ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kiran Upadhyay Column: ದಯಮಾಡಿ ಟ್ರೇಲರ್‌ ರಿಲೀಸ್‌ ಮಾಡಬೇಡಿ...

ಟ್ರೇಲರ್ ನೋಡಿಯೇ ‘ಸಾಕಪ್ಪಾ ಸಾಕು’ ಎನ್ನುವಂತಿರಬಾರದು ಅಲ್ಲವೇ? ಇತ್ತೀಚಿನ ಸಿನಿಮಾಗಳ ಟ್ರೇಲರ್ ನೋಡಿ, ಮುಕ್ಕಾಲು ಭಾಗ ಕತ್ತಲೆ. ಸಿನಿಮಾವೂ ಕತ್ತಲೆಯೇ. ಎಷ್ಟಾದರೂ ಟ್ರೇಲರ್ ಎನ್ನುವುದು ಸಿನಿಮಾದ ಒಂದು ಝಲಕ್ ತಾನೆ? ಇನ್ನುಳಿದ ಬೆಳಕಿನ ಭಾಗದಲ್ಲಿ ಬೆಂಕಿ, ಬಾಂಬು, ಕಾರುಗಳನ್ನು ಸ್ಫೋಟಿಸುವುದು, ಹೆಲಿಕಾಪ್ಟರ್ ಉಡಾಯಿಸುವುದು ಇತ್ಯಾದಿ, ಇತ್ಯಾದಿ.

Kiran Upadhyay Column: ದಯಮಾಡಿ ಟ್ರೇಲರ್‌ ರಿಲೀಸ್‌ ಮಾಡಬೇಡಿ...

-

ವಿದೇಶವಾಸಿ

ಈ ಬಾರಿ ಭಾರತಕ್ಕೆ ಬರುವ ಪೂರ್ವದಲ್ಲಿ, ಒಂದಷ್ಟು ಕನ್ನಡ ಚಲನಚಿತ್ರಗಳನ್ನು ನೋಡಬೇಕು ಎಂದು ತೀರ್ಮಾನಿಸಿದ್ದೆ. ಅವುಗಳಲ್ಲಿ ಹಿಂದಿಯ ‘ಧುರಂಧರ್’, ‘ಬಾರ್ಡರ್-2’ ಚಿತ್ರಗಳೊಂದಿಗೆ ಕೆಲವು ಕನ್ನಡ ಚಲನಚಿತ್ರಗಳೂ ಸೇರಿಕೊಂಡಿದ್ದವು. ಕನ್ನಡದಲ್ಲಿ ಪ್ರಮುಖವಾಗಿ ದರ್ಶನ್ ಅಭಿನಯದ ‘ಡೆವಿಲ್’, ಸುದೀಪ್ ಅಭಿನಯದ ‘ಮಾರ್ಕ್’, ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಶೆಟ್ಟಿ ಅಭಿನಯದ ‘45’ ಸಿನಿಮಾಗಳು ನನ್ನ ಬಕೆಟ್ ಲಿನಲ್ಲಿದ್ದವು.‌ ಏಕೆಂದರೆ 2025ರ ವರ್ಷಾಂತ್ಯದಲ್ಲಿ ಬಿಡುಗಡೆಗೂ ಮುನ್ನ ಮತ್ತು ಬಿಡುಗಡೆಯಾದ ದಿನಗಳಲ್ಲಿ ಭಾರಿ ಸುದ್ದಿ ಮಾಡಿದ ಚಿತ್ರಗಳು ಇವು.

ದರ್ಶನ್ ಜೈಲಿನಲ್ಲಿದ್ದರೂ ‘ಡೆವಿಲ್’ ಚಿತ್ರವನ್ನು ಮುಗಿಸಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದು ಒಂದು ಕಡೆಯಾದರೆ, ಸಂಗೀತ ನಿರ್ದೇಶಕರಾಗಿದ್ದು ಚಿತ್ರವನ್ನು ನಿರ್ದೇಶಿಸಿದ, ಅದರಲ್ಲೂ ಮೂವರು ದಿಗ್ಗಜ ನಟರನ್ನು ತಮ್ಮ ಚಿತ್ರಕ್ಕೆ ಕರೆ ತರುವುದಕ್ಕೂ ಮೊದಲು ಸುಮಾರು ಮುಕ್ಕಾಲು ಭಾಗ ಚಿತ್ರವನ್ನು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ರಚಿಸಿ ತೋರಿಸಿದ್ದ ಅರ್ಜುನ್ ಜನ್ಯ ಅವರ ‘45’ ಚಿತ್ರ ಇನ್ನೊಂದು ಕಡೆ.

ಹಾಗೆಯೇ ‘ಮ್ಯಾಕ್ಸ್’ ನಂತರ ಬರುತ್ತಿರುವ ಸುದೀಪ್ ಅವರ ‘ಮಾರ್ಕ್’ ಚಿತ್ರ. ಇವುಗಳ ಕುರಿತಾಗಿ ಇದ್ದ ಆಶಾಗೋಪುರಗಳು, ಸುದ್ದಿ ಸಂಭ್ರಮಗಳು, ಈ ಮೂರೂ ಚಲನಚಿತ್ರಗಳನ್ನು ನೋಡಬೇಕು ಎನ್ನುವ ಕೌತುಕವನ್ನು ಹೆಚ್ಚಿಸಿದ್ದವು. ಆದ್ದರಿಂದ, ಬೆಂಗಳೂರಿಗೆ ಬಂದು ಇಳಿಯುತ್ತಿದ್ದಂತೆಯೇ 2-3 ವಾರದ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಕನ್ನಡದ ಈ ಮೂರೂ ಚಿತ್ರಗಳನ್ನು ಚಿತ್ರಮಂದಿರ ಗಳಲ್ಲಿ ಹುಡುಕಿದೆ.‌

ತಿಳಿದು ಬಂದ ವಿಷಯವೆಂದರೆ, ಬೆಂಗಳೂರಿನ ಯಾವ ಚಿತ್ರಮಂದಿರದಲ್ಲೂ ಈ ಮೂರು ಚಿತ್ರಗಳು ಇಲ್ಲ ಎಂಬುದು. ಅದಕ್ಕಿಂತ ಮೊದಲು ಬಿಡುಗಡೆಯಾದ ‘ಧುರಂಧರ್’ ಮತ್ತು ಮೊನ್ನೆ ಮೊನ್ನೆ ಬಿಡುಗಡೆಯಾದ ‘ಬಾರ್ಡರ್-2’ ಚಿತ್ರಮಂದಿರಗಳಲ್ಲಿ ಮುಂದುವರಿದಿದ್ದು, ಕನ್ನಡದ ಮೂರೂ ದೊಡ್ಡ ಬಜೆಟ್ ಚಿತ್ರಗಳ ಕಥೆ ನೀರಿನಲ್ಲಿ ನೆನೆದ ಪಟಾಕಿಯಂತಾದದ್ದು ತಿಳಿದು ಬೇಸರವಾಯಿತು.

ಇದನ್ನೂ ಓದಿ: Kiran Upadhyay Column: ಜೋಕರ್‌ ಆಗಿ ಒಂದಿಡೀ ಜಗವನ್ನೇ ಗೆದ್ದ ರಾಜ ಇವನು !

ಈಗ, ಕಳೆದ ವಾರ ತೆರೆಗೆ ಬಂದ ಇನ್ನೆರಡು ಬಿಗ್ ಬಜೆಟ್ ಚಿತ್ರಗಳಾದ ‘ಲ್ಯಾಂಡ್‌ಲಾರ್ಡ್’ ಮತ್ತು ‘ಕಲ್ಟ್’ ಕಥೆ ಏನು ಎಂದು ತಿಳಿಯುವ ಹೊತ್ತಿಗೆ, ಒಂದೇ ದಿನ ಆರು ಹೊಸ ಚಿತ್ರಗಳು ಬಿಡುಗಡೆ ಯಾಗುತ್ತಿವೆಯಂತೆ. ಅದರೊಂದಿಗೆ ಒಂದು ವಾರ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೇರೆ. ಅಲ್ಲಿ ಅರವತ್ತು ದೇಶಗಳ ಇನ್ನೂರಕ್ಕೂ ಹೆಚ್ಚು ಚಲನಚಿತ್ರಗಳ ಪ್ರದರ್ಶನ. ಮೊದಲೇ ಉಲ್ಲಾಸ, ಮೇಲಿಂದ ಫಲ್ಗುಣ ಮಾಸ...! ‘ಜನ ಸಿನಿಮಾ ನೋಡಲು ಚಿತ್ರ‌ ಮಂದಿರಕ್ಕೆ ಬರುತ್ತಿಲ್ಲ’ ಎನ್ನುವ ಕೂಗಿನ ನಡುವೆಯೇ ಇಷ್ಟೆಲ್ಲ ನಡೆಯುತ್ತಿದೆ!

ಇನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಕಥೆ ಹೇಳುವು ದಕ್ಕಿಂತ ಹೇಳದೇ ಇದ್ದರೇ ಒಳ್ಳೆಯದು. ಇಂಥ ಒಂದು ಚಿತ್ರೋತ್ಸವದ ಉದ್ದೇಶ ಒಳ್ಳೆಯದೇ. ಆದರೆ, ಸರಕಾರ ಅದಕ್ಕೆ ಖರ್ಚು ಮಾಡುವ ಹಣ ಎಷ್ಟು ಎಂದು ಕೇಳಿದರೆ, ಅದನ್ನು ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ, ಆಯೋ ಜಕರಿಗೇ ಪ್ರೀತಿಯಾಗಬೇಕು. ಅರವತ್ತು ದೇಶಗಳು ಭಾಗವಹಿಸು ತ್ತಿರುವ ಈ ಚಿತ್ರೋತ್ಸವದಲ್ಲಿ ಕಂಡದ್ದು ಎರಡೋ-ಮೂರೋ ವಿದೇಶಿ ಮುಖಗಳು ಮಾತ್ರ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರ, ಕನ್ನಡ ಸಿನಿಮಾಗಳ ನಿರ್ಮಾಣದಿಂದ ಬಿಡುಗಡೆಯವರೆಗಿನ ಪರವಾನಗಿ ಪಡೆಯುವ ಪ್ರಯಾಣದ ಗೋಳಿನ ಭಾಷಣ! ತಾವು ಮಾತನಾಡುತ್ತಿರುವುದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಎನ್ನುವುದು ಅವರಿಗೇ ನೆನಪಿದ್ದಂತಿಲ್ಲ.

ಬಿಡಿ, 99 ವರ್ಷದ ಇತಿಹಾಸವಿರುವ ಕನ್ನಡ ಚಲನಚಿತ್ರೋದ್ಯಮದಿಂದ ಈ ಉತ್ಸವದಲ್ಲಿ ಎಷ್ಟು ಜನ ಭಾಗಿಯಾಗಿದ್ದರೆಂದು ಎಣಿಸಿದರೆ, ಮಾಧ್ಯಮದವರ ಕ್ಯಾಮರಾ ಸಂಖ್ಯೆಗಿಂತಲೂ ಕಡಿಮೆ. ಅವರಿಗೂ ಕುಳಿತುಕೊಳ್ಳಲು ಸ್ಥಳದ ಅಭಾವ. ಚಿತ್ರೋದ್ಯಮ ದಲ್ಲಿರುವ ವರಿಗಿಂತಲೂ ಹೊರಗಿ ನವರೇ ಹೆಚ್ಚು ಎಂದರೂ ತಪ್ಪಿಲ್ಲ.

ಹೌದು, ಚಿತ್ರೋದ್ಯಮದವರೆಲ್ಲ ಎಲ್ಲಿದ್ದರು? ಅವರೇ ಮನೆಯಲ್ಲಿ ಕುಳಿತು, ಜನ ತಮ್ಮ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವುದು ಎಷ್ಟು ಸರಿ? ಅವರ ಗೋಳೂ ಸರಿಯೇ ಬಿಡಿ, ‘ಪ್ರೀಮಿಯರ್ ಶೋ’ ನೋಡಲು ಬಂದಷ್ಟು ಜನವೂ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಯಾದಾಗ ನೋಡಲು ಬರದಿದ್ದರೆ ಅವರಾದರೂ ಏನು ಮಾಡಬೇಕು? ಪಾಪ, ತಮ್ಮ ಪಾಪವನ್ನು ಜನರ ಮೇಲೆ ಎತ್ತಿ ಹಾಕುವುದೊಂದೇ ದಾರಿ.

ಇಲ್ಲಿ ಇನ್ನೂ ಒಂದು ಪ್ರಶ್ನೆ ಮೂಡುವುದು ಸಹಜ. ಟೀಸರ್ ಬಿಡುಗಡೆಯಾದ ಒಂದೋ-ಎರಡೋ ಗಂಟೆಯ ಅವಧಿಯಲ್ಲಿ ಲಕ್ಷಗಟ್ಟಲೆ ಜನ ನೋಡುತ್ತಾರೆ, ಆದರೆ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬರುವುದಿಲ್ಲ. ಅಥವಾ ಕೆಲವು ದಿನಗಳ ನಂತರ ಓಟಿಟಿಯಲ್ಲಿ ಬಿಡುಗಡೆಯಾದಾಗಲೂ ಆ ಚಿತ್ರ ವನ್ನು ನೋಡುವುದಿಲ್ಲ ಎಂದಾದರೆ ಇದರ ಹಿಂದಿನ ಕಾರಣವೇನು? ಟೀಸರ್‌ಗಳು, ಟ್ರೇಲರ್‌ ಗಳು ಪ್ರೇಕ್ಷಕರನ್ನು ಚಿತ್ರ ನೋಡಲು ಪ್ರೇರೇಪಿಸುವಂತಿರಬೇಕು, ಚಿತ್ರಮಂದಿರದತ್ತ ಸೆಳೆಯುವಂತಿರಬೇಕು.

ಟ್ರೇಲರ್ ನೋಡಿಯೇ ‘ಸಾಕಪ್ಪಾ ಸಾಕು’ ಎನ್ನುವಂತಿರಬಾರದು ಅಲ್ಲವೇ? ಇತ್ತೀಚಿನ ಸಿನಿಮಾಗಳ ಟ್ರೇಲರ್ ನೋಡಿ, ಮುಕ್ಕಾಲು ಭಾಗ ಕತ್ತಲೆ. ಸಿನಿಮಾವೂ ಕತ್ತಲೆಯೇ. ಎಷ್ಟಾದರೂ ಟ್ರೇಲರ್ ಎನ್ನುವುದು ಸಿನಿಮಾದ ಒಂದು ಝಲಕ್ ತಾನೆ? ಇನ್ನುಳಿದ ಬೆಳಕಿನ ಭಾಗದಲ್ಲಿ ಬೆಂಕಿ, ಬಾಂಬು, ಕಾರುಗಳನ್ನು ಸ್ಫೋಟಿಸುವುದು, ಹೆಲಿಕಾಪ್ಟರ್ ಉಡಾಯಿಸುವುದು ಇತ್ಯಾದಿ, ಇತ್ಯಾದಿ.

ಅದರ ಹೊರತಾಗಿ ಅಲ್ಪ-ಸ್ವಲ್ಪ ಬೆಳಕು ಕಾಣಬೇಕು ಎಂದರೆ ಹೀರೋ ಸಿಗರೇಟ್ ಹೊತ್ತಿಸಬೇಕು. ಆ ಸಿಗರೇಟ್ ಬೆಳಕಿನಲ್ಲಿಯೇ ಹೀರೋ, ವಿಲನ್‌ಗಳ ಗಡ್ಡ, ಮೀಸೆಯಿಂದ ತುಂಬಿದ ಎರಡು ಕಣ್ಣು, ಒಂದು ಮೂಗು ಮಾತ್ರ ಕಾಣುವ ಮುಖ ಕಾಣಬೇಕು. ಮೊದಲೇ ಕತ್ತಲು, ಮುಖದ ತುಂಬ ಕೂದಲು, ಇನ್ನು ಅಭಿನಯ ಎಲ್ಲಿಂದ ಕಾಣಬೇಕು? ಒಂದು ಲೆಕ್ಕದಲ್ಲಿ ಅದು ಒಳ್ಳೆಯದೇ.

ಅಭಿನಯ ಬರದಿದ್ದವರಿಗೆ, ಕೆಟ್ಟ ಅಭಿನಯ ಮಾಡುವವರಿಗೆ ಅದೇ ಒಳ್ಳೆಯದು. ಕೆಲವರು ಅದೇ ಕಾರಣಕ್ಕೆ ಮುಖದ ತುಂಬ ರೋಮ ಬೆಳೆಸಿದ್ದೂ ಇರಬಹುದು, ಯಾರಿಗೆ ಗೊತ್ತು? ಇಂಥ ಟ್ರೇಲರ್ ನೋಡಿ ಜನ ಸಿನಿಮಾ ನೋಡಲು ಬರುತ್ತಾರೆಂದು ಚಿತ್ರದ ನಿರ್ಮಾಪಕರೋ, ನಿರ್ದೇಶಕರೋ ತಿಳಿಯುವುದಾದರೆ, ಇಂಥ ಟ್ರೇಲರ್ ನೋಡಿ ಬರದೇ ಇರುವವರೂ ಇರುತ್ತಾರೆ, ದಿನದಿಂದ ದಿನಕ್ಕೆ ಅವರ ಸಂಖ್ಯೆಯೇ ಹೆಚ್ಚಾಗುತ್ತಿದೆ ಎನ್ನುವ ಸತ್ಯವನ್ನೂ ತಿಳಿಯಬೇಕು.

ಹೆಚ್ಚು ಜನರು ಟ್ರೇಲರ್ ನೋಡಿದ್ದಾರೆ ಎಂದ ಮಾತ್ರಕ್ಕೆ ಸಿನಿಮಾವನ್ನೂ ಹೆಚ್ಚು ಜನ ನೋಡುತ್ತಾರೆ ಎಂಬ ತಪ್ಪು ಕಲ್ಪನೆಯ ಇದ್ದರೆ, ಅಂಥವರ ಸಹಾಯಕ್ಕೆ ಜನರೂ ಬರುವುದಿಲ್ಲ, ಯುಟ್ಯೂಬೂ ಬರುವುದಿಲ್ಲ.

‘ನಿಮ್ಮ ಸಿನಿಮಾಕ್ಕೆ ಜನ ಬರಬೇಕು ಎಂದರೆ, ದಯಮಾಡಿ ನಿಮ್ಮ ಚಿತ್ರದ ಟ್ರೇಲರ್, ಟೀಸರ್ ಬಿಡುಗಡೆ ಮಾಡಬೇಡಿ’ ಎನ್ನುವಂತಾಗಿದೆ. ಆ ಕಾರಣದಿಂದಾದರೂ ಸ್ವಲ್ಪ ಮಟ್ಟಿನ ಕುತೂಹಲ ಉಳಿಸಿಕೊಂಡ ಪ್ರೇಕ್ಷಕ ಚಿತ್ರಮಂದಿರದ ಕಡೆ ಸುಳಿದರೂ ಸುಳಿಯಬಹುದು.

ಹಾಗಾದರೆ ಕನ್ನಡದ ಪ್ರೇಕ್ಷಕ ಚಿತ್ರಮಂದಿರದ ಕಡೆ ಸುಳಿಯುವುದೇ ಇಲ್ಲ ಎನ್ನುವ ವಾದವನ್ನು ‘ಕಾಂತಾರ’, ‘ಮಾದೇವ’, ‘ಸು ಫ್ರಮ್ ಸೋ’ ಚಿತ್ರಗಳು ಸುಳ್ಳಾಗಿಸಿವೆ. ಒಂದು ವಿಷಯ ಗಮನಿಸಿ, ಇವೆಲ್ಲ ಹೆಚ್ಚು ಪ್ರಚಾರವಿಲ್ಲದೇ ತೆರೆಗೆ ಬಂದ ಚಿತ್ರಗಳು. ಬಿಡುಗಡೆಯಾದ ನಂತರವೂ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ ಚಿತ್ರಗಳಲ್ಲ. ರಿಯಾಲಿಟಿ ಶೋದಲ್ಲಿ ಭಾಗವಹಿಸಿದವರ ಜತೆ ಸಿನಿಮಾ ನೋಡುವುದು, ಮುಖ್ಯಮಂತ್ರಿಗಳೊಂದಿಗೆ ಸಿನಿಮಾ ನೋಡುವುದು ಮುಂತಾದ ಪ್ರಚಾರದ ಗಿಮಿಕ್‌ಗಳು ಹೆಚ್ಚು ಕೆಲಸ ಮಾಡುವುದಿಲ್ಲ. ಆ ಕಾರಣಕ್ಕೆ ಜನ ಚಿತ್ರಮಂದಿರಕ್ಕೆ ಬರುವುದಿಲ್ಲ.

ಒಂದು ವೇಳೆ ಬಂದರೆ ಅದು ತಾವು ಇಷ್ಟಪಟ್ಟವರನ್ನು ನೋಡಲೆಂದೇ ಹೊರತು, ಸಿನಿಮಾ ನೋಡಲು ಅಲ್ಲ. ಸಮಸ್ಯೆ ಏನು ಎಂದರೆ, ಇದನ್ನೆಲ್ಲ ಹೇಳಿದರೆ ಇವರಿಗೆ ಅರ್ಥವೂ ಆಗುವುದಿಲ್ಲ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎನ್ನುವುದು ಸರಿ, ಆದರೆ ಆ ಹೆಗ್ಗಣವೂ ಸತ್ತು ನಾರುತ್ತಿರುವಾಗ ಏನು ಮಾಡುವುದು? ಇನ್ನೊಂದು ಗಂಭೀರ ವಿಷಯವೆಂದರೆ, ಕನ್ನಡದ ಪ್ರೇಕ್ಷಕರು, ಅದರಲ್ಲೂ ಯುವ ಜನರು ಕನ್ನಡ ಚಲನಚಿತ್ರಗಳಿಂದ ದೂರವಾಗುತ್ತಿರುವುದು.

ಇಂದಿನ ಯುವಜನರು ಇಂಗ್ಲಿಷ್, ಹಿಂದಿ ಕಡೆ ತಿರುಗಿದ್ದಾರೆ. ಕನ್ನಡದ ಪ್ರೇಕ್ಷಕರು ಕನ್ನಡ ಸಿನಿಮಾ, ಧಾರಾವಾಹಿ ನೋಡದೇ, ಕೊರಿಯನ್ ಧಾರಾವಾಹಿ, ಮಲಯಾಳಂ, ತೆಲುಗು, ಮರಾಠಿ ಸಿನಿಮಾ ಗಳತ್ತ ಹೆಚ್ಚು ಆಕರ್ಷಿ ತರಾಗುತ್ತಿದ್ದಾರೆ.

ಒಂದು ಕಾಲದಲ್ಲಿ, ಕರ್ನಾಟಕದಲ್ಲಿ ಮಲಯಾಳಂ ಸಿನಿಮಾಗಳು ಮ್ಯಾಟಿನಿಗೆ ಮಾತ್ರ ಸೀಮಿತ ವಾಗಿರುತ್ತಿದ್ದವು. ಸಿನಿಮಾ ಮಧ್ಯದಲ್ಲಿ ಕಥೆಗೆ ಸಂಬಂಧವೇ ಇಲ್ಲದ ಅಶ್ಲೀಲ ವಿಡಿಯೋ ತುಣುಕು ಗಳು ಇರುತ್ತಿದ್ದವು. ಸಭ್ಯರೆಂದು ಕರೆಸಿಕೊಳ್ಳುವವರು ಆ ಕಾರಣಕ್ಕೆ ಅಂಥ ಸಿನಿಮಾಕ್ಕೆ ಹೋಗುತ್ತಿರ ಲಿಲ್ಲ, ಮಕ್ಕಳನ್ನಂತೂ ಕಳಿಸುತ್ತಲೇ ಇರಲಿಲ್ಲ.

ಅದನ್ನು ನೋಡಲೆಂದೇ ಹೋಗುವವರೂ ಇದ್ದರು ಅನ್ನಿ. ಆದರೆ ಇಂದು ಮಲಯಾಳಂ ಸಿನಿಮಾ ಸಂಪೂರ್ಣ ಬದಲಾಗಿದೆ ಎನ್ನುವುದನ್ನು ಒಪ್ಪಲೇಬೇಕು. ಮಲಯಾಳಂ ಸಿನಿಮಾ ಎಂದರೆ ಮೂಗು ಮುರಿಯುವ ಸಮಯ, ಸಂದರ್ಭದಿಂದ ಈ ರೀತಿಯ ಬದಲಾವಣೆ ಸಾಮಾನ್ಯವಾದದ್ದಲ್ಲ.

ಮಾತೆತ್ತಿದರೆ ‘ಅಪ್ಪಾಜಿ’, ‘ಅಣ್ಣಾವ್ರು’, ‘ದೇವರು’ ಎಂದು ಡಾ.ರಾಜ್‌ಕುಮಾರ್ ಅವರನ್ನು ಹೊಗಳುವ, ಜಪಿಸುವ ಚಿತ್ರರಂಗ ಅವರ ಆದರ್ಶವನ್ನು ಯಾಕೆ ಪಾಲಿಸುತ್ತಿಲ್ಲ ಅಥವಾ ಪ್ರೇರಣೆ ಪಡೆಯುತ್ತಿಲ್ಲ? ಹಾಗಾದರೆ ಇವರ ಹೊಗಳಿಕೆಗಳೆಲ್ಲ ತೋರಿಕೆಗೆ ಮಾತ್ರ ಸೀಮಿತವೇ? ಡಾ.ರಾಜ್‌ಕುಮಾರ್ ಎಷ್ಟು ಸಿನಿಮಾದಲ್ಲಿ ಸಿಗರೇಟ್ ಸೇದಿದ್ದರು? ಮದ್ಯದ ಬಾಟಲಿ ಹಿಡಿದಿದ್ದರು? ಎಷ್ಟು ಸಿನಿಮಾದಲ್ಲಿ ಮುಖದ ತುಂಬ ಗಡ್ಡ ಮೀಸೆ ತುಂಬಿಕೊಂಡಿದ್ದರು? ಎಷ್ಟು ಸಿನಿಮಾದಲ್ಲಿ ಮಚ್ಚು, ಮಷಿನ್ ಗನ್ ಹಿಡಿದಿದ್ದರು? ಎಷ್ಟು ಕಾರು ಸುಟ್ಟರು? ಅವರು ಅಭಿನಯಿಸಿದ ಇನ್ನೂರು ಚಿತ್ರಗಳ ಪೈಕಿ ಕುಟುಂಬ ಸಮೇತ ನೋಡಲಾಗದ, ಮಕ್ಕಳನ್ನು ಕರೆದುಕೊಂಡು ಹೋಗಬಾರದ ಸಿನಿಮಾಗಳ ಸಂಖ್ಯೆ ಎಷ್ಟು? ಅವರಾಗಲಿ, ಅವರ ನಿರ್ಮಾಪಕ, ನಿರ್ದೇಶಕರಾಗಲಿ ದಡ್ಡರೇ ಇರಬೇಕು ಅಲ್ಲವೇ? ಇದಕ್ಕೆಲ್ಲ ಯಾರೂ ಉತ್ತರಿಸುವುದಿಲ್ಲ.

ಹೋಗಲಿ, ಅವರ ಚಿತ್ರದ ಹೆಸರುಗಳಾದರೂ ಹೇಗಿರುತ್ತಿದ್ದವು? ‘ಭಾಗ್ಯವಂತರು’, ‘ಕಾಮನ ಬಿಲ್ಲು’, ‘ಚಲಿಸುವ ಮೋಡಗಳು’, ‘ಹಾಲು ಜೇನು’... ಹೆಸರು ನೋಡಿಯೇ ಸಿನಿಮಾಕ್ಕೆ ಹೋಗಬೇಕು ಅನ್ನಿಸು ತ್ತಿತ್ತು. ಇಂದಿನ ಸಿನಿಮಾದ ಹೆಸರುಗಳು...? ಇಂದು ಜನ ಇದನ್ನು ಬಯಸುತ್ತಾರೆ ಎಂದು ಹೇಳಬೇಡಿ.

ಇದನ್ನೆಲ್ಲ ಜನ ಬಯಸುವುದೇ ಹೌದಾಗಿದ್ದರೆ, ಇಂದಿನ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗಬೇಕಿ ತ್ತಲ್ಲ? ಇನ್ನೂ ಎಷ್ಟು ದಿನ ಇದೇ ಭ್ರಮಾಲೋಕದಲ್ಲಿರಬೇಕು? ಇನ್ನೂ ಎಷ್ಟು ಕೈ ಸುಟ್ಟುಕೊಳ್ಳ ಬೇಕು? ತಮಗೆ ಸರಿ ಕಂಡದ್ದು ಜನ ಇಷ್ಟಪಡಬೇಕು ಎನ್ನುವುದು ಎಷ್ಟು ಸರಿ? ಕನ್ನಡ ಚಿತ್ರರಂಗ ದವರು ಒಂದು ತಿಳಿಯಬೇಕು. ಮೊದಲು, ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಕಾಲದಲ್ಲಿ ಸಿನಿಮಾ ಚೆನ್ನಾಗಿಲ್ಲದಿದ್ದರೆ ಮಧ್ಯಂತರದಲ್ಲಿ ಎದ್ದು ಹೋಗುತ್ತಿದ್ದರು.

ಈಗ ಜನ ಚಿತ್ರಮಂದಿರಕ್ಕೆ ಬರುವುದು ಕಡಿಮೆಯಾಗಿದೆ, ಓಟಿಟಿಯಲ್ಲಿ ಸಿನಿಮಾ ನೋಡುತ್ತಿದ್ದಾರೆ ಅಂದುಕೊಳ್ಳಿ. ಈಗ ಮಧ್ಯಂತರದವರೆಗೂ ಕಾಯಬೇಕಾಗಿಲ್ಲ. ರಿಮೋಟ್ ಕೈಯ ಇರುತ್ತದೆ ಎನ್ನುವುದು ಗೊತ್ತಿರಬೇಕು.

ಹೆಚ್ಚು ಹೇಳದೇ, ಒಂದು ಉದಾಹರಣೆಯೊಂದಿಗೆ ಮುಗಿಸುತ್ತೇನೆ. ಇಲ್ಲವಾದರೆ ನಾನು ಯಾರz ಪರ ವಕಾಲತ್ತು ಮಾಡಿದಂತೆ ಅನಿಸಬಹುದು. ಮಲಯಾಳಂ ನಟ ಮಮ್ಮೂಟಿಯ ‘ಕಲಮ್ಕಾವಾಲ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಅದರ ಆಯ-ವ್ಯಯ ನೋಡುತ್ತಿದ್ದೆ. ಆ ಚಿತ್ರ ನಿರ್ಮಾಣಕ್ಕೆ ಮೂವತ್ತರಿಂದ ಮೂವತ್ತೈದು ಕೋಟಿ ರುಪಾಯಿ ಖರ್ಚಾಗಿದೆಯಂತೆ. ಸಿನಿಮಾ ನೋಡಿದರೆ ಅಷ್ಟು ಖರ್ಚಾಗಿರಲಿಕ್ಕಿಲ್ಲ ಅನ್ನಿಸಿತು. ಇರಲಿ, ನಿನ್ನೆಯವರೆಗೆ ಅದರ ಆದಾಯ ಎಂಬತ್ತು ಕೋಟಿ ದಾಟಿದೆ.

ಅದೇ ನಮ್ಮ ಕನ್ನಡದ ‘45’, ‘ಮಾರ್ಕ್’, ‘ಡೆವಿಲ್’ ಚಿತ್ರಗಳ ಬಜೆಟ್ ಅದಕ್ಕಿಂತಲೂ ಹೆಚ್ಚು. ಆದರೆ ಗಳಿಕೆ? ಚಿರಂಜೀವಿ, ವೆಂಕಟೇಶ್ ನಟಿಸಿದ ತೆಲಗು ಚಿತ್ರ ‘ಮನ ಶಂಕರ ವರಪ್ರಸಾದಗಾರು’ ಚಿತ್ರಕ್ಕೆ ಅರವತ್ತೈದು ಕೋಟಿ ಖರ್ಚಾಗಿದೆಯಂತೆ. ಚಿತ್ರದ ಗಳಿಕೆ ಈಗಾಗಲೇ ಮುನ್ನೂರ ಐವತ್ತು ಕೋಟಿ ದಾಟಿದೆ. ಹಾಗಾದರೆ ಬೇರೆ ಭಾಷೆಯ ಚಿತ್ರಗಳು ಸೋಲುವುದೇ ಇಲ್ಲವೇ? ಖಂಡಿತ ಸೋಲುತ್ತವೆ. ಆದರೆ ಎಷ್ಟು ಚಿತ್ರ ನಿರ್ಮಾ ಣಗೊಳ್ಳುತ್ತದೆ, ಎಷ್ಟು ಗೆಲ್ಲುತ್ತದೆ, ಎಷ್ಟು ಸೋಲುತ್ತದೆ ಎಂದು ನೋಡಿ.

ಕನ್ನಡಕ್ಕಿಂತ ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರಗಳ, ಮರಾಠಿ, ಗುಜರಾತಿ ಚಿತ್ರಗಳ ಯಶಸ್ಸಿನ ಸಂಖ್ಯೆ ಹೆಚ್ಚು ಎಂದಾದರೆ ಅದಕ್ಕೆ ಕಾರಣ ಹುಡುಕಬೇಡವೇ? ಕನ್ನಡದ ಮಾಸ್ ಹೀರೋಗಳು, ಸೂಪರ್ ಸ್ಟಾರ್‌ಗಳ ಸಿನಿಮಾಗಳನ್ನು ಗೆಲ್ಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಸಂದರ್ಭದಲ್ಲಿ ಅವರ ಹಿಂದೆ ಕೋಟಿ ಕೋಟಿ ಸುರಿಯುವ ಬದಲು, ಕೋಟಿಯ ಒಳಗೇ ಚಿತ್ರ ನಿರ್ಮಿಸಿ ಲಾಭಗಳಿಸುವುದು ಬುದ್ಧಿವಂತಿಕೆ ಅಲ್ಲವೇ? ಒಂದು ವೇಳೆ ನಷ್ಟವೇ ಆದರೂ ಸಣ್ಣದರಲ್ಲಿಯೇ ಹೋಯಿತು ಎಂಬ ಸಮಾಧಾನವಾದರೂ ಇರುತ್ತದಲ್ಲ? ಈ ಎಲ್ಲ ಕಥೆಗಳ ನಡುವೆ ನನಗೆ ನೋಡಲು ಸಿಕ್ಕಿದ್ದು ಯಾವ ಪ್ರಚಾರವೂ ಇಲ್ಲದೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಪಿ. ಶೇಷಾದ್ರಿ ನಿರ್ದೇಶನದ, ಪೋಸ್ಟರ್ ರಿಲೀಸ್, ಸಾಂಗ್ ರಿಲೀಸ್, ಟೀಸರ್ ರಿಲೀಸ್, ಯಾವುದೂ ಇಲ್ಲದ ‘ರೂಬಿಕ್ಯೂಬ್’ ಎಂಬ ಸಣ್ಣ ಬಜೆಟ್‌ನ ಅತ್ಯುತ್ತಮ ಚಿತ್ರ.