Vishweshwar Bhat Column: ನೊಬೆಲ್ ಪುರಸ್ಕೃತ ಸಾಹಿತಿಗಳಿಬ್ಬರು ಹೊಡೆದಾಡಿಕೊಂಡ ಪ್ರಸಂಗ !
ಮಾರಿಯೋ ಲ್ಲೋಸ ಸಾಮಾನ್ಯನಲ್ಲ. ಪೆರು ದೇಶದ ಖ್ಯಾತ ಕಾದಂಬರಿಕಾರ, ಚಿಂತಕ, ಸಾಹಿತಿ, ಪತ್ರಕರ್ತ ಮತ್ತು ರಾಜಕಾರಣಿ. ಲ್ಲೋಸ ಸಹ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದವ. ಮಾರ್ಕ್ವೆಜ್ ಕನಸು-ಮನಸಿನಲ್ಲಿಯೂ ತನ್ನ ಸ್ನೇಹಿತನ ಈ ನಡೆಯನ್ನು ನಿರೀಕ್ಷಿಸಿರಲಿಲ್ಲ.
-
ನೂರೆಂಟು ವಿಶ್ವ
ನಮ್ಮ ಅಂಕಣಕಾರ ನವೀನ ಸಾಗರ, ಮೊನ್ನೆ ಲ್ಯಾಟಿನ್ ಅಮೆರಿಕದ ಖ್ಯಾತ ಲೇಖಕ, ಕಾದಂಬರಿಕಾರ, ನೊಬೆಲ್ ಪ್ರಶಸ್ತಿ ಪುರಸ್ಕೃತ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ ಪ್ರೇಮಪುರಾಣ ಮತ್ತು ಉತ್ಕಟ ದಾಂಪತ್ಯ ಪ್ರೇಮದ (ಶೀರ್ಷಿಕೆ : ಸೋಷಿಯಲ್ ಮೀಡಿಯಾ ಕಾಲದ ಎಮೋಷನಲ್ ಕಥೆಗಳು, ವಿಶ್ವವಾಣಿ, ನವೆಂಬರ್ 25, 2025) ಬಗ್ಗೆ ಬರೆದಿದ್ದನ್ನು ಓದುವಾಗ, ನಾನು ಎರಡು ವರ್ಷಗಳ ಹಿಂದೆ, ಪ್ಯಾರಿಸಿನ ಅತ್ಯಂತ ವಿಶಿಷ್ಟ ಪುಸ್ತಕದಂಗಡಿ - ‘ಶೇಕ್ಸ್‌ಪಿಯರ್ ಅಂಡ್ ಕಂಪನಿ’-ಯಲ್ಲಿ ಓದಿದ ಕೃತಿಯೊಂದರಲ್ಲಿನ ಪ್ರಸಂಗ ನೆನಪಾಯಿತು.
ನಾವು ಮಹಾನ್ ಲೇಖಕರ ಪುಸ್ತಕಗಳನ್ನಷ್ಟೇ ಓದಿರುತ್ತೇವೆ. ನಾವು ಇಷ್ಟಪಟ್ಟ ಎಷ್ಟೋ ಮಹಾನ್ ಲೇಖಕರ ಖಾಸಗಿ ಜೀವನ, ಅವರ ವೈಯಕ್ತಿಕ ವಾಂಛೆಗಳು, ಆಸೆ-ತಿಮಿರುಗಳು, ಅವರ ಉಡಾಳತನ, ಪಶೀಬಾಜಿಗಳು ನಮಗೆ ಗೊತ್ತೇ ಇರುವುದಿಲ್ಲ. ನಮ್ಮ ಇಷ್ಟದ ಲೇಖಕರ ವೈಯಕ್ತಿಕ ಜೀವನದ ನೆಲಬಾವಿಯೊಳಗೆ ನಾವು ಎಂದೂ ಇಣುಕುವುದಿಲ್ಲ.
ಅದರಲ್ಲೂ ವಿದೇಶಿ ಲೇಖಕ, ಕಾದಂಬರಿಕಾರರ ಜೀವನ ಪ್ರಸಂಗಗಳು ನಮ್ಮ ನಜರಿಗೆ ಬರುವುದು ಕಡಿಮೆ. ಹೆಚ್ಚೆಂದರೆ ನಾವು ಅವರ ಪುಸ್ತಕ ಓದಿ ಸುಮ್ಮನಾಗಿ ಬಿಡುತ್ತೇವೆ. ಮಾರ್ಕ್ವೆಜ್ ನ ಪ್ರೇಮ ಪುರಾಣ ಮತ್ತು ಆತನ One Hundred Years of Solitude ನ ಹಿಂದಿನ ರೋಚಕ ಕಥೆಯನ್ನು ನಾನು ‘ದಿ ಗಾರ್ಡಿಯನ್’ ಪತ್ರಿಕೆಯ ಲಿಟರರಿ ಎಡಿಟರ್ ಡೇವಿಡ್ ಶರಿಯಾತ್ಮ್ಯಾದಾರಿ ಅವರ ಬರಹಗಳಲ್ಲಿ ಓದಿದ್ದೆ. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಮಾರ್ಕ್ವೆಜ್ ನ ಬೇರೆ ಕಥೆ.
ಇದನ್ನೂ ಓದಿ: Vishweshwar Bhat Column: ಪತ್ರಕರ್ತರು ಟಂಕಿಸೋದಕ್ಕೂ ಸೈ, ಟೀಕಿಸೋದಕ್ಕೂ ಸೈ !
ಇದು ಆತನ ದಾಂಪತ್ಯ ಪ್ರೇಮವನ್ನು ತುಸು ಸವರಿಕೊಂಡು ಹೋಗುತ್ತದೆ. 1976ರ ಫೆಬ್ರವರಿ ತಿಂಗಳ ಒಂದು ದಿನ. ಅದೊಂದು ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಪ್ರದಾನ ಸಮಾ ರಂಭ. ಆ ಕಾರ್ಯಕ್ರಮದಲ್ಲಿ ಮಾರ್ಕ್ವೆಜ್ ಮತ್ತು ಆತನ ಆತ್ಮೀಯ ಸ್ನೇಹಿತ ಮಾರಿಯೋ ವರ್ಗಸ್ ಲ್ಲೋಸ ಭಾಗವಹಿಸಿದ್ದರು. ಮಾರ್ಕ್ವೆಜ್ ಹಲೋ ಮಾರಿಯೋ!’ ಎಂದು ಸಂತೋಷ ದಿಂದ ಕೈಬೀಸುತ್ತಾ ತನ್ನ ಸ್ನೇಹಿತನ ಹತ್ತಿರ ಹೋದಾಗ, ರೋಷದಿಂದ ಕುದಿಯುತ್ತಿದ್ದ ಲ್ಲೋಸ, ನಾಲ್ಕೈದು ಬಾರಿ ಮಾರ್ಕ್ವೇಜ್ ನ ಮುಖಕ್ಕೆ ಬಲವಾಗಿ ಗುದ್ದಿದ.
ಮಾರಿಯೋ ಲ್ಲೋಸ ಸಾಮಾನ್ಯನಲ್ಲ. ಪೆರು ದೇಶದ ಖ್ಯಾತ ಕಾದಂಬರಿಕಾರ, ಚಿಂತಕ, ಸಾಹಿತಿ, ಪತ್ರಕರ್ತ ಮತ್ತು ರಾಜಕಾರಣಿ. ಲ್ಲೋಸ ಸಹ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದವ. ಮಾರ್ಕ್ವೆಜ್ ಕನಸು-ಮನಸಿನಲ್ಲಿಯೂ ತನ್ನ ಸ್ನೇಹಿತನ ಈ ನಡೆಯನ್ನು ನಿರೀಕ್ಷಿಸಿರಲಿಲ್ಲ.
ಅಷ್ಟಕ್ಕೂ ಮಾರ್ಕ್ವೆಜ್ ತನ್ನ ಸ್ನೇಹಿತ ಲ್ಲೋಸನನ್ನು ಆಲಂಗಿಸಿಕೊಳ್ಳಲೆಂದು ಹೋದಾಗ, ಈ ಅನಿರೀಕ್ಷಿತ ಘಟನೆ ನಡೆದಿತ್ತು. ಇಬ್ಬರು ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಸೇರಿದ ಸಮಾರಂಭದಲ್ಲಿ ಒಬ್ಬರು ಇನ್ನೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದು, ಅಲ್ಲಿದ್ದ ವರನ್ನು ಮತ್ತು ಅವರಿಬ್ಬರ ಅಸಂಖ್ಯಾತ ಅಭಿಮಾನಿಗಳನ್ನು ನಿಬ್ಬೆರಗಾಗಿಸಿತ್ತು.
ಸಾಮಾನ್ಯ ವ್ಯಕ್ತಿಗಳೂ ಅಷ್ಟು ಕ್ಷುಲ್ಲಕವಾಗಿ ನಡೆದುಕೊಳ್ಳುವುದಿಲ್ಲ. ಆದರೆ ನೊಬೆಲ್ ಪ್ರಶಸ್ತಿ ಪುರಸ್ಕೃತರಿಬ್ಬರು ಬೀದಿ ಜಗಳಕ್ಕಿಳಿದಿದ್ದರು. ಈ ಘಟನೆ ಅಲ್ಲಿದ್ದವರನ್ನು ದಂಗು ಬಡಿಸಿತು. ನೊಬೆಲ್ ಪ್ರಶಸ್ತಿಗೆ ಭಾಜನರಾದ ಸಾಹಿತಿಗಳು ಹೊಡೆದಾಡಿಕೊಳ್ಳುವುದೆಂದರೆ ಸಾಮಾನ್ಯವಾ? ಅದು ಕಂಡು-ಕೇಳರಿಯದ ಘಟನೆ. ಹಾಗಂತ ಇಬ್ಬರೂ ಆತ್ಮೀಯ ಸ್ನೇಹಿತರೇ.
ಇಬ್ಬರೂ ಪರಸ್ಪರರ ಬಗ್ಗೆ ಅಭಿಮಾನ ಹೊಂದಿದವರು. ಲ್ಯಾಟಿನ್ ಅಮೆರಿಕದ ಸಾಹಿತ್ಯ ಲೋಕದಲ್ಲಿ ಇಬ್ಬರಿಗೂ ವಿಶಿಷ್ಟ ಸ್ಥಾನವಿದೆ. ಸಾಹಿತ್ಯವಲಯದಲ್ಲೂ ಇಬ್ಬರೂ ಅಪಾರ ಓದುಗರನ್ನು ಹೊಂದಿದವರು. ಹೀಗಿರುವಾಗ ಇಬ್ಬರೂ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಎಲ್ಲರಲ್ಲೂ ಅತೀವ ಕುತೂಹಲ ಮೂಡಿಸಿತ್ತು.
ಲ್ಲೋಸ ಯಾವ ಪರಿ ಗುದ್ದಿದ್ದರೆಂದರೆ, ಮಾರ್ಕ್ವೆಜ್ ಅವರ ಕಣ್ಣಿನ ಕೆಳ ಭಾಗ ಕಪ್ಪಾಗಿ, ಊದಿಕೊಂಡಿತ್ತು. ಮರುದಿನದ ಪತ್ರಿಕೆಯಲ್ಲಿ ಈ ಪ್ರಸಂಗ ಪ್ರಧಾನವಾಗಿ ವರದಿಯಾಯಿತು. ಒಂದೊಂದು ಪತ್ರಿಕೆ ಒಂದೊಂದು ರೀತಿಯಲ್ಲಿ ಬರೆದರೆ, ಒಂದು ಪತ್ರಿಕೆ ಮಾತ್ರ ‘ಅವರಿ ಬ್ಬರ ವೈಯಕ್ತಿಕ ಮತ್ತು ಕೌಟುಂಬಿಕ ಕಲಹ’ವೇ ಗುದ್ದಾಟಕ್ಕೆ ಕಾರಣ ಎಂದು ಬರೆಯಿತು.
ಈ ಗುದ್ದಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದೇ ‘ವೈಯಕ್ತಿಕ ಮತ್ತು ಕೌಟುಂಬಿಕ ಕಲಹ’ವೇ ಕಾರಣ ಎಂಬ ಒಂದು ಸಾಲಿನ ವರದಿಯಿಂದಾಗಿ. 1970ರ ಆರಂಭದಲ್ಲಿ ಲ್ಲೋಸ ಅವರು ತಮ್ಮ ಪತ್ನಿ ಪೆಟ್ರೇಷಿಯಾಗೆ ಗೊತ್ತಿಲ್ಲದೆ ಗುಟ್ಟಾಗಿ, ಸ್ವೀಡಿಶ್ ಗಗನಸಖಿಯೊಬ್ಬಳನ್ನು ಪ್ರೀತಿಸಲಾರಂಭಿಸಿದ್ದರು. ಈ ವಿಷಯ ಹೇಗೋ ಪೆಟ್ರೀಷಿಯಾ ಅವರ ಗಮನಕ್ಕೆ ಬಂದಿತು. ಕೆಲವರು ಊಹಿಸಿದಂತೆ, ಲ್ಲೋಸ ಅವರ ಪರಸ್ತ್ರೀ ಸಂಬಂಧವನ್ನು ಪೆಟ್ರೇಷಿಯಾ ಕಿವಿಗೆ ಹಾಕಿದ್ದೇ ಮಾರ್ಕ್ವೆಜ್.
ತಮ್ಮ ಸ್ನೇಹಿತೆಯೊಬ್ಬಳ ಮೂಲಕ, ನಿನ್ನ ಗಂಡ ಗಗನಸಖಿಯೊಬ್ಬಳ ಜತೆ ಸಖ್ಯ ನಡೆಸಿ ದ್ದಾನೆ, ಈ ವಿಷಯ ನಿನಗೆ ಗೊತ್ತಾ?’ ಎಂದು ಮಾರ್ಕ್ವೆಜ್ ಪೆಟ್ರೇಷಿಯಾಗೆ ತಿಳಿಯುವಂತೆ ಮಾಡಿದರು. ವಿಷಯ ಗೊತ್ತಾಗುತ್ತಿದ್ದಂತೆ, ಪೆಟ್ರೀಷಿಯಾ ತೀವ್ರವಾಗಿ ಜರ್ಜರಿತ ಳಾದಳು. ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾದಳು. ಅವರಲ್ಲಿ ಖಿನ್ನತೆ ಆವರಿಸಿತ್ತು. ಆಗ ತನ್ನ ಸ್ನೇಹಿತನ ಪತ್ನಿಗೆ ಸಾಂತ್ವನ ಹೇಳಲು ಮತ್ತು ಸಲಹೆ ನೀಡಲು ಮಾರ್ಕ್ವೆಜ್ ಮುಂದಾ ದರು. ಈ ನೆಪದಲ್ಲಿ, ಲ್ಲೋಸ ಇಲ್ಲದ ಸಮಯದಲ್ಲಿ ಮಾರ್ಕ್ವೇಜ್ ಮೇಲಿಂದ ಮೇಲೆ ಪೆಟ್ರೀಷಿಯಾ ಅವರನ್ನು ಏಕಾಂತದಲ್ಲಿ ಭೇಟಿಯಾಗುತ್ತಿದ್ದರು. ಇದು ಕ್ರಮೇಣ ಆಪ್ತತೆಗೆ, ನಂತರ ಪ್ರೇಮಕ್ಕೆ ತಿರುಗಿತು.
ಆ ಪ್ರೇಮ ದೈಹಿಕ ಸಂಬಂಧದವರೆಗೂ ಮುಂದುವರಿಯಿತು. ಒಂದು ಹಂತದಲ್ಲಿ, ಮಾರ್ಕ್ವೆಜ್ ಅವರು ಪೆಟ್ರೀಷಿಯಾಗೆ, ಗಂಡನಿಗೆ ವಿಚ್ಛೇದನ ನೀಡುವಂತೆ ಸಲಹೆ ನೀಡಿದ್ದರು. ‘ಅಂಥ ವ್ಯಕ್ತಿಯ ಜತೆ ನೀನು ಹೇಗೆ ಜೀವನ ಮಾಡುತ್ತೀಯಾ? ಆತ ಒಬ್ಬ ನೀಚ, ದುಷ್ಟ’ ಎಂದು ಮಾರ್ಕ್ವೆಜ್ ಹೇಳುತ್ತಿದ್ದರು. ಈ ಮಾತುಗಳು ಪೆಟ್ರೀಷಿಯಾಗೆ ಆ ಗಳಿಗೆಗೆ ಬೇಕಾದ ಸಾಂತ್ವನ ನೀಡುತ್ತಿದ್ದವು.
ಕಷ್ಟ ಕಾಲದಲ್ಲಿ ಮಾನಸಿಕ ಬೆಂಬಲಕ್ಕೆ ನಿಂತ ಮಾರ್ಕ್ವೆಜ್ ಅವರನ್ನು ಆಕೆ ವಿಪರೀತ ಹಚ್ಚಿಕೊಂಡಿದ್ದರು. ಮಾರ್ಕ್ವೇಜ್ ಮತ್ತು ಲ್ಲೋಸ ಹೆಚ್ಚು-ಕಮ್ಮಿ ಒಂದೇ ವಾರಿಗೆಯವರು, ಇಬ್ಬರೂ ಸಾಹಿತ್ಯ ಜಗತ್ತಿನ ದಿಗ್ಗಜರು. ಇಬ್ಬರೂ ಲ್ಯಾಟಿನ್ ಅಮೆರಿಕದ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದ ಪ್ರಮುಖ ಲೇಖಕರು. ಇವರಿಬ್ಬರು ಅದೆಷ್ಟು ಆಪ್ತರಾಗಿದ್ದರೆಂದರೆ, ಮಾರ್ಕ್ವೆಜ್ ಅವರು ಲ್ಲೋಸ ಅವರ ಎರಡನೇ ಮಗುವಿಗೆ ’ಗಾಡ್ ಫಾದರ್’ ಆಗಿದ್ದರು.
ಲ್ಲೋಸ ಅವರು ಮಾರ್ಕ್ವೆಜ್ ಅವರ ಮೇರುಕೃತಿ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಬಗ್ಗೆ ಪಿಎಚ್.ಡಿ. ಪ್ರಬಂಧವನ್ನೇ ಬರೆದಿದ್ದರು. ಅವರಿಬ್ಬರ ಪೈಕಿ ಮಾರ್ಕ್ವೇ ಜ್ ಒಂಬತ್ತು ವರ್ಷ ಹಿರಿಯರು. ಜನಪ್ರಿಯತೆಯಲ್ಲಿ ಇಬ್ಬರೂ ಸಮಸಮ ವಾಗಿದ್ದರು. ಕೆಲವು ವಿಮರ್ಶಕರು ಲ್ಲೋಸ ಅವರು ಲ್ಯಾಟಿನ್ ಅಮೆರಿಕನ್ ಯಾವುದೇ ಇತರ ಬರಹಗಾರರಿಗಿಂತ ಹೆಚ್ಚು ಅಂತಾರಾಷ್ಟ್ರೀಯ ಪ್ರಭಾವ ಮತ್ತು ವಿಶ್ವಾದ್ಯಂತ ಅಭಿಮಾನಿ ಗಳನ್ನು ಹೊಂದಿದವರೆಂದು ಪರಿಗಣಿಸುತ್ತಾರೆ.
ಈ ಮಾತನ್ನು ಮಾರ್ಕ್ವೆಜ್ ಅಭಿಮಾನಿಗಳು ಒಪ್ಪುತ್ತಿದ್ದರು. ಅವರಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆ ಅಪೂರ್ಣವಾಗಿ ಅಂತ್ಯವಾಗುತ್ತಿತು. ಅವರಿಬ್ಬರ ಅಭಿಮಾನಿಗಳೂ ಇಬ್ಬರ ಪ್ರತಿಭೆ, ಸಾಮರ್ಥ್ಯವನ್ನು ಕೊಂಡಾಡುತ್ತಲೇ ತಮ್ಮ ‘ಹೀರೋ’ನನ್ನು ಬಿಟ್ಟು ಕೊಡುತ್ತಿರಲಿಲ್ಲ. ಆರಂಭದಲ್ಲಿ ಇಬ್ಬರೂ ಎಡಪಂಥೀಯ ಸಿದ್ಧಾಂತವನ್ನು ಬೆಂಬಲಿಸು ತ್ತಿದ್ದರು.
ಆದರೆ ಕಾಲಕ್ರಮೇಣ ಮಾರ್ಕ್ವೆಜ್ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಪರಮ ಆಪ್ತರಾಗಿ ಪರಿವರ್ತಿತರಾದರು. ಇದಕ್ಕೆ ವಿರುದ್ಧವಾಗಿ, ಲ್ಲೋಸ ಅವರು ಕಮ್ಯು ನಿಸಂನಿಂದ ದೂರ ಸರಿದು ಬಲಪಂಥೀಯ ಉದಾರವಾದಿ ನಿಲುವನ್ನು ಬೆಳೆಸಿ ಕೊಂಡರು. ಇವರಿಬ್ಬರ ಪೈಪೋಟಿ ಸಾಹಿತ್ಯಕ್ಕಿಂತ ಹೆಚ್ಚಾಗಿ ರಾಜಕೀಯ ಸಿದ್ಧಾಂತಗಳ ಸಂಘರ್ಷ ವಾಗಿತ್ತು.
ಆದರೆ ಸಾಹಿತ್ಯ ಲೋಕದಲ್ಲಿ ಇವರಿಬ್ಬರೂ ‘ಮ್ಯಾಜಿಕಲ್ ರಿಯಲಿಸಂ’ ಶೈಲಿಯ ಎರಡು ಕಣ್ಣುಗಳಿದ್ದಂತೆ ಇದ್ದರು. ತಾನು ಇಲ್ಲದ ಸಮಯದಲ್ಲಿ ತನ್ನ ಪತ್ನಿಯನ್ನು ಮಾರ್ಕ್ವೆಜ್ ಭೇಟಿಯಾಗುವ ವಿಷಯ ಲ್ಲೋಸ ಅವರಿಗೂ ಗೊತ್ತಾಯಿತು. ತನ್ನ ನಡವಳಿಕೆಯಿಂದ ತನ್ನ ಸಂಸಾರ ಬೀದಿಗೆ ಬೀಳುತ್ತಿದೆ ಎಂದೂ ಅವರಿಗೆ ಅನಿಸಿತು. ಈ ಮಧ್ಯೆ, ಪೆಟ್ರೀಷಿಯಾ ತೀವ್ರ ವ್ಯಗ್ರಳಾಗಿ, ಸ್ವೀಡಿಶ್ ಗಗನಸಖಿಯೊಂದಿಗೆ ಸಖ್ಯವನ್ನು ಕಡಿದುಕೊಳ್ಳದಿದ್ದರೆ, ತಾನು ಜೀವ ತೆಗೆದುಕೊಳ್ಳುವುದಾಗಿ ಬೆದರಿಸಿದಳು. ಈ ನಡುವೆ ಲ್ಲೋಸ ಮತ್ತು ಅವರ ಹೊಸ ಗರ್ಲ್ ಫ್ರೆಂಡ್ ನಡುವಿನ ಸಖ್ಯ ಕೂಡ ಹಳಸಲಾರಂಭಿಸಿತು.
ಹದಗೆಡುತ್ತಿರುವ ಹೆಂಡತಿಯ ಮಾನಸಿಕ ಆರೋಗ್ಯ ಮತ್ತು ಸ್ವೀಡಿಶ್ ಗಗನಸಖಿ ಯೊಂದಿಗಿನ ಮುನಿಸಿನಿಂದಾಗಿ ಲ್ಲೋಸ ಬದಲಾಗಿದ್ದರು. ತಾನು ತನ್ನ ಹೆಂಡತಿಗೆ ವಿಧೇಯ ನಾಗಿರದ ತಮ್ಮ ನಡೆವಳಿಕೆ ಅವರಿಗೆ ಬೇಸರ ತರಿಸಿತ್ತು. ಇನ್ನು ಮುಂದೆ ತಮ್ಮ ನಡೆವಳಿಕೆ ಯನ್ನು ಬದಲಿಸಿಕೊಳ್ಳುವುದಾಗಿ ಲ್ಲೋಸ ತಮ್ಮ ಪತ್ನಿಗೆ ಹೇಳಿದರು.
ಈ ನಡುವೆ ಲ್ಲೋಸ ಮತ್ತೆ ತಮ್ಮ ಪತ್ನಿಯ ಬಳಿ ಹಿಂತಿರುಗಿದಾಗ, ಪೆಟ್ರೀಷಿಯಾ ಅವರು ಮಾರ್ಕ್ವೆಜ್ ತಮಗೆ ಹೇಳಿದ ಮಾತುಗಳನ್ನು ಮತ್ತು ಅವರೊಂದಿಗಿನ ಒಡನಾಟದ ಪ್ರಮು ಖಾಂಶಗಳನ್ನು ಪತಿಗೆ ತಿಳಿಸಿದಳು. ಇದು ಲ್ಲೋಸ ಅವರನ್ನು ವಿಪರೀತವಾಗಿ ಕೆಣಕಿತು. ತಮ್ಮ ಮತ್ತು ಪತ್ನಿಯ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸಕ್ಕೆ ಮುಂದಾದ ಮಾರ್ಕ್ವೆಜ್ ಬಗ್ಗೆ ಸ ತೀವ್ರ ಕುಪಿತಗೊಂಡರು.
‘ಈ ಮನುಷ್ಯನನ್ನು ಬಿಡಬಾರದು, ನನ್ನ ಲವ್ ಅಫೇರನ್ನು ಹೆಂಡತಿಗೆ ಹೇಳಿದ್ದಲ್ಲದೇ, ನಾನಿಲ್ಲದ ಸಮಯದಲ್ಲಿ ಮನೆಗೆ ಬಂದು, ತನ್ನ ಪತ್ನಿಯ ಮನಸ್ಸನ್ನು ಕೆಡಿಸಿ ಡೈವೋರ್ಸ್ ತಗೋ ಎಂದು ಹೇಳಿದ ಆ ದುರುಳ ಎದುರು ಬಂದರೆ ಕಪಾಳಮೋಕ್ಷ ಮಾಡದೇ ಬಿಡುವು ದಿಲ್ಲ’ ಎಂದು ನಿರ್ಧರಿಸಿಬಿಟ್ಟರು. ಮಾರ್ಕ್ವೆಜ್ ಎದುರು ಸಿಗುವುದನ್ನೇ ಕಾಯುತ್ತಿದ್ದರು. ಅವರು ಎಲ್ಲಿಯೇ ಸಿಗಲಿ ಹೊಡೆಯದೇ ಬಿಡಬಾರದು ಎಂದು ನಿರ್ಧರಿಸಿದ್ದರು.
ಆ ಗುದ್ದಿದ ಘಟನೆ ನಡೆದ ಎರಡು ದಿನಗಳ ನಂತರ, ಮಾರ್ಕ್ವೆಜ್ ಅವರು ತಮ್ಮ ಸ್ನೇಹಿತ ಮತ್ತು ಛಾಯಾಗ್ರಾಹಕ ರೋಡ್ರಿಗೋ ಮೋಯಾ ಅವರ ಬಳಿ ಹೋಗಿ, ‘ನನ್ನ ಈ ಕಪ್ಪಗಾದ, ಕಣ್ಣಿನ ಫೊಟೋ ತೆಗೆ’ ಎಂದು ಕೇಳಿಕೊಂಡರು.
ಆ ಫೋಟೋದಲ್ಲಿ ಮಾರ್ಕ್ವೆಜ್ ಕಣ್ಣು ಊದಿಕೊಂಡಿದ್ದರೂ, ಮುಖದಲ್ಲಿ ಒಂದು ನಗು ಇತ್ತು. ಈ ಫೋಟೋ ಬಹಳ ವರ್ಷಗಳ ಕಾಲ ಹೊರ ಜಗತ್ತಿಗೆ ಕಾಣಿಸಲಿಲ್ಲ. ಈ ಘಟನೆ ನಡೆದ ಮೂವತ್ತೊಂದು ವರ್ಷಗಳ ನಂತರ, ಅಂದರೆ 2007ರಲ್ಲಿ ಆ ಫೋಟೋ ಬಿಡುಗಡೆ ಯಾಗಿ ಭಾರಿ ಸಂಚಲನ ಮೂಡಿಸಿತು.
ಮಾರ್ಕ್ವೆಜ್‌ಗೆ ತಾನು ಪೆಟ್ಟು ತಿಂದಿದ್ದನ್ನು ದಾಖಲಿಸಿಡಬೇಕೆಂಬ ಆಸೆ ಇತ್ತೆಂದು ಮೋಯಾ ಹೇಳಿದರು. ಒಂದಾನೊಂದು ಕಾಲದಲ್ಲಿ ಅತ್ಯಾಪ್ತ ಸ್ನೇಹಿತರಾಗಿದ್ದ ಅವರಿಬ್ಬರೂ, ಈ ಘಟನೆಯ ನಂತರ ತಮ್ಮ ಜೀವನದುದ್ದಕ್ಕೂ ಮತ್ತೆಂದೂ ಮಾತನಾಡಲಿಲ್ಲ, ಮುಖಾಮುಖಿ ಆಗಲೇ ಇಲ್ಲ. ಮಾರ್ಕ್ವೆಜ್ ಅವರು 2014ರಲ್ಲಿ ನಿಧನರಾಗುವವರೆಗೂ ಈ ಇಬ್ಬರು ಮಹಾನ್ ಸಾಹಿತಿಗಳ ನಡುವಿನ ಮೌನ-ಮುನಿಸು, ದುಸಮುಸ ಮುಂದುವರಿದಿತ್ತು.
ಈ ಇಬ್ಬರೂ ಲೇಖಕರು ತಮ್ಮ ನಡುವಿನ ಜಗಳದ ನಿಖರ ಕಾರಣವನ್ನು ಸಾರ್ವಜನಿಕವಾಗಿ ಎಂದಿಗೂ ಚರ್ಚಿಸಲಿಲ್ಲ. ಇದು ಅವರ ನಡುವಿನ ಒಂದು ಅಲಿಖಿತ ಒಪ್ಪಂದ ವಾಗಿತ್ತೇನೋ. ಒಮ್ಮೆ ಪತ್ರಕರ್ತರು ಈ ಬಗ್ಗೆ ಕೇಳಿದಾಗ ಲ್ಲೋಸ, ‘ಇತಿಹಾಸಕಾರರಿಗೆ ಈ ಬಗ್ಗೆ ಸಂಶೋಧನೆ ಮಾಡಲು ನಾವು ಕೆಲಸ ಉಳಿಸಬೇಕಲ್ಲವೇ?’ ಎಂದು ತಮಾಷೆಯಾಗಿ ಉತ್ತರಿಸಿದ್ದರು.
ಮಾರ್ಕ್ವೆಜ್ ಕೂಡ ತಮ್ಮ ಸಾವಿನವರೆಗೂ ಈ ರಹಸ್ಯವನ್ನು ಕಾಪಾಡಿಕೊಂಡರು. ಜಗಳ ವಾಗುವ ಮೊದಲು, ಇಬ್ಬರೂ ಸೇರಿ ಒಂದು ಬೃಹತ್ ಕಾದಂಬರಿಯನ್ನು ಬರೆಯುವ ಯೋಜನೆಯಲ್ಲಿದ್ದರು. 1930ರ ದಶಕದಲ್ಲಿ ಪೆರು ಮತ್ತು ಕೊಲಂಬಿಯಾ ನಡುವೆ ನಡೆದ ಯುದ್ಧದ ಕುರಿತಾಗಿ ಈ ಕಾದಂಬರಿ ಇರಬೇಕಿತ್ತು. ಆದರೆ ಈ ಗುದ್ದಾಟದಿಂದಾಗಿ ಸಾಹಿತ್ಯ ಲೋಕಕ್ಕೆ ಆ ಅದ್ಭುತ ಕೃತಿ ಸಿಗದೇ ಹೋಯಿತು.
ಮಾರ್ಕ್ವೆಜ್ ನಿಧನರಾದಾಗ, ಲ್ಲೋಸ ಅವರು ಬಹಳ ಭಾವುಕರಾಗಿ, ‘ಒಬ್ಬ ಮಹಾನ್ ಲೇಖಕ ತೀರಿಕೊಂಡಿದ್ದಾರೆ. ಅವರ ಕೃತಿಗಳು ಅವರಿಗಿಂತ ಹೆಚ್ಚು ಕಾಲ ಬದುಕಿರುತ್ತವೆ’ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಹಳೆಯ ದ್ವೇಷದ ನಡುವೆಯೂ ಸ್ನೇಹಿತನ ಮೇಲಿದ್ದ ಗೌರವವನ್ನು ಸೂಚಿಸಿದ್ದರು. ಕೊನೆಗೂ ಇಬ್ಬರೂ ಮುಖತಃ ಭೇಟಿಯಾಗಿ ರಾಜಿ ಮಾಡಿಕೊಳ್ಳಲೇ ಇಲ್ಲ.