Dr Jagadeesh Maane Column: ದರ್ಪಕ್ಕೆ ದಂಡನೆ: ನ್ಯಾಯದ ಜ್ಯೋತಿಯಲ್ಲಿ ಬೆಳಗಿದ ತೀರ್ಪು
ಸ್ಟೇಷನ್ ಒಳಗಿನ ಪೀಠೋಪಕರಣಗಳಾದ ಟೇಬಲ್ ಮತ್ತು ಲಾಠಿಗಳ ಮೇಲೆ ಮೃತ ವ್ಯಕ್ತಿಗಳ ಸಾಕಷ್ಟು ರಕ್ತದ ಗುರುತುಗಳಿದ್ದವು. ಘಟನೆ ನಡೆದ ಸಂದರ್ಭದಲ್ಲಿ ಸಿ.ಸಿ ಟಿವಿ ವಿಡಿಯೋಗಳ ಎಲ್ಲಾ ಪುಟೇಜ್ ಗಳನ್ನು ಬೇಕಂತಲೇ ಅಳಿಸಿ ಹಾಕಿರುವ ಮಾಹಿತಿ ಕೂಡಾ ತಿಳಿಯುತ್ತದೆ. ಹೀಗೆ ಸತತ ಐದು ವರ್ಷಗಳ ವರೆಗೆ ಈ ಪ್ರಕರಣದ ತನಿಖೆ ನಡೆಸಿದ ಸಿ.ಬಿ.ಐ ಒಟ್ಟು 105 ಜನ ಸಾಕ್ಷಿಗಳನ್ನು ವಿಚಾರಿಸಿತ್ತು.
-
ವಿಚಾರ ಮಂಥನ
ಡಾ.ಜಗದೀಶ್ ಮಾನೆ
ಇವತ್ತು ನ್ಯಾಯ ಎಂಬುದು ಶ್ರೀಮಂತರು, ಅಧಿಕಾರ ಉಳ್ಳವರು ತಮ್ಮ ಹಣಬಲ ತೋಳ್ಬಲದ ಮೂಲಕ ಖರೀದಿ ಮಾಡುತ್ತಾರೆ ಎನ್ನುವ ಭಯ ಬಹುತೇಕ ಜನರಲ್ಲಿದೆ. ಒಮ್ಮೊಮ್ಮೆ ಈ ನೆಲದಲ್ಲಿ ಕಾನೂನು ಇನ್ನೂ ಜೀವಂತವಾಗಿ ಉಳಿದಿದೆ ಮತ್ತು ಬಡವರಿಗೂ ನ್ಯಾಯ ಸಿಗುತ್ತದೆ ಅಂತ ಅನಿಸುವುದು ಈ ರೀತಿಯ ತೀರ್ಪುಗಳು ಬಂದಾಗ ಮಾತ್ರ.
ಅದೇ ರೀತಿ ಮೊನ್ನೆಯ ಎ.6ರಂದು ತಮಿಳುನಾಡಿನ ನ್ಯಾಯಾಲಯವು 9 ಜನ ಪೊಲೀಸ್ ಅಧಿಕಾರಿ ಗಳಿಗೆ ಗಲ್ಲು ಶಿಕ್ಷೆಯ ತೀರ್ಪನ್ನು ಘೋಷಿಸಿದೆ. ಕಾನೂನಿನ ಪಾಲಕರು ನಾವು, ನಾವೇ ಕಾನೂನು ಎನ್ನುವ ದರ್ಪದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಪೊಲೀಸ್ ಅಧಿಕಾರಿಗಳ ಎದೆಯಲ್ಲೀಗ ನಡುಕು ಹುಟ್ಟಿದೆ.
ಇದೀಗ ಕಾಲ ಬಹಳ ಬದಲಾಗಿದೆ. ಮೊದಲಿನಂತೆ ಏನೂ ಕಲಿಯದ ಅನಕ್ಷರಸ್ಥ ಪೊಲೀಸ್ ಜಮಾನ ಈಗಿಲ್ಲ. ಕೆಳವರ್ಗದ ನೌಕರರಾದ ಪೊಲೀಸರಲ್ಲೂ ಬಿ.ಎ, ಎಂ.ಎ ಹಾಗೂ ಇಂಜಿನಿಯರಿಂಗ್ ನಂತಹ ಮುಂತಾದ ಪದವಿಗಳನ್ನು ಪಡೆದವರೇ ಹೆಚ್ಚಾಗಿ ಪೋಲಿಸ್ ಕಾನ್ಸ್ಟೇಬಲ್ ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಮೇಲಾಗಿ ಇಂತಹ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ಸ್ವಲ್ಪ ಯಾಮಾರಿದರೂ ವೈರಲ್ ಆಗುವ ಭಯ ಪೋಲೀಸರಲ್ಲಿದೆ. ಮತ್ತು ತಾವುಗಳು ತೀರಾ ಹಾದಿ ತಪ್ಪಿದರೆ ತಮ್ಮ ಕೆಲಸವೂ ಹೋಗುತ್ತದೆ ಎಂಬ ಭಯದಲ್ಲಿ ಇತ್ತೀಚಿಗೆ ಅದೆಷ್ಟೋ ಅಧಿಕಾರಿಗಳು ಬದಲಾಗಿದ್ದಾರೆ. ಹಾಗೇ ಬದಲಾಗದವರೂ ಇದ್ದಾರೆ.
ಇದನ್ನೂ ಓದಿ: Dr Jagadeesh Maane Column: ಸುಳ್ಳು ಪ್ರಪೊಗಾಂಡ ಚಿತ್ರಗಳ ಮಧ್ಯೆ ಧುರಂಧರನ ಪ್ರತಿಬಿಂಬ
ಪ್ರಕರಣ: ಅದು 2020ರ ಸಮಯ, ಆ ದಿನ ಇಡೀ ದೇಶವೇ ಚೀನಾ ವೈರಾಣುವಿನ ಕಪಿಮುಷ್ಠಿಯಲ್ಲಿ ಬಳಲಿ ಒದ್ದಾಡುತ್ತಿತ್ತು. ಬಳಿಕ ಲಾಕಡೌನ್ ಮುಗಿದು ಎಲ್ಲರಿಗೂ ಅಲ್ಪ ಸ್ವಲ್ಪ ರಿಲೀಫ್ ಕೂಡಾ ಸಿಕ್ಕಿತ್ತು. ಆದ್ದರಿಂದ ದೇಶದ ನಾನಾ ಕಡೆಗಳಲ್ಲಿ ಒಂದಿಷ್ಟು ಸಮಯದ ನಿಯಮಗಳನ್ನು ವಿಧಿಸುವ ಮೂಲಕ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.
ಅದರಂತೆ ತಮಿಳುನಾಡಿನ ಸಾತಂಕುಲಂ ಎಂಬ ನಗರದಲ್ಲಿ ತಂದೆ ಜೈರಾಜ್ ಮತ್ತು ಮಗ ಬೆನಿಕ್ ಒಂದು ಸಣ್ಣ ಮೊಬೈಲ್ ಶಾಪ್ ಇಟ್ಟುಕೊಂಡಿದ್ದರು. ಅವರ ಬದುಕಿಗೆ ಆ ಮೊಬೈಲ್ ಅಂಗಡಿಯೇ ಆಸರೆಯಾಗಿತ್ತು.
ಹೀಗಿರುವಾಗ 2020ರ ಜೂ.19ರ ಸಂಜೆಯ ಸಮಯದ ಹೊತ್ತಲ್ಲಿ ಅವರ ಮೊಬೈಲ್ ಅಂಗಡಿ ಮುಂದೆ ಪೊಲೀಸರ ತಂಡವೊಂದು ಬರುತ್ತದೆ. ನಿಯಮ ಮೀರಿ ಹೆಚ್ಚು ಸಮಯ ಅಂಗಡಿ ತೆರೆದ ಕಾರಣಕ್ಕಾಗಿ ಆ ಅಂಗಡಿಯ ಮಾಲಿಕ ಬೆನಿಕ್ ನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯುತ್ತಾರೆ. ಬಳಿಕ ಠಾಣೆಗೆ ಆಗಮಿಸಿದ ತಂದೆ ಜೈರಾಜ್ ‘ಯಾಕೆ ಹೀಗೆ ಮಾಡಿರಿ ಸರ್? ನನ್ನ ಮಗನನ್ನು ಬಿಟ್ಟು ಬಿಡಿ’ ಹೀಗಂತ ಪೊಲೀಸರಿಗೆ ಮನವಿ ಮಾಡುತ್ತಾರೆ.
ಆಗ ಮಾತಿಗೆ ಮಾತು ಬೆಳೆಯುತ್ತದೆ. ಮತ್ತಷ್ಟು ರೊಚ್ಚಿಗೆದ್ದ ಪೋಲಿಸರು ಜೈರಾಜ್‌ರನ್ನೂ ಲಾಕಪ್ಪಿಗೆ ತಳ್ಳುತ್ತಾರೆ. ಆದರೆ ಪೊಲೀಸರಿಗೆ ಅದ್ಯಾವ ಕಾರಣಕ್ಕೆ ಇವರಿಬ್ಬರ ಮೇಲೆ ಅಷ್ಟೊಂದು ದ್ವೇಷವಿತ್ತೋ ದೇವರೆ ಬಲ್ಲ! ಬಳಿಕ ಮನುಷ್ಯತ್ವವನ್ನೇ ಮರೆತ ಪೊಲೀಸರು ಮೃಗಗಳಂತೆ ವರ್ತಿಸುತ್ತಾ ತಂದೆ-ಮಗ ಇಬ್ಬರಿಗೂ ಪ್ರಜ್ಞೆ ತಪ್ಪಿ ಬೀಳುವಷ್ಟರ ಮಟ್ಟಿಗೆ ಹೊಡೆಯುತ್ತಾರೆ.
ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆ ಇಬ್ಬರನ್ನೂ ಪಕ್ಕದಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲಿ ಸುತ್ತಾರೆ. ಆದರೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆ ಯ ಸಾವನ್ನಪ್ಪುತ್ತಾರೆ. ಇದರಿಂದ ರೊಚ್ಚಿಗೆದ್ದ ಕುಟುಂಬದ ಸದಸ್ಯರು ಕಾನೂನಿನ ಮೊರೆ ಹೋಗು ತ್ತಾರೆ. ಆ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಅನೇಕ ವಾದ ವಿವಾದಗಳು ನಡೆದ ನಂತರ ಈ ಕೇಸನ್ನು ಸಿ.ಬಿ.ಐ ತನಿಖೆ ಮಾಡುವಂತೆ ನ್ಯಾಯಾಲಯವು ಆದೇಶಿಸುತ್ತದೆ.
ಬಳಿಕ ಪೊಲೀಸರ ಆ ಗುಂಡಾ ವರ್ತನೆಯ ವಿರುದ್ಧ ಹಲವಾರು ಸಂಘಟನೆಗಳು, ಸಂಸ್ಥೆಗಳು ಸಿಡಿದೆದ್ದು ಹೋರಾಟದ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುತ್ತವೆ. ಆ ಘಟನೆಯು ಇಡೀ ತಮಿಳುನಾಡಿನ ಪೊಲೀಸರ ಬಗ್ಗೆ ಇಡೀ ದೇಶಾದ್ಯಂತ ಬಹಳಷ್ಟು ಅಸಹ್ಯದ ಭಾವನೆ ಉಂಟಾಗುವಂತೆ ಮಾಡುತ್ತದೆ.
ಆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಒಟ್ಟು ಹತ್ತು ಜನ ಪೊಲೀಸರ ಪೈಕಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ‘ಪಾಲ್ ದೊರೈ’ ಎಂಬುವವರು ಚೀನಿ ವೈರಾಣುವಿನ ಕಾರಣದಿಂದ ಸಾವನ್ನಪ್ಪಿದರು. ಬಳಿಕ ಆ 9 ಜನ ಪೊಲೀಸ್ ಆರೋಪಿಗಳ ವಿರುದ್ಧ ಸುದೀರ್ಘವಾದ ತನಿಖೆಯನ್ನು ನಡೆಸಿದ ಸಿ.ಬಿ.ಐ ಅಧಿಕಾರಿಗಳ ತಂಡವು ಸಾಕಷ್ಟು ವಿಷಯಗಳ ಕುರಿತು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತದೆ.
ಸ್ಟೇಷನ್ ಒಳಗಿನ ಪೀಠೋಪಕರಣಗಳಾದ ಟೇಬಲ್ ಮತ್ತು ಲಾಠಿಗಳ ಮೇಲೆ ಮೃತ ವ್ಯಕ್ತಿಗಳ ಸಾಕಷ್ಟು ರಕ್ತದ ಗುರುತುಗಳಿದ್ದವು. ಘಟನೆ ನಡೆದ ಸಂದರ್ಭದಲ್ಲಿ ಸಿ.ಸಿ ಟಿವಿ ವಿಡಿಯೋಗಳ ಎಲ್ಲಾ ಪುಟೇಜ್ ಗಳನ್ನು ಬೇಕಂತಲೇ ಅಳಿಸಿ ಹಾಕಿರುವ ಮಾಹಿತಿ ಕೂಡಾ ತಿಳಿಯುತ್ತದೆ. ಹೀಗೆ ಸತತ ಐದು ವರ್ಷಗಳವರೆಗೆ ಈ ಪ್ರಕರಣದ ತನಿಖೆ ನಡೆಸಿದ ಸಿ.ಬಿ.ಐ ಒಟ್ಟು 105 ಜನ ಸಾಕ್ಷಿಗಳನ್ನು ವಿಚಾರಿಸಿತ್ತು.
ಬಳಿಕ ಮೃತ ವ್ಯಕ್ತಿಗಳ ಮೈಮೇಲೆ ಬಿದ್ದ ಹೊಡೆತಗಳೇ ಅವರ ಸಾವಿಗೆ ಕಾರಣ ಎನ್ನುವ ಶವ ಪರೀಕ್ಷೆಯ ವರದಿಯಿಂದಲೂ ಸಾಬೀತಾಗುತ್ತದೆ. ಮೇಲಾಗಿ ವೈದ್ಯಕೀಯ ವಿಧಿ ವಿಜ್ಞಾನಗಳ ಎಲ್ಲಾ ವರದಿಗಳು ಕೂಡಾ ಆ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಸಾಕ್ಷಿ ಹೇಳುತ್ತಿದ್ದವು. ಕೊನೆಗೆ ಈ ಎಲ್ಲಾ ಸಾಕ್ಷ್ಯಾಧಾರಗಳ ಸಾವಿರಕ್ಕೂ ಹೆಚ್ಚು ಪುಟಗಳುಳ್ಳ ಚಾರ್ಜ್ ಶೀಟ್ ಗಳನ್ನು ಸಿ.ಬಿ.ಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುತ್ತದೆ.
ಬಡ ಕುಟುಂಬಕ್ಕೆ ಆಧಾರವಾಗಿದ್ದ ಆ ಎರಡು ಜೀವಗಳನ್ನು ಬಲಿ ಪಡೆಯುವ ಮೂಲಕ ಆ ಕುಟುಂಬದ ಆಧಾರವನ್ನೇ ಪೊಲೀಸರು ಕಿತ್ತುಕೊಂಡಿರುವ ಅಂಶವನ್ನು ನ್ಯಾಯಾಲಯ ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಕಾರಣ ಜೈರಾಜರ ಪತ್ನಿ ‘ಶೆಲ್ವರಾಣಿ’ ಅವರು ನ್ಯಾಯಾಲಯದಲ್ಲಿ ‘ನನ್ನ ಗಂಡ ಹಾಗೂ ಮಗ ಇಬ್ಬರೂ ಯಾವುದೇ ತಪ್ಪುಗಳನ್ನು ಮಾಡಿರಲಿಲ್ಲ ಮತ್ತು ಅವರ ಮೇಲೆ ಈ ಹಿಂದೆ ಕೂಡಾ ಯಾವುದೇ ಕೇಸುಗಳು ದಾಖಲಾಗಿರಲಿಲ್ಲ. ಮೇಲಾಗಿ ಅವರ ಮೇಲೆ ಯಾವುದೇ ಅಪರಾಧದ ಹಿನ್ನೆಲೆಯೂ ಇರಲಿಲ್ಲ.
ಹೀಗಿರುವಾಗ ಅವರಿಬ್ಬರನ್ನು ಅಮಾನವೀಯವಾಗಿ ಹೊಡೆದು ಕೊಲ್ಲಲಾಗಿದೆ’ ಹೀಗಂತ ನ್ಯಾಯಾ ಧೀಶರ ಮುಂದೆ ಕಣ್ಣೀರು ಸುರಿಸುತ್ತಾ ಗೋಗರೆಯುತ್ತಿದ್ದರೆ, ಆ ಒಂದು ಕ್ಷಣ ಇಡೀ ನ್ಯಾಯಾಲಯ ವೇ ಪಿನ್‌ಡ್ರಾಪ್ ಸೈಲೆನ್ಸ್ ಆಗಿತ್ತು. ಜೊತೆಗೆ ಆ ಎಲ್ಲಾ ಸಾಕ್ಷಿ ಆಧಾರಗಳು ಆ ಸಾವಿಗೆ ಪೊಲೀಸರೇ ಹೊಣೆಗಾರರೆಂದು ಕೂಗಿ ಹೇಳುತ್ತಿದ್ದವು.
ನ್ಯಾಯಾಲಯ ಆ ಎಲ್ಲಾ ಸಾಕ್ಷಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಪೊಲೀಸರಿಗೂ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಾಗಲಿಲ್ಲ. ಇವರಿಗೂ ಕುಟುಂಬಗಳಿವೆ, ಈ ಅಂಶಗಳನ್ನು ತಾವು ಗಮನದಲ್ಲಿಟ್ಟುಕೊಂಡು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡುತ್ತಾರೆ. ಆದರೆ ಅವರ ಮನವಿ ಯನ್ನು ಬಿಲ್ಕುಲ್ ಆಗಿ ತಳ್ಳಿ ಹಾಕಿ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆ ಒಂಭತ್ತೂ ಜನ ಆರೋಪಿಗಳನ್ನು ಅಪರಾಽಗಳೆಂದು ಘೋಷಿಸುವ ಮೂಲಕ ಅವರಿಗೆ ಗಲ್ಲು ಶಿಕ್ಷೆಯನ್ನು ಪ್ರಕಟಿಸುತ್ತದೆ.
ನ್ಯಾಯಾಲಯದ ಸೂಕ್ಷ್ಮತೆ: ಇಲ್ಲಿ ಬೇರೆ ಯಾರೇ ಈ ರೀತಿಯ ಕೆಲಸ ಮಾಡಿದರೆ ಅದು ಕೇವಲ ಕೊಲೆಯ ಪ್ರಕರಣ ಮಾತ್ರ ಆಗುತ್ತಿತ್ತು. ಮತ್ತು ಆ ಕೃತ್ಯದ ಹಿಂದಿನ ಉದ್ದೇಶಗಳನ್ನು ನ್ಯಾಯಾಲ ಯವು ಪರಿಗಣನೆಗೆ ತೆಗೆದುಕೊಳ್ಳುತ್ತಿತ್ತೇನೊ ಗೊತ್ತಿಲ್ಲ. ಆದರೆ ಇಲ್ಲಿ ಮುಖ್ಯವಾಗಿ ಅಪರಾಧಿಗಳ ಸ್ಥಾನದಲ್ಲಿ ನಿಂತಿರುವವರು ಬೇರಾರೋ ಸಾಮಾನ್ಯರಲ್ಲ. ಬದಲಿಗೆ ಅವರೆಲ್ಲರೂ ಕಾನೂನನ್ನು ಕಾಪಾಡುವ ಪ್ರತಿಜ್ಞೆ ಮಾಡಿಯೇ ಖಾಕಿ ತೊಟ್ಟವರು.
ಕಾನೂನು ಕಾಪಾಡುವ ಜವಾಬ್ದಾರಿ ಹೊತ್ತವರು, ಹೀಗಿರುವಾಗ ಅವರಿಂದಲೇ ಇಂತಹ ಹೀನ ಕೃತ್ಯಗಳು ನಡೆಯುತ್ತವೆ ಅಂತಾದರೆ ಅದನ್ನು ಕ್ಷಮಿಸುವುದಕ್ಕೆ ಹೇಗೆ ಸಾಧ್ಯ?! ಉದಾ: ಮಹಾ ಭಾರತದಲ್ಲಿ ಆಗಿರುವುದು ಕೂಡಾ ಇದೆ. ಗುರು ದ್ರೋಣ ಮತ್ತು ಭೀಷ್ಮರಿಬ್ಬರ ಕಣ್ಣೆದುರೇ ಒಂದು ಹೆಣ್ಣಿನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತಡೆಯಲಾಗಲಿಲ್ಲ. ಅದು ಕೇವಲ ಹಸ್ತಿನಾಪುರದ ರಕ್ಷಣೆಯ ತಮ್ಮ ಗೊಡ್ಡು ಪ್ರತಿeಯ ಕಾರಣಕ್ಕೆ ಅವರಂದು ಅನ್ಯಾಯವನ್ನು ಸಹಿಸಿದರು.
ವಾಸ್ತವದಲ್ಲಿ ‘ಯಾರು ಏನೇ ಪ್ರತಿಜ್ಞೆ ಮಾಡಿರಲಿ, ಕಣ್ಣು ಮುಂದೆ ದೌರ್ಜನ್ಯ ನಡೆಯುತ್ತಿದ್ದರೆ ತಮ್ಮ ಆ ಪ್ರತಿಜ್ಞೆಯನ್ನು ಮುರಿದು ಅನ್ಯಾಯವನ್ನು ತಡೆದರೆ ಅದುವೆ ನಿಜವಾದ ಧರ್ಮ’. ಅಂದು ಗುರು ದ್ರೋಣ ಮತ್ತು ಭೀಷ್ಮರು ಈ ಕೆಲಸ ಮಾಡಿದ್ದರೆ ಅವರಿಬ್ಬರೂ ಆ ಕುರುಕ್ಷೇತ್ರದಲ್ಲಿ ಸಾಯುತ್ತಿರಲಿಲ್ಲ. ಹಾಗೆಯೇ ಅಂದು ಪೊಲೀಸರು ಕೂಡಾ ನ್ಯಾಯವನ್ನು ಕಾಪಾಡುವ ಕೆಲಸ ಮಾಡಿದ್ದರೆ ಈ ರೀತಿಯ ತೀರ್ಪು ಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ನ್ಯಾಯಾಲಯ ಕೊಟ್ಟ ತೀರ್ಪು ಬೇರೆ ಅಧಿಕಾರಿಗಳಿಗೆಲ್ಲ ಒಂದು ದೊಡ್ಡ ಪಾಠವಾಗುತ್ತದೆ.
ಆದ್ದರಿಂದ ಇದು ಒಂದು ವಿಶೇಷ ಪ್ರಕರಣವೆಂದು ಹೇಳಿರುವ ನ್ಯಾಯಾಲಯವು ಶಿಕ್ಷೆಯ ಪ್ರಮಾಣ ವನ್ನು ಕಡಿಮೆ ಮಾಡುವ ಔಚಿತ್ಯವೇ ಇಲ್ಲ ಎಂದು ಹೇಳುವ ಮೂಲಕ ಆ ಎಲ್ಲಾ 9 ಜನರಿಗೂ ಮರಣದಂಡನೆಯನ್ನು ವಿಧಿಸಿದೆ. ಜೊತೆಗೆ ಮೃತರಾದ ಆ ಜೈರಾಜ್ ಕುಟುಂಬಕ್ಕೆ ಗಲ್ಲು ಶಿಕ್ಷೆಗೆ ಗುರಿಯಾದ ಪೊಲೀಸರೆಲ್ಲರೂ ಸೇರಿ 1.40 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಕೊಡು ವಂತೆ ತನ್ನ ಆದೇಶದಲ್ಲಿ ತಿಳಿಸಿರುವುದು ಬಹಳ ವಿಶೇಷ.
ಅಪರಾಧಿಗಳಿಂದಲೇ ಪರಿಹಾರವನ್ನು ಕೊಡಿಸುವ ಆ ತೀರ್ಪು ಬಹಳ ಒಳ್ಳೆಯ ತೀರ್ಪು. ಇದರಂತೆ ಎಲ್ಲಾ ಪ್ರಕರಣಗಳಲ್ಲೂ ಅಪರಾಧಿಗಳಿಂದಲೇ ಪರಿಹಾರವನ್ನು ಕೊಡಿಸುವ ಕೆಲಸವಾದರೆ ಮುಂಬರುವ ದಿನಗಳಲ್ಲಿ ಅಪರಾಧದ ಪ್ರಮಾಣಗಳು ಕೂಡಾ ಸ್ವಲ್ಪ ಕಡಿಮೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಲಾಕಪ್ ಡೆತ್ ಆದಂತಹ ಸಂದರ್ಭದಲ್ಲಿ ಆ ತನಿಖೆಯು ಬಹಳಷ್ಟು ನಿಧನವಾಗಿ ನಡೆಯುತ್ತದೆ. ಇಲ್ಲಿ ಪೊಲೀಸರ ವಿರುದ್ಧ ಪೊಲೀಸರೇ ತನಿಖೆ ಮಾಡುವುದರಿಂದ ಹೆಚ್ಚಾಗಿ ಆ ಕೇಸ್ ಗಳು ಕ್ಲೋಸ್ ಆಗುತ್ತದೆ ಎನ್ನುವ ಧೈರ್ಯ ಅವರಲ್ಲಿರುತ್ತದೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಹೈಕೋರ್ಟ್ ನೇರವಾಗಿ ಭಾಗವಹಿಸಿದ್ದರ ಪರಿಣಾಮದ ಫಲವಾಗಿ ಈ ರೀತಿಯ ಫಲಿತಾಂಶ ಬಂದಿದೆ. ಮುಂದೆ ಈ ಪ್ರಕರಣವು ರಾಜ್ಯದ ಹೈಕೋರ್ಟ್ ಮೆಟ್ಟಿಲೇರುತ್ತದೆ.
ಸೆಕ್ಷನ್ 366ರ ಪ್ರಕಾರ ಹೈಕೋರ್ಟ್ ಈ ಶಿಕ್ಷೆಯನ್ನು ಕುಲಂಕುಶವಾಗಿ ಪರಿಶೀಲನೆ ಮಾಡುತ್ತದೆ. ಆ ಸಂದರ್ಭದಲ್ಲಿ ಹೈಕೋರ್ಟಿಗೆ ಏನಾದರೂ ಸಾಕ್ಷಿಗಳು ಕಡಿಮೆ ಅಂತ ಅನಿಸಿದರೆ ಅವರ ಶಿಕ್ಷೆಯ ಪ್ರಮಾಣವನ್ನು ಮರಣದಂಡನೆಯಿಂದ ಜೀವಾವಽ ಶಿಕ್ಷೆಯಾಗಿಯೂ ಬದಲಿಸಬಹುದು. ಆದರೆ ಈ ಕೇಸಿನ ಆರಂಭದಿಂದ ಇಲ್ಲಿಯವರೆಗೆ ಹೈಕೋರ್ಟ್ ನೇರವಾಗಿ ತಾನೇ ಭಾಗವಹಿಸಿದ್ದರಿಂದ ಈ ತೀರ್ಪನ್ನು ಎತ್ತಿ ಹಿಡಿಯುವ ಸಾಧ್ಯತೆಗಳೇ ಹೆಚ್ಚು ಅಂತ ಅನಿಸುತ್ತದೆ.
ಹೀಗಾದರೆ ಆ ಅಪರಾಽಗಳಿಗೆ ಸುಪ್ರೀಂ ಕೋರ್ಟಿಗೆ ಅಪೀಲು ಹೋಗುವ ಅವಕಾಶ ಸಿಗುತ್ತದೆ. ಆಗ ಸುಪ್ರೀಂ ಕೋರ್ಟ್ ಆ ಶಿಕ್ಷೆಯನ್ನು ಖಚಿತಪಡಿಸಿದರೆ ಮಾತ್ರ ಅವರನ್ನು ಗಲ್ಲಿಗೇರಿಸಲಾಗುತ್ತದೆ. ಕೊನೆಯದಾಗಿ ಕೋರ್ಟಿನ ಎಲ್ಲಾ ಬಾಗಿಲುಗಳು ಮುಚ್ಚಿದ ಸಂದರ್ಭದಲ್ಲಿ ಆರೋಪಿಗಳ ಮುಂದೆ ಇರುವ ಕೊನೆಯ ಆಯ್ಕೆ ಅಂದ್ರೆ, ಅದು ’ಕ್ಷಮಾದಾನದ’ ಅರ್ಜಿ.
ರಾಜ್ಯದ ರಾಜ್ಯಪಾಲರಿಗೆ ಅಥವಾ ರಾಷ್ಟ್ರಪತಿಗಳಿಗೆ ಕ್ಷಮೆ ಕೋರಿ ಅರ್ಜಿ ಸಲ್ಲಿಸುವುದು. ನಮ್ಮ ಕಾನೂನು ವ್ಯವಸ್ಥೆಯಲ್ಲಿ ನ್ಯಾಯ ಸಿಗಬೇಕಾದರೆ ಕುಬೇರನಷ್ಟು ಹಣ ಮತ್ತು ಬ್ರಹ್ಮನಷ್ಟು ಆಯಸ್ಸು ಇರಬೇಕೆನ್ನುವ ಭಾವನೆ ಅನೇಕರಲ್ಲಿದೆ. ಈ ಮಾತನ್ನು ಈ ಹಿಂದೆ ಓರ್ವ ಗೌರವಾನ್ವಿತ ನ್ಯಾಯಮೂರ್ತಿಯೊಬ್ಬರು ಬರೆದಿದ್ದರು.
ವಾಸ್ತವದಲ್ಲಿ ಈ ರೀತಿಯ ಭಾವನೆಗಳು ಜನರಲ್ಲಿ ಇರುವುದು ಕೂಡಾ ಸುಳ್ಳಲ್ಲ! ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ತರಹದ ನಂಬಿಕೆಗಳನ್ನು ಹುಸಿಗೊಳಿಸಬಲ್ಲ ಇಂತಹ ಅನೇಕ ತೀರ್ಪುಗಳನ್ನು ನ್ಯಾಯಾಲಯಗಳು ಆಗಾಗ ಕೊಡುತ್ತಲೇ ಇರುತ್ತವೆ ಎಂಬುದು ಕೂಡಾ ಅಷ್ಟೇ ಸತ್ಯ.
ಜನರ ಈ ರೀತಿಯ ಅಪನಂಬಿಕೆಗಳಿಗೆಲ್ಲ ಮುಖ್ಯ ಕಾರಣವೆಂದರೆ ಅದುವೇ ’ಭ್ರಷ್ಟಾಚಾರ’. ಇದಂತೂ ನಮ್ಮಲ್ಲಿ ಒಂದು ರೀತಿ ಸರ್ವಾಂತರ್ಯಾಮಿ. ನಾವು ಪ್ರಾಮಾಣಿಕರಾಗಿರದೆ ಬೇರೆಯವರು ಪ್ರಾಮಾಣಿಕವಾಗಿ ಇರಬೇಕೆಂದು ಬಯಸುತ್ತೇವೆ. ಜನರು ಮತದಾನಕ್ಕಾಗಿ ಹಣ ಪಡೆಯುತ್ತಾರೆ, ಅದೇ ನಮ್ಮ ರಾಜಕಾರಣಿಗಳು ನೇಮಕಾತಿಯಲ್ಲಿ ಬಡವರಿಂದ ಸುಲಿಗೆ ಮಾಡುತ್ತಾರೆ. ಹೀಗೆ ಹಣ ಕೊಟ್ಟು ನೇಮಕರಾದ ಅಧಿಕಾರಿಗಳು ತಮ್ಮ ಜೀವನಪರ್ಯಂತ ಜನರನ್ನು ಪೀಕುವುದರಲ್ಲಿಯೇ ಕಾಲ ಕಳೆಯುತ್ತಾರೆ.
ಹಾಗಾಗಿ ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಗಳು ಒಂದು ರೀತಿಯಲ್ಲಿ ಭ್ರಷ್ಟಾಚಾರದ ಚೈನ್ ಸಿಸ್ಟಮ್ ಸೈಕಲ್. ಇಲ್ಲಿ ಸಾಮಾನ್ಯ ನಾಗರಿಕದಿಂದ ಹಿಡಿದು ಉನ್ನತ ಮಟ್ಟದ ಅಧಿಕಾರ ವಲಯವೆಲ್ಲವೂ ಭ್ರಷ್ಟರಕೂಟವೇ ಆಗಿದೆ....ಇರಲಿ ಬಿಡಿ!
ಮರಣದಂಡನೆ ತೀರ್ಪಿನ ಪರಿಣಾಮ: ತಪ್ಪು ಮಾಡಿದ ವ್ಯಕ್ತಿ ಅದೆಷ್ಟೇ ಪ್ರಭಾವಶಾಲಿ ಆದರೂ ಆತ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ಬಹಳ ಸ್ಪಷ್ಟವಾಗಿ ಹೊರ ಹೊಮ್ಮಿದೆ. ಇನ್ಮುಂದೆ ಪೋಲಿಸರು ತಮ್ಮ ಲಾಠಿ ಎತ್ತುವ ಮೊದಲು ಹತ್ತಾರು ಬಾರಿ ಯೋಚಿಸ ಬೇಕಾಗುತ್ತದೆ. ಈ ಸಂದೇಶ ಇಡೀ ದೇಶದ ಪೊಲೀಸ್ ಠಾಣೆಗಳವರೆಗೂ ತಲುಪಿದೆ. ನ್ಯಾಯ ತಡವಾದರೂ ತಡವಾದ ನ್ಯಾಯವು ಸತ್ಯದ ಗೆಲುವಿಗೆ ಸಾಕ್ಷಿಯಾಗುತ್ತದೆ. ಹಾಗಾಗಿ ಈ ತೀರ್ಪು ಕೇವಲ ’ದರ್ಪಕ್ಕೆ ದಂಡನೆಯಾಗಿದೆ ಅಷ್ಟೆ, ಅದು ಪೊಲೀಸರಿಗಾದ ಶಿಕ್ಷೆಯಲ್ಲ. ಹೀಗಾದಾಗ ಸಾಮಾನ್ಯನಿಗೆ ನ್ಯಾಯಾಂಗದ ಮೇಲೆ ಇರುವ ನಂಬಿಕೆಯನ್ನು ಮತ್ತಷ್ಟು ಹೆಚ್ಚಾಗುತ್ತದೆ.