ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lalitha Panikkar Column: ನೈರ್ಮಲ್ಯದ ತುಡಿತಕ್ಕೆ ದನಿಯಾಗುವಿಕೆ

ಬಿಬಿಸಿ ಸುದ್ದಿಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಪ್ರಸಿದ್ಧ ಉದ್ಘೋಷಕ/ಪ್ರಸಾರಕ ಮಾರ್ಕ್ ಟಲಿ ಅವರು ಇತ್ತೀಚೆಗಷ್ಟೇ ಅಸುನೀಗಿದ್ದು ಗೊತ್ತಿರುವ ಸಂಗತಿಯೇ; ಭಾರತದಂಥ ವಿಶಾಲ ಮತ್ತು ವೈವಿಧ್ಯ ಮಯ ದೇಶದಲ್ಲಿ, ಒಂದು ಸಂವಹನ ವಾಹಕವಾಗಿ ರೇಡಿಯೋಗೆ ಇರುವ ಮಹತ್ವವನ್ನು ಈ ಸಾವು ಮುನ್ನೆಲೆಗೆ ತಂದಿತು ಎನ್ನಲಡ್ಡಿಯಿಲ್ಲ.

ಕಳಕಳಿ

ಲಲಿತಾ ಪಣಿಕ್ಕರ್

ಬಿಬಿಸಿ ಸುದ್ದಿಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಪ್ರಸಿದ್ಧ ಉದ್ಘೋಷಕ/ಪ್ರಸಾರಕ ಮಾರ್ಕ್ ಟಲಿ ಅವರು ಇತ್ತೀಚೆಗಷ್ಟೇ ಅಸುನೀಗಿದ್ದು ಗೊತ್ತಿರುವ ಸಂಗತಿಯೇ; ಭಾರತದಂಥ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ, ಒಂದು ಸಂವಹನ ವಾಹಕವಾಗಿ ರೇಡಿಯೋಗೆ ಇರುವ ಮಹತ್ವವನ್ನು ಈ ಸಾವು ಮುನ್ನೆಲೆಗೆ ತಂದಿತು ಎನ್ನಲಡ್ಡಿಯಿಲ್ಲ.

ಈ ಕಾರಣದಿಂದಾಗಿಯೇ, ಸ್ವಚ್ಛ ಭಾರತ ಅಭಿಯಾನದ ಧ್ಯೇಯೋದ್ದೇಶಗಳನ್ನು ಬಲಪಡಿಸಲಿಕ್ಕಾಗಿ ದೇಶದ 4 ರಾಜ್ಯಗಳಲ್ಲಿ 25 ಸಮುದಾಯ ರೇಡಿಯೋ ಕೇಂದ್ರಗಳೊಂದಿಗೆ ಕಾರ್ಯನಿರ್ವಹಿಸುವ, ದೆಹಲಿಯ UNICEF ಬೆಂಬಲವನ್ನು ಹೊಂದಿರುವ, WASH-CCES ತಂಡದ ಯೋಜನೆಯಾದ Seeking Modern Applications for Real Transformation (SMART) ನ ಕಾರ್ಯ ಚಟುವಟಿಕೆಯು ತುಂಬಾ ಪ್ರಸ್ತುತವೆನಿಸುತ್ತದೆ.

ಮಧ್ಯಪ್ರದೇಶದ ಝಬುವಾ ಪಟ್ಟಣದಿಂದ ವರದಿಯಾಗಿರುವ ನಿದರ್ಶನವೊಂದು, ದೂರದ ಕೊಂಪೆ ಗಳಲ್ಲಿ ಸಮುದಾಯ ರೇಡಿಯೋ ವ್ಯವಸ್ಥೆಗೆ ಇರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಶಾಂತಿ ದಮೊರ್ ಎಂಬ 25ರ ಹರೆಯದ ಯುವತಿಯು ತನ್ನ ಮದುವೆಯ ನಂತರ, ಝಬುವಾ ಪಟ್ಟಣದಿಂದ ಕೇವಲ 7 ಕಿ.ಮೀ.ನಷ್ಟು ದೂರದಲ್ಲಿರುವ ಮೋಹನ್‌ಪುರ ಎಂಬ ಗ್ರಾಮಕ್ಕೆ ಸ್ಥಳಾಂತರಗೊಳ್ಳಬೇಕಾಗಿ ಬಂದಾಗ, ಗ್ರಾಮೀಣ ಜೀವನವು ವಿಭಿನ್ನವಾಗಿರುತ್ತದೆ ಎಂದೇ ನಿರೀಕ್ಷಿಸಿ ದ್ದಳು.

ಇದನ್ನೂ ಓದಿ: Ravi Sajangadde Column: ನಿಂತ ನೀರಾದ ನೀರಾವರಿ ಯೋಜನೆಗಳು !

‘ಭಿಲ್’ ಎಂಬ ಬುಡಕಟ್ಟು ಸಮುದಾಯದಲ್ಲಿ ಜನಿಸಿದ್ದ ಆಕೆ ಕಾಲೇಜಿನವರೆಗೆ ವಿದ್ಯಾಭ್ಯಾಸ ಮಾಡಿದ್ದಳು ಮತ್ತು ಆ ಶಿಕ್ಷಣದಿಂದ ದಕ್ಕಿದ ಅಭ್ಯಾಸಗಳು ಮತ್ತು ಪರಿಕಲ್ಪನೆಗಳನ್ನು ಮೈಗೂಡಿಸಿ ಕೊಂಡಿದ್ದಳು. ಆದರೆ ಮೋಹನ್‌ಪುರ ಗ್ರಾಮದಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಕಹಿವಾಸ್ತವವು ಆಕೆಗೆ ಆಘಾತವನ್ನುಂಟುಮಾಡಿತು.

ಅದೆಂದರೆ, ಆಕೆಯ ಹೊಸಮನೆಯಲ್ಲೊಂದು ಶೌಚಾಲಯವು ಇದ್ದುದರ ಹೊರತಾಗಿಯೂ, ಯಾರೊಬ್ಬರೂ ಅದನ್ನು ಬಳಸುತ್ತಿರಲಿಲ್ಲ! ಬದಲಿಗೆ ಅದೊಂದು ಉಗ್ರಾಣವಾಗಿ ಮಾರ್ಪಟ್ಟಿತ್ತು. ಆ ಕುಟುಂಬಿಕರು ಶೌಚದ ಉದ್ದೇಶಗಳಿಗಾಗಿ ಬಳಸುತ್ತಿದ್ದುದು ಹೊಲಗಳನ್ನು, ತೆರೆದ ಬಯಲು ಗಳನ್ನು!

ಈ ಕಹಿವಾಸ್ತವವು ರಾಚುತ್ತಿದ್ದಂತೆ ಶಾಂತಿ ದಮೊರ್ ತೀವ್ರ ಕಸಿವಿಸಿಗೆ ಒಳಗಾದಳು, ಅಸಮಾಧಾನವು ಅವಳನ್ನು ಆವರಿಸಿತು. ಶೌಚಕ್ಕೆಂದು ಪ್ರತಿದಿನವೂ ಮನೆಯಿಂದಾಚೆಗೆ ಹೆಜ್ಜೆ ಹಾಕಿ ಬಯಲು ಪ್ರದೇಶಕ್ಕೆ ತೆರಳುವುದು ಅವಳ ಪಾಲಿಗೆ ಅಸುರಕ್ಷಿತ ಮತ್ತು ಅನನುಕೂಲಕರ ನಡೆಯಾಗಿದ್ದರ ಜತೆಗೆ, ಅವಳ ಖಾಸಗಿತನದ ಉಲ್ಲಂಘನೆಯೂ ಆಗಿತ್ತು.

ಇಷ್ಟಾಗಿಯೂ, ತನ್ನ ಅತ್ತೆ-ಮಾವನ ಹಳೆಯ ಅಭ್ಯಾಸಗಳನ್ನು ಬದಲಾಯಿಸುವುದು ತಾನು ಅಂದು ಕೊಂಡಷ್ಟು ಸುಲಭವಲ್ಲ ಎಂಬುದೂ ಅವಳಿಗೆ ಗೊತ್ತಿತ್ತು. ಹೀಗಾಗಿ, ಮೊದಮೊದಲಿಗೆ ಆಕೆ ಮೌನ ವಾಗಿದ್ದಳು. ಹಾಗೆಂದ ಮಾತ್ರಕ್ಕೆ, ಈ ಕಹಿವಾಸ್ತವವನ್ನು ದೀರ್ಘಾವಧಿಯವರೆಗೆ ಜೀರ್ಣಿಸಿ ಕೊಳ್ಳಲು ಅವಳು ಸಿದ್ಧಳಿರಲಿಲ್ಲ.

ಆದರೆ, ‘ರೇಡಿಯೋ ತಾಂತ್ಯ’ಕ್ಕೆ ಸೇರಿದ ತಂಡವೊಂದು ಆ ಗ್ರಾಮಕ್ಕೆ ನೀಡಿದ ಭೇಟಿಯು ತಿರುವಿನ ಘಟ್ಟವಾಗಿ ಪರಿಣಮಿಸಿತು. ಶಾಂತಿ ದಮೊರ್ ಕೂಡ ಓರ್ವ ಸದಸ್ಯೆಯಾಗಿದ್ದ ಸ್ಥಳೀಯ ಮಹಿಳೆಯರ ‘ಸ್ವ-ಸಹಾಯ ಗುಂಪನ್ನು’ (ಎಸ್ಎಚ್‌ಜಿ) ಈ ತಂಡವು ಭೇಟಿಮಾಡಿ, ನೈರ್ಮಲ್ಯ ಮತ್ತು ಮಹಿಳೆ ಯರ ಘನತೆಯ ಬಗ್ಗೆ, ಶೌಚಾಲಯಗಳು ಏಕೆ ಮುಖ್ಯ ಎಂಬುದರ ಕುರಿತು ಸರಳವಾಗಿ, ನೇರವಾಗಿ, ಮನಕ್ಕೆ ಮುಟ್ಟುವಂತೆ ಮಾತನಾಡಿತು.

ಒಂದು ಪುಟ್ಟ ವರ್ಗೀಕರಣದ ಮೂಲಕ ಕುಟುಂಬಗಳು ಹೇಗೆ 36 ರೋಗಗಳನ್ನು ತಡೆಗಟ್ಟಬಹುದು ಎಂಬುದನ್ನೂ ಈ ತಂಡವು ವಿವರಿಸಿತು. ತನ್ನ ಸಮುದಾಯದ ಇತರ ಮಹಿಳೆಯರೊಂದಿಗೆ ಕುಳಿತು ಇವೆಲ್ಲವನ್ನೂ ಆಲಿಸುತ್ತಿದ್ದ ಶಾಂತಿ ದಮೊರ್, ತನಗಿದ್ದ ಹಿಂಜರಿಕೆಯೇ ಈಗ ದೃಢನಿಶ್ಚಯವಾಗಿ ಬದಲಾಗುತ್ತಿದೆ ಅಂದುಕೊಂಡಳು.

ತನ್ನ ವಿವಾಹದ ಕೆಲ ತಿಂಗಳ ನಂತರ ತಾನು ಸೇರ್ಪಡೆಗೊಂಡಿದ್ದ ಸ್ವ-ಸಹಾಯ ಗುಂಪಿನಲ್ಲಿ ಆಕೆಗೆ ಇತರ ಮಹಿಳೆಯರ ಒಡನಾಟವೂ ದಕ್ಕಿತು; ಈ ಪೈಕಿ ಅನೇಕರು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಸಮಾಧಾನ ಮತ್ತು ಮುಜುಗರಕ್ಕೆ ಒಳಗಾಗಿದ್ದರೂ, ಅದರ ಬಗ್ಗೆ ಎಂದಿಗೂ ದನಿಯೆತ್ತಿರ ಲಿಲ್ಲ. ಇದು ಶಾಂತಿ ದಮೊರ್‌ಳನ್ನು ಆಳವಾಗಿ ತಟ್ಟಿತು.

ಮನೆಯ ಮಕ್ಕಳು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದುದು, ಶೌಚಕ್ಕೆಂದು ಹೊಲಗಳು/ತೆರೆದ ಬಯಲುಗಳಿಗೆ ನಡೆದುಕೊಂಡು ಹೋಗುವಾಗಿನ ಮುಜುಗರ ಮತ್ತು ಮನೆಯಲ್ಲಿದ್ದ ಶೌಚಾಲಯವು ಧೂಳುಹಿಡಿದುಕೊಂಡಿದ್ದುದು ಮುಂತಾದ ದೃಶ್ಯಗಳನ್ನೆಲ್ಲಾ ಶಾಂತಿ ನೆನಪಿಸಿ ಕೊಂಡಳು.

‘ಇನ್ನು ಈ ದುಸ್ಥಿತಿಗೆ ಒಡ್ಡಿಕೊಳ್ಳಲಾಗದು, ಇದು ಸುಧಾರಿಸುತ್ತದೆ ಅಂತ ಇನ್ನು ಕಾಯಲಾಗದು’ ಎಂದು ಅವಳು ನಿರ್ಧರಿಸಿದಳು. “ಮನೆಯ ಶೌಚಾಲಯವನ್ನು ಇನ್ನಾದರೂ ದುರಸ್ತಿ ಮಾಡಿಸಬೇಕು ಹಾಗೂ ಅದನ್ನು ಕುಟುಂಬಿಕರೆಲ್ಲರೂ ಬಳಸುವಂತಾಗಬೇಕು, ಇಲ್ಲವಾದಲ್ಲಿ ನಾನು ಮನೆಯನ್ನು ಬಿಟ್ಟು ತವರಿಗೆ ಹೋಗಿಬಿಡುವೆ" ಎಂದು ಶಾಂತಿ ತನ್ನ ಪತಿಯ ಬಳಿ ದೃಢವಾಗಿ ಹೇಳಿಬಿಟ್ಟಳು.

ಕಾರಣವನ್ನು ವಿವರಿಸುವ ಹಾಗೂ ಬೆದರಿಸುವ ಈ ಎರಡೂ ಮಾರ್ಗವನ್ನು ಬಳಸಿ ಪತಿಯ ಮನ ವೊಲಿಸುವಲ್ಲಿ ಆಕೆ ಸಫಲಳಾದಳು. ಪತಿ-ಪತ್ನಿ ಜತೆಗೂಡಿ ಶೌಚಾಲಯದಲ್ಲಿ ತುಂಬಿಟ್ಟಿದ್ದ ವಸ್ತು ಗಳನ್ನು ತೆರವುಗೊಳಿಸಿದರು, ಮುರಿದುಹೋಗಿದ್ದ ಪೈಪುಗಳನ್ನು ಸರಿಪಡಿಸಿದರು ಹಾಗೂ ಮರು ಬಳಕೆಗೆ ಸಾಧ್ಯವಾಗುವವರೆಗೆ ಆ ಒಂದಿಡೀ ಜಾಗವನ್ನು ಉಜ್ಜಿ ಚೊಕ್ಕಗೊಳಿಸಿದರು. ಪರಿಣಾಮ ವಾಗಿ, ಎರಡೇ ದಿನಗಳಲ್ಲಿ ಶೌಚಾಲಯವು ದುರಸ್ತಿಯಾಯಿತು. ಕುಟುಂಬಿಕರೆಲ್ಲಾ ಅದನ್ನು ಬಳಸಲು ಶುರುಮಾಡಿದರು.

ಶಾಂತಿ ದಮೊರ್ ಕೈಗೊಂಡ ಕಾರ್ಯವು ಆಕೆಯ ಮನೆಗೆ ಮಾತ್ರವೇ ಸೀಮಿತವಾಗಲಿಲ್ಲ. ಆಕೆ ತನ್ನ ಈ ಸಾಹಸಗಾಥೆಯನ್ನು ಮಹಿಳಾ ಸ್ವ-ಸಹಾಯ ಗುಂಪಿನ ಮುಂದಿನ ಸಭೆಯಲ್ಲಿ ಎಲ್ಲರೊಂದಿಗೆ ಹಂಚಿಕೊಂಡಾಗ, ಬರೋಬ್ಬರಿ ಎಂಟು ಕುಟುಂಬಗಳು ಈ ಮಾರ್ಗವನ್ನು ಅನುಸರಿಸಲು ಮುಂದಾದವು.

ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ಶೌಚಾಲಯಗಳು ಸ್ವಚ್ಛಗೊಂಡವು ಹಾಗೂ ಬಳಕೆಗೆ ಮುಕ್ತವಾ ದವು. ಈಗ ತಮ್ಮಲ್ಲಿ ಯಾವ ತೆರನಾದ ಸುರಕ್ಷಿತ ಭಾವನೆ ನೆಲೆಯೂರಿದೆ ಎಂಬುದನ್ನು ಮಹಿಳೆ ಯರು ಮುಕ್ತವಾಗಿ ಹೇಳಿಕೊಂಡರು; ಇನ್ನು ಮುಂದೆ ಶೌಚಕ್ಕೆಂದು ದೂರದ ಬಯಲಿನವರೆಗೆ ಹೆಜ್ಜೆಹಾಕುವ ಅಗತ್ಯವಿಲ್ಲ ಎಂಬುದನ್ನು ಮನಗಂಡ ಮಕ್ಕಳೂ ನಿರಾಳರಾದರು.

ಇದಾದ ಕೆಲ ದಿನಗಳ ನಂತರ, ತ್ಯಾಜ್ಯ ನಿರ್ವಹಣೆಯ ಕುರಿತಾದ ‘ರೇಡಿಯೋ ತಾಂತ್ಯ’ದ ಮತ್ತೊಂದು ಕಾರ್ಯಕ್ರಮವೂ, ಈ ಮಹಿಳಾ ಸ್ವ-ಸಹಾಯ ಗುಂಪು ಮತ್ತೊಮ್ಮೆ ಕಾರ್ಯಾಚರಣೆಗೆ ಇಳಿಯಲು ಪ್ರೇರಣೆ ನೀಡಿತು. ಹೀಗೆ ಪ್ರೇರಿತರಾಗಿ ಒಗ್ಗೂಡಿದ ಮಹಿಳೆಯರು, ತೆರೆದ ಸ್ಥಳಗಳಲ್ಲಿ ಕಸ/ತ್ಯಾಜ್ಯವನ್ನು ಸುರಿಯುವುದರಿಂದ ಒದಗುವ ಅಪಾಯಗಳ ಬಗ್ಗೆ ಚರ್ಚಿಸಿದರು.

ತ್ಯಾಜ್ಯ ಸಂಗ್ರಹಣೆಯ ಅಗತ್ಯವನ್ನು ಮನಗಂಡ ಮಹಿಳಾ ಸ್ವ-ಸಹಾಯ ಗುಂಪು ಶಾಂತಿಯ ನೇತೃತ್ವದಲ್ಲಿ ಟೊಂಕಕಟ್ಟಿ, ಗ್ರಾಮದ ಶಾಲೆಯ ಬಳಿಯಿದ್ದ ಹಳೆಯ ತಿಪ್ಪೆಗುಂಡಿಯೊಂದನ್ನು ಸ್ವಚ್ಛಗೊಳಿಸಿತು. ಹೀಗೆ ಸಂಗ್ರಹಿಸಲಾದ ತ್ಯಾಜ್ಯವನ್ನು ಕೃಷಿಕಾರ್ಯಕ್ಕೆಂದು ಗೊಬ್ಬರವಾಗಿ ಪರಿವರ್ತಿಸಲು ಯೋಜನೆಗಳನ್ನು ರೂಪಿಸಲಾಯಿತು; ಒಟ್ಟಿನಲ್ಲಿ, ನೈರ್ಮಲ್ಯ ಕಾರ್ಯವು ಜೀವನೋಪಾಯದೊಂದಿಗೆ ಸಂಪರ್ಕವನ್ನು ಹೊಂದುವುದಕ್ಕೆ ಸಾಧ್ಯವಾಯಿತು.

ಇಂದು ಮೋಹನಪುರ ಗ್ರಾಮದಲ್ಲಿನ ನೈರ್ಮಲ್ಯವು ‘ಶಾಂತಿ ದಮೊರ್’ ಎಂಬ ಯುವತಿಯು ಎತ್ತಿದ ದನಿಗೆ ನಿಕಟವಾಗಿರುವ ಸಕಾರಾತ್ಮಕ ಪ್ರತಿಧ್ವನಿಯಂತೆ ತೋರುತ್ತದೆ. ಇದರಿಂದ ಮತ್ತಷ್ಟು ಪ್ರೇರಣೆ ಗೊಂಡಿರುವ ಮಹಿಳಾ ಸ್ವ-ಸಹಾಯ ಗುಂಪು, ತನ್ನ ಪ್ರತಿಯೊಂದು ಸಭೆಯಲ್ಲೂ ನೈರ್ಮಲ್ಯದ ವಿಷಯವನ್ನು ಒಂದು ಪ್ರಮುಖ ಕಾರ್ಯಸೂಚಿಯಾಗಿ ಪರಿಗಣಿಸಿದೆ ಹಾಗೂ ಈ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬವನ್ನೂ ನಿಯತವಾಗಿ ಮೇಲ್ವಿಚಾರಣೆ ಮಾಡಲು ನಿರ್ಣಯಿಸಿದೆ.

ಸಮುದಾಯ ರೇಡಿಯೋದ ಶಕ್ತಿಯಿಂದ ಉಂಟಾದ ಈ ರೂಪಾಂತರವು, ಕೌಟುಂಬಿಕ ಹಿಂಸೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ದೇಶದ ಇತರ ಭಾಗಗಳಲ್ಲೂ ಪುನರಾವರ್ತನೆಯಾಗಿದೆ. ಹೊಸ ಸಮಸ್ಯೆಗಳು ಉದ್ಭವಿಸಿದಾಗೆಲ್ಲಾ ತಾವು ಸಮುದಾಯ ರೇಡಿಯೋ ವ್ಯವಸ್ಥೆಯಿಂದ ನೆರವನ್ನು ಪಡೆಯಬಹುದು ಎಂಬುದು ಶಾಂತಿ ದಮೊರ್ ಮತ್ತು ಇತರ ಮಹಿಳೆಯರಿಗೆ ಈಗ ಅರಿವಾಗಿದೆ.

(ಲೇಖಕಿ ಹಿರಿಯ ಪತ್ರಕರ್ತೆ)