವಾಟುಗಳನ್ನು ಈ ಬ್ಯಾಂಕುಗಳು ಕೂಡ ನಡೆಸುತ್ತಿವೆ. ಖಾಸಗಿ ಬ್ಯಾಂಕ್‌ ಗಳಾದ ಕಾರಣ ನಗುಮುಖದ ಸೇವೆಯೂ ಲಭ್ಯ. ಹೀಗಾಗಿ ಗ್ರಾಹಕರೂ ಇವುಗಳತ್ತ ಆಕರ್ಷಿತ ರಾಗಿದ್ದಾರೆ.

ಬ್ಯಾಂಕುಗಳಿಗೂ ಸಾಲಭಾರ

ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತು ಈ ಮೈಕ್ರೋ ಫೈನಾನ್ಸ್ ಕಂಪನಿಗಳ ಮಟ್ಟಿ ಗೂ ನಿಜವಾಗಿದೆ. ಪೈಪೋಟಿಗೆ ಬಿದ್ದು, ಬಣ್ಣದ ಮಾತುಗಳಿಂದ, ಆಕರ್ಷಕ ಜಾಹೀರಾತು ಗಳಿಂದ ಗ್ರಾಹಕರನ್ನು ಸೆಳೆದು ಉದಾರವಾಗಿ ಸಾಲ ನೀಡಿದ ಎಂಎಫ್‌ ಸಿಗಳು ಈಗ ಸಾಲಭಾರದ ಸಂಕಷ್ಟ ದಲ್ಲಿವೆ.

ಕೆಲವು ಬ್ಯಾಂಕ್‌ಗಳು 3 ಲಕ್ಷ ರು. ಗರಿಷ್ಠ ಮಿತಿಯ ಬದಲು ಅಪ್ಪ, ಮಗ, ಅತ್ತೆ, ಸೊಸೆ, ಮಗಳ ಹೆಸರಿನಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಸಾಲ ನೀಡಿ ವಸೂಲಿ ಸಮಸ್ಯೆ ಎದುರಿಸುತ್ತಿವೆ. ಇತ್ತೀಚೆಗೆ ಪ್ರಕಟವಾದ ಈ ಬ್ಯಾಂಕುಗಳ ತ್ರೈಮಾಸಿಕ ಫಲಿತಾಂಶದಲ್ಲಿ ಹೆಚ್ಚಿನ ಬ್ಯಾಂಕುಗಳ ಲಾಭಾಂಶ ಗಣನೀಯವಾಗಿ ಕುಸಿತ ಕಂಡಿದೆ. ಉದಾಹರಣೆಗೆ ಆರ್‌ಬಿಎಲ್ ಬ್ಯಾಂಕಿನ ಲಾಭಾಂಶ ಶೇ.86ರಷ್ಟು ಕುಸಿತ ಕಂಡಿದೆ.

ಆರ್‌ಬಿಐ ಕೂಡ ಕೆಲವು ಎಂಎಫ್‌ ಸಿಗಳ ಸಾಲ ಹಂಚಿಕೆಗೆ ತಡೆ ನೀಡಿದೆ. ಸಾಲಗಳ ವಸೂಲಿ ಈ ಬ್ಯಾಂಕ್‌ಗಳಿಗೆ ಎಲ್ಲಕ್ಕಿಂತ ಮುಖ್ಯ ಸಮಸ್ಯೆಯಾಗಿದೆ. ಕೇವಲ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಪಡೆದು ಸಾಲ ನೀಡಿರುವ ಬ್ಯಾಂಕುಗಳು ಸಾಲ ವಸೂಲಿಗೆ ಆಧಾರವಿಲ್ಲದೆ ಬಲವಂತದ ಕ್ರಮ ಕ್ಕೆ ಇಳಿದಿವೆ. ಈಗ ನಡೆಯುತ್ತಿರುವ ವಿದ್ಯಮಾನಕ್ಕೂ, ಮೀಟರ್ ಬಡ್ಡಿ ವ್ಯವಹಾರಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ.

ಹಳ್ಳಿ ಮತ್ತು ನಗರಗಳಲ್ಲಿ ರೌಡಿಗಳನ್ನು ಇಟ್ಟುಕೊಂಡು ಬಡ್ಡಿ ವ್ಯವಹಾರ ಮಾಡುವವರು ಹಿಂದೆ ಯೂ ಇದ್ದರು. ಈಗಲೂ ಇದ್ದಾರೆ. ಈ ಬ್ಯಾಂಕುಗಳು ಈಗ ಅವರದೇ ದಾರಿಯನ್ನು ಹಿಡಿದಿವೆ. ಕೆಲವು ಬ್ಯಾಂಕುಗಳು ಸಾಲ ವಸೂಲಿ ಪ್ರಕ್ರಿಯೆಯನ್ನು ಖಾಸಗಿ ಏಜೆನ್ಸಿಗಳಿಗೆ ಒಪ್ಪಿಸಿವೆ. ಈ ಖಾಸಗಿ ಏಜೆನ್ಸಿ ಗಳು ವೃತ್ತಿಪರ ರೌಡಿಗಳನ್ನು ಇಟ್ಟುಕೊಂಡೇ ವಸೂಲಿಗೆ ಮುಂದಾಗಿವೆ.

ಬ್ಯಾಂಕಿನ ಕೆಲವು ಪ್ರತಿನಿಽಗಳು ಬೆಳ್ಳಂಬೆಳಗ್ಗೆ ಇಲ್ಲವೇ ರಾತ್ರಿ ಹೊತ್ತಿಗೆ ದಿಢೀರ್ ಆಗಿ ಮನೆಯ ಎದುರು ಜಮಾಯಿಸಿ ಅಕ್ಕ ಪಕ್ಕದ ಮನೆಯವರಿಗೆ ಕೇಳಿಸುವಂತೆ ಸಾಲ ವಸೂಲಿ ಹೆಸರಿನಲ್ಲಿ ಗದ್ದಲ ಎಬ್ಬಿಸುತ್ತಿದ್ದಾರೆ. ಮರ‍್ಯಾದೆಗೆ ಅಂಜಿ ಸಾಲ ವಾಪಸ್ ನೀಡಲಿ ಎನ್ನುವುದು ಇವರ ಉದ್ದೇಶ. ಆದರೆ ಇದರಿಂದ ಅವಮಾನಕ್ಕೀಡಾದವರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ.

ಆರ್ಥಿಕ ಸಾಕ್ಷರತೆಯ ಕೊರತೆ

ಎಂಎಫ್‌ ಸಿಗಳಿಂದ ಕಿರು ಸಾಲ ಪಡೆದು ಜೀವನವನ್ನು ಬೆಳಗಿಸಿಕೊಂಡ ಸಾವಿರಾರು ಕುಟುಂಬ ಗಳೂ ಇವೆ. ಆದರೆ ಆರ್ಥಿಕ ಸಾಕ್ಷರತೆಯ ಅರಿವಿಲ್ಲದ ಕುಟುಂಬಗಳು ಸಮಸ್ಯೆಯಲ್ಲಿ ಸಿಲುಕಿವೆ. ಅಧಿಕ ಬಡ್ಡಿಯ ಮರ್ಮ ತಿಳಿಯದೆ ತಮ್ಮ ಆರ್ಥಿಕ ಸಾಮರ್ಥ್ಯವನ್ನು ಮೀರಿ ಸಾಲ ಪಡೆದವರು, ಪಡೆದ ಸಾಲವನ್ನು ಸದುಪಯೋಗಪಡಿಸಿಕೊಳ್ಳದೇ ಆನ್‌ಲೈನ್ ಜೂಜು, ಲಾಟರಿ ಖರೀದಿಗೆ ಬಳಸಿ ದವರು, ಕುಡಿತದ ದಾಸರಾದವರು, ಕೌಟುಂಬಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರು ಸಾಲ ವಾಪಸ್ ನೀಡಲಾಗದೆ, ಅವಮಾನ ತಾಳಲಾರದೆ ತಲೆ ಮರೆಸಿಕೊಂಡು ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ. ದೋಖಾ ಉದ್ದೇಶದಿಂದಲೇ ಸಾಲ ಪಡೆದವರ ಸಂಖ್ಯೆಯೂ ಕಡಿಮೆ ಏನಿಲ್ಲ.

ಈ ಪ್ರಕರಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಮಾತ್ರ ದೂರುವಂತಿಲ್ಲ. ಆರ್‌ಬಿಐ ಇದ ರಲ್ಲಿ ಪ್ರಮುಖ ದೋಷಿ. ನಬಾರ್ಡ್ ಪಾಲುದಾರಿಕೆಯಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಉತ್ತೇ ಜಿಸುವ ದೃಷ್ಟಿಯಿಂದ ಎಂಎಫ್‌ ಸಿಗಳಿಗೆ ಅನುಮತಿ ನೀಡಿದ ಆರ್‌ಬಿಐ ಈ ದಾರಿಯಿಂಂದ ಈಗ ಬಹುದೂರ ಸಾಗಿದೆ.

ಈ ಕಂಪನಿಗಳು ಬ್ಯಾಂಕ್ಗಳಿಂದಲೇ ಶೇ.14ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆದು ಕಡುಬಡವರಿಗೆ ಶೇ.24ರಷ್ಟು ದರದಲ್ಲಿ ಸಾಲ ನೀಡುವುದರಲ್ಲಿ ಅರ್ಥವಿಲ್ಲ. ಎಂಎ-ಸಿಗಳು ಬ್ಯಾಂಕುಗಳಿಂದ ಪಡೆ ಯುವ ಸಾಲದ ಬಡ್ಡಿ ದರ ಮತ್ತು ಗ್ರಾಹಕರಿಗೆ ವಿಧಿಸುವ ಸಾಲದ ಬಡ್ಡಿ ದರದಲ್ಲಿ ಹಿಂದೆ ಇದ್ದ ನಿರ್ಬಂಧವನ್ನು ಆರ್‌ಬಿಐ ರದ್ದು ಮಾಡಿದ ಬಳಿಕ ಬ್ಯಾಂಕ್‌ಗಳ ಬಡ್ಡಿ ದರ ಮೀಟರ್ ಬಡ್ಡಿ ಯಂತಾಗಿದೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಚಿನ್ನ ಅಡವಿಡುವವರ ಸಂಖ್ಯೆಯೂ ಅಧಿಕವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಚಿನ್ನದ ಸಾಲದ ಸುಸ್ತಿ ಪ್ರಮಾಣವೂ ಒಂದೂವರೆ ಲಕ್ಷ ಕೋಟಿ ರು. ಮೀರಿದೆ. ತಮ್ಮ ಹಿರಿಯರು ವರ್ಷಗಳಿಂದ ಕಾಪಿಟ್ಟುಕೊಂಡಿದ್ದ ಚಿನ್ನದ ಒಡವೆಗಳನ್ನು ಬ್ಯಾಂಕಿನಲ್ಲಿಟ್ಟು ಸಾಲ ಪಡೆದವರು ಈ ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಚಿನ್ನದ ಸಾಲ ನೀಡುವ ಕೇರಳ ಮೂಲದ ಕಂಪನಿಗಳ ಸಂಖ್ಯೆ ಮತ್ತು ಆದಾಯ ದುಪ್ಪಟ್ಟಾಗಿದೆ.

ಸಹಕಾರಿ ರಂಗವೇ ಮದ್ದು

ಗ್ರಾಮೀಣ ಭಾಗದ ಆರ್ಥಿಕತೆ ಉತ್ತೇಜನ ನೀಡಲು ಈಗಲೂ ಸಹಕಾರಿ ರಂಗವೇ ಅತ್ಯುತ್ತಮ ಆಯ್ಕೆ. ಗ್ರಾಮೀಣ ಪತ್ತಿನ ಸಹಕಾರ ಸಂಘಗಳಿಗೆ ನಬಾರ್ಡ್ ವತಿಯಿಂದ ಕಡಿಮೆ ದರದಲ್ಲಿ ಸಾಲ ಒದಗಿಸಿ ದರೆ, ಇವು ಆಯಾ ಪ್ರದೇಶದ ಜನರ ಅವಶ್ಯಕತೆಗಳನ್ನು ಈಡೇರಿಸಲು ಸಾಧ್ಯವಿದೆ. ಗ್ರಾಮಸ್ಥರ ಅವಶ್ಯಕತೆಗೆ ಅನುಗುಣವಾಗಿ ಈ ಸಹಕಾರಿ ಸಂಘಗಳು ಅಡಮಾನರಹಿತ ಸಾಲ ವಿತರಿಸಲು ನಿಯಮಗಳನ್ನು ರೂಪಿಸುವುದು ಕಷ್ಟದ ಕೆಲಸವೇನಲ್ಲ.

ಇದರಿಂದ ಸಾಲದ ಸದುಪಯೋಗದ ಜತೆ ದುರುಪಯೋಗದ ಸಾಧ್ಯತೆಯನ್ನೂ ತಡೆಗಟ್ಟಬಹುದು. ಗ್ರಾಮೀಣ ಸಹಕಾರಿ ಸಂಘಗಳನ್ನು ಬೆಳೆಸಬೇಕಾದ ಸರಕಾರಗಳು ಇವುಗಳನ್ನು ರಾಜಕೀಯಕ್ಕೆ ಬಳಸಿಕೊಂಡು ಈ ಕ್ಷೇತ್ರವನ್ನು ಕಲುಷಿತಗೊಳಿಸಿವೆ. ಕಡಿಮೆ ಬಡ್ಡಿಯಲ್ಲಿ ಬೆಳೆ ಸಾಲ, ಅಡಮಾನ ಸಾಲ ನೀಡುವ ಅವಕಾಶಗಳಿದ್ದರೂ ಸಂಘಗಳ ಬೊಕ್ಕಸ ಬರಿದಾಗಿದೆ.

ಸರಕಾರ ನೀಡಬೇಕಾದ ಪರಿಹಾರ ಮೊತ್ತ ಇನ್ನೂ ತಲುಪಿಲ್ಲ. ಬೆಳೆ ಸಾಲ ಪ್ರಮಾಣವನ್ನು ಮೂರು ಲಕ್ಷಗಳಿಂದ ಐದು ಲಕ್ಷ ರು.ಗಳಿಗೆ ಏರಿಸುವ ಸಿಎಂ ಸಿದ್ದರಾಮಯ್ಯಅವರ ಬಜೆಟ್ ಘೋಷಣೆ ಇನ್ನೂ ಕಡತದಲ್ಲಿಯೇ ಉಳಿದಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿಯಂತೆ ಗ್ರಾಮೀಣರ ದುಡ್ಡು ದೋಚುವ ಕಂಪನಿಗಳಾಗಬಾರದು. ಸದ್ಯದ ಮೈಕ್ರೋ ಫೈನಾನ್ಸ್ ಬಿಕ್ಕಟ್ಟಿಗೆ ಮ್ಯಾಕ್ರೋ ಲೆವೆಲ್ ಪರಿಹಾರಗಳನ್ನು ಚಿಂತಿಸಬೇಕಾಗಿದೆ.