ಮನಿ ಮೈಂಡೆಡ್
ಅಪ್ಪಟ ಕನ್ನಡಿಗರಾದ, ಕುಂದಾಪುರದ ಗೋಪಾಡಿ ಶ್ರೀನಿವಾಸರಾವ್. ಅವರನ್ನು ಹೋಟೆಲ್ ಉದ್ಯಮದ ‘ನಡೆದಾಡುವ ವಿಶ್ವಕೋಶ’ ಎಂದರೆ ಅತಿಶಯೋಕ್ತಿಯಾಗುವುದಿಲ್ಲ! ಅವರ ಯಶೋಗಾಥೆಯನ್ನು ಕೇಳಿದಾಗ, ಭಾರತದ ಹೋಟೆಲ್ ಉದ್ಯಮದ ಮಹಾನ್ ಸಾಧಕ ಒಬೆರಾಯ್ ಅವರ ಸಾಹಸಗಳು ಮತ್ತು ಆದರ್ಶಗಳು ನೆನಪಾಗುತ್ತವೆ.
ಬೆಂಗಳೂರಿನಲ್ಲಿ ಮನೆಮಾತಾಗಿರುವ ‘ಕೂಲ್ ಜಾಯಿಂಟ್, ಕೇನ್ ಓಲಾ ಮತ್ತು ಕೇಕ್ ವಾಲಾ’ ಇತ್ಯಾದಿಗಳ ಬಗ್ಗೆ ನೀವು ಕೇಳಿರಬಹುದು. ಕುಟುಂಬ ಸಮೇತರಾಗಿ ಬಂದು ಕೂಲ್ ಜಾಯಿಂಟ್‌ನಲ್ಲಿ ಬಜೆಟ್ ಫ್ರೆಂಡ್ಲಿ ಮತ್ತು ಉತ್ತಮ ಗುಣಮಟ್ಟದ ಸ್ಯಾಂಡ್‌ವಿಚ್, ಜ್ಯೂಸ್, ಐಸ್ ಕ್ರೀಂ ಸವಿದಿರ ಬಹುದು.
ಗೆಳೆಯರೊಂದಿಗೆ ಕೇನ್ ಓಲಾದಲ್ಲಿ ತಾಜಾ ಕಬ್ಬಿನ ಹಾಲು ಸೇವಿಸಿರಬಹುದು. ಹುಟ್ಟುಹಬ್ಬದ ಸಂಭ್ರಮಕ್ಕೆ, ಹೊಸ ವರ್ಷಾಚರಣೆಗೆ ಕೇಕ್ ವಾಲಾದಲ್ಲಿ ರುಚಿಯಾದ ಕೇಕ್‌ಗಳನ್ನು ಖರೀದಿಸಿ ಆಸ್ವಾದಿಸಿರಬಹುದು. ಇವುಗಳು ಯಾರದ್ದು ಎಂದು ಎಂದಾದರೂ ಆಲೋಚಿಸಿದ್ದೀರಾ? ಪ್ರಶ್ನೆ ಬಂದಿದ್ದರೂ, ಯಾರೋ ಉತ್ತರ ಭಾರತ ಮೂಲದ ಮಾರ್ವಾಡಿ ಬಿಸಿನೆಸ್ ಮ್ಯಾನ್ ಇದರ ಹಿಂದಿರಬಹುದು ಎಂಬ ಆಲೋಚನೆಯೂ ಸುಳಿದಿರಬಹುದು.
ಆದರೆ ‘ನಮ್ಮೂರ ಹೋಟೆಲ್, ತಾಜಾ ತಿಂಡಿ, ಆರೋಗ್ಯ ಆಹಾರ, ಈಶಾನ್ಯ ರೆಸ್ಟೊರೆಂಟ್’ನಲ್ಲಿ ಸವಿಯಾದ ಭೋಜನ ಮಾಡಿದಾಗ ಏನನ್ನಿಸಿರಬಹುದು? ಇದು ನಮ್ಮವರ ಹೋಟೆಲ್, ರೆಸ್ಟೋ ರೆಂಟ್ ಆಗಿರಬಹುದು ಅಂತ ಅಂದುಕೊಂಡಿರಬಹುದು. ವಾಸ್ತವ ಏನೆಂದರೆ ಮೇಲೆ ಹೇಳಿರುವ ಅಷ್ಟೂ ಹೋಟೆಲ್, ಬೇಕರಿ, ರೆಸ್ಟೋರೆಂಟ್ ಬ್ರ್ಯಾಂಡ್‌ಗಳ ಅದ್ಭುತ ಬಿಸಿನೆಸ್ ಸಾಮ್ರಾಜ್ಯವನ್ನು ಕಟ್ಟಿದವರು ಅಪ್ಪಟ ಕನ್ನಡಿಗರಾದ, ಕುಂದಾಪುರದ ಗೋಪಾಡಿ ಶ್ರೀನಿವಾಸರಾವ್! ಅವರನ್ನು ಹೋಟೆಲ್ ಉದ್ಯಮದ ‘ನಡೆದಾಡುವ ವಿಶ್ವಕೋಶ’ ಎಂದರೆ ಅತಿಶಯೋಕ್ತಿಯಾಗುವುದಿಲ್ಲ!
ನನಗಂತೂ ಇತ್ತೀಚೆಗೆ ‘ವಿಶ್ವವಾಣಿ ಟಿವಿ’ ಚಾನೆಲ್‌ಗೆ ನಡೆಸಿದ ಸಂದರ್ಶನದಲ್ಲಿ ಅವರ ಯಶೋ ಗಾಥೆಯನ್ನು ಕೇಳಿದಾಗ, ಭಾರತದ ಹೋಟೆಲ್ ಉದ್ಯಮದ ಮಹಾನ್ ಸಾಧಕ ಒಬೆರಾಯ್ ಅವರ ಸಾಹಸಗಳು ಮತ್ತು ಆದರ್ಶಗಳು ನೆನಪಾದವು.
ಇದನ್ನೂ ಓದಿ: Keshava Prasad B Column: ಇತರರನ್ನು ಶ್ರೀಮಂತರನ್ನಾಗಿಸಿದ ಭಾರತೀಯ ಉದ್ಯಮಿಗಳು !
1898ರಲ್ಲಿ ಪಂಜಾಬ್‌ನ ಸಣ್ಣ ಗ್ರಾಮದಲ್ಲಿ ಜನಿಸಿದ ಮೋಹನ್ ಸಿಂಗ್ ಒಬೆರಾಯ್ ಅವರು ಬಾಲ್ಯ ದಲ್ಲಿ ಕಡು ಬಡತನವನ್ನು ಎದುರಿಸಿದವರು. 1922ರಲ್ಲಿ ಶಿಮ್ಲಾದಲ್ಲಿ ಹೋಟೆಲೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ 50 ರುಪಾಯಿ ಸಂಬಳ. ಕಠಿಣ ಪರಿಶ್ರಮದಿಂದ ಹೋಟೆಲ್ ಉದ್ದಿಮೆಯಲ್ಲಿ ಹಂತಹಂತವಾಗಿ ಮೇಲೆ ಬಂದರು.
ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ಸಾಲಸೋಲ ಮಾಡಿ ಹೋಟೆಲ್ ಒಂದನ್ನು ಖರೀದಿಸಿದರು. ಅದನ್ನು ಬ್ರಿಟಿಷ್ ವ್ಯಕ್ತಿಯೊಬ್ಬರು ನಡೆಸುತ್ತಿದ್ದರು. ಆ ಹೋಟೆಲ್ ಅನ್ನು ಚಂದಗೊಳಿಸಿ, ವ್ಯವಸ್ಥಿತ ಗೊಳಿಸಿ ಲಾಭದ ಹಳಿಗೆ ತಂದರು. ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಒಬೆರಾಯ್ ಅತ್ಯಂತ ಪ್ರಯೋಗಶೀಲರು. 1965ರಲ್ಲಿಯೇ ದಿಲ್ಲಿಯಲ್ಲಿ ಮೊದಲ ಅತ್ಯಾಧುನಿಕ ಪಂಚತಾರಾ ಹೋಟೆಲ್ ಅನ್ನು ತೆರೆದಿದ್ದರು.
ಬಳಿಕ ದೇಶಾದ್ಯಂತ ಐಷಾರಾಮಿ ಹೋಟೆಲ್‌ಗಳ ಪ್ರಸಿದ್ಧ ಬ್ರ್ಯಾಂಡ್ ಆಗಿ ಒಬೆರಾಯ್ ಸಮೂಹ ಬೆಳೆಯಿತು. ಬೆಂಗಳೂರಿನ ಎಂಜಿ ರಸ್ತೆಯಲ್ಲೂ ಲಕ್ಸುರಿ ಒಬೆರಾಯ್ ಹೋಟೆಲ್ ಇದೆ.
“ಹೋಟೆಲ್‌ಗೆ ಆಗಮಿಸುವ ಎಲ್ಲರೂ ಅತಿಥಿಗಳೇ, ಅವರಿಗೆ ಪ್ರಾಶಸ್ತ್ಯ ಸಲ್ಲಬೇಕು. ಎಷ್ಟೇ ಕಷ್ಟ ವಾದರೂ ಗುಣಮಟ್ಟಕ್ಕೆ ಎಂದಿಗೂ ರಾಜಿಯಾಗಕೂಡದು. ಆಗ ಹಣ ಕೂಡ ತನ್ನಿಂತಾನೆ ಹುಡುಕಿಕೊಂಡು ಬರುತ್ತದೆ. ಹಣವನ್ನೇ ಬೇಟೆಯಾಡದಿರಿ" ಎನ್ನುತ್ತಿದ್ದರು ಒಬೆರಾಯ್.
ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸುವುದು ಅವರ ಕಲೆಯಾಗಿತ್ತು. ಒಬೆರಾಯ್ ಅವರು ಕೋಲ್ಕೊತಾದಲ್ಲಿ 1943ರಲ್ಲಿ ಗ್ರ್ಯಾಂಡ್ ಹೋಟೆಲ್ ಅನ್ನು ಗುತ್ತಿಗೆಗೆ ಪಡೆದಿದ್ದರು. ಆಗ ಕಾಲರಾ ಸಾಂಕ್ರಾಮಿಕ ರೋಗದ ಪಿಡುಗಿನ ಪರಿಣಾಮ ಈ ವ್ಯವಹಾರದಲ್ಲಿ ಅವರಿಗೆ ಭಾರಿ ನಷ್ಟವಾಗುವ ಅಪಾಯ ಕೂಡ ಇತ್ತು. ಆದರೆ ಒಬೆರಾಯ್ ಅವರು ಬುದ್ಧಿವಂತಿಕೆಯಿಂದ ಹೋಟೆಲ್ ಅನ್ನು ಭರ್ಜರಿ ಲಾಭದ ಹಳಿಗೆ ತಂದರು! ಅವರು ಮಾಡಿದ್ದಿಷ್ಟು- ಎರಡನೇ ಮಹಾಯುದ್ಧದ ಸಂದರ್ಭ ಬ್ರಿಟಿಷ್ ಸೇನಾ ಸಿಬ್ಬಂದಿಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಗ್ರಾಂಡ್ ಹೋಟೆಲ್ ಅನ್ನು ಮುನ್ನಡೆಸಿದರು. ಹೀಗೆ ವಿಪತ್ತನ್ನು ಅವಕಾಶವನ್ನಾಗಿ ಅವರು ಪರಿವರ್ತಿಸಿದರು.
ಕುಂದಾಪುರ ತಾಲೂಕಿನ ಕೋಟೇಶ್ವರದ ಗೋಪಾಡಿ ಶ್ರೀನಿವಾಸ ರಾವ್ ಅವರು ಕೂಡ ಹಳ್ಳಿಯ ಬಡತನ, ಸಂಕಷ್ಟಗಳನ್ನು ಕಂಡವರು. ಅನುಭವಿಸಿ ಗಟ್ಟಿಯಾದವರು. “ನಾನು ಓದಿದ್ದು ಆರನೇ ಕ್ಲಾಸ್ ಮಾತ್ರ" ಎನ್ನುವ ಶ್ರೀನಿವಾಸ ರಾವ್ ಅವರು ಇವತ್ತು ಕೋಟ್ಯಂತರ ರುಪಾಯಿಗಳಷ್ಟು ಟ್ಯಾಕ್ಸ್ ಕಟ್ಟುವ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ರಾಜ್ಯದಲ್ಲಿ ಹೈಟೆಕ್ ಓಪನ್ ಕಿಚನ್ (ಆಧುನಿಕ ತೆರೆದ ಅಡುಗೆ ಮನೆ) ಪರಿಕಲ್ಪನೆಯನ್ನು ಹೋಟೆಲ್ ಇಂಡಸ್ಟ್ರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ನಿಸ್ಸಂದೇಹವಾಗಿ ಗೋಪಾಡಿ ಶ್ರೀನಿವಾಸ ರಾವ್ ಅವರಿಗೆ ಸಲ್ಲುತ್ತದೆ. ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಅವರು ಹೋಟೆಲ್ ಇಂಡಸ್ಟ್ರಿಯಲ್ಲಿ ಮಾಡಿರುವ ನವೀನ ಪ್ರಯೋಗಗಳು ಅಧ್ಯಯನಯೋಗ್ಯ.
ಈ ಹಿಂದೆ ಹೋಟೆಲ್-ದರ್ಶಿನಿಗಳಲ್ಲಿ ಹೇಗೆ ಅಡುಗೆ ಮಾಡುತ್ತಾರೆ? ಅದು ಸ್ವಚ್ಛವಾಗಿ ಇದೆಯೇ? ಎಂಥಾ ನೀರು- ತರಕಾರಿ-ಹಿಟ್ಟು ಬಳಸುತ್ತಾರೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ ಶ್ರೀನಿವಾಸ ರಾವ್ ಅವರ ‘ತಾಜಾ ತಿಂಡಿ’ ಹೋಟೆಲ್‌ನ ಅಂಗಳವೇ ಅತ್ಯಂತ ಸ್ವಚ್ಛ.
ಅಡುಗೆ ಮನೆ ಅಚ್ಚುಕಟ್ಟು. ಜತೆಗೆ ಕೈಗೆಟಕುವ ದರ. ಬೆಂಗಳೂರಿನ ‘ತಾಜಾ ತಿಂಡಿ’ಯಲ್ಲಿ ಇವತ್ತಿಗೂ ಒಂದು ಮಸಾಲೆ ದೋಸೆಯ ದರ ೩೫ ರುಪಾಯಿ. ೧ ಇಡ್ಲಿ ದರ ೧೩ ರುಪಾಯಿ. ಕೇಸರಿ ಬಾತ್ ೧೫ ರುಪಾಯಿ, ಚೌಚೌ ಬಾತ್ ೩೦ ರುಪಾಯಿ ಮತ್ತು ಪ್ಲೇನ್ ದೋಸೆ ೩೫ ರುಪಾಯಿ. ಈ ದರವನ್ನು ಕೇಳಿದರೆ ಎಲ್ಲರಿಗೂ ಒಂದು ಕ್ಷಣ ಅಚ್ಚರಿಯಾದೀತು. ಆದರೆ ಇದೆಲ್ಲ ಹೇಗೆ ಸಾಧ್ಯವಾಯಿತು ಎಂದರೆ ಶ್ರೀನಿವಾಸ ರಾವ್ ಅವರ ಉತ್ತರ- “ಸ್ವಚ್ಛತೆಯನ್ನು ಕಾಪಾಡಿಕೊಂಡಿರುವುದು". ಅವರ ಪ್ರಯೋಗಶೀಲತೆ ಅನುಕರಣೀಯ.
ಮನಸ್ಸು ಮಾಡಿದ್ದರೆ ಅವರು ತಾಜಾ ತಿಂಡಿಯದ್ದೋ, ಕೂಲ್ ಜಾಯಿಂಟ್‌ನದ್ದೋ, ಕೇಕ್‌ವಾಲಾ ಅಥವಾ ನಮ್ಮೂರ ಹೋಟೆಲ್ನದ್ದೋ ಫ್ರಾಂಚೈಸಿ ಮಾದರಿಯಲ್ಲಿ ವಿಸ್ತರಿಸಬಹುದಿತ್ತು. ಆದರೆ ಅವರ ಆದರ್ಶ, ಆಲೋಚನೆಯೇ ವಿಶಿಷ್ಟ. “ನಾನು ಕೂಡ ಫ್ರಾಂಚೈಸಿ ಮಾದರಿಯಲ್ಲಿ ಒಂದೆರಡು ಬ್ರ್ಯಾಂಡ್‌ಗಳನ್ನು ಕಟ್ಟಬಹುದಿತ್ತು. ಆದರೆ ಅದು ನನ್ನ ಆಯ್ಕೆಯೂ ಅಲ್ಲ.
ಅದರಿಂದ ಹೋಟೆಲ್ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಮಯ ಸಿಗುತ್ತಿರ ಲಿಲ್ಲ. ಎಲ್ಲವೂ ಫ್ರಾಂಚೈಸಿಗೆ ಸೀಮಿತವಾಗಿರುತ್ತಿತ್ತು" ಎಂದು ವಿವರಿಸುತ್ತಾರೆ ರಾವ್! ನಮ್ಮೂರ ಹೋಟೆಲ್‌ನಲ್ಲಿ ತಿಂಡಿ-ತಿನಿಸನ್ನು ಕೆಜಿ ಲೆಕ್ಕದಲ್ಲಿ, ಸಾಂಬಾರ್ ಅನ್ನು ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡುವ ಮೂಲಕ ಸಂಚಲನ ಮೂಡಿಸಿದರು.
ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಪಾಕಶಾಲೆಯನ್ನೂ ನಿರ್ಮಿಸಿದರು. “ಬಿಸಿನೆಸ್ ನಲ್ಲಿ ಯಶಸ್ವಿಯಾಗುವುದು ಹೇಗೆ?" ಎಂಬ ಪ್ರಶ್ನೆಗೆ, “ಸ್ವಚ್ಛತೆಯನ್ನು ಸರ್ವತ್ರ ಕಾಪಾಡಿಕೊಳ್ಳಿ ಆಗ ನಿಮ್ಮ ಹೋಟೆಲ್ ವಹಿವಾಟು ಯಶಸ್ವಿಯಾಗುತ್ತದೆ. ಮೊದಲು ನಿಮ್ಮ ಹೋಟೆಲನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳಿ. ನಮ್ಮ ಹೋಟೆಲ್ ಗಳಲ್ಲಿ ಪಾತ್ರೆ ಒರೆಸುವ ಬಟ್ಟೆಯನ್ನು ಪ್ರತಿ ೧೫ ದಿನ ಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸುತ್ತೇವೆ.
ನಿಮ್ಮ ಹೋಟೆಲ್ ಕ್ಲೀನ್ ಆಗಿದ್ದಾಗ ಜನರು ಬರುತ್ತಾರೆ. ಆಹಾರ ರುಚಿಯಾಗಿದ್ದರೆ ಮಾತ್ರ ಸಾಲದು, ರುಚಿಯ ಜತೆಗೆ ಶುಚಿಯಾಗಿ ಇರುವುದು ಕೂಡ ಅದಕ್ಕಿಂತ ಹೆಚ್ಚು ಮುಖ್ಯವಾಗಿರುತ್ತದೆ. ನೀವು ರುಚಿಕರವಾದ ತಿಂಡಿ-ತೀರ್ಥಗಳನ್ನು ಮಾಡಿದ್ದರೂ, ಪರಿಸರ ಅಶುಚಿಯಾಗಿದ್ದರೆ ಗ್ರಾಹಕರು ಬರಲಾರರು. ನಮ್ಮ ತಾಜಾ ತಿಂಡಿ, ನಮ್ಮೂರ ಹೋಟೆಲ್ ಇರಬಹುದು, ಸಾರ್ವಜನಿಕರು ಬಂದು ಆಹಾರ ತಯಾರಿಸುವುದನ್ನು ಕೂಡ ವೀಕ್ಷಿಸಬಹುದು.
ನಮ್ಮ ಸಿಬ್ಬಂದಿಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ತರಬೇತಿ ನೀಡಲಾಗಿದೆ ಎನ್ನುತ್ತಾರೆ" ರಾವ್. “ಬೀದಿ ಬದಿಯಲ್ಲಿ ಸಣ್ಣ ಪುಟ್ಟ ವಾಹನಗಳಲ್ಲಿ ಕೂಡ ಜನ ಆಹಾರವನ್ನು ಮಾರಾಟ ಮಾಡುತ್ತಾರೆ. ಅವರು ಹೋಟೆಲ್ ಉದ್ಯಮಿಯಾಗಿ ಬೆಳೆಯುವುದು ಹೇಗೆ?" ಎಂದು ಪ್ರಶ್ನಿಸಿದರೆ, “ಉದ್ಯಮಿ ಯಾಗಲು ಬಯಸುವವರು ತಮ್ಮ ಆಹಾರೋತ್ಪನ್ನಗಳನ್ನು ಕಟ್ಟಡದ ಆಶ್ರಯದಲ್ಲಿ ಇಟ್ಟು ವ್ಯವಹಾರ ಆರಂಭಿಸಬೇಕು. ಆಗ ಅದು ಉದ್ದಿಮೆಯ ಸ್ವರೂಪ ಪಡೆಯುತ್ತದೆ" ಎನ್ನುತ್ತಾರೆ ರಾವ್.
ಉದಾಹರಣೆಗೆ ನೋಡಿ, ಈ ಹಿಂದೆ ಜನರು ಕಬ್ಬನ್ನು ರಸ್ತೆ ಬದಿಯಂದು ಯಂತ್ರ ಸ್ಥಾಪಿಸಿ ಅರೆದು ಲೋಟಗಳಲ್ಲಿ ಕಬ್ಬಿನ ಹಾಲನ್ನು ಮಾರಾಟ ಮಾಡುತ್ತಿದ್ದರು. ರಾವ್ ಅವರು ಇದಕ್ಕೊಂದು ಸಾಂಸ್ಥಿಕ ಚೌಕಟ್ಟು ಕೊಡಲು ‘ಕೇನ್ ಓಲಾ’ವನ್ನು ಆರಂಭಿಸಿದರು.
ಬೀದಿಬದಿಯಲ್ಲಿ ಮಾರಾಟವಾಗುತ್ತಿದ್ದ ಕಬ್ಬಿನ ಹಾಲು ಕಟ್ಟಡದ ಅಶ್ರಯಕ್ಕೆ ಬಂದಿತು. ಈ ಬ್ರ್ಯಾಂಡ್ ಹೊಸ ರೂಪದೊಂದಿಗೆ ಜನಪ್ರಿಯವಾಗಿದೆ. ಅವರು ವಿಷಯವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬುದನ್ನು ನೋಡಿ- “ಕಬ್ಬಿನ ಹಾಲಿಗೆ ವರ್ತಕರು ಐಸ್ ಮಿಶ್ರಣ ಮಾಡಿ ನೀಡಲು ಆರಂಭಿಸಿದ ಬಳಿಕ ಜನರಿಗೆ ಗಂಟಲುಬೇನೆ ಶುರುವಾಗತೊಡಗಿತು.
ಕಬ್ಬಿನ ಹಾಲೇ ಒಳ್ಳೆಯದಲ್ಲ ಎಂಬ ಅಪಪ್ರಚಾರವೂ ಆಯಿತು. ವಾಸ್ತವವಾಗಿ ಕಬ್ಬಿನ ಹಾಲು ಒಳ್ಳೆಯದೇ. ಆದರೆ ಅದಕ್ಕೆ ಕಳಪೆ ಐಸ್ ಹಾಕಿದ್ರೆ ಗಂಟಲುಬೇನೆ ಆಗುತ್ತದೆ. ಆದರೆ ಅದು ಕಬ್ಬಿನ ಹಾಲಿನ ತಪ್ಪಲ್ಲ" ಎನ್ನುತ್ತಾರೆ ರಾವ್!
“ ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ, ಸ್ಯಾನಿಟೈಸರ್ ಬಳಕೆ ವ್ಯಾಪಕವಾಗಿತ್ತು. ನೈರ್ಮಲ್ಯಕ್ಕೆ ಒತ್ತು ನೀಡಲಾಗಿತ್ತು. ಆದರೆ ನಮಗೆ ಇದಾವುದೂ ಸಮಸ್ಯೆ ಎನ್ನಿಸಲಿಲ್ಲ. ಏಕೆಂದರೆ ಕೋವಿಡ್ ಕಾಲಘಟ್ಟಕ್ಕೂ ಮೊದಲೇ ನಾವು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೆವು.
ಸ್ವಚ್ಛತೆ ಇದ್ದರೆ ಮನಸ್ಸು- ಆರೋಗ್ಯ ಎರಡೂ ಉಲ್ಲಸಿತವಾಗುತ್ತದೆ. ಅಂಥ ನೈರ್ಮಲ್ಯ ಯುತ ವಾತಾವರಣದಲ್ಲಿ ಆರೋಗ್ಯವೂ ಇರುತ್ತದೆ. ಆರೋಗ್ಯ ಇದ್ದಾಗ ಉತ್ತಮ ಆಲೋಚನೆ ಮತ್ತು ಐಡಿಯಾಗಳನ್ನು ಕಾರ್ಯಗತಗೊಳಿಸಲು ಸಾಧ್ಯ. ಆಗ ಸಂಪತ್ತೂ ವೃದ್ಧಿಸುತ್ತದೆ. ಆದ್ದರಿಂದ ಸ್ವಚ್ಛತೆಯು ಆರ್ಥಿಕ ಆರೋಗ್ಯಕ್ಕೂ ಮುಖ್ಯ ಕಾರಣವಾಗಿದೆ. ನಾನು ಕೂಡ ಸ್ವಚ್ಛತೆಯಿಂದಲೇ ಎಲ್ಲವನ್ನೂ ಗಳಿಸಿದ್ದೇನೆ" ಎನ್ನುತ್ತಾರೆ ಅವರು. ತಮ್ಮ ಹೋಟೆಲ್ ಇಂಡಸ್ಟ್ರಿಯ ವೃತ್ತಿಪರ ಅನುಭವವನ್ನು ಅನೇಕ ಯುವಜನರಿಗೆ ಅವರು ಧಾರೆ ಎರೆದಿದ್ದಾರೆ.
ಅಂದ ಹಾಗೆ, ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ಯಾವುದೇ ಅನುದಾನ ಮತ್ತು ವ್ಯವಸ್ಥೆ ಇಲ್ಲದಿರುವುದರಿಂದ ಭಾರಿ ಸಮಸ್ಯೆ ಸೃಷ್ಟಿಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಎಷ್ಟೋ ಕಡೆಗಳಲ್ಲಿ ಮಕ್ಕಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ಶಿಕ್ಷಕರು ಅಮಾನತಿಗೆ ಒಳಗಾದ ಪ್ರಕರಣಗಳೂ ನಡೆದಿವೆ. ಇಂಥ ಸನ್ನಿವೇಶದಲ್ಲಿ ಶ್ರೀನಿವಾಸ ರಾವ್ ಅವರು ಮೊದಲ ಬಾರಿಗೆ ಸರಕಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛವಾಗಿ ನಿರ್ವಹಿಸಲು ಮಾದರಿ ಅಭಿಯಾನ ವನ್ನು ಕೈಗೊಂಡಿದ್ದಾರೆ.
ನಿರಂತರವಾಗಿ ಸರಕಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಹೊಸ ಮಾದರಿ ವ್ಯವಸ್ಥೆ ಯೊಂದನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಮೊದಲಿಗೆ ಕೋಟೇಶ್ವರದಲ್ಲಿ ೨೪ ಸರಕಾರಿ ಶಾಲೆಗಳ ಶೌಚಾಲಯಗಳ ಸ್ವಚ್ಛತೆಗೆ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಹೊಸ ವಾಹನ, ಸ್ವಚ್ಛತಾ ಪರಿಕರಗಳು ಮತ್ತು ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಿದ್ದಾರೆ.
ದಿನಕ್ಕೆ ೪-೫ ಶಾಲೆಗಳಂತೆ ವಾರಕ್ಕೊಮ್ಮೆ ಈ ವಲಯದ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛ ಗೊಳಿಸಲಾಗುವುದು. ಇದಕ್ಕೆ ಸಂಬಂಧಸಿದ ವಿದ್ಯುತ್, ನೀರು, ಸಿಬ್ಬಂದಿ ವೇತನ, ವಾಹನ ಸಾರಿಗೆ ವೆಚ್ಚ ಎಲ್ಲವನ್ನೂ ‘ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನ’ವು ಮಾಡಲಿದೆ. ಈ ಪರಿಕಲ್ಪನೆ ಯನ್ನು ಯಾರು ಬೇಕಾದರೂ ಮುಕ್ತವಾಗಿ ಮಾಡಬಹುದು. ಇದು ದೊಡ್ಡ ಅಭಿಯಾನವಾಗಲಿ ಎಂಬುದೇ ನನ್ನ ಅಶಯ ಎನ್ನುತ್ತಾರೆ ಅವರು.