ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghava Sharma Nidle Column: ರಾಜ್ಯಪಾಲ ಹುದ್ದೆಯನ್ನು ಶಾಶ್ವತವಾಗಿ ರದ್ದುಗೊಳಿಸಬಾರದೇಕೆ ?

ರಾಜ್ಯಪಾಲರು ಸಾಮಾನ್ಯವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಾರೆ ಮತ್ತು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರೂ ಆಗಿರುತ್ತಾರೆ. ಕೇಂದ್ರ ಸರಕಾರದ ಶಿಫಾರಸುಗಳ ಆಧಾರದಲ್ಲಿ ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಸಾಂವಿಧಾನಿಕ ಹುದ್ದೆಯ ರಾಜ್ಯಪಾಲರು, ಅನೇಕ ಸಂದರ್ಭಗಳಲ್ಲಿ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವುದಕ್ಕೆ ದೇಶ ಅನೇಕ ಬಾರಿ ಸಾಕ್ಷಿಯಾಗಿದೆ.

ರಾಜ್ಯಪಾಲ ಹುದ್ದೆಯನ್ನು ಶಾಶ್ವತವಾಗಿ ರದ್ದುಗೊಳಿಸಬಾರದೇಕೆ ?

-

ಜನಪಥ

ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜ್ಯ ಸರಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೆ ಸದನದಿಂದ ಹೊರ ನಡೆದ ಘಟನೆ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷಗಳ ಮಧ್ಯೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಮಧ್ಯೆ ರಾಜ್ಯಪಾಲ ಹುದ್ದೆಯ ಪ್ರಸ್ತುತತೆ, ಕಾರ್ಯವೈಖರಿ, ಸಾಂವಿಧಾನಿಕ ಪಾತ್ರಗಳ ಕುರಿತಾದ ಚರ್ಚೆಗಳು ಮತ್ತೆ ಗರಿಗೆದರಿವೆ.

ರಾಜ್ಯಪಾಲರು ಸಾಮಾನ್ಯವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಾರೆ ಮತ್ತು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರೂ ಆಗಿರು ತ್ತಾರೆ. ಕೇಂದ್ರ ಸರಕಾರದ ಶಿಫಾರಸುಗಳ ಆಧಾರದಲ್ಲಿ ರಾಷ್ಟ್ರಪತಿಯಿಂದ ನೇಮಕ ಗೊಳ್ಳುವ ಸಾಂವಿಧಾನಿಕ ಹುದ್ದೆಯ ರಾಜ್ಯಪಾಲರು, ಅನೇಕ ಸಂದರ್ಭಗಳಲ್ಲಿ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವುದಕ್ಕೆ ದೇಶ ಅನೇಕ ಬಾರಿ ಸಾಕ್ಷಿಯಾಗಿದೆ.

ಕೇಂದ್ರದಲ್ಲಿರುವ ಪಕ್ಷಗಳು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿಪಕ್ಷಗಳ ಸರಕಾರಕ್ಕೆ ತೊಂದರೆ ಕೊಡಲೆಂದೇ ರಾಜ್ಯಪಾಲರನ್ನು ಕಳುಹಿಸಿಕೊಡುತ್ತವೇನೋ ಎಂಬಷ್ಟರ ಮಟ್ಟಿಗೆ ರಾಜ್ಯಪಾಲ ಹುದ್ದೆಗಳು ದುರುಪಯೋಗಗೊಂಡಿವೆ.

ರಾಜ್ಯಪಾಲರ ದುರ್ಬಳಕೆ ನಿರ್ವಹಣೆಯ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳದ್ದು ಸಮಾನ ಪಾಲು. ರಾಜ್ಯದಲ್ಲಿ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಮುನ್ನ ಕೇರಳದಲ್ಲೂ ಸರಕಾರ ಮತ್ತು ರಾಜ್ಯಪಾಲ ಆರ್.ವಿ.ಅರ್ಲೇಕರ್ ನಡುವೆ ತಿಕ್ಕಾಟ ನಡೆಯಿತು. ರಾಜ್ಯ ಸಚಿವ ಸಂಪುಟ ಅನುಮೋದಿತ ಬಜೆಟ್ ಕುರಿತ ತಮ್ಮ ಭಾಷಣದಲ್ಲಿ ಕೇಂದ್ರ ಸರಕಾರದ ಹಣಕಾಸು ನೀತಿಗಳನ್ನು ಟೀಕಿಸುವ ಕೆಲ ಪ್ಯಾರಾಗಳನ್ನು ಅವರು ಸದನದಲ್ಲಿ ಓದಲಿಲ್ಲ.

ಇದನ್ನೂ ಓದಿ: Raghava Sharma Nidle Column: ನಿತಿನ್‌ ನಬಿನ್‌ ಆಯ್ಕೆಯು ಹಿರಿಯರಿಗೆ ಕೊಟ್ಟ ಸಂದೇಶವೇನು ?

ಬದಲಿಗೆ, ತಮ್ಮ ಕಚೇರಿ ಸಿದ್ಧಪಡಿಸಿದ ಕೆಲ ಸಾಲುಗಳನ್ನು ಭಾಷಣದ ಪ್ರತಿಗೆ ಸೇರಿಸಿ ಕೊಂಡರು. ತಮಿಳುನಾಡಿನಲ್ಲೂ ಇಂಥದ್ದೇ ಮಾದರಿ ಘಟನೆ ನಡೆಯಿತು. ಅಲ್ಲಿನ ರಾಜ್ಯಪಾಲ ಆರ್.ಎನ್.ರವಿ ಅವರು ರಾಷ್ಟ್ರಗೀತೆ ನಂತರ ವಿಧಾನಸಭೆಯಿಂದ ಹೊರ ನಡೆದ ನಾಟಕೀಯ ಘಟನೆ ನಡೆಯಿತು.

ಚುನಾಯಿತ ಸರಕಾರ ಸಿದ್ಧಪಡಿಸಿದ ಭಾಷಣ ಓದಲು ಅವರೂ ಒಪ್ಪಲಿಲ್ಲ. ಕೇಂದ್ರ ಸರಕಾರದ ಆಡಳಿತ ನೀತಿಗಳನ್ನು ಟೀಕಿಸುವ ರಾಜ್ಯ ಸರಕಾರಗಳ ಭಾಷಣಗಳನ್ನು ಸದನದಲ್ಲಿ ಓದಿ, ಆ ಮೂಲಕ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡುವ ಉದ್ದೇಶ ಈ ಮೂರೂ ರಾಜ್ಯಪಾಲರಿಗೆ ಇರಲಿಲ್ಲ ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ.

ಆದರೆ, ಮಂತ್ರಿಮಂಡಲ ಸಿದ್ಧಪಡಿಸಿದ ಭಾಷಣವನ್ನು ತಿರಸ್ಕರಿಸಿ ನಡೆಯುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ ಎನ್ನುವುದು ಪ್ರಶ್ನೆ. ಯಾವಾಗ ರಾಜ್ಯಪಾಲರು ರಾಜ್ಯ ಸರಕಾರದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುವುದಿಲ್ಲವೋ, ಆಗ ಸರಕಾರ-ರಾಜ್ಯಪಾಲರ ಸಂಘರ್ಷವು ಕಾನೂನು ಹೋರಾಟಕ್ಕೆ ನಾಂದಿ ಹಾಡುತ್ತದೆ.

ರಾಜ್ಯಪಾಲರ ಕ್ರಮಗಳ ಹಿಂದೆ ಕೇಂದ್ರ ಸರಕಾರದ ಪ್ರಭಾವವಿರುವುದು ಹೇಗೆ ಪ್ರಶ್ನಾರ್ಹ ವೋ, ಅದೇ ರೀತಿ, ರಾಜ್ಯ ಸರಕಾರಗಳು ಕೇಂದ್ರ ಸರಕಾರವನ್ನು ಗುರಿಮಾಡಲು ರಾಜ್ಯಪಾಲ ರನ್ನು ಬಳಸಿಕೊಳ್ಳುವುದೂ ಪ್ರಶ್ನಾರ್ಹವೇ.

Gehlot

ಒಟ್ಟಿನಲ್ಲಿ, ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರು ರಾಜ್ಯಗಳಲ್ಲಿ ಅನಿಶ್ಚಿತ, ಗೊಂದಲಮಯ ವಾತಾವರಣ ಸೃಷ್ಟಿಸಲೇ ಹೆಚ್ಚು ಬಳಕೆಯಾಗುತ್ತಾರೆ ಎನ್ನುವುದು ವಿಪರ್ಯಾಸ. ಹಾಗೆ ನೋಡಿದರೆ, ಮಂತ್ರಿಮಂಡಲ ಅನುಮೋದಿಸಿದ ಸರಕಾರದ ಭಾಷಣ ಗಳನ್ನು ರಾಜ್ಯಪಾಲರು ಓದುವ ಪರಂಪರೆ ಇಂದು ನಿನ್ನೆಯದೇನಲ್ಲ.

ಇದು ಬ್ರಿಟಿಷರು ಅಳವಡಿಸಿಕೊಂಡಿದ್ದ ಕ್ರಮ. ಅದೇ ಪರಂಪರೆ ಹಾಗೂ ದೀರ್ಘಕಾಲದ ಸಂಸದೀಯ ಕ್ರಮವನ್ನು ಈಗಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಅಧಿವೇಶನ ಭಾಷಣದಲ್ಲಿ ರಾಜ್ಯಪಾಲರು ತಮ್ಮ ಸ್ವಂತ ಕಾರ್ಯಸೂಚಿಯನ್ನು ಮಂಡಿಸಿದ ಉದಾ ಹರಣೆಯಿಲ್ಲ.

ಸಂವಿಧಾನದ 176ನೇ ವಿಧಿಯ ಅಡಿಯಲ್ಲಿ ನೋಡಿದರೆ- ರಾಜ್ಯಪಾಲರ ಭಾಷಣವು ಸರಕಾರದ ನೀತಿಗಳನ್ನು ಪ್ರತಿನಿಧಿಸುತ್ತದೆ. ರಾಜ್ಯ ಕ್ಯಾಬಿನೆಟ್ʼನಿಂದ ಅಂಗೀಕರಿಸಲ್ಪಟ್ಟ ಪಠ್ಯಕ್ಕೆ ಮಾತ್ರ ಸಾಂವಿಧಾನಿಕ ಸಿಂಧುತ್ವವಿರುತ್ತದೆ ಎಂದು ಕಾನೂನು ಪಂಡಿತರು ವಾದಿಸುತ್ತಾರೆ. ಬ್ರಿಟಿಷ್ ವ್ಯವಸ್ಥೆ ಇಂಥದ್ದೇ ಮಾದರಿಯಲ್ಲಿ ನಡೆದುಕೊಂಡು ಬಂದಿದ್ದು, ಅಲ್ಲಿನ ರಾಣಿ ಅಥವಾ ರಾಜರು ಸರಕಾರಗಳ ಮಂತ್ರಿಗಳು ಬರೆದ ಭಾಷಣವನ್ನು ಸಂಸತ್ತಿ ನಲ್ಲಿ ಯಥಾವತ್ತಾಗಿ ಓದುತ್ತಾರೆ. ಆದರೆ, ಇಂದಿನ ಬದಲಾದ ಕಾಲಘಟ್ಟದಲ್ಲಿ ಇದರ ಅವಶ್ಯಕತೆ ಎಷ್ಟರಮಟ್ಟಿಗೆ ಪ್ರಸ್ತುತ ಎನ್ನುವುದು ಕೇಂದ್ರ ಸರಕಾರವು ಗಂಭೀರವಾಗಿ ಆಲೋಚಿಸಬೇಕಾದ ವಿಚಾರ.

ರಾಜ್ಯಪಾಲರು ಮಂತ್ರಿಮಂಡಲದ ನೆರವು ಹಾಗೂ ಸಲಹೆಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನು ಸಂವಿಧಾನದ 163ರ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. 2016ರಲ್ಲಿ ಅರುಣಾಚಲ ಪ್ರದೇಶ ಸರಕಾರಕ್ಕೆ ಸಂಬಂಧಿಸಿದ ‘ನಬಮ್ ರೆಬಿಯಾ ವರ್ಸಸ್ ಡೆಪ್ಯುಟಿ ಸ್ಪೀಕರ್ ಪ್ರಕರಣ’ದಲ್ಲಿ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ರಾಜ್ಯಪಾಲರ ಶಾಸಕಾಂಗ ಕಾರ್ಯಗಳು ಮಂತ್ರಿಮಂಡಲದ ಸಾಮಾನ್ಯ ಸಲಹೆಗೆ ಅನುಗುಣವಾಗಿ ಇರಬೇಕಾಗುತ್ತದೆ ಎಂದು ಪುನರುಚ್ಚರಿಸಿದ್ದ ಸುಪ್ರೀಂ ಕೋರ್ಟ್, ಮಂತ್ರಿಮಂಡಲದ ನೆರವು ಮತ್ತು ಸಲಹೆಯ ಮೇರೆಗೆ 175(1) ಅಥವಾ 176ನೇ ವಿಧಿಯ ಅಡಿಯಲ್ಲಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾತನಾಡುವುದು ಅವರ ಕಾರ್ಯ ಕಾರಿ ಜವಾಬ್ದಾರಿ ಎಂದು ತಿಳಿಸಿತ್ತು.

ಅಂದರೆ, ಶಾಸಕಾಂಗದ ಕಾರ್ಯಸೂಚಿಯನ್ನು ರೂಪಿಸಲು ರಾಜ್ಯಪಾಲರಿಗೆ ಮುಕ್ತ ಅಧಿಕಾರವಿಲ್ಲ ಎಂದು ಭಾವಿಸಬಹುದು. ಆದರೆ, ರಾಜ್ಯ ಸರಕಾರವು ಕೇಂದ್ರ ಸರಕಾರ ವನ್ನು ಗುರಿಮಾಡಲು ರಾಜ್ಯಪಾಲರನ್ನು ಬಳಸಬಹುದೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೂ ರಾಜ್ಯ ಸರಕಾರಗಳನ್ನು ವಜಾಗೊಳಿಸಲು ರಾಜಭವನ ಕಚೇರಿಗಳನ್ನೇ ಬಹುದೊಡ್ಡ ಅಸ್ತ್ರಗಳನ್ನಾಗಿ ಬಳಸಿಕೊಂಡಿದ್ದರು. 1970ರ ದಶಕದಲ್ಲಿ ಕಾಂಗ್ರೆಸ್ 16 ರಾಜ್ಯಗಳ ಪೈಕಿ ಎಂಟು ರಾಜ್ಯಗಳಲ್ಲಿ ದುರ್ಬಲಗೊಂಡು ತನ್ನ ನಿಯಂತ್ರಣ ಕಳೆದುಕೊಂಡಿದ್ದಾಗ ಕಾಂಗ್ರೆಸ್ಸೇತರ ಸರಕಾರಗಳನ್ನು ಅಸ್ಥಿರಗೊಳಿಸಲು ರಾಜಭವನಗಳೇ ಬ್ರಹ್ಮಾಸ್ತ್ರಗಳಾಗಿದ್ದವು.

1971ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಮೇಲಂತೂ ಇಂದಿರಾ ಗಾಂಧಿಯವರು ಈ ವಿಷಯದಲ್ಲಿ ಮತ್ತಷ್ಟು ಆಕ್ರಮಣಶೀಲತೆ ಪ್ರದರ್ಶಿಸಿ, ಸಾಂವಿಧಾನಿಕ ಸಂಸ್ಥೆಗಳ ಮೂಲ ಆಶಯಗಳನ್ನೇ ಗಾಳಿಗೆ ತೂರಿದ್ದರು. 1994ರಲ್ಲಿ ಸುಪ್ರೀಂಕೋರ್ಟ್ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ನೀಡಿದ ತೀರ್ಪಿನ ನಂತರ ರಾಜ್ಯಪಾಲರ ‘ರಾಜಕೀಯ’ ವರ್ತನೆಗಳಿಗೆ ತಕ್ಕಮಟ್ಟಿಗೆ ಕಡಿವಾಣ ಬಿದ್ದರೂ, ಬೇರೆ ಬೇರೆ ರೀತಿಯಲ್ಲಿ ರಾಜ್ಯ ಸರಕಾರ ಗಳಿಗೆ ತೊಂದರೆ ಕೊಡುವ ಕೆಲಸವನ್ನು ರಾಜ್ಯಪಾಲ ಕಚೇರಿಗಳು ಮಾಡುತ್ತಲೇ ಬಂದಿವೆ.

ಕೆಲವೊಂದು ಸಂದರ್ಭಗಳಲ್ಲಿ ಕೇಂದ್ರ ಸರಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೇಂದ್ರದ ವಿಧೇಯ ಶಿಷ್ಯನಂತೆ ರಾಜ್ಯಪಾಲರು ವರ್ತಿಸಿದ್ದುಂಟು.

ಕರ್ನಾಟಕದ ರಾಜ್ಯಪಾಲರಾಗಿದ್ದ ಮಾಜಿ ಕೇಂದ್ರ ಸಚಿವ ಹಂಸರಾಜ್ ಭಾರದ್ವಾಜರ ‘ರಾಜಕೀಯ ಸಕ್ರಿಯತೆ’ ಆ ಹುದ್ದೆಗೇ ಅಪಕೀರ್ತಿ ತಂದಿತ್ತು. ‘ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಬಹುಮತವಿಲ್ಲ. ಹೀಗಾಗಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು 2011ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಅವರು ಸಲ್ಲಿಸಿದ್ದ ಶಿಫಾರಸು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.

ಆದರೆ, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ರಾಜಕೀಯ ವ್ಯವಹಾರ ಗಳ ಕ್ಯಾಬಿನೆಟ್ ಸಮಿತಿ ‘ಈ ಶಿಫಾರಸನ್ನು ಒಪ್ಪಲು ಸಾಧ್ಯವಿಲ್ಲ’ ಎಂಬ ಸಮಚಿತ್ತದ ನಿರ್ಧಾರ ಕೈಗೊಂಡಿದ್ದರಿಂದ ರಾಜ್ಯಪಾಲರಿಗೆ ಅತೀವ ಮುಖಭಂಗ ಉಂಟಾಗಿತ್ತು. ಹಾಗಂತ, ಭಾರದ್ವಾಜರು ಬಿಜೆಪಿ ಸರಕಾರಕ್ಕೆ ಉಪಟಳ ನೀಡುವುದನ್ನೇನೂ ಕಡಿಮೆ ಮಾಡಿರಲಿಲ್ಲ!

1997ರಲ್ಲಿ, ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಸರಕಾರವನ್ನು ರಾಜ್ಯಪಾಲ ರಮೇಶ್ ಭಂಡಾರಿ ವಜಾಗೊಳಿಸಿದ್ದ ಏಕಪಕ್ಷೀಯ ಕ್ರಮವನ್ನು ಅಂದಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರೇ ಟೀಕಿಸಿದ್ದರು. 2004ರಲ್ಲಿ ಯುಪಿಎ ಸರಕಾರ ಅಧಿಕಾರ ವಹಿಸಿ ಕೊಂಡ ನಂತರ ಹಿಂದಿನ ಎನ್‌ಡಿಎ ಸರಕಾರ ನೇಮಿಸಿದ್ದ ರಾಜ್ಯಪಾಲರು ರಾಜೀನಾಮೆ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.

ಏಕೆಂದರೆ ತನ್ನ ಕಾರ್ಯಸೂಚಿಯಂತೆ ಕೆಲಸ ಮಾಡಬೇಕಾದ ರಾಜ್ಯಪಾಲರು ರಾಜ್ಯಗಳಲ್ಲಿ ಇರಬೇಕು ಎನ್ನುವುದನ್ನೇ ಅದು ಬಯಸಿತ್ತು. 2018ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ 105 ಸೀಟುಗಳ ಮೂಲಕ ಅತ್ಯಧಿಕ ಸೀಟುಗಳನ್ನು ಗೆದ್ದ ಪಕ್ಷವಾಗಿತ್ತಾ ದರೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡುವು ದಾಗಿ ರಾಜ್ಯಪಾಲ ವಜುಭಾಯ್ ವಾಲಾ ಅವರಲ್ಲಿ ತಿಳಿಸಿದ್ದವು.

ಆದರೆ, ವಜುಭಾಯ್ ವಾಲಾ ಯಡಿಯೂರಪ್ಪನವರಿಗೆ ಸರಕಾರ ರಚಿಸುವ ಅವಕಾಶ ನೀಡುವ ಪಕ್ಷಪಾತಿ ತೀರ್ಮಾನ ತೆಗೆದುಕೊಂಡಿದ್ದರು. ನಂತರ ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ, ರಾಜ್ಯಪಾಲರ ಕ್ರಮದ ವಿರುದ್ಧ ಕೆಂಡಕಾರಿತ್ತು. ಮಹಾರಾಷ್ಟ್ರ ರಾಜ್ಯಪಾಲ ರಾಗಿದ್ದ ಭಗತ್ ಸಿಂಗ್ ಕೋಶಿಯಾರಿ ಕೂಡ ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಸರಕಾರವನ್ನು ವಜಾಗೊಳಿಸಿದ ವಿಷಯದಲ್ಲಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದರು ಮತ್ತು ಸುಪ್ರೀಂಕೋರ್ಟ್ ಕೂಡ ರಾಜ್ಯಪಾಲರ ಈ ನಡೆಯನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತ್ತು. 2 ದಿನಗಳ ಹಿಂದೆ ಇದೇ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಕೇಂದ್ರ ಸರಕಾರ ಪದ್ಮಭೂಷಣ ಪ್ರಶಸ್ತಿಯನ್ನೂ ಪ್ರಕಟಿಸಿತು!

ರಾಜಕಾರಣಿ ಅಥವಾ ಜನಪ್ರತಿನಿಧಿಯಾಗಿದ್ದ ವ್ಯಕ್ತಿಯನ್ನು ರಾಜ್ಯಪಾಲ ಹುದ್ದೆಗೆ ಪರಿಗಣಿಸಬಾರದು ಎಂಬ ನಿಯಮವೇನಿಲ್ಲ. ಆದರೆ ಪಕ್ಷ ರಾಜಕಾರಣದಿಂದ ದೂರವುಳಿದ, ಕಾನೂನು-ಸಂವಿಧಾನದ ಆಶಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬಲ್ಲ, ನಿಷ್ಪಕ್ಷಪಾತ ಧೋರಣೆಯ ವ್ಯಕ್ತಿ ಮಾತ್ರ ಇಂಥ ಸಾಂವಿಧಾನಿಕ ಹುದ್ದೆಗಳಿಗೆ ನ್ಯಾಯ ನೀಡಬಲ್ಲ. ಆದರೆ ಅಂಥವರನ್ನು ಆಯ್ಕೆ ಮಾಡುವ ಆಸಕ್ತಿ ಸರಕಾರಗಳಿಗೆ ಇದೆಯೇ? ಆಯ್ಕೆ ಮಾಡಿದರೂ ಅವರು ಸಮಚಿತ್ತದಿಂದ, ನ್ಯಾಯೋಚಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರಾ? ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವಿದ್ದಾಗಲಂತೂ ಲೆಫ್ಟಿನಂಟ್ ಗವರ್ನರ್ ಮತ್ತು ಸರಕಾರದ ಮಧ್ಯೆ ನಿತ್ಯವೂ ನಡೆಯುತ್ತಿದ್ದ ಸಂಘರ್ಷ ನೋಡಿ ಜನರೇ ರೋಸಿ ಹೋಗಿದ್ದರು.

ಮೂಲತಃ ರಾಜಕಾರಣಿ ಅಲ್ಲದಿದ್ದರೂ, ಐಪಿಎಸ್ ಹಿನ್ನೆಲೆಯ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಅಲ್ಲಿನ ರಾಜ್ಯ ಸರಕಾರದ 10 ವಿಧೇಯಕಗಳಿಗೆ ಅನುಮೋದನೆ ನೀಡಲು ವಿನಾಕಾರಣ ವಿಳಂಬ ಮಾಡಿದ್ದರು. ನಂತರ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ, ಸಮಯದ ಗಡುವು ನೀಡಬೇಕೆಂದು ರಾಜ್ಯಪಾಲರಿಗೆ ನಿಗದಿ ಮಾಡಿತ್ತು.

ಹೀಗಾಗಿ, ನಿವೃತ್ತ ಅಧಿಕಾರಿಗಳ, ಹಿರಿಯ ಪಕ್ಷನಿಷ್ಠ ರಾಜಕಾರಣಿಗಳ ಗಂಜಿಕೇಂದ್ರ ಗಳಂತಿರುವ ಲೋಕಭವನ (‘ರಾಜಭವನ’ವು ಬ್ರಿಟಿಷ್ ಕಾಲದ ಹೆಸರು ಎಂದು ಈಗ ‘ಲೋಕಭವನ’ ಎಂದು ಬದಲಿಸಲಾಗಿದೆ) ಮತ್ತು ಕೇಂದ್ರ ಸರಕಾರಗಳ ಕೈಗೊಂಬೆಗಳಂತೆ ಕೆಲಸ ಮಾಡುವ ರಾಜ್ಯಪಾಲ ಹುದ್ದೆಗಳ ಪ್ರಸ್ತುತತೆ ಹಾಗೂ ಅಗತ್ಯತೆಯ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ.

ಬ್ರಿಟಿಷ್ ಕಾಲದ ಕಾನೂನು, ಹೆಸರುಗಳನ್ನು ಅಳಿಸಿ, ವಿವಿಧ ಕ್ಷೇತ್ರಗಳ ‘ಭಾರತೀಕರಣ’ಗೊ ಳ್ಳುತ್ತಿರುವ ಈ ಸನ್ನಿವೇಶದಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ, ರಾಜ್ಯ ಪಾಲ ಹುದ್ದೆಗಳನ್ನೇ ರದ್ದುಗೊಳಿಸಬಾರದೇಕೆ? ರಾಜ್ಯಗಳಲ್ಲಿ ರಾಜ್ಯಪಾಲರು ನಿರ್ವಹಿಸ ಬೇಕಿರುವ ಸಾಂವಿಧಾನಿಕ ಜವಾಬ್ದಾರಿಗಳನ್ನು ರಾಷ್ಟ್ರಪತಿ ಕಚೇರಿಯೇ ನಿಭಾಯಿಸಬಾರ ದೇಕೆ? ಎಲ್ಲಾ ರಾಜ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ರಾಷ್ಟ್ರಪತಿ ಕಚೇರಿಗೆ ಹೊರೆಯೆನಿಸುವುದಾದರೆ, ಕಚೇರಿ ಮೂಲಕವೇ ತಟಸ್ಥ ಧೋರಣೆಯ ತಜ್ಞರನ್ನೊಳ ಗೊಂಡ ಸಮಿತಿಯೊಂದನ್ನು ನೇಮಿಸಿ ರಾಷ್ಟ್ರಪತಿ ಭವನದ ಮೇಲುಸ್ತುವಾರಿ ಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬಹುದಲ್ಲವೇ? ಅಥವಾ ಇನ್ಯಾವುದೋ ಸೂಕ್ತ ಕಾರ್ಯ ವಿಧಾನವನ್ನು ಕೇಂದ್ರ ಸರಕಾರವೇ ಕಂಡುಕೊಳ್ಳಬಹುದಲ್ಲವೇ? ಸೆರೆಮೋನಿಯಲ್ ಪೋಸ್ಟ್‌ಗಳಂತಿರುವ ರಾಜ್ಯಪಾಲ ಹುದ್ದೆಯಿಂದ ರಾಜ್ಯಗಳಿಗೆ ನಿಜಕ್ಕೂ ಅನುಕೂಲ/ಲಾಭ/ಒಳ್ಳೆಯದಾಗುತ್ತಿದೆಯೇ ಎಂಬುದನ್ನು ಪರಾಮರ್ಶಿಸಬೇಕಿದೆ.

ರಾಜ್ಯಪಾಲರ ಮಾಸಿಕ ವೇತನ ರು. 3.5 ಲಕ್ಷ (ವಾರ್ಷಿಕವಾಗಿ ರು. 42 ಲಕ್ಷ). ಜತೆಗೆ ಅಧಿಕೃತ ಬಂಗಲೆ (ಲೋಕಭವನ) ಹಾಗೂ ಅದರ ನಿರ್ವಹಣೆ, ಗೃಹ ಸಿಬ್ಬಂದಿ ವೇತನ-ಭತ್ಯೆಗಳು, ವಾಹನಗಳ ನಿರ್ವಹಣೆ, ವೈದ್ಯಕೀಯ-ಪ್ರಯಾಣ ಸೌಲಭ್ಯ, ಭದ್ರತೆಗಳಿಗಾಗಿ ಪ್ರತ್ಯೇಕ ಹಣ ಮೀಸಲಿಡಬೇಕು.

ರಾಜ್ಯಪಾಲರ ಕಾರಣದಿಂದಾಗಿ ಸದನ ಸಂಘರ್ಷ, ಸಭಾತ್ಯಾಗ ಉಂಟಾದಲ್ಲಿ ಇಡೀ ದಿನಕ್ಕಾಗಿ ಮೀಸಲಿಟ್ಟ ಹಣವೂ ಪೋಲು. ರಾಜ್ಯಪಾಲ ಎನ್ನುವುದು ಗೌರವಾನ್ವಿತ, ಘನತೆಯುಕ್ತ ಹುದ್ದೆಯಾಗಿದ್ದರೂ, ಅವುಗಳನ್ನು ನಿಭಾಯಿಸಿದ ರೀತಿ ಹುದ್ದೆಯ ಗೌರವ-ಘನತೆ ಎರಡನ್ನೂ ಹಾಳುಮಾಡಿದೆ.

ಬೊಕ್ಕಸಕ್ಕೆ ಅನುಕೂಲವಾಗುವುದಕ್ಕಿಂತ ಆರ್ಥಿಕವಾಗಿ ‘ಹೊರೆ’ಯೇ ಎನಿಸುವ ಹಾಗೂ ಈ ಕಾಲಘಟ್ಟದ ಆಡಳಿತ ವ್ಯವಸ್ಥೆಗೆ ಹೊಂದಿಕೆಯಾಗದ ಹುದ್ದೆಯನ್ನು ಆಡಳಿತ ಸುಧಾರಣೆ ಯ ಹೆಸರಲ್ಲಿ ಶಾಶ್ವತವಾಗಿ ಕೊನೆಗೊಳಿಸುವುದೇ ಸೂಕ್ತವಲ್ಲವೇ? ಭವಿಷ್ಯದ ತಲೆಮಾರಿಗೆ ಹಿತವೆನಿಸುವ, ಸುಧಾರಿತ ಆಡಳಿತ ವ್ಯವಸ್ಥೆ ಮತ್ತು 2047ರ ವಿಕಸಿತ ಭಾರತದ ದೃಷ್ಟಿ ಯಿಂದ ಕೇಂದ್ರ ಸರಕಾರ ಇಂಥದೊಂದು ಕ್ರಾಂತಿಕಾರಿ ಹೆಜ್ಜೆ ಇಡುವುದೇ?

(ಲೇಖಕರು ಹಿರಿಯ ಪತ್ರಕರ್ತರು)