ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kushangi Patel Column: ಕಳಲೆ: ಭವಿಷ್ಯದ ಸೂಪರ್‌ʼಫುಡ್‌ ಆಗಬಹುದೇ ?

ಇತ್ತೀಚಿನ ಸಂಶೋಧನೆಗಳು ಕಳಲೆಗಳಲ್ಲಿ ಇರುವ ಪೌಷ್ಟಿಕಾಂಶಗಳ ಬಗ್ಗೆ ಹೊಸ ಬೆಳಕು ಚೆಲ್ಲಿವೆ. ಕಡಿಮೆ ಕ್ಯಾಲೊರಿ, ಹೆಚ್ಚು ನಾರಿನಾಂಶ, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಹಲವು ಖನಿಜಾಂಶಗಳನ್ನು ಹೊಂದಿರುವ ಕಳಲೆಗಳು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Kushangi Patel Column: ಕಳಲೆ: ಭವಿಷ್ಯದ ಸೂಪರ್‌ʼಫುಡ್‌ ಆಗಬಹುದೇ ?

-

Profile
Ashok Nayak May 14, 2026 2:01 PM

ಕುಶಾಂಗಿ ಪಟೇಲ್

ಒಮ್ಮೆ ಗ್ರಾಮೀಣ ಅಡುಗೆಮನೆಗಳಲ್ಲಿ ಸಾಮಾನ್ಯ ಆಹಾರವಾಗಿದ್ದ ಬಿದಿರು ಮೊಗ್ಗು (ಕಳಲೆ)ಗಳು ಇಂದು ಜಾಗತಿಕ ವಿಜ್ಞಾನಿಗಳ ಗಮನ ಸೆಳೆಯುತ್ತಿವೆ. ಹೊಟ್ಟೆಯ ಆರೋಗ್ಯ, ದೇಹದ ಚಯಾಪಚಯ ಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕಳಲೆ ಸಹಾಯಕ ವಾಗಬಹುದು ಎಂಬ ಅಧ್ಯಯನಗಳು ಚರ್ಚೆಗೆ ಕಾರಣವಾಗಿವೆ.

ಪರಂಪರೆಯಿಂದ ಬಂದಿದ್ದ ಈ ಆಹಾರ ಇದೀಗ ಸೂಪರ್ ಫುಡ್ ಎಂಬ ಹೊಸ ಗುರುತಿನತ್ತ ಹೆಜ್ಜೆ ಇಡುತ್ತಿದೆ. ಉತ್ತರ ಪೂರ್ವ ಭಾರತದ ಅನೇಕ ಭಾಗಗಳಲ್ಲಿ ಕಳಲೆ ದಿನನಿತ್ಯದ ಆಹಾರ ದ ಒಂದು ಭಾಗವಾಗಿವೆ. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ ಸೇರಿದಂತೆ ಹಲವೆಡೆ ಜನರು ಕಳಲೆಗಳನ್ನು ಬೇಯಿಸಿ, ಉಪ್ಪಿನಕಾಯಿ ಮಾಡಿ, ಫರ್ಮೆಂಟೆಡ್ ರೂಪದಲ್ಲಿ ಸೇವಿಸುತ್ತಾರೆ. ಅಲ್ಲಿ ಇದು ಕೇವಲ ಆಹಾರವಲ್ಲ; ಸಂಸ್ಕೃತಿ ಮತ್ತು ಜೀವನಶೈಲಿಯ ಭಾಗವಾಗಿದೆ.

ಇತ್ತೀಚಿನ ಸಂಶೋಧನೆಗಳು ಕಳಲೆಗಳಲ್ಲಿ ಇರುವ ಪೌಷ್ಟಿಕಾಂಶಗಳ ಬಗ್ಗೆ ಹೊಸ ಬೆಳಕು ಚೆಲ್ಲಿವೆ. ಕಡಿಮೆ ಕ್ಯಾಲೊರಿ, ಹೆಚ್ಚು ನಾರಿನಾಂಶ, ಆಂಟಿಆಕ್ಸಿಡೆಂಟ್‌ಗಳು ಮತ್ತು ಹಲವು ಖನಿಜಾಂಶಗಳನ್ನು ಹೊಂದಿರುವ ಕಳಲೆಗಳು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: Bamboo Shoots: ಪೌಷ್ಟಿಕಾಂಶದ ಆಗರ ಕಳಲೆಯಿಂದ ಸಿಗುವ ಆರೋಗ್ಯ ಲಾಭವೇನು?

ಇಂದು ಅನೇಕ ಜನರು ಹೊಟ್ಟೆ ಸಮಸ್ಯೆ, ಅಜೀರ್ಣ, ಆಸಿಡ್ಟಿ ಮತ್ತು ಜೀರ್ಣಾಂಗದ ತೊಂದರೆಗಳಿಂದ ಬಳಲುತ್ತಿದ್ದಾರೆ. ಅತಿಯಾದ ಪ್ರಾಸೆ ಆಹಾರ, ಒತ್ತಡದ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಪದ್ಧತಿ ಇದರ ಪ್ರಮುಖ ಕಾರಣಗಳಾಗಿವೆ. ಈ ಹಿನ್ನೆಲೆಯ ಕಳಲೆಗಳು ಹೊಟ್ಟೆಯ ಒಳಗಿನ ಉತ್ತಮ ಬ್ಯಾಕ್ಟೀರಿಯಾಗಳನ್ನು ಬೆಳೆಸುವಲ್ಲಿ ಸಹಾಯಕ ವಾಗಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಹೊಟ್ಟೆಯ ಆರೋಗ್ಯ ಉತ್ತಮವಾಗಿದ್ದರೆ ದೇಹದ ಶಕ್ತಿಯ ಮಟ್ಟ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯಕ್ಕೂ ಒಳ್ಳೆಯ ಪರಿಣಾಮ ಉಂಟಾಗುತ್ತದೆ ಎನ್ನುವುದು ವೈದ್ಯ ಕೀಯ ಕ್ಷೇತ್ರದ ಅಭಿಪ್ರಾಯ.

ಇದಷ್ಟೇ ಅಲ್ಲದೆ, ಕಳಲೆಗಳು ದೇಹದ ತೂಕ ನಿಯಂತ್ರಣಕ್ಕೂ ಸಹಕಾರಿ ಆಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಕಡಿಮೆ ಕೊಬ್ಬು ಮತ್ತು ಹೆಚ್ಚು ನಾರಿನಾಂಶ ಇರುವು ದರಿಂದ ಹೊಟ್ಟೆ ತುಂಬಿದ ಭಾವನೆ ಹೆಚ್ಚು ಕಾಲ ಉಳಿಯುತ್ತದೆ. ಇದರಿಂದ ಅನಗತ್ಯ ಆಹಾರ ಸೇವನೆ ಕಡಿಮೆಯಾಗುವ ಸಾಧ್ಯತೆ ಇದೆ.

ಮಧುಮೇಹ ಸಮಸ್ಯೆ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟ ವನ್ನು ನಿಯಂತ್ರಿಸಲು ಸಹಾಯ ಮಾಡುವ ಆಹಾರಗಳ ಮೇಲೆ ಹೆಚ್ಚು ಗಮನ ಹರಿಸ ಲಾಗುತ್ತಿದೆ. ಈ ಸಾಲಿನಲ್ಲಿ ಕಳಲೆಗಳೂ ಒಂದು ಅಗ್ರಸ್ಥಾನ ಪಡೆಯುತ್ತಿವೆ. ಆರೋಗ್ಯದ ಜತೆಗೆ ಪರಿಸರದ ದೃಷ್ಟಿಯಿಂದಲೂ ಬಿದಿರು ಒಂದು ಮಹತ್ವದ ಸಸ್ಯವಾಗಿದೆ. ಬಿದಿರು ವೇಗವಾಗಿ ಬೆಳೆಯುತ್ತದೆ,

ಕಡಿಮೆ ಸಂಪನ್ಮೂಲಗಳಲ್ಲಿ ಬದುಕುತ್ತದೆ ಮತ್ತು ಪರಿಸರ ಸ್ನೇಹಿಯಾಗಿದೆ. ಹವಾಮಾನ ಬದಲಾವಣೆಯ ಬಗ್ಗೆ ವಿಶ್ವ ಚಿಂತಿಸುತ್ತಿರುವ ಈ ಸಂದರ್ಭದಲ್ಲಿ, ಬಿದಿರು ಆಧಾರಿತ ಆಹಾರಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಆದರೆ, ತಜ್ಞರು ಒಂದು ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಕಚ್ಚಾ ಕಳಲೆಗಳನ್ನು ನೇರವಾಗಿ ತಿನ್ನಬಾರದು. ಸರಿಯಾದ ರೀತಿಯಲ್ಲಿ ಬೇಯಿಸಿ ಅಥವಾ -ರ್ಮೆಂಟ್ ಮಾಡಿದ ನಂತರವೇ ಸೇವಿಸಬೇಕು. ಪಾರಂಪರಿಕ ಅಡುಗೆ ವಿಧಾನಗಳ ಮಹತ್ವ ಇಲ್ಲಿ ಮತ್ತೊಮ್ಮೆ ಸಾಬೀತಾಗುತ್ತದೆ.

ಇಂದು ಜಗತ್ತು ಮತ್ತೆ ಪಾರಂಪರಿಕ ಆಹಾರಗಳತ್ತ ಮುಖ ಮಾಡುತ್ತಿದೆ. ಅರಿಶಿನ, ಸಜ್ಜೆ, ರಾಗಿ ಹೇಗೆ ಮರುಜನ್ಮ ಪಡೆದವೋ, ಅದೇ ರೀತಿಯಲ್ಲಿ ಕಳಲೆಗಳಿಗೂ ಹೊಸ ಗುರುತು ಸಿಗುವ ಸಾಧ್ಯತೆ ಇದೆ. ಅಡುಗೆಮನೆಯ ಒಂದು ಸಾಮಾನ್ಯ ಪದಾರ್ಥವಾಗಿದ್ದ ಕಳಲೆ, ನಾಳೆಯ ಆರೋಗ್ಯಕರ ಬದುಕಿನ ಪ್ರಮುಖ ಆಹಾರವಾಗಬಹುದು ಎಂಬ ನಿರೀಕ್ಷೆ ಈಗ ಹೆಚ್ಚುತ್ತಿದೆ.