ತುಂಟರಗಾಳಿ
ಸಿನಿಗನ್ನಡ
‘ಸು ಫ್ರಮ್ ಸೋ’ ಟಿಪ್ಪಣಿಗಳು...
‘ಸು ಫ್ರಮ್ ಸೋ’ ಸಿನಿಮಾ ಬರೀ ‘ಸೋ ಸೋ’ ಅಷ್ಟೇ.
‘ಸು ಫ್ರಮ್ ಸೋ’ ಸಿನಿಮಾ ನೋಡಿ ನಗು ಬಂದಿದ್ದಕ್ಕಿಂತ, “ಈ ಸಿನಿಮಾ ‘ರಾಮ ಶಾಮ ಭಾಮ’ಗಿಂತ ಹತ್ತು ಪಟ್ಟು ಚೆನ್ನಾಗಿದೆ" ಅಂತ ಯಾರೋ ಹೇಳಿದ್ದು ನೆನಪಿಸಿಕೊಂಡಿದ್ದಕ್ಕೇ ಜಾಸ್ತಿ ನಗು ಬಂತು. ಇದನ್ನ ಕಾಮಿಡಿ ಸಿನಿಮಾ ಅಂದ್ರೆ ಅದರ ಅರ್ಥ ಕಾಮಿಡಿ ಸಿನಿಮಾ ಮಾಡೋದು ತುಂಬಾ ಸುಲಭ. ‘ನೀವು ಜೀಪಲ್ಲಿ ಬರಲ್ವಾ’ ಅಂದಾಗ ‘ಇಲ್ಲ ನಾನು ವಿಮಾನದಲ್ಲಿ ಬರ್ತೀನಿ’ ಅನ್ನೋ ಡೈಲಾಗ್ ಕೇಳಿ ನೀವು ಬಿದ್ದು ಬಿದ್ದು ನಗ್ತೀರಾ ಅಂದ್ರೆ ‘ಸು ಫ್ರಮ್ ಸೋ’ ಕಾಮಿಡಿ ಸಿನಿಮಾನೇ.
ಅಗತ್ಯಕ್ಕಿಂತ ಜಾಸ್ತಿ ‘ಸೆನ್ಸ್ ಆಫ್ ಹ್ಯೂಮರ್ ಇರೋರಿಗೆ ಬಿಕ್ಕಿ ಬಿಕ್ಕಿ ನಗುವಷ್ಟು ಇಷ್ಟ ಆಗುವ ಚಿತ್ರ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದವರು ಮೈಮೇಲೆ ದೆವ್ವ ಬಂದವರಂತೆ ನಕ್ಕಿದ್ದು ಯಾಕೆ ಅನ್ನೋದು ಅರ್ಥವಾಗದ ಪ್ರಶ್ನೆ. ಉತ್ತರ ಕರ್ನಾಟಕದವರು ‘ಹುಚ್ ಸೂ..ಮಗನೆ’ ಅಂದ್ರೆ, ದಕ್ಷಿಣ ಕನ್ನಡದವರು ‘ಲೇ ಬ್ಯಾವರ್ಸಿ’ ಅಂದ್ರೆ ಸಾಕು ನಮ್ಮ ಬೆಂಗಳೂರು ಜನ ಬಾಯಿತುಂಬಾ ನಗ್ತಾರೆ. ಅವರನ್ನು ನಗಿಸೋದು ಸುಲಭ. ಮೊದಲೆರಡು ವಾರ ‘ಹೌಸ್ ಫುಲ್’, ಆಮೇಲೆ ‘ಗಲ್ಲಾ ನಿಲ್’ ಅನ್ನುವಂತೆ ನಾಲ್ಕು ವಾರ ಚಿತ್ರಮಂದಿರದಲ್ಲಿ ಓಡಿದ ಚಿತ್ರ 150 ಕೋಟಿಗೂ ಹೆಚ್ಚು ದುಡಿದಿದ್ದು ಮಾತ್ರ ವಿಸ್ಮಯ.
ಚಿತ್ರಮಂದಿರದಲ್ಲಿ 150 ಕೋಟಿ ಗಳಿಸಿದ ಚಿತ್ರದ ಎಲ್ಲ ಭಾಷೆಯ ಓಟಿಟಿ, ಸ್ಯಾಟಲೈಟ್ ರೈಟ್ಸ್ ಸೇರಿ ಸಿಕ್ಕಿದ್ದು ಬರೀ 7 ಕೋಟಿ ಅನ್ನೋದು ಇನ್ನೂ ದೊಡ್ಡ ವಿಸ್ಮಯ.
ಇದನ್ನೂ ಓದಿ: Hari Paraak Column: ಮೋದಿ: ಇನ್ಮೇಲೆ ʼಡೊಲಾಂಡ್ʼ ಟ್ರಂಪ್ ಅಂತ ಯಾರನ್ನ ಕರೀಲಿ ?
ಲೂಸ್ ಟಾಕ್ - ಖೇಮು-ಸೋಮು
ಸೋಮು: ಏನ್ ಖೇಮು, ಮತ್ತೆ ಯಾವುದೋ ಸ್ವಾಮೀಜಿ ಕರ್ಮಕಾಂಡ ಬಯಲಾಗಿದೆಯಂತೆ?
- ಖೇಮು: ಅಯ್ಯೋ ಅದು ಕರ್ಮಕಾಂಡ ಅಲ್ಲ ಕಣ್ಲಾ, ಕಾಮಕಾಂಡ. ಇತ್ತೀಚೆಗೆ ತುಂಬಾ ಸಾಮಾನ್ಯ ಆಗಿರೋ ಕಾಮನ್ ಕಾಂಡ.
ಸೋಮು: ಅದ್ಸರಿ, ಯಾವ ಮಠದ ಸ್ವಾಮೀಜಿ ಅಂತೆ ಈ ಕೆಲಸ ಮಾಡಿರೋದು?
- ಯಾವುದೋ ಒಂದು ಮಠ ಬಿಡ್ಲಾ. ಆದ್ರೆ, ನನಗಂತೂ ಸ್ವಾಮೀಜಿಗಳ ಬಗ್ಗೆ ತಿರುಗಾ ‘ಮುರುಗಾ’ ಇದೇ ಸುದ್ದಿ ಕೇಳಿ ಸಾಕಾಗಿದೆ.
ಸೋಮು: ಅದೂ ನಿಜ. ಆದ್ರೂ ಈ ಸ್ವಾಮೀಜಿಗಳು ಅಂದುಕೊಂಡವರಿಗೆ ‘ನಾನು, ನನ್ನದು’ ಅನ್ನೋದೆಲ್ಲ ಇರಲ್ಲ ಅಂತಾರಲ್ಲ, ಮತ್ಯಾಕೆ ಹಿಂಗೆ ಮಾಡ್ತಾರೆ?
- ಖೇಮು: ಲೋ, ‘ನಾನು’ ಅನ್ನೋದು ಅಷ್ಟು ಸುಲಭವಾಗಿ ಹೋಗಲ್ಲ ಕಣೋ, ಅಲ್ಲದೆ ಈ ಸ್ವಾ‘ಮಿ’ಗಳ ಹೆಸರ ME ಇರುತ್ತೆ. ಮರೀಬೇಡ.
ಸೋಮು: ಆಸೆಗಳನ್ನ ನಿಯಂತ್ರಣ ಮಾಡಿಕೊಳ್ಳೋಕೆ ಆಗಲ್ಲ ಅನ್ನೋ ಇಂಥ ಸ್ವಾಮೀಜಿ ಗಳಿಗೆ ಬೇರೆಯವರೇ ಉಪದೇಶ ಮಾಡೋ ಹಾಗಾಗಿದೆ ಅಲ್ವಾ?
- ಖೇಮು: ಹೌದು ಕಣ್ಲಾ, ಸುಮ್ನೆ ಸಾಮಾನ್ಯ ಜನರ ಹಾಗೆ ಬದುಕಿ, ಕಾಯಕವೇ ಕೈಕೆಲಸ, ಸಾರಿ, ಕೈಲಾಸ ಅಂತ ಸುಮ್ನೆ ಇರಬೇಕು. ಈ ಆಶ್ರಮದಲ್ಲಿ ಶ್ರಮ ಹಾಕೋ ಕೆಲಸ ಯಾಕೆ ಮಾಡ್ಬೇಕು ಅಂತ.
ಸೋಮು: ದೇಹದ ಆಸೆ ಕಂಟ್ರೋಲ್ ಮಾಡ್ಕೊಳ್ಳೋಕಾಗ್ದೆ ಎಲ್ಲಾ ಕಡೆ ಈಗ ಟ್ರೋಲ್ ಆಗ್ತಾ ಇದ್ದಾರಲ್ಲ, ನಂಗಂತೂ ನಂಬೋಕೇ ಆಗಲ್ಲ.
- ಖೇಮು: ನಂಬೋದು ಕಷ್ಟನೇ. ಆದ್ರೆ, ಕಾವಿ ಹಾಕಿದ ಮಾತ್ರಕ್ಕೆ ದೇಹದಲ್ಲಿ ಕಾವಿರಲ್ಲ ಅಂತ ಹೆಂಗಪ್ಪಾ ಹೇಳೋಕಾಗುತ್ತೆ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಗರ್ಲ್ ಫ್ರಂಡ್ ಜತೆ ಜಾಲಿಟ್ರಿಪ್ ಹೋಗಬೇಕು ಅಂತ ಖೇಮು ಡಿಸೈಡ್ ಮಾಡಿದ್ದು ಆಯ್ತು. ಆದ್ರೆ ಹೆಂಡತಿಗೆ ಏನು ಸುಳ್ಳು ಹೇಳೋದು ಅಂತ ಯೋಚನೆ ಮಾಡಿದ. ಸರಿ, ಆಫೀಸಿನಿಂದ ಬಂದವನೇ, “ನಾಳೆಯಿಂದ 3 ದಿನ ಆಫೀಸ್ ಬ್ಯುಸಿನೆಸ್ ಟೂರ್ ಇದೆ" ಅಂತ ಹೆಂಡತಿ ಖೇಮುಶ್ರೀಗೆ ಸುಳ್ಳು ಹೇಳಿದ. “ಬೆಳಗ್ಗೆ ಬೇಗನೇ ಹೋಗಬೇಕು, ನನ್ನ ಎಲ್ಲಾ ಲಗೇಜ್ ಅನ್ನು ಈಗ್ಲೇ ಪ್ಯಾಕ್ ಮಾಡು. ಬೆಳಗ್ಗೆ ಲೇಟ್ ಆಗುತ್ತೆ" ಅಂತ ಹೇಳಿದ. “ಆಫೀಸ್ ಬ್ರೀಫ್ ಕೇಸ್‌ನಲ್ಲಿ ಈ ಎಲ್ಲಾ ಫೈಲ್‌ಗಳನ್ನೂ, ಡಾಕ್ಯುಮೆಂಟ್ಸ್ ಅನ್ನೂ ಇಡು. ನನ್ನ ಪರ್ಸನಲ್ ಸಾಮಾನುಗಳನ್ನು ಇನ್ನೊಂದು ಸೂಟ್‌ಕೇಸ್ ನಲ್ಲಿ ಇಡು. ಅಂದಹಾಗೆ ನನ್ನ ಆ ಬ್ಲೂ ಕಲರ್ ಸಿಲ್ಕ್ ಪೈಜಾಮ ಇಡೋದನ್ನು ಮರೀಬೇಡ" ಅಂತ ಹೆಂಡತಿಗೆ ಹೇಳಿ ಬಾತ್‌ರೂಮ್‌ಗೆ ಹೋದ ಖೇಮು. ಸರಿ ಖೇಮುಶ್ರೀ ಎಲ್ಲವನ್ನೂ ಪ್ಯಾಕ್ ಮಾಡಿದಳು. ಬೆಳಗ್ಗೆ ಬೇಗ ಎದ್ದವನೇ ಖೇಮು ಟೂರ್‌ಗೆ ಹೊರಟ. ಆ ಮೂರು ದಿನದಲ್ಲಿ ಖೇಮುಶ್ರೀ ಖೇಮುಗೆ ಹಲವಾರು ಬಾರಿ ಕಾಲ್ ಮಾಡಿದಳು. ಆದರೆ ಖೇಮು ಕಾಲ್ ರಿಸೀವ್ ಮಾಡಲಿಲ್ಲ. ‘ನಾನು ಮೀಟಿಂಗ್‌ನಲ್ಲಿ ಇದ್ದೇನೆ. ಬ್ಯುಸಿ’ ಅಂತ ಮೆಸೇಜ್ ಮಾಡುತ್ತಿದ್ದ.
ಸರಿ ಮೂರು ದಿನ ಕಳೆಯಿತು. ಖೇಮು ವಾಪಸ್ ಬಂದ. “ಏನು ಬ್ಯುಸಿನೆಸ್ ಟೂರ್‌ನಲ್ಲಿ ತುಂಬಾ ಬ್ಯುಸಿಯಾಗಿದ್ರಿ ಅನ್ಸುತ್ತೆ. ತುಂಬಾ ಸುಸ್ತಾಗಿದ್ದೀರ" ಅಂದಳು ಖೇಮುಶ್ರೀ. “ಅಯ್ಯೋ, ಅದ್ಯಾಕ್ ಕೇಳ್ತೀಯ, ಸಿಕ್ಕಾಪಟ್ಟೆ ಕೆಲಸ" ಅಂದ ಖೇಮು, “ಅದ್ಸರಿ ನನ್ನ ಬ್ಲೂ ಕಲರ್ ಸಿಲ್ಕ ಪೈಜಾಮ ಪ್ಯಾಕ್ ಮಾಡು ಅಂತ ಹೇಳಿದ್ದೇ ಅಲ್ವಾ, ಅದನ್ನ ನೀನು ಮರೆತೇ ಬಿಟ್ಟಿದ್ದೀಯ" ಅಂದ. ಅದಕ್ಕೆ ಖೇಮುಶ್ರೀ ಹೇಳಿದಳು, “ಮರೆತಿರಲಿಲ್ಲ, ನಿಮ್ಮ ಪರ್ಸನಲ್ ಬ್ಯಾಗ್‌ನಲ್ಲಿ ಜಾಗ ಇರಲಿಲ್ಲ, ಅದಕ್ಕೇ ಅದನ್ನ ಆಫೀಸ್ ಬ್ರೀಫ್ ಕೇಸ್‌ನಲ್ಲಿ ಇಟ್ಟಿದ್ದೆ".
ಲೈನ್ ಮ್ಯಾನ್
ಮದ್ದೂರಲ್ಲಿ ಪೊಲೀಸರಿಂದ ಲಾಠಿ ಏಟು ತಿಂದ ಹುಡುಗಿಯ ಕಷ್ಟ
- ಬಡವರ ಹೊಟ್ಟೆ ಮೇಲೆ ಹೊಡಿಯೋದು ನೋಡಿದ್ದೆ, ಇವ್ರು ಕುಂಡೆ ಮೇಲೆ ಹೊಡೆದ್ರು
ಈ ಹುಡುಗಿಗೆ ಹೊಸ ಸಿನಿಮಾ ಆಫರ್ ಬಂದಿದೆಯಂತೆ. ಸಿನಿಮಾ ಹೆಸರು-
- ‘ಅಂಡೊಂದಿತ್ತು ಕಾಲ’
ಆ ಸಿನಿಮಾದ ಹಾಡು
- ‘ಬ್ಯಾಕಲ್’ ಬಂಗಾರಿ
ಸುದೀಪ್ ಅವರ ಹೊಸ ಸಿನಿಮಾದಲ್ಲಿ ಈ ಹುಡುಗಿ ಹೇಗೆ ಪಾತ್ರ ಗಿಟ್ಟಿಸ್ತಾಳೆ?
- ಡೈರೆಕ್ಟರ್ ಹತ್ರ ಹೋಗಿ ಹೇಳ್ತಾಳೆ, “ನಂಗೊಂದು ರೋಲ್ ಕೊಡಿ, ನಂಗೂ ‘ಮಾರ್ಕ್’ ಇದೆ, ಅಂಡಿನ ಮೇಲೆ"
ಆ ಹುಡುಗಿ ಸೂಪರ್ ಸ್ಟಾರ್ ಆಗಬೇಕು ಅಂದ್ರೆ ಏನ್ ಮಾಡಬೇಕು
- ‘ಬ್ಯಾಕ್ ಟು ಬ್ಯಾಕ್ ಹಿಟ್’ ಕೊಡಬೇಕು
ಆ ಹುಡುಗಿ ಈಗ ಏನಂತ ಫೇಮಸ್ಸು?
- ಬ್ಯಾಕ್‌ಸ್ಟ್ರೀಟ್ ಗರ್ಲ್
ಸ್ಕೂಲಲ್ಲಿ ಓದುವಾಗ ಆ ಹುಡುಗಿ ಏನಾಗಿದ್ಲು?
- ಬ್ಯಾಕ್ ಬೆಂಚರ್
ದಪ್ಪ ಇರೋವ್ರಿಗೆ ಅದರಿಂದ ಕೆಲವು ಸಲ ಸಹಾಯ ಆದಾಗ ಅನ್ನಿಸೋದು..
- "Its worth the weight'!
ಗಂಡು ಚಿರತೆ ಸೆರೆಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಿಸುವ ತಂತ್ರ
- ನಿಜವಾದ ಹನಿ ಟ್ರ್ಯಾಪ್ ಅಂದ್ರೆ ಇದೇ. ಮೂತ್ರದ ಹನಿ ಸಿಂಪಡಿಸಿದ್ದಾರೆ.
ಕೈನ ಎಲ್ಲಾ ಬೆರಳಲ್ಲೂ ಉಂಗುರ ಹಾಕಿಕೊಂಡಿರುವವನು
- ‘ಉಂಗ್ರ’ ನರಸಿಂ