Ravi Sajangadde Column: ನಿಂತ ನೀರಾದ ನೀರಾವರಿ ಯೋಜನೆಗಳು !
ರಾಜ್ಯಸಭೆಯಲ್ಲಿ ಮೊನ್ನೆ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡುತ್ತಾ ದೇವೇಗೌಡರು ಹೇಳಿದ ಮಾತುಗಳು, ನೀರು ಮತ್ತು ನೀರಾವರಿ ವಿಚಾರ ದಲ್ಲಿ ಅವರ ಪಕ್ಷ ಮತ್ತು ಸರಕಾರವೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರಕಾರಗಳ ಅಸಡ್ಡೆಯ ಕುರಿತು ಬೆಳಕು ಚೆಲ್ಲಿದವು.
-
ಜಲ-ಆಶಯ
ರವೀ ಸಜಂಗದ್ದೆ
ಗಾಳಿ, ನೀರು, ಬೆಳಕು ಇಲ್ಲದಿದ್ದರೆ ಮನುಷ್ಯ ಈ ಪ್ರಪಂಚದಲ್ಲಿ ಬದುಕಲಾರ. ಈ ಮೂರೂ ಸಂಪನ್ಮೂಲಗಳು ಪ್ರಕೃತಿಯು ನಮಗೆ ಒದಗಿಸುವ ಭಿಕ್ಷೆ! ಶಿಲಾಯುಗದಿಂದ ತೊಡಗಿ ಕಲಿಯುಗಕ್ಕೆ ಮಾನವನ ಸುದೀರ್ಘ ಪಯಣ ಬಂದು ನಿಂತಿದೆ. ಈ ಕಾಲಘಟ್ಟದಲ್ಲೂ ದೈನಂದಿನ ಬದುಕಿಗೆ ಮತ್ತು ಕೃಷಿಗೆ ಬೇಕಾದಷ್ಟು ನೀರು ಮತ್ತು ಶುದ್ಧ ಗಾಳಿ ಬಹುತೇಕ ಕಡೆಗಳಲ್ಲಿ ದೊರಕುತ್ತಿಲ್ಲ ಎನ್ನುವುದು ಕಲಿಯುಗದ ಮಹಿಮೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಾವುಗಳು ಮಾಡಿಕೊಂಡ ಕರ್ಮಕಾಂಡ!
ಶುದ್ಧ ಗಾಳಿ ಮತ್ತು ಶುದ್ಧ ನೀರು ಎಲ್ಲರಿಗೂ, ಎಡೆಯೂ ಸಿಗುತ್ತಿಲ್ಲ ಎನ್ನುವುದು ದುರಂತ! ನೀರು ಮತ್ತು ಕರ್ನಾಟಕದ ನೀರಾವರಿ ಯೋಜನೆಗಳ ದುರವಸ್ಥೆಯ ಬಗ್ಗೆ ಮತ್ತು ನನೆಗುದಿಗೆ ಬಿದ್ದಿರುವ ಯೋಜನೆಗಳ ಕುರಿತು ರಾಜ್ಯಸಭಾ ಸದಸ್ಯರೂ, ಮಾಜಿ ಪ್ರಧಾನಮಂತ್ರಿಯೂ ಆದ ದೇವೇಗೌಡರು ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಾಡಿದ ಭಾಷಣ ಮತ್ತು ವಿನಂತಿ ನಮ್ಮ ಪರಿಸ್ಥಿತಿಯನ್ನು ಬಟಾ ಬಯಲು ಮಾಡಿದೆ.
ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಎಂಟು ದಶಕಗಳು ಸಂದರೂ, ವಿವಿಧ ಸರಕಾರಗಳು ದೇಶ ಮತ್ತು ರಾಜ್ಯವನ್ನು ಆಳಿದರೂ ರಾಜ್ಯದೆಡೆ ನೀರಿನ ಸರಬರಾಜು ಮತ್ತು ಲಭ್ಯತೆ ಇಲ್ಲದಿರುವುದು ನಮ್ಮನ್ನು ಆಳಿದವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇದನ್ನೂ ಓದಿ: Ravi Sajangadde Column: ಆರ್.ಗಣೇಶ್: ಭೂಷಣಕೆ ಭೂಷಣ ಪದ್ಮಭೂಷಣ !
ರಾಜ್ಯಸಭೆಯಲ್ಲಿ ಮೊನ್ನೆ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡುತ್ತಾ ದೇವೇಗೌಡರು ಹೇಳಿದ ಮಾತುಗಳು, ನೀರು ಮತ್ತು ನೀರಾವರಿ ವಿಚಾರದಲ್ಲಿ ಅವರ ಪಕ್ಷ ಮತ್ತು ಸರಕಾರವೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರಕಾರಗಳ ಅಸಡ್ಡೆಯ ಕುರಿತು ಬೆಳಕು ಚೆಲ್ಲಿದವು.
“ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಹಿತವನ್ನು ಕಾಯಬೇಕಾಗಿದೆ. ನಾವೆಲ್ಲರೂ ಮನುಷ್ಯರು. ಮಳೆ ಬಿದ್ದರೆ ನೀರು, ಇಲ್ಲವಾದರೆ ಇಲ್ಲ. ಈ ಸದನದ ಎಲ್ಲಾ ಸದಸ್ಯರು ಕರ್ನಾಟಕದ ರಕ್ಷಣೆ ಮಾಡಬೇಕು ಎಂಬು ದಾಗಿ ನಾನು ಕೈ ಮುಗಿದು ಬೇಡುತ್ತೇನೆ. ಕರ್ನಾಟಕ ರಾಜ್ಯವು ನಿರಂತರವಾಗಿ ನೆರೆ ರಾಜ್ಯಗಳ ಜತೆ ತನ್ನ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ನಾನು ಕೂಡ ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ಈವರೆಗೆ ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಕರ್ನಾಟಕ ರಾಜ್ಯಕ್ಕೆ ನೀರಿನದ್ದೇ ಬಹುದೊಡ್ಡ ಬಿಕ್ಕಟ್ಟಾಗಿದೆ.
ಒಂದೆಡೆ ತಮಿಳುನಾಡು, ಮತ್ತೊಂದೆಡೆಯಲ್ಲಿ ಆಂಧ್ರಪ್ರದೇಶ, ಇನ್ನೊಂದು ಕಡೆಯಲ್ಲಿ ಗೋವಾ ದಿಂದ ತೊಂದರೆಯನ್ನು ರಾಜ್ಯವು ಎದುರಿಸುತ್ತಿದೆ. ನಾನು ಜೀವನದ ಕೊನೆಗಾಲದಲ್ಲಿ ಇದ್ದೇನೆ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ" ಎಂದು ಗೌಡರು ಹೇಳಿ ಮುಗಿಸಿದಾಗ ಅವರ ಕಂಗಳು ತುಂಬಿದ್ದವು ಮತ್ತು ಮನಸ್ಸು ಆರ್ದ್ರವಾಗಿತ್ತು!
ಜಲ ಸಂಪನ್ಮೂಲ ಮತ್ತು ಅದರ ನಿರ್ವಹಣೆಯ ವಿಚಾರದಲ್ಲಿ ನಾವು ಎಷ್ಟು ಹಿಂದೆ ಇದ್ದೇವೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ರಾಜ್ಯದ ಬಹುತೇಕ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ ಅಥವಾ ದಶಕಗಳಿಂದ ಆಮೆಗತಿಯಲ್ಲಿ ಸಾಗುತ್ತಿವೆ. ಕರ್ನಾಟಕ ಏಕೀಕರಣದ ನಂತರ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಹೆಚ್ಚಿನ ನೀರಾವರಿ ಯೋಜನೆಗಳು ಏಕಕಾಲಕ್ಕೆ ಆರಂಭ ಆಗಿವೆ.
ತುಲನಾತ್ಮಕವಾಗಿ ನೋಡಿದಾಗ ದಕ್ಷಿಣಕ್ಕೆ ಸಿಕ್ಕಷ್ಟು ಸವಲತ್ತು ಉತ್ತರಕ್ಕೆ ಸಿಗಲಿಲ್ಲ! ಆಡಳಿತಾತ್ಮಕ ಅನುಮೋದನೆ, ಸಕಾಲಿಕ ಮತ್ತು ಸ್ಪಷ್ಟ ನಿರ್ಧಾರಗಳು ಮತ್ತು ಅಗತ್ಯ ಹಣಕಾಸಿನ ನೆರವಿನ ವಿಚಾರದಲ್ಲಿ ಉತ್ತರಕ್ಕೆ ಸದಾ ತಾರತಮ್ಯ ಆಗಿರುವುದು ಖರೆ. ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳು ಇದಕ್ಕೆ ಜ್ವಲಂತ ಉದಾಹರಣೆ. ಇವು ಆ ಭಾಗದ ಜನರ ಮತಗಳನ್ನು ಗಳಿಸುವ ಚುನಾವಣಾ ಸರಕು! ಪಕ್ಷಾತೀತವಾಗಿ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಳೆದ ನಾಲ್ಕು ದಶಕಗಳಿಂದ ಉತ್ತರದ ಬಹುತೇಕ ಯೋಜನೆಗಳು ‘ನಿಂತ ನೀರಿನಂತಾಗಿವೆ’!
ದಾಖಲೆಗಳನ್ನು ಗಮನಿಸಿದಾಗ, ಕರ್ನಾಟಕದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿರುವ ಪ್ರಮುಖ ನೀರಾವರಿ ಯೋಜನೆಗಳೆಂದರೆ- ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಮತ್ತು ನವಲಿ ಏಕೀಕೃತ ಜಲಾಶಯ ಯೋಜನೆ. ಇದಲ್ಲದೆ 30+ ವಿವಿಧ ಸಣ್ಣ ನೀರಾವರಿ ಯೋಜನೆ ಗಳು ಅಸಮರ್ಪಕ ನಿರ್ವಹಣೆ ಮತ್ತು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿವೆ.
ಈ ಯೋಜನೆಗಳು ಮುಖ್ಯವಾಗಿ ಅಂತಾರರಾಜ್ಯ ಜಲವಿವಾದಗಳು (ಮಹದಾಯಿ, ಕಾವೇರಿ), ಪರಿಸರ ಮತ್ತು ಅರಣ್ಯ ಇಲಾಖೆಗಳ ಅನುಮತಿಯಲ್ಲಿ ವಿಳಂಬ, ಭೂಸ್ವಾಧೀನ ಮತ್ತು ಪುನರ್ವಸತಿ ಪ್ರಕ್ರಿಯೆ ಯಲ್ಲಿನ ಸಮಸ್ಯೆಗಳು, ದುಬಾರಿ ಕಾಮಗಾರಿ ವೆಚ್ಚ ಮತ್ತು ಅನುದಾನದ ಕೊರತೆಯಿಂದ ವಿಳಂಬ ವಾಗುತ್ತಿವೆ, ನಿಂತಿವೆ!
ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆಗಳಿವು: ? ಕರ್ನಾಟಕದ ಈಗಿನ ಕಾಂಗ್ರೆಸ್ ಸರಕಾರವು ಮೇಕೆದಾಟು ಯೋಜನೆಯ ಹೆಸರಿನಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂತು. ಕಾವೇರಿ ಜಲಾನಯನ ಪ್ರದೇಶದ ಈ ಯೋಜನೆಗೆ ತಮಿಳುನಾಡಿನ ವಿರೋಧ, ಪರಿಸರ ಕಾಳಜಿ ಮುಂತಾದ ಕಾನೂನು ಅಡಚಣೆಗಳು ಮುಗಿದಿಲ್ಲ.
? ಮಹದಾಯಿ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ವಿಳಂಬವಾಗುತ್ತಿದೆ. ಗೋವಾ ರಾಜ್ಯದೊಂದಿಗಿನ ವಿವಾದವೂ ಕಾಮಗಾರಿ ವಿಳಂಬಕ್ಕೆ ಇನ್ನೊಂದು ಕಾರಣ.
? ತುಂಗಭದ್ರಾ ಅಣೆಕಟ್ಟಿನ ಹೂಳೆತ್ತುವ ಮತ್ತು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣದ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ.
? ಭದ್ರಾ ಮೇಲ್ದಂಡೆ ಯೋಜನೆಯು ಸಾಕಷ್ಟು ಅನುದಾನದ ಕೊರತೆಯನ್ನು ಎದುರಿಸುತ್ತಿದೆ; ಕೇಂದ್ರದಿಂದ ಅಗತ್ಯವಿರುವ ಹಣ ಇನ್ನೂ ಬಿಡುಗಡೆ ಆಗದಿರುವುದು ಈ ಯೋಜನೆಯ ವಿಳಂಬಕ್ಕೆ ಕಾರಣ.
? ಶರಾವತಿ ಪಂ ಸ್ಟೋರೇಜ್ ಯೋಜನೆಗೆ ಪರಿಸರ ನಾಶದ ಆರೋಪ ಮತ್ತು ಟೆಂಡರ್ ಪ್ರಕ್ರಿಯೆಯ ವಿವಾದಗಳಿಂದಾಗಿ ಹೈಕೋರ್ಟ್ ತಡೆಯಾe ನೀಡಿದೆ.
? ಕೃಷ್ಣಾ ಮೇಲ್ದಂಡೆ ಯೋಜನೆಯು (ಹಂತ 3) ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಭೂಮಿ ಕಳೆದುಕೊಳ್ಳುವ ಜನರಿಗೆ ಪುನರ್ವಸತಿ ಕಲ್ಪಿಸುವಲ್ಲಿನ ವಿಳಂಬದ ಕಾರಣ ಇನ್ನೂ ಕಡತಗಳ ಉಳಿದಿದೆ.
ಇದು ಕೆಲವೇ ಸ್ಯಾಂಪಲ್‌ಗಳು ಅಷ್ಟೇ! ‘ನಮ್ಮ ಸರಕಾರಗಳು ಲಭ್ಯವಿರುವ ಜಲಸಂಪನ್ಮೂಲವನ್ನು ಉಪಯೋಗಿಸುವಲ್ಲಿ ಸಂಪೂರ್ಣ ಸೋತಿವೆ’ ಎನ್ನುವುದು ಈ ಕೆಳಗಿನ ವಿವರಗಳಿಂದ ಸ್ಪಷ್ಟ ವಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಬಹುತೇಕ ಕರ್ನಾಟಕವನ್ನು ಸಮೃದ್ಧಗೊಳಿಸಲು ಕೃಷ್ಣಾ ನದಿ ನೀರು ಸಮರ್ಪಕವಾಗಿ ಹಂಚಿಕೆಯಾದರೆ ಸಾಕು!
ಕೃಷ್ಣೆಯ ಒಡಲು ಅಕ್ಷರಶಃ ಅಕ್ಷಯಪಾತ್ರೆ. ಆಗಿನ ಬಚಾವತ್ ಆಯೋಗದ ತೀರ್ಪಿನಲ್ಲಿ ರಾಜ್ಯಕ್ಕೆ 734 ಟಿಎಂಸಿ ಹಂಚಿಕೆಯಾಗಿದೆ. ನಂತರ ಕೃಷ್ಣಾ ನ್ಯಾಯಾಧೀಕರಣ-2ರಲ್ಲಿ ಮತ್ತೆ 173 ಟಿಎಂಸಿ ನೀರು ನೀಡಲಾಗಿದೆ. ಇದರ ನಡುವೆ ಪೋಲಾವರಂ ಡೈವರ್ಷನ್ ಮೂಲಕ 21 ಟಿಎಂಸಿ ನೀರು ಲಭ್ಯವಿದೆ.
ಕೃಷ್ಣೆಯಿಂದ ಕರ್ನಾಟಕಕ್ಕೆ 928 ಟಿಎಂಸಿ ನೀರು ಲಭ್ಯವಿದೆ ಮತ್ತು ಇದು 5.94 ಲಕ್ಷ ಹೆಕ್ಟೇರ್‌ಗೆ ನೀರಾವರಿ ಒದಗಿಸಲಿದೆ! ಇಷ್ಟೇ ನೀರನ್ನು ಪೂರ್ಣ ಪ್ರಮಾಣದಲ್ಲಿ, ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವುದು ರಾಜ್ಯದ ದೌರ್ಭಾಗ್ಯ, ಅಷ್ಟೇ! ನಮ್ಮ ನೆಲದ ನೀರನ್ನು ಸಮರ್ಪಕವಾಗಿ ಬಳಸಲಾಗದೇ ಇರುವ ಇಂಥ ಇನ್ನೂ ಕೆಲವು ಅಪ್ರಯೋಜಕ ಯೋಜನೆಗಳು ಚಾಲ್ತಿಯಲ್ಲಿವೆ.
ನೀರಿನ ಕುರಿತಾದ ದೇವೇಗೌಡರ ಕಳಕಳಿ ಮೆಚ್ಚಬೇಕಾದದ್ದು. ಇಳಿವಯಸ್ಸಿನಲ್ಲೂ ರಾಜ್ಯದ ನೀರಾವರಿಯ ಕುರಿತು ಅವರು ಎತ್ತಿರುವ ಧ್ವನಿ ಅವರ ಜನಪರ-ರೈತಪರ ಕಾಳಜಿಯ ಪ್ರತೀಕ. ಹಾಗೆಂದು ಅವರು ವಿನಂತಿಸಿದ ಕೂಡಲೇ ರಾಜ್ಯದಲ್ಲಿ ಕುಂಟುತ್ತಾ ಸಾಗುತ್ತಿರುವ ಅಥವಾ ನಿಂತಿರುವ ವಿವಿಧ ನೀರಾವರಿ ಯೋಜನೆಗಳು ಬೇಕಾದ ಪ್ರಮಾಣಪತ್ರ, ಆರ್ಥಿಕ ನೆರವು ಮುಂತಾದು ವನ್ನೆಲ್ಲ ದೊರಕಿಸಿಕೊಂಡು, ನಾಳೆಯಿಂದಲೇ ಕಾಮಗಾರಿ ಶುರುವಾದೀತೆಂಬ ಹಗಲುಗನಸೂ ಇಲ್ಲವೆನ್ನಿ.
ದೇವೇಗೌಡರ ಈ ಮನವಿಯು ಕೇಂದ್ರ ಮತ್ತು ರಾಜ್ಯದಲ್ಲಿರುವ ಆಳುವವರಿಗೆ ಎಚ್ಚರಿಕೆಯ ಗಂಟೆ. ಯಾಕೆಂದರೆ ಈವರೆಗಿನ ಯಾವುದೇ ಸರಕಾರಗಳು ಜನಹಿತಕ್ಕಾಗಿ ಕೆಲಸ ಮಾಡಿ, ಜನರ ಮೂಲ ಭೂತ ಅಗತ್ಯಗಳಾದ ದೈನಂದಿನ ಉಪಯೋಗಕ್ಕೆ ಮತ್ತು ಕೃಷಿಗೆ ಬೇಕಾದಷ್ಟು ನೀರನ್ನು ಒದಗಿಸುವ ಕನಿಷ್ಠ ಕೆಲಸವನ್ನು ಮಾಡಲೇ ಇಲ್ಲ. ಜನರಿಗೆ ಮತ್ತು ಕೃಷಿಗೆ ಅನುಕೂಲವಾಗುವ ನೀರಾವರಿ ಯೋಜನೆಗಳಿಗೆ ಬಂದೊದಗಿರುವ ಕಂಟಕಗಳನ್ನು ನಿವಾರಿಸುವ, ವಿವಿಧ ಇಲಾಖೆಗಳಿಂದ ಸಿಗಬೇಕಾದ ಅನುಮತಿಗಳನ್ನು ತ್ವರಿತವಾಗಿ ಪಡೆದು, ನೆರೆ ರಾಜ್ಯಗಳೊಂದಿಗಿನ ಜಲವ್ಯಾಜ್ಯವನ್ನು ಪರಿಹರಿಸಿ, ಬೇಕಾದ ಆರ್ಥಿಕ ಅನುದಾನ ಒದಗಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೋಡೆತ್ತು ಗಳ ಮಾದರಿಯಲ್ಲಿ ಕೆಲಸ ಮಾಡಿದಾಗ ಮಾತ್ರ ನನೆಗುದಿಯಲ್ಲಿರುವ ಎಲ್ಲ ನೀರಾವರಿ ಯೋಜನೆ ಗಳು ಪೂರ್ಣವಾಗಿ, ಜನರಿಗೆ ಅವುಗಳ ಸದುಪಯೋಗ ಸಿಗಲು, ಕೃಷಿಗೆ ಭರಪೂರ ನೀರು ವರ್ಷದ 365 ದಿನಗಳಲ್ಲೂ ಸಿಗಲು ಸಾಧ್ಯ.
ನೀರಿನ ವಿಚಾರದಲ್ಲಿ ಸದಾ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ಪರವಾಗಿ ನಿಲ್ಲುವ ನ್ಯಾಯಮಂಡಳಿಗಳು ಕರ್ನಾಟಕದ ನೀರೊತ್ತಾಯವನ್ನೂ ಆಲಿಸಿ, ಸಕಾರಾತ್ಮಕವಾಗಿ ನೆರವಾಗ ಬೇಕು.
ದೇವೇಗೌಡರ ಆಶಯ ಆದಷ್ಟು ಶೀಘ್ರವಾಗಿ ಈಡೇರಲಿ. ಕೇಂದ್ರವು ಈ ನಿಟ್ಟಿನಲ್ಲಿ ದೊಡ್ಡ ಮನಸು ಮಾಡಿ ರಾಜ್ಯ ಸರಕಾರಗಳೊಂದಿಗೆ ಚರ್ಚಿಸಿ, ವಿಸ್ತೃತ ಕಾರ್ಯಯೋಜನೆ ಹಾಕಿಕೊಂಡು ಜಾರಿ ಗೊಳಿಸಲಿ. ನಿಂತ ನೀರಿನಂತಾದ ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳು ತ್ವರಿತವಾಗಿ ಪೂರ್ಣಗೊಂಡು, ಜಲಾಶಯಗಳಲ್ಲಿ ನೀರು ತುಂಬಿ ತುಳುಕಲಿ.
ರಾಜ್ಯಕ್ಕೆ ಅಂಟಿದ ನೀರಿನ ಶಾಪ ವಿಮೋಚನೆಯಾಗಲಿ. ಜೀವರಕ್ಷಕ ನೀರು ಕೃಷಿಕರ ಬಾಳಿಗೂ ಸಂಜೀವಿನಿಯಾಗಲಿ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)