ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Narayana Yaaji Column: ಟ್ರಂಪ್‌ ತಂದಿಟ್ಟ ತಲೆನೋವು !

ಭಾರತ ಅಮೆರಿಕದ ಬಹುಮುಖ್ಯ ಭಾಗಿದಾರ ದೇಶವಾಗಿರುವುದರಿಂದ ಎಚ್1ಬಿ ಮತ್ತು ಗ್ರೀನ್ ಕಾರ್ಡ್‌ ಗಳ ಮೇಲಿರುವ ದೇಶದ ಮಿತಿಗಳನ್ನು ತೆಗೆದು ಹಾಕಲು ಪ್ರಯತ್ನಿಸಬೇಕು. ಟ್ರಂಪ್ ಕೌಶಲ್ಯಾ ಧಾರಿತ ಎಚ್1ಬಿ ಮತ್ತು ಗ್ರೀನ್ ಕಾರ್ಡ್ ಗಳ ಕಡೆ ಒಲವನ್ನು ತೋರುತ್ತಿರುವುದರಿಂದ ಆ ಕುರಿತು ಪ್ರಯತ್ನಿಸಿದರೆ ಗ್ರೀನ್ ಕಾರ್ಡ್ ಆಧಾರದಲ್ಲಿ ಅಲ್ಲಿ ಹುಟ್ಟುವ ಭಾರತೀಯ ಮೂಲದ ಮಕ್ಕಳಿಗೆ ರಕ್ಷಣೆಯನ್ನು ಕೊಡಿಸ ಬಹುದು. ಅಲ್ಲಿಯ ತನಕ ಅಮೆರಿಕದಲ್ಲಿರುವ ಭಾರತೀಯ ಮೂಲದವರಿಗೆ ತಲೆಬಿಸಿ ತಪ್ಪಿದ್ದಲ್ಲ

Narayana Yaaji Column: ಟ್ರಂಪ್‌ ತಂದಿಟ್ಟ ತಲೆನೋವು !

H1B Visa

Profile Ashok Nayak Jan 26, 2025 10:16 AM

ನಾರಾಯಣ ಯಾಜಿ

ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಾವು ಅಧಿಕಾರ ಸ್ವೀಕರಿಸಿದ ದಿನವೇ ಸುಮಾರು 80 ಕಾರ್ಯನಿರ್ವಹಣಾ ಆದೇಶಗಳನ್ನು ಹೊರಡಿಸಿದ್ದಾರೆ! ಇವುಗಳ ಪೈಕಿ, ‘ಜನ್ಮ ಆಧಾರಿತ ಪೌರತ್ವ’ದ ಆದೇಶವು, ಅಲ್ಲಿ ನೆಲೆಸಿರುವ ಭಾರತೀಯರ ಮೇಲೆ ಬಹಳ ಪರಿಣಾಮ ಬೀರುತ್ತದೆ. ಗ್ರೀನ್ ಕಾರ್ಡ್ ಹೊಂದಿದ ದಂಪತಿಗೆ ಜನಿಸಿದ ಮಕ್ಕಳು ಮಾತ್ರ ಯುಎಸ್ ಪೌರತ್ವ ಪಡೆಯುತ್ತಾರೆ ಎಂಬ ಈ ಹೊಸ ಆದೇಶ ನಿಜಕ್ಕೂ ಕ್ರಾಂತಿಕಾರಿ ನಡೆ. ಅಂದರೆ, ಎಚ್೧ಬಿ ವೀಸಾ ಪಡೆದು ಅಲ್ಲಿ ವೃತ್ತಿನಿರತರಾಗಿರುವ ಭಾರತೀಯರಿಗೆ ಅಲ್ಲಿ ಮಕ್ಕಳು ಹುಟ್ಟಿದರೆ, ಆ ಮಕ್ಕಳಿಗೆ ಅಲ್ಲಿನ ಪೌರತ್ವವು ತಕ್ಷಣ ದೊರಕುವುದಿಲ್ಲ; 1868ರಿಂದ ಲಭ್ಯವಿರುವ ಈ ಸೌಲಭ್ಯವನ್ನು ಟ್ರಂಪ್ ತೆಗೆದುಹಾಕಲು ಆದೇಶ ಹೊರಡಿಸಿದ್ದಾರೆ. ಅಕ್ರಮ ವಲಸಿಗರ ವಿರುದ್ಧ ಈ ನಡೆ ಎಂಬುದು ಅವರು ನೀಡುವ ನೆಪ. ಅಂದರೆ, ಹೊರಗಿನಿಂದ ಬಂದು, ಅಮೆರಿಕದ ಪೌರತ್ವವನ್ನು ಪಡೆಯುವವರ ಸಂಖ್ಯೆಯನ್ನು ಕಡಿಮೆಗೊಳಿಸಲು ಈ ಕ್ರಮ ಎಂಬುದು ಅವರ ಸಮರ್ಥನೆ. ಈಗ, ಈ ಆದೇಶವು ಸಂವಿಧಾನಕ್ಕೆ ವಿರುದ್ಧ ಎಂದು ಅಲ್ಲಿನ ನ್ಯಾಯಾಲಯ ಅಭಿಪ್ರಾಯ ಪಟ್ಟಿದ್ದರೂ, ಮುಂದಿನ ದಿನಗಳಲ್ಲಿ ಟ್ರಂಪ್ ಈ ನಿಟ್ಟಿ‌ ನಲ್ಲಿ ಇನ್ನಷ್ಟು ಬಿಗಿಯಾದ ಹೆಜ್ಜೆಗಳನ್ನಿಡಬಹುದು ಎಂದೇ ಯೋಚಿಸ ಲಾಗಿದೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ತಕ್ಷಣವೇ ಹೊರಡಿಸಿದ ಸುಮಾರು 80 ಕಾರ್ಯ ನಿರ್ವಹಣಾ ಆದೇಶಗಳು ಜಗತ್ತಿನ ಅನೇಕ ರಾಷ್ಟ್ರ್ರಗಳ ನಿದ್ದೆಯನ್ನು ಕೆಡಿಸಿವೆ. ಇಂದು ಅಮೆರಿಕದಲ್ಲಿ ಜ್ವರ ಬಂದರೆ ಭಾರತದಲ್ಲಿ ನೆಗಡಿಯಾಗುವಷ್ಟರ ಮಟ್ಟಿಗೆ ನಮ್ಮ ದೇಶದ ಜನರ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಅಲ್ಲಿನ ಅಧ್ಯಕ್ಷರು ಹೊರಡಿಸಿದ ಜನ್ಮಾಧರಿತ ನಾಗರಿಕತೆ. ಕಾರ್ಯ ನಿರ್ವಹಣಾ ಆದೇಶ ಹೊರಡಿಸಲು ಅಮೆರಿಕದ ಕಾಂಗ್ರೆಸ್‌ನ ಅನುಮೋದನೆಯ ಅಗತ್ಯವಿರುವು ದಿಲ್ಲ. ಫೆಡರಲ್ ಸರ್ಕಾರದ ಕಾರ್ಯಾಚರಣೆಗಳನ್ನು ನಿರ್ವಹಿಸಲು, ಅಸ್ತಿತ್ವದಲ್ಲಿರುವ ಕಾನೂನು ಗಳನ್ನು ಜಾರಿಗೊಳಿಸಲು ಅಥವಾ ಅವರ ಚಟುವಟಿಕೆಗಳಲ್ಲಿ ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳಿಗೆ ನಿರ್ದೇಶಿಸಲು ಕಾರ್ಯನಿರ್ವಾಹಕ ಆದೇಶಗಳನ್ನು ನೀಡುವ ಅಧಿಕಾರವನ್ನು ಅಧ್ಯಕ್ಷರು ಹೊಂದಿ ದ್ದಾರೆ. ಈ ಆದೇಶವು ಭಾರತ ಸರಕಾರ ಹೊರಡಿಸುವ ಸುಗ್ರೀವಾಜ್ಞೆಯ ರೀತಿಯದಲ್ಲ. ಸುಗ್ರೀವಾಜ್ಞೆ ಯನ್ನು ಹೊರಡಿಸಿದ ಆರು ತಿಂಗಳ ಒಳಗೆ ಅದನ್ನು ಸಂಸತ್ತು ಅನುಮೋದಿಸ ಬೇಕಾಗುತ್ತದೆ. ಕಾರ್ಯನಿರ್ವಹಣಾ ಆದೇಶ ಹಾಗಲ್ಲ; ಅಧ್ಯಕ್ಷ ತನಗನಿಸಿದ್ದನ್ನು ಮಾಡಲು ಇರುವ ಮಹತ್ವದ ಉಪಕರಣ ಇದು. ಇದು ತನಕ ಅಮೆರಿಕದ ಅಧ್ಯಕ್ಷರುಗಳನೇಕರು ಕಾರ್ಯನಿರ್ವಹಣಾ ಅದೇಶದ ಮೂಲಕವೇ ಅನೇಕ ಮಹತ್ವದ ಆಡಳಿತದ ಸುಧಾರಣೆಯನ್ನು ಜಾರಿಗೆ ತಂದಿದ್ದಾರೆ.

ಇದನ್ನೂ ಓದಿ: Narayana Yazi Column: ಡಿಂಕ್‌ ಮನೋಭಾವ ಮತ್ತು ಕುಸಿಯುತ್ತಿರುವ ಹವ್ಯಕ ಜನಸಂಖ್ಯೆ

ಅದರಲ್ಲಿ ಮಹತ್ವದ್ದೆಂದರೆ ಅಬ್ರಹಾಂ ಲಿಂಕನ್ ಜನವರಿ 1, 1863ರಂದು ಜಾರಿಗೆ ತಂದ ಗುಲಾಮ ಗಿರಿಯ ವಿಮೋಚನಾ ಆದೇಶ. ಅದೇ ರೀತಿ ಹ್ಯಾರಿ ಎಸ್. ಟ್ರೂಮನ್ 1948ರಲ್ಲಿ ಅಮೆರಿಕದ ಸೇನೆಯ ಲ್ಲಿದ್ದ ವರ್ಣ, ಲಿಂಗ, ಜನಾಂಗಿಯ ಬೇಧಗಳನ್ನು ನೀಷೇಸಿದ್ದರು. ಲಿಂಡನ್ ಜಾನ್ಸನ್ ಅವರು 1965 ರಲ್ಲಿ ಹೊರಡಿಸಿದ ಆದೇಶ ಫೆಡರಲ್ ಗುತ್ತಿಗೆದಾರರನ್ನು ವರ್ಣಬೇಧ, ಲಿಂಗ, ರಾಷ್ಟ್ರೀಯತೆಯ ಆಧಾರದಮೇಲೆ ಭೇದ ಮಾಡುವುದನ್ನು ನಿಷೇಧಿಸಿ ಎಲ್ಲರಿಗೂ ಸಮಾನ ಉದ್ಯೋಗಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಖಚಿತವಾದ ಕ್ರಮವನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡಿತು.

ಅತಿ ಹೆಚ್ಚು ಕಾರ್ಯನಿರ್ವಹಣಾ ಆದೇಶವನ್ನು ಹೊರಡಿಸಿದವರು ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್. ಅವರು ತಮ್ಮ ಅಧಿಕಾರಾವಧಿಯಲ್ಲಿ ಒಟ್ಟೂ 3721 ಆದೇಶವನ್ನು ಹೊರಡಿಸಿದ್ದರು. ಇಲ್ಲಿಯವರೆಗೆ ಹೊರಡಿಸಿದ ಹೆಚ್ಚಿನ ಆದೇಶಗಳು ಜನಪರವಾಗಿದ್ದು ಅವುಗಳ ವಿಷಯದಲ್ಲಿ ವಿವಾದಕ್ಕೆ ಆಸ್ಪದ ಕಡಿಮೆಯಾಗಿತ್ತು. ಆದರೆ ಟ್ರಂಪ್ ಎರಡನೆಯ ಸಲ ಅಧಿಕಾರ ಸ್ವೀಕರಿಸಿದ ದಿನಗಳಿಂದಲೇ ತಮ್ಮ ಮುಂದಿನ ಗುರಿಯೇನು ಎನ್ನುವದನ್ನು ಸ್ಪಷ್ಟಪಡಿಸಿದ್ದಾರೆ.

ಜನ್ಮ ಆಧಾರಿತ ಪೌರತ್ವ

ಟ್ರಂಪ್ ತಮ್ಮ ಇದುವರಿಗಿನ ಅಧಿಕಾರಾವಧಿಯಲ್ಲಿ ಮೊದಲ ಸಲ 220 ಮತ್ತು ಈಗಿನ 80 ಸೇರಿ ಒಟ್ಟೂ 300 ಆದೇಶಗಳನ್ನು ಹೊರಡಿಸಿದ್ದಾರೆ. ಇದೀಗ ಅವರು ಹೊರಡಿಸಿದ ಆದೇಶಗಳ ಪೈಕಿ ಮುಖ್ಯವಾದ ಅದರಲ್ಲಿಯೂ ಭಾರತೀಯರನ್ನು ಕಾಡುತ್ತಿರುವ ‘ಜನ್ಮಾಧರಿತ ಪೌರತ್ವ’ ಯ ಆದೇಶದ ಕುರಿತು ವಿವೇಚಿಸುವುದಾದರೆ, ಇದು ತನಕ ಅಮೆರಿಕದಲ್ಲಿ ಜನಿಸಿದ ಎನ್ನುವ ಕಾರಣಕ್ಕೆ ಅಲ್ಲಿನ ನಾಗರಿಕರರಾಗಿ ಬಿಡುತ್ತಿದ್ದರು. ವಿವೇಕ ರಾಮಸ್ವಾಮಿಯವರಂತೆ ನಂತರದ ದಿನಗಳಲ್ಲಿ ಅಂಥವರು ಅಮೆರಿಕದ ಅಧ್ಯಕ್ಷತೆಗೂ ಸ್ಪರ್ಧಿಸಬಹುದು. ಅಮೆರಿಕ ದೇಶವೇ ವಲಸಿಗರ ನಾಡು. ಮೂಲ ನಿವಾಸಿ ಗಳು ಅಲ್ಲಿ ನಿರ್ಲಕ್ಷಿತ ರಾಗಿದ್ದಾರೆ. ಹೊಸ ಆದೇಶದ ಪ್ರಕಾರ, ಗ್ರೀನ್ ಕಾರ್ಡ್ ಹೊಂದಿದವರಿಗೆ ಮಾತ್ರ ಈ ಸೌಲಭ್ಯ ಎಂದದ್ದಾರೆ ಟ್ರಂಪ್! (ಈ ಆದೇಶವು ಸಂವಿಧಾನಕ್ಕೆ ಅನುಗುಣವಾಗಿಲ್ಲ ಎಂದು ಈಗ ಅಲ್ಲಿನ ನ್ಯಾಯಾಲಯ ಹೇಳಿದೆ)

ಅಲ್ಲಿ ಈ ಜನ್ಮಾಧರಿತ ನಾಗರಿಕತೆ ಬಂದಿರುವುದು 1868 ರಲ್ಲಿ ಸಂವಿಧಾನಕ್ಕೆ ತಂದ 14 ತಿದ್ದುಪಡಿ ಯ ಮೂಲಕ. ಅಮೆರಿಕದ ಸಂವಿಧಾನಕ್ಕೆ 249 ವರ್ಷಗಳ ಇತಿಹಾಸವಿದೆ. ಇಲ್ಲಿನತನಕ ಅದರ ಒಟ್ಟೂ ತಿದ್ದುಪಡಿಗಳ ಸಂಖ್ಯೆ 27. ಭಾರತದ ಸಂವಿಧಾನದ ಈ 75 ವರ್ಷಗಳಲ್ಲಿ 106 ಸಲ ತಿದ್ದು ಪಡಿಗಳಾಗಿವೆ. ಅಮೆರಿಕದಲ್ಲಿ ಸಂವಿಧಾನದ ತಿದ್ದುಪಡಿ ಅಷ್ಟು ಸುಲಭವಲ್ಲ.

ಈಚಿನ ವರ್ಷ ಗಳಲ್ಲಿ ಅಧ್ಯಕ್ಷರಿಗಿರುವ ಈ ಅಧಿಕಾರದ ಮೇಲೆ ವ್ಯಾಪಕವಾದ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ.

  1. ಅಮೆರಿಕದ ಸಂವಿಧಾನದಲ್ಲಿ ಎಲ್ಲಿಯೂ ಅಧ್ಯಕ್ಷರಿಗೆ ಸಂವಿಧಾನಾತ್ಮಕವಾಗಿ ಈ ರೀತಿ ಆದೇಶ ವನ್ನು ಹೊರಡಿಸುವ ಅಧಿಕಾರವನ್ನು ನೀಡಿಲ್ಲ. ಆದರೆ ನಡಾವಳಿಕೆಯಂತೆ ಈ ಅಧಿಕಾರ ಅಧ್ಯಕ್ಷರ ಹುದ್ದೆಗೆ ಅಂತರ್ಗತವಾಗಿರುವ ಹಕ್ಕು ಎಂದೇ ಸ್ವೀಕೃತವಾಗಿದೆ.

2.ಅಧ್ಯಕ್ಷರ ವಿವೇಚನೆ: ಅಧಿಕಾರಪತ್ರಗಳು ಸಂವಿಧಾನಿಕ ಅಥವಾ ವರ್ಗಾಯಿಸಿದ ಅಧಿಕಾರಗಳ ಆಧಾರದಲ್ಲಿ ಹೊರಡಿಸಬೇಕಾದರೂ, ಅಧ್ಯಕ್ಷರಿಗೆ ಈ ಆದೇಶಗಳನ್ನು ನೀಡಲು ತುಂಬಾ ಸ್ವಾತಂತ್ರ್ಯ ವಿದೆ. ಇದು ಕಾಂಗ್ರೆಸ್ಸಿನ ಅನುಮೋದನೆ ಅವಶ್ಯಕವಿಲ್ಲದೆ ಬಹುಮತದಲ್ಲಿ ಕಾರ್ಯಗಳನ್ನು ರೂಪಿಸಲು ಸಾಧ್ಯವಾಗಿಸುತ್ತದೆ.

ಕಾನೂನು ಬಲವಿದೆ, ಆದರೆ ಶಾಶ್ವತವಲ್ಲ: ಅಧಿಕಾರಪತ್ರಗಳು ಕಾನೂನಿನ ಬಲವನ್ನು ಹೊಂದಿ ದ್ದು, ವೈಶಿಷ್ಟ್ಯಪೂರ್ಣ ನೀತಿಗಳನ್ನು ಅನುಷ್ಠಾನಗೊಳಿಸಬಹುದು. ಆದರೆ ಇವು ಶಾಶ್ವತವಲ್ಲ. ಕಾಂಗ್ರೆಸ್ಸು ಇದನ್ನು ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ರದ್ದುಪಡಿಸಬಹುದು. ಅದಕ್ಕೆ ಆರ್ಥಿಕ ಮೂಲವನ್ನು ಕೊಡದೇ ಇಂತಹ ಆದೇಶವನ್ನು ನಿರುಪಯೋಗಿ ಮಾಡಬಹುದು. ನ್ಯಾಯಾಂಗದ ಪ್ರವೇಶ ಅವುಗಳ ಪರಿಣಾಮವನ್ನು ಸೀಮಿತ ಮಾಡಬಹುದು ಅಥವಾ ರದ್ದುಪಡಿಸ ಬಹುದು.

ವಿವಾದಾತ್ಮಕ ಸ್ವರೂಪ

ಕಾರ್ಯನಿರ್ವಹಣಾ ಆದೇಶಗಳು ಸಾಮಾನ್ಯವಾಗಿ ಕಾಂಗ್ರೆಸ್ಸಿನ ಮಹತ್ವ ಕಡಿಮೆಮಾಡುವುದರಿಂದ ಹಾಗೂ ಅಧ್ಯಕ್ಷರಿಗೆ ಅನಿಯಮಿತ ಅಧಿಕಾರಗಳನ್ನು ಕೊಡುವುದರಿಂದ ಪ್ರಜಾಸತ್ತಾತ್ಮಕ ವಿಧಾನ ಗಳಿಗೆ ವಿರುದ್ಧವಾಗಿದೆ; ಶಾಸಕಾಂಗದ ಪಾತ್ರವನ್ನುದುರ್ಬಲಮಾಡುತ್ತದೆ ಎಂದು ಟೀಕಾಕಾರರು ವಾದಿಸುತ್ತಾರೆ.

ಅಕ್ರಮ ವಲಸಿಗರ ತಲೆನೋವು

ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯವಾಗಿ ಜನ್ಮಾಧರಿತ ಪೌರತ್ವವನ್ನು ಗಮನಿಸುವುದಾದರೆ, ಮೂಲತಃ ಇದು ಅಕ್ರಮ ವಲಸಿಗರ ವಿರುದ್ಧ ತಂದಿರುವುದಾಗಿದೆ. ಅಮೆರಿಕದಲ್ಲಿ ಇಂಥವರ ಸಂಖ್ಯೆ ಸುಮಾರು 11.7 ಮಿಲಿಯನ್. ಇದು ಅಲ್ಲಿನ ಜನಸಂಖ್ಯೆಯ 3.5% ರಷ್ಟಾಗುತ್ತದೆ. ಹೊಸ ಆದೇಶದ ಪ್ರಕಾರ, ತಂದೆ, ತಾಯಿ ಇಬ್ಬರಲ್ಲಿ ಯಾರಾದರೂ ಓರ್ವರು ಅಮೆರಿಕದ ಪೌರರಾಗಿದ್ದರೆ ಅಥವಾ ಗ್ರೀನ್ ಕಾರ್ಡ ಹೊಂದಿದ್ದರೆ ಮಾತ್ರ ಅವರ ಮಕ್ಕಳಿಗೆ ಅಲ್ಲಿನ ಪೌರತ್ವ ಸಿಗುತ್ತದೆ.

ಕಾನೂನು ಸವಾಲುಗಳು

ಅನೇಕ ಕಾನೂನು ತಜ್ಞರು ಈಗಾಗಲೇ ಈ ವಿಷಯದಲ್ಲಿ ಸ್ಪಷ್ಟನೆ ನೀಡಿದಂತೆ ಅಮೆರಿಕದ ಅಧ್ಯಕ್ಷರು ಸಂವಿಧಾನದಂತೆ ಕಾರ್ಯ ನಿರ್ವಹಿಸಬೇಕು. ಸಂವಿಧಾನಾತ್ಮಕವಾಗಿ (14 ತಿದ್ದುಪಡಿಯ ಪ್ರಕಾರ) ಜನ್ಮಾಧರಿತ ಪೌರತ್ವ ಮೂಲಭೂತ ಅಂಶವಾಗಿದ್ದು, ಅದರ ಪೂರ್ತಿಯಾಗಿಯಾಗಲೀ, ಅಥವಾ ಭಾಗಶಃವಾಗಲೀ ಅದರ ನಿರಾಕರಣೆ ಸ್ಪಷ್ಟವಾಗಿ ಸಂವಿಧಾನದತ್ತ ಹಕ್ಕಿನ ಉಲ್ಲಂಘನೆಯಾಗಿದೆ. ಕಾರ್ಯನಿರ್ವಹಣಾ ಆದೇಶಗಳು ಸಂವಿಧಾನ ಮತ್ತು ಅಸ್ತಿತ್ವದಲ್ಲಿರುವ ಕಾನೂನನ್ನು ಮೀರದಂತೆ ಕಾರ್ಯನಿರ್ವಹಿಸಬೇಕು.

ಅವು ಸಂವಿಧಾನವನ್ನು ಬದಲಾಯಿಸಲು ಅಥವಾ ಸರಳವಾಗಿ ಸಂವಿಧಾನದ ನಿಯಮಗಳನ್ನು ತಿರಸ್ಕರಿಸಲು ಬಳಸಲಾಗುವುದಿಲ್ಲ. ಹಾಗಾಗಿ ಟ್ರಂಪ್ ಅವರ ಜನ್ಮಕಾರಣ ಪೌರತ್ವವನ್ನು ನಿರಾಕರಿ ಸಲು ಕಾರ್ಯನಿರ್ವಹಣಾ ಆದೇಶ 14ನೆಯ ತಿದ್ದುಪಡಿಯ ಸ್ಪಷ್ಟವಾದ ಉಲ್ಲಂಘನೆ ಪ್ರಕ್ರಿಯೆ ಯಾಗುತ್ತದೆ.

14ನೇ ತಿದ್ದುಪಡಿ ಬದಲಾಯಿಸಲು, ಬದಲಾವಣೆಯು ಸಂವಿಧಾನಿಕ ತಿದ್ದುಪಡಿ ಅಥವಾ ಕಾನೂನು ಬದಲಾವಣೆ ಮೂಲಕ ಆಗಬೇಕಾಗುತ್ತದೆ, ಮತ್ತು ಅವು ಕಠಿಣ ಪ್ರಕ್ರಿಯೆಗಳಾಗಿವೆ.

ಸುಲಭವಿಲ್ಲ!

ಸಂವಿಧಾನದ ತಿದ್ದುಪಡಿ ಅಮೆರಿಕದಲ್ಲಿ ಅಷ್ಟು ಸುಲಭವೂ ಅಲ್ಲ. ಈಗಾಗಲೆ ಅಮೆರಿಕದಲ್ಲಿನ ಹಲವರು ಈ ಆದೇಶದ ವಿರುದ್ಧ ತಿರುಗಿ ಬಿದ್ದಿದ್ದಾರೆ. 22 ಅಮೆರಿಕದ ರಾಜ್ಯಗಳು ನ್ಯಾಯಾಲಯ ದಲ್ಲಿ ಟ್ರಂಪ್ ವಿರುದ್ಧ ಕೇಸನ್ನು ದಾಖಲಿಸಿವೆ. ಇದೀಗ ತಾನೇ ಬಂದ ಸುದ್ದಿಯಂತೆ ಸಿಯಾಟಲ್ಲಿನ ಫೆಡರಲ್ ನ್ಯಾಯಾಲಯದ ನ್ಯಾಯಧೀಶರಾದ ಜಾನ್ ಕಾಫೆನಾರ್ (84 ವರ್ಷ) ‘ಈ ಆದೇಶ ಸಂವಿಧಾನದ ನಿರ್ಲಜ್ಜ ಉಲ್ಲಂಘನೆಯಾಗಿದೆ’ ಎಂದು ಹೇಳಿ, ಈ ಆದೇಶಕ್ಕೆ ಹದಿನಾಲ್ಕು ದಿನಗಳ ಮಟ್ಟಿಗೆ ತಾತ್ಕಾಲಿಕ ತಡೆ ನೀಡಿದ್ದಾರೆ.

ಟ್ರಂಪ್ ಕೂಡಾ ಘಾಟಿ ಮನುಷ್ಯ, ಆತನ ವಿರುದ್ಧ ನಿರ್ಧಾರಗಳು ಬಂದರೆ ಆತ ಸುಪ್ರೀಂ ಕೋರ್ಟಿನ ಕದ ತಟ್ಟುತ್ತಾನೆ. ಏನೇ ಆದರೂ, ಅಕ್ರಮ ವಲಸಿಗರ ವಿರುದ್ಧ ಎಂದು ಟ್ರಂಪ್ ತೆಗೆದುಕೊಂಡಿರುವ ಇಂತಹ ಕಠಿಣ ನಿರ್ಣಯಗಳು, ಅಮೆರಿಕದಲ್ಲಿ ನೆಲೆಸಿರುವ ನಮ್ಮ ದೇಶದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವುದಂತೂ ನಿಜ.

ಭಾರತದ ಮುಂದಿರುವ ಆಯ್ಕೆಗಳು

ಭಾರತ ಅಮೆರಿಕದ ಬಹುಮುಖ್ಯ ಭಾಗಿದಾರ ದೇಶವಾಗಿರುವುದರಿಂದ ಎಚ್1ಬಿ ಮತ್ತು ಗ್ರೀನ್ ಕಾರ್ಡ್‌ಗಳ ಮೇಲಿರುವ ದೇಶದ ಮಿತಿಗಳನ್ನು ತೆಗೆದು ಹಾಕಲು ಪ್ರಯತ್ನಿಸಬೇಕು. ಟ್ರಂಪ್ ಕೌಶಲ್ಯಾ ಧಾರಿತ ಎಚ್1ಬಿ ಮತ್ತು ಗ್ರೀನ್ ಕಾರ್ಡ್ ಗಳ ಕಡೆ ಒಲವನ್ನು ತೋರುತ್ತಿರುವುದರಿಂದ ಆ ಕುರಿತು ಪ್ರಯತ್ನಿಸಿದರೆ ಗ್ರೀನ್ ಕಾರ್ಡ್ ಆಧಾರದಲ್ಲಿ ಅಲ್ಲಿ ಹುಟ್ಟುವ ಭಾರತೀಯ ಮೂಲದ ಮಕ್ಕಳಿಗೆ ರಕ್ಷಣೆಯನ್ನು ಕೊಡಿಸಬಹುದು. ಅಲ್ಲಿಯ ತನಕ ಅಮೆರಿಕದಲ್ಲಿರುವ ಭಾರತೀಯ ಮೂಲದವರಿಗೆ ತಲೆಬಿಸಿ ತಪ್ಪಿದ್ದಲ್ಲ.