ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಫ್ಯಾಂಟಮ್‌ʼಗೆ ತೊಂಬತ್ತು

ಫ್ಯಾಂಟಮ್‌ನ ಕಥೆ ಆರಂಭವಾಗುವುದು 1536ರಲ್ಲಿ. ಸಮುದ್ರದೇವತೆಗಳ ನಾಡು ಎಂದು ಕರೆಯುತ್ತಿದ್ದ ಬೆಂಗಾ ತೀರದಲ್ಲಿ ಕಡಲ್ಗಳ್ಳರ ದಾಳಿಗೆ ಒಳಗಾದ ನಾವಿಕ ಕ್ರಿಸ್ಟೋಫರ್ ಸ್ಟ್ಯಾಂಡ್ ಎಂಬಾತ ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಮತ್ತು ಜಗತ್ತಿನಾದ್ಯಂತ ಕಡಲ್ಗಳ್ಳತನ ಹಾಗೂ ಕ್ರೌರ್ಯವನ್ನು ಕೊನೆಗಾಣಿಸುವುದಾಗಿ ಸಮುದ್ರದ ತಟದಲ್ಲಿ ಬಿದ್ದಿದ್ದ ಹಂತಕನ ತಲೆಬುರುಡೆಯ ಮೇಲೆ ಆಣೆ ಮಾಡುತ್ತಾನೆ.

Vishweshwar Bhat Column: ಫ್ಯಾಂಟಮ್‌ʼಗೆ ತೊಂಬತ್ತು

-

ಸಂಪಾದಕರ ಸದ್ಯಶೋಧನೆ

ನನ್ನ ಕಾಮಿಕ್ಸ್ ಲೋಕದಲ್ಲಿ ಸೂಪರ್ ಹೀರೋಗಳ ಪಟ್ಟಿ ದೊಡ್ಡದಿದೆ. ಆದರೆ, ಯಾವುದೇ ಅತೀಂದ್ರಿಯ ಶಕ್ತಿಗಳಿಲ್ಲದೇ, ಕೇವಲ ತನ್ನ ಬುದ್ಧಿವಂತಿಕೆ ಮತ್ತು ದೈಹಿಕ ಬಲದಿಂದ ದುಷ್ಟರನ್ನು ಶಿಕ್ಷಿಸುವ, ಮುಖವಾಡ ಧರಿಸಿದ ಮೊದಲ ಹೀರೋ ಎಂದರೆ ಅದು ‘ಫ್ಯಾಂಟಮ್’. 1936ರ ಫೆಬ್ರವರಿ 17ರಂದು ಅಮೆರಿಕದ ಲೀ ಫಾಕ್ ಅವರ ಕಲ್ಪನೆಯಲ್ಲಿ ಮೂಡಿಬಂದ ಈ ಪಾತ್ರಕ್ಕೆ ಈಗ ಭರ್ತಿ 90 ವರ್ಷ.

ಫ್ಯಾಂಟಮ್‌ನ ಕಥೆ ಆರಂಭವಾಗುವುದು 1536ರಲ್ಲಿ. ಸಮುದ್ರದೇವತೆಗಳ ನಾಡು ಎಂದು ಕರೆಯುತ್ತಿದ್ದ ಬೆಂಗಾ ತೀರದಲ್ಲಿ ಕಡಲ್ಗಳ್ಳರ ದಾಳಿಗೆ ಒಳಗಾದ ನಾವಿಕ ಕ್ರಿಸ್ಟೋಫರ್ ಸ್ಟ್ಯಾಂಡ್ ಎಂಬಾತ ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಮತ್ತು ಜಗತ್ತಿನಾದ್ಯಂತ ಕಡಲ್ಗಳ್ಳತನ ಹಾಗೂ ಕ್ರೌರ್ಯವನ್ನು ಕೊನೆಗಾಣಿಸುವುದಾಗಿ ಸಮುದ್ರದ ತಟದಲ್ಲಿ ಬಿದ್ದಿದ್ದ ಹಂತಕನ ತಲೆಬುರುಡೆಯ ಮೇಲೆ ಆಣೆ ಮಾಡುತ್ತಾನೆ.

ಅಂದಿನಿಂದ ಆರಂಭವಾದ ಈ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ. ಸ್ವಾರಸ್ಯಕರ ಸಂಗತಿಯೆಂದರೆ, ಫ್ಯಾಂಟಮ್ ಅಮರನಲ್ಲ. ಪ್ರಸ್ತುತ ಕಾಮಿಕ್ಸ್‌ನಲ್ಲಿ ನಾವು ನೋಡುತ್ತಿರು ವುದು 21ನೇ ತಲೆಮಾರಿನ ಫ್ಯಾಂಟಮ್. ತಂದೆಯಿಂದ ಮಗನಿಗೆ ಈ ಜವಾಬ್ದಾರಿ ಹಸ್ತಾಂತರ ವಾಗುತ್ತಾ ಸಾಗುತ್ತದೆ.

ಇದನ್ನೂ ಓದಿ: Vishweshwar Bhat Column: ಏನಿದು ಡನ್ನಿಂಗ್-ಕ್ರೂಗರ್ ಎಫೆಕ್ಟ್ ?

ಹೊರಜಗತ್ತಿಗೆ ಫ್ಯಾಂಟಮ್ ಎಂದರೆ 400 ವರ್ಷಗಳಿಂದ ಬದುಕಿರುವ ಒಬ್ಬನೇ ವ್ಯಕ್ತಿ ಎಂಬ ನಂಬಿಕೆಯಿದೆ. ಹಾಗಾಗಿಯೇ ಅವನನ್ನು ‘ನಡೆಯುವ ಪ್ರೇತ’ (The Ghost Who Walks) ಎಂದು ಕರೆಯುತ್ತಾರೆ. ಫ್ಯಾಂಟಮ್ ಇತರ ಸೂಪರ್ ಹೀರೋಗಳಿಗಿಂತ ಭಿನ್ನವಾಗಿ ನಿಲ್ಲಲು ಕೆಲವು ಕಾರಣಗಳಿವೆ.

ಕಾಮಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಮೈಗೆ ಅಂಟಿಕೊಳ್ಳುವಂಥ ಕಾಸ್ಟ್ಯೂಮ್ ಧರಿಸಿದ ಹೀರೋ ಇವನು. ಮೂಲತಃ ಲೀ ಫಾಕ್ ಇದನ್ನು ಬೂದು ಬಣ್ಣದಲ್ಲಿ ಕಲ್ಪಿಸಿ ಕೊಂಡಿ‌ದ್ದರು, ಆದರೆ ಮುದ್ರಣದ ತಾಂತ್ರಿಕ ಕಾರಣದಿಂದ ಅದು ನೇರಳೆ ಬಣ್ಣಕ್ಕೆ ತಿರುಗಿತು. ಫ್ಯಾಂಟಮ್ನ ಕಣ್ಣುಗಳು ಮುಖವಾಡದ ಹಿಂದೆ ಬಿಳಿಯಾಗಿ ಕಾಣುತ್ತವೆ. ಇದು ಅವನಲ್ಲಿ ಒಂದು ರಹಸ್ಯಮಯ ಮತ್ತು ಭಯಾನಕ ಕಳೆಯನ್ನು ನೀಡುತ್ತದೆ.

ಫ್ಯಾಂಟಮ್ ತನ್ನ ಎರಡೂ ಕೈಗಳಲ್ಲಿ ಎರಡು ವಿಭಿನ್ನ ಉಂಗುರಗಳನ್ನು ಧರಿಸುತ್ತಾನೆ. ಬಲಗೈನಲ್ಲಿ ‘ತಲೆಬುರುಡೆ’ಯ ಗುರುತಿನ ಉಂಗುರವಿದ್ದು, ಇದನ್ನು ಹೊಡೆದಾಗ ದುಷ್ಟರ ಮುಖದ ಮೇಲೆ ಶಾಶ್ವತವಾಗಿ ತಲೆಬುರುಡೆಯ ಗುರುತು ಮೂಡುತ್ತದೆ. ಎಡಗೈನಲ್ಲಿ ‘ಒಳ್ಳೆಯತನ’ದ ಗುರುತಿನ ಉಂಗುರವಿದ್ದು, ಇದು ತನ್ನ ರಕ್ಷಣೆಗೆ ಬರುವವರಿಗೆ ಫ್ಯಾಂಟಮ್ ನೀಡುವ ರಕ್ಷಣೆಯ ಸಂಕೇತ.

ಫ್ಯಾಂಟಮ್ ನ ವಾಸಸ್ಥಾನ ‘ತಲೆಬುರುಡೆ ಗುಹೆ’. ಬೆಂಗಾ ಎಂಬ ಕಾಲ್ಪನಿಕ ದೇಶದ ದಟ್ಟ ಅರಣ್ಯದ ಒಳಗೆ ಇದು ನೆಲೆಸಿದೆ. ಅವನಿಗೆ ಸಹಾಯವಾಗಿ ‘ಬಂದರ್’ ಎಂಬ ಕುಳ್ಳಗಿನ ಬುಡಕಟ್ಟು ಜನಾಂಗದವರಿದ್ದಾರೆ.

ಫ್ಯಾಂಟಮ್ ನ ನಂಬಿಕಸ್ತ ನಾಯಿ ‘ಡೆವಿಲ್’ ಮತ್ತು ಕುದುರೆ ‘ಹೀರೋ’ ಕಾಮಿಕ್ಸ್ ಪ್ರಿಯರಿಗೆ ಚಿರಪರಿಚಿತ. ಫ್ಯಾಂಟಮ್ ಕೇವಲ ಕಾಡಿನ ರಾಜನಲ್ಲ, ಅವನು ಸುಧಾರಿತ ತಂತ್ರಜ್ಞಾನ ಹೊಂದಿರುವ ‘ಜಂಗಲ್ ಪೆಟ್ರೋಲ’ ಎಂಬ ಪೊಲೀಸ್ ಪಡೆಯ ಮುಖ್ಯಸ್ಥನೂ ಹೌದು. ಭಾರತೀಯ ಕಾಮಿಕ್ಸ್ ಓದುಗರಿಗೆ ಫ್ಯಾಂಟಮ್‌ ಅಚ್ಚುಮೆಚ್ಚು.

60 ಮತ್ತು 70ರ ದಶಕದಲ್ಲಿ ‘ಇಂದ್ರಜಾಲ ಕಾಮಿಕ್ಸ್’ ಮೂಲಕ ಫ್ಯಾಂಟಮ್ ಭಾರತಕ್ಕೆ ಲಗ್ಗೆ ಇಟ್ಟ. ಲೀ ಫಾಕ್ ಆರಂಭದಲ್ಲಿ ಕಥೆಯ ಹಿನ್ನೆಲೆಯನ್ನು ಭಾರತವೆಂದೇ ಅಂದುಕೊಂಡಿ ದ್ದರು. ಹಾಗಾಗಿಯೇ ಇಲ್ಲಿ ಬರುವ ಹೆಸರುಗಳಾದ ‘ಬೆಂಗಾ’, ‘ಸಿಂಗ್ ಬ್ರದರ್‌ಹುಡ್’ ಕಡಲ್ಗಳ್ಳರು ಭಾರತೀಯ ನಂಟನ್ನು ನೆನಪಿಸುತ್ತವೆ. ‌

ಕಿಶೋರ್ ಕುಮಾರ್ ಅವರಂಥ ದಿಗ್ಗಜರೂ ಫ್ಯಾಂಟಮ್ನ ದೊಡ್ಡ ಅಭಿಮಾನಿಗಳಾಗಿದ್ದರು. ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಫ್ಯಾಂಟಮ್ ಕಥೆಗಳು ಅನುವಾದ ಗೊಂಡು ಮನೆಮಾತಾಗಿದ್ದವು. ಹೆಚ್ಚಿನ ಸೂಪರ್ ಹೀರೋಗಳು ಏಕಾಂಗಿಗಳು. ಆದರೆ ಫ್ಯಾಂಟಮ್ ತನ್ನ ಪ್ರೇಯಸಿ ಡಯಾನಾ ಪಾಮರ್‌ಳನ್ನು ಮದುವೆಯಾಗಿ, ಇಬ್ಬರು ಮಕ್ಕಳನ್ನು (ಕಿಟ್ ಮತ್ತು ಹೆಲಾಯಿಸ್) ಹೊಂದಿರುವ ಸಂಸಾರಿ. ಇದು ಅವನ ಪಾತ್ರಕ್ಕೆ ಹೆಚ್ಚಿನ ಮಾನವೀಯ ಮೌಲ್ಯವನ್ನು ನೀಡುತ್ತದೆ.

ಅವನು ತನ್ನ ಮಕ್ಕಳನ್ನು ಮುಂದಿನ ‘ಫ್ಯಾಂಟಮ್’ ಆಗಿ ರೂಪಿಸಲು ಕಾಡಿನ ಶಿಕ್ಷಣ ನೀಡುತ್ತಾನೆ. ಫ್ಯಾಂಟಮ್ ಕಥೆಗಳು ಕೇವಲ ಸಾಹಸವಲ್ಲ, ಅವುಗಳಲ್ಲಿ ಒಂದು ನೈತಿಕ ಸಂದೇಶವಿರುತ್ತದೆ. ‘ಯಾರು ಅನ್ಯಾಯ ಮಾಡುತ್ತಾರೋ ಅವರಿಗೆ ಫ್ಯಾಂಟಮ್ ಶಿಕ್ಷೆ ನೀಡುತ್ತಾನೆ’ ಎಂಬುದು ಅಲ್ಲಿನ ನಾಣ್ಣುಡಿ.

ಪ್ರಾಣಿಗಳನ್ನು ಹಿಂಸಿಸುವುದು, ಕಾಡನ್ನು ನಾಶ ಮಾಡುವುದು ಮತ್ತು ಸ್ತ್ರೀ ಶೋಷಣೆಯ ವಿರುದ್ಧ ಫ್ಯಾಂಟಮ್ ಸದಾ ಧ್ವನಿ ಎತ್ತುತ್ತಾನೆ. ತೊಂಬತ್ತು ವರ್ಷಗಳಾದರೂ ಫ್ಯಾಂಟಮ್ನ ಜನಪ್ರಿಯತೆ ಕುಗ್ಗಿಲ್ಲ. ಇಂದಿನ ಸ್ಪೈಡರ್‌ಮ್ಯಾನ್ ಅಥವಾ ಬ್ಯಾಟ್‌ಮ್ಯಾನ್‌ಗಳಿಗಿಂತ ಮೊದಲೇ ಜಗತ್ತನ್ನು ರಕ್ಷಿಸಲು ನಿಂತವನು ಇವನು.