ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಈ ಅಮೂಲ್ಯ ವಿಟಮಿನ್‌ನ ಮೂಲ ನಮ್ಮ ದೇಶ!

ವಿಶೇಷವೆಂದರೆ, ಇಂದು ಇಡೀ ಜಗತ್ತಿಗೆ ವ್ಯಾಪಿಸಿರುವ ಸಿಟ್ರಸ್ ಹಣ್ಣುಗಳ ಮೂಲ, ಭಾರತ ಮತ್ತು ಭಾರತ ಉಪಖಂಡ! ಇದನ್ನು ನಾವು ಹೆಮ್ಮೆಯಿಂದಲೇ ಹೇಳಿಕೊಳ್ಳಬಹುದು. ಮನುಷ್ಯನಿಗೆ ಅನಿವಾರ್ಯವಾಗಿ ಅಗತ್ಯವಿರುವ ವಿಟಮಿನ್ ಸಿಯ ಅತಿ ಶ್ರೀಮಂತ ಮೂಲವೇ ಈ ಸಿಟ್ರಸ್ ಹಣ್ಣುಗಳು. ನಮ್ಮ ನಾಡಿನಲ್ಲಿ, ನಮ್ಮ ದೇಶದಲ್ಲಿ ಲಿಂಬೆ, ಕಿತ್ತಳೆ, ಮುಸುಂಬಿ, ಎಳ್ಳಿ ಕಾಯಿ, ದುಡ್ಲೆ, ಗಜನಿಂಬೆ, ಕಂಚಿ ಮೊದಲಾದ ಹಣ್ಣುಗಳು ಸುಲಭವಾಗಿ ಬೆಳೆಯುವುದರಿಂದ, ಅಷ್ಟರ ಮಟ್ಟಿಗೆ ನಾವು ಅದೃಷ್ಟವಂತರೆಂದೇ ಹೇಳಿಕೊಳ್ಳಬೇಕು.

ಈ ಅಮೂಲ್ಯ ವಿಟಮಿನ್‌ನ ಮೂಲ ನಮ್ಮ ದೇಶ!

-

ಶಶಾಂಕಣ

ಲಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣಿನ ಮಹತ್ವವನ್ನು ಎತ್ತಿ ತೋರಿಸುವ ಒಂದು ಅಪೂರ್ವ ಎನಿಸುವ ಬರಹವನ್ನು ಹಿರಿಯ ವೈದ್ಯರೂ, ಅಂಕಣಕಾರರೂ ಆದ ನಾ. ಸೋಮೇಶ್ವರ ಅವರು ಇತ್ತೀಚೆಗೆ ಬರೆದಿದ್ದಾರೆ. (ವಿಶ್ವವಾಣಿ : 24.6.2026). 1747ರಲ್ಲಿ ಬ್ರಿಟಿಷ್ ವೈದ್ಯನೊಬ್ಬನು, ವಿಟಮಿನ್ ಸಿ ಕೊರತೆ ಯಿಂದ ಬಳಲುತ್ತಿದ್ದ ಕೆಲವು ನಾವಿಕರ ಮೇಲೆ ಪ್ರಯೋಗಾರ್ಥವಾಗಿ, ಲಿಂಬಿ ರಸ ಮತ್ತು ಕಿತ್ತಳೆಯ ಪ್ರಯೋಗ ಮಾಡಿದನು: ಅಂದರೆ, ಇವುಗಳ ರಸವನ್ನು ಕುಡಿಸಿದನು. ಆ ನಾವಿಕರು ಹಲವು ವಾರಗಳ ಕಾಲ ಸಮುದ್ರದಲ್ಲಿ ಓಡಾಡುತ್ತಿದ್ದು, ತೀವ್ರ ಬಳಲಿಕೆ ತರುವ ಸ್ಕರ್ವಿ ಎಂಬ ರೋಗದಿಂದ ನರಳುತ್ತಿದ್ದರು.

ಅವರನ್ನು ಐದು ಗುಂಪುಗಳನ್ನಾಗಿಸಿ, ಪ್ರತ್ಯೇಕ ಗುಂಪಿಗೆ ಸೇಬಿನ ಮದ್ಯ, ಗಂಧಕಾಮ್ಲದ ಹನಿ, ಮೂರು ಚಮಚ ವಿನೆಗರ್, ಅರ್ಧ ಪಿಂಟ್ ಸಮುದ್ರದ ನೀರು, ಬೆಳ್ಳುಳ್ಳಿ ಸಾಸಿವೆ ಕಷಾಯ ಮತ್ತು ಒಂದು ಗುಂಪಿಗೆ ದಿನಕ್ಕೆರಡು ಕಿತ್ತಳೆ ಮತ್ತು ಒಂದು ಲಿಂಬೆ ಹಣ್ಣಿನ ರಸವನ್ನು ಕುಡಿಸಲಾಯಿತು. ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಮತ್ತು ಲಿಂಬೆಯನ್ನು ಸೇವಿಸಿದ ನಾವಿಕರ ತಂಡವು ಒಂದು ವಾರ ದಲ್ಲೇ ಚೇತರಿಕೆ ಕಂಡು, ಬಹುಬೇಗನೆ ಗುಣಮುಖರಾದರು. ಲಿಂಬೆ ಮತ್ತು ಕಿತ್ತಳೆಯಲ್ಲಿರುವ ವಿಟಮಿನ್ ಸಿ, ಅವರ ರೋಗವನ್ನು ಗುಣಮುಖರನ್ನಾಗಿಸಿತ್ತು.

ಆ ನಂತರ, ಬ್ರಿಟಿಷ್ ಸೇನೆ ಮತ್ತು ಹಡಗುಗಳ ನಾವಿಕರು ಲಿಂಬೆ, ಕಿತ್ತಳೆ ಮೊದಲಾದ ಸಿಟ್ರಸ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ, ಯುದ್ಧಗಳನ್ನೇ ಗೆದ್ದರು! ಆದ್ದರಿಂದ, ಬ್ರಿಟಿಷರು ತಮ್ಮ ‘ಸೂರ್ಯ ಮುಳುಗದ ಸಾಮ್ರಾಜ್ಯ’ವನ್ನು ಸ್ಥಾಪಿಸಲು, ಸಿಟ್ರಸ್ ಹಣ್ಣುಗಳೇ ಕಾರಣ ಎಂದೂ ಹೊಗಳಲಾಗಿದೆ!

ಇದನ್ನೂ ಓದಿ: Shashidhara Halady Column: ಇಲ್ಲಿ ಶಾಸ್ತ್ರ ಹೇಳಲಾಗುವುದು ! ಶುಲ್ಕ 25 ಡಾಲರ್‌ !

ಆದರೆ, ಆಗಿನ್ನೂ ವಿಟಮಿನ್ ಸಿ ಎಂಬದರ ಹೆಚ್ಚಿನ ವಿವರಗಳು ವೈದ್ಯಲೋಕಕ್ಕೆ ಗೊತ್ತಿರಲಿಲ್ಲ. ನಮ್ಮ ದೇಹವು ‘ವಿಟಮಿನ್ ಸಿ’ಯನ್ನು ತಾನಾಗಿಯೇ ಉತ್ಪಾದಿಸಲಾರದು ಎಂಬುದೂ ಗೊತ್ತಿರ ಲಿಲ್ಲ. ಅದನ್ನು ಪ್ರತಿದಿನ ಆಹಾರದ ಮೂಲಕವೇ ಪಡೆಯಬೇಕು ಎಂಬುದು ನಂತರ ಗೊತ್ತಾಯಿತು. ಇಂದು ಪ್ರತಿ ದಿನ ಸಿಟ್ರಸ್ ರಸವನ್ನು, ಅಂದರೆ ಲಿಂಬೆ ಹಣ್ಣಿನ ರಸ ಅಥವಾ ಮೂಸಂಬಿ, ಕಿತ್ತಳೆ ಮೊದಲಾದ ಹಣ್ಣುಗಳನ್ನು ತಿನ್ನುವುದು ಉತ್ತಮ ಅಭ್ಯಾಸ ಎಂದು ಋಜುವಾತಾಗಿದೆ. ಆರೋಗ್ಯದ ಕುರಿತು ಕಾಳಜಿ ಇರುವವರೆಲ್ಲರೂ, ಬೇರೆ ಉತ್ತಮ ಆಹಾರದ ಜತೆ ಇವುಗಳನ್ನು ಸೇವಿಸುತ್ತಾರೆ. ಅಷ್ಟರ ಮಟ್ಟಿಗೆ ಅದು ನಮ್ಮ ದಿನಚರಿಯಲ್ಲಿ, ಆಹಾರದಲ್ಲಿ ಅನಿವಾರ್ಯ!

ವಿಶೇಷವೆಂದರೆ, ಇಂದು ಇಡೀ ಜಗತ್ತಿಗೆ ವ್ಯಾಪಿಸಿರುವ ಸಿಟ್ರಸ್ ಹಣ್ಣುಗಳ ಮೂಲ, ಭಾರತ ಮತ್ತು ಭಾರತ ಉಪಖಂಡ! ಇದನ್ನು ನಾವು ಹೆಮ್ಮೆಯಿಂದಲೇ ಹೇಳಿಕೊಳ್ಳಬಹುದು. ಮನುಷ್ಯನಿಗೆ ಅನಿವಾರ್ಯವಾಗಿ ಅಗತ್ಯವಿರುವ ವಿಟಮಿನ್ ಸಿಯ ಅತಿ ಶ್ರೀಮಂತ ಮೂಲವೇ ಈ ಸಿಟ್ರಸ್ ಹಣ್ಣುಗಳು. ನಮ್ಮ ನಾಡಿನಲ್ಲಿ, ನಮ್ಮ ದೇಶದಲ್ಲಿ ಲಿಂಬೆ, ಕಿತ್ತಳೆ, ಮುಸುಂಬಿ, ಎಳ್ಳಿ ಕಾಯಿ, ದುಡ್ಲೆ, ಗಜನಿಂಬೆ, ಕಂಚಿ ಮೊದಲಾದ ಹಣ್ಣುಗಳು ಸುಲಭವಾಗಿ ಬೆಳೆಯುವುದರಿಂದ, ಅಷ್ಟರ ಮಟ್ಟಿಗೆ ನಾವು ಅದೃಷ್ಟವಂತರೆಂದೇ ಹೇಳಿಕೊಳ್ಳಬೇಕು. ಜತೆಗೆ ಇಡೀ ಜಗತ್ತಿಗೆ ಸಿಟ್ರಸ್ ಹಣ್ಣನ್ನು ಕೊಟ್ಟ ನಾಡು ನಮ್ಮದು ಎಂಬುದೂ ಒಂದು ಹಿರಿಮೆಯೇ ಸರಿ.

ಬೇರೆ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ವಲಸೆ ಬಂದ ಸಸ್ಯ ಮತ್ತು ತರಕಾರಿಗಳ ಕುರಿತು ಸಾಕಷ್ಟು ವಿಚಾರಗಳನ್ನು ಕೇಳಿರಬಹುದು; ದೂರದ ದಕ್ಷಿಣ ಅಮೆರಿಕದಿಂದಲೋ, ಯುರೋಪಿನಿಂದಲೋ ಬಂದ ತರಕಾರಿ ಮತ್ತು ಸಸ್ಯಗಳ ಕುರಿತು ನಮಗೆ ಸಾಕಷ್ಟು ಕುತೂಹಲ, ಅಪಾರ ಬೆರಗು ಸಹ! ಉದಾಹರಣೆಗೆ ಮೆಣಸಿನ ಕಾಯಿಯು ದಕ್ಷಿಣ ಅಮೆರಿಕದ ಸಸ್ಯ; ಅದನ್ನು ಕೊಲಂಬಸ್ (1451-1506) ಮತ್ತು ಯುರೋಪಿಯನರು ಹೊರಜಗತ್ತಿಗೆ ಪರಿಚಯಿಸಿದರು; ಪೋರ್ಚುಗೀಸರ ಮೂಲಕ ಅದು ನಮ್ಮ ದೇಶಕ್ಕೂ ಬಂದಿರಬೇಕು; ನಮ್ಮ ದೇಶದಲ್ಲಿ ಈ ವಿದೇಶಿ ಸಸ್ಯವು ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ; ಕಾಳು ಮೆಣಸಿನ ಪ್ರಾಬಲ್ಯವನ್ನು ಮುರಿದದ್ದೇ ಈ ಮೆಣಸಿನ ಕಾಯಿ; ಆ ಮೂಲಕ, ಮಧ್ಯಯುಗದಲ್ಲಿ ನಮ್ಮ ದೇಶಕ್ಕೆ ಬರುತ್ತಿದ್ದ ಆದಾಯವನ್ನೂ ಪರೋಕ್ಷವಾಗಿ ತಪ್ಪಿಸಿತು!

lemon

ನಾನಾ ರೀತಿಯ ಮೆಣಸಿನ ಗಿಡಗಳು, ಕಾಯಿಗಳು ನಮ್ಮ ನಾಲಗೆಯ ರುಚಿಯನ್ನು ತಣಿಸಿವೆ. ಚೂರು ಮೆಣಸು, ಬೋಂಡಾ ಮೆಣಸು, ಜೀರಿಗೆ ಮೆಣಸು, ಕ್ಯಾಪ್ಸಿಕಂ, ಹಸಿ ಮೆಣಸು ಇ.ಇ. ವಿಶೇಷವೆಂದರೆ, ಮೆಣಸಿನ ಕಾಯಿಯು ಯುರೋಪಿನಲ್ಲಿ ಪರಿಚಯಗೊಳ್ಳುವ ತನಕ, ನಮ್ಮ ನಾಡಿನ ಕಾಳು ಮೆಣಸು ಮಾತ್ರ ಆ ಜನರಿಗೆ ಖಾರ ನೀಡುವ ಸಂಬಾರ ಪದಾರ್ಥ ಎನಿಸಿತ್ತು! ಇದೇ ರೀತಿ, ಗೋಡಂಬಿ ಗಿಡವು ಮೂಲತಃ ದಕ್ಷಿಣ ಅಮೆರಿಕದ ಬ್ರೆಜಿಲ್ ಪ್ರದೇಶದ್ದು; ಇದನ್ನು ಸಹ ಯುರೋಪಿಯನ್ ನಾವಿಕರು ಅಮೆರಿಕದಿಂದ ಯುರೋಪಿಗೆ ತಂದು, ಅಲ್ಲಿಂದ ಗೋವಾ ಮೂಲಕ ನಮ್ಮ ದೇಶಕ್ಕೆ ಪರಿಚಯಿಸಿ ದರು.

ಇಂತಹ ಹಲವು ವಿದೇಶಿ ಮೂಲದ ಸಸ್ಯಗಳು ನಮ್ಮ ನಾಲಗೆಯ ರುಚಿ ಹೆಚ್ಚಿಸಿವೆ; ಎಷ್ಟರ ಮಟ್ಟಿಗೆ ಎಂದರೆ, ಮೆಣಸಿನ ಕಾಯಿಯಂತಹ ರುಚಿಕರ, ಖಾರ, ಘಾಟಿನ ಸಸ್ಯವನ್ನು ಹೊರಗಿಟ್ಟು ನಮ್ಮ ದಿನಚರಿಯನ್ನು ಇಂದು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ.

ಇದಕ್ಕೆ ಸಂವಾದಿಯಾಗಿ, ನಮ್ಮ ದೇಶದ ಮೂಲದ ಹಲವು ಸಸ್ಯಗಳು ಯುರೋಪ್, ಅಮೆರಿಕ ಮೊದಲಾದ ಪ್ರದೇಶಗಳಿಗೆ ಪಯಣಿಸಿವೆ, ವಲಸೆ ಹೋಗಿವೆ. ಅವುಗಳಲ್ಲಿ ಅಗ್ರಗಣ್ಯ ಎಂದರೆ ಲಿಂಬೆ ಮತ್ತು ಸಿಟ್ರಸ್ ಜಾತಿಯ ಸಸ್ಯಗಳು. ಅದರಲ್ಲೂ ಲಿಂಬೆ, ಕಿತ್ತಳೆ ಮೊದಲಾದ ಸಿಟ್ರಸ್ ಹಣ್ಣುಗಳು ಜಗತ್ತಿನ ನಾಗರಿಕತೆಯ ವಿಕಸನಕ್ಕೆ ನೀಡಿರುವ ಕೊಡುಗೆ ಅಪಾರ, ಅಮೂಲ್ಯ.

1747ರಲ್ಲಿ, ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವ 200 ವರ್ಷಗಳ ಹಿಂದೆ, ರಾಯಲ್ ನೇವಿಯ ವೈದ್ಯ ಜೇಮ್ಸ್ ಲಿಂಡ್‌ನು ತನ್ನ ದೇಶದ ನಾವಿಕರಿಗೆ ಲಿಂಬೆ ರಸವನ್ನು ಕುಡಿಸಿ, ಸ್ಕರ್ವಿ ರೋಗವನ್ನು ವಾಸಿ ಮಾಡಿದ್ದು ಐತಿಹಾಸಿಕ ಘಟನೆ. ಆದರೆ, ಅದಕ್ಕೂ ಬಹಳ ಮೊದಲೇ ಲಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳು ನಮ್ಮ ದೇಶದಿಂದ ಯುರೋಪ್ ಮೊದಲಾದ ದೇಶಗಳನ್ನು ತಲುಪಿದ್ದವು. ಬಹು ಪುರಾತನ ಕಾಲದಲ್ಲಿ ನಡೆದ ವಲಸೆ, ನಂತರ ಅರೆಬಿಯನ್ ವರ್ತಕರ ಮೂಲಕ ಲಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಯುರೋಪ್ ತಲುಪಿದವು ಎಂದು ತಿಳಿಯಲಾಗಿದೆ.

ಎರಡನೆಯ ಶತಮಾನದಲ್ಲೇ ಇಟೆಲಿ ಮತ್ತು ರೋಮ್ ಸಾಮ್ರಾಜ್ಯವನ್ನು ಲಿಂಬೆ ಪ್ರವೇಶಿಸಿತ್ತು. ಪರ್ಷಿಯಾ, ಇರಾಕ್, ಈಜಿಪ್ಟ್‌ಗೆ ಕ್ರಿ.ಶ.700ರಲ್ಲಿ ಲಿಂಬೆ ಪ್ರವೇಶವಾಯಿತು. ಹತ್ತನೆಯ ಶತಮಾನ ದಲ್ಲಿ ಅರೇಬಿಯಾದ ತೋಟಗಳಲ್ಲಿ ಲಿಂಬೆಯನ್ನು ಅಲಂಕಾರಿಕ ಸಸ್ಯವನ್ನಾಗಿ ಬೆಳೆಸಲಾಗುತ್ತಿತ್ತು. ಯುರೋಪ್‌ನಲ್ಲಿ 15ನೆಯ ಶತಮಾನದಲ್ಲಿ, ಅಮೆರಿಕದಲ್ಲಿ ಹದಿನಾರನೆ ಶತಮಾನದಲ್ಲಿ ಲಿಂಬೆಯ ತೋಟಗಳು, ಕಿತ್ತಳೆಯ ತೋಟಗಳು (ಆರೆಂಜರಿ) ತಲೆ ಎತ್ತಿದವು. ಯುರೋಪಿನ ಆರೆಂಜರಿಗಳು ಪ್ರತಿಷ್ಠೆಯ ವನಗಳಾಗಿದ್ದವು! 1493ರಲ್ಲಿ ಕ್ರಿಸ್ಟೊ-ರ್ ಕೊಲಂಬಸನು ಲಿಂಬೆಯ ಬೀಜಗಳನ್ನು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಅಮೆರಿಕಕ್ಕೆ ಕೊಂಡೊಯ್ದ.

ಬಹು ಪುರಾತನ ಕಾಲದಿಂದಲೂ ಹಿಮಾಲಯದ ತಪ್ಪಲಿನಲ್ಲಿ, ಅಸ್ಸಾಂ, ಮ್ಯಾನ್ಮಾರ್, ದಕ್ಷಿಣ ಚೀನಾ ಪ್ರದೇಶದಲ್ಲಿ ಲಿಂಬೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿತ್ತು. ಇದು ಎಷ್ಟು ಪುರಾತನ ಕಾಲ ಎಂದರೆ, ಹಲವು ಲಕ್ಷ ವರ್ಷಗಳ ಹಿಂದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಹುಳಿ ಕಿತ್ತಳೆ/ ಕಾಡು ಕಿತ್ತಳೆ (ಬಿಟ್ಟರ್ ಆರೆಂಜ್) ಮತ್ತು ಸಿಟ್ರಾನ್ (ಕಾಡು ಲಿಂಬೆ) ಗಿಡಗಳ ಸಂಕರದಿಂದ ಲಿಂಬೆಯ ತಳಿಗಳು ಉತ್ಪನ್ನಗೊಂಡವು. ನಿಸರ್ಗದಲ್ಲೇ ಈ ಸಂಕರ ನಡೆದು, ಲಿಂಬೆ ಮತ್ತು ಇತರ ಹಲವು ಸಿಟ್ರಸ್ ತಳಿಗಳು ರೂಪುಗೊಂಡವು. ಆಯುರ್ವೇದ ಔಷಧ ಪದ್ಧತಿಯಲ್ಲಿ ಲಿಂಬೆ ರಸದ ವ್ಯಾಪಕ ಬಳಕೆಯನ್ನು ಗಮನಿಸಿದರೆ, ಲಿಂಬೆಯ ಔಷಧಿಯ ಗುಣಗಳನ್ನು ನಮ್ಮ ದೇಶದವರು ಸಾವಿರಾರು ವರ್ಷಗಳ ಮುಂಚೆಯೇ ಗುರುತಿಸಿದ್ದರು ಎನಿಸುತ್ತದೆ. ವಿಟಮಿನ್ ಸಿ ಹೇರಳವಾಗಿರುವ ಲಿಂಬೆಯು, ಹುಳಿ ಗುಣ ಹೊಂದಿದ್ದು, ನಾನಾ ರೀತಿಯಲ್ಲಿ ಬಳಕೆಯಾಗುತ್ತಿದೆ. ಔಷಧವಾಗಿ ಲಿಂಬೆ ರಸ ಪ್ರಮುಖ ವಾಗಿ ಬಳಕೆಯಾಗಿದೆ. ಹಾಲನ್ನು ಮೊಸರು ಮಾಡಲು ಈಗಲೂ ಲಿಂಬೆರಸವನ್ನು ಬಳಸುವ ಪುರಾತನ ಪದ್ಧತಿಯು ಅಲ್ಲಲ್ಲಿ ಮುಂದುವರಿದಿದೆ!

ಲಿಂಬೆಯ ಜತೆಯಲ್ಲೇ, ಹಲವು ಸಿಟ್ರಸ್ ಪ್ರಭೇದಗಳನ್ನು ಗುರುತಿಸಬಹುದು. ಕಿತ್ತಳೆ, ಗಜನಿಂಬೆ, ಎಳ್ಳಿ, ದುಡ್ಲಿ, ಮುಸುಂಬಿ, ಸಿಹಿ ಕಂಚಿ, ಕಹಿ ಕಂಚಿ, ಚಕ್ಕೋತ, ಕಿಮೋ - ಈ ರೀತಿ ನಾನಾ ರೀತಿಯ ಸಿಟ್ರಸ್ ತಳಿಗಳು ಪುರಾತನ ಕಾಲದಿಂದಲೇ ಮನುಷ್ಯನಿಗೆ ಪರಿಚಿತ. ಜಗತ್ತಿನ ಎಲ್ಲಾ ಸಿಟ್ರಸ್ ಪ್ರಭೇದದ ಹಣ್ಣುಗಳಿಗೆ ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿದ್ದ ತಳಿಗಳೇ ತಂದೆ ತಾಯಿ ಇದ್ದಂತೆ ಎಂಬ ವಿಚಾರವೇ ವಿಸ್ಮಯ ಹುಟ್ಟಿಸುವಂತಹದ್ದು.

ನಮ್ಮ ಪಶ್ಚಿಮ ಘಟ್ಟಗಳಲ್ಲಿ ಅಲ್ಲಲ್ಲಿ ಕಾಡುಗಳಲ್ಲಿ ಕಾಣಸಿಗುವ ಕಾಡು ಕಿತ್ತಳೆ ತಳಿಗಳು, ಪುರಾತನ ಸಿಟ್ರಸ್ ಪ್ರಭೇದಗಳೇ ಇರಬೇಕು. (ಈ ಕುರಿತು ಸಂಶೋಧನೆ ಅಗತ್ಯವಿದೆ). ನಾಯಿ ಕಿತ್ತಳೆ, ಇಳ್ಳಿ ಹಣ್ಣು, ಚಿಟ್ಟ ಕಿತ್ತಳೆ ಮೊದಲಾದ ಹೆಸರುಗಳಿಂದ ಇವು ಸುಳ್ಯ, ಸಿರ್ಸಿ, ಸಾಗರ, ಚಿಕ್ಕಮಗಳೂರು ಮೊದಲಾದ ಕಡೆ ಮೊದಲಿನಿಂದಲೂ ಪರಿಚಿತ. ಸಿಹಿ ಕಿತ್ತಳೆ ಗಿಡಗಳನ್ನು ಕಸಿ ಮಾಡಲು ಕಾಡು ಕಿತ್ತಳೆ ಗಿಡಗಳ ಕಾಂಡವನ್ನು ಬಳಸುವುದುಂಟು. ಸಿಹಿ ಕಿತ್ತಳೆ ಹಣ್ಣಿನಲ್ಲಿ ನಾಲ್ಕಾರು ಬೀಜಗಳು ಕಂಡುಬಂದರೆ, ಕಾಡು ಕಿತ್ತಳೆಯಲ್ಲಿ ಹತ್ತಾರು ಅಥವಾ ಇನ್ನೂ ಜಾಸ್ತಿ ಬೀಜಗಳಿರುತ್ತವೆ ಮತ್ತು ಸಾಮಾನ್ಯವಾಗಿ ಇವು ಹುಳಿ; ಗಾತ್ರದಲ್ಲೂ ಚಿಕ್ಕವು. ಆದರೆ, ಒಂದು ಕಾಡು ಕಿತ್ತಳೆ ಮರದಲ್ಲಿ ವರ್ಷಕ್ಕೆ ಐನೂರಕ್ಕೂ ಹೆಚ್ಚು ಹಣ್ಣುಗಳಾಗುವುದನ್ನು ಗುರುತಿಸಲಾಗಿದೆ.

ಹಲವು ಸಿಟ್ರಸ್ ತಳಿಯ ಹಣ್ಣುಗಳು ನಮ್ಮಲ್ಲಿ ಬೆಳೆಯುತ್ತವೆ. ಬಯಲು ಸೀಮೆಯಲ್ಲಿ ಕಾಣಸಿಗುವ ‘ಇಳ್ಳಿ ಹಣ್ಣು’ ಸಿಟ್ರಸ್ ಗುಂಪಿಗೆ ಸೇರಿದ ಸಸ್ಯ; ಆದರೆ ಇದರಿಂದ ಜ್ಯೂಸ್ ತಯಾರಿಸಲು ಮಾತ್ರ ಸಾಧ್ಯ. ಆದರೆ, ಶಿರಸಿ ಪ್ರದೇಶದಲ್ಲಿ ‘ಇಳ್ಳಿ ಹಣ್ಣು’ ಎಂದರೆ ಕಾಡು ಕಿತ್ತಳೆ. ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಸಿಹಿ ಕಂಚಿ ಮತ್ತು ಕಹಿ ಕಂಚಿ ಎಂಬ ಎರಡು ಪ್ರಭೇದದ ಸಿಟ್ರಸ್ ಮರಗಳು ಕಾಣ ಸಿಗುತ್ತವೆ. ಇವುಗಳ ದೊಡ್ಡ ಗಾತ್ರದ ಹಣ್ಣುಗಳ ತೊಳೆಗಳನ್ನು ಉಪ್ಪು, ಮೆಣಸು ಬೆರೆಸಿ ತಿನ್ನಲು ಬಲು ರುಚಿ!

ಸಿಟ್ರಸ್ ಪ್ರಭೇದದ ಮೂಲವು ನಮ್ಮ ದೇಶ ಮತ್ತು ದಕ್ಷಿಣ ಏಷ್ಯಾವೇ ಆದರೂ, ಇಂದು ವಿದೇಶ ಗಳಲ್ಲಿ ಇವುಗಳ ವಿವಿಧ ತಳಿಗಳ ಅಭಿವೃದ್ಧಿ ಆಗಿದೆ. ಈ ರೀತಿ ಬೇರೆ ದೇಶಗಳಲ್ಲಿ ಅಭಿವೃದ್ಧಿ ಹೊಂದಿ, ಅಲ್ಲಿನ ಅಧಿಕೃತ ಹಣ್ಣು ಎಂದೇ ಗುರುತಿಸಲ್ಪಡುತ್ತಿರುವ ಹಣ್ಣುಗಳಲ್ಲಿ ಮೂಸಂಬಿ ಪ್ರಮುಖ. ಮೂಸಂಬಿ ಹಣ್ಣು ಮೂಲತಃ ನಮ್ಮ ದೇಶದ ಸಿಟ್ರಸ್ ಪ್ರಭೇದಗಳಿಂದ ರೂಪುಗೊಂಡ ಹಣ್ಣು. ಆದರೆ, ಇಂದು ಅಽಕೃತ ಮಾಹಿತಿಯನ್ನು ಗಮನಿಸಿದರೆ, ಮೂಸಂಬಿಯು ಇರಾನಿನ ದಕ್ಷಿಣ ಭಾಗದ ಹಣ್ಣು ಎಂದು ಪರಿಚಯಗೊಳ್ಳುತ್ತಿದೆ! ಅದಕ್ಕೆ ಕಾರಣವಿದೆ. ಮೂಸಂಬಿಯು, ಹುಳಿ ಕಿತ್ತಳೆ (ಸಿಟ್ರಸ್ ಆರೆಂಟಿಯಮ್) ಮತ್ತು ಕಾಡು ಲಿಂಬೆ /ಗಜ ಲಿಂಬೆ (ಸಿಟ್ರಸ್ ಮೆಡಿಕಾ) ಸಸ್ಯಗಳ ಸಂಕರ ದಿಂದ ರೂಪುಗೊಂಡ ಹಣ್ಣು. ಸಿಟ್ರಸ್ ಮೆಡಿಕಾದ ಮೂಲವು ಹಿಮಾಲಯದ ತಪ್ಪಲು; ಹುಳಿ ಕಿತ್ತಳೆ ಸಹ ಭಾರತ ಮೂಲದ್ದು. ಇವೆರಡನ್ನೂ ಸಂಕರಗೊಳಿಸಿ, ಮೂಸಂಬಿ ಎಂಬ ಹಣ್ಣನ್ನು ಉತ್ಪಾದಿಸಿದ ಕೀರ್ತಿ ಇರಾನ್‌ಗೆ ಸಂದಿದೆ!

ಮೂಸಂಬಿಯ ವಿಭಿನ್ನ ತಳಿಯು ಮೊಸಾಂಬಿಕ್ ದೇಶದಲ್ಲಿ ರೂಪುಗೊಂಡಿದ್ದು, ಇದನ್ನು ಪೋರ್ಚುಗೀಸರು ಭಾರತಕ್ಕೆ ತಂದರು. ಮೂಸಂಬಿ ಎಂಬ ಪದವು ಇರಾನ್ ಮತ್ತು ಮೊಸಾಂಬಿಕ್ ಪದಗಳಿಂದ ಬಂದಿದೆ ಎನ್ನಲಾದೆ. ಮುಸಂಬಿಯ ವಿಶೇಷವೆಂದರೆ, ಇದನ್ನು ಸೇವಿಸುವದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಇರಾನ್ ದೇಶದಲ್ಲಿ ನೆಗಡಿ ಜ್ವರವಾದಾಗ ಇದರ ರಸವನ್ನು ನಾಟಿ ಔಷಧವಾಗಿ ಉಪಯೋಗಿಸುವರು! ಅಂತಹ ಔಷಽಯ ಗುಣಗಳು ಈ ಹಣ್ಣಿಗೆ ಇರುವುದಂತೂ ನಿಜ. ನಮ್ಮ ದೇಶದಲ್ಲಿ ಇಂದು ದೊರೆಯುವ ಅತ್ಯುತ್ತಮ ಹಣ್ಣುಗಳ ಪೈಕಿ (ನಮ್ಮ ಆರೋಗ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ) ಮೂಸಂಬಿಯೇ ಅಗ್ರಗಣ್ಯ ಎನ್ನಬಹುದು.

ಕಿತ್ತಳೆಯು ನಮ್ಮ ರಾಜ್ಯದವರಿಗೆ ಕೊಡಗಿನ ಕಿತ್ತಳೆ ಎಂದೇ ಪರಿಚಿತ. ಕೆಲವು ದಶಕಗಳ ಹಿಂದೆ ಕೊಡಗಿನ ಕಿತ್ತಳೆ ಮರಗಳಿಗೆ ರೋಗವೊಂದು ಬಂದು, ಹಲವು ಮರಗಳು ನಾಶವಾದವು. ನಾಗಪುರದ ಕಿತ್ತಳೆಯು ಗಾತ್ರದಲ್ಲಿ ದೊಡ್ಡದಗಿದ್ದು, ಸಿಪ್ಪೆ ತೆಗೆಯಲು ಸುಲಭವಾಗಿದ್ದರಿಂದ, ಅದು ಇಂದು ಹೆಚ್ಚು ಜನಪ್ರಿಯ.

ಈ ಬರಹದ ಆರಂಭದಲ್ಲಿ, ಡಾ. ನಾ. ಸೋಮೇಶ್ವರರ ಪ್ರಸ್ತಾಪವಿದೆ; ಅವರು, ತಮ್ಮ ಅದೇ ಲೇಖನದ ಕೊನೆಯಲ್ಲಿ, ಎಲ್ಲರಿಗೂ ಒಂದು ಸಲಹೆ ಕೊಡುತ್ತಾರೆ : “.. .. ಪ್ರಸ್ತುತ ಜಂಕ್-ಡ್ ವ್ಯಾಮೋಹಕ್ಕೆ ಬಲಿಯಾಗಿರುವ ನಮ್ಮ ಯುವಜನತೆಯು ಸಬ್-ಕ್ಲಿನಿಕಲ್ ವಿಟಮಿನ್-ಸಿ ಡೆಫಿಶಿಯನ್ಸಿಗೆ ತುತ್ತಾಗಿದೆ. ಇದು ಅತ್ಯಂತ ವಿಷಾದನೀಯ. ಹಾಗಾಗಿ ಮನೆಯಲ್ಲಿರುವ ಪ್ರತಿಯೊಬ್ಬರೂ ದಿನಕ್ಕೆ ಒಂದು ಹುಳಿಹಣ್ಣನ್ನು ತಿನ್ನುವ ಪ್ರತಿಜ್ಞೆಯನ್ನು ಕೈಗೊಳ್ಳೋಣ." ಡಾ. ಸೋಮೇಶ್ವರ ಅವರು ನೀಡಿರುವ, ಅತ್ಯಂತ ಪ್ರಾಯೋಗಿಕವಾಗಿರುವ ಈ ಸಲಹೆ ಮಾತುಗಳನ್ನು ಸುವರ್ಣಾಕ್ಷರದಲ್ಲಿ ಬರೆಸಿಟ್ಟು, ಪ್ರತಿ ಮನೆಯಲ್ಲಿ ಪ್ರದರ್ಶಿಸಬೇಕು! ನಮ್ಮ ಯುವಜನತೆ ವಿಟಮಿನ್ ಸಿ ಢೆಫಿಶಿಯನ್ಸಿಗೆ ಗುರಿಯಾಗಿರುವ ವಿಚಾರ ಆತಂಕಕಾರಿ; ಇದಕ್ಕೆ ಸರಳ ಪರಿಹಾರವಾಗಿ, ನಮ್ಮಲ್ಲಿ ಹೇರಳವಾಗಿ ಲಭ್ಯವಿರುವ ಸಿಟ್ರಸ್ ಹಣ್ಣುಗಳನ್ನು (ಲಿಂಬೆ, ಮೂಸಂಬಿ, ಕಿತ್ತಳೆ ಇತ್ಯಾದಿ) ಉಪಯೋಗಿಸಬಹುದು. ಯುವಜನತೆಯ ಜತೆಗೇ, ಮನೆಯ ಎಲ್ಲರೂ ದಿನಕ್ಕೆ ಸ್ವಲ್ಪವಾದರೂ ಸಿಟ್ರಸ್ ರಸವನ್ನು ಅಥವಾ ಹಣ್ಣುಗಳನ್ನು ಸೇವಿಸೋಣ. ಈ ನಿಟ್ಟಿನಲ್ಲಿ, ನಮ್ಮ ದಿನನಿತ್ಯದ ಆಹಾರದ ಜತೆ ಲಿಂಬೆ ರಸವನ್ನು ಬೆರೆಸುವುದು ಒಂದು ಉತ್ತಮ ಅಭ್ಯಾಸ! ಬನ್ನಿ, ಲಿಂಬೆ ಮುಸುಂಬಿ ಸೇವಿಸೋಣ, ಆರೋಗ್ಯ ಉತ್ತಮಪಡಿಸಿ ಕೊಳ್ಳೋಣ!