ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಶಾಲೆಯ ಚಾವಣಿಯ ಒಂದು ಭಾಗ ಕುಸಿದು ಬಿದ್ದಾಗ, ಹಿಮದ ಹನಿಗಳು ಚೂಪಾದ ಗಾಜಿನ ಚೂರು ಗಳಂತೆ ಮಕ್ಕಳ ಮೈಗೆ ಚುಚ್ಚತೊಡಗಿದವು. ಮಕ್ಕಳು ಗಾಬರಿಯಿಂದ ಕಿರುಚುತ್ತಾ ಹೊರಗೆ ಓಡಲು ಯತ್ನಿಸಿದರು. ಆದರೆ, ಅವರ ಇನ್ನೂ ಚಿಕ್ಕವಯಸಿನ ಶಿಕ್ಷಕಿ ಮಿನಿಗೆ ತಿಳಿದಿತ್ತು- ಈ ಮಾರುತದಲ್ಲಿ ಹೆಜ್ಜೆ ಇಟ್ಟರೆ ಸಾವು ಖಚಿತ ಎಂದು. ಮಿನಿ ಫ್ರೀಮನ್ ಕೇವಲ 19 ವರ್ಷದ ಹುಡುಗಿಯಾಗಿದ್ದರೂ, ಆ ಕ್ಷಣದಲ್ಲಿ ಅಪ್ರತಿಮ ನಾಯಕಿಯಾದಳು.

ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

-

ಒಂದೊಳ್ಳೆ ಮಾತು

ಜನವರಿ 12, 1888. ಅಮೆರಿಕದ ನೆಬ್ರಸ್ಕಾದಲ್ಲಿ ಅಂದು ಬೆಳಗ್ಗೆ ವಾತಾವರಣವು ಮಾಮೂಲಿಗಿಂತ ಭಿನ್ನವಾಗಿತ್ತು. ವಾರಗಟ್ಟಲೆ ಕಾಡಿದ್ದ ಕಡುಚಳಿಯ ನಂತರ, ಆ ದಿನ ಸೂರ್ಯನ ಬಿಸಿಲು ಮೈಗೆ ಹಿತವಾಗಿತ್ತು. ಜನರು ಚಳಿಗಾಲ ಮುಗಿಯಿತು ಎಂದು ಭಾವಿಸಿ ಹಗುರವಾದ ಉಡುಪುಗಳನ್ನು ಧರಿಸಿದ್ದರು. ಆರ್ಡ್ ಬಳಿಯ ಒಂದು ಸಣ್ಣ ಮರದ ಶಾಲಾ ಕೊಠಡಿಯಲ್ಲಿ 19 ವರ್ಷದ ಯುವ ಶಿಕ್ಷಕಿ ಮಿನಿ ಫ್ರೀಮನ್ ತನ್ನ 13 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಳು.

ವಸಂತಕಾಲ ಬಂದೇ ಬಿಟ್ಟಿತು ಎಂಬ ಸಂಭ್ರಮದಲ್ಲಿ ಮಕ್ಕಳಿದ್ದರು. ಆದರೆ, ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಪ್ರಕೃತಿ ತನ್ನ ರೌದ್ರರೂಪವನ್ನು ತೋರಿಸಲಾರಂಭಿಸಿತು. ಆಕಾಶವು ಕ್ಷಣಾರ್ಧ ದಲ್ಲಿ ಕಪ್ಪಾಗಿ, ಗಾಳಿಯ ತಾಪಮಾನವು ಕೇವಲ ಮೂರು ಗಂಟೆಗಳಲ್ಲಿ 60 ಡಿಗ್ರಿಗಳಷ್ಟು ಭೀಕರವಾಗಿ ಕುಸಿಯಿತು.

‘ಶಾಲಾ ಮಕ್ಕಳ ಹಿಮಮಾರುತ’ (School children's Blizzard) ಎಂದು ಇತಿಹಾಸದಲ್ಲಿ ಕರೆಯ ಲ್ಪಡುವ ಈ ಸುಂಟರಗಾಳಿಯು ಗಂಟೆಗೆ 40 ರಿಂದ 50 ಮೈಲಿ ವೇಗದಲ್ಲಿ ಅಪ್ಪಳಿಸಿತು. ಹೊರಗೆ ಏನೂ ಕಾಣದಷ್ಟು ಹಿಮದ ರಾಶಿ ಗಾಳಿಯಲ್ಲಿ ತೇಲುತ್ತಿತ್ತು. ಬೀಸುತ್ತಿದ್ದ ಗಾಳಿಯ ರಭಸಕ್ಕೆ ಶಾಲೆಯ ಕಿಟಕಿಗಳು ಪುಡಿಯಾದವು, ಬಾಗಿಲುಗಳು ಕಿತ್ತುಬಂದವು.

ಇದನ್ನೂ ಓದಿ: Roopa Gururaj Column: ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

ಶಾಲೆಯ ಚಾವಣಿಯ ಒಂದು ಭಾಗ ಕುಸಿದು ಬಿದ್ದಾಗ, ಹಿಮದ ಹನಿಗಳು ಚೂಪಾದ ಗಾಜಿನ ಚೂರು ಗಳಂತೆ ಮಕ್ಕಳ ಮೈಗೆ ಚುಚ್ಚತೊಡಗಿದವು. ಮಕ್ಕಳು ಗಾಬರಿಯಿಂದ ಕಿರುಚುತ್ತಾ ಹೊರಗೆ ಓಡಲು ಯತ್ನಿಸಿದರು. ಆದರೆ, ಅವರ ಇನ್ನೂ ಚಿಕ್ಕವಯಸಿನ ಶಿಕ್ಷಕಿ ಮಿನಿಗೆ ತಿಳಿದಿತ್ತು- ಈ ಮಾರುತದಲ್ಲಿ ಹೆಜ್ಜೆ ಇಟ್ಟರೆ ಸಾವು ಖಚಿತ ಎಂದು. ಮಿನಿ ಫ್ರೀಮನ್ ಕೇವಲ 19 ವರ್ಷದ ಹುಡುಗಿಯಾಗಿದ್ದರೂ, ಆ ಕ್ಷಣದಲ್ಲಿ ಅಪ್ರತಿಮ ನಾಯಕಿಯಾದಳು. ಅವಳು ತಕ್ಷಣವೇ ಮಕ್ಕಳನ್ನು ಶಾಲೆಯ ಅತ್ಯಂತ ಸುರಕ್ಷಿತ ಮೂಲೆಗೆ ಒಗ್ಗೂ ಡಿಸಿದಳು. ತನ್ನ ಬಳಿಯಿದ್ದ ಹಗ್ಗ ಮತ್ತು ಬಟ್ಟೆಗಳನ್ನು ಬಳಸಿ ಮಕ್ಕಳನ್ನೆ ಸೇರಿಸಿ ಕಟ್ಟಿದಳು. ಯಾರೂ ಕೈ ಬಿಡಬಾರದು, ಯಾರೂ ಚದುರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದಳು. ಶಾಲೆಯ ಒಳಗೆ ಚಳಿ ಹೆಚ್ಚಾದಾಗ, ಮಕ್ಕಳ ದೇಹದ ಉಷ್ಣತೆ ಯನ್ನು ಕಾಪಾಡಲು ಅವಳು ಮಕ್ಕಳನ್ನು ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಳ್ಳುವಂತೆ ಮಾಡಿದಳು.

ತಾನು ಸ್ವತಃ ಮಕ್ಕಳ ಮುಂದೆ ಅಡ್ಡವಾಗಿ ನಿಂತು, ಸಣ್ಣ ಮಕ್ಕಳನ್ನು ಅಪ್ಪಿಕೊಂಡಳು. ಮಕ್ಕಳು ನಿದ್ರೆಗೆ ಜಾರಿದರೆ ಮತ್ತೆ ಏಳುವುದಿಲ್ಲ (Hypothermia) ಎಂದು ಅರಿತಿದ್ದ ಮಿನಿ, ಗಂಟೆಗಳ ಕಾಲ ಅವರ ಜತೆ ಮಾತನಾಡುತ್ತಾ, ಹಾಡುಗಳನ್ನು ಹೇಳುತ್ತಾ ಅವರನ್ನು ಎಚ್ಚರವಾಗಿರಿಸಿದಳು. ಶಾಲೆಯ ಪೀಠೋಪಕರಣಗಳನ್ನು ಬಳಸಿ ಗಾಳಿಯನ್ನು ತಡೆಯಲು ಗೋಡೆ ನಿರ್ಮಿಸಿದಳು. ಸತತ ಹಲವು ಗಂಟೆಗಳ ಕಾಲ ಆಕೆಯ ಪರದಾಟ ನಡೆಯಿತು. ಹೊರಗೆ ಜಗತ್ತೇ ಮುಳುಗುತ್ತಿದೆ ಎನ್ನುವಂಥ ಚಂಡ ಮಾರುತ ಬೀಸುತ್ತಿದ್ದರೂ, ಮಿನಿ ಸೋಲೊಪ್ಪಲಿಲ್ಲ.

ಆಕೆ ತನ್ನ ಪ್ರಾಣದ ಹಂಗು ತೊರೆದು ಆ ಪುಟ್ಟ ಮಕ್ಕಳ ಪಾಲಿಗೆ ದೇವತೆಯಾದಳು. ಮರುದಿನ ಬೆಳಗ್ಗೆ ಚಂಡಮಾರುತವು ಸ್ವಲ್ಪ ಶಾಂತವಾದಾಗ, ಗ್ರಾಮಸ್ಥರು ಮತ್ತು ಪೋಷಕರು ಶಾಲೆಯತ್ತ ಧಾವಿಸಿದರು. ಅವರಿಗೆ ದಾರಿಯುದ್ದಕ್ಕೂ ಕಂಡಿದ್ದು ಕೇವಲ ಸಾವು ಮತ್ತು ಹೆಪ್ಪುಗಟ್ಟಿದ ಶವಗಳು. ಅನೇಕ ಕಡೆ ಶಿಕ್ಷಕರು ಮತ್ತು ಮಕ್ಕಳು ರಸ್ತೆಗಳ ಹೆಪ್ಪುಗಟ್ಟಿ ಪ್ರಾಣ ಬಿಟ್ಟಿದ್ದರು. ಆದರೆ, ಮಿನಿ ಫ್ರೀಮನ್ ಇದ್ದ ಶಾಲೆಗೆ ಬಂದಾಗ ಅಲ್ಲಿ ಆಶ್ಚರ್ಯ ಕಾದಿತ್ತು. ಹದಿಮೂರು ಮಕ್ಕಳೂ ಜೀವಂತ ವಾಗಿದ್ದರು!

ಒಬ್ಬ ಹುಡುಗನ ಕಾಲುಗಳು ಸ್ವಲ್ಪ ಮಟ್ಟಿಗೆ ಚಳಿಯಿಂದ ಹಾನಿಗೊಳಗಾಗಿದ್ದರೂ (frostbite), ಎಲ್ಲರೂ ಸುರಕ್ಷಿತವಾಗಿದ್ದರು. ಮಿನಿ ಫ್ರೀಮನ್ನಳ ಈ ಸಾಹಸದ ಸುದ್ದಿ ಇಡೀ ಅಮೆರಿಕದಾದ್ಯಂತ ಮಿಂಚಿನಂತೆ ಹರಡಿತು. ರಾತ್ರಿ ಮುಗಿದು ಬೆಳಗಾಗುವಷ್ಟರಲ್ಲಿ ಅವಳು ದೇಶದ ನಾಯಕಿಯಾದಳು. ಅನೇಕರು ಅವಳಿಗೆ ಉಡುಗೊರೆಗಳನ್ನು ಕಳುಹಿಸಿದರು, ಅವಳ ಹೆಸರಿನಲ್ಲಿ ಗೀತೆಗಳು ರಚನೆ ಯಾದವು. ಆದರೆ ಮಿನಿ ಮಾತ್ರ ವಿನಯದಿಂದ, ‘ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದೆ’ ಎಂದು ಹೇಳಿದಳಂತೆ.

ಕಷ್ಟ ಬಂದಾಗ ಹೇಗೆ ಸಮಯಪ್ರಜ್ಞೆಯಿಂದ ಎದುರಿಸಬಹುದು ಎಂಬುದಕ್ಕೆ ಮಿನಿ ಫ್ರೀಮನ್ ದೊಡ್ಡ ಉದಾಹರಣೆ. ಅಂಥ ಚಿಕ್ಕ ವಯಸ್ಸಿನಲ್ಲೂ ಆಕೆ ತನ್ನ ಕರ್ತವ್ಯವನ್ನು ಮರೆಯಲಿಲ್ಲ ಮಾನವೀಯತೆಯನ್ನು ಬಿಡಲಿಲ್ಲ.