ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಮೇಕ್‌ ಇನ್‌ ಕುಂದಾಪುರ, ಗ್ಲೋಬಲ್‌ ಕಾಂತಾರ !

ಇಲ್ಲಿ ಮೇಕ್ ಇನ್ ಇಂಡಿಯಾ, ಲೋಕಲ್ ಫಾರ್ ಗ್ಲೋಬಲ್ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ತಮ್ಮ ಚಿತ್ರದಲ್ಲಿ ಅಳವಡಿಸಿ ಅದ್ಭುತ ಯಶಸ್ಸು ಕಂಡಿರುವುದು ಇತರರಿಗೆ ಮರೆಯಲಾಗದ ಪಾಠ. ಏನಿದು ಲೋಕಲ್ ಫಾರ್ ಗ್ಲೋಬಲ್? ಭಾರತದ ಸ್ಥಳೀಯ ಉತ್ಪನ್ನ, ಸೇವೆಗಳನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವುದು. ‌

Keshava Prasad B Column: ಮೇಕ್‌ ಇನ್‌ ಕುಂದಾಪುರ, ಗ್ಲೋಬಲ್‌ ಕಾಂತಾರ !

-

ಮನಿ ಮೈಂಡೆಡ್

ಇತ್ತೀಚಿನ ವರ್ಷಗಳಲ್ಲಿ, ಬೇಕೋ-ಬೇಡವೋ ವಿದೇಶಗಳಲ್ಲಿ ಚಿತ್ರೀಕರಣ ಮಾಡುವುದನ್ನೇ ತಯಾರಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಕೋಟಿ ಕೋಟಿ ಚೆಲ್ಲುವ ಸಿನಿಮಾ ಆಗಿದ್ದರೆ, ವಿದೇಶಿ ಚಿತ್ರೀಕರಣ ಕಡ್ಡಾಯ ಎಂಬಂತಿತ್ತು. ಆದರೆ ರಿಷಬ್ ಶೆಟ್ಟರು ಈ ಅಘೋಷಿತ ಸಿದ್ಧ ಸೂತ್ರವನ್ನು ಕಿತ್ತೆಸೆದರು. ತಮ್ಮ ತವರಿನ ಕಡೆಗೇ ಮುಖ ಮಾಡಿದರು!

ಕಾಂತಾರ ಚಾಪ್ಟರ್-1’ ಒಂದು ಪ್ರಾಚೀನ ದಂತಕಥೆಯಾದರೆ, ಅದರ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿಯವರ ಸಾಹಸವೂ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಂದೆಂದೂ ಕಂಡು ಕೇಳರಿಯದ ದಂತಕಥೆ‌ ಯಾಗಿದೆ. ಅದಕ್ಕೆ ಹಲವು ಕಾರಣಗಳಿವೆ. ಅವರ ಅಮೋಘ ಅಭಿನಯ ಮತ್ತು ನಿರ್ದೇಶನ ಒಂದು ಕಡೆಯಾದರೆ, ಸಿನಿಮಾದ ಕಥಾವಸ್ತು, ಭಾಷೆ, ಚಿತ್ರೀಕರಣದ ಸ್ಥಳ, ಸಿಬ್ಬಂದಿ, ತಂತ್ರಜ್ಞರು, ಕಲಾವಿದರು ಎಲ್ಲವೂ ಪಕ್ಕಾ ಲೋಕಲ್! ‌

ಕರಾವಳಿಯ ದೈವಾರಾಧನೆಯ ಜನಪದ ಕಥೆಯ ಸೊಗಸಿನ ಜತೆಗೆ ಇದರ ಕಮರ್ಷಿಯಲ್ ಸಕ್ಸೆಸ್ ನೋಡಿ! ಬಾಕ್ಸ್ ಆಫೀಸ್ ಕಲೆಕ್ಷನ್ ಕೆಲವರಿಗೆ ಒಳಗೊಳಗೇ ಅಸೂಯೆ ಹುಟ್ಟಿಸಿದರೂ ಅಚ್ಚರಿ ಇಲ್ಲ. ಆದರೆ ಇದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಮೊದಲ 7 ದಿನಗಳಲ್ಲಿ ಬರೋಬ್ಬರಿ 316 ಕೋಟಿ ರುಪಾಯಿ ಗಳಿಕೆ! ‌

ಕನ್ನಡದಲ್ಲಿ 98.85 ಕೋಟಿ, ತೆಲುಗಿನಲ್ಲಿ 60.9 ಕೋಟಿ, ಹಿಂದಿಯಲ್ಲಿ 102 ಕೋಟಿ, ತಮಿಳಿನಲ್ಲಿ 29.6 ಕೋಟಿ, ಮಲಯಾಳದಲ್ಲಿ 24.85 ಕೋಟಿ ಸಂಪಾದನೆ! ಆದರೆ ಖುಷಿಗೆ ಇನ್ನೂ ಹಲವಾರು ಕಾರಣ ಗಳಿವೆ. ಹಾಲಿವುಡ್‌ಗೆ ಸೆಡ್ಡು ಹೊಡೆಯುತ್ತಿರುವ ಈ ಮೆಗಾ ಚಿತ್ರವನ್ನು ಅವರು ಚಿತ್ರೀಕರಿಸಿದ್ದು ಯಾವುದೋ ವಿದೇಶದಲ್ಲಿ ಅಲ್ಲ, ಭಾರತದ ಮಹಾನಗರಗಳಲ್ಲೂ ಅಲ್ಲ, ಬದಲಿಗೆ ಕುಂದಾಪುರದ ಗ್ರಾಮೀಣ ಪರಿಸರದಲ್ಲಿ! ‌

ಇದನ್ನೂ ಓದಿ: Keshava Prasad B Column: ಸೈಕಲ್‌ ತುಳಿದು ಮೈಕ್ರೋಸಾಫ್ಟ್‌ʼಗೇ ಸವಾಲೆಸೆದ ಟೆಕ್‌ ಉದ್ಯಮಿ

ಅಲ್ಲಿ ನೂರಾರು ಕೋಟಿ ಸುರಿದು, ಬಾಲಿವುಡ್ಡೇ ದಂಗಾಗುವಂಥ ಅದ್ಭುತವಾದ ಚಿತ್ರವನ್ನು ನಿರ್ಮಿಸಿರುವುದು, ಮತ್ತು ದೇಶ ವಿದೇಶಗಳಲ್ಲಿ ಏಳು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಯಶಸ್ವಿ ಪ್ರದರ್ಶನವಾಗಿ ಬಾಕ್ಸ್ ಆಫೀಸ್ ನಲ್ಲಿ ದಿಗ್ವಿಜಯವನ್ನೇ ಸಾಧಿಸಿ ಮುನ್ನುಗ್ಗುತ್ತಿರುವುದು ಪವಾಡ ಸದೃಶ ಘಟನೆಯಾಗಿದೆ. ‌

ಅಷ್ಟೇ ಅಲ್ಲ ಇದಕ್ಕೂ ಮೊದಲು, ಕಡಿಮೆ ಬಜೆಟ್‌ನಲ್ಲಿ ಸೂಪರ್ ಹಿಟ್ ಸಿನಿಮಾವನ್ನೂ ನಿರ್ಮಿಸ ಬಹುದು ಎಂಬುದಕ್ಕೂ ಕಾಂತಾರವೇ ನಿದರ್ಶನವಾಗಿತ್ತು. 16 ಕೋಟಿ ರುಪಾಯಿ ಬಜೆಟ್‌ನಲ್ಲಿ ತಯಾರಿಸಿದ್ದ ಸಿನಿಮಾ 400 ಕೋಟಿಗೂ ಹೆಚ್ಚು ಗಳಿಸಿತ್ತು! ಇಂತಿಪ್ಪ ಶೆಟ್ಟರ ಯಶೋಗಾಥೆಗೆ ಹಲವಾರು ಸ್ವಾರಸ್ಯಕರ ಆಯಾಮಗಳು ಇವೆ.

ಇತ್ತೀಚಿನ ವರ್ಷಗಳಲ್ಲಿ, ಬೇಕೋ-ಬೇಡವೋ ವಿದೇಶಗಳಲ್ಲಿ ಚಿತ್ರೀಕರಣ ಮಾಡುವುದನ್ನೇ ತಯಾರಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಕೋಟಿ ಕೋಟಿ ಚೆಲ್ಲುವ ಸಿನಿಮಾ ಆಗಿದ್ದರೆ, ವಿದೇಶಿ ಚಿತ್ರೀಕರಣ ಕಡ್ಡಾಯ ಎಂಬಂತಿತ್ತು. ಆದರೆ ರಿಷಬ್ ಶೆಟ್ಟರು ಈ ಅಘೋಷಿತ ಸಿದ್ಧ ಸೂತ್ರವನ್ನು ಕಿತ್ತೆಸೆದರು. ತಮ್ಮ ತವರಿನ ಕಡೆಗೇ ಮುಖ ಮಾಡಿದರು!

K P 10

ಕಾಂತಾರವನ್ನು ಕುಂದಾಪುರದಲ್ಲಿ ಚಿತ್ರೀಕರಣ ಮಾಡಿದ್ದು ಮಾತ್ರವಲ್ಲದೆ, 90 ಪ್ರತಿಶತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಹುಟ್ಟೂರಿನ ಮಾಡಿದ್ದಾರೆ. ಐದು ವರ್ಷಗಳ ಪ್ರಾಜೆಕ್ಟ್ ಸಲುವಾಗಿ ಇತಿಹಾಸ, ಸಂಪ್ರದಾಯದ ಅಧ್ಯಯನ ನಡೆಸಿದ್ದಷ್ಟೇ ಅಲ್ಲದೆ, ತವರೂರಿನಲ್ಲಿಯೇ ಬಹುಪಾಲು ಎಡಿಟಿಂಗ್ ಮತ್ತು ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ. ‌

ಫೈನಲ್ ಮಾಡಲು ಮಾತ್ರ ಬೆಂಗಳೂರು-ಕೊಚ್ಚಿಗೆ ಬರುತ್ತಿದ್ದರು. ಕಾಂತಾರ ನಿರ್ಮಾಣದ ಸಲುವಾಗಿ ಇಡೀ ಕುಂದಾಪುರ ಸಿದ್ಧವಾಗಿತ್ತು. ಈ ಹಳ್ಳಿಯು ಚಿತ್ರಗ್ರಾಮವಾಗಿ ಪರಿವರ್ತನೆಯಾಗಿತ್ತು. ದಿನಕ್ಕೆ ಕನಿಷ್ಠ 100 ವಾಹನಗಳು ಶೂಟಿಂಗ್ ಸ್ಥಳಕ್ಕೆ ಹೋಗಿ-ಬರುವ ಸಾರಿಗೆ ವ್ಯವಸ್ಥೆಗೇ ಬಳಕೆಯಾಗು ತ್ತಿತ್ತು.

ಚಿತ್ರೀಕರಣದ ಸೆಟ್‌ನಲ್ಲಿ ದಿನ ನಿತ್ಯ ಸಾವಿರಾರು ಜನರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಶೆಟ್ಟರು ಮತ್ತು ಸಂಗಡಿಗರು ಕಾಂತಾರಕ್ಕಾಗಿಯೇ ಕುಟುಂಬ ಸಮೇತರಾಗಿ ಬೆಂಗಳೂರಿನಿಂದ ಹುಟ್ಟೂರಿಗೆ ಸ್ಥಳಾಂತರವಾಗಿದ್ದರು. ಮಕ್ಕಳನ್ನು ಅಲ್ಲಿಯೇ ಶಾಲೆಗೆ ಸೇರಿಸಿದ್ದರು. ಸ್ಥಳೀಯ ಸಹ ಕಲಾವಿದರಿಗೂ ವರ್ಷಗಟ್ಟಲೆ ಉದ್ಯೋಗವಾಗಿತ್ತು.

‘ಬಾಹುಬಲಿ’ ಸಿನಿಮಾದ ಮಾಹಿಷ್ಮತಿ ಸಾಮ್ರಾಜ್ಯದ ಬೃಹತ್ ಸೆಟ್ ಅನ್ನು ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾಗಿತ್ತು. ಆದರೆ ಕದಂಬರ ಭವ್ಯ ಸಾಮ್ರಾಜ್ಯದ ಸೆಟ್ ಅನ್ನು ಕುಂದಾಪುರದ ಹಳ್ಳಿಯಲ್ಲಿ ನಿರ್ಮಿಸಲಾಗಿತ್ತು. ಅಷ್ಟೇ ಅದ್ಭುತವಾಗಿ ಅದು ಮೂಡಿರುವುದನ್ನು ಚಿತ್ರದಲ್ಲಿ ಕಾಣಬಹುದು.‌

ಹೀಗಾಗಿಯೇ, ಹಿರಿಯ ಕಲಾವಿದ ಅನುಪಮ್ ಖೇರ್ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಿದ ಬಳಿಕ, “ಸಿನಿಮಾ ಎಷ್ಟು ಚೆನ್ನಾಗಿದೆ ಎಂದರೆ ನನಗೆ ಮಾತೇ ಬರುತ್ತಿಲ್ಲ. ಅಷ್ಟು ಸೊಗಸಾಗಿ ನಿರ್ಮಿಸಲಾಗಿದೆ" ಎಂದು ಶೆಟ್ಟರಿಗೆ ಬೆನ್ನು ತಟ್ಟಿದ್ದಾರೆ. ಸದಾ ವಿವಾದಾತ್ಮಕ ರಿಯಾಕ್ಷನ್ ಗಳಿಂದಲೇ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರೂ, ಕಾಂತಾರಾ ಚಾಪ್ಟರ್-1 ಬಗ್ಗೆ ಮಾತಾಡುತ್ತಾ, “ಸಿನಿಮಾ ನಿರ್ಮಾಣದ ಪರಿಕಲ್ಪನೆಯನ್ನೇ ನೀವು ಬದಲಿಸಿದ್ದೀರಿ. ಹೊಸ ಶೈಲಿ ಯನ್ನು ಹುಟ್ಟು ಹಾಕಿದ್ದೀರಿ" ಎಂದು ಪ್ರಶಂಸಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಮಹತ್ತ್ವಾಕಾಂಕ್ಷೆಯ ಅಭಿಯಾನಗಳಲ್ಲಿ ‘ಮೇಕ್ ಇನ್ ಇಂಡಿಯಾ’ ಕೂಡ ಒಂದು. ಭಾರತದಲ್ಲಿಯೇ ಉತ್ಪಾದನೆ, ಅಭಿವೃದ್ಧಿ, ಹೂಡಿಕೆಯನ್ನು ಮಾಡಿ ಎಂಬುದು ಈ ಉಪಕ್ರಮದ ನೀತಿ. ಇದನ್ನು ಯಾವುದೇ ಕ್ಷೇತ್ರಕ್ಕೂ ಅನ್ವಯಿಸಬಹುದು. ಇದರಿಂದ ನಮ್ಮ ದೇಶದ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ನೇರ-ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತದೆ. ನಮ್ಮ ದುಡ್ಡು ಹೊರದೇಶಗಳ ಪಾಲಾಗುವುದಿಲ್ಲ.

ಕಾರಣ ಏನೇ ಇರಬಹುದು, ಆದರೆ ಐದಾರು ಕೋಟಿ ವೆಚ್ಚದ ಸಿನಿಮಾ ನಿರ್ಮಾಪಕರೂ ವಿದೇಶ ಗಳಲ್ಲಿ ಶೂಟಿಂಗ್ ಮಾಡೋ ಕ್ರೇಜಿಗೆ ಹೊರಟಿರುವ ಸಂದರ್ಭದಲ್ಲಿ ಕುಂದಾಪುರದ ಗ್ರಾಮಗಳಲ್ಲಿ ನೂರಾರು ಕೋಟಿ ವೆಚ್ಚದ ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ನಡೆದಾಗ, ಸ್ಥಳೀಯವಾಗಿ ಆರ್ಥಿಕ ಚಟುವಟಿಕೆ ಸುಧಾರಿಸುತ್ತದೆ. ಸಾವಿರಾರು ಮಂದಿಗೆ ಜೀವನೋಪಾಯಕ್ಕೂ ನೆರವಾಗುತ್ತದೆ. ಉದಾಹರಣೆಗೆ ಚಿತ್ರದ ಸೆಟ್ ನಿರ್ಮಿಸುವ ಕೆಲಸದಲ್ಲಿ 600ಕ್ಕೂ ಹೆಚ್ಚು ಕಾರ್ಪೆಂಟರ್‌ಗಳು ಭಾಗವಹಿಸಿದ್ದರಂತೆ! ‌

ಇಲ್ಲಿ ಮೇಕ್ ಇನ್ ಇಂಡಿಯಾ, ಲೋಕಲ್ ಫಾರ್ ಗ್ಲೋಬಲ್ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ತಮ್ಮ ಚಿತ್ರದಲ್ಲಿ ಅಳವಡಿಸಿ ಅದ್ಭುತ ಯಶಸ್ಸು ಕಂಡಿರುವುದು ಇತರರಿಗೆ ಮರೆಯಲಾಗದ ಪಾಠ. ಏನಿದು ಲೋಕಲ್ ಫಾರ್ ಗ್ಲೋಬಲ್? ಭಾರತದ ಸ್ಥಳೀಯ ಉತ್ಪನ್ನ, ಸೇವೆಗಳನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವುದು. ‌

ಅಮೆರಿಕ, ಕೆನಡ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ಕಾಂತಾರ ಪ್ರದರ್ಶನವಾಗುತ್ತಿದೆ. ದಕ್ಷಿಣ ಕನ್ನಡದ ಭೂತಕೋಲ, ತುಳು ಭಾಷೆಯ ಪಾಡ್ದನಗಳು, ಜನಪದ, ಪ್ರಾಚೀನ ಕಾಲದ ವ್ಯಾಪಾರಗಳು, ಜನಜೀವನ, ಸಾಮಾಜಿಕ ಸಂಘರ್ಷ ಎಲ್ಲವನ್ನೂ ಒಳಗೊಂಡಿರುವ ಲೋಕಲ್ ಪ್ರಾಡಕ್ಟ್ ಏಳೇ ದಿನಗಳಲ್ಲಿ ಗ್ಲೋಬಲ್ ಆಗಿದೆ. ‌

ರಿಷಬ್ ಶೆಟ್ಟಿಯವರಿಗೆ ಈಗ 42 ವರ್ಷ ವಯಸ್ಸು. ನಿಜಕ್ಕೂ ಅವರು ನಡೆದು ಬಂದಿರುವ ಹಾದಿಯೇ ಸ್ಪೂರ್ತಿದಾಯಕ. ಅದು ಸಿನಿಮಾ ಕಥಾವಸ್ತುವಾಗಬಲ್ಲದು. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಮತ್ತು ಆರಂಭಿಕ ದಿನಗಳಲ್ಲಿ ಕ್ಯಾಬ್ ಡ್ರೈವರ್, ಹೋಟೆಲ್ ವ್ಯವಹಾರದಲ್ಲಿ ನಷ್ಟ, ಮಿನರಲ್ ವಾಟರ್ ಮಾರಾಟ, ಲೈಟ್‌ಬಾಯ್ ಮೊದಲಾದ ಕೆಲಸಗಳಲ್ಲಿ ಶೆಟ್ಟಿಯವರು ತೊಡಗಿಸಿಕೊಂಡಿ ದ್ದರು.

ವೃತ್ತಿಯಲ್ಲಿ ಮೇಲು-ಕೀಳು ಎಂಬುದಿಲ್ಲ. ಆದರೆ ಸಾಧನೆಯ ಗುರಿ ದೊಡ್ಡದಿರಬೇಕು. ಆಗ ಬದುಕು ಎಲ್ಲಿಂದ ಎಲ್ಲಿಗೋ ಕರೆದೊಯ್ಯುತ್ತದೆ. ಅಸಾಧ್ಯವೆನ್ನಿಸಿದ್ದೂ ಸಾಧ್ಯವಾಗುತ್ತೆ ಎಂಬುದಕ್ಕೆ ರಿಷಬ್ ಶೆಟ್ಟರೇ ಸಾಕ್ಷಿ. “ದಿನಕ್ಕೆ ಐವತ್ತು ರುಪಾಯಿ ಕೂಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೆ. ಎರಡು ವರ್ಷ ಅಕ್ಕ ಸಾಕಿದ್ದರು. ಎಂಟಾಣೆಗೂ ಪರದಾಡಿದ್ದೆ" ಎಂದು ಐದಾರು ವರ್ಷಗಳ ಹಳೆಯ ಯೂಟ್ಯೂಬ್ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

ಈಗಲೂ ಅವುಗಳನ್ನು ವೀಕ್ಷಿಸಬಹುದು. ತಮ್ಮನ್ನು ತಾವೇ ಗೇಲಿ ಮಾಡುತ್ತಾ ಶೆಟ್ಟರು ಇವನ್ನೆಲ್ಲಾ ಸ್ಮರಿಸಿಕೊಳ್ಳುತ್ತಾರೆ. ಎಂಬತ್ತರ ದಶಕದ ಆದಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗ. ಕುಂದಾಪುರದ ಗ್ರಾಮೀಣ ಪರಿಸರದ ಸೊಗಡಿನಲ್ಲಿ, ಸರಕಾರಿ ಕನ್ನಡ ಮಾಧ್ಯಮ ಶಾಲೆ ಯಲ್ಲಿ ಓದಿ ಬೆಳೆದವರು. ಈ ಎಪ್ಪತ್ತು-ಎಂಬತ್ತರ ದಶಕವೆಂದರೆ, ಆಗಿನ್ನೂ ಭಾರತ ಉದಾರೀಕರಣ ಕ್ಕೆ ತೆರೆದುಕೊಂಡಿರಲಿಲ್ಲ.

ತೊಂಬತ್ತರ ದಶಕದ ಆರಂಭದಲ್ಲಿ ಭಾರತವು ಜಾಗತೀಕರಣಕ್ಕೆ ತೆರೆದುಕೊಂಡರೂ, ಅದರ ಫಲ ವ್ಯಾಪಕವಾಗಲು ಕಾಯಬೇಕಿತ್ತು. ಈ ಕಾಲಘಟ್ಟದಲ್ಲಿ ಜನಿಸಿದವರಿಗೆ ಒಂದಷ್ಟು ಕೀಳರಿಮೆ, ಸೌಲಭ್ಯ ವಂಚಿತರಾದ ಭಾವನೆ ಸಾಮಾನ್ಯ. ಆದರೆ ಸಾಧನೆಗೆ ಜಾಗತೀಕರಣ ಪೂರ್ವ ಅವಧಿಯ ಎಫೆಕ್ಟ್‌ಗಳು ಕೂಡ ಈಗ ಅಡ್ಡಿಯಾಗಲ್ಲ ಎಂಬ ಪ್ರೇರಣೆಯನ್ನು ರಿಷಬ್ ಶೆಟ್ಟಿಯವರು ತುಂಬಿದ್ದಾರೆ.

“ನಾನು ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿ ಬೆಳೆದವನು. ಈಗಲೂ ಹರಕು ಮುರುಕು ಇಂಗ್ಲಿಷ್ ಮಾತನಾಡುವೆ. ಹಿಂದಿ, ತಮಿಳು ಮಾತನಾಡಬಲ್ಲೆ" ಎನ್ನುವ ರಿಷಬ್ ಶೆಟ್ಟಿಯವರ ಆತ್ಮವಿಶ್ವಾಸ, ಸರಳ ನಡೆ-ನುಡಿ, ದೈವಭಕ್ತಿ ಎಲ್ಲವೂ ಅವರ ಅಮೋಘ ನಿರ್ದೇಶನ, ಅಭಿನಯದ ಸಾಮರ್ಥ್ಯಗಳಿಗೆ ಬಂಗಾರದ ಚೌಕಟ್ಟಿನಂತೆ ಇವೆ.

ಒಂದು ಪ್ರಾಡಕ್ಟ್ ಅನ್ನು ಮಾರ್ಕೆಟ್‌ನಲ್ಲಿ ಗೆಲ್ಲಿಸುವುದರ ಹಿಂದೆ, ಅದರ ತಯಾರಕರ ವ್ಯಕ್ತಿತ್ವ ಕೂಡ ನಿರ್ಣಾಯಕವಾಗುತ್ತದೆ ಎಂಬುದಕ್ಕೆ ರಿಷಬ್ ಶೆಟ್ಟರೇ ಸಾಕ್ಷಿ. ಅವರ ಕಾಂತಾರ ಯಶಸ್ವಿ‌ಯಾದರೂ, ಅದರ ಅಮಲು ಅವರ ತಲೆಗೇರಿಲ್ಲ. ಸಿನಿಮಾ ರಂಗವೇ ಹಾಗೆ, ಲೈಟ್‌ಬಾಯ್ ಆಗಿದ್ದವರೂ ಸ್ವಂತ ಪ್ರತಿಭೆ, ಪರಿಶ್ರಮದಿಂದ ಸೂರ್ಪಸ್ಟಾರ್ ಆಗಬಹುದು.

ಇಂಥ ಸಕ್ಸೆಸ್ ಸ್ಟೋರಿಗಳು ಹೊಸತೇನಲ್ಲ. ಆದರೆ ಹಾಗೆ ಸೂಪರ್‌ಸ್ಟಾರ್ ಪಟ್ಟಕ್ಕೇರಿದವರು, ವೈಯಕ್ತಿಕವಾಗಿ ನಾನಾ ವಿವಾದಗಳಿಗೆ ಗುರಿಯಾಗಿ, ಕೊಲೆ ಪ್ರಕರಣಗಳ ಆರೋಪಿಯಾಗಿ, ಜೈಲು ಪಾಲಾಗಿರುವ ನಿದರ್ಶನಗಳೂ ನಮ್ಮಲ್ಲಿವೆ.

ತೆರೆಯ ಮೇಲೆ ಸಕಲಗುಣ ಸಂಪನ್ನರಾಗಿ ಮೆರೆಯುವವರು, ವೈಯಕ್ತಿಕವಾಗಿಯೂ ಮಾದರಿ ಯಾಗಿದ್ದರೆ ಅದರ ಸೊಬಗೇ ಬೇರೆ. ಅದು ಅವರು ನೀಡುವ ಪ್ರಾಡಕ್ಟ್‌ನ ಬ್ರಾಂಡ್ ವಾಲ್ಯೂವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ರಿಷಬ್ ವೈಯಕ್ತಿಕವಾಗಿಯೂ ಉತ್ತಮ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ಬಹು ಭಾಷಾ ಹಿರಿಯ ನಟ ಜಯರಾಂ ಹೀಗೆನ್ನುತ್ತಾರೆ- ‘ರಿಷಬ್ ಶೆಟ್ಟರಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಈ ಮನುಷ್ಯ ಮೂರು ವರ್ಷಗಳಿಂದ ನಿದ್ದೆ ಮಾಡಿರುವುದು ಕಡಿಮೆ.

ಸದಾ ಕ್ರಿಯಾಶೀಲ ವ್ಯಕ್ತಿ. ಏಕಕಾಲದಲ್ಲಿ ನಟನೆ, ನಿರ್ದೇಶನ ಮಾಡುತ್ತಿದ್ದರು. ಜತೆಗೆ ಸ್ವತಃ ಕಳರಿ ಪಯಟ್ಟು ತರಬೇತಿಯನ್ನೂ ಪಡೆದರು. ಅವರ ಹೋಮ್‌ವರ್ಕ್ ಬಹಳ ದೊಡ್ಡದು". ಒಂದಷ್ಟು ಮಂದಿ ಗೊತ್ತಿದ್ದೋ, ಇಲ್ಲದೆಯೇ, “ರಿಷಬ್ ಶೆಟ್ಟರು ಜನಪದ ಸಂಸ್ಕೃತಿಯನ್ನು ವಾಣಿಜ್ಯೀಕರಣ ಕ್ಕಾಗಿ ಬಳಸಿದ್ದಾರೆ" ಎಂಬುದಾಗಿ ಆರೋಪಿಸುತ್ತಿದ್ದಾರೆ.

ಆದರೆ ಸಿನಿಮಾದಲ್ಲಿ ಎಲ್ಲಿಯೂ ಸಂಸ್ಕೃತಿ, ಜನಪದ, ಧಾರ್ಮಿಕ ನಂಬಿಕೆಗಳನ್ನು ಅಗೌರವದಿಂದ ಕಂಡಿರುವುದು ಲವಲೇಶವೂ ಕಾಣಲು ಸಿಗುವುದಿಲ್ಲ. ಬದಲಿಗೆ ದೈವಾರಾಧನೆಯನ್ನು ಶ್ರದ್ಧಾ ಭಕ್ತಿಯಿಂದ, ಅತ್ಯಂತ ಗೌರವಪೂರ್ವಕವಾಗಿ ಬಿಂಬಿಸಿರುವುದನ್ನು ಕಂಡು ಭಾವಪರವಶರಾಗ ಬಹುದು.

ಸಿನಿಮಾದ ಯಶಸ್ಸಿಗೆ ಇದೂ ಕಾರಣವೆಂಬುದನ್ನು ಮರೆಯಬಾರದು. ಈ ಹಿಂದೆ ಹಾಲಿವುಡ್ ಬಿಡಿ, ನಮ್ಮದೇ ದೇಶದಲ್ಲಿರುವ ಬಾಲಿವುಡ್‌ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳನ್ನು ಅಗೌರವದಿಂದ ಚಿತ್ರಿಸಿದ್ದಕ್ಕಾಗಿ ವಿವಾದಗಳು ಉಂಟಾಗಿದ್ದವು. ಹೀಗಾಗಿ, ನೆಲಮೂಲದ ಜನಪದ ಕಥಾವಸ್ತುವನ್ನು ಅದ್ಭುತ ಅಭಿನಯದೊಂದಿಗೆ ವಿಶ್ವದರ್ಜೆಯ ಗುಣಮಟ್ಟದಲ್ಲಿ ಚಿತ್ರಿಸಿದ್ದಕ್ಕಾಗಿ ರಿಷಬ್ ಶೆಟ್ಟಿ ಸ್ವತಃ ದಂತಕಥೆಯಾಗಿದ್ದಾರೆ!