Prakash Shesharaghavachar Column: ಹೊಳಪು ಕಳೆದುಕೊಳ್ಳುತ್ತಿರುವ ಕೇಂದ್ರ ಮುಂಗಡ ಪತ್ರ
ತಮಾಷೆಯ ಸಂಗತಿಯೆಂದರೆ, ಬಹುತೇಕರು ಮುಂಗಡ ಪತ್ರವನ್ನು ಪೂರ್ಣವಾಗಿ ಓದುವುದಿಲ್ಲ ಮತ್ತು ಮುಂಗಡ ಪತ್ರದ ಮಂಡಣೆಯಾಗುತ್ತಿದ್ದಂತೆ ಆರ್ಥಿಕ ತಜ್ಞರ ಸಲಹೆಯನ್ನು ಪಡೆಯುವ ಗೋಜಿ ಗೂ ಹೋಗದೆಯೇ ಪ್ರತಿಕ್ರಿಯೆಗಳನ್ನು ನೀಡತೊಡಗುತ್ತಾರೆ. ವಾಸ್ತವವೆಂದರೆ, ಇವರೆಲ್ಲರೂ ರಾಜಕೀಯ ಕಾರಣಗಳಿಗೆ ತಂತಮ್ಮ ಪಕ್ಷದ ನಿಲುವಿಗೆ ಅನುಸಾರವಾಗಿ ಟೀಕಿಸುವವರು ಅಥವಾ ಹಾಡಿ ಹೊಗಳು ವವರೇ! ಇಂಥವರಿಂದ ಪ್ರಬುದ್ಧ ಪ್ರತಿಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವೇ?
![Prakash Shesharaghavachar Column 0702](https://cdn-vishwavani-prod.hindverse.com/media/images/Prakash_Shesharaghavachar_Column_0702.max-1280x720.jpg)
![Profile](https://vishwavani.news/static/img/user.png)
ಪ್ರಕಾಶಪಥ
ಪ್ರಕಾಶ್ ಶೇಷರಾಘಾವಾಚಾರ್
ಸ್ವಾತಂತ್ರ್ಯ ಬಂದು 78 ವರ್ಷದ ತರುವಾಯವೂ, ಕೇಂದ್ರದ ಅಥವಾ ರಾಜ್ಯದ ಮುಂಗಡ ಪತ್ರ ಮಂಡನೆಯಾದಾಗ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರತಿಕ್ರಿಯೆಗಳು ಕೇವಲ ಪರ ಮತ್ತು ವಿರೋ ಧಕ್ಕೆ ಸೀಮಿತವಾಗಿರುತ್ತವೆಯೇ ವಿನಾ, ವಾಸ್ತವಿಕತೆಯ ಆಧಾರದ ಮೇಲೆ ಇರುವುದಿಲ್ಲ. ಈ ಒಂದು ವಿಷಯದಲ್ಲಿ ಈ ಎರಡೂ ಅಸ್ತಿತ್ವಗಳು ತಂತಮ್ಮ ‘ಸಮಾನ ಧೋರಣೆ’ಯನ್ನು ಜೋಪಾನವಾಗಿ ಕಾಪಿಟ್ಟುಕೊಂಡಿವೆ. 2017ರಲ್ಲಿ ಜಿಎಸ್‌ಟಿ ಜಾರಿಯಾದ ನಂತರ ಕೇಂದ್ರ ಬಜೆಟ್ ತನ್ನ ಹೊಳಪು ಕಳೆದುಕೊಂಡಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆಂದು ತೆರಿಗೆ ಮತ್ತು ಕಸ್ಟಮ್ಸ್ ಸುಂಕವನ್ನು ಹೆಚ್ಚಿ ಸುವ ಅಥವಾ ತಗ್ಗಿಸುವ ಅಧಿಕಾರವು ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಇಲ್ಲದಾಗಿದೆ.
ಈಗ ಕೇವಲ ಜಿಎಸ್‌ಟಿ ಕೌನ್ಸಿಲ್‌ಗೆ ಈ ಅಧಿಕಾರವಿರುವುದರಿಂದ, ಮುಂಗಡ ಪತ್ರದಲ್ಲಿ ಜನ ಸಾಮಾನ್ಯರಿಗೆ ಬಿಸಿ ತಗುಲಿಸುವ ಅಂಶಗಳು ಮರೆಯಾಗಿವೆ, ಬಹುತೇಕವಾಗಿ ನೀತಿ-ನಿರೂಪಣೆಗೆ ಅದು ಸೀಮಿತವಾಗಿದೆ. ಹೀಗಾಗಿ ಮುಂಗಡ ಪತ್ರದಲ್ಲಿ ಜನಸಾಮಾನ್ಯರು ಕುತೂಹಲ ಕಳೆದುಕೊಂಡಿ ದ್ದಾರೆ.
ಉತ್ಪಾದನಾ ಘಟಕಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದ ಕೇಂದ್ರ ಅಬಕಾರಿ ಸುಂಕವು ಜಿಎಸ್‌ಟಿ ಯಲ್ಲಿ ವಿಲೀನವಾಗಿದೆ. ಈ ಮೊದಲು ಮುಂಗಡ ಪತ್ರ ಮಂಡಿಸುವ ಹಿಂದಿನ ದಿನದಂದು ಕೇಂದ್ರ ಅಬಕಾರಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೈಗಾರಿಕೆಗಳ ಮೇಲೆ ನಿಗಾ ಇಡಬೇಕಿತ್ತು. ಸಿದ್ಧ ಪಡಿಸಿದ ಯಾವುದೇ ವಸ್ತುಗಳು ಹೊರಹೋಗದಂತೆ ಎಚ್ಚರವಹಿಸಬೇಕಿತ್ತು. ಈ ಪ್ರಕ್ರಿಯೆಗೆ ಜಿಎಸ್ ಟಿಯು ತೆರೆ ಎಳೆದಿರುವ ಕಾರಣ, ಉದ್ದಿಮೆದಾರರು ಬಜೆಟ್ ಕುರಿತು ಹೆಚ್ಚೇನೂ ತಲೆಕೆಡಿಸಿ ಕೊಳ್ಳು ತ್ತಿಲ್ಲ.
ಇದನ್ನೂ ಓದಿ: Prakash Shesharaghavachar Column: ಮನಮೋಹನ್ ಸಿಂಗ್ ನಿಜಕ್ಕೂ ಕಿಂಗ್ ಆಗಿದ್ದರಾ ?
2016ರಲ್ಲಿ ಕೊನೆಯ ಬಾರಿಗೆ ಸಂಸತ್‌ನಲ್ಲಿ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸಲಾಯಿತು. ಆನಂತರ ಅದು ವಿತ್ತ ಸಚಿವರು ಮಂಡಿಸುವ ಮುಂಗಡ ಪತ್ರದ ಭಾಗವಾಗಿಹೋಯಿತು. ಗಂಟೆಗಟ್ಟಲೆ ಓದ ಲಾಗುತ್ತಿದ್ದ ರೈಲ್ವೆ ಬಜೆಟ್ ಇದೀಗ ಮುಂಗಡ ಪತ್ರದಲ್ಲಿ ಒಂದು ಸಾಲಿಗೆ ಇಳಿದಿದೆ. ಮತ ಕೊಟ್ಟ ರಾಜ್ಯಗಳನ್ನು ಮೆಚ್ಚಿಸಲು ರೈಲ್ವೆ ಸಚಿವರು, ಜಾರಿಯೇ ಆಗದ ನೂರಾರು ಯೋಜನೆಗಳನ್ನು ಘೋಷಿಸುತ್ತಿದ್ದರು. ಈ ಕೆಟ್ಟ ಪದ್ಧತಿಗೆ ಮೋದಿಯವರು ಇತಿಶ್ರೀ ಹಾಡಿದ್ದಲ್ಲದೆ, ಲೋಕಸಭಾ ಸದಸ್ಯರು ತಮ್ಮ ಕ್ಷೇತ್ರದ ಮತದಾರರಿಗೆ ಕಾಳಜಿ ತೋರ್ಪಡಿಸಲು ಸದನದೊಳಗೆ ಮಾಡುತ್ತಿದ್ದ ನಾಟಕಗಳಿಗೂ ತೆರೆಯೆಳೆದರು.
ಬೆಲೆಯೇರಿಕೆಗೆ ಮುಂಗಡ ಪತ್ರವನ್ನು ಕಾಯುವ ಪದ್ಧತಿಯು ಕಡ್ಡಾಯವಾಗಿರಲಿಲ್ಲ. ಜಿಎಸ್‌ಟಿ ಬರುವ ಮುನ್ನ, ಮುಂಗಡ ಪತ್ರ ಮಂಡನೆಯ ಕೆಲವು ದಿನಗಳ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವುದು ಸಾಮಾನ್ಯವಾಗಿತ್ತು. ಮುಂಗಡ ಪತ್ರದ ವಿರುದ್ಧದ ನಕಾರಾ ತ್ಮಕ ಟೀಕೆಯನ್ನು ತಡೆಯಲು ಈ ತಂತ್ರವನ್ನು ಹೂಡಲಾಗುತ್ತಿತ್ತು.
ಹಾಗೆಯೇ, ಲಕ್ಷಾಂತರ ಕೋಟಿ ರು. ವೆಚ್ಚದ ಯೋಜನೆಗಳು ಮುಂಗಡ ಪತ್ರದ ಹೊರಗಡೆ ಘೋಷಣೆ ಯಾಗುವುದು ಅನೇಕ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯವಾಗಿದೆ. 2024ರಲ್ಲಿ ಮಹಾ ರಾಷ್ಟ್ರದ ವಾದ್ವಾನ್‌ನಲ್ಲಿ 76000 ಕೋಟಿ ರು. ಮೊತ್ತದ ಬಂದರು ಯೋಜನೆ ಘೋಷಣೆಯಾದರೆ, 2025ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣ ಉಕ್ಕು ಕಾರ್ಖಾನೆಯ ಪುನಃಶ್ಚೇತನಕ್ಕೆ 11000 ಕೋಟಿ ರು. ಮೊತ್ತದ ಯೋಜನೆ ಘೋಷಣೆಯಾಯಿತು.
2014ರಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ 70000 ಕೋಟಿ ರು. ವೆಚ್ಚದ ಸ್ವಚ್ಛಭಾರತ ಯೋಜನೆ ಯು ಘೋಷಿಸಲ್ಪಟ್ಟಿತು. 2019ರ ಆಗಸ್ಟ್ 15ರಂದು, ಪ್ರಧಾನಿ ಮೋದಿಯವರು ತಮ್ಮ ‘ಕೆಂಪುಕೋಟೆ ಭಾಷಣ’ದಲ್ಲಿ 3 ಲಕ್ಷ ಕೋಟಿ ರು. ವೆಚ್ಚದ ಜಲಜೀವನ್ ಮಿಷನ್ ಯೋಜನೆಯ ಜಾರಿಯನ್ನು ಘೋಷಿಸಿದ್ದರು.
2018ರಲ್ಲಿ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಾರಂಭಿಸಲಾಯಿತು. ಬಡತನ ರೇಖೆಯ ಕೆಳಗಿರುವ ನಾಗರಿಕರಿಗೆ 5 ಲಕ್ಷ ರು. ಆರೋಗ್ಯ ವಿಮೆ ನೀಡುವ ಈ ಮಹತ್ವಪೂರ್ಣ 70 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರನ್ನು 2025ರಲ್ಲಿ ಈ ಯೋಜನೆಯಲ್ಲಿ ಸೇರ್ಪಡೆ ಮಾಡುವ ನಿರ್ಧಾರ ವನ್ನು 2024ರ ಸೆಪ್ಟೆಂಬರ್‌ನಲ್ಲಿ ಕೈಗೊಳ್ಳಲಾಯಿತು.
2014ರ ತರುವಾಯದ ಮತ್ತೊಂದು ಮಹತ್ತರ ಬದಲಾವಣೆಯೆಂದರೆ, ಕೇಂದ್ರ ಸರಕಾರವು ವ್ಯಾಪಾ ರದ ಚಟುವಟಿಕೆಯಿಂದ ವಿಮುಖವಾಗಿರುವುದು. ಹೀಗಾಗಿ ಕೇಂದ್ರ ಸರಕಾರಿ ಸ್ವಾಮ್ಯದ ಹೊಸ ಉದ್ದಿಮೆಗಳ ಸ್ಥಾಪನೆ ಇಲ್ಲವಾಗಿದೆ. ಕೇವಲ ರಕ್ಷಣಾ ಇಲಾಖೆಯ ಅಗತ್ಯಗಳನ್ನು ಪೂರೈಸು ವಂಥ ಕಾರ್ಖಾನೆಗಳಿಗಷ್ಟೇ ಸರಕಾರ ಗಮನ ಕೊಡುತ್ತಿದೆ.
2025ರ ಮುಂಗಡ ಪತ್ರವು ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಭಾರಿ ರಿಯಾಯಿತಿ ಯನ್ನು ನೀಡಿದೆ. ವೇತನದಾರರು ಬಹಳ ದಿನಗಳಿಂದಲೂ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಆಗ್ರಹಿಸುತ್ತಿದ್ದರು. ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ವಿತ್ತ ಸಚಿವೆ, ಮುಂಗಡ ಪತ್ರದ ಭಾಷಣದ ಕೊನೆಯಲ್ಲಿ ವೇತನದಾರರ 12 ಲಕ್ಷ ರು.ವರೆಗಿನ ವಾರ್ಷಿಕ ಆದಾಯಕ್ಕೆ ವಿಶೇಷವಾಗಿ ತೆರಿಗೆಯಿಂದ ವಿನಾಯಿತಿಯನ್ನು ಘೋಷಿಸಿದರು.
ಸ್ಟಾಂಡರ್ಡ್ ಡಿಡಕ್ಷನ್ ಫಲವಾಗಿ ಹೆಚ್ಚುವರಿ 75000 ರು. ಸೇರಿ 12 ಲಕ್ಷ 75 ಸಾವಿರ ರುಪಾಯಿ ವರೆಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಇದಲ್ಲದೆ ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲೂ ಬದಲಾವಣೆ ತಂದು ಲಾಭ ಪಡೆಯುವಂತೆ ಮಾಡಿದ್ದಾರೆ. ‘ತೆರಿಗೆ ಭಾರ ಇಳಿಯುವುದಾ?’ ಎಂದು ಪದೇಪದೆ ಕೇಳುತ್ತಿದ್ದವರಿಗೆ ಭಾರಿ ರಿಯಾಯಿತಿ ನೀಡಿ ಚಕಿತಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿತ್ತ ಸಚಿವೆಯನ್ನು ಎಗ್ಗಿಲ್ಲದಂತೆ ಟ್ರೋಲ್ ಮಾಡುತ್ತಿದ್ದವರ ಬಾಯಿಗೆ ಈಗ ಬೀಗ ಬಿದ್ದಿದೆ. ಆದಾಯ ತೆರಿಗೆ ವಿನಾಯಿತಿ ಹೊರತುಪಡಿಸಿದರೆ ಕೃಷಿಗೆ ಸಂಬಂಧಿ ಸಿದ 6 ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಅನ್ನದಾತರಿಗೆ ರಿಯಾಯಿತಿ ಬಡ್ಡಿ ದರದಲ್ಲಿನ ಸಾಲವು 5 ಲಕ್ಷ ರುಪಾಯಿಗಳಿಗೆ ಹೆಚ್ಚಳವಾಗಿದೆ. 100 ಹಿಂದುಳಿದ ಜಿಲ್ಲೆಗಳಲ್ಲಿ ‘ಧನ ಧಾನ್ಯ ಕೃಷಿ ಯೋಜನೆ’ ಜಾರಿಗೆ ಬರಲಿದ್ದು, ಇದರಿಂದ 1.7 ಕೋಟಿ ರೈತರಿಗೆ ಲಾಭವಾಗಲಿದೆ. ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಂಗಡ ಪತ್ರಕ್ಕೆ ಮುನ್ನವೇ ಹೊಸದಾಗಿ 2.5 ಲಕ್ಷ ಮನೆಗಳನ್ನು ನಿರ್ಮಿ ಸಲು ಕರ್ನಾಟಕಕ್ಕೆ ಅನುಮೋದಿಸಿದ್ದರು.
ವ್ಯವಹಾರದ ನಿಬಂಧನೆಗಳನ್ನು ಸರಳೀಕರಿಸುವ (Ease of Doing Business) ನೀತಿಯನ್ನು ಮೋದಿ ಸರಕಾರವು ಅನುಸರಿಸುತ್ತಿರುವುದರಿಂದ, ಈ ಬಾರಿಯ ಮುಂಗಡ ಪತ್ರದಲ್ಲಿ ಆಮದು ಶುಲ್ಕ ರಿಯಾ ಯಿತಿ ಪಡೆದ ಪಟ್ಟಿಯೇ ಉದ್ದವಿದ್ದರೆ ಶುಲ್ಕ ಹೆಚ್ಚಳವಾಗಿರುವುದು ನಗಣ್ಯವಾಗಿದೆ.
ತಮಾಷೆಯ ಸಂಗತಿಯೆಂದರೆ, ಬಹುತೇಕರು ಮುಂಗಡ ಪತ್ರವನ್ನು ಪೂರ್ಣವಾಗಿ ಓದುವುದಿಲ್ಲ ಮತ್ತು ಮುಂಗಡ ಪತ್ರದ ಮಂಡಣೆಯಾಗುತ್ತಿದ್ದಂತೆ ಆರ್ಥಿಕ ತಜ್ಞರ ಸಲಹೆಯನ್ನು ಪಡೆಯುವ ಗೋಜಿಗೂ ಹೋಗದೆಯೇ ಪ್ರತಿಕ್ರಿಯೆಗಳನ್ನು ನೀಡತೊಡಗುತ್ತಾರೆ. ವಾಸ್ತವವೆಂದರೆ, ಇವರೆಲ್ಲರೂ ರಾಜಕೀಯ ಕಾರಣಗಳಿಗೆ ತಂತಮ್ಮ ಪಕ್ಷದ ನಿಲುವಿಗೆ ಅನುಸಾರವಾಗಿ ಟೀಕಿಸುವವರು ಅಥವಾ ಹಾಡಿ ಹೊಗಳುವವರೇ! ಇಂಥವರಿಂದ ಪ್ರಬುದ್ಧ ಪ್ರತಿಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ!
ಮುಂಗಡ ಪತ್ರದ ಪ್ರತಿಯೊಂದು ಘೋಷಣೆಯೂ ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಆದರೆ ತಮ್ಮದೇ ಆದ ಕಾರ್ಯಸೂಚಿಯನ್ನು ಹೊಂದಿರುವ ವ್ಯಕ್ತಿಗಳು ಅದಕ್ಕೆ ಪ್ರಾದೇಶಿಕತೆಯ ಬಣ್ಣ ಬಳಿಯುವುದು, ಜಾತಿಯ ಲೇಪ ನೀಡುವುದು, ವೃತ್ತಿ ಸಂಬಂಧಿತ ಆಯಾಮವನ್ನು ನೀಡಿ ಸಮಾಜ ವನ್ನು ಒಡೆಯಲು ಯತ್ನಿಸುವುದು ಹೊಸ ಬೆಳವಣಿಗೆ ಎನ್ನಲಡ್ಡಿಯಿಲ್ಲ. ಅಷ್ಟೇಕೆ, ಭಾರತ ವೊಂದರಲ್ಲೇ ಮುಂಗಡ ಪತ್ರವು ಪರಸ್ಪರ ಕೆಸರೆರಚಾಟಕ್ಕೆ ಮತ್ತು ರಾಜಕೀಯ ಮೇಲಾಟಕ್ಕೆ ಅಸ್ತ್ರ ವಾಗಿರುವುದು.
ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ‘ಆರ್ಥಿಕ ತಜ್ಞ’ರ ಹಾರಾಟ ಮೇರೆಮೀರಿದೆ. ಇಲ್ಲಿನ ಟೀಕೆ ಗಳಲ್ಲಿ ಕಾಣಬರುವ ಭಾಷೆಯು ಮರ್ಯಾದೆಯ ಸೀಮೆಯನ್ನು ಮೀರಿರುವುದು ನೋವಿನ ಸಂಗತಿ. ಬಜೆಟ್ ಅನ್ನು ವಿರೋಧಿಸಿ ಖಾರವಾದ ಪ್ರತಿಕ್ರಿಯೆ ನೀಡುವ ಮತ್ತು ಬೀದಿಗಿಳಿದು ಹೋರಾಟ ನಡೆಸುವ ಪರಿಪಾಠ ಈ ಹಿಂದೆಯೂ ಇತ್ತು; ಆದರೆ ಅದೆಂದೂ ದೇಶ-ವಿರೋಧಿ ತಿರುವು ಪಡೆಯು ವುದಾಗಲೀ ಅಥವಾ ಸಮಾಜವನ್ನು ಒಡೆಯುವ ಹುನ್ನಾರಕ್ಕೆ ದುರ್ಬಳಕೆಯಾಗುವು ದಾಗಲೀ ಕಾಣಬರುತ್ತಿರಲಿಲ್ಲ.
‘ಈ ಬಾರಿಯ ಬಜೆಟ್‌ನಲ್ಲಿ ನಮ್ಮ ರಾಜ್ಯದ ಹೆಸರನ್ನೇ ಹೇಳಿಲ್ಲ’ ಎಂಬುದಾಗಿ ತೆಲಂಗಾಣ ಮುಖ್ಯ ಮಂತ್ರಿಯವರು ನೋವು ತೋಡಿಕೊಂಡರೆ, ಕೇರಳದ ಮುಖ್ಯಮಂತ್ರಿಗಳು ಅದಕ್ಕೆ ದನಿಗೂಡಿಸು ತ್ತಾರೆ. ಕರ್ನಾಟಕ ಸರಕಾರವು ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯದ ಹಲವು ಯೋಜನೆಗಳಿಗೆ 165000 ಕೋಟಿ ರು. ಅನುದಾನ ನೀಡಬೇಕು ಎಂಬುದಾಗಿ ಕೇಂದ್ರ ಸರಕಾರಕ್ಕೆ ಮನವಿ ಪತ್ರವನ್ನು ನೀಡಿತ್ತು. ಒಟ್ಟು 55 ಬಾರಿ ಕೇಂದ್ರ ಮುಂಗಡ ಪತ್ರ ಮಂಡಿಸಿರುವ ಪಕ್ಷಕ್ಕೆ ‘ಇದು ಕಾರ್ಯಸಾಧ್ಯ ವಲ್ಲ’ ಎಂಬುದು ಚೆನ್ನಾಗಿ ತಿಳಿದಿದ್ದರೂ, ಕೇವಲ ರಾಜಕೀಯದ ಮೇಲಾಟಕ್ಕಾಗಿ ಇಂಥದೊಂದು ಮನವಿಯ ಸಲ್ಲಿಕೆಯಾಗಿತ್ತು.
ಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲೂ ಬಜೆಟ್ ಕುರಿತಾದ ಚರ್ಚೆ ಹಾಗೂ ವಿಶ್ಲೇಷಣೆಗಳು ಪ್ರಾಮು ಖ್ಯವನ್ನು ಕಳೆದುಕೊಳ್ಳುತ್ತಿವೆ. ಬಜೆಟ್ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಿಜೆಪಿಯ ಆರ್ಥಿಕ ಸೆಲ್‌ನ ವಿಶ್ವನಾಥ್ ಭಟ್ ರವರು, “ಮೊದಲು ಒಂದು ದಿನ ಮುಂಚಿತವಾಗಿ ತಜ್ಞರೊಂದಿಗೆ ಸಂವಾದ ಮತ್ತು ಚರ್ಚೆ ನಡೆಯುತ್ತಿದ್ದವು. ಆದರೆ ಬಜೆಟ್ ಚರ್ಚೆಯ ಬಗೆಗಿನ ಜನರ ಆಸಕ್ತಿ ಕಡಿಮೆಯಾಗಿ, ಕೇವಲ ಬೆಳಗ್ಗೆಯ ಅವಧಿಗೆ ಟಿವಿ ಚರ್ಚೆಗಳು ಸೀಮಿತವಾಗಿವೆ.
ಇದಲ್ಲದೆ ಬಜೆಟ್ ಮಂಡನೆಯು ಔಪಚಾರಿಕವಾಗಿರುವ ಕಾರಣ ತನ್ನ ರೋಚಕತೆಯನ್ನು ಕಳೆದು ಕೊಂಡು, ಕುಸಿದಿರುವ ಮಹತ್ವವನ್ನಷ್ಟೇ ಬಿಂಬಿಸುತ್ತಿದೆ" ಎನ್ನುತ್ತಾರೆ. ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ ಮಾಡಿದ 2 ಗಂಟೆ 40 ನಿಮಿಷ ಅವಧಿಯ ಬಜೆಟ್ ಭಾಷಣವು ಕಳೆದ 78 ವರ್ಷ ಗಳಲ್ಲಿ ಅತಿ ದೀರ್ಘವಾದುದಾಗಿತ್ತು; ಭಾಷಣದ ವೇಳೆ ವಿತ್ತ ಸಚಿವೆಗೆ ತೀವ್ರ ಬಳಲಿಕೆಯಾಗಿ ಪೂರ್ತಿ ಓದಲಾಗದೆ ಕುಸಿದು ಕುಳಿತರು.
ಆದರೆ ಅವರು 2025ರ ಬಜೆಟ್ ಭಾಷಣವನ್ನು ಕೇವಲ 75 ನಿಮಿಷಗಳಲ್ಲಿ ಮುಗಿಸಿದರು. ಬಜೆಟ್ ಮಂಡನೆಯು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಈ ಬೆಳವಣಿಗೆ ದಿಕ್ಸೂಚಿಯಾ? ಎಂಬ ಅನುಮಾನ ವ್ಯಕ್ತವಾಗುತ್ತದೆ. ಸಂವಿಧಾನಾತ್ಮಕವಾಗಿ, ವಾರ್ಷಿಕ ಬಜೆಟ್ ಮಂಡನೆ ಈಗ ಕೇವಲ ಔಪಚಾರಿಕವಾಗುತ್ತಿದೆ. ವಾರ್ಷಿಕ ಆದಾಯ ವೆಚ್ಚದ ವಿವರಗಳನ್ನು ದೇಶದ ಮುಂದಿಡುವ ಬಜೆಟ್ ಪ್ರಕ್ರಿಯೆ ಮತ್ತಷ್ಟು ಸರಳವಾಗಬೇಕಿದೆ ಮತ್ತು ಅದರ ಸುತ್ತ ನಡೆಯುವ ಪರ-ವಿರೋಧದ ರಾಜಕೀಯ ವೈಭವೀಕರಣ ತಗ್ಗಬೇಕಾಗಿದೆ.
50 ಲಕ್ಷ ಕೋಟಿ ರು. ಗಾತ್ರದ ದೇಶದ ಮುಂಗಡ ಪತ್ರವನ್ನು, ವರ್ಷದ ಆದಾಯ ಮತ್ತು ವೆಚ್ಚದ ವಿವರ ನೀಡುವುದಕ್ಕೆ ಹಾಗೂ ನೀತಿ ನಿರೂಪಣೆಗೆ ಸೀಮಿತಗೊಳಿಸಬೇಕಾದ ಸಮಯ ಬಂದಿದೆ.(ಲೇಖಕರು ಬಿಜೆಪಿಯ ವಕ್ತಾರರು)