ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಒಂದು ಅಣೆಕಟ್ಟು ಕಟ್ಟಲಿಲ್ಲ; ಅವರು ಲಕ್ಷಾಂತರ ಜನರ ಬದುಕಿಗೆ ಭರವಸೆಯ ಅಡಿಪಾಯ ಹಾಕಿದರು. ಅವರ ಆ ತ್ಯಾಗವಿಲ್ಲದಿದ್ದರೆ ಇಂದು ದಕ್ಷಿಣ ಕರ್ನಾಟಕದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅದಕ್ಕಾಗಿಯೇ ಇಂದಿಗೂ ರೈತರು ಮೊದಲ ಬೆಳೆಯನ್ನು ಕಾವೇರಿಗೆ ಅರ್ಪಿಸುವಾಗ ಆ ರಾಜರ್ಷಿಯನ್ನು ನೆನೆಯುತ್ತಾರೆ.

ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

-

ಒಂದೊಳ್ಳೆ ಮಾತು

ಅದು 1875-76ರ ಭೀಕರ ಬರಗಾಲ; ಅದನ್ನು ಇತಿಹಾಸದಲ್ಲಿ ‘ಧಾತು ಈಶ್ವರ ಸಂವತ್ಸರದ ಬರ’ ಎಂದು ಕರೆಯಲಾಗುತ್ತದೆ. ಅಂದು ಮೈಸೂರು ಪ್ರಾಂತ್ಯದ ಜನಸಂಖ್ಯೆಯ ಸುಮಾರು ಶೇ.20ರಷ್ಟು ಜನರು ಹಸಿವು ಮತ್ತು ರೋಗದಿಂದ ಮೃತಪಟ್ಟಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಾಲಕರಾಗಿದ್ದಾಗಲೇ, ಹಸಿವಿನಿಂದ ಕಂಗೆಟ್ಟ ಪ್ರಜೆಗಳ ಕಿರುಚಾಟವನ್ನು ಕೇಳಿದ್ದರು.

1902ರಲ್ಲಿ ಪೂರ್ಣ ಅಧಿಕಾರವನ್ನು ವಹಿಸಿಕೊಂಡ ತಕ್ಷಣ, ‘ನನ್ನ ಜನರ ಹೊಟ್ಟೆ ತುಂಬಿಸುವುದೇ ನನ್ನ ಮೊದಲ ಧರ್ಮ’ ಎಂದು ಅವರು ಸಂಕಲ್ಪ ಮಾಡಿದರು. ಕಾವೇರಿ ನದಿಯು ಮಳೆಗಾಲದಲ್ಲಿ ಸಮೃದ್ಧವಾಗಿ ಹರಿಯುತ್ತಿತ್ತು, ಆದರೆ ಬೇಸಗೆಯಲ್ಲಿ ರೈತರು ಹನಿ ನೀರಿಗಾಗಿ ಪರದಾಡುತ್ತಿದ್ದರು. ಇದನ್ನು ಕಂಡ ಮಹಾರಾಜರು ದಿವಾನರಾದ ಸರ್ ಎಂ. ವಿಶ್ವೇಶ್ವರಯ್ಯನವರನ್ನು ಕರೆಸಿ, ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಂತೆ ಸೂಚಿಸಿದರು.

ವಿಶ್ವೇಶ್ವರಯ್ಯನವರು ಅಂದಿನ ಕಾಲಕ್ಕೆ ಅತ್ಯಂತ ಪ್ರಗತಿಪರವಾದ ನಕ್ಷೆಯನ್ನು ತಯಾರಿಸಿದರು. ಆದರೆ, ಬ್ರಿಟಿಷರ ಅಧೀನದಲ್ಲಿದ್ದ ಮದ್ರಾಸ್ ಪ್ರೆಸಿಡೆನ್ಸಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. ನೀರು ಹಂಚಿಕೆಯಾಗದೆ ಅಣೆಕಟ್ಟು ಕಟ್ಟುವಂತಿಲ್ಲ ಎಂದು ಬ್ರಿಟಿಷರು ಅಡ್ಡಿಪಡಿಸಿದರು. ಆದರೆ ಮಹಾರಾಜರು ಧೃತಿಗೆಡದೆ ತಾಂತ್ರಿಕ ಮತ್ತು ಕಾನೂನು ಹೋರಾಟ ನಡೆಸಿ ಯೋಜನೆಯನ್ನು ಮುಂದುವರಿಸಿದರು.

ಇದನ್ನೂ ಓದಿ: Roopa Gururaj Column: ಕೃಷ್ಣ-ಸುಧಾಮರ ಅಪೂರ್ವ ಮೈತ್ರಿ

ಯೋಜನೆಗೆ ಸುಮಾರು ನೂರು ವರ್ಷಗಳ ಹಿಂದೆ ಏನಿಲ್ಲವೆಂದರೂ 2.5 ಕೋಟಿ ರುಪಾಯಿಗಳು ಬೇಕಾಗಿದ್ದವು. ಆಗಿನ ಕಾಲಕ್ಕೆ ಇದು ಅಗಾಧ ಮೊತ್ತ. ನಿರ್ಮಾಣ ಕಾರ್ಯ ಅರ್ಧಕ್ಕೆ ಬಂದಾಗ ಸಂಸ್ಥಾನದ ಖಜಾನೆಯಲ್ಲಿ ಹಣ ಖಾಲಿಯಾಯಿತು. ಬ್ರಿಟಿಷ್ ಸರಕಾರ ಹಣಕಾಸಿನ ನೆರವು ನೀಡಲು ನಿರಾಕರಿಸಿತು. 1913ರ ಆ ಸಂಜೆಯು ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ದಾಖಲಿಸ ಬೇಕಾದದ್ದು.

ಮಹಾರಾಜರು ಅರಮನೆಯ ಖಾಸಗಿ ಭಂಡಾರದಲ್ಲಿದ್ದ ತಮ್ಮ ವೈಯಕ್ತಿಕ ಸಂಪತ್ತನ್ನು ನೋಡಿ ದರು. ಅದರಲ್ಲಿ ತಲೆತಲಾಂತರಗಳಿಂದ ಬಂದಿದ್ದ ವಜ್ರದ ಹಾರಗಳು, ಚಿನ್ನದ ಪದಕಗಳು, ರತ್ನ ಖಚಿತ ಒಡವೆಗಳಿದ್ದವು. ಅವರ ತಾಯಿ ಮಹಾರಾಣಿ ವಾಣಿವಿಲಾಸ ಸನ್ನಿಧಾನ (ಕೆಂಪನಂಜಮಣ್ಣಿ ಯವರು) ಮತ್ತು ಪತ್ನಿ ಮಹಾರಾಣಿ ಪ್ರತಾಪಕುಮಾರಿ ಈ ಮಹತ್ಕಾರ್ಯಕ್ಕೆ ತಮ್ಮ ಒಡವೆಗಳನ್ನೂ ನೀಡಿದರು.

ಮಹಾರಾಜರು ಆಭರಣಗಳನ್ನು ಪೆಟ್ಟಿಗೆಗಳಲ್ಲಿ ತುಂಬಿಸಿ ಮುಂಬೈಗೆ ಕಳುಹಿಸಿದರು. ಅಲ್ಲಿ ಅವು ಗಳನ್ನು ಹರಾಜು ಹಾಕಲಾಯಿತು. ಅರಮನೆಯ ವೈಭವಕ್ಕಿಂತ ಪ್ರಜೆಯ ಹೊಟ್ಟೆ ತುಂಬುವುದು ಮುಖ್ಯ ಎಂದು ಅವರು ನುಡಿದರು. ರಾಜ ಕುಟುಂಬದ ಆಭರಣಗಳನ್ನು ಮಾರಿ ಬಂದ ಹಣವನ್ನು ಸಾರ್ವಜನಿಕ ಸೇವೆಗೆ ನೀಡಿದ ಇಂಥ ಉದಾಹರಣೆ ಜಗತ್ತಿನ ಇತಿಹಾಸದ ವಿರಳ.

ಅಂದು ಇಂದಿನಂತೆ ಆಧುನಿಕ ಯಂತ್ರಗಳಿರಲಿಲ್ಲ. ಸಾವಿರಾರು ಕಾರ್ಮಿಕರು, ಎಂಜಿನಿಯರ್ʼಗಳು ಹಗಲಿರುಳೂ ದುಡಿದರು. ಸಿಮೆಂಟ್ ಅಭಾವವಿದ್ದ ಕಾರಣ ‘ಸುರ್ಕಿ’ (ಸುಣ್ಣ ಮತ್ತು ಇಟ್ಟಿಗೆ ಪುಡಿಯ ಮಿಶ್ರಣ) ಎಂಬ ವಿಶೇಷ ತಂತ್ರಜ್ಞಾನ ಬಳಸಿ ಅಣೆಕಟ್ಟನ್ನು ಕಟ್ಟಲಾಯಿತು.

ವಿಶ್ವೇಶ್ವರಯ್ಯನವರ ತಾಂತ್ರಿಕ ಕೌಶಲ ಮತ್ತು ಮಹಾರಾಜರ ಬೆಂಬಲದಿಂದಾಗಿ ಕಾವೇರಿ ನದಿ ಶಾಂತವಾಗಿ ಅಣೆಕಟ್ಟಿನೊಳಗೆ ಬಂಧಿಯಾಯಿತು. ಅಣೆಕಟ್ಟು ಪೂರ್ಣಗೊಂಡು ನೀರು ಹರಿಯಲಾ ರಂಭಿಸಿದಾಗ, ಕೇವಲ ಕೃಷಿಯಷ್ಟೇ ಅಲ್ಲದೆ ಕೈಗಾರಿಕೆಗಳೂ ಬೆಳೆದವು.

ಮಂಡ್ಯದ ರೈತರನ್ನು ಸಾಲದಿಂದ ಮುಕ್ತಗೊಳಿಸಲು ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸ ಲಾಯಿತು. ಅಣೆಕಟ್ಟಿನಿಂದ ಲಭ್ಯವಾದ ಜಲವಿದ್ಯುತ್‌ನಿಂದಾಗಿ ಬೆಂಗಳೂರು ಮತ್ತು ಮೈಸೂರು ನಗರಗಳು ಬೆಳಕು ಕಂಡವು. ಬರಡಾಗಿದ್ದ ಮಂಡ್ಯ, ಕೆ.ಆರ್.ನಗರ ಮತ್ತು ಮೈಸೂರು ಭಾಗಗಳು ಅಕ್ಷರಶಃ ನಂದನವನಗಳಾಗಿ ಬದಲಾದವು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಒಂದು ಅಣೆಕಟ್ಟು ಕಟ್ಟಲಿಲ್ಲ; ಅವರು ಲಕ್ಷಾಂತರ ಜನರ ಬದುಕಿಗೆ ಭರವಸೆಯ ಅಡಿಪಾಯ ಹಾಕಿದರು. ಅವರ ಆ ತ್ಯಾಗವಿಲ್ಲದಿದ್ದರೆ ಇಂದು ದಕ್ಷಿಣ ಕರ್ನಾಟಕದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅದಕ್ಕಾಗಿಯೇ ಇಂದಿಗೂ ರೈತರು ಮೊದಲ ಬೆಳೆಯನ್ನು ಕಾವೇರಿಗೆ ಅರ್ಪಿಸುವಾಗ ಆ ರಾಜರ್ಷಿಯನ್ನು ನೆನೆಯುತ್ತಾರೆ.

ಇಂಥ ಅದ್ಭುತ ತ್ಯಾಗ ಪರಂಪರೆ ಇರುವ ಕನ್ನಡ ನಾಡು ನಮ್ಮದು. ಇಂದು ನಾವು ಒಂದೊಂದು ಹನಿ ನೀರನ್ನು ವ್ಯರ್ಥವಾಗಿ ಪೋಲು ಮಾಡುವಾಗಲೂ ಇಂಥವರ ತ್ಯಾಗ ನಮಗೆ ಎಚ್ಚರಿಕೆ ನೀಡ ಬೇಕು. ಇಂದಿಗೂ ನೀರನ್ನು ಅಮೃತದಂತೆ ಬಳಸುವ ರೈತರ ಬದುಕು ನಮಗೆ ಪ್ರೇರಣೆಯಾಗಬೇಕು.