ಮನಿ ಮೈಂಡೆಡ್
ಭಾರತದ ಜತೆಗಿನ ವ್ಯಾಪಾರ ಹೆಚ್ಚಿಸಲು ಕೆನಡಾ ತುದಿಗಾಲಿನಲ್ಲಿ ನಿಂತಿರುವುದಕ್ಕೆ ಕಾರಣ ವಿದೆ. ಅದೇನೆಂದರೆ ಅಮೆರಿಕದ ರಕ್ಷಣಾತ್ಮಕ ಧೋರಣೆ. ಇದುವರೆಗೆ ಕೆನಡಾದ ಶೇ.98ರಷ್ಟು ಇಂಧನ ರಫ್ತು ಅಮೆರಿಕಕ್ಕೆ ನಡೆಯುತ್ತಿತ್ತು. ಆದರೆ ಅಮೆರಿಕದ ‘ಪ್ರೊಟೆಕ್ಷನಿಸಂ’ನ ಪರಿಣಾಮ ಬೇರೆ ಮಾರುಕಟ್ಟೆ ಯನ್ನೂ ಕಂಡುಕೊಳ್ಳುವುದು ಕೆನಡಾಗೆ ಅನಿವಾರ್ಯ ವಾಗಿದೆ.
ಭಾರತವನ್ನು ‘ಡೆಡ್ ಇಕಾನಮಿ’ ಎಂದೂ, ಯುರೋಪನ್ನು “ದುರ್ಬಲ ನಾಯಕರಿಂದ ಕೊಳೆತು ಹೋಗುತ್ತಿರುವ ಒಕ್ಕೂಟ" ಎಂದೂ ಹೀಯಾಳಿಸಿದ್ದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇಂಥ ಸೊಕ್ಕಿಗೆ ಇದೀಗ ಮದ್ದು ಅರೆಯಲಾಗಿದೆ. ಇದು ಕೇವಲ ವ್ಯಾಪಾರ ಒಪ್ಪಂದವಲ್ಲ, ಪ್ರಬಲ ರಾಜತಾಂತ್ರಿಕ ಸಂದೇಶ.
ಭಾರತದ ಜತೆಗೆ ಮೊದಲಿಗೆ ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿತು. ಬಳಿಕ ಯುರೋಪ್ ‘ಎಲ್ಲ ಒಪ್ಪಂದಗಳ ತಾಯಿ’ ಎಂಬ ಖ್ಯಾತಿಯ ಮೆಗಾ ಡೀಲ್ ಅನ್ನು ಮಾಡಿಕೊಂಡಿದೆ. ಮುಂದಿನ ಸರದಿಯಲ್ಲಿ ಕೆನಡಾ ಇದೆ ಎಂಬ ವರ್ತಮಾನವಿದೆ!
ಜಾಗತೀಕರಣದ ಯುಗ ಮುಗಿಯಿತು ಎಂದೆಲ್ಲ ಬಡಬಡಿಸುತ್ತಿದ್ದ ಟ್ರಂಪ್ ಈಗ ಮೈ ಮುಟ್ಟಿ ನೋಡಿ ಕೊಳ್ಳಬೇಕಾಗಿದೆ. ಅಮೆರಿಕದ ಆಪ್ತ ರಾಷ್ಟ್ರಗಳೇ ಈಗ ಭಾರತದ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಗಳ ಮೂಲಕ ಹತ್ತಿರವಾಗುತ್ತಿವೆ. ಕೆನಡಾದಲ್ಲಿ ಕೆಲ ವರ್ಷಗಳ ಹಿಂದೆ ಜಸ್ಟಿನ್ ಟ್ರೂಡೊ ಎಂಬ ಅವಿವೇಕಿ, ಭಾರತ ವಿರೋಧಿ ಪ್ರಧಾನಿಯಾಗಿದ್ದ. ಕೊನೆಗೆ ಜನಪ್ರಿಯತೆ ಕಳೆದುಕೊಂಡು ರಾಜೀನಾಮೆ ಕೊಟ್ಟು ನೇಪಥ್ಯಕ್ಕೆ ಸರಿದ. ಈಗಿನ ಪ್ರಧಾನಿ ಮಾರ್ಕ್ ಕಾರ್ನೆ ಸ್ವತಃ ಆರ್ಥಿಕ ತಜ್ಞರೂ ಹೌದು.
ಇದನ್ನೂ ಓದಿ: Keshava Prasad B Column: ಭಾರತೀಯ ಸ್ಟಾಕ್ ಮಾರ್ಕೆಟ್‌ಗೆ ದೇಸಿ ಹೂಡಿಕೆದಾರರ ಅಭಯ
ಭಾರತದ ಜತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಜಸ್ಟಿನ್ ಟ್ರೂಡೊ ಕಾಲದಲ್ಲಿ ಹದಗೆಟ್ಟಿದ್ದ ಸಂಬಂಧವನ್ನು ಸುಧಾರಿಸಬೇಕು ಎಂಬ ವಿವೇಕ ಅವರಲ್ಲಿದೆ. ಮಾರ್ಚ್‌ನಲ್ಲಿ ಅವರು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.
ಕೆನಡಾ ಮತ್ತು ಭಾರತ ದೇಶಗಳು ತೈಲ, ಅನಿಲ ಮತ್ತು ಯುರೇನಿಯಂ ಕ್ಷೇತ್ರಗಳಲ್ಲಿ ವ್ಯಾಪಾರ ವನ್ನು ಹೆಚ್ಚಿಸಲು ಉದ್ದೇಶಿಸಿವೆ. ಭಾರತಕ್ಕೆ ಹೆಚ್ಚು ಕಚ್ಚಾ ತೈಲ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಅನ್ನು ಕೆನಡಾ ಕಳಿಸಲಿದೆ. ಭಾರತವು ಅದನ್ನು ಹೆಚ್ಚು ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳಾಗಿ ರಫ್ತು ಮಾಡಲಿದೆ.
ಕೆನಡಾವು ಭಾರತದ ಜತೆಗೆ ವ್ಯಾಪಾರವನ್ನು ಹೆಚ್ಚಿಸಲು ತುದಿಗಾಲಿನಲ್ಲಿ ನಿಲ್ಲಲು ಕಾರಣವಿದೆ. ಅದೇನೆಂದರೆ ಅಮೆರಿಕದ ರಕ್ಷಣಾತ್ಮಕ ಧೋರಣೆ. ಇದುವರೆಗೆ ಕೆನಡಾದ 98 ಪರ್ಸೆಂಟ್ ಇಂಧನ ರಫ್ತು ಅಮೆರಿಕಕ್ಕೆ ನಡೆಯುತ್ತಿತ್ತು. ಆದರೆ ಅಮೆರಿಕದ ‘ಪ್ರೊಟೆಕ್ಷನಿಸಂ’ನ ಪರಿಣಾಮ ಬೇರೆ ಮಾರು ಕಟ್ಟೆಯನ್ನೂ ಕಂಡುಕೊಳ್ಳುವುದು ಕೆನಡಾಗೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತವು ಉತ್ತಮ ಆಯ್ಕೆಯಾಗಿದೆ. ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ, ಪರಮಾಣು ಯೋಜನೆಗಳ ವಿಸ್ತರಣೆ, ದೀರ್ಘಕಾಲೀನ ಬೇಡಿಕೆ, ರಾಜಕೀಯ ಸ್ಥಿರತೆ ಎಲ್ಲವೂ ಭಾರತದಲ್ಲಿ ಇರುವುದು ಪ್ಲಸ್ ಪಾಯಿಂಟ್ ಆಗಿದೆ.
ಭಾರತ-ಯುರೋಪ್ ನಡುವಣ ಚಾರಿತ್ರಿಕ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ 2007ರಲ್ಲಿ ಆರಂಭವಾಗಿತ್ತು. ಇಪ್ಪತ್ತು ವರ್ಷಗಳ ನಂತರ ಅದೀಗ ಕಾರ್ಯಗತವಾಗಿದೆ. ವಾಣಿಜ್ಯ ಮತ್ತು ವ್ಯೂಹಾತ್ಮಕವಾಗಿ ಇದು ಮಹತ್ವ ಗಳಿಸಿದೆ. ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ವ್ಯಾಪಾರ ಚಟುವಟಿಕೆಗಳನ್ನು ಇದು ಹೆಚ್ಚಿಸಲಿದೆ.
ಏಕೆಂದರೆ ಪರಸ್ಪರ ಸುಂಕಗಳು ರದ್ದಾಗಲಿವೆ. ಭಾರತೀಯ ಕಂಪನಿಗಳಿಗೆ ಐರೋಪ್ಯ ಮಾರುಕಟ್ಟೆ ಯ ಪ್ರವೇಶ ಸುಲಭವಾಗಲಿದೆ. ಅದೇ ರೀತಿ ಯುರೋಪಿನ ಕಂಪನಿಗಳಿಗೆ ಭಾರತದ ಬೆಳೆಯುತ್ತಿರುವ ಅಗಾಧ ಮಾರುಕಟ್ಟೆಗೆ ಪ್ರವೇಶ ಸುಗಮವಾಗಲಿದೆ. ಹೀಗಾಗಿ ಜಾಗತೀಕರಣದ ಯುಗ ಮುಗಿದಿಲ್ಲ ಎಂಬ ಸಂದೇಶವನ್ನು ಈ ಒಪ್ಪಂದ ಸಾರಿದೆ.
ಡೊನಾಲ್ಡ್ ಟ್ರಂಪ್ ಕೂಡ ಹೊಟ್ಟೆಕಿಚ್ಚು ಪಡುವುದನ್ನು ನಿಲ್ಲಿಸಿ, ಜಾಗತೀಕರಣದ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲು ಇದು ಸಕಾಲ. ಎಫ್ʼಟಿಎ ಎಂದರೆ ದೊಡ್ಡ ವ್ಯಾಪಾರ ಒಪ್ಪಂದ. ಭಾರತ ಮತ್ತು ಯುರೋಪಿನ 27 ದೇಶಗಳ ಜತೆಗಿನ ಡೀಲ್ ಇದಾಗಿದೆ. ಸುಮಾರು 135 ಶತಕೋಟಿ ಡಾಲರ್ ಮೌಲ್ಯದ ಒಡಂಬಡಿಕೆಯಿದು.
ಜಿಯೊಪಾಲಿಟಿಕ್ಸ್ ಒತ್ತಡದ ನಡುವೆಯೂ, ಟ್ರಂಪ್ ಟಾರಿಫ್ ಸಂಘರ್ಷದ ಹಿನ್ನೆಲೆಯಲ್ಲಿ ಇದು ನಡೆಯುತ್ತಿದೆ. ಟ್ರಂಪ್ ಯಾವಾಗ ನ್ಯಾಟೊ ಒಕ್ಕೂಟದ ಮಿತ್ರ ರಾಷ್ಟ್ರಗಳನ್ನೇ ತುಚ್ಛವಾಗಿ ಕಾಣಲಾ ರಂಭಿಸಿದರೋ, ಆವಾಗಿನಿಂದ ಯುರೋಪ್ ಎಚ್ಚೆತ್ತಿದೆ. ಅದರಲ್ಲೂ ಡೆನ್ಮಾರ್ಕಿನ ಅಧೀನದಲ್ಲಿರುವ ಗ್ರೀನ್‌ಲ್ಯಾಂಡ್ ತಮಗೆ ಬೇಕೆಂದು ಟ್ರಂಪ್ ಗಲಾಟೆ ಶುರುಹಚ್ಚಿಕೊಂಡ ಬಳಿಕ ಯುರೋಪ್‌ಗೆ ಭಾರತ ಮತ್ತಷ್ಟು ಹತ್ತಿರವಾಗಿದೆ, ಆಪದ್ಭಾಂಧವನಂತೆ ಕಾಣಿಸಿದೆ.
ಜಾಗತಿಕ ಆರ್ಥಿಕ ಬಿಕ್ಕಟ್ಟು, ಟ್ರಂಪ್ ಟಾರಿಫ್ ವಾರ್‌ನ ಪರಿಣಾಮ ತನ್ನ ಪ್ರೊಡಕ್ಷನ್ ನೆಟ್‌ವರ್ಕ್ ಅಲುಗಾಡುತ್ತಿರುವುದು ಯುರೋಪಿಗೆ ಕಳವಳ ಉಂಟುಮಾಡಿದೆ. ವ್ಯೂಹಾತ್ಮಕವಾಗಿಯೂ ಸವಾಲು ಗಳು ಎದುರಾಗಿವೆ. ಆದ್ದರಿಂದ ಇಂಡೊ-ಪೆಸಿಫಿಕ್ ವಲಯದಲ್ಲಿ ಅದಕ್ಕೆ ಸೂಕ್ತ ಮತ್ತು ದೀರ್ಘಾವಧಿ ಗೆ ನಿಲ್ಲಬಲ್ಲ ನಂಬಿಕಸ್ಥ ವ್ಯಾಪಾರ ಪಾಲುದಾರ ಬೇಕಾಗಿದೆ.
ಅದೇ ರೀತಿ ಭಾರತಕ್ಕೂ ಹೈ ಇನ್‌ಕಮ್ ಮಾರ್ಕೆಟ್‌ಗಳಿಗೆ ಪ್ರವೇಶ ಸುಲಭವಾಗಬೇಕಿದೆ. ಭಾರತೀಯ ಕಾರ್ಪೊರೇಟ್ ಕಂಪನಿಗಳಿಗೆ ಯುರೋಪಿನ ಮಾರುಕಟ್ಟೆ ಆಕರ್ಷಕ. ಹೆಚ್ಚು ಬೇಡಿಕೆ ಗಿಟ್ಟಿಸಿ ಕೊಳ್ಳಲು ಅವಶ್ಯಕ. ಪ್ರಾಡಕ್ಟ್ ಸೇಫ್ಟಿ, ಕೆಮಿಕಲ್ಸ್, ಲೇಬರ್ ಪ್ರೋಸೆಸ್ ಅಥವಾ ಎನ್ವಿರಾನ್ಮೆಂಟಲ್ ಕಂಪ್ಲಯನ್ಸ್‌ನಲ್ಲಿ ಐರೋಪ್ಯ ದರ್ಜೆ ಉನ್ನತ ಮಟ್ಟದ್ದಾಗಿದೆ.
ಎಫ್ʼಟಿಎ ಪರಿಣಾಮ ಇದಕ್ಕೆಲ್ಲ ತಗಲುವ ಖರ್ಚು ಗಣನೀಯವಾಗಿ ಇಳಿಯುತ್ತದೆ. ಔಷಧ, ವಿಶೇಷ ರಾಸಾಯನಿಕಗಳು, ಎಂಜಿನಿಯರಿಂಗ್ ಗೂಡ್ಸ್, ಆಟೊಮೇಟಿವ್ ಕಂಪೊನೆಂಟ್ಸ್, ಸಂಸ್ಕರಿತ ಆಹಾರ, ಡಿಜಿಟಲ್ ಸರ್ವೀಸ್‌ಗಳ ರಫ್ತು ಎಂದರೆ ಸಾಮಾನ್ಯವಲ್ಲ, ಅವು ದೇಶದ ಉದ್ಯಮ ವಲಯದ ಬೆಳವಣಿಗೆಯ ಜೀವನಾಡಿಗಳಾಗಿವೆ. ಐರೋಪ್ಯ ರಾಷ್ಟ್ರಗಳಲ್ಲಿ ಭಾರತದ ಕಂಪನಿಗಳು ಬಲವಾಗಿ ಪದಾರ್ಪಣೆ ಮಾಡುವುದು ಎಂದರೆ ಹೆಚ್ಚಿನ ಆದಾಯ ನಿಶ್ಚಿತ.
ಗ್ಲೋಬಲ್ ಸಪ್ಲೈ ಚೈನ್‌ನ ಭಾಗವಾಗಲು ಸದವಕಾಶ. ಒಂದು ಉದಾಹರಣೆಯನ್ನು ಗಮನಿಸಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಟೆಕ್ಸ್‌ಟೈಲ್ಸ್ ರಫ್ತಿಗೆ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ತೀವ್ರ ಸ್ಪರ್ಧೆ ಒಡ್ಡುತ್ತವೆ. ಆದರೆ ಇದೀಗ ಯುರೋಪ್ ಜತೆ ಡೀಲ್ ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಯುರೋಪಿನ ಮಾರುಕಟ್ಟೆಯಲ್ಲಿ ಭಾರತದ ಟೆಕ್ಸ್‌ಟೈಲ್ಸ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ.
ಅವುಗಳ ಮೇಲಿನ ಸುಂಕ ರದ್ದಾಗುವುದರಿಂದ ಸ್ಪರ್ಧಾತ್ಮಕತೆ ವೃದ್ಧಿಸಲಿದೆ. ವಿಯೆಟ್ನಾಂ, ಬಾಂಗ್ಲಾ ದೇಶದ ಗಾರ್ಮೆಂಟ್ಸ್ ಉತ್ಪನ್ನಗಳಿಗಿಂತ ಭಾರತದ್ದು ಯುರೋಪಿನ ಗ್ರಾಹಕರಿಗೆ ಅಗ್ಗವಾಗಲಿದೆ. ಅದೇ ರೀತಿ ಐರೋಪ್ಯ ಆಟೊಮೊಬೈಲ್ ಕಂಪನಿಗಳಿಗೆ, ವಿಸ್ಕಿ ತಯಾರಕರಿಗೆ ಭಾರತದಲ್ಲೂ ಅವಕಾಶಗಳು ಸೃಷ್ಟಿಯಾಗಲಿವೆ.
ಹೀಗೆ ಜಾಗತೀಕರಣ ವ್ಯವಸ್ಥೆ ಪರಸ್ಪರ ಲಾಭದಾಯಕವಾಗುತ್ತದೆ. ಭಾರತದಿಂದ ಯುರೋಪ್‌ಗೆ ಸಾಗರೋತ್ಪನ್ನಗಳ ರಫ್ತಿಗೆ ಇದುವರೆಗೆ 26 ಪರ್ಸೆಂಟ್ ಸುಂಕ ಇತ್ತು. ಅದೇ ರೀತಿ ಚರ್ಮದ ಪಾದರಕ್ಷೆಗಳಿಗೆ ಶೇ.17, ರಾಸಾಯನಿಕಗಳಿಗೆ ಶೇ.12.8, ಟೆಕ್ಟ್ʼಟೈಲ್ ಮತ್ತು ಅಪಾರಲ್ಸ್‌ಗೆ ಶೇ. 12, ಪೀಠೋಪಕರಣಗಳಿಗೆ ಶೇ.10.5, ಲೋಹಗಳಿಗೆ ಶೇ.10, ರೈಲ್ವೆ, ಹಡಗಿಗೆ ಶೇ. 7.7, ಪ್ಲಾಸ್ಟಿಕ್‌ಗೆ ಶೇ. 6.5, ಕ್ರೀಡಾ ಪರಿಕರಗಳಿಗೆ ಶೇ. 4.7, ಜ್ಯುವೆಲ್ಲರಿಗಳಿಗೆ ಶೇ. 4, ಆಟಿಕೆಗಳಿಗೆ ಶೇ.4ರಷ್ಟು ಸುಂಕವನ್ನು ಯುರೋಪ್ ವಿಧಿಸುತ್ತಿತ್ತು. ಇನ್ನು ಮುಂದೆ ಇವುಗಳು ರದ್ದಾಗಲಿದ್ದು, ಸುಂಕ ಮುಕ್ತವಾಗಲಿದೆ. ಇವೆಲ್ಲವೂ ಕಾರ್ಮಿಕ ಕೇಂದ್ರಿತ ಕ್ಷೇತ್ರವಾದ್ದರಿಂದ ಭಾರತಕ್ಕೆ ಲಾಭದಾಯಕವಾಗಿದೆ.
ಅಮೆರಿಕ ವಾಣಿಜ್ಯ ವ್ಯಾಪಾರ ಇಲಾಖೆಯ ಮುಖ್ಯಸ್ಥ ಜೆಮಿಸನ್ ಗ್ರೀರ್ ಪ್ರಕಾರ, ಭಾರತ-ಯುರೋಪ್ ಎಫ್ʼಟಿಎ ಡೀಲ್‌ನಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಯುರೋಪ್ ನ ಹೆಚ್ಚಿನ ಮಾರುಕಟ್ಟೆಗೆ ಭಾರತ ಪ್ರವೇಶಿಸಲಿದೆ. ಭಾರತೀಯರಿಗೆ ಹೆಚ್ಚುವರಿ ವಲಸೆಯ ಹಕ್ಕುಗಳು ಸಿಗಲಿವೆ. ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಯುರೋಪಿಗೆ ಬರುವ ಸಾಧ್ಯತೆ ಇದೆ.
“ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರಕ್ಷಿಸಲು ಆದ್ಯತೆ ನೀಡುತ್ತಿದ್ದಾರೆ. ಆದ್ದರಿಂದ ನಮ್ಮ ಮಾರುಕಟ್ಟೆಗೆ ಪ್ರವೇಶಿಸುವ ಇತರ ರಾಷ್ಟ್ರ ಗಳಿಗೆ ಶುಲ್ಕ ವಿಧಿಸುತ್ತಿದ್ದಾರೆ. ಇಂಥ ರಾಷ್ಟ್ರಗಳು ಈಗ ಬೇರೆ ಮಾರುಕಟ್ಟೆಯನ್ನು ಕಂಡುಕೊಳ್ಳಲು ಯತ್ನಿಸುತ್ತಿವೆ.
ಯುರೋಪ್ ಕೂಡ ತನ್ನಲ್ಲಿನ ಹೆಚ್ಚುವರಿ ಉತ್ಪಾದನೆಯನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದೆ. ಯುರೋಪ್‌ಗೆ ಅಮೆರಿಕ ದುಬಾರಿಯಾಗಿರುವುದರಿಂದ ಬೇರೆ ಮಾರುಕಟ್ಟೆಯನ್ನು ಅದು ಎದುರುನೋಡುತ್ತಿದೆ. ಕಡಿಮೆ ವೆಚ್ಚಕ್ಕೆ ಭಾರತೀಯ ಕಾರ್ಮಿಕರು ಸಿಗುತ್ತಾರೆ.
ಜಾಗತೀಕರಣದಿಂದ ಆಗಿರುವ ತೊಂದರೆಗಳನ್ನು ಬಗೆಹರಿಸಲು ಅಮೆರಿಕ ಯತ್ನಿಸುತ್ತಿರುವ ವೇಳೆ ಯಲ್ಲಿ ಯುರೋಪ್ ಜಾಗತೀಕರಣವನ್ನು ಹೆಚ್ಚಿಸುತ್ತಿದೆ" ಎನ್ನುತ್ತಾರೆ ಜೆಮಿಸನ್ ಗ್ರೀರ್. ಆದರೆ ಸ್ವತಃ ಅಮೆರಿಕ ಕೂಡ ಈ ಹಿಂದೆ ಜಾಗತೀಕರಣವನ್ನೇ ಪ್ರತಿಪಾದಿಸಿತ್ತು ಮತ್ತು ಅದರ ಲಾಭವನ್ನು ಪಡೆದಿತ್ತು ಎಂಬುದನ್ನು ಮರೆಯುವಂತಿಲ್ಲ. ಟ್ರಂಪ್ ಸರಕಾರದ ಬೂಟಾಟಿಕೆ ನೋಡಿ!
ಅವರಿಗೆ ಅಸೂಯೆ ಏಕೆ ಎಂಬುದಕ್ಕೆ ಬಲವಾದ ಕಾರಣವಿದೆ. ಭಾರತವು ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಪೆಟ್ರೋಲ್-ಡೀಸೆಲ್ ಆಗಿ ಪರಿವರ್ತಿಸಿ ಯುರೋಪಿಗೆ ಮಾರುತ್ತಿದೆ ಎಂಬುದು ಅಮೆರಿಕದ ವಾದ. ಈ ಸಂಬಂಧ ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್ ಇತ್ತೀಚೆಗೆ ಐರೋಪ್ಯ ದೇಶಗಳನ್ನು ಟೀಕಿಸಿದ್ದರು.
“ನೀವು ಭಾರತದಿಂದ ಸಂಸ್ಕರಿತ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ಉಕ್ರೇನ್ ಜತೆಗಿನ ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದ್ದೀರಿ" ಎಂದು ಆಪಾದಿಸಿದ್ದರು. ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕೆ ಅಮೆರಿಕ 50 ಪರ್ಸೆಂಟ್ ಟಾರಿ- ವಿಧಿಸಿರುವುದರ ಹೊರತಾಗಿಯೂ, ಭಾರತದಿಂದ ಸಂಸ್ಕರಿತ ತೈಲವನ್ನು ಕೊಳ್ಳುತ್ತಿರುವುದಕ್ಕೆ ಯುರೋಪನ್ನು ಟೀಕಿಸಿದ್ದಾರೆ ಸ್ಕಾಟ್ ಬೆಸೆಂಟ್.
ಟ್ರಂಪ್ ಸರಕಾರದ ಇಂಥ ಟೀಕೆಯ ಹೊರತಾಗಿಯೂ ಯುರೋಪ್ ಮತ್ತು ಭಾರತ ದೇಶಗಳು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದು ವಿಶೇಷ. ಮತ್ತೊಂದು ಕಡೆ ಯುರೋಪ್ ಕೂಡ ಅಮೆರಿಕ ಮತ್ತು ಚೀನಾದ ಅವಲಂಬನೆಯನ್ನು ಕಡಿತಗೊಳಿಸಬೇಕು ಎಂದು ಬಯಸುತ್ತಿದ್ದು, ಭಾರತಕ್ಕೆ ಹತ್ತಿರವಾಗುತ್ತಿದೆ.
ಕೆನಡಾದ ಇಂಧನ ಸಚಿವ ಟಿಮ್ ಹೋಡ್‌ಗ್ಸನ್ ಹೇಳಿರುವ ಮಾತನ್ನು ಇಲ್ಲಿ ಸ್ಮರಿಸಬಹುದು. “ಸುಂಕಾಸ ಮತ್ತು ಆರ್ಥಿಕ ಬಲದ ಮದದಿಂದ ಬೇರೆ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವವರಿಗೆ ಭಾರತ-ಯುರೋಪ್ ವ್ಯಾಪಾರ ಒಪ್ಪಂದವು ದಿಟ್ಟ ಉತ್ತರವಾಗಿದೆ" ಎಂದು ಅವರು ನೇರವಾಗಿ ಹೆಸರಿಸದಿದ್ದರೂ, ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತವು ಕಳೆದ 6 ವರ್ಷಗಳಲ್ಲಿ 8 ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿ ಕೊಂಡಿದೆ. ಮಾರಿಷಸ್, ಯುಎಇ, ಆಸ್ಟ್ರೇಲಿಯಾ, ಇಎಫ್ʼಟಿಎನ ಸದಸ್ಯ ರಾಷ್ಟ್ರಗಳು (ಐಸ್ಲೆಂಡ್- ಲಿಕ್ಟೆನ್‌ಸ್ಟೈನ್-ನಾರ್ವೆ-ಸ್ವಿಜರ್ಲೆಂಡ್), ಬ್ರಿಟನ್, ಒಮಾನ್, ನ್ಯೂಜಿಲೆಂಡ್ ಮತ್ತು ಇದೀಗ ಐರೋಪ್ಯ ಒಕ್ಕೂಟದ ಜತೆಗೆ ಎಫ್ʼಟಿಎ ಆಗಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಮೋದಿಯವರು ಗೆದ್ದಾಗ ಬ್ರಿಟನ್ನಿನ ಪತ್ರಿಕೆಯೊಂದು, “ಭಾರತದ ಮೊದಲ ಸೋಷಿಯಲ್ ಮೀಡಿಯಾ ಪ್ರಧಾನ ಮಂತ್ರಿ" ಎಂದು ಕರೆದಿತ್ತು. ಹನ್ನೆರಡು ವರ್ಷಗಳ ಬಳಿಕ ಭಾರತ-ಯುರೋಪ್ ಜಂಟಿಯಾಗಿ ಟ್ರೇಡ್ ಡೀಲ್ ಘೋಷಿಸಿವೆ. ಬ್ರಿಟನ್ ಕೂಡ ಇದಕ್ಕೂ ಮುನ್ನ ಒಪ್ಪಂದ ಮಾಡಿಕೊಂಡಿದೆ!
ಒಂದು ಡೀಲ್ ಮೂಲಕ ಮೋದಿಯವರು ಐರೋಪ್ಯ ಒಕ್ಕೂಟದ 27 ದೇಶಗಳನ್ನು ತಲುಪಿದ್ದಾರೆ. ಇದು ಅವರ ಮಾಸ್ಟರ್ ಸ್ಟ್ರೋಕ್ ಎಂದು ವಿದೇಶಾಂಗ ವ್ಯವಹಾರಗಳ ತಜ್ಞರು ಬಣ್ಣಿಸಿದ್ದಾರೆ!