ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಜಪಾನಿನಲ್ಲಿ ಮೇಡ್‌ ಇನ್‌ ಇಂಡಿಯಾ ಕಾರು

ದೇಶಕ್ಕಾಗಿ ದಿನಪೂರ್ತಿ ದುಡಿಯುವ ಜಪಾನಿಯರು, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕೆಂದರೆ ಕೈಗೆ ಕಪ್ಪುಬಟ್ಟೆ ಕಟ್ಟಿ ಎರಡು ತಾಸು ಹೆಚ್ಚಾಗಿ ದುಡಿಯುತ್ತಾರೆ. ರಸ್ತೆ ತಡೆ, ಬಂದ್, ಕಲ್ಲು ತೂರಾಟ ದಂಥ ಪ್ರತಿಭಟನೆ ನಡೆದ ಉದಾಹರಣೆಗಳು ಜಪಾನಿನಲ್ಲಿ ಕಾಣುವುದಿಲ್ಲ. 1.40 ಕೋಟಿ ಜನಸಂಖ್ಯೆ ಇರುವ ಟೋಕಿಯೋ ನಗರದಲ್ಲಿ ನಿರ್ಮಿಸಿರುವ ಮೂಲಭೂತ ಸೌಕರ್ಯಗಳು ಜಗತ್ತಿಗೆ ಮಾದರಿಯಾಗಿವೆ.

ಜಪಾನಿನಲ್ಲಿ ಮೇಡ್‌ ಇನ್‌ ಇಂಡಿಯಾ ಕಾರು

ಮೋಹನ್‌ ವಿಶ್ವ ಮೋಹನ್‌ ವಿಶ್ವ Jul 12, 2025 9:01 AM

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ಜಪಾನ್ ದೇಶ ಮೊದಲಿನಿಂದಲೂ ಆಧುನಿಕ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿ ದೊಡ್ಡಮಟ್ಟದ ಛಾಪು ಮೂಡಿಸಿದೆ. ನಮ್ಮ ಬಾಲ್ಯದ ದಿನಗಳಲ್ಲಿ ನೂತನ ತಂತ್ರಜ್ಞಾನವೆಂದರೆ ಜಪಾನ್ ದೇಶದ ಉದಾಹರಣೆ ನೀಡಲಾಗುತ್ತಿತ್ತು. ಟೆಲಿವಿಷನ್, ರೇಡಿಯೋ, ವಾಕ್‌ಮನ್, ಕಾರು, ಬೈಕು, ಇಲೆಕ್ಟ್ರಾನಿಕ್ ಉಪಕರಣಗಳೆಂದರೆ ಜಪಾನ್ ಹೆಸರು ಮುನ್ನೆಲೆಗೆ ಬರುತ್ತಿತ್ತು. ಜಪಾನಿನಲ್ಲಿ ತಯಾರಾದಂಥ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು.

ಜಪಾನ್ ನಿರ್ಮಿತ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದೆಂದರೆ ಶ್ರೀಮಂತಿಕೆಯ ಪ್ರದರ್ಶನ ವಾಗಿತ್ತು. ಎರಡನೇ ಮಹಾಯುದ್ಧದ ನಂತರ ಅಕ್ಷರಶಃ ತತ್ತರಿಸಿದ ಜಪಾನ್ ದೇಶದ ಆರ್ಥಿಕತೆಯು ನೋಡನೋಡುತ್ತಲೆ ಐದು ದಶಕಗಳಲ್ಲಿ ಇಡೀ ಜಗತ್ತು ತನ್ನೆಡೆಗೆ ನೋಡುವಂತೆ ಮಾಡಿತ್ತು.

ದೇಶಕ್ಕಾಗಿ ದಿನಪೂರ್ತಿ ದುಡಿಯುವ ಜಪಾನಿಯರು, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕೆಂದರೆ ಕೈಗೆ ಕಪ್ಪುಬಟ್ಟೆ ಕಟ್ಟಿ ಎರಡು ತಾಸು ಹೆಚ್ಚಾಗಿ ದುಡಿಯುತ್ತಾರೆ. ರಸ್ತೆ ತಡೆ, ಬಂದ್, ಕಲ್ಲು ತೂರಾಟದಂಥ ಪ್ರತಿಭಟನೆ ನಡೆದ ಉದಾಹರಣೆಗಳು ಜಪಾನಿನಲ್ಲಿ ಕಾಣುವುದಿಲ್ಲ. 1.40 ಕೋಟಿ ಜನಸಂಖ್ಯೆ ಇರುವ ಟೋಕಿಯೋ ನಗರದಲ್ಲಿ ನಿರ್ಮಿಸಿರುವ ಮೂಲಭೂತ ಸೌಕರ್ಯಗಳು ಜಗತ್ತಿಗೆ ಮಾದರಿಯಾಗಿವೆ.

ಇದನ್ನೂ ಓದಿ: Mohan Vishwa Column: ಸೀಮೆಎಣ್ಣೆಯಿಂದ ಅಡುಗೆ ಅನಿಲದವರೆಗಿನ ಹಾದಿ !

ಅಲ್ಲಿನ ಮೆಟ್ರೋ ಸಂಚಾರ ವ್ಯವಸ್ಥೆ, ಬುಲೆಟ್ ರೈಲುಗಳು, ಬಸ್ ವ್ಯವಸ್ಥೆ, ಒಳಚರಂಡಿ ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿವೆ. ಭಾರತ ಮತ್ತು ಜಪಾನ್ ನಡುವಿನ ವ್ಯಾಪಾರ ಸಂಬಂಧಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಎರಡೂ ದೇಶಗಳು ಹಲವು ದಶಕಗಳಿಂದ ಪರಸ್ಪರ ವ್ಯಾಪಾರ-ವಹಿವಾಟಿನಲ್ಲಿ ತೊಡಗಿವೆ.

ಭಾರತದ ಮಾರುತಿ ಮತ್ತು ಜಪಾನಿನ ಸುಜುಕಿ ಕಂಪನಿ ಹಲವು ದಶಕಗಳಿಂದ ಭಾರತದಲ್ಲಿ ಕಾರು ಗಳ ಉತ್ಪಾದನೆಯಲ್ಲಿ ತೊಡಗಿವೆ. ಇಲ್ಲಿ ಉತ್ಪಾದನೆಯಾದ ಕಾರುಗಳನ್ನು ಹೆಚ್ಚಾಗಿ ಭಾರತೀಯರು ಬಳಸುತ್ತಾ ಬಂದಿದ್ದರು. ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಜಪಾನ್ ದೇಶವನ್ನು ಹಿಂದಿಕ್ಕುವ ಮೂಲಕ ಭಾರತ ಆ ಸ್ಥಾನಕ್ಕೆ ಏರಿತು. ಒಂದು ಕಾಲದಲ್ಲಿ ಮಾರುತಿ ಮತ್ತು ಸುಜುಕಿ ತಯಾರಿಸಿದ ಕಾರುಗಳು ಭಾರತದ ಮೂಲೆ ಮೂಲೆಗಳನ್ನು ತಲುಪಿದ್ದವು.

ಆದರೆ ಕಳೆದ ಎರಡು ವರ್ಷಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಭಾರತದಲ್ಲಿ ತಯಾರಾ ದಂಥ ಕಾರುಗಳು ಜಪಾನಿಗರ ‘ಹಾಟ್ ಫೇವರಿಟ್’ ಆಗಿವೆ. ಅಲ್ಲೀಗ ಭಾರತದಲ್ಲಿ ತಯಾರಾದ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಕಳೆದ ಜೂನ್ ತಿಂಗಳಲ್ಲಿ ಜಪಾನ್ ದೇಶವು ಭಾರತದಿಂದ 4800 ಕಾರುಗಳನ್ನು ಆಮದು ಮಾಡಿಕೊಂಡಿದೆ. ಈ ಮೂಲಕ, ಪ್ರತಿಷ್ಠಿತ ’ಮರ್ಸಿಡಿಸ್’ ಸಂಸ್ಥೆಯ ಕಾರುಗಳನ್ನು ಅವು ಹಿಂದಿಕ್ಕಿವೆ.

‘ಮೇಡ್ ಇನ್ ಇಂಡಿಯಾ’ ಅಡಿಯಲ್ಲಿ ಮಾರುತಿ ಸಂಸ್ಥೆ ತಯಾರಿಸಿರುವ ‘ಜಿಮ್ಮಿ’ ಕಾರುಗಳಿಗೆ ಜಪಾನಿನಲ್ಲಿ ಎಲ್ಲಿಲ್ಲದ ಬೇಡಿಕೆ. ಫೆಬ್ರವರಿಯಲ್ಲಿ ಜಪಾನಿನಲ್ಲಿ 50000 ಜಿಮ್ಮಿ ಕಾರುಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿತ್ತು. ಜಪಾನಿಗರು ಮಾರುತಿ ಸುಜುಕಿ ಶೋರೂಮ್‌ಗಳ ಮುಂದೆ ಕ್ಯೂ ನಿಂತು ಜಿಮ್ಮಿ ಕಾರುಗಳನ್ನು ಕಾಯ್ದಿರಿಸಿದ್ದರು.

ಈ ಬೇಡಿಕೆಯನ್ನು ತ್ವರಿತವಾಗಿ ಪೂರೈಸುವುದಕ್ಕೆ ಭಾರತದಲ್ಲಿನ ಮಾರುತಿ ಸುಜುಕಿ ಕಾರ್ಖಾನೆಗೆ ಆಗದಂಥ ಪರಿಸ್ಥಿತಿ ಎದುರಾಗಿತ್ತು. ಒಂದು ಕಾಲದಲ್ಲಿ ಜಪಾನಿನಲ್ಲಿದ್ದಂಥ ರಸ್ತೆಗಳು ಭಾರತ ದಲ್ಲಿರಲಿಲ್ಲ. ಭಾರತದ ಉಬ್ಬು ತಗ್ಗಿನ ರಸ್ತೆಗಳಿಗನುಗುಣವಾಗಿ ಕಾರುಗಳನ್ನು ತಯಾರು ಮಾಡಲಾಗುತ್ತಿತ್ತು.

ಜಪಾನಿನಲ್ಲಿನ ರಸ್ತೆ ಉಬ್ಬುಗಳ ಎತ್ತರ ಮತ್ತು ಭಾರತದಲ್ಲಿನ ರಸ್ತೆ ಉಬ್ಬುಗಳ ಎತ್ತರದಲ್ಲಿ ವ್ಯತ್ಯಾಸ ವಿದೆ. ಜಪಾನಿನ ರಸ್ತೆಗಳಿಗೆ ತಕ್ಕಂತೆ ಅಲ್ಲಿನ ಕಾರುಗಳನ್ನು ತಯಾರಿಸಲಾಗುತ್ತಿತ್ತು ಅಥವಾ ಪ್ರತಿಷ್ಠಿತ ಕಂಪನಿಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಹಾಗಿಲ್ಲ, ಭಾರತದಲ್ಲಿ ತಯಾರಾದಂಥ ಕಾರುಗಳನ್ನು ಜಪಾನಿಗರು ಬಹಳ ಇಷ್ಟ ಪಡುತ್ತಿದ್ದಾರೆ.

ಮಾರುತಿ ಕಾರುಗಳೆಂದರೆ ಮಧ್ಯಮ ವರ್ಗದವರ ಆಯ್ಕೆಯೆಂಬ ಮಾತು ಚಾಲ್ತಿಯಲ್ಲಿದೆ. ಸಾಮಾನ್ಯ ವಾಗಿ ಮಧ್ಯಮ ವರ್ಗದವರು ಉತ್ತಮ ಮೈಲೇಜ್ ನೀಡುವ, ನಿರ್ವಹಣಾ ವೆಚ್ಚ ಕಡಿಮೆ ಕಾರುಗಳ ಮೊರೆಹೋಗುವುದರಿಂದ, ಮಾರುತಿ ಕಾರುಗಳು ಅವರ ಪ್ರಥಮ ಆಯ್ಕೆಯಾಗಿವೆ.

ಭಾರತದಲ್ಲಿ ಮಹಿಂದ್ರಾ ಸಂಸ್ಥೆಯ ‘ಥಾರ್ ಜೀಪ್’ ಜತೆಗೆ ಸ್ಫರ್ಧಿಸಲು ಮಾರುತಿ ತಯಾರಿಸಿದ ಕಾರು ‘ಜಿಮ್ನಿ’. ಆದರೆ ಹೆಚ್ಚಿನ ಭಾರತೀಯರು ಮಹಿಂದ್ರಾ ಥಾರ್ ಅನ್ನು ನೆಚ್ಚಿದರೆ, ಜಪಾನಿಗರು ಮಾರುತಿಯ ‘ಜಿಮ್ನಿ’ಗೆ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಜಪಾನಿನ ಹೋಂಡಾ, ಟೊಯೋಟಾ ಕಾರುಗಳು ಭಾರತದಲ್ಲಿ ಹೆಚ್ಚಾಗಿ ಕಾಣುತ್ತಿದ್ದವು. ಆದರೆ ಇಂದು ‘ಮೇಡ್ ಇನ್ ಇಂಡಿಯಾ’ ಕಾರುಗಳು ಜಪಾನಿನ ರಸ್ತೆಗಳಲ್ಲಿ ಎಡೆ ಓಡಾಡುತ್ತಿವೆ.

ಜಪಾನಿನಲ್ಲಿ ಹೆಚ್ಚಿನ ಬೇಡಿಕೆ ಇರುವ ಸುಜುಕಿ ಸಂಸ್ಥೆಯ ಮತ್ತೊಂದು ಕಾರು ‘ಫ್ರಾನಿಕ್ಸ್’ ಭಾರತದಲ್ಲಿ ತಯಾರಾಗುತ್ತಿದೆ. ಜಪಾನಿನಲ್ಲಿ ಈ ಕಾರಿಗೂ ಬೇಡಿಕೆ ಹೆಚ್ಚಾಗಿದೆ. ಜಪಾನಿನ ಪ್ರತಿಷ್ಠಿತ ಕಚೇರಿ ಗಳಲ್ಲಿ ಕೆಲಸ ಮಾಡುವ ದೊಡ್ಡ ದೊಡ್ಡ ಹುದ್ದೆಯವರು ಈ ಕಾರನ್ನು ಹೆಚ್ಚಾಗಿ ಖರೀದಿಸು‌ ತ್ತಿದ್ದಾರೆ.

ಜರ್ಮನಿ ಮತ್ತು ಅಮೆರಿಕದ ಕಾರುಗಳ ಬೇಡಿಕೆ ಜಪಾನಿನಲ್ಲಿ ಕುಸಿಯತೊಡಗಿದೆ. ಕೇವಲ ಸುಜುಕಿ ಮಾತ್ರವಲ್ಲದೆ ಹೋಂಡಾ ಸಂಸ್ಥೆ ತನ್ನ ‘ಬಿಆರ್‌ವಿ’ ಕಾರುಗಳನ್ನು ಭಾರತದಲ್ಲಿ ಉತ್ಪಾದಿಸಿ ಜಪಾನಿಗೆ ತರಿಸಿಕೊಳ್ಳುತ್ತಿದೆ. ಈ ಕಾರಿಗೂ ಜಪಾನಿನಲ್ಲಿ ಉತ್ತಮ ಬೇಡಿಕೆ ಇದೆ. ಭಾರತವೆಂದರೆ ಕೇವಲ ಬುದ್ಧಿವಂತರನ್ನು ಇತರ ದೇಶಗಳಿಗೆ ರಫ್ತು ಮಾಡುವ ದೇಶವಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಒಂದು ಕಾಲದಲ್ಲಿ ಭಾರತದ ರಸ್ತೆಗಳಲ್ಲಿ ವಿದೇಶಿ ನಿರ್ಮಿತ ಕಾರುಗಳು ರಾರಾಜಿಸು ತ್ತಿದ್ದವು, ಇಂದು ‘ಮೇಡ್ ಇನ್ ಇಂಡಿಯಾ’ ಕಾರುಗಳು ಆಧುನಿಕ ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್‌ನಂಥ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿವೆ.

ಜಪಾನಿಗರು ಅಷ್ಟು ಸುಲಭವಾಗಿ ಬೇರೆ ದೇಶದಲ್ಲಿ ತಯಾರಾದಂಥ ವಸ್ತುಗಳನ್ನು ಇಷ್ಟಪಡುವು ದಿಲ್ಲ. ಸೂಕ್ಷ್ಮ ಸಮಸ್ಯೆಗಳನ್ನೂ ಗಂಭೀರವಾಗಿ ಪರಿಗಣಿಸುವ ಜನರು ಜಪಾನಿಗರು. ಅಂಥವರು ಇಂದು ‘ಮೇಡ್ ಇನ್ ಇಂಡಿಯಾ’ ಕಾರುಗಳನ್ನು ಇಷ್ಟಪಡಲು ಕಾರಣ, ಭಾರತದಲ್ಲಿ ತಯಾರಾಗು ತ್ತಿರುವ ಕಾರುಗಳ ಗುಣಮಟ್ಟ ಮತ್ತು ತಂತ್ರಜ್ಞಾನ. ಜತೆಗೆ ಮೇಡ್ ಇನ್ ಇಂಡಿಯಾ ಕಾರುಗಳ ಬೆಲೆ ಕೂಡ ಅಂತಾರಾಷ್ಟ್ರೀಯ ಕಂಪನಿಗಳ ಕಾರುಗಳಿಗೆ ಸ್ಪರ್ಧಾತ್ಮಕವಾಗಿದೆ.

ಜಪಾನಿಗರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ‘ಮೇಡ್ ಇನ್ ಇಂಡಿಯಾ’ ಕಾರುಗಳು ಸಿಗುತ್ತಿವೆ. ಅಲ್ಲಿನ ರಸ್ತೆ ಮತ್ತು ವಾತಾವರಣಕ್ಕೆ ಅನುಕೂಲವಾಗಿರುವ ವಾಹನಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ನಷ್ಟದಲ್ಲಿದ್ದಂಥ ಬ್ರಿಟನ್ನಿನ ‘ಜಾಗ್ವಾರ್’ ಮತ್ತು ‘ರೇಂಜ್ ರೋವರ್’ ಕಾರು ತಯಾರಿಕಾ ಬ್ರ್ಯಾಂಡ್‌ಗಳನ್ನು ಪ್ರತಿಷ್ಠಿತ ‘ಟಾಟಾ’ ಸಂಸ್ಥೆಯು ಖರೀದಿಸಿ, ಅಲ್ಲಿನ ತಂತ್ರಜ್ಞಾನವನ್ನು ಭಾರತಕ್ಕೆ ತಂದು ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ತಯಾರಿಸಿ, ನಷ್ಟದಲ್ಲಿದ್ದ ಬ್ರ್ಯಾಂಡ್‌ಳನ್ನು ಲಾಭಕ್ಕೆ ತಂದಿದೆ.

ಸಾಮಾನ್ಯವಾಗಿ ಶ್ರೀಮಂತ ವರ್ಗದವರು ಈ ಕಾರುಗಳನ್ನು ಖರೀದಿಸಿ, ಉತ್ತಮ ಮಾರುಕಟ್ಟೆಯನ್ನು ಸೃಷ್ಟಿ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಹೋಂಡಾ, ಟೊಯೋಟಾ, ಹ್ಯುಂಡೈ, ಫೋರ್ಡ್ ಸಂಸ್ಥೆಯ ಕಾರುಗಳು ಹೆಚ್ಚಾಗಿ ಕಾಣುತ್ತಿದ್ದವು. ಮೇಲ್ಮಧ್ಯಮ ವರ್ಗದ ಜನ ಈ ಸಂಸ್ಥೆಗಳ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು.

ಆದರೆ ಇಂದು ಮಹಿಂದ್ರಾ ಮತ್ತು ಟಾಟಾ ಸಂಸ್ಥೆಯ ಕಾರುಗಳು ಆ ವರ್ಗದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ‘ಮೇಡ್ ಇನ್ ಇಂಡಿಯಾ’ ಹಣೆಪಟ್ಟಿಯ ಮಹಿಂದ್ರಾ ಸಂಸ್ಥೆಯ ಎಕ್ಸ್‌ಯುವಿ, ಬೊಲೆರೋ, ಸ್ಕಾರ್ಪಿಯೊ, ಥಾರ್ ಕಾರುಗಳು ಹೆಚ್ಚಾಗಿ ಮಾರಾಟ ವಾಗುತ್ತಿವೆ. ಟಾಟಾ ಸಂಸ್ಥೆಯ ನೆಕ್ಸಾನ್, ಹ್ಯಾರಿಯಾರ್, ಸಫಾರಿ, ಪಂಚ್, ಟೈಗೊರ್ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ.

ಕಳೆದ ಒಂದು ದಶಕದಲ್ಲಿ ‘ಮೇಡ್ ಇನ್ ಇಂಡಿಯಾ’ ಕಾರುಗಳು, ಆಮದಾಗುತ್ತಿದ್ದಂಥ ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆಯುವುದರ ಜತೆಗೆ, ಜಪಾನ್ ನಂಥ ಮುಂದುವರಿದ ದೇಶಗಳಿಗೆ ರಫ್ತಾಗು ತ್ತಿವೆ. ಈ ಮೂಲಕ ಭಾರತವು ನಿಧಾನವಾಗಿ ಅಂತಾರಾಷ್ಟ್ರೀಯ ಮಟ್ಟದ ಕಾರು ಉತ್ಪಾದನೆಯ ಶಕ್ತಿಕೇಂದ್ರವಾಗುತ್ತಿದೆ.

2024-25ರಲ್ಲಿ ಜಪಾನ್‌ಗೆ ಒಂಬತ್ತು ತಿಂಗಳಲ್ಲಿ 616 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕಾರುಗಳನ್ನು ರಫ್ತು ಮಾಡಲಾಗಿದೆ. ಮೋದಿಯವರನ್ನು ಟೀಕಿಸುವಾಗ, ‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಕ್ ಇನ್ ಇಂಡಿಯಾ’ ಏನಾಯಿತು? ಎಂದು ಕೇಳುವವರಿಗೆ, ಕಣ್ಣ ಮುಂದೆ ಇಷ್ಟೊಂದು ಉದಾಹರಣೆಗಳಿವೆ. ಭಾರತೀಯರು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಅತ್ಯುತ್ತಮ ಗುಣಮಟ್ಟದ ಕಾರುಗಳ ಮೊರೆ ಹೋಗುತ್ತಿದ್ದಾರೆ.

ಹೋಂಡಾ, ಹ್ಯುಂಡೈ, ಟೊಯೋಟಾದಂಥ ಪ್ರತಿಷ್ಠಿತ ವಿದೇಶಿ ಕಂಪನಿಗಳು ಭಾರತದಲ್ಲಿ ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಕಾರುಗಳನ್ನು ಉತ್ಪಾದಿಸುತ್ತಿದ್ದರೆ, ಮತ್ತೊಂದೆಡೆ ಮಹಿಂದ್ರಾ, ಟಾಟಾ ಮತ್ತು ಮಾರುತಿ ಸಂಸ್ಥೆಗಳ ‘ಮೇಡ್ ಇನ್ ಇಂಡಿಯಾ’ ಕಾರುಗಳು ಭರ್ಜರಿ ಸಾಧನೆ ಮಾಡುತ್ತಿವೆ.

ಸುಜುಕಿ ಸಂಸ್ಥೆಯ ಮೇಡ್ ಇನ್ ಇಂಡಿಯಾ ‘ಜಿಮ್ನಿ’ ಕಾರುಗಳು ಜಪಾನಿನ ಜತೆಗೆ, ಆಸ್ಟ್ರೇಲಿಯಾ, ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ರಫ್ತಾಗುತ್ತಿವೆ. ಭಾರತದಲ್ಲಿರುವ ಕೌಶಲಭರಿತ ದೊಡ್ಡ ಯುವಪಡೆ ಈ ಕಂಪನಿಯ ಕಾರುಗಳ ತಯಾರಿಕೆಯ ಹಿಂದಿರುವ ಶಕ್ತಿ. 2047ರ ಹೊತ್ತಿಗೆ ಭಾರತದ ಕಾರು ಮಾರುಕಟ್ಟೆಯ ಶೇಕಡಾ 50ರಷ್ಟು ಭಾಗವನ್ನು ಮಾರುತಿ ಸುಜುಕಿ ಪಡೆಯಲಿದೆ ಎಂಬ ವರದಿಯೊಂದು ಹೊರಬಿದ್ದಿದೆ.

ಅಮೆರಿಕದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಗಳಾದ ಫೋರ್ಡ್ ಮತ್ತು ಜನರಲ್ ಮೋಟಾರ್ಸ್, ಜಪಾನ್ ಮಾರುಕಟ್ಟೆಯಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡಲು ಹೆಣಗಾಡುತ್ತಿವೆ. ಹೋಂಡಾ ಮತ್ತು ಮಾರುತಿ ಸುಜುಕಿ ಸಂಸ್ಥೆಯ ಮೇಡ್ ಇನ್ ಇಂಡಿಯಾ ಕಾರುಗಳು ಅಲ್ಲಿನ ಮಾರುಕಟ್ಟೆಯನ್ನು ಅತ್ಯಂತ ವೇಗವಾಗಿ ಆಕ್ರಮಿಸಿಕೊಂಡಿವೆ.

ಈಗಾಗಲೇ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಭಾರತ ಜಗತ್ತಿನ ಮೊಬೈಲ್ ತಯಾರಿಕಾ ಕೇಂದ್ರ ಬಿಂದುವಾಗುತ್ತಿದೆ. ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯನ್ನೂ ಲೆಕ್ಕಿಸದೆ ಆಪಲ್ ಸಂಸ್ಥೆ ಕರ್ನಾಟಕದಲ್ಲಿ ತನ್ನ ಉತ್ಪಾದನೆಯನ್ನು ಮುಂದುವರಿಸಿದೆ. ಮತ್ತೊಂದೆಡೆ ಚೀನಾ ಆಪಲ್ ಸಂಸ್ಥೆಯ ಪ್ರಮುಖ ಉದ್ಯೋಗಿಗಳನ್ನು ತನ್ನಲ್ಲಿಗೆ ವಾಪಸ್ ಕರೆಸಿಕೊಂಡಿದ್ದು ಭಾರತದಲ್ಲಿನ ಆಪಲ್ ತಯಾರಿಕಾ ಘಟಕದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆಂದು ಸ್ವತಃ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಹೇಳಿದ್ದಾರೆ.

ಒಂದು ಕಾಲದಲ್ಲಿ ಇಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಗೆ ಹೆಸರಾಗಿದ್ದ ಜಪಾನ್ ದೇಶವನ್ನು ಮೀರಿಸಿ ಭಾರತದಲ್ಲಿ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಮೊಬೈಲ್ ಫೋನುಗಳು ತಯಾರಾಗು ತ್ತಿದ್ದರೆ, ಮತ್ತೊಂದೆಡೆ ‘ಮೇಡ್ ಇನ್ ಇಂಡಿಯಾ’ ಕಾರುಗಳು ಜಪಾನಿನ ರಸ್ತೆಗಳನ್ನು ಆಕ್ರಮಿಸಿ ಕೊಳ್ಳುವ ಮೂಲಕ ಜಗತ್ತಿನ ದೊಡ್ಡ ಕಾರು ತಯಾರಿಕಾ ಕೇಂದ್ರವಾಗಿ ಭಾರತ ಹೊರ ಹೊಮ್ಮುವು ದಕ್ಕೆ ಕಾರಣವಾಗುತ್ತಿವೆ.