#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mohan Vishwa Column: ಸುಭಾಷ್‌ ಚಂದ್ರ ಸಂಗ್ರಹಿಸಿದ್ದ ಸಂಪತ್ತೇನಾಯಿತು ?

ಇತ್ತ ಭಾರತದಲ್ಲಿ ನೆಹರು ನೇತೃತ್ವದ ಕಾಂಗ್ರೆಸ್ ಪಕ್ಷವು ಸುಭಾಷರ ಕ್ರಾಂತಿಕಾರಿ ಚಿಂತನೆಗೆ ಎಳ್ಳಷ್ಟೂ ನೆರವಾಗಲಿಲ್ಲ. ಬದಲಿಗೆ ಸುಭಾಷರ ವಿರುದ್ಧ ನೆಹರು ಹೇಳಿಕೆಗಳನ್ನು ಕೊಟ್ಟಿದ್ದರು. ಆದರೆ ಸುಭಾಷರ ಅನುಯಾಯಿಗಳು ನೆಹರುರ ಮಾತಿಗೆ ಸೊಪ್ಪುಹಾಕುತ್ತಿರಲಿಲ್ಲ

Mohan Vishwa Column: ಸುಭಾಷ್‌ ಚಂದ್ರ ಸಂಗ್ರಹಿಸಿದ್ದ ಸಂಪತ್ತೇನಾಯಿತು ?

ಮೋಹನ್‌ ವಿಶ್ವ ಅಂಕಣ

Profile Ashok Nayak Jan 25, 2025 8:35 AM

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

ಭಾರತದಿಂದ ಬ್ರಿಟಿಷರನ್ನು ಓಡಿಸಲು ಕ್ರಾಂತಿಮಾರ್ಗವೇ ಸೂಕ್ತವೆಂದರಿತಿದ್ದ ಸುಭಾಷ್‌ಚಂದ್ರ ಬೋಸರು, ಭಾರತದಾಚೆಗಿನ ಬ್ರಿಟಿಷರ ವೈರಿಗಳ ಸಹಾಯ ಪಡೆಯಲು ನಿರ್ಧರಿಸಿದ್ದರು. ಜಪಾನ್, ಜರ್ಮನಿ, ವಿಯೆಟ್ನಾಂ, ಸಿಂಗಾಪುರ, ಇಟಲಿ, ಆಸ್ಟ್ರಿಯಾ ಹಾಗೂ ರಷ್ಯಾ ದೇಶಗಳ ನೆರವು ಪಡೆದು, ಬ್ರಿಟಿಷ್ ಆಡಳಿತದಲ್ಲಿ ೨ನೇ ಮಹಾಯುದ್ಧದಲ್ಲಿ ಸೆರೆ ಸಿಕ್ಕ ಅಲ್ಲಿನ ಭಾರತೀಯ ಯುದ್ಧಖೈದಿಗಳ ಸಹಾಯದಿಂದ ದೊಡ್ಡದೊಂದು ಸೈನ್ಯವನ್ನು ಕಟ್ಟಿ, ಬ್ರಿಟಿಷರ ಮೇಲೆ ಆಕ್ರಮಣ ಮಾಡುವ ಯೋಜನೆಯನ್ನು ಅವರು ತಯಾರಿಸಿದ್ದರು.

ದೊಡ್ಡ ಸೈನ್ಯವನ್ನು ಕಟ್ಟುವುದು ಸುಲಭವಲ್ಲ. ಇತ್ತ ಭಾರತದಲ್ಲಿ ನೆಹರು ನೇತೃತ್ವದ ಕಾಂಗ್ರೆಸ್ ಪಕ್ಷವು ಸುಭಾಷರ ಕ್ರಾಂತಿಕಾರಿ ಚಿಂತನೆಗೆ ಎಳ್ಳಷ್ಟೂ ನೆರವಾಗಲಿಲ್ಲ. ಬದಲಿಗೆ ಸುಭಾಷರ ವಿರುದ್ಧ ನೆಹರು ಹೇಳಿಕೆಗಳನ್ನು ಕೊಟ್ಟಿದ್ದರು. ಆದರೆ ಸುಭಾಷರ ಅನುಯಾಯಿಗಳು ನೆಹರುರ ಮಾತಿಗೆ ಸೊಪ್ಪುಹಾಕುತ್ತಿರಲಿಲ್ಲ.

ಸುಭಾಷರು ಭಾರತದಲ್ಲಿದ್ದುಕೊಂಡು, ಬ್ರಿಟಿಷರ ವಿರುದ್ಧ ಯುದ್ಧ ಮಾಡಲು ಬೇಕಿದ್ದ ಸಂಪನ್ಮೂಲ ಗಳನ್ನು ಸಂಗ್ರಹಿಸುವುದು ಕಷ್ಟವಾಗಿತ್ತು. ಬ್ರಿಟಿಷರ ಕಣ್ಗಾವಲು ಹಾಗೂ ಅವರಿಗೆ ಕಾಂಗ್ರೆಸ್ ನೀಡು ತ್ತಿದ್ದ ಪರೋಕ್ಷ ಬೆಂಬಲದಿಂದಾಗಿ ಸುಭಾಷರು ದೇಶಬಿಟ್ಟು ಹೊರಗಿನಿಂದ ಬ್ರಿಟಿಷರ ಮೇಲೆ ಆಕ್ರಮಣ ಮಾಡುವಂಥ ಪರಿಸ್ಥಿತಿ ಎದುರಾಗಿತ್ತು.

ಇದನ್ನೂ ಓದಿ: Mohan Vishwa Column: ಗೆದ್ದಾಗ EVM ಬೇಕು ಸೋತಾಗ ಬೇಡ !

ಭಾರತದ ಹೊರಗೆ ದೊಡ್ಡ ಸೈನ್ಯವನ್ನು ಕಟ್ಟಿ ಬ್ರಿಟಿಷರ ವಿರುದ್ಧ ತಿರುಗಿ ಬೀಳಲು ಸುಭಾಷರಿಗೆ ದೊಡ್ಡ ಮಟ್ಟದ ಆರ್ಥಿಕ ಸಂಪನ್ಮೂಲದ ಅವಶ್ಯಕತೆಯಿತ್ತು. ಇದನ್ನು ಕ್ರೋಢೀಕರಿಸಲು ಅವರು ಭಾರತೀಯರಿಗೆ ಬಹಿರಂಗವಾಗಿ ಕರೆ ಕೊಟ್ಟಿದ್ದರು ಹಾಗೂ ಸ್ವತಃ ಜನರ ಮುಂದೆ ಕೈಚಾಚುವ ಮೂಲಕ ಹಣಸಂಗ್ರಹಕ್ಕೆ ಮುಂದಾಗಿದ್ದರು.

ಬ್ರಿಟಿಷರ ಗೃಹಬಂಧನದಿಂದ ತಪ್ಪಿಸಿಕೊಂಡು ಜರ್ಮನಿ-ಜಪಾನ್ ದೇಶಗಳ ಸಹಾಯ ಪಡೆಯಲು, ಹಿಟ್ಲರ್ ಮತ್ತು ಜಪಾನಿ ನಾಯಕರನ್ನು ಭೇಟಿಮಾಡಿದ ಬೋಸರು, ‘ಇಂಡಿಯನ್ ನ್ಯಾಷನಲ್ ಆರ್ಮಿ’ ಕಟ್ಟಲು ಬೇಕಿದ್ದ ಭಾರತೀಯ ಯುದ್ಧಖೈದಿಗಳನ್ನು ಹಸ್ತಾಂತರಿಸುವಂತೆ ಅವರನ್ನು ಕೇಳಿದರು. ನಂತರ ಬೋಸರು ಸದರಿ ಯುದ್ಧಖೈದಿಗಳಲ್ಲಿ ಆತ್ಮಸ್ಥೈರ್ಯ ತುಂಬಿ, ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದರು.

1943ರಲ್ಲಿ ಸುಭಾಷರು, ಜಪಾನ್ ಹಿಡಿತದಲ್ಲಿದ್ದಂಥ ಮಲೇಷ್ಯಾ ದೇಶದ ಪೆನಾಂಗ್ ಕಡಲ ನಗರಕ್ಕೆ ಬಂದಿದ್ದರು. ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರಿಗೆ ಈ ನಗರದಲ್ಲಿ ಬಹುದೊಡ್ಡ ಸ್ವಾಗತ ಸಿಕ್ಕಿತ್ತು. ಈ ನಗರದಲ್ಲಿ ತಮಿಳುನಾಡಿನ ಜನ ಹೆಚ್ಚಾಗಿ ವಾಸಿಸುತ್ತಿದ್ದರು, ಅಲ್ಲಿನ ದೊಡ್ಡ ವ್ಯವಹಾರಗಳಲ್ಲಿ ಅವರ ಪಾಲು ಬಹಳಷ್ಟಿತ್ತು.

ಸುಭಾಷರ ಸೇನೆಗೆ ಅಗತ್ಯವಿದ್ದ ಧನಸಹಾಯವನ್ನು ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಸಂಸ್ಥೆ ಯಡಿ ಮಾಡಲಾಗುತ್ತಿತ್ತು. ಬ್ರಿಟಿಷರ ವಿರುದ್ಧ ಯುದ್ಧಮಾಡಿ ಗೆಲ್ಲುವುದೇ ಇಬ್ಬರದೂ ಉದ್ದೇಶ ವಾಗಿತ್ತು. ಅಷ್ಟು ಹೊತ್ತಿಗೆ ಬೋಸರ ಮಾರ್ಗದರ್ಶನದಲ್ಲಿ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯ ಒಟ್ಟಾರೆ ಸೈನಿಕರ ಸಂಖ್ಯೆ 40000 ದಾಟಿತ್ತು.

1943ರಲ್ಲಿ ಪೆನಾಂಗ್ ನಗರದಲ್ಲಿ ಜರ್ಮನಿಯ ಸುಮಾರು 17 ಸಬ್‌ಮರೀನ್‌ಗಳಿದ್ದವು. ಇವು ‘ಮಾನ್ಸೂನ್ ಗ್ರೂಪ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿನ ರಹಸ್ಯ ಸಭೆಯೊಂದರಲ್ಲಿ ಸುಭಾಷರು ಜಪಾನ್ ಮತ್ತು ಜರ್ಮನಿಯ ಸೇನಾಧಿಕಾರಿಗಳನ್ನು ಭೇಟಿಯಾಗಿದ್ದರು. ವಿಯೆಟ್ನಾಂ ದೇಶದ ದೊಡ್ಡ ನಗರವಾದ ಸೈಗಾನ್‌ನಲ್ಲಿ ತಮಿಳುನಾಡಿನ ಚೆಟ್ಟಿಯಾರ್‌ಗಳು ಹೆಚ್ಚಾಗಿ ವಾಸಿಸು ತ್ತಿದ್ದರು.

ಇವರು ಬೋಸರ ಸೈನ್ಯಕ್ಕೆ ದೊಡ್ಡ ಮಟ್ಟದಲ್ಲಿ ಧನಸಹಾಯ ಮಾಡಿದ್ದರು, ಚಿನ್ನ-ವಜ್ರ-ವೈಡೂ ರ್ಯಗಳನ್ನು ನೀಡಿದ್ದರು ಹಾಗೂ ಆಗ್ನೇಯ ಏಷ್ಯಾದ ಇತರ ರಾಷ್ಟ್ರಗಳಲ್ಲಿದ್ದಂಥ ಚೆಟ್ಟಿಯಾರ್‌ ಗಳಿಂದಲೂ ಸಂಪತ್ತನ್ನು ಸಂಗ್ರಹಿಸಿ ಸುಭಾಷರಿಗೆ ನೀಡಿದ್ದರು. 1945ರ ಯುದ್ಧದಲ್ಲಿ ಸೋತ ನಂತರ ಜಪಾನ್ ತನ್ನ ತೆಕ್ಕೆಯಲ್ಲಿದ್ದ ಆಗ್ನೇಯ ಏಷ್ಯಾ ದೇಶಗಳನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಅದಕ್ಕೂ ಮೊದಲು ಅಲ್ಲೆಲ್ಲ ತಾನು ಕ್ರೋಡೀಕರಿಸಿದ್ದ ಸಂಪತ್ತನ್ನು ತನ್ನಲ್ಲಿಗೆ ರವಾನಿಸಲು ಜಪಾನ್ ತೀರ್ಮಾನಿಸಿತ್ತು.

ಯುದ್ಧದ ವೇಳೆ ಜಪಾನ್ ದೊಡ್ಡ ದೊಡ್ಡ ನಗರಗಳನ್ನು ವಶಪಡಿಸಿಕೊಂಡ ನಂತರ ಅಲ್ಲಿ ಸಿಕ್ಕಿದ ಚಿನ್ನಾಭರಣಗಳನ್ನು ಒಂದೆಡೆ ಕಲೆಹಾಕಿತ್ತು. ಅವನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಲು ಇಂಡಿ ಯನ್ ನ್ಯಾಷನಲ್ ಆರ್ಮಿಯ ನೆರವನ್ನು ಜಪಾನ್ ಕೇಳಿತ್ತು. ಕರಗಿಸಿದ ಈ ಚಿನ್ನವನ್ನು, ಬ್ರಿಟಿಷ್ ಸೈನ್ಯವು ಆಗ್ನೇಯ ಏಷ್ಯಾದ ದೇಶಗಳೆಡೆಗೆ ಮುನ್ನುಗ್ಗುವ ಮುನ್ನ ಜಪಾನಿಗೆ ಸಾಗಿಸಬೇಕಿತ್ತು.

ಆಜಾದ್ ಹಿಂದ್ ಸರಕಾರದ ವಿತ್ತ ಸಚಿವರಾಗಿದ್ದ ಜನರಲ್ ಎ.ಸಿ.ಚಟರ್ಜಿಯವರು 1945ರ ಆಗಸ್ಟ್ 20ರಂದು, ಸುಭಾಷರಿಗೆ ನೆರವಿನ ರೂಪದಲ್ಲಿ ಬಂದಿದ್ದ ಚಿನ್ನಾಭರಣಗಳನ್ನು ಕರಗಿಸಿ ಸುಮಾರು 150 ಕೆ.ಜಿ.ಯಷ್ಟು ಗಟ್ಟಿಯಾಗಿಸಿದ್ದರು. ಆದರೆ ಆ ಚಿನ್ನವು ಎಲ್ಲಿಗೆ ಹೋಯಿತೆಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಕೆಲವರ ಪ್ರಕಾರ, ಅಲ್ಪ-ಸ್ವಲ್ಪ ಚಿನ್ನದ ಗಟ್ಟಿಯನ್ನು ಫ್ರೆಂಚರು ವಶಪಡಿಸಿ ಕೊಂಡಿದ್ದರಂತೆ.

ನಂತರ ಬ್ರಿಟಿಷರು ಈ ಚಿನ್ನದ ಗಟ್ಟಿಗಳನ್ನು ಹುಡುಕಿಕೊಂಡು ಆಗ್ನೇಯ ಏಷ್ಯಾ ದೇಶಗಳಲ್ಲಿ ತಿರುಗಾಡಿದ್ದರು. ಬ್ರಿಟಿಷ್ ಗ್ರಂಥಾಲಯಗಳಲ್ಲಿನ ದಾಖಲೆಗಳ ಪ್ರಕಾರ, ‘ಇಂಡಿಯನ್ ನ್ಯಾಷನಲ್ ಆರ್ಮಿ’ ಹಾಗೂ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಶರಣಾದಾಗ ಬ್ರಿಟಿಷರಿಗೆ ಸುಮಾರು 262 ಕೆ.ಜಿ. ಚಿನ್ನದ ಗಟ್ಟಿ, 262 ಬರ್ಮಾ ರೂಬಿಗಳು, ಚಿನ್ನ-ಬೆಳ್ಳಿ ಆಭರಣಗಳು ಸಿಕ್ಕಿದ್ದವಂತೆ.

ಭಾರತ ಸ್ವತಂತ್ರವಾದ ನಂತರ, ಅಂತಾರಾಷ್ಟ್ರೀಯ ಒಪ್ಪಂದಗಳ ಪ್ರಕಾರ ಭಾರತಕ್ಕೆ ಸೇರಬೇಕಿದ್ದ ಈ ಸಂಪತ್ತು ಎಲ್ಲಿ ಹೋಯಿತೆಂಬುದು ಯಾರಿಗೂ ತಿಳಿದಿಲ್ಲ. ಬ್ರಿಟಿಷರು ವಶಪಡಿಸಿಕೊಂಡಂಥ ಸಂಪತ್ತುಗಳನ್ನು ಜಪಾನ್‌ಗೆ ನೀಡಲಾಗಿದೆಯೆಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು 1947ರಲ್ಲಿ ಬರೆದಿತ್ತು. ಅದಾದ 5 ವರ್ಷಗಳ ನಂತರ, ಜಪಾನ್ ಎರಡು ದೊಡ್ಡ ಸೂಟ್‌ಕೇಸ್‌ಗಳನ್ನು ನೆಹರು ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಒಪ್ಪಿಸಿತ್ತು. ಬೋಸರು ವಿಮಾನಾಪಘಾತದಲ್ಲಿ ಮೃತರಾದ ನಂತರ ವಿಮಾನದಲ್ಲಿ ಸಿಕ್ಕಂಥ ವಸ್ತುಗಳನ್ನು ಈ ಸೂಟ್‌ಕೇಸ್ ಗಳಲ್ಲಿ ನೀಡಲಾಗಿದೆ ಎನ್ನಲಾಗಿತ್ತು.

ಇದಾದ ನಂತರ, ಭಾರತ ಹಾಗೂ ಜಪಾನ್ ನಡುವೆ ಒಪ್ಪಂದವೊಂದಕ್ಕೆ ಸಹಿಹಾಕಲಾಗಿತ್ತು ಮತ್ತು ಅದನ್ನು ಶಾಂತಿ ಒಪ್ಪಂದವೆಂದು ಕರೆಯಲಾಗಿತ್ತು. ಹಾಗಾದರೆ, ಸೂಟ್‌ಕೇಸ್ ನಲ್ಲಿ ನೀಡಿದ್ದಂಥ ಬೋಸರ ವಸ್ತುಗಳು ಇಂಡಿಯನ್ ನ್ಯಾಷನಲ್ ಆರ್ಮಿಯ ಸಂಪತ್ತಿನ ಒಂದು ಸಣ್ಣ ಭಾಗ ವಾಗಿರಬಹುದೆಂಬ ಅನುಮಾನ ಹಲವರಿಗಿದೆ.

2016ರಲ್ಲಿ ಭಾರತ ಸರಕಾರವು ಇದೇ ವಿಷಯವಾಗಿ ಜಪಾನ್ ಸರಕಾರದಿಂದ ಹೆಚ್ಚಿನ ಮಾಹಿತಿ ಯನ್ನು ಕೇಳಿದಾಗ ಮತ್ತೊಂದು ಅಂಶ ಬೆಳಕಿಗೆ ಬಂದಿತ್ತು. ಅದು- 1958 ಮತ್ತು 1961ರ ನಡುವೆ, ಬೋಸರಿಗೆ ಸೇರಿದ್ದ ಅತ್ಯಮೂಲ್ಯ ರತ್ನ ಸಂಪತ್ತನ್ನು ಭಾರತೀಯ ರಾಯಭಾರ ಕಚೇರಿಗೆ ನೀಡಲಾ ಗಿತ್ತು ಎಂಬುದು. 1958ರಲ್ಲಿ, ಸುಮಾರು 18400 ಕ್ಯಾರಟ್/3.68 ಕೆ.ಜಿ. ತೂಕದ ‘ಕತ್ತರಿಸದ ಪಚ್ಚೆ ಕಲ್ಲು’, ಸುಮಾರು 17880 ಕ್ಯಾರಟ್/3.56 ಕೆ.ಜಿ. ತೂಕದ ‘ಪಚ್ಚೆಕಲ್ಲಿನಿಂದ ಮಾಡಿದ ಬುದ್ಧನ ವಿಗ್ರಹ’ ಹಾಗೂ 1961ರಲ್ಲಿ, ಸುಮಾರು 1 ಅಡಿ ಎತ್ತರದ, ಸುಮಾರು 14700 ಕ್ಯಾರಟ್/2 ಕೆ.ಜಿ. ತೂಕದ ‘ಪಚ್ಚೆಕಲ್ಲಿನ ಬುದ್ಧನ ವಿಗ್ರಹ’ವನ್ನು ಟೋಕಿಯೋ ನಗರದಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ನೀಡಲಾಗಿತ್ತೆಂಬ ಅಂಶ ಬೆಳಕಿಗೆ ಬಂತು.

ಹಾಗಾದರೆ, ಭಾರತದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ರಾಷ್ಟ್ರಭಕ್ತನೊಬ್ಬ ಸಂಗ್ರಹಿಸಿದ್ದ, ಬೆಲೆ ಕಟ್ಟಲಾ ಗದಂಥ ಚಿನ್ನ-ವಜ್ರ-ವೈಡೂರ್ಯದ ಸಂಪತ್ತು ಹೋದದ್ದೆಲ್ಲಿಗೆ? ಹಿಟ್ಲರ್ ನೇತೃತ್ವದಲ್ಲಿ ಮುನ್ನುಗ್ಗು ತ್ತಿದ್ದ ಜರ್ಮನಿಗೆ ಎರಡನೇ ಮಹಾಯುದ್ಧದ ಕೊನೆಯಲ್ಲಿ ಜಯ ದೊರಕಲಿಲ್ಲ. ಹಿಟ್ಲರ್ ಸತ್ತು ಹೋದ. ಅತ್ತ, ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಮೆರಿಕ ಅಣು ಬಾಂಬ್ ದಾಳಿಮಾಡುವ ಮೂಲಕ ಈ ಯುದ್ಧದಲ್ಲಿ ವಿಶ್ವದ ದೊಡ್ಡಣ್ಣನಾಗಿ ಹೊರ ಹೊಮ್ಮಿತ್ತು.

ಈ ದಾಳಿಗೆ ತತ್ತರಿಸಿದ್ದ ಜಪಾನ್ 1945ರ ಆಗಸ್ಟ್ 15ರಂದು ಶರಣಾಗತಿಯನ್ನು ಘೋಷಿಸಿತು, ಅಲ್ಲಿಗೆ 2ನೇ ಮಹಾಯುದ್ಧ ಕೊನೆಗೊಂಡಿತ್ತು. ಜರ್ಮನಿ ಮತ್ತು ಜಪಾನ್ ದೇಶಗಳು ಯುದ್ಧದಲ್ಲಿ ಸೋತಿ ದ್ದು ಬೋಸರ ಮೇಲೆ ನೇರ ಪರಿಣಾಮ ಬೀರಿತ್ತು. ತಮಗೆ ಬೆನ್ನೆಲುಬಾಗಿದ್ದ ಈ ಎರಡೂ ದೇಶಗಳ ಸೋಲಿನಿಂದಾಗಿ ಬೋಸರು ರಷ್ಯಾದೆಡೆಗೆ ಮುಖ ಮಾಡಿದ್ದರು.

ಯುದ್ಧದಲ್ಲಿ ಸೋತ ನಂತರ ಜಪಾನ್, ಆಗ್ನೇಯ ಏಷ್ಯಾ ದೇಶಗಳ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಿತು. ಜರ್ಮನಿ ಹಾಗೂ ಜಪಾನ್ ಶರಣಾದ ಮೇಲೆ ರಹಸ್ಯ ಸಬ್‌ಮರೀನ್, ಮಾನ್ಸೂನ್ ಗ್ರೂಪ್ ಬಗ್ಗೆ ಬೋಸರಿಗೆ ತಿಳಿದಿತ್ತು. ಸೈಗಾನ್ ನಗರದಿಂದ ಸಿಂಗಾಪುರಕ್ಕೆ ವಿಮಾನದಲ್ಲಿ ಬಂದ ಬೋಸರನ್ನು, ತರುವಾಯದಲ್ಲಿ ಕೋಲ್ಕತ್ತಾದಲ್ಲಿ ಹತ್ಯೆಯಾದ ಪೊಲೀಸ್ ಅಧಕಾರಿಯು ಸಬ್ ಮರೀನ್ ಬಳಿ ಕರೆದುಕೊಂಡು ಬಂದಿದ್ದ. ಪತ್ರಿಕೆಯೊಂದಕ್ಕೆ ಆತ 1969ರಲ್ಲಿ ನೀಡಿದ ಹೇಳಿಕೆ ಯಂತೆ, ಬೋಸರು 1945ರ ಸೆಪ್ಟೆಂಬರ್ 18ರಂದು ಸಬ್‌ಮರೀನ್ ಮೂಲಕ ರಷ್ಯಾಕ್ಕೆ ತೆರಳಿದ್ದರು.

ಆಸ್ಟ್ರಿಯಾ ದೇಶದ ವಿಯೆನ್ನಾ ನಗರದಲ್ಲಿ ಬೋಸರ ಮಡದಿ ಹಾಗೂ ಮಗಳಿದ್ದರು. ಆಗ ಆಸ್ಟ್ರಿಯಾ ದೇಶವು ಸೋವಿಯತ್ ಒಕ್ಕೂಟದ ಭಾಗವಾಗಿತ್ತು. ಬ್ರಿಟಿಷರ ವಿರುದ್ಧದ ಹೋರಾಟವನ್ನು ಮುಂದು ವರಿಸಲೆಂದು ಇಂಡಿಯನ್ ನ್ಯಾಷನಲ್ ಆರ್ಮಿ ಸಂಗ್ರಹಿಸಿದ್ದ ಸಂಪತ್ತನ್ನು ಬೋಸರು ಸಬ್‌ ಮರೀನ್‌ನಲ್ಲಿ ತೆಗೆದುಕೊಂಡು ಹೋಗಿರಬಹುದೆಂಬ ದಟ್ಟ ಅನುಮಾನವಿದೆ. ಆದರೆ 1945ರ ಆಗಸ್ಟ್ 17ರಂದು, ಬೋಸರು ವಿಯೆಟ್ನಾಂನಿಂದ ಜಪಾನಿನ ಉನ್ನತ ಸೇನಾಧಿಕಾರಿಯೊಬ್ಬರ ಜತೆ ವಿಮಾನ ದಲ್ಲಿ ಹೊರಟರು, ತದನಂತರ ಆ ವಿಮಾನ ತೈಪೆ ಬಳಿ ಅಪಘಾತಕ್ಕೊಳಗಾಯಿತು ಎಂದು ಇಂದಿಗೂ ಹೇಳಲಾಗುತ್ತದೆ.

ಆದರೆ ಬೋಸರು ಅಂದು ಆ ವಿಮಾನದಲ್ಲಿ ಇರಲೇ ಇಲ್ಲವೆನ್ನಲು ಹಲವು ಪುರಾವೆಗಳು ಸಿಕ್ಕಿವೆ. ಬೋಸರ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲೆಂದು 1996ರ ಅಕ್ಟೋಬರ್‌ನಲ್ಲಿ ಭಾರತೀಯ ಸಂಸ ತ್ತಿನ ನಿಯೋಗವೊಂದು ರಷ್ಯಾದ ಮಾಸ್ಕೋ ನಗರಕ್ಕೆ ತೆರಳಿತ್ತು. ಬೋಸರ ಫಾರ್ವರ್ಡ್ ಬ್ಲಾಕ್‌ನ ಸದಸ್ಯರಿಬ್ಬರು ಆ ನಿಯೋಗದಲ್ಲಿದ್ದರು. 1945ರ ನಂತರ ಬೋಸರು ರಷ್ಯಾದಲ್ಲಿದ್ದುದಕ್ಕೆ ಬೇಕಿದ್ದ ಹಲವು ಸಾಕ್ಷ್ಯಗಳನ್ನು ಅವರಿಗೆ ರಷ್ಯಾದ ಸೇನಾಧಿಕಾರಿಗಳು ಒದಗಿಸಿದ್ದರು.

ಸಾಕ್ಷ್ಯಗಳನ್ನು ಸಂಗ್ರಹಿಸಿ ಭಾರತಕ್ಕೆ ಬಂದ ನಂತರ, 1997ರ ಅಕ್ಟೋಬರ್ ನಲ್ಲಿ ಫಾರ್ವರ್ಡ್ ಬ್ಲಾಕ್‌ನ ಸದಸ್ಯರೊಬ್ಬರು ಬಿಹಾರದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹೃದಯಾಘಾತವಾಗಿ ಮೃತರಾದರು. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟ ಗಾರ ಸುಭಾಷ್‌ಚಂದ್ರ ಬೋಸರು ಸಂಗ್ರಹಿಸಿದ್ದಂಥ ಆರ್ಥಿಕ ಸಂಪತ್ತು ಏನಾಯಿತೆಂಬ ವಿಷಯದ ಬಗ್ಗೆ ಚರ್ಚೆಯಾಗಬೇಕಿದೆ.