ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Keshava Prasad B Column: ಭಾರತೀಯ ಸ್ಟಾಕ್‌ ಮಾರ್ಕೆಟ್‌ಗೆ ದೇಸಿ ಹೂಡಿಕೆದಾರರ ಅಭಯ

ಭಾರತದ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಕತೆ ಎನಿಸಿಕೊಂಡಿದೆ. ಐಎಂಎಫ್‌ನ ಗೀತಾಗೋಪಿನಾಥ್‌ ಪ್ರಕಾರ 2028ರೊಳಗೆ ಭಾರತವು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಹಾಗಾದರೆ ಇಷ್ಟೆಲ್ಲ ಸವಾಲುಗಳ ನಡುವೆಯೂ ಭಾರತದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ತೀರಾ ಕುಸಿಯದಂತೆ ತಡೆಯುತ್ತಿರುವ, ಷೇರು ಪೇಟೆಗೆ ರಕ್ಷಾ ಕವಚದಂತೆ ಅಚಲವಾಗಿ ನಿಂತಿರುವ ಹೂಡಿಕೆದಾರರು ಯಾರು? ಎಂದರೆ ಅದಕ್ಕೆ ಉತ್ತರವೇ ದೇಶೀಯ ಸಾಂಸ್ಥಿಕ ಹೂಡಿಕೆದಾರರು! ಈ ಬಗ್ಗೆ ವಿವರ ಇಲ್ಲಿದೆ.

ಭಾರತೀಯ ಸ್ಟಾಕ್‌ ಮಾರ್ಕೆಟ್‌ಗೆ ದೇಸಿ ಹೂಡಿಕೆದಾರರ ಅಭಯ

Keshav Prasad -

ಮನಿ ಮೈಂಡೆಡ್

ಹೊಸ ವರ್ಷ ಆರಂಭದಲ್ಲಿಯೇ ಸ್ಟಾಕ್‌ ಮಾರ್ಕೆಟ್‌ ತೀವ್ರ ಅಸ್ಥಿರತೆಯಲ್ಲಿದೆ. ಏನು ಮಾಡೋದು? ಎಂದು ಕೆಲವರು ಕೇಳುತ್ತಿರುತ್ತಾರೆ. ಇದಕ್ಕೆ ಕಾರಣಗಳೂ ಇವೆ. ಒಂದು ಕಡೆ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಭಾರಿ ತಲ್ಲಣ ಸಂಭವಿಸಿದೆ. ಬಂಗಾರ-ಬೆಳ್ಳಿಯ ದರಗಳು ಸಾರ್ವಕಾಲಿಕ ಎತ್ತರದಲ್ಲಿ ಮುಂದುವರಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹುಚ್ಚಾಟಕ್ಕೆ, ಟಾರಿಫ್‌ ಬೆದರಿಕೆಗೆ ಜಾಗತಿಕ ಆರ್ಥಿಕತೆಯೇ ನಲುಗಿದೆ. ಹಲವಾರು ದೇಶಗಳು ಪರಸ್ಪರ ಸಂಘರ್ಷದಲ್ಲಿವೆ. ನೆರೆಹೊರೆಯ ರಾಷ್ಟ್ರಗಳು ಅರಾಜಕತೆಯಲ್ಲಿವೆ. ಹೀಗಿದ್ದರೂ, ಇಲ್ಲಿ ಗಮನಿಸಲೇಬೇಕಾದ ಸಕಾರಾತ್ಮಕ ಅಂಶಗಳೂ ಇವೆ. ಭಾರತದ ಆರ್ಥಿಕತೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಕತೆಯಾಗಿದೆ. ಐಎಂಎಫ್‌ನ ಗೀತಾಗೋಪಿನಾಥ್‌ ಪ್ರಕಾರ 2028ರೊಳಗೆ ಭಾರತವು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಹಾಗಾದರೆ ಇಷ್ಟೆಲ್ಲ ಸವಾಲುಗಳ ನಡುವೆಯೂ ಭಾರತದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ತೀರಾ ಕುಸಿಯದಂತೆ ತಡೆಯುತ್ತಿರುವ, ಷೇರು ಪೇಟೆಗೆ ರಕ್ಷಾ ಕವಚದಂತೆ ಅಚಲವಾಗಿ ನಿಂತಿರುವ ಹೂಡಿಕೆದಾರರು ಯಾರು? ಎಂದರೆ ಅದಕ್ಕೆ ಉತ್ತರವೇ ದೇಶೀಯ ಸಾಂಸ್ಥಿಕ ಹೂಡಿಕೆ ದಾರರು! (Domestic Institutional Investors)! ಈ ಅಪರಿಚಿತ ದೇಸಿ ಸಾಂಸ್ಥಿಕ ಹೂಡಿಕೆದಾರರು ಎಂಥಾ ವಿಪ್ಲವಗಳ ನಡುವೆಯೂ, ಗಟ್ಟಿಯಾಗಿ ನಿಂತು, ಹೂಡಿಕೆಯನ್ನು ಮಾಡುವ ಮೂಲಕ ಸೆನ್ಸೆಕ್ಸ್‌, ನಿಫ್ಟಿಯನ್ನು ಅನವರತ ರಕ್ಷಿಸುತ್ತಿದ್ದಾರೆ. ಈಗ ಅಂಕಿ ಅಂಶಗಳನ್ನು ನೋಡೋಣ.

2026ರ ಜನವರಿ 16ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 4,346 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ನಿವ್ವಳ ಮಾರಾಟ ಮಾಡಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆ ದಾರರು 3,935 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ನಿವ್ವಳ ಖರೀದಿಸಿದ್ದರು. ಜನವರಿ 14ರಂದು ಎಫ್‌ ಐಐಗಳು 4,781 ಕೋಟಿ ನಿವ್ವಳ ಮಾರಾಟ ಮಾಡಿದ್ದರೆ, ಡಿಐಐಗಳು 5,217 ಕೋಟಿ ನಿವ್ವಳ ಖರೀದಿಸಿದ್ದರು. ಜನವರಿ 13ರಂದು ಎಫ್‌ಐಐಗಳು 1,499 ಕೋಟಿ ನಿವ್ವಳ ಮಾರಾಟ ಮಾಡಿದ್ದರೆ, ಡಿಐಐಗಳು 1,181 ಕೋಟಿ ನಿವ್ವಳ ಖರೀದಿಸಿದ್ದರು. ಜನವರಿ 12ರಂದು ಎಫ್‌ಐಐಗಳು 3,638 ಕೋಟಿ ನಿವ್ವಳ ಮಾರಾಟ ಮಾಡಿದ್ದರೆ, ಡಿಐಐಗಳು 5,839 ಕೋಟಿ ನಿವ್ವಳ ಖರೀದಿಸಿದ್ದರು! ಹೀಗೆ ನಿರಂತರವಾಗಿ ದೇಶೀಯ ಹೂಡಿಕೆದಾರರು ಪ್ರಬಲ ರಕ್ಷಾ ಕವಚವಾಗಿ ನಿಂತಿರುವುದು ವಿಶೇಷ. ಭಾರತದಲ್ಲಿ ಬದಲಾಗಿರುವ ಹೂಡಿಕೆಯ ಟ್ರೆಂಡ್‌ ಅನ್ನು ಸ್ಪಷ್ಟವಾಗಿ ಬಿಂಬಿಸಿದೆ.

ಸಂದೇಹವೇ ಬೇಡ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ಕೇವಲ ಸ್ಟಾಕ್‌ ಮಾರ್ಕೆಟ್‌ಗೆ ಮಾತ್ರವಲ್ಲದೆ, ಭಾರತದ ಆರ್ಥಿಕ ಬೆಳವಣಿಗೆಗೆ ಕೂಡ ಭದ್ರವಾದ ಬುನಾದಿಯನ್ನು ನಿರ್ಮಿಸುತ್ತಿದ್ದಾರೆ. ಕಾರ್ಪೊರೇಟ್‌ ವಲಯದ ಕಂಪನಿಗಳಿಗೆ ಷೇರು ಮಾರುಕಟ್ಟೆ ಈಗ ಆರ್ಥಿಕ ಸಂಪನ್ಮೂಲ ಒದಗಿಸುತ್ತಿದೆ. ರಿಟೇಲ್‌ ಹೂಡಿಕೆದಾರರೂ ದೊಡ್ಡ ಸಂಖ್ಯೆಯಲ್ಲಿ ಇನ್ವೆಸ್ಟ್‌ ಮಾಡುತ್ತಿದ್ದಾರೆ. ಹೇಗೆ ಇಸ್ರೇಲ್‌ನಲ್ಲಿ ಐರೋನ್‌ ಡೋಮ್‌ ರಕ್ಷಾ ಕವಚವು ಗಾಜಾ ಕಡೆಯಿಂದ ಹಮಾಸ್‌ ಉಗ್ರರ ರಾಕೆಟ್‌ ದಾಳಿಯನ್ನು ಆಗಸದಲ್ಲಿಯೇ ಚಿಂದಿ ಉಡಾಯಿಸುತ್ತವೆಯೋ, ಅದೇ ರೀತಿ ಭಾರತೀಯ ಷೇರು ಮಾರುಕಟ್ಟೆಗೆ ಡಿಐಐಗಳು ಅಭಯ ನೀಡಿವೆ.

ಹಾಗಂತ ಎಫ್‌ಐಐಗಳ ನಿವ್ವಳ ಷೇರು ಮಾರಾಟದ ಬಗ್ಗೆ ತೀರಾ ಆತಂಕಪಡಬೇಕಿಲ್ಲ. ನಿವ್ವಳ ಸೇಲ್ಸ್‌ ಫಿಗರ್‌ಗಳನ್ನು ನೋಡಿದ್ರೆ ಆತಂಕ ಆಗಬಹುದು. ಆದರೆ ಎಫ್‌ಐಐಗಳ ಒಟ್ಟಾರೆ ಖರೀದಿ ಈಗಲೂ ವಿಶ್ವಾಸದಾಯಕವಾಗಿಯೇ ಇವೆ. ಉದಾಹರಣೆಗೆ 2026ರ ಜನವರಿ 16ಕ್ಕೆ ಎಫ್‌ಐಐಗಳು 20,159 ಕೋಟಿ ರುಪಾಯಿ ಮೌಲ್ಯ ಷೇರುಗಳನ್ನು ಒಟ್ಟಾರೆ ಖರೀದಿಸಿವೆ. ಜನವರಿ 14ಕ್ಕೆ 13,121 ಕೋಟಿ, ಜನವರಿ 13ಕ್ಕೆ 11,994 ಕೋಟಿ, ಜನವರಿ 12ಕ್ಕೆ 9,071 ಕೋಟಿ ರುಪಾಯಿ ಮೌಲ್ಯದ ಷೇರುಗಳ ಒಟಾರೆ ಖರೀದಿ ನಡೆದಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಟ್ರಂಪ್‌ ಸುಂಕಾಸ್ತ್ರಕ್ಕೆ ಭಾರತ ಈಗಲೂ ಡೋಂಟ್‌ ಕೇರ್‌ !

ಹಾಗಾರೆ ಯಾರಿವರು? ದೇಶೀಯ ಸಾಂಸ್ಥಿಕ ಹೂಡಿಕೆದಾರರು ಎಂದರೆ ಭಾರತೀಯ ಮೂಲದ ಸಾಂಸ್ಥಿಕ ಹೂಡಿಕೆದಾರರು. ಮ್ಯೂಚುವಲ್‌ ಫಂಡ್‌ಗಳು, ಬ್ಯಾಂಕ್‌ಗಳು, ಇನ್ಷೂರೆನ್ಸ್‌ ಕಂಪನಿಗಳು (ಎಲ್‌ಐಸಿ, ಎಚ್‌ಡಿಎಫ್‌ಸಿ ಲೈಫ್) ಮತ್ತು ಪಿಂಚಣಿ ನಿಧಿಗಳು‌ (ಇಪಿಎಫ್‌ಒ) ಇದರಲ್ಲಿ ಬರುತ್ತವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗ್ರೂಪ್‌, ಭಾರತೀಯ ಜೀವ ವಿಮೆಆ ನಿಗಮ (ಎಲ್‌ಐಸಿ) ಭಾರತದ ಪ್ರಮುಖ ಡಿಐಐಗಳಾಗಿವೆ. ಎಲ್‌ಐಸಿ ಅದರಲ್ಲೂ ಅತಿ ದೊಡ್ಡ ಹೂಡಿಕೆದಾರ ಆಗಿದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಎಸ್‌ಬಿಐ ಮ್ಯೂಚುವಲ್‌ ಫಂಡ್‌, ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌, ಐಸಿಐಸಿಐ ಪ್ರುಡೆನ್ಷಿಯಲ್‌ ಮ್ಯೂಚುವಲ್‌ ಫಂಡ್‌ ಗಳನ್ನು ಹೆಸರಿಸಬಹುದು. ವಿಮೆ ಕಂಪನಿಗಳಲ್ಲಿ ಎಲ್‌ಐಸಿ, ಎಚ್‌ಡಿಎಫ್‌ಸಿ ಲೈಫ್‌, ಐಸಿಐಸಿಐ ಪ್ರುಡೆನ್ಷಿಯಲ್‌ ಲೈಫ್‌ ಇವೆ. ಪಿಂಚಣಿ ನಿಧಿಗಳಲ್ಲಿ ಇಪಿಎಫ್‌ಒ, ಎನ್‌ಪಿಸ್‌ ಇದೆ. ಬ್ಯಾಂಕ್‌ಗಳಲ್ಲಿ ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ ಇದೆ. ಇವುಗಳೆಲ್ಲ ದೇಶೀಯ ಸಾಂಸ್ಥಿಕ ಹೂಡಿಕೆದಾರರ ಕೆಟಗರಿಯಲ್ಲಿ ಮುಖ್ಯವಾಗಿವೆ.

2026ರ ಜನವರಿ ವೇಳೆಗೆ ದೇಶೀಯ ಸಾಂಸ್ಥಿಕ ಹೂಡಿಕೆದಾರರ ಟ್ರೆಂಡ್‌ ಐತಿಹಾಸಿಕ ಮಟ್ಟಕ್ಕೇರಿದೆ. ದಶಕಗಳ ಹಿಂದೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರದ್ದೇ ಆಟವಾಗಿತ್ತು. ಅವರು ಹೂಡಿಕೆ ಹಿಂತೆಗೆದುಕೊಂಡರೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿಯುತ್ತಿತ್ತು. ಅವರು ಹೂಡಿಕೆ ಮಾಡಿದಾಗ ಚೇತರಿಸುತ್ತಿತ್ತು. ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸಿದರೆ ಎಫ್‌ಐಐಗಳು ಭಾರತದ ಸ್ಟಾಕ್‌ ಮಾರ್ಕೆಟ್‌ನಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದರು. ಆಗ ಸೂಚ್ಯಂಕಗಳು ನೆಲಕಚ್ಚುತ್ತಿತ್ತು. ಹೂಡಿಕೆದಾರರಿಗೆ ಭಾರಿ ನಷ್ಟವಾಗುತ್ತಿತ್ತು. ಆದರೆ 2025ರ ಮಧ್ಯ ಭಾಗದಿಂದ ರಚನಾತ್ಮಕ ಬದಲಾವಣೆ ಸಂಭವಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಬದಲಿಗೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಪ್ರಾಬಲ್ಯ ಸಾಧಿಸಿದ್ದಾರೆ. ಎನ್‌ಎಸ್‌ ಇಯಲ್ಲಿ ನೋಂದಾಯಿತ ಕಂಪನಿಗಳಲ್ಲಿ ಡಿಐಐಗಳ ಹೋಲ್ಡಿಂಗ್ಸ್‌ 19.2 ಪರ್ಸೆಂಟ್‌ಗೆ ಏರಿಕೆಯಾಗಿದೆ. ಎಫ್‌ಐಐಗಳ ಮಾಲಿಕತ್ವ ಕಳೆದ 13 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ, ಅಂದರೆ 16.7 ಪರ್ಸೆಂಟ್‌ಗೆ ಇಳಿದಿದೆ. ಇದರ ಅರ್ಥ ಏನೆಂದರೆ ಭಾರತೀಯ ಷೇರು ಮಾರುಕಟ್ಟೆಯ ರಿಮೋಟ್‌ ಕಂಟ್ರೋಲ್‌ ಈಗ ಭಾರತೀಯರ ಕೈಯಲ್ಲಿಯೇ ಇದೆ.

ಹಾಗಾದರೆ ಈ ರಚನಾತ್ಮಕ ಬದಲಾವಣೆ ಆಗಿದ್ದು ಹೇಗೆ? ಇದರ ಹಿಂದಿರುವ ರಹಸ್ಯ ಆಯುಧ ಯಾವುದು? ಇದಕ್ಕೆ ಉತ್ತರ ಭಾರತೀಯ ರಿಟೇಲ್‌ ಹೂಡಿಕೆದಾರ! ನಾವು-ನೀವು-ಜನ ಸಾಮಾನ್ಯುರು! ಇವತ್ತು ಲಕ್ಷಾಂತರ ಮಂದಿ ಜನ ಸಾಮಾನ್ಯರು, ಮಧ್ಯಮ-ಮೇಲ್ಮಧ್ಯಮ ವರ್ಗದ ಆದಾಯವಿರುವ ಜನರು ಮ್ಯೂಚುವಲ್‌ ಫಂಡ್‌ ಸಿಪ್‌ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ ಮೆಂಟ್‌ ಪ್ಲಾನ್‌ ಅನ್ನು ಸಂಕ್ಷಿಪ್ತವಾಗಿ ಸಿಪ್‌ ಎನ್ನುತ್ತಾರೆ. ಇದು ಈಗ ಜನಪ್ರಿಯವಾಗುತ್ತಿದೆ. ನಗರ-ಪಟ್ಟಣ-ಹಳ್ಳಿಗಳಲ್ಲೂ ಜನ ಸಿಪ್‌ ಕಟ್ಟುತ್ತಿದ್ದಾರೆ! 2025ರ ಡಿಸೆಂಬರ್‌ ತಿಂಗಳಿನಲ್ಲಿ 31,000 ಕೋಟಿ ರುಪಾಯಿಗಳನ್ನು ಜನರು ಸಿಪ್‌ ಮೂಲಕ ಹೂಡಿಕೆ ಮಾಡಿದ್ದಾರೆ. ಅಂದರೆ ದಿನಕ್ಕೆ 1,000 ಕೋಟಿಗೂ ಹೆಚ್ಚು! ಈ ಸಿಪ್‌ ಸಂಸ್ಕೃತಿ ಸ್ಟಾಕ್‌ ಮಾರ್ಕೆಟ್‌ಗೆ ರಕ್ಷಾ ಕವಚವಾಗಿ ಪರಿಣಮಿಸಿದೆ.

ಕರೆನ್ಸಿ ನೋಟುಗಳಿಗಿಂತ ಬಂಗಾರ-ಬೆಳ್ಳಿಗೇ ಈಗ ಮೌಲ್ಯ !

ಇತ್ತೀಚೆಗೆ "ದೊಡ್ಡಣ್ಣʼ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆಸಿದ ಸುಂಕಾಸ್ತ್ರದ ಹುಚ್ಚಾಟಗಳು, ಬೆದರಿಕೆಯ ಎದುರೂ ಭಾರತದ ಸ್ಟಾಕ್‌ ಮಾರ್ಕೆಟ್‌ ಕ್ಯಾರೇ ಅನ್ನಲಿಲ್ಲ. ಎಫ್‌ಐಐಗಳು ನಿರಂತರ ತಿಂಗಳಾನುಗಟ್ಟಲೆ ಹೂಡಿಕೆ ಹಿಂತೆಗೆದುಕೊಂಡರೂ, ಹೂಡಿಕೆಗಳು ಈಕ್ವಿಟಿಗಳಿಂದ ಬಂಗಾರ-ಬೆಳ್ಳಿಯತ್ತ ವಾಲಿದರೂ, ದೇಶೀಯ ಹೂಡಿಕೆದಾರರು ಕೈಬಿಡಲಿಲ್ಲ. ದೇಶದ ಆರ್ಥಿಕತೆಯ ಬುನಾದಿ ಸದೃಢವಾಗಿ ಬೆಳೆಯುತ್ತಿರುವುದನ್ನು ಹೂಡಿಕೆದಾರರು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. 2026ರ ಕೇಂದ್ರ ಬಜೆಟ್‌ನಲ್ಲಿ ಮತ್ತಷ್ಟು ಸುಧಾರಣೆಗಳನ್ನು ಜನ ನಿರೀಕ್ಷಿಸುತ್ತಿದ್ದಾರೆ.

ಹಾಗಾದರೆ ಸವಾಲುಗಳು ಇಲ್ಲವೇ? ಖಂಡಿತವಾಗಿಯೂ ಇದೆ. ಅದೇನೆಂಬುದನ್ನೂ ನೋಡೋಣ:

ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌ ಹೀಗೆನ್ನುತ್ತಾರೆ-" ಭಾರತವು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ದಿನಗಳು ದೂರವಿಲ್ಲ. 2028 ಅಥವಾ ಅದಕ್ಕೂ ಮೊದಲೇ ಆಗಬಹುದು. ಆದರೆ ಭಾರತದ ತಲಾ ಆದಾಯವೂ ಹೆಚ್ಚಬೇಕು. ಅದು ದೊಡ್ಡ ಸವಾಲು. ದೀರ್ಘಕಾಲೀನ ಸುಧಾರಣೆಯ ಮೂಲಕ ಇದನ್ನೂ ಸಾಧಿಸಬಹುದು. ಭಾರತದಲ್ಲಿ ಭೂ ಸ್ವಾಧೀನ ಕಾಯಿದೆ ಸಂಕೀರ್ಣವಾಗಿದೆ. ಉದ್ಯಮ ವಲಯಕ್ಕೆ ಅವಶ್ಯವಿರುವ ಭೂ ಸ್ವಾಧೀನ ಸುಲಭದ ಕೆಲಸವಲ್ಲ. ಇತ್ತೀಚೆಗೆ ಕಾರ್ಮಿಕ ನೀತಿ ಸುಧಾರಣೆಯಾಗಿದೆ. ಆದರೆ ನ್ಯಾಯಾಂಗದ ಸುಧಾರಣೆಯೂ ಅತ್ತವಶ್ಯಕ. ಇದು ಉತ್ಪಾದನೆ ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರಲಿದೆ. 1980ರಿಂದೀಚೆಗೆ ಭಾರತದ ಶೇಕಡಾ 30ರಷ್ಟು ಬೆಳವಣಿಗೆ ಮಾತ್ರ ಕಾರ್ಮಿಕ ವಲಯದಿಂದ ಬಂದಿದೆ. ಇದಕ್ಕೆ ಕಾರಣ ಬಂಡವಾಳ ಹೂಡಿಕೆಗೆ ಮತ್ತು ಉತ್ಪಾದನೆಗೆ ಇದ್ದಂತಹ ಶಾಸನಾತ್ಮಕ ತೊಡಕುಗಳು. ಆಗಿನ ಕಾಲಕ್ಕೆ ತಕ್ಕಂತೆ ಕಾಯಿದೆಗಳು ಇತ್ತು. ಆದರೆ ಈಗ ಕಾಲ ಬದಲಾಗಿದೆ. ಹೂಡಿಕೆಗೆ ಉತ್ತೇಜನ ಅಗತ್ಯ. ಭಾರತದಲ್ಲಿ ಬೆಳವಣಿಗೆಗೆ ಪೂರಕವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಅಗತ್ಯ. ವಾಯು ಮಾಲಿನ್ಯ ಹೆಚ್ಚಳದಿಂದ ಜನರ ಆರೋಗ್ಯ ವೆಚ್ಚ ಹೆಚ್ಚುತ್ತದೆ. ಟಾರಿಫ್‌ಗಿಂತಲೂ ಮಾಲಿನ್ಯವೇ ದೊಡ್ಡ ಸವಾಲಾಗಿದೆʼʼ.

ಕೊನೆಯದಾಗಿ ಶ್ರೀಮಂತಿಕೆಯಲ್ಲಿ ತೋರಿಕೆಯದ್ದು ಮತ್ತು ನಿಜವಾದ್ದು ಎಂಬ ಎರಡು ವಿಧವಿದೆ. ತೋರಿಕೆಗೋಸ್ಕರ ಅನಗತ್ಯ ವಸ್ತುಗಳನ್ನು, ಸೇವೆಗಳನ್ನು ಖರೀದಿಸುವುದರಿಂದ ಆದಾಯ ಮಂಜಿ ನಂತೆ ಕರಗುತ್ತದೆ. ಆದರೆ ನಿಜವಾಗಿಯೂ ಶ್ರೀಮಂತರಾಗಲು ಹೂಡಿಕೆ ಮಾಡುವುದು ಬೋರಿಂಗ್‌ ಅನ್ನಿಸಿದರೂ, ಅದರ ಫಲಶ್ರುತಿ ಮಾತ್ರ ಚೆನ್ನಾಗಿರುತ್ತದೆ. ಅದು ಆರ್ಥಿಕ ಸ್ವಾತಂತ್ರ್ಯವನ್ನೂ ಕೊಡುತ್ತದೆ. ನಿಮ್ಮ ಆದಾಯ 20 ಪರ್ಸೆಂಟ್‌ ಲೆಕ್ಕದಲ್ಲಿ ಬೆಳೆಯುತ್ತಿದೆ ಎಂದು ಇಟ್ಟುಕೊಳ್ಳಿ. ಖರ್ಚು ಕೂಡ 25 ಪರ್ಸೆಂಟ್‌ ಹೆಚ್ಚುತ್ತಿದ್ದರೆ ಏನಾಗುತ್ತದೆ? ಟೆಕ್ನಿಕಲಿ ನೀವು ಹೆಚ್ಚು ಆದಾಯ ಗಳಿಸುತ್ತೀರಿ. ಆದರೂ ಬಡತನದ ಫೀಲ್‌ ಆಗುತ್ತಿರುತ್ತದೆ. ಒಂದು ಲಕ್ಷ ರುಪಾಯಿ ಸಂಪಾದನೆ ಇದ್ದು, ಖರ್ಚು 95 ಸಾವಿರ ಇದ್ದರೆ ಸದಾ ಆತಂಕ, ಒತ್ತಡ ಖಿನ್ನತೆ ಕಾಡಬಹುದು. ಆದರೆ 60 ಸಾವಿರ ಆದಾಯ ಮತ್ತು 30 ಸಾವಿರ ಖರ್ಚು ಆಗಿದ್ದರೆ, ಆರ್ಥಿಕ ಸ್ವಾತಂತ್ರ್ಯ ಬೇಗ ಸಿಗಬಹುದು. ಮನಸ್ಸಿನ ನೆಮ್ಮದಿಯೂ ಉಳಿಯುತ್ತದೆ.

ಅದೇ ರೀತಿ ಡಿಜಿಟಲ್‌ ಅರೆಸ್ಟ್‌, ಮೈಕ್ರೊಫೈನಾನ್ಸ್‌ ಕಂಪನಿಗಳ ಲೋಪದೋಷಗಳು, ಕ್ರೆಡಿಟ್‌ ಕಾರ್ಡ್‌ ಬಳಕೆಯ ಇತಿ-ಮಿತಿಗಳು, ಈಕ್ವಿಟಿ ಹೂಡಿಕೆ ಮತ್ತು ಟ್ರೇಡಿಂಗ್‌ ನಡುವಣ ವ್ಯತ್ಯಾಸ, ಗೃಹ ಸಾಲದ ನಿರ್ವಹಣೆ, ಪಿಂಚಣಿ ಫಂಡ್‌ಗಳ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಅಗತ್ಯ. ಡಿಜಿಟಲ್‌ ಅರೆಸ್ಟ್‌ ಎಂಬ ಪರಿಕಲ್ಪನೆಯೇ ಕಾನೂನುಗಳಲ್ಲಿ ಇಲ್ಲ. ಆದರೂ ವಿದ್ಯಾವಂತರು ಕೂಡ ಡಿಜಿಟಲ್‌ ಅರೆಸ್ಟ್‌ಗೆ ಸಂತ್ರಸ್ತರಾಗುತ್ತಿದ್ದಾರೆ. ದಿನೇದಿನೆ ಹೆಚ್ಚುತ್ತಿರುವ ಸೈಬರ್‌ ಅಪರಾಧಗಳು ಬಿಂಬಿಸುತ್ತಿವೆ.