ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಮಹಾತ್ಮ ಗಾಂಧಿಯವರ ಹಿಂದಿ ಪ್ರಚಾರ !

ಒಂದೆಡೆ ಮಹಾತ್ಮ ಗಾಂಧಿಯವರ ಹೆಸರನ್ನು ಎಳೆದು ತಂದು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ‘ಇಂಡಿಯ’ ಒಕ್ಕೂಟದ ದಕ್ಷಿಣ ಭಾರತದ ನಾಯಕರು, ಗಾಂಧಿಯವರ ಹಿಂದಿ ಪ್ರೇಮ ಎಷ್ಟಿತ್ತು ಎಂಬುದರ ಬಗ್ಗೆ ಅಧ್ಯಯನ ಮಾಡಿಲ್ಲ. ಶಿಕ್ಷಣದಲ್ಲಿ ಹಿಂದಿ, ಸಂಸ್ಕೃತ, ಪರ್ಷಿ ಯನ್, ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆ ಗಳನ್ನು ಕಲಿಯಬೇಕು ಎಂದಿದ್ದಾರೆ ಗಾಂಧೀಜಿ.

ಮಹಾತ್ಮ ಗಾಂಧಿಯವರ ಹಿಂದಿ ಪ್ರಚಾರ !

ಅಂಕಣಕಾರ ಮೋಹನ್‌ ವಿಶ್ವ

ಮೋಹನ್‌ ವಿಶ್ವ ಮೋಹನ್‌ ವಿಶ್ವ Mar 15, 2025 6:29 AM

ವೀಕೆಂಡ್‌ ವಿತ್‌ ಮೋಹನ್

camohanbn@gmail.com

ಹಿಂದಿ ಭಾಷೆಯ ಕುರಿತಾದ ಚರ್ಚೆ ಇಂದು ನಿನ್ನೆಯದಲ್ಲ, ಅದು ಸ್ವಾತಂತ್ರ್ಯಪೂರ್ವ ಕಾಲ ದಿಂದಲೂ ನಡೆದುಕೊಂಡೇ ಬಂದಿರುವಂಥದ್ದು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಅಂಬೇಡ್ಕರ್ ಈ ಎಲ್ಲರೂ ಹಿಂದಿ ಭಾಷೆಯ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಬ್ರಿಟಿಷರ ಇಂಗ್ಲಿಷ್ ಭಾಷೆಯನ್ನು ಒಪ್ಪಿಕೊಂಡಂಥ ವರು, ಭಾರತದಲ್ಲಿ ಹುಟ್ಟಿದ ಹಿಂದಿ ಯನ್ನು ಆಗಾಗ ರಾಜಕೀಯೀಕರಣಕ್ಕೆ ಒಳಪಡಿಸುವ ಕೆಲಸ ಮಾಡುತ್ತಿರುತ್ತಾರೆ. ಒಂದಿ ಲ್ಲೊಂದು ರಾಜಕೀಯ ಪ್ರಹಸನಗಳಿಗೆ ಸದಾ ಹೆಸರು ವಾಸಿಯಾಗಿರುವ ತಮಿಳುನಾಡಿನ ರಾಜಕೀಯ ನಾಯಕರಿಗೆ ‘ಹಿಂದಿ’ ಎಂದರೆ ಮೈಮೇಲೆ ಹುಳು ಓಡಾಡಿದಂತಾಗುತ್ತದೆ.

ಚುನಾವಣೆ ಹತ್ತಿರ ಬಂತೆಂದರೆ ಸಾಕು, ಡಿಎಂಕೆ ಪಕ್ಷದ ಸ್ಟಾಲಿನ್ ಕುಟುಂಬದವರು ‘ಹಿಂದಿ ರಾಜಕೀಯ’ವನ್ನು ಪ್ರಾರಂಭ ಮಾಡುತ್ತಾರೆ. ಕಳೆದ ಒಂದು ವಾರದಿಂದ ಸಂಸತ್ತಿನಲ್ಲಿ ನೂತನ ಶಿಕ್ಷಣ ಪದ್ಧತಿಯ ಚರ್ಚೆಯನ್ನು ಮುನ್ನೆಲೆಗೆ ತಂದು, ತ್ರಿಭಾಷಾ ಸೂತ್ರದಡಿಯಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆಯೆಂಬ ಸುಳ್ಳು ನಿರೂಪಣೆಯನ್ನು ಸ್ಟಾಲಿನ್‌ರ ಪಕ್ಷ ಮತ್ತೊಮ್ಮೆ ಹರಿಬಿಡುತ್ತಿದೆ.

ಇದನ್ನೂ ಓದಿ: Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

ನಮ್ಮ ತಾತನ ಕಾಲದಲ್ಲೂ ತ್ರಿಭಾಷಾ ಸೂತ್ರದಡಿಯಲ್ಲಿ ಶಾಲೆಗಳಲ್ಲಿ 3 ಭಾಷೆಗಳನ್ನು ಕಲಿಸಲಾಗುತ್ತಿತ್ತು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡ ಭಾಷೆಗೇ ಮೊದಲ ಆದ್ಯತೆ. ಅಂತೆಯೇ ತಮಿಳುನಾಡಿನಲ್ಲಿ ತಮಿಳುಭಾಷೆ ಸಾರ್ವಭೌಮ. ನೂತನ ಶಿಕ್ಷಣ ಪದ್ಧತಿಯಲ್ಲಿ ‘ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು’ ಅಂತ ಎಲ್ಲೂ ಹೇಳಿಲ್ಲ; ಆದರೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸ್ಟಾಲಿನ್ ತಮ್ಮ ಹಳೆಯ ಚುನಾವಣಾ ಚಾಳಿ ಯನ್ನು ಮುಂದುವರಿಸುತ್ತಿದ್ದಾರೆ.

15 ವರ್ಷಗಳ ಹಿಂದೆ, ತಮ್ಮದೇ ಡಿಎಂಕೆ ಪಕ್ಷದ ಶಾಸಕರೊಬ್ಬರ ಮಗ ವಿನ್ಯಾಸಗೊಳಿಸಿದ್ದ ರುಪಾಯಿ ಚಿಹ್ನೆಯನ್ನು, ಈಗ ಹಿಂದಿ ಹೇರಿಕೆಯೆಂಬ ಸಬೂಬು ಹೇಳಿ, ತಮಿಳುನಾಡಿನ ಬಜೆಟ್ ಮಂಡನೆಯ ವೇಳೆ ಬದಲಾಯಿಸಿಕೊಂಡಿದ್ದಾರೆ. ಅಂದು ಈ ಚಿಹ್ನೆಯನ್ನು ಕರುಣಾನಿಧಿಯವರು ಖುಷಿಯಿಂದ ಅನಾವರಣಗೊಳಿಸಿದ್ದರು; ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಮಿತ್ರಪಕ್ಷಗಳ ಒಕ್ಕೂಟವು ಆ ಚಿಹ್ನೆಯನ್ನು ಹೆಮ್ಮೆಯಿಂದ ಒಪ್ಪಿ ಕೊಂಡು ಅಧಿಕೃತ ಮುದ್ರೆ ಒತ್ತಿತ್ತು.

ಒಂದೆಡೆ ಮಹಾತ್ಮ ಗಾಂಧಿಯವರ ಹೆಸರನ್ನು ಎಳೆದು ತಂದು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ‘ಇಂಡಿಯ’ ಒಕ್ಕೂಟದ ದಕ್ಷಿಣ ಭಾರತದ ನಾಯಕರು, ಗಾಂಧಿಯವರ ಹಿಂದಿ ಪ್ರೇಮ ಎಷ್ಟಿತ್ತು ಎಂಬುದರ ಬಗ್ಗೆ ಅಧ್ಯಯನ ಮಾಡಿಲ್ಲ. ಶಿಕ್ಷಣದಲ್ಲಿ ಹಿಂದಿ, ಸಂಸ್ಕೃತ, ಪರ್ಷಿಯನ್, ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕು ಎಂಬು ದಾಗಿ ಗಾಂಧಿಯವರು ತಮ್ಮ ಆತ್ಮಕಥನದಲ್ಲಿ ಹೇಳಿದ್ದಾರೆ.

ವಿದೇಶಿ ಭಾಷೆಯೊಂದನ್ನು ಕಲಿಯಲು ತೋರುವ ಆಸಕ್ತಿಯನ್ನೇ ಹಿಂದಿಯ ಮೇಲೆ ಯಾಕೆ ತೋರಿಸಬಾರದು ಎಂಬುದು ಅವರ ವಾದವಾಗಿತ್ತು. ಇವೆಲ್ಲವನ್ನೂ ಒಂದು ಭಾಷೆಯಾಗಿ ನೋಡಬೇಕೆಂದು ಸ್ಪಷ್ಟವಾಗಿ ಹೇಳಿದ್ದ ಗಾಂಧಿಯವರು ಅದೇ ವೇಳೆಗೆ, ಹಿಂದಿಯ ಮೇಲಿನ ಪ್ರೇಮದಿಂದ ಪ್ರಾದೇಶಿಕ ಭಾಷೆಗಳಿಗೆ ತೊಂದರೆಯಾಗುವುದಿಲ್ಲ ಎಂದೂ ತಿಳಿಸಿದ್ದರು.

1927ರಲ್ಲಿ ಪ್ರಕಟವಾದ ತಮ್ಮ ಆತ್ಮಕಥನದ 2ನೇ ಅಧ್ಯಾಯದಲ್ಲಿ, ಬ್ರಿಟಿಷರು ನಡೆಸು ತ್ತಿದ್ದಂಥ ‘ನೇಮಕಾತಿ ಅಭಿಯಾನ’ದ ಬಗ್ಗೆ ಗಾಂಧೀಜಿ ಬರೆಯುತ್ತಾರೆ. ಯುದ್ಧದ ಸಂದರ್ಭ ದಲ್ಲಿ ಭಾರತೀಯರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಿಕೊಳ್ಳುವ ನಿರ್ಣಯವೊಂದರ ಬಗ್ಗೆ ಚರ್ಚೆಯಾಗುತ್ತದೆ. ಈ ನಿರ್ಣಯಕ್ಕೆ ಗಾಂಧಿಯವರು ತಮ್ಮ ಒಪ್ಪಿಗೆಯನ್ನು ಸೂಚಿಸಿರು ತ್ತಾರೆ.

ನಿರ್ಣಯವನ್ನು ಅಂಗೀಕಾರ ಮಾಡಿಕೊಳ್ಳುವ ಸಭೆಗೆ ಗಾಂಽಯವರನ್ನು ಕರೆಯಲಾಗುತ್ತದೆ. ಗಾಂಧೀಜಿ ತಾವು ಹಿಂದಿ ಭಾಷೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತೇನೆಂದು ಹೇಳು ತ್ತಾರೆ. ಅವರ ಮನವಿಗೆ ವೈಸ್‌ರಾಯ್ ಒಪ್ಪುತ್ತಾರೆ. ಅಂತೆಯೇ ಗಾಂಧೀಜಿ ಮಾತನಾಡಿ ದಾಗ, ಅಲ್ಲಿ ನೆರೆದಿದ್ದಂಥವರು ಬ್ರಿಟಿಷರ ಅಧಿಕೃತ ಸಭೆಯೊಂದರಲ್ಲಿ ಮೊಟ್ಟಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ ಅವರನ್ನು ಅಭಿನಂದಿಸುತ್ತಾರೆ.

‘ಬ್ರಿಟಿಷರ ಸಭೆಯೊಂದರಲ್ಲಿ ಭಾರತದ ಭಾಷೆಯನ್ನು ಹೀಗೆ ಮಾತಾಡಲು ಇಷ್ಟು ವರ್ಷ ಗಳು ಬೇಕಾಯಿತಲ್ಲ, ರಾಷ್ಟ್ರದ ಕೆಲಸವೊಂದರ ಬಗ್ಗೆ ನಮ್ಮದೇ ಭಾಷೆಯಲ್ಲಿ ಮಾತಾಡಲು ಹೀಗೆ ಅನುಮತಿ ಕೇಳಬೇಕಾದ ಪರಿಸ್ಥಿತಿ ಬಂತಲ್ಲ’ ಅಂತ ಗಾಂಧಿಯವರು ನೊಂದುಕೊಳ್ಳು ತ್ತಾರೆ.

ತಮ್ಮ ಆತ್ಮಕಥೆಯಲ್ಲಿ ಬರುವ ‘ಗೋವುಗಳ ಸಂರಕ್ಷಣೆಯ ವಿರುದ್ಧ ಖಿಲಾಫತ್’ ಎಂಬ ಅಧ್ಯಾಯದಲ್ಲಿ, ಮುಸಲ್ಮಾನರ ಸಭೆಯೊಂದರಲ್ಲಿ ತಾವು ಭಾಷಣ ಮಾಡಿದ ಘಟನೆಯ ಬಗ್ಗೆ ಗಾಂಧಿಯವರು ಉಲ್ಲೇಖಿಸುತ್ತಾ, “ನಾನು ಮುಸಲ್ಮಾನರನ್ನು ಉದ್ದೇಶಿಸಿ ಮಾತನಾಡು ವಾಗ ಹಿಂದಿ ಭಾಷೆಯ ಸಂಪೂರ್ಣ ಅರಿವಿಲ್ಲದೆ ತಿಳಿದಿದ್ದ ಅರ್ಧಂಬರ್ಧ ಹಿಂದಿಯಲ್ಲೇ ಮಾತನಾಡಿದ್ದೆ, ಆದರೂ ಸಭೆಯನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದ್ದೆ.

ಒಂದೊಮ್ಮೆ ನಾನು ಇಂಗ್ಲಿಷ್‌ನಲ್ಲಿ ಮಾತನಾಡಿದ್ದಿದ್ದರೆ, ಸಭೆಯಲ್ಲಿ ಚರ್ಚೆಯಾದ ವಿಷಯಗಳು ದೊಡ್ಡ ಮಟ್ಟದಲ್ಲಿ ನೆರೆದಿದ್ದವರಿಗೆ ತಲುಪುತ್ತಿರಲಿಲ್ಲ" ಎಂದು ಹೇಳಿ, ತಾವು ಹಿಂದಿಯಲ್ಲಿ ಭಾಷಣ ಮಾಡಿ ನೆರೆದಿದ್ದವರಿಗೆ ವಿಷಯ ತಲುಪಿಸಿದ್ದು ಎಷ್ಟರಮಟ್ಟಿಗೆ ಉಪಯೋಗಕ್ಕೆ ಬಂದಿತು ಎಂಬುದನ್ನು ವಿವರಿಸಿದ್ದಾರೆ.

ತಮಿಳುನಾಡು ರಾಜ್ಯವು ಹಲವು ರೀತಿಯ ವಿಚಿತ್ರಗಳಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ಅತಿಹೆಚ್ಚು ದೇವಸ್ಥಾನಗಳಿರುವ ರಾಜ್ಯವಿದು; ವಿಪರ್ಯಾಸವೆಂದರೆ, ದೇವರನ್ನೇ ನಂಬದ ದ್ರಾವಿಡ ಪಕ್ಷಗಳಿಗೆ ಅಲ್ಲಿನ ಜನರು ಮತ ನೀಡುತ್ತಾ ಬಂದಿದ್ದಾರೆ. ಹಿಂದೂ ಧರ್ಮವನ್ನು ಮಾರಣಾಂತಿಕ ರೋಗಗಳಿಗೆ ಹೋಲಿಸಿದ ಡಿಎಂಕೆ ಪಕ್ಷವನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಭಾಷೆಯ ವಿಚಾರದಲ್ಲಿ ಸುಳ್ಳು ದ್ರಾವಿಡ ಸಿದ್ಧಾಂತವನ್ನು ಮುನ್ನೆಲೆಗೆ ತಂದು, ಹಿಂದಿ ಯನ್ನು ದ್ವೇಷಿಸುತ್ತಾರೆ.

ಪುರಾವೆಗಳಿಲ್ಲದ ಸುಳ್ಳು ‘ಆರ್ಯ ಮತ್ತು ದ್ರಾವಿಡ’ ಇತಿಹಾಸವನ್ನು ನಂಬಿರುವ ಅಲ್ಲಿನ ನಾಯಕರು, ಹಿಂದಿ ಹೇರಿಕೆಯೆಂಬ ರಾಜಕೀಯದ ಮೂಲಕ ಭಾರತವನ್ನು ಒಡೆಯುವ ನೀತಿಗೆ ಸದಾ ಮುಂದಾಗಿರುತ್ತಾರೆ. ಮತ್ತೊಂದೆಡೆ, ತಮ್ಮ ರಾಜಕೀಯಕ್ಕಾಗಿ ಸದಾ ಮಹಾತ್ಮ ಗಾಂಧಿಯವರ ಜಪ ಮಾಡುತ್ತಿರುತ್ತಾರೆ. ಹಿಂದಿ ಭಾಷೆಯನ್ನು ದಕ್ಷಿಣ ಭಾರತದಲ್ಲಿ ಪ್ರಚುರ ಪಡಿಸಲು ಮಹಾತ್ಮ ಗಾಂಧಿಯವರು ಹಿಂದಿ ಕಲಿಕಾ ಸಂಸ್ಥೆಯೊಂದನ್ನು ಸ್ಥಾಪಿ ಸುವ ನಿಟ್ಟಿನಲ್ಲಿ 1918ರಲ್ಲಿ ಆಲೋಚಿಸಿದ್ದರು.

ಮಧ್ಯಪ್ರದೇಶದ ಇಂದೋರಿನಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ ಗಾಂಧಿಯವರಿಗೆ ಇದು ಹೊಳೆದಿತ್ತು. ಸಮ್ಮೇಳನ ನಡೆದ ಕೆಲವೇ ತಿಂಗಳುಗಳಲ್ಲಿ ಮದ್ರಾಸಿನಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಆರಂಭವಾಯಿತು. ಹಿಂದಿ ಭಾಷೆಯನ್ನು ದಕ್ಷಿಣ ಭಾರತ ದಲ್ಲಿ ಹೆಚ್ಚು ಪ್ರಚುರಿಸುವುದು ಗಾಂಧಿಯವರ ಉದ್ದೇಶವಾಗಿತ್ತು.

1918ರಿಂದ 1948ರವರೆಗೆ (ಅಂದರೆ ತಮ್ಮ ಸಾವಿನವರೆಗೆ) ಆ ಪ್ರಚಾರ ಸಭಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಗಾಂಧಿಯವರು, ದಕ್ಷಿಣ ಭಾರತದ ರಾಜ್ಯಗಳಲ್ಲಿರುವ ಸ್ವಯಂ ಸೇವಕರನ್ನು ಗುರುತಿಸಿ, ಹಿಂದಿಯ ಕಲಿಕೆಗಾಗಿ ವಾರಾಣಸಿಗೆ ಕಳುಹಿಸಿದ್ದರು. ಮಾತ್ರವಲ್ಲ, ತಮ್ಮ ಮಗ ದೇವದಾಸ್‌ನನ್ನು ಮದ್ರಾಸಿಗೆ ಕರೆಸಿಕೊಂಡು ಹಿಂದಿ ಪ್ರಚಾರ ಸಭಾದ ಮೊದಲ ಪ್ರಚಾರಕನನ್ನಾಗಿಸಿದ್ದರು.

ಆದರೆ, ಮಾತುಮಾತಿಗೂ ‘ಗಾಂಧಿ ತತ್ವ’ ಎನ್ನುತ್ತಾ ರಾಜಕೀಯ ಮಾಡುವವರು, ಗಾಂಧೀಜಿ ತಮ್ಮ ಮಗನನ್ನು ಹೀಗೆ ಹಿಂದಿಯ ಪ್ರಚಾರಕ್ಕೆ ನಿಯೋಜಿಸಿದ್ದರ ಬಗ್ಗೆ ಜಾಣಮೌನವನ್ನು ಪ್ರದರ್ಶಿಸುತ್ತಾರೆ. 1936ರಲ್ಲಿ, ಸದರಿ ಪ್ರಚಾರ ಸಭಾದ ನಾಲ್ಕು ನೂತನ ಶಾಖೆಗಳನ್ನು ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷಿಕ ಸ್ಥಳಗಳಲ್ಲಿ ಗಾಂಧೀಜಿ ಸ್ಥಾಪಿಸಿ ದ್ದರು.

ದಕ್ಷಿಣ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಹಿಂದಿ ಭಾಷೆಯನ್ನು ಪ್ರಚುರ ಪಡಿಸು ವುದು ಇದರ ಹಿಂದಿನ ಉದ್ದೇಶವಾಗಿತ್ತು. ಮಹಾತ್ಮ ಗಾಂಧಿಯವರು ಅಂದು ಸ್ಥಾಪಿಸಿದ್ದ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದಲ್ಲಿ ಪ್ರಸ್ತುತ 83,795 ಜನರು ಪ್ರಚಾರಕರಾಗಿ ದಕ್ಷಿಣ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕುತೂಹಲಕಾರಿ ಅಂಶವೆಂದರೆ, ತಮಿಳುನಾಡಿ ನಿಂದಲೇ 43000ಕ್ಕೂ ಹೆಚ್ಚು ಮಂದಿ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಹಾತ್ಮ ಗಾಂಧಿಯವರು 1935ರಲ್ಲಿ ಮಧ್ಯಪ್ರದೇಶದ ಇಂದೋರಿನಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ, “ಭಾರತದ ಪ್ರತಿಯೊಬ್ಬರೂ ಹಿಂದಿ ಭಾಷೆಯನ್ನು ಕಲಿಯಬೇಕು; ಕಲಿತರೆ ಪ್ರಾಂತ್ಯಗಳ ನಡುವಣ ಸಂವಹನ ಸುಲಭವಾಗುತ್ತದೆ. ಹಿಂದಿಯು ಬ್ರಿಟಿಷರ ಇಂಗ್ಲಿಷ್ ಭಾಷೆಯ ಸ್ಥಾನವನ್ನು ಬದಲಾಯಿಸಿದರೆ ಉತ್ತಮ" ಎಂದು ಹೇಳಿದ್ದರು. ಇಂಗ್ಲಿಷ್ ಭಾಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಶ್ಚಾತ್ಯರ ಸಂಸ್ಕೃತಿಯನ್ನು ಅರಿಯಲು, ಅವರ ಜತೆಗೆ ಸಂವಹನ ನಡೆಸಲು ಬಹಳಷ್ಟು ಉಪಯೋಗಕ್ಕೆ ಬರುವುದು ನಿಜ; ಹಾಗಂತ, ಅಂಥ ವಿದೇಶಿ ಭಾಷೆಯೊಂದು ಭಾರತದ ಸಂಪೂರ್ಣ ಸಂವಹನ ಭಾಷೆಯಾಗುವುದು ಮಹಾತ್ಮ ಗಾಂಧಿಯವರಿಗೆ ಇಷ್ಟವಿರಲಿಲ್ಲ.

ಗಾಂಧಿಯವರು ತಮ್ಮ ‘ಹರಿಜನ’ ಪತ್ರಿಕೆಯಲ್ಲೂ ಈ ವಿಷಯವನ್ನು ಆಗಾಗ ಹೇಳುತ್ತಿದ್ದರು. “ಪೋಷಕರು ತಮ್ಮ ಮಕ್ಕಳಿಗೆ ಹಿಂದಿ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಒಂದು ಗಂಟೆಯಷ್ಟು ಅವಧಿಯನ್ನು ವ್ಯಯಿಸಿದರೆ ತಪ್ಪಿಲ್ಲ. ಹಿಂದಿ ಕಲಿಕೆಯ ವಿರುದ್ಧ ಮಾತನಾ ಡುವವರು ತಮ್ಮ ಮಾತೃಭಾಷೆ ಅಪಾಯದಲ್ಲಿದೆ ಎಂದರೆ, ಅವರಿಗೆ ಜ್ಞಾನದ ಅವಶ್ಯಕತೆ ಇದೆ ಎಂದೇ ಅರ್ಥ" ಎಂಬ ಮಾತನ್ನು ಮಹಾತ್ಮ ಗಾಂಧಿ ಹೇಳಿದ್ದರು.

ಸುಮಾರು 8 ದಶಕಗಳ ಹಿಂದೆ ಅವರು ಹೇಳಿದ್ದ ಇಂಥ ಮಾತುಗಳು ಇಂದಿಗೂ ನಿಜವಾಗಿವೆ. ಪ್ರಾದೇಶಿಕ ಭಾಷೆಯ ರಾಜ್ಯಗಳಲ್ಲಿ ಮಾತೃಭಾಷೆಯ ಮೇಲಿನ ಅಪಾಯವೆಂಬ ರಾಜಕೀಯ ನಡೆಯುತ್ತಲೇ ಇದೆ. ನೂತನ ಶಿಕ್ಷಣ ಪದ್ಧತಿಯಲ್ಲಿ, ಮೊದಲ ಐದು ವರ್ಷಗಳ ಕಾಲ ಮಾತೃಭಾಷೆಯಲ್ಲಿನ ಶಿಕ್ಷಣವನ್ನು ಕಡ್ಡಾಯ ಮಾಡಲಾಗಿದೆ; ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ, ನಂತರದ ಸ್ಥಾನವನ್ನು ಇತರ ಭಾಷೆಗಳಿಗೆ ನೀಡಲಾಗಿದೆ.

ಹೀಗಿರುವಾಗ ಹಿಂದಿ ಹೇರಿಕೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಹಿಂದಿನ ಡಿಎಂಕೆ ಸರಕಾರ ಈ ನೀತಿಯನ್ನು ಯಾಕೆ ಜಾರಿಗೆ ತರಲಿಲ್ಲ? ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ 10 ವರ್ಷಗಳ ಕಾಲ ಬೆಂಬಲ ನೀಡಿದ್ದ ಸ್ಟಾಲಿನ್, ಮಾತೃಭಾಷೆಯಲ್ಲಿನ ಕಲಿಕೆಯನ್ನು ಯಾಕೆ ಕಡ್ಡಾಯ ಮಾಡಲಿಲ್ಲ? ಡಿಎಂಕೆ ಪಕ್ಷದವರು ಚುನಾವಣಾ ಸಮಯದಲ್ಲಿ ಅಥವಾ ತಮ್ಮ ವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ, ಹಿಂದಿ ಭಾಷೆಯ ಹೆಸರಿನಲ್ಲಿ ಜನ ರನ್ನು ಎತ್ತಿಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಬಿಟ್ಟರೆ ಮತ್ತೇನನ್ನೂ ಮಾಡುತ್ತಿಲ್ಲ.

ಇವರ ಪ್ರಕಾರ, ಈಗ ನಡೆಯುತ್ತಿರುವ ವಿದ್ಯಮಾನಗಳು ಹಿಂದಿ ಹೇರಿಕೆಯಾದರೆ, ಮಹಾತ್ಮ ಗಾಂಧಿಯವರ ಹಿಂದಿ ಪ್ರೇಮವನ್ನು ಏನೆಂದು ಕರೆಯಬೇಕು?