ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಪ್ರಜ್ವಲ್‌ ರೇಪಣ್ಣ; ಆಸನದ ಗೌಡ್ರು

ತೆಲುಗು ಸಿನಿಮಾ ಒಂದನ್ನು ಕಾಪಿ ಮಾಡಿದ್ದ ‘ಮಾನ್ಸೂನ್ ರಾಗ’ ಸಿನಿಮಾ ತಂಡ ಹೀಗೆ ಮಾಡಿದ್ದು ಯಾಕೆ ಅಂತ ಎಲ್ಲರಿಗೂ ಆಶ್ಚರ್ಯ. ಸಾಮಾನ್ಯವಾಗಿ ಹಕ್ಕು ತೆಗೆದುಕೊಂಡು ರಿಮೇಕ್ ಮಾಡುವವರು ಒಂದು ಕಡೆ ಆದ್ರೆ, ಕದ್ದು ರಿಮೇಕ್ ಮಾಡೋರು ಇನ್ನೊಂದು ಕಡೆ. ಆದರೆ ಈ ಸಿನಿಮಾ ನೋಡಿದವರಿಗೆ ಇದು ಹಕ್ಕುಗಳನ್ನು ಖರೀದಿಸಿಯೇ ಮಾಡಿರೋ ಸಿನಿಮಾ ಅಂತ ಗೊತ್ತಾಗುತ್ತೆ.

ಪ್ರಜ್ವಲ್‌ ರೇಪಣ್ಣ; ಆಸನದ ಗೌಡ್ರು

ಹರಿ ಪರಾಕ್‌ ಹರಿ ಪರಾಕ್‌ Aug 3, 2025 7:54 AM

ಸಿನಿಗನ್ನಡ

ತುಂಟರಗಾಳಿ

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿ ರಿಮೇಕ್ ಸಿನಿಮಾಗಳ ಹಾವಳಿ ಕೊಂಚ ಕಡಿಮೆ ಆದಂತಿತ್ತು. ಆದರೆ ಅದು ಅಷ್ಟು ಸುಲಭವಾಗಿ ಹೋಗುವ ಚಾಳಿ ಅಲ್ಲ ಅನ್ನೋದು ಮತ್ತೆ ಪ್ರೂವ್ ಆಗ್ತಾ ಇದೆ. ಕನ್ನಡ ಸಿನಿಮಾಗಳು ‘ಬಿಫೋರ್ ಕೆಜಿಎಫ್, ಆಫರ್ ಕೆಜಿಎಫ್’ ಅನ್ನೋ ಹೊಸ ಚಾಪ್ಟರ್‌ ತೆರೆಯುತ್ತಿವೆ ಎಂದು ಕನಸು ಕಾಣುತ್ತಿದ್ದವರಿಗೆ ಈ ರಿಮೇಕ್ ಹಾವಳಿ ನೋಡಿ ಬೇಸರ ವಾಗಿದೆ.

ಕನ್ನಡ ಸಿನಿಮಾಪ್ರಿಯರ ಇಂಥ ಕನಸಿಗೆ ಇತ್ತೀಚೆಗೆ ಭಂಗ ತಂದಿದ್ದು ನಮ್ಮದೇ ಕನಸುಗಾರ ರವಿಚಂದ್ರನ್. ಮಲಯಾಳಂನ ‘ಜೋಸೆಫ್’‌ ಚಿತ್ರವನ್ನು ಕನ್ನಡದಲ್ಲಿ ‘ರವಿ ಬೋಪಣ್ಣ’ ಆಗಿಸಿದ್ದ ರವಿಚಂದ್ರನ್ ಅವರ ಈ ಸಿನಿಮಾ ನೋಡಿ, ‘ನಮ್ಮ ಶೋಮ್ಯಾನ್ ಹಿಂಗ್ಯಾಕಾದ್ರು?’ ಅಂತ ಅನೇಕರು ಮುಖ ಸಿಂಡರಿಸಿಕೊಂಡಿದ್ದರು.

ಅದ್ಯಾವ ಲೆವೆಲ್ಲಿಗೆ ಈ ಸಿನಿಮಾದಲ್ಲಿ ಬದಲಾವಣೆಯಾಗಿತ್ತು ಅಂದ್ರೆ ಚಿತ್ರವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಅಲ್ಲದೆ, ತಮ್ಮ ನಾಟಿತನಕ್ಕೆ ತಕ್ಕಂತೆ ರವಿಚಂದ್ರನ್ ಬದಲಾವಣೆ ಮಾಡಿ ಕೊಂಡಿದ್ರು. ಆದರೂ ಆ ಸಿನಿಮಾ ಇನ್ನಿಲ್ಲದಂತೆ ಸೋತ ನಂತರ ಮತ್ತೊಂದು ರಿಮೇಕ್ ಸಿನಿಮಾ ಬಂದಿತ್ತು. ಅದು ಡಾಲಿ ಧನಂಜಯ ಅವರ ‘ಮಾನ್ಸೂನ್ ರಾಗ’ ಸಿನಿಮಾ. ಈ ಸಿನಿಮಾದ ಬಗ್ಗೆ ಪ್ರೇಕ್ಷಕ ಒಳ್ಳೆಯ ಮಾತೇ ಹೇಳಿದರೂ ಅವರ ಅಸಮಾಧಾನಕ್ಕೆ ಕಾರಣ ಅಂದ್ರೆ ಚಿತ್ರತಂಡ ಸಿನಿಮಾ ಬಿಡುಗಡೆಗೆ ಮುನ್ನ ಇದು ರಿಮೇಕ್ ಅಂತ ಎಲ್ಲೂ ಹೇಳದೇ ಇದ್ದಿದ್ದು.

ಇದನ್ನೂ ಓದಿ: Hari Paraak Column: ಅಕ್ವೇರಿಯಂನಲ್ಲಿ ಮೀನು ಸಾಕುವವನು : ವೆಜಿಟೇರಿಯನ್

ತೆಲುಗು ಸಿನಿಮಾ ಒಂದನ್ನು ಕಾಪಿ ಮಾಡಿದ್ದ ‘ಮಾನ್ಸೂನ್ ರಾಗ’ ಸಿನಿಮಾ ತಂಡ ಹೀಗೆ ಮಾಡಿದ್ದು ಯಾಕೆ ಅಂತ ಎಲ್ಲರಿಗೂ ಆಶ್ಚರ್ಯ. ಸಾಮಾನ್ಯವಾಗಿ ಹಕ್ಕು ತೆಗೆದುಕೊಂಡು ರಿಮೇಕ್ ಮಾಡು ವವರು ಒಂದು ಕಡೆ ಆದ್ರೆ, ಕದ್ದು ರಿಮೇಕ್ ಮಾಡೋರು ಇನ್ನೊಂದು ಕಡೆ. ಆದರೆ ಈ ಸಿನಿಮಾ ನೋಡಿದವರಿಗೆ ಇದು ಹಕ್ಕುಗಳನ್ನು ಖರೀದಿಸಿಯೇ ಮಾಡಿರೋ ಸಿನಿಮಾ ಅಂತ ಗೊತ್ತಾಗುತ್ತೆ.

ಆದ್ರೆ ಸಿನಿಮಾ ತಂಡ ಈ ಸತ್ಯವನ್ನು ಬಚ್ಚಿಟ್ಟಿದ್ದು ಮಾತ್ರ ಯಾವ ಪುರುಷಾರ್ಥಕ್ಕೆ ಅನ್ನೋದು ಯಾರಿಗೂ ಅರ್ಥ ಆಗ್ತಿಲ್ಲ. ಈಗಲೂ ಕದ್ದು ಮುಚ್ಚಿ ಆದ್ರೂ ರಿಮೇಕ್ ಹಾವಳಿ ಇನ್ನೂ ಜೀವಂತ ಇದೆ. ಆದರೆ ಅವ್ಯಾವುವೂ ದೊಡ್ಡ ಸಿನಿಮಾಗಳಲ್ಲ ಅನ್ನೋದು ಸಮಾಧಾನ.

ಲೂಸ್‌ ಟಾಕ್-‌ ಪ್ರಜ್ವಲ್‌ ರೇವಣ್ಣ

former MP Prajwal Revanna

ಹಲೋ, ನಮಸ್ಕಾರ, ಏನ್ ಸಮಾಚಾರ ಪ್ರಜ್ವಲ್ ರೇಪಣ್ಣ ಅವ್ರೇ?...

ಸಾರಿ, ರೇವಣ್ಣ ಅವ್ರೇ - ಹುಷಾರು ಕಣ್ರೀ, ತಪ್ಪು ಮಾಡಿ ಸಾರಿ ಕೇಳಿದ್ರೆ ಕೋರ್ಟ್ ಸುಮ್ನೆ ಬಿಡಲ್ಲ, ಶಿಕ್ಷೆ ಕೊಟ್ಟೇ ಕೊಡುತ್ತೆ.

ಅದ್ ನಿಜ, ಆದ್ರೆ ನೀವೇನ್ ತೀರಾ ಮನೆ ಅಡುಗೆ ಕೆಲಸದವಳನ್ನೂ ಬಿಟ್ಟಿಲ್ಲವಂತಲ್ಲ?

- ಏನ್ ಮಾಡೋದು, ಹೊಸರುಚಿ ನೋಡೋಣ ಅಂತ ಹೋದೆ.

ಒಬ್ಬ ಸಂಸದ ಆಗಿ ಇಂಥ ಕೆಲಸನಾ ನೀವು ಮಾಡೋದು?

- ಏನ್ ಮಾಡೋದು some -ಸಲ ಹಿಂಗಾಗಿ ಬಿಡುತ್ತೆ.

ಓಹೋ, ಬೇಕಿತ್ತಾ, ಅಂತೂ ತಾತನ ಹೆಸರು ಹಾಳು ಮಾಡಿಬಿಟ್ರಲ್ಲ?

- ನಾನೆಲ್ಲಿ ಹಾಳು ಮಾಡಿದೆ. ಅವರು ‘ಹಾಸನ’ದ ಗೌಡ್ರು ಅಂತ ಹೆಸರು ಮಾಡಿದ್ರು, ನಾನು ‘ಆಸನ’ದ ಗೌಡ ಅಂತ ಹೆಸರು ಮಾಡಿದೆ.

ಅಂತೂ ಇಂತೂ ಕೃಷ್ಣ ಜನ್ಮಸ್ಥಾನಕ್ಕೆ ಸೇರೋ ಕಾಲ ಬಂತು ಅನ್ನಿ..

- ಆ ಕೃಷ್ಣ ಜೈಲಲ್ಲಿ ಹುಟ್ಟಿ ಆಮೇಲೆ ಹೊರಗೆ ಬಂದು ಕೃಷ್ಣಲೀಲೆ ತೋರಿಸಿದ. ನಾನು ಕೃಷ್ಣಲೀಲೆ ತೋರಿಸಿ ಜೈಲಿಗೆ ಬಂದೆ.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮುಗೆ ಯಾವಾಗ್ಲೂ ಇನ್ನೊಬ್ಬರನ್ನು ಹೀಯಾಳಿಸಿ‌ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೆ ‘ಮೈ ಫುಟ್’ ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕೆಲಸ ಮಾಡಿದ್ರೂ ಅದನ್ನು ಇನ್ನೊಬ್ಬರು ಯಾರಾದ್ರೂ ಹೊಗಳಿದ್ರೆ ಸಾಕು, ‘ಅಯ್ಯೋ, ಅದೇನ್ ಮಹಾ, ಮೈ ಫುಟ್’ ಅಂತಲೇ ಮಾತು ಶುರು ಮಾಡ್ತಾ ಇದ್ದ. ಹಾಗಾಗಿ ಖೇಮು ಕಂಡ್ರೆ ಆಫೀಸಿನಲ್ಲಿ ಯಾರಿಗೂ ಇಷ್ಟ ಇರಲಿಲ್ಲ.

ಆದರೆ ಅವನ ಬಾಯಿ ಮುಚ್ಚಿಸೋಕಾಗದೆ ಒಳಗೊಳಗೇ ಬಯ್ಕೊಂಡು ಸುಮ್ನೆ ಇರ್ತಿದ್ರು. ಒಂದು ದಿನ ಆಫೀಸಿನಲ್ಲಿ ಖೇಮು ಸಹೋದ್ಯೋಗಿಯಾಗಿದ್ದ ಸೋಮು ಬೆಳಗ್ಗೆನೇ ಬಂದವನು ಎಲ್ಲರಿಗೂ ‘ಇಲ್ಲಿ ನೋಡಿ’ ಅಂತ ಒಂದು ಗಿಣಿ ತೋರಿಸುತ್ತಿದ್ದ.

ಎಲ್ಲರೂ ‘ಏನು ಈ ಗಿಣಿ ವಿಶೇಷ?’ ಅಂತ ಕೇಳಿದ್ರು. ಅದಕ್ಕೆ ಸೋಮು ‘ಇದು ಡೆಡ್ಲಿ ಗಿಣಿ, ಇದರ ಕರಾಮತ್ತು, ನೀವೇ ನೋಡಿ’ ಅಂತ ಗಿಣಿಯನ್ನ ಟೇಬಲ್ ಮೇಲಿಟ್ಟು ಅದರ ಕಡೆ ನೋಡಿ, ‘ಡೆಡ್ಲಿ ಗಿಣಿ, ಟೇಬಲ್’ ಅಂದ. ಏನಾಶ್ಚರ್ಯ, ಗಿಣಿ ತನ್ನ ಕೊಕ್ಕಿನಿಂದ ಆ ಇಡೀ ಟೇಬಲ್ ಅನ್ನು ಕುಕ್ಕಿ ಕುಕ್ಕಿ ಎರಡೇ ಕ್ಷಣದಲ್ಲಿ ಪುಡಿ ಮಾಡಿಬಿಡ್ತು. ‌

ಎಲ್ಲರೂ ದಂಗು ಬಡಿದು ಹೋದರು. ಆಫೀಸಿನ ಜವಾನ ‘ಡೆಡ್ಲಿ ಗಿಣಿ, ವಿಂಡೋ’ ಅಂದ. ಗಿಣಿ ಒಂದೇ ಕ್ಷಣದಲ್ಲಿ ಇಡೀ ಕಿಟಕಿಯನ್ನು ಕುಕ್ಕಿ ಕುಕ್ಕಿ ಪುಡಿ ಮಾಡಿಬಿಡ್ತು. ಅಷ್ಟರಲ್ಲಿ ಖೇಮು ಆಫೀಸಿಗೆ ಬಂದ. ಎಲ್ಲರೂ ಸುತ್ತುವರಿದು ನಿಂತಿರೋದು ನೋಡಿ, ‘ಏನ್ ನಡೀತಾ ಇದೆ ಇಲ್ಲಿ?’ ಅಂತ ಕೇಳಿದ. ಅದಕ್ಕೆ ಒಬ್ಬ ಎಂಪ್ಲಾಯಿ, ‘ಸರ್, ಇದು ಡೆಡ್ಲಿ ಗಿಣಿ’ ಅಂದ. ಅದನ್ನು ಕೇಳಿದವನೇ ಖೇಮು ಎಂದಿನಂತೆ ಹೇಳಿದ ‘ಡೆಡ್ಲಿ ಗಿಣಿ? ಮೈ ಪುಟ್’.

ಲೈನ್‌ ಮ್ಯಾನ್

ಮತ್ತೆ ಮತ್ತೆ ದೇಶದ್ರೋಹಿ‌ ಕೆಲಸ ಮಾಡಲು ‘ಪ್ರಯತ್ನ’ ಮಾಡುವವನು

- ‘ಟ್ರೈ’ಟರ್

ಕರಾಟೆ ಕಲಿತ ಹುಡುಗಿ

- ಹೊಡೆದಾಡುವಾ ಕಾಮನಬಿಲ್ಲು

ಎಣ್ಣೆ ಹೊಡೆಯುವ ಪಂಜಾಬಿ ಹುಡುಗಿ

- ಪಂಜಾಬಿ ‘ಕುಡಿ’

ದುಬೈನಲ್ಲಿ ಹಾಲು ಮಾರೋನು

- ಮಿಲ್ಕ್ ‘ಶೇಕ್’

ಕ್ರೆಡಿಟ್ ಕಾರ್ಡ್, ಡೆಬಿಟ್‌ ಕಾರ್ಡ್‌ಗಳನ್ನು ಹೆಚ್ಚಾಗಿ ಉಪಯೋಗಿಸುವ ದೇಶ

- ‘ಉಜ್ಬೇ’ಕಿಸ್ತಾನ್

ಟ್ರಾಫಿಕ್ ಅತಿರೇಕ

- ಹಂಪ್ಸ್ ಅಡ್ಡ ಬಂದ್ರೂ‌ ಹಾರ್ನ್ ಮಾಡೋದು

ಸಣ್ಣ ಪುಟ್ಟ ಸಾಲ ಕೊಡುವ ಕೆಲಸ ಮಾಡುವವನ ಮಾತು

- ಕಾಯಕವೇ ಕೈಸಾಲ

ಹಳಸಿದ ಆಹಾರ ತಿಂದು ಗಟ್ಟಿಮುಟ್ಟಾಗಿರುವವನ ಮಾತು

- ‘ಬೂಸ್ಟ್’ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ

ಪ್ರಾಣಿಗಳು‌ ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?

- ಯಾಕಂದ್ರೆ ಅವು ‘ಬಾಲಾ’ಪರಾಧಿಗಳು

ಗಾಂಧಾರಿಗೆ ನೂರು ಮಕ್ಕಳಾದಾಗ ಆಗಿದ್ದು

- ‘ಬಸಿರು’ ಕ್ರಾಂತಿ