ಒಂದೊಳ್ಳೆ ಮಾತು
rgururaj628@gmail.com
ದಂತಕಥೆಗಳ ಪ್ರಕಾರ ಕೇರಳ ರಾಜ್ಯವನ್ನು ಅಸುರ ರಾಜನಾಗಿದ್ದ ಬಲಿ ಚಕ್ರವರ್ತಿ ಆಳುತ್ತಿದ್ದ. ಆತ ದಯಾಳು ಹಾಗೂ ಕರುಣಾಮಯಿಯಾಗಿದ್ದ. ಬಲಿ ಚಕ್ರವರ್ತಿಯ ಆಡಳಿತದಲ್ಲಿ ಜನರು ಕಷ್ಟದಿಂದ ಬಳಲಿದ್ದೇ ಇರಲಿಲ್ಲ. ಹಾಗಾಗಿ ರಾಜ್ಯದಲ್ಲಿ ಶಾಂತಿ ಸಮಾಧಾನ ನೆಲೆಸಿತ್ತು.
ರಾಜ ಬಲಿ ಚಕ್ರವರ್ತಿಯ ಉದಾರ ಮನಸ್ಸಿನಿಂದ ಸಂತಸಗೊಂಡ ಜನರು ಆತನನ್ನೇ ದೇವರೆಂದು ಪೂಜಿಸುತ್ತಿದ್ದರು. ಇದರಿಂದ ದೇವತೆಗಳಿಗೆ ಮತ್ಸರ ಉಂಟಾಗುತ್ತದೆ ಮತ್ತು ಅವರು ಬಲಿ ಚಕ್ರವರ್ತಿ ಯ ಖ್ಯಾತಿಯನ್ನು ಕುಗ್ಗಿಸಬೇಕೆಂದು ಉಪಾಯವನ್ನು ಹೂಡುತ್ತಾರೆ.
ಬಲಿಯಿಂದ ತಮ್ಮ ಅಧಿಕಾರಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂದು ಹೆದರಿದ ದೇವತೆಗಳು ವಿಷ್ಣು ವನ್ನು ಸಂಧಿಸಿ ಅವರಲ್ಲಿ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾರೆ. ಬಲಿಯ ದಯಾಮಯ ಪ್ರವೃತ್ತಿಯ ಬಗ್ಗೆ ಅರತ್ತಿದ್ದ ವಿಷ್ಣು, ಬಲಿಯನ್ನು ಪರೀಕ್ಷಿಸಲು ಸ್ವತಃ ತಾವೇ ವಾಮನ ರೂಪವನ್ನು ತಾಳುತ್ತಾನೆ.
ಇದನ್ನೂ ಓದಿ: Roopa Gururaj Column: ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆ
ಬಡ ಬ್ರಾಹ್ಮಣನಾಗಿ ಕುಬ್ಜ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿಗೆ ವಿಷ್ಣುವು ಹೋಗುತ್ತಾನೆ. ತನಗೆ ಸಣ್ಣ ತುಂಡು ಭೂಮಿ ದಾನ ನೀಡುವಂತೆ ಬಲಿಯಲ್ಲಿ ವಿಷ್ಣು ಕೇಳುತ್ತಾನೆ. ತನ್ನ ಮೂರು ಪಾದ ಗಳನ್ನು ಇರಿಸುವಷ್ಟು ಸ್ಥಳವನ್ನು ದಾನ ನೀಡುವಂತೆ ವಾಮನ ಬಲಿಯನ್ನು ಕೇಳುತ್ತಾರೆ. ರಾಜನು ಅದಕ್ಕೆ ಸಮ್ಮತಿಯನ್ನು ಸೂಚಿಸುತ್ತಿದ್ದಂತೆಯೇ ವಾಮನನು ತನ್ನ ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಡುತ್ತಾನೆ.
ಎರಡನೇ ಹೆಜ್ಜೆ ಆಕಾಶವನ್ನು ಆವರಿಸಿಕೊಳ್ಳುತ್ತದೆ ಮತ್ತು ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವ ರ್ತಿಯ ತಲೆಯ ಮೇಲೆ ವಿಷ್ಣು ಇರಿಸುತ್ತಾನೆ. ಆಗ ಪಾತಾಳ ಲೋಕಕ್ಕೆ ವಿಷ್ಣುವು ಬಲಿ ಚಕ್ರವರ್ತಿ ಯನ್ನು ತಳ್ಳುತ್ತಾನೆ. ವಿಷ್ಣು ಭಕ್ತನಾಗಿದ್ದ ಬಲಿಯು ವಿಷ್ಣುವನ್ನು ನೋಡಬೇಕೆಂದು ಬಯಸುತ್ತಾನೆ.
ಇಷ್ಟೆಲ್ಲದರ ನಡುವೆಯೂ ಮಹಾಬಲಿ ವಿಷ್ಣುವಿನಿಂದ ವರವೊಂದನ್ನು ಪಡೆದ. ಅದೆಂದರೆ, ವರ್ಷಕ್ಕೊಮ್ಮೆ ಅವನು ತೀರಾ ಆತ್ಮೀಯರಾಗಿದ್ದ ತನ್ನ ಜನರನ್ನು ಭೇಟಿಯಾಗಲು ಭೂಲೋಕಕ್ಕೆ ಬರಲು ಸಾಧ್ಯವಿತ್ತು.
ಅವನು ಭೂಲೋಕವನ್ನು ಭೇಟಿ ಮಾಡುವ ಆ ದಿವಸವನ್ನೇ ಕೇರಳದಲ್ಲಿ ‘ಓಣಂ ಹಬ್ಬ’ವಾಗಿ ಪ್ರತಿ ವರ್ಷವೂ ಆಚರಿಸುತ್ತಾರೆ. ಅಲ್ಲಿನ ಜನರು ಈ ಹಬ್ಬವನ್ನು ತಮ್ಮ ಪ್ರೀತಿಪಾತ್ರ ಅರಸನೆಡೆಗೆ ತಮಗಿ ರುವ ಅಭಿಮಾನ ಮತ್ತು ಸಂತಸವನ್ನು ಕೃತಜ್ಞತಾಪೂರ್ವಕವಾಗಿ ವ್ಯಕ್ತಪಡಿಸಲು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ.
ಹತ್ತು ದಿನಗಳ ಕಾಲ ನಡೆಯುವ ಈ ವಿಶೇಷ ಉತ್ಸವದಲ್ಲಿ ಕೇರಳದ ಸಾಂಸ್ಕೃತಿಕ ವೈಭವವೆಲ್ಲ ಮೈದಾಳಿರುತ್ತದೆಯಲ್ಲದೆ, ಜನರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟುತ್ತವೆ. ಓಣಂ ಉತ್ಸವಾ ಚರಣೆಯ ಅತ್ಯಂತ ಆಕರ್ಷಣೀಯ ಅಂಶವೆಂದರೆ ‘ತಿರುಓಣಂ’ನಂದು (10 ದಿನಗಳ ಹಬ್ಬದ ಪ್ರಮುಖ ಕೊನೆಯ ದಿನ) ದಿವಸ ತಯಾರಿಸಲಾಗುವ ‘ಓಣಂ ಸದ್ಯ’ ಎಂಬ ಅದ್ಭುತ ಭೋಜನ.
ಅದು 9 ತರದ ಭೋಜನವಾಗಿದ್ದು, 11ರಿಂದ 13 ಬಗೆಯ ತರಾವರಿ ಖಾದ್ಯಗಳನ್ನು ಹೊಂದಿರುತ್ತದೆ. ‘ಓಣಂಸದ್ಯ’ವನ್ನು ಬಾಳೆಯ ಎಲೆಗಳಲ್ಲಿ ಬಡಿಸಲಾಗುತ್ತದೆ ಮತ್ತು ಜನರು ತಮ್ಮ ಮನೆಗಳಲ್ಲಿ ನೆಲದ ಮೇಲೆ ಹಾಸಿದ ಚಾಪೆಗಳ ಮೇಲೆ ಕೂತು ಈ ಭೋಜನವನ್ನು ಸವಿಯುತ್ತಾರೆ.
ಓಣಂ ಹಬ್ಬದ ಮತ್ತೊಂದು ಮೋಡಿ ಮಾಡುವ ಕ್ರೀಡೆ ಎಂದರೆ ಅದು, ‘ವಳ್ಳಂಕಳಿ‘ ಎನ್ನುವ ಹಾಯಿದೋಣಿ ಪಂದ್ಯ. ಈ ಪಂದ್ಯವನ್ನು ಕೇರಳದ ಪಂಪಾ ನದಿಯಲ್ಲಿ ಆಯೋಜಿಸಲಾಗುತ್ತದೆ. ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿರುವ ದೋಣಿಗಳಲ್ಲಿ ನೂರಾರು ಕ್ರೀಡಾಪಟುಗಳು ಕೇಕೆ ಹಾಕುತ್ತ ಕೂತು, ಮೇರೆ ಮೀರಿದ ಉತ್ಸಾಹ ಮತ್ತು ಆನಂದದಿಂದ ಹಾಡುಗಳನ್ನು ಹೇಳಿಕೊಂಡು ಆಯೋಜನೆಗೊಳ್ಳುವ ಆ ಸ್ಪರ್ಧೆಯನ್ನು ನೋಡಲು ಪ್ರತೀವರ್ಷ ಅಸಂಖ್ಯಾತ ಜನ ಕೇರಳದಲ್ಲಿ ನೆರೆದಿರುತ್ತಾರೆ, ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ‘ಓಣಂ ಹಬ್ಬ’ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ತರಲಿ, ಬಲಿ ಚಕ್ರವರ್ತಿಯ ಸದ್ಗುಣಗಳು ಅನುಕರಣೆಯವಾಗಲಿ.