#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mohan Vishwa Column: ನಿರ್ಮಲ ವಿರುದ್ಧ ತೆರಿಗೆ ಅಪಪ್ರಚಾರ

ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಮುಗಿದಿದೆ. ಹಾವೇರಿ ಜಿಲ್ಲೆಯ ಹನುಮಂತ ವಿಜೇತನಾಗಿ ದ್ದಾನೆ, ಬಹುಮಾನ ಗೆದ್ದಿದ್ದಾನೆ. ಕುರಿಗಾಹಿಯಾಗಿದ್ದ ಹನು ಮಂತನ ಪ್ರತಿಭೆಯು ವಿವಿಧ ಕಾರ್ಯಕ್ರಮ ಗಳ ಮೂಲಕ ಮನೆಮನೆಗೂ ತಲುಪಿತ್ತು. ಅದರ ಮುಂದುವರಿದ ಭಾಗವಾಗಿ ಆತ ಬಿಗ್ ಬಾಸ್ ಸ್ಪರ್ಧೆ ಯಲ್ಲಿ ಗೆದ್ದಿದ್ದಾನೆ. ಹೀಗೆ ಗೆದ್ದ ನಂತರ ಆತನಿಗೆ ಕಲರ್ಸ್ ಕನ್ನಡ ವಾಹಿನಿಯು ನೀಡಿದ ಬಹುಮಾನದ ಮೇಲಿನ ತೆರಿಗೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ

Mohan Vishwa Column: ನಿರ್ಮಲ ವಿರುದ್ಧ ತೆರಿಗೆ ಅಪಪ್ರಚಾರ

ಅಂಕಣಕಾರ ಮೋಹನ್‌ ವಿಶ್ವ

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಪ್ರತಿಯೊಂದು ವಿಚಾರಕ್ಕೂ ನಿರ್ಮಲಾ ಸೀತಾರಾಮನ್ ಅವರನ್ನು ಎಳೆತಂದು ತೆರಿಗೆಯ ಬಗ್ಗೆ ಅಪಪ್ರಚಾರ ಮಾಡುವುದು ವಿರೋಧ ಪಕ್ಷಗಳ ಚಾಳಿಯಾಗಿಬಿಟ್ಟಿದೆ. ಸುಳ್ಳು ನಿರೂ ಪಣೆಗಳನ್ನು ಮುನ್ನೆಲೆಗೆ ತಂದು ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ನಿರಂತರವಾಗಿ ಮಾಡುತ್ತಿವೆ.

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಮುಗಿದಿದೆ. ಹಾವೇರಿ ಜಿಲ್ಲೆಯ ಹನುಮಂತ ವಿಜೇತನಾಗಿದ್ದಾನೆ, ಬಹುಮಾನ ಗೆದ್ದಿದ್ದಾನೆ. ಕುರಿಗಾಹಿಯಾಗಿದ್ದ ಹನು ಮಂತನ ಪ್ರತಿಭೆಯು ವಿವಿಧ ಕಾರ್ಯಕ್ರಮಗಳ ಮೂಲಕ ಮನೆಮನೆಗೂ ತಲುಪಿತ್ತು. ಅದರ ಮುಂದುವರಿದ ಭಾಗವಾಗಿ ಆತ ಬಿಗ್ ಬಾಸ್ ಸ್ಪರ್ಧೆಯಲ್ಲಿ ಗೆದ್ದಿದ್ದಾನೆ. ಹೀಗೆ ಗೆದ್ದ ನಂತರ ಆತನಿಗೆ ಕಲರ್ಸ್ ಕನ್ನಡ ವಾಹಿನಿಯು ನೀಡಿದ ಬಹುಮಾನದ ಮೇಲಿನ ತೆರಿಗೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ.

ಆತನಿಗೆ ದಕ್ಕಿರುವ ಬಹುಮಾನದ ಹಣಕ್ಕೆ ಶೇ.30ರಷ್ಟು ತೆರಿಗೆಯನ್ನು ಕೇಂದ್ರದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಧಿಸುತ್ತಾರೆ ಎಂಬ ಚಿತ್ರ-ವಿಚಿತ್ರ ಪೋಸ್ಟರ್‌ಗಳು ಅಲ್ಲಿ ರಾರಾ ಜಿಸುತ್ತಿವೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರವಷ್ಟೇ ಭಾರತದಲ್ಲಿ ಮೊದಲ ಬಾರಿಗೆ ಹೀಗೆ ತೆರಿಗೆಯನ್ನು ಹೇರಿಕೆ ಮಾಡಿರುವ ರೀತಿಯಲ್ಲಿ ಅನೇಕ ಸುಳ್ಳು ನಿರೂಪಣೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹಲವು ವರ್ಷಗಳಿಂದ ನಡೆಯುತ್ತಿವೆ.

ಇದನ್ನೂ ಓದಿ: Mohan Vishwa Column: ಅಮೆರಿಕದಲ್ಲಿ ಯಹೂದಿ ಗಳ ಜಾಗಕ್ಕೆ ಭಾರತೀಯರು !

ಆದರೆ ಸತ್ಯವೇನೆಂದರೆ, ಟಿವಿ ವಾಹಿನಿಗಳಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ವಿಜೇತರಾದವ ರಿಗೆ ಸಿಗುವ ಬಹುಮಾನಗಳ ಮೇಲೆ ಕಳೆದ 25 ವರ್ಷಗಳಿಂದ ತೆರಿಗೆ ಅನ್ವಯವಾಗುತ್ತಿದೆ. ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಂಥ ಹೆಸರಾಂತ ಕಾರ್ಯಕ್ರಮ ‘ಕೌನ್ ಬನೇಗ ಕರೋಡ್‌ ಪತಿ’ ದಿನ ಗಳಿಂದಲೂ, ರಿಯಾಲಿಟಿ ಶೋಗಳಲ್ಲಿ ಗೆಲ್ಲುವ ಬಹುಮಾನದ ಮೇಲೆ ಶೇ.30ರ ಆದಾಯ ತೆರಿಗೆ ಹಾಕಲಾಗುತ್ತಿದೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಮಾತ್ರ ಮುನ್ನೆಲೆಗೆ ತಂದು, ಮೊಟ್ಟ ಮೊದಲ ಬಾರಿಗೆ ತೆರಿಗೆ ಹಾಕುತ್ತಿರುವಂತೆ ಅಪಪ್ರಚಾರ ಮಾಡ ಲಾಗುತ್ತಿದೆ. 2004ರಿಂದ 2014ರವರೆಗಿನ ಅವಧಿಯಲ್ಲಿ, ದೇಶದ ವಿವಿಧ ಟಿವಿ ಚಾನೆಲ್‌ಗಳಲ್ಲಿ ನಡೆ ದಿದ್ದ ಅದೆಷ್ಟೋ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ವಿಜೇತರಾದವರಿಗೂ ತೆರಿಗೆ ಹಾಕಲಾಗಿತ್ತು.

‘ಕನ್ನಡದ ಕೋಟ್ಯಧಿಪತಿ’ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಗೆದ್ದಿದ್ದ ಬಹುಮಾನದ ಹಣದ ಮೇಲೂ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ದಲ್ಲಿ ವಿಜೇತರು ಗೆದ್ದ ಮೊತ್ತದ ಮೇಲೂ ತೆರಿಗೆಯನ್ನು ವಿಽಸಲಾಗಿತ್ತು. ಜಿಎಸ್‌ಟಿ ವಿಚಾರದಲ್ಲಿ ವಿತ್ತ ಸಚಿವೆಯ ವಿರುದ್ಧ ಪ್ರತಿನಿತ್ಯ ಒಂದಿಲ್ಲೊಂದು ಸುಳ್ಳು ನಿರೂಪಣೆ ನಡೆಯುತ್ತಲೇ ಇದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪರೋಕ್ಷ ತೆರಿಗೆಯನ್ನು ಜಾರಿಗೆ ತಂದಿದ್ದು ಮೋದಿಯವರು ಎಂಬಂತೆ ಅಪಪ್ರಚಾರ ನಡೆಯುತ್ತಲೇ ಇದೆ. ಆದರೆ ಸತ್ಯವೇನೆಂದರೆ, 2017ರಲ್ಲಿ ಜಿಎಸ್‌ಟಿ ಜಾರಿಗೆ ಬರುವ ಮೊದಲು ದಿನಬಳಕೆ ವಸ್ತುಗಳ ಮೇಲೆ ಮಾರಾಟ ತೆರಿಗೆ, ವಸ್ತುಗಳ ಉತ್ಪಾದನೆಯ ಮೇಲೆ ಅಬಕಾರಿ ಸುಂಕ, ಸೇವಾ ತೆರಿಗೆ, ಸಿನಿಮಾ ಟಿಕೆಟ್ ಮೇಲೆ ಮನರಂಜನಾ ತೆರಿಗೆ ಇರುತ್ತಿದ್ದವು.

ಅಷ್ಟೇಕೆ, ಇತರ ರಾಜ್ಯಗಳಿಂದ ವಸ್ತುಗಳನ್ನು ಖರೀದಿ ಮಾಡಿದಾಗ ಅಂತಾರಾಜ್ಯ ಮಾರಾಟ ತೆರಿಗೆ, ವ್ಯಾಟ್, ಹೊರ ರಾಜ್ಯದ ವಾಹನಗಳ ಮೇಲಿನ ಪ್ರವೇಶ ತೆರಿಗೆ, ವಸ್ತುಗಳ ಖರೀದಿಗೆ ತೆರಿಗೆ, ಜಾಹೀ ರಾತುಗಳ ಮೇಲಿನ ತೆರಿಗೆ ಹೀಗೆ ಹಲವು ರೀತಿಯ ತೆರಿಗೆಗಳನ್ನು ಹೇರಲಾಗಿತ್ತು. ಕಾಂಗ್ರೆಸ್‌ನ ಅಧಿ ಕಾರಾವಧಿಯಲ್ಲಿ ಸಾಮಾನ್ಯ ಜನರು ಖರೀದಿಸುವ ವಸ್ತುಗಳ ಮೇಲೆ ಸುಮಾರು 10ಕ್ಕೂ ಹೆಚ್ಚು ವಿವಿಧ ರೀತಿಯ ತೆರಿಗೆಗಳನ್ನು ಹೇರಲಾಗಿತ್ತು.

ಜಿಎಸ್‌ಟಿ ಬಂದ ನಂತರ ಅನೇಕ ತೆರಿಗೆಗಳನ್ನು ನಿಲ್ಲಿಸಲಾಯಿತು. ಪರಿಣಾಮ ದಿನನಿತ್ಯ ಬಳಸುವ ಅನೇಕ ವಸ್ತುಗಳ ಬೆಲೆಯಲ್ಲಿ ಇಳಿಮುಖವಾಗಿದೆ. ಜಿಎಸ್‌ಟಿ ಜಾರಿಗೆ ಬರುವ ಮುನ್ನ ಪರೋಕ್ಷ ತೆರಿಗೆಯ ಏರಿಕೆ ಅಥವಾ ಇಳಿಕೆಯ ಬಗ್ಗೆ ಕೇಂದ್ರದ ಅಥವಾ ರಾಜ್ಯದ ಬಜೆಟ್‌ನಲ್ಲಿ ನಿರ್ಧಾರವಾಗು ತ್ತಿತ್ತು. ಆದರೆ ಜಿಎಸ್‌ಟಿ ಜಾರಿಗೆ ಬಂದ ನಂತರ, ವಸ್ತುಗಳ ಮೇಲಿನ ತೆರಿಗೆಯ ವಿಚಾರವನ್ನು ಜಿಎಸ್‌ಟಿ ಮಂಡಳಿ ನಿರ್ಧರಿಸುತ್ತದೆ.

ಮಂಡಳಿಯಲ್ಲಿ ಪ್ರತಿಯೊಂದು ರಾಜ್ಯದ ಪ್ರತಿನಿಧಿಗಳು ಭಾಗಿಯಾಗಿರುತ್ತಾರೆ. ಪ್ರತಿಯೊಬ್ಬರ ಅಭಿ ಪ್ರಾಯ ಪಡೆದ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮಂಡಳಿಯ ಸಭೆಯಲ್ಲಿ ಸರಕಾ ರದ ಅಧಿಕಾರಿಗಳು ಭಾಗವಹಿಸುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಕೃಷ್ಣ ಬೈರೇಗೌಡ ಅವರು ಕರ್ನಾ ಟಕದ ಪ್ರತಿನಿಧಿಯಾಗಿ ಇಲ್ಲಿ ಪ್ರತಿನಿಧಿಸುತ್ತಾ ಬಂದಿದ್ದಾರೆ.

ಮಂಡಳಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ರಾಜ್ಯಗಳ ಪ್ರತಿನಿಧಿಗಳದ್ದೂ ಆಗಿರುತ್ತದೆಯೇ ಹೊರತು, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಬ್ಬರೇ ಈ ನಿರ್ಣಯ ತೆಗೆದು ಕೊಳ್ಳಲು ಸಾಧ್ಯವಿಲ್ಲ. ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ತುಟಿಬಿಚ್ಚದೆ ಹೊರಬರುವ ವಿರೋಧ ಪಕ್ಷಗಳ ಪ್ರತಿನಿಧಿಗಳು ಸುಳ್ಳಿನ ಸರಮಾಲೆಯನ್ನೇ ಹೆಣೆದು, ಸಭೆಯಲ್ಲಿನ ನಿರ್ಣಯಗಳಿಗೆ ವಿತ್ತ ಸಚಿವೆಯನ್ನು ಹೊಣೆಗಾರ್ತಿಯನ್ನಾಗಿ ಮಾಡುತ್ತಾರೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಮಾತ್ರವೇ ಟಾರ್ಗೆಟ್ ಮಾಡಲಾಗುತ್ತದೆ. ಸಭೆಯಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವವರು, ತೆರಿಗೆಯ ಏರಿಕೆ ಅಥವಾ ಇಳಿಕೆಯ ಬಗ್ಗೆ ಸರ್ವಾನುಮತದಿಂದ ನಿರ್ಧಾರಗಳನ್ನು ತೆಗೆದುಕೊಂಡಿರುತ್ತಾರೆ.

ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಅನೇಕ ಯೋಜನೆಗಳನ್ನು ಘೋಷಣೆ ಮಾಡಿ, ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚು ಮಾಡಿರುವ ವಿರೋಧ ಪಕ್ಷಗಳು ಜಿಎಸ್‌ಟಿ ಇಳಿಕೆಯ ಬಗ್ಗೆ ಸಭೆ ಯಲ್ಲಿ ಮಾತನಾಡುವುದಿಲ್ಲ. ಕೇರಳ ಮತ್ತು ಕರ್ನಾಟಕ ಈ ವಿಷಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು. ಇತರ ರಾಜ್ಯಗಳು ತೆರಿಗೆ ಇಳಿಕೆಯ ಪ್ರಸ್ತಾವನೆ ಸಲ್ಲಿಸಿದ ನಂತರವೂ ಈ ಎರಡು ರಾಜ್ಯ ಗಳು ಮಾತ್ರ ಒಪ್ಪುವುದಿಲ್ಲ.

ಮಾಲ್‌ನಲ್ಲಿ ಮಾರುವ ಸ್ವೀಟ್ ಪಾಪ್ಕಾರ್ನ್ ಮೇಲಿನ ತೆರಿಗೆ ವಿಚಾರವೂ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಅಷ್ಟೂ ರಾಜ್ಯದ ಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚೆಯಾಗಿರುತ್ತದೆ. ವಿರೋಧ ಪಕ್ಷಗಳು ಅಲ್ಲಿ ಮಾತನಾಡುವುದಿಲ್ಲ. ಆ ಸಭೆಯಲ್ಲಿ ಎಲ್ಲರ ಒಪ್ಪಿಗೆಯ ಮೇರೆಗೇ ನಿರ್ಣಯವಾಗಿರುತ್ತದೆ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಮಾತ್ರ ಗುರಿಯಾಗಿಸ ಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಅನೇಕ ಪೇಜುಗಳು ತಮ್ಮ ವೀಕ್ಷಣೆಯನ್ನು ಹೆಚ್ಚಿಸಿ ಕೊಳ್ಳಲು ಸುಳ್ಳು ನಿರೂಪಣೆಗಳನ್ನು ಹಬ್ಬಿಸುವುದು ಟ್ರೆಂಡ್ ಆಗಿಹೋಗಿದೆ.

ರಾಜ್ಯಗಳ ತೆರಿಗೆ ಪಾಲಿನ ವಿಷಯದಲ್ಲಿ ವಿರೋಧ ಪಕ್ಷಗಳು ಅನೇಕ ಸುಳ್ಳು ನಿರೂಪಣೆಗಳನ್ನು ನಿರಂತರವಾಗಿ ಮಾಡುತ್ತಾ ಬಂದಿವೆ. 1950ರ ದಶಕದಿಂದಲೂ, ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲನ್ನು ಸಾಂವಿಧಾನಿಕವಾಗಿ ರಚನೆಯಾಗಿರುವ ಹಣಕಾಸು ಆಯೋಗವು ನಿರ್ಧರಿಸುತ್ತದೆ. ಹಣಕಾಸು ಆಯೋಗದಲ್ಲಿ ನಿರ್ಧಾರ ತೆಗೆದುಕೊಳ್ಳುವವರು ಸರಕಾರಿ ಅಧಿಕಾರಿಗಳು. ರಾಜ್ಯಗಳ ಆದಾಯದ ಮೂಲ, ಜನಸಂಖ್ಯೆ, ಭೌಗೋಳಿಕತೆಯ ಆಧಾರದ ಮೇಲೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲನ್ನು ಹಣಕಾಸು ಆಯೋಗವು ನಿರ್ಧರಿಸುತ್ತದೆ.

ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವಧಿಯಲ್ಲಿಯೂ ಹಣಕಾಸು ಆಯೋಗದ ಶಿಫಾರಸಿನ ಮೇಲೆಯೇ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗುತ್ತಿತ್ತು. ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ತೆರಿಗೆ ಪಾಲಿನ ಪ್ರಶ್ನೆ ಎತ್ತಿರಲಿಲ್ಲ; ಹಣಕಾಸು ಆಯೋಗ ನೀಡಿದ ಶಿಫಾರಸನ್ನು ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡಿತ್ತು. ಆದರೆ ನರೇಂದ್ರ ಮೋದಿಯವರು ಅಧಿಕಾರ ಕ್ಕೆ ಬಂದ ನಂತರ ಕಾಂಗ್ರೆಸ್ ತನ್ನ ರಾಜಕೀಯಕ್ಕೆ, ‘ಮಲತಾಯಿ ಧೋರಣೆ’ ಎಂಬ ಸುಳ್ಳು ನಿರೂ ಪಣೆಯನ್ನು ಮಾಡುತ್ತಿದೆ.

2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ರಾಜ್ಯದಲ್ಲಿ ಸಿದ್ದರಾ ಮಯ್ಯ ಮುಖ್ಯಮಂತ್ರಿಯಾಗಿದ್ದರು. ರಘುರಾಮ್ ರಾಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಬರುತ್ತಿದ್ದಂಥ ತೆರಿಗೆ ಪಾಲನ್ನು ಶೇ.4.13ರಿಂದ ಶೇ.3.73ಕ್ಕೆ ಇಳಿಸಲಾಗಿತ್ತು. ಅಂದು ಸಿದ್ದರಾಮಯ್ಯ ಸರಕಾರವು ತೆರಿಗೆ ಪಾಲಿನ ತಾರತಮ್ಯದ ಮಾತುಗಳನ್ನಾಡಿರಲಿಲ್ಲ. ಉತ್ತರ ಮತ್ತು ದಕ್ಷಿಣ ಎಂಬ ನಿರೂಪಣೆಯನ್ನು ಮುನ್ನೆಲೆಗೆ ತಂದು ಜನರಲ್ಲಿ ದ್ವೇಷದ ಮನೋಭಾವವನ್ನು ಮೂಡಿಸುವ ಕೆಲಸವನ್ನು ವಿರೋಧ ಪಕ್ಷಗಳು ನಿರಂತರವಾಗಿ ಮಾಡುತ್ತಿವೆ.

ಉತ್ತರ ಮತ್ತು ದಕ್ಷಿಣದ ರಾಜ್ಯಗಳ ಅಭಿವೃದ್ಧಿಯ ಅಸಮತೋಲನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ಘಟಾನುಘಟಿಗಳು ಉತ್ತರ ಪ್ರದೇಶದಿಂದಲೇ ಚುನಾವಣೆ ಗೆದ್ದು ದೆಹಲಿಯಲ್ಲಿ ಪ್ರಧಾನ ಮಂತ್ರಿಗಳಾದವರು, ಇಲ್ಲವೇ ಆಯಕಟ್ಟಿನ ಸ್ಥಾನಗಳನ್ನು ಹಿಡಿದವರಾಗಿದ್ದಾರೆ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಹಾಗಾದರೆ ಉತ್ತರ ಮತ್ತು ದಕ್ಷಿಣ ರಾಜ್ಯಗಳಲ್ಲಿ ಕಾಣಬರುವ ಅಭಿವೃದ್ಧಿಯ ಅಸಮತೋಲನಕ್ಕೆ ಕಾಂಗ್ರೆಸ್ ಪಕ್ಷವಲ್ಲದೆ ಮತ್ಯಾರು ಕಾರಣರು? ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಮುನ್ನ ಯೋಚಿಸಿ ಮಾತನಾಡಬೇಕು. ಆದಾಯ ತೆರಿಗೆ ವಿಷಯದಲ್ಲಿ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಮುನ್ನೆಲೆಗೆ ತಂದು ಟ್ರೋಲ್ ಮಾಡುವವರಿಗೇನೂ ಕಡಿಮೆ ಇಲ್ಲ. ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ, ವರ್ಷಕ್ಕೆ 250000 ರುಪಾಯಿಗಿಂತ ಕಡಿಮೆ ದುಡಿಯುವವರಿಗೆ ಆದಾಯ ತೆರಿಗೆ ಇರಲಿಲ್ಲ.

ಕಳೆದ 10 ವರ್ಷಗಳಲ್ಲಿ ಈ ಮಿತಿಯನ್ನು 775000 ರುಪಾಯಿಗೆ ಕೊಂಡೊಯ್ಯಲಾಗಿದೆ. ಅಂದರೆ, ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಸುಮಾರು ಮೂರು ಪಟ್ಟು ಏರಿಸಲಾಗಿದೆ. ತಿಂಗಳಿಗೆ 60000 ರು. ಸಂಬಳ ಪಡೆಯುವ ವ್ಯಕ್ತಿಯು ಒಂದು ರುಪಾಯಿ ಕೂಡ ತೆರಿಗೆ ಕಟ್ಟುವ ಹಾಗಿಲ್ಲ.

ಕಾರ್ಪೊರೇಟ್ ಕಂಪನಿಗಳ ಮೇಲಿನ ಆದಾಯ ತೆರಿಗೆಯನ್ನು ಶೇ.30ರಿಂದ ಶೇ.25ಕ್ಕೆ ಇಳಿಸಲಾಗಿದೆ. ತೆರಿಗೆಯನ್ನು ಏರಿಸದೆ ತೆರಿಗೆ ಕಟ್ಟುವವರ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ. ಭಾರತದ ಇತಿಹಾಸ ದಲ್ಲಿ ಅತಿ ಹೆಚ್ಚಿನ ಆದಾಯ ತೆರಿಗೆ ವಿಧಿಸಿದ್ದು ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರು. ದೇಶದ ವಿತ್ತ ಸಚಿವಾಲಯವು ಮನುಷ್ಯನ ಹೃದಯಭಾಗ ಇದ್ದಂತೆ, ಈ ಸಚಿವಾಲಯವನ್ನು ಅತ್ಯಂತ ಜಾಗರೂ ಕತೆಯಿಂದ ನಿರ್ವಹಿಸಬೇಕು.

ವಿತ್ತ ಸಚಿವಾಲಯದಲ್ಲಿ ಭ್ರಷ್ಟಾಚಾರರಹಿತ ಆಡಳಿತ ನೀಡಬೇಕು. ಎಂಟನೇ ಬಾರಿಗೆ ಆಯವ್ಯಯ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧಿಕಾರಾವಧಿಯಲ್ಲಿ ಒಂದು ಸಣ್ಣ ಭ್ರಷ್ಟಾಚಾರದ ವಾಸನೆಯೂ ಹೊಮ್ಮಿಲ್ಲ. ಆದರೆ ಕಾಂಗ್ರೆಸ್ ಸರಕಾರದಲ್ಲಿ ವಿತ್ತ ಸಚಿವ ರಾಗಿದ್ದ ಚಿದಂಬರಂ ಭ್ರಷ್ಟಾಚಾರದ ಪಿತಾಮಹರಾಗಿದ್ದರು.

ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬುಡಮೇಲು ಮಾಡಿದ, ಒಂದು ಫೋನ್ ಕರೆಯ ಮೂಲಕ ಕೋಟಿಗಟ್ಟಲೆ ಸಾಲ ಮಂಜೂರು ಮಾಡಿದ ಆರೋಪಗಳು ಇವರ ಮೇಲಿವೆ. ದೇಶದ ಒಳಗೆ ಮತ್ತು ವಿದೇಶದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಯನ್ನು ಗಳಿಸಿರುವ ಚಿದಂಬರಂ ಅವರ ವಿರುದ್ಧ ಭ್ರಷ್ಟಾಚಾರದ ಅನೇಕ ಪ್ರಕರಣಗಳಿವೆ. ಇಂಥ ವ್ಯಕ್ತಿ ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷವು ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಮಾತನಾಡುತ್ತದೆ.

ಕೋವಿಡ್ ಸಂದರ್ಭದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಸ್ತಬ್ಧಗೊಂಡಿತ್ತು. ಭಾರತದಲ್ಲೂ ತಿಂಗಳುಗಳ ಕಾಲ ಲಾಕ್ಡೌನ್ ಮಾಡಲಾಗಿತ್ತು. ಕೋವಿಡ್ ಸಮಯದಲ್ಲಿ ಜನರು ಕೈಕುಲುಕುತ್ತಿರಲಿಲ್ಲ, ಎದುರು ಬದುರು ಕೂರುತ್ತಿರಲಿಲ್ಲ, ಮನೆಯಿಂದ ಹೊರಬರಲು ಹೆದರುತ್ತಿದ್ದರು. ಇಂಥ ಸಂದಿಗ್ಧ ಪರಿಸ್ಥಿತಿ ಯಲ್ಲಿ ದೇಶವನ್ನು ನಡೆಸುವುದು ಸುಲಭದ ಮಾತಾಗಿರಲಿಲ್ಲ. ಒಂದೆಡೆ ಜನರ ಆರೋಗ್ಯದ ಕಡೆಗೆ ಗಮನ ಹರಿಸಬೇಕು, ಮತ್ತೊಂದೆಡೆ ದೇಶದ ಆರ್ಥಿಕ ವ್ಯವಸ್ಥೆಯನ್ನೂ ನಿರ್ವಹಿಸಬೇಕು.

ಆದರೆ, ದೇಶದ ಆರ್ಥಿಕ ವ್ಯವಸ್ಥೆ ಸ್ತಬ್ಧಗೊಂಡಿದ್ದರಿಂದ ಸರಕಾರಕ್ಕೆ ಆದಾಯವೇ ಬರುತ್ತಿರಲಿಲ್ಲ, ಸಾವಿರಾರು ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಭಯಗ್ರಸ್ತ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಗುಳೆ ಹೊರಟಿದ್ದರು. ಬಡವರ ಹಸಿವನ್ನು ನೀಗಿಸಬೇಕಿತ್ತು. ಅಂಥ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾಗಿ ದೇಶದ ಆರ್ಥಿಕತೆಯನ್ನು ನಿರ್ವಹಿಸಿದ ರೀತಿಯನ್ನು ಮರೆಯುವಂತಿಲ್ಲ.

ಜಗತ್ತಿನ ಅನೇಕ ದೇಶಗಳು ಕೋವಿಡ್‌ನ ಹೊಡೆತದಿಂದ ಇಂದಿಗೂ ಸಂಪೂರ್ಣ ಚೇತರಿಸಿ ಕೊಂಡಿಲ್ಲ. ಆದರೆ ಭಾರತ ಮಾತ್ರ ಅತ್ಯಂತ ವೇಗವಾಗಿ ಚೇತರಿಕೆ ಕಂಡಿತು ಎಂಬುದನ್ನು ಮರೆಯ ಲಾಗದು.ಪ್ರತಿಯೊಂದು ವಿಚಾರಕ್ಕೂ ನಿರ್ಮಲಾ ಸೀತಾರಾಮನ್ ಅವರನ್ನು ಎಳೆತಂದು ತೆರಿಗೆಯ ಬಗ್ಗೆ ಅಪಪ್ರಚಾರ ಮಾಡುವುದು ವಿರೋಧ ಪಕ್ಷಗಳ ಟ್ರೆಂಡ್ ಆಗಿ ಬಿಟ್ಟಿದೆ.

ಸುಳ್ಳು ನಿರೂಪಣೆಗಳನ್ನು ಮುನ್ನೆಲೆಗೆ ತಂದು ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮಾಡುತ್ತಿವೆ.