ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokesh Kayarga Column: ಗಳಿಸಿದ್ದನ್ನು ಉಳಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲು !

ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಪ್ರಮುಖ ಭರವಸೆಗಳನ್ನು ಈಡೇರಿಸಲು ವಾರ್ಷಿಕ ಕನಿಷ್ಠ 1.5 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ರು. ಹೆಚ್ಚುವರಿ ಹಣದ ಅವಶ್ಯಕತೆ ಇದೆ. ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವಾಗ ಬಜೆಟ್ ಸಮತೋಲನ ಕಾಯ್ದುಕೊಳ್ಳುವುದು ಟಿವಿಕೆಗೆ ಅಗ್ನಿ ಪರೀಕ್ಷೆಯಾಗಲಿದೆ.

ಗಳಿಸಿದ್ದನ್ನು ಉಳಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲು !

-

ಲೋಕಮತ

ತಮಿಳುನಾಡಿನಲ್ಲಿ ಇತಿಹಾಸ ಮರು ಕಳಿಸಿದೆ. ಎಂ.ಜಿ.ರಾಮಚಂದ್ರನ್ ಬಳಿಕ ಸಿನಿಮಾರಂಗದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಪಟ್ಟಕ್ಕೇರಲು ಸಿದ್ಧತೆ ನಡೆದಿದೆ. ಜೋಸೆಫ್ ವಿಜಯ್ ಸಿಎಂ ಪಟ್ಟಕ್ಕೇರಲು ಸಜ್ಜಾಗಿದ್ದಾರೆ.

ತಮಿಳುನಾಡಿನ ರಾಜಕೀಯ ಇತಿಹಾಸಕ್ಕೂ ಬೆಳ್ಳಿತೆರೆಗೂ ಅವಿನಾಭಾವ ಸಂಬಂಧ. ಕರುಣಾನಿಧಿ, ಎಂ.ಜಿ. ರಾಮಚಂದ್ರನ್, ಜಯಲಲಿತಾ ಅವರಂತಹ ದಿಗ್ಗಜರು ಚಿತ್ರರಂಗದಿಂದ ಬಂದು ಕೋಟ್ಯಂತರ ಜನರ ಮನಗೆದ್ದು ಆಡಳಿತ ನಡೆಸಿದವರು. ಈಗ ಅದೇ ಹಾದಿಯಲ್ಲಿ ದಳಪತಿ ಜೋಸೆಫ್ ವಿಜಯ್ ಹೆಜ್ಜೆ ಇಟ್ಟಿದ್ದಾರೆ. ಎಂಜಿಆರ್ ನಂತರ ತಮಿಳುನಾಡಿನಲ್ಲಿ ಅಷ್ಟೇ ಮಟ್ಟದ ಜನಪ್ರಿಯತೆ ಹೊಂದಿರುವ ನಟರೊಬ್ಬರು ನೇರವಾಗಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿರುವುದು ದ್ರಾವಿಡ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಆದರೆ, ಸಿನಿಮಾ ಪರದೆಯ ಮೇಲಿನ ‘ಏಕಾಂಗಿ ಪ್ರದರ್ಶನ’ ರಾಜಕೀಯದ ರಣರಂಗದಲ್ಲಿ ಅಷ್ಟು ಸುಲಭವಲ್ಲ.

ತಮಿಳುನಾಡು ರಾಜಕಾರಣದಲ್ಲಿ ಎಂಜಿಆರ್ ಅವರದ್ದು ಅಳಿಸಲಾಗದ ಹೆಸರು. ಅವರು ರಾಜ ಕೀಯ ಪ್ರವೇಶಿಸುವ ಮುನ್ನವೇ ಪೆರಿಯಾರ್, ಅಣ್ಣಾದೊರೈ ವಿಚಾರಧಾರೆಗಳಿಂದ ಪ್ರಭಾವಿತ ರಾಗಿದ್ದರು. ಡಿಎಂಕೆಯಿಂದ ಹೊರಬಂದು ಎಐಎಡಿಎಂಕೆ ಸ್ಥಾಪಿಸಿದಾಗ ಜನರು ಅವರನ್ನು ಕೇವಲ ನಟನಾಗಿ ನೋಡಲಿಲ್ಲ, ಬದಲಾಗಿ ತಮ್ಮ ಮನೆಯ ಮಗನಾಗಿ ಕಂಡರು. ವಿಜಯ್ ಅವರ ಇಂದಿನ ಪರಿಸ್ಥಿತಿಯೂ ಬಹುತೇಕ ಹಾಗೆಯೇ ಇದೆ. ಯುವಜನತೆ ಮತ್ತು ಮಹಿಳಾ ಮತದಾರರಲ್ಲಿ ವಿಜಯ್‌ಗೆ ಇರುವ ಕ್ರೇಜ್ ಅಭೂತಪೂರ್ವವಾದುದು. ಆದರೆ ಎಂಜಿಆರ್ ಕಾಲದ ರಾಜಕೀಯ ಪರಿಸ್ಥಿತಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ. ಅಂದು ಎಂಜಿಆರ್ ಎದುರಿಸಿದ್ದು ಕೇವಲ ಒಂದು ಪಕ್ಷವನ್ನು, ಆದರೆ ಇಂದು ವಿಜಯ್ ಬಲಿಷ್ಠ ಡಿಎಂಕೆ ಮತ್ತು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಎಐಎಡಿಎಂಕೆ ಎರಡನ್ನೂ ಎದುರಿಸಬೇಕಿದೆ. ಮುಖ್ಯವಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನಗಳನ್ನು ಈಡೇರಿಸುವುದು ವಿಜಯ್ ಅವರ ರಾಜಕೀಯ ಬದುಕಿಗೆ ಒರೆಗಲ್ಲಾಗಲಿದೆ.

ಇದನ್ನೂ ಓದಿ: Lokesh Kayarga Column: ನಮ್ಮ ಹೆದ್ದಾರಿಗಳೆಂದರೆ ದರೋಡೆಗೆ ರಹದಾರಿಯೇ ?

ಐದು ರಾಜ್ಯಗಳ ಚುನಾವಣೆಯಲ್ಲಿ ಗೆದ್ದಿರುವ ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಹಲವು ಘೋಷಣೆಗಳನ್ನು ಮುಂದಿಟ್ಟಿವೆ. ಟಿವಿಕೆ ಪಕ್ಷದ ನಾಯಕ ವಿಜಯ್ ಅವರು, ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳನ್ನೂ ಮೀರಿಸಿ ಹಲವು ಭರವಸೆಗಳನ್ನು ನೀಡಿದ್ದಾರೆ. ಈಗ ಇವೆಲ್ಲವನ್ನೂ ಈಡೇರಿಸುವ ಕಾಲ ಬಂದಿದೆ.

ಭಾರತದ ಚುನಾವಣಾ ರಾಜಕಾರಣವು ದಶಕಗಳಿಂದ ‘ಸಿದ್ಧಾಂತ’ ಮತ್ತು ’ಅಭಿವೃದ್ಧಿ’ ಎಂಬ ಎರಡು ಹಳಿಗಳ ಮೇಲೆ ಸಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ‘ನೇರ ನಗದು ವರ್ಗಾವಣೆ’ ಮತ್ತು ‘ಉಚಿತ ಸೇವೆ’ಗಳೆಂಬ ಮೂರನೇ ಹಳಿಯಲ್ಲಿ ಸಾಗುವ ‘ಗ್ಯಾರಂಟಿ ರಾಜಕಾರಣ’ ಆರಂಭವಾಗಿದೆ. 2023ರಲ್ಲಿ ಉಚಿತ ಸ್ಕೀಮುಗಳ ಗ್ಯಾರಂಟಿಯೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿದ ಬಳಿಕ ಬಹುತೇಕ ಎಲ್ಲ ರಾಜ್ಯಗಳು ಈ ಮಾದರಿಯನ್ನು ಅನುಸರಿಸ ತೊಡಗಿವೆ. 2024ರಲ್ಲಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ನಡೆದ ಚುನಾವಣೆ, ಕಳೆದ ವರ್ಷ ಬಿಹಾರದಲ್ಲಿ ಚುನಾವಣೆಯಲ್ಲಿ ಗ್ಯಾರಂಟಿ ಸ್ಕೀಮುಗಳು ಪ್ರಮುಖ ಪಾತ್ರ ವಹಿಸಿವೆ.

2026ರ ವಿಧಾನಸಭಾ ಚುನಾವಣೆಗಳಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂನಲ್ಲಿ ಕಂಡುಬಂದ ಪ್ರಣಾಳಿಕೆಗಳ ಸಮರ ಈ ಟ್ರೆಂಡ್ ಅನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿವೆ. ಪ್ರಣಾಳಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಯಾವುದೇ ಪಕ್ಷಗಳಿಗೆ ಗೆಲುವು ಮುಖ್ಯವಾಗುತ್ತದೆ. ಅದನ್ನು ಈಡೇರಿಸುವ ಸಾಧ್ಯತೆ ಬಗ್ಗೆ ಯಾವ ಪಕ್ಷಗಳೂ ಹೆಚ್ಚೇನೂ ತಲೆ ಕೆಡಿಸಿ ಕೊಳ್ಳುವುದಿಲ್ಲ. ವಿಜಯ್ ಪಾಲಿಗೆ ಈ ಭರವಸೆಗಳೇ ಉರುಳಾಗುವ ಸಾಧ್ಯತೆಯೂ ಇದೆ.

Screenshot_5

ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ 95 ಪುಟಗಳ ಪ್ರಣಾಳಿಕೆಯಲ್ಲಿ ಮಹಿಳೆಯರು, ಯುವಜನರು ಮತ್ತು ರೈತರನ್ನು ಗುರಿಯಾಗಿಸಿ ಕೊಂಡು ಹಲವು ವಾಗ್ದಾನಗಳನ್ನು ನೀಡಲಾಗಿದೆ. ಡಿಎಂಕೆ ಸರಕಾರ ರಾಜ್ಯದಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ಸಾವಿರ ರು. ಧನಸಹಾಯ ನೀಡುತ್ತಿತ್ತು. ವಿಜಯ್ ಈ ಮೊತ್ತ ವನ್ನು 2,500 ರು.ಗಳಿಗೆ ಏರಿಸುವ ಭರವಸೆ ನೀಡಿದ್ದಾರೆ. ಇದಲ್ಲದೆ ಬಡ ಕುಟುಂಬಕ್ಕೆ ವರ್ಷಕ್ಕೆ 6 ಉಚಿತ ಗ್ಯಾಸ್ ಸಿಲಿಂಡರ್‌ಗಳ ವಿತರಣೆ, ಬಡ ಕುಟುಂಬದ ವಧುಗಳಿಗೆ ಒಂದು ಪವನ್ ಚಿನ್ನದ ನಾಣ್ಯ (8 ಗ್ರಾಂ) ಮತ್ತು ರೇಷ್ಮೆ ಸೀರೆಯ ಉಡುಗೊರೆ ಪ್ರಕಟಿಸಿದ್ದಾರೆ. ಇದಲ್ಲದೆ ನವಜಾತ ಹೆಣ್ಣು ಮಗುವಿಗೆ ಚಿನ್ನದ ಉಂಗುರ ಮತ್ತು ‘ವೆಲ್ಕಮ್ ಕಿಟ್’, ಮಹಿಳಾ ಸ್ವಸಹಾಯ ಸಂಘಗಳಿಗೆ ₹5 ಲಕ್ಷ ದವರೆಗೆ ಬಡ್ಡಿರಹಿತ ಸಾಲದ ವಾಗ್ದಾನ ಮಾಡಿದ್ದಾರೆ.

ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 4,000 ರು., ಡಿಪ್ಲೊಮಾ ಪದವೀಧರರಿಗೆ 2,500 ರು. ನಿರುದ್ಯೋಗ ಭತ್ಯೆ, ಕೌಶಲ್ಯ ತರಬೇತಿ ಪಡೆಯುತ್ತಿರುವ ಪದವೀಧರರಿಗೆ 10 ಸಾವಿರ ಮತ್ತು ಐಟಿಐ ವಿದ್ಯಾರ್ಥಿಗಳಿಗೆ 8,000 ರು. ಮಾಸಿಕ ಸ್ಟೈಫಂಡ್ ಭರವಸೆಯನ್ನೂ ನೀಡಲಾಗಿದೆ. ಗ್ರಾಮ ಮಟ್ಟ ದಲ್ಲಿ 5 ಲಕ್ಷ ಯುವಕರನ್ನು ನೇಮಕ ಮಾಡಿಕೊಂಡು ಅವರಿಗೆ ತಿಂಗಳಿಗೆ 18,000 ರು. ವೇತನ ನೀಡುವ ಭರವಸೆ ಟಿವಿಕೆ ಪ್ರಣಾಳಿಕೆಯ ಟ್ರಂಪ್ ಕಾರ್ಡ್ ಆಗಿತ್ತು. ಈ ಭರವಸೆ ನಂಬಿ ಸಾವಿರಾರು ಯುವಕರು ವಿಜಯ್ ಬೆನ್ನಿಗೆ ನಿಂತಿದ್ದಾರೆ.

ಇದಲ್ಲದೆ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಸಹಕಾರಿ ಕೃಷಿ ಸಾಲಗಳ ಸಂಪೂರ್ಣ ಮನ್ನಾ ಮತ್ತು ಇತರರಿಗೆ ಶೇ. 50ರಷ್ಟು ರಿಯಾಯಿತಿ, ಗೇಣಿ ರೈತರು ಮತ್ತು ಕೃಷಿ ಕಾರ್ಮಿಕರಿಗೆ 10,000 ರು. ಹಣಕಾಸು ನೆರವು ನೀಡಲು ವಿಶೇಷ ಕಾರ್ಡ್ ವಿತರಣೆ, ಪಿಯುನಿಂದ ಪಿಎಚ್‌ಡಿವರೆಗಿನ ವಿದ್ಯಾರ್ಥಿಗಳಿಗೆ ಶೂನ್ಯ ಭದ್ರತೆಯಲ್ಲಿ 20 ಲಕ್ಷದವರೆಗೆ ಸಾಲ ಸೌಲಭ್ಯ... ಇವೆಲ್ಲವೂ ಟಿವಿಕೆ ಪ್ರಣಾಳಿಕೆಯಲ್ಲಿ ಸೇರಿವೆ.

ಭ್ರಷ್ಟಾಚಾರ ಮುಕ್ತ ಆಡಳಿತದ ದಳಪತಿ ವಿಜಯ್ ಭರವಸೆಯನ್ನು ಈ ಹಿಂದೆ ಎಲ್ಲ ಪಕ್ಷಗಳು ನೀಡಿದ್ದವು. ಆದರೆ ಜನತೆ ಇಂತಹ ಭರವಸೆಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಿದವರಲ್ಲ. ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂಬ ಅಮೂರ್ತ ಮಾತನ್ನು ಕೇಳಲು ಈಗಿನ ಮತದಾರರು ಸಿದ್ಧರಿಲ್ಲ. ಬದಲಾಗಿ, ‘ನನ್ನ ಜೇಬಿಗೆ ಅಥವಾ ನನ್ನ ಮನೆಗೆ ಸರಕಾರದಿಂದ ನೇರವಾಗಿ ಏನು ಸಿಗುತ್ತದೆ’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಇದೇ ಕಾರಣಕ್ಕೆ ಎಲ್ಲ ಪಕ್ಷಗಳು ‘ನೇರ ನಗದು’ ಮತ್ತು ‘ಉಚಿತ’ ಸ್ಕೀಮುಗಳನ್ನು ಘೋಷಿಸುತ್ತಿವೆ. ಆದರೆ ಈ ಕೊಡುಗೆಗಳನ್ನು ಕಾಲಮಿತಿಯೊಳಗೆ ಘೋಷಿಸದೇ ಹೋದರೆ ಜನರು ಬೀದಿಗಿಳಿಯುವ ಸಾಧ್ಯತೆ ಇದೆ.

ತಮಿಳುನಾಡು ಭಾರತದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದ್ದರೂ, ಸಾಲದ ಹೊರೆ ಆತಂಕ ಕಾರಿ ಪ್ರಮಾಣದಲ್ಲಿದೆ. ಡಿಎಂಕೆ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್ ಪ್ರಕಾರ 2026-27ರಲ್ಲಿ ರಾಜ್ಯದ ಬಾಹ್ಯ ಸಾಲದ ಪ್ರಮಾಣ 10.71 ಲಕ್ಷ ಕೋಟಿಗಳಿಗೆ ಏರಲಿದೆ. ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿರುವುದರಿಂದ ಹಣಕಾಸು ಕೊರತೆ ಪ್ರತಿ ವರ್ಷ ಏರುತ್ತಲೇ ಇದೆ. ರಾಜ್ಯದ ಆದಾಯದ ಗಮನಾರ್ಹ ಭಾಗವು ಕೇವಲ ಹಳೆಯ ಸಾಲಗಳ ಬಡ್ಡಿ ಪಾವತಿಗೆ ವ್ಯಯವಾಗುತ್ತಿದೆ. ವಿಜಯ್ ಅವರ ಪ್ರಮುಖ ಭರವಸೆಗಳನ್ನು ಈಡೇರಿಸಲು ವಾರ್ಷಿಕವಾಗಿ ಕನಿಷ್ಠ 1.5 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ರು. ಹೆಚ್ಚುವರಿ ಹಣದ ಅವಶ್ಯಕತೆ ಇದೆ. ತಮ್ಮ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವಾಗ ಬಜೆಟ್ ಸಮತೋಲನ ಕಾಯ್ದುಕೊಳ್ಳುವುದು ವಿಜಯ್ ಅವರಿಗೆ ಅಗ್ನಿಪರೀಕ್ಷೆಯಾಗಲಿದೆ.

ಬಿಜೆಪಿ ಇಲ್ಲವೇ ಎನ್‌ಡಿಎ ಮೈತ್ರಿಕೂಟದಲ್ಲಿರುವ ಸರಕಾರಗಳಿಗೆ ಕೇಂದ್ರ ಸರಕಾರದ ಅನುದಾನದ ಬೆಂಬಲ ಇರುವುದರಿಂದ ಸಂಪನ್ಮೂಲ ಕ್ರೋಢಿಕರಣ ಕಷ್ಟವಲ್ಲ. ಆದರೆ ವಿಜಯ್ ಸದ್ಯಕ್ಕೆ ಕಾಂಗ್ರೆಸ್ ಮೈತ್ರಿ ಬೆಳೆಸುವ ಸುಳಿವು ನೀಡಿದ್ದಾರೆ. ಇದರಿಂದ ಕೇಂದ್ರಸರಕಾರದಿಂದ ಹೆಚ್ಚುವರಿ ಅನುದಾನವನ್ನು ಪಡೆಯುವುದು ಇನ್ನಷ್ಟು ಕಷ್ಟವಾಗಬಹುದು. ದಕ್ಷಿಣದ ವಿಪಕ್ಷ ಸರಕಾರಗಳತ್ತ ಕೇಂದ್ರದ ತಾರತಮ್ಯ ನೀತಿ ಮುಂದುವರಿದರೆ ಕರ್ನಾಟಕದಂತೆ ತಮಿಳುನಾಡು ಕೂಡ ಆರ್ಥಿಕ ಸಂಕಷ್ಟ ಎದುರಿಸುವುದು ನಿಶ್ಚಿತ.

ಚುನಾವಣೆಯ ಅಗ್ನಿಪರೀಕ್ಷೆ ಗೆದ್ದ ವಿಜಯ್‌ಗೆ ಈ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಅಸಾಧ್ಯ ವೇನಲ್ಲ. ಆದರೆ ಸದ್ಯಕ್ಕೆ ಪಕ್ಷದಲ್ಲಿ ವಿಜಯ್ ಒಬ್ಬರೇ ಮುಂಚೂಣಿಯಲ್ಲಿದ್ದಾರೆ. ಸಂಕೀರ್ಣವಾದ ರಾಜಕೀಯ ತಂತ್ರಗಾರಿಕೆಗಳನ್ನು ಹೆಣೆಯಲು ಅವರಿಗೆ ಅನುಭವಿ ಸಲಹೆಗಾರರು ಮತ್ತು ರಾಜ್ಯಾ ದ್ಯಂತ ಪ್ರಭಾವ ಹೊಂದಿರುವ ಉಪ ನಾಯಕರ ಅಗತ್ಯವಿದೆ. ವಿರೋಧ ಪಕ್ಷಗಳು ವಿಜಯ್ ಅವರ ಮೇಲೆ ದಾಳಿ ಮಾಡಲು ಬಳಸಬಹುದಾದ ಪ್ರಮುಖ ಅಸ್ತ್ರ ‘ಅನುಭವದ ಕೊರತೆ’. ಸಿನಿಮಾ ನಟನೊಬ್ಬನಿಗೆ ಆಡಳಿತದ ಸೂಕ್ಷ್ಮತೆಗಳು ತಿಳಿದಿರುವುದಿಲ್ಲ ಎಂಬ ಟೀಕೆ ಸಾಮಾನ್ಯ. ಇದನ್ನು ಮೆಟ್ಟಿ ನಿಲ್ಲಲು ವಿಜಯ್ ಅವರು ನೀತಿ ನಿರೂಪಣೆಯಲ್ಲಿ ತಜ್ಞರ ತಂಡವನ್ನು ಹೊಂದುವುದು ಅವಶ್ಯ.

ವಿಜಯ್ ಅವರ ಮುಂದೆ ಈಗ ಹಲವು ಪೂರ್ವೋದಾಹರಣೆಗಳಿವೆ. ತನ್ನಂತೆ ದಿಢೀರ್ ರಾಜಕೀಯ ಪ್ರವೇಶಿಸಿ, ತಮಿಳುನಾಡಿನ ಜನಮಾನಸದ ಭಾಗವಾದ ಎಂಜಿಆರ್ ಅವರ ಮುಂದಿದ್ದಾರೆ. ರಾಜಕೀಯ ಚಾಣಾಕ್ಷ ಕರುಣಾನಿಧಿ, ಅವರನ್ನೇ ಮೀರಿಸಿ ಗೆದ್ದ ಜಯಲಲಿತಾ ಕೂಡ ಇದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿ, ಕೊನೆಗೆ ಇದೇ ಕಾರಣಕ್ಕಾಗಿ ಜೈಲು ಸೇರಿದ ಅರವಿಂದ ಕೇಜ್ರಿವಾಲ್ ಇತ್ತೀಚಿನ ಉದಾಹರಣೆಯಾಗಿ ಕಣ್ಣ ಮುಂದಿದ್ದಾರೆ. ತಮಿಳುನಾಡಿನಲ್ಲಿ ಹೇಗಾದರೂ ಮಾಡಿ ತಳವೂರಲು ಪ್ರಯತ್ನಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಿಜಯ್ ಅವರ ವೈಯಕ್ತಿಕ ಜೀವನ ಮತ್ತು ತೆರಿಗೆ ವಿಚಾರಗಳ ಮೇಲೆ ಹದ್ದಿನ ಕಣ್ಣು ಇಡುವುದು ನಿಶ್ಚಿತ. ವಿಜಯ್ ಇದೆಲ್ಲವನ್ನೂ ಎದುರಿಸುವ ಧೈರ್ಯ ತೋರಬೇಕಿದೆ.

ತಮಿಳುನಾಡು ರಾಜಕಾರಣವು ದಶಕಗಳಿಂದ ‘ದ್ರಾವಿಡ ಸಿದ್ಧಾಂತ’ದ ಮೇಲೆ ನಿಂತಿದೆ. ವಿಜಯ್ ಅವರು ತಮ್ಮನ್ನು ತಾವು ದ್ರಾವಿಡ ಪಥದ ಪಯಣಿಗ ಎಂದು ಕರೆದುಕೊಂಡರೂ, ಅವರ ನಿಲುವು ಗಳು ಸಂಪ್ರದಾಯದ ಕಟ್ಟಳೆ ಮೀರಿದಂತೆ ಕಾಣುತ್ತಿಲ್ಲ. ಪೆರಿಯಾರ್ ಮತ್ತು ಅಣ್ಣಾದೊರೈ ಅವರ ಸಿದ್ಧಾಂತಗಳನ್ನು ಒಪ್ಪುತ್ತಲೇ, ಆಧ್ಯಾತ್ಮಿಕ ನಂಬಿಕೆಗಳನ್ನು ಗೌರವಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಇದು ಡಿಎಂಕೆಯ ‘ನಿರೀಶ್ವರವಾದ’ಕ್ಕೆ ಪರ್ಯಾಯ ವಾಗಬಹುದು. ಆದರೆ ಸಿದ್ಧಾಂತದ ಸ್ಪಷ್ಟತೆ, ವಿಚಾರಗಳ ಸ್ಪಷ್ಟತೆ ಜತೆಗೆ ಜನರಿಗೆ ನೀಡಿದ ಭರವಸೆ ಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಸಂಕಲ್ಪ ಮತ್ತು ದೀರ್ಘಕಾಲದ ರಾಜಕೀಯ ಹೋರಾಟಕ್ಕೆ ಬೇಕಾದ ಹೋರಾಟದ ಛಾತಿಯನ್ನು ವಿಜಯ್ ಪ್ರದರ್ಶಿಸಬೇಕಾಗಿದೆ.

ತಮಿಳುನಾಡಿನ ಜನತೆಗೆ ಜನಪ್ರಿಯ ಯೋಜನೆಗಳು ಹೊಸದೇನಲ್ಲ. ಡಿಎಂಕೆ ಮತ್ತು ಎಐಎಡಿಎಂಕೆ ದಶಕಗಳಷ್ಟು ಹಿಂದೆಯೇ ಇಂತಹ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಅಭಿವೃದ್ಧಿಪರ ಆಡಳಿತವೆಂದರೆ ಕೇವಲ ಹಣ ಹಂಚುವುದಲ್ಲ, ಬದಲಾಗಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು. ವಿಜಯ್ ಅವರ ಟಿವಿಕೆ ಸರಕಾರವು ಉದ್ಯೋಗ ಆಧಾರಿತ ಗ್ಯಾರಂಟಿಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಅವಶ್ಯಕತೆಯಿದೆ. ಪಕ್ಷದ ಪ್ರಣಾಳಿಕೆ ಕೇವಲ ಮತ ಪಡೆಯುವ ಸಾಧನವಾಗದೆ ರಾಜ್ಯದ ಭವಿಷ್ಯದ ‘ಮಾರ್ಗಸೂಚಿ’ಯಾಗಬೇಕಿದೆ.