Raju Haggada Column: ಅಂಕಣಗಳ ಭೂರಿ ಭೋಜನ!
ಸತತ ಒಂದು ತಿಂಗಳಿನಿಂದ ಜಪಾನ್ ಕುರಿತು ಓದುತ್ತಿರುವ ನಾವು, ಅಲ್ಲಿನವರ ಬಹಳಷ್ಟು ಮೌಲ್ಯ ಯುತ ವಿಚಾರಗಳನ್ನು ಅರಿಯುತ್ತಲೇ ಬಂದಿದ್ದೇವೆ. ವಿವಿಧ ಕಾರಣಕ್ಕೆ ವ್ಯವಸ್ಥೆಯನ್ನು ದೂರುವ ನಾವು, ಅದೇ ವ್ಯವಸ್ಥೆಯು ಒಬ್ಬ ಶಾಲಾ ಬಾಲಕಿಗೆ ಇಂಥದೊಂದು ಸೇವೆ ನೀಡಿದ್ದು ನೋಡಿದರೆ ಅದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎನಿಸುತ್ತದೆ
Source : Vishwavani Daily News Paper
ಪ್ರತಿಸ್ಪಂದನ
ರಾಜು ಹಗ್ಗದ, ಇಣಜಕಲ್
ಆಹಾ! ವಿಶ್ವವಾಣಿ ಪತ್ರಿಕೆಯನ್ನು ನಾನು ಓದಲು ಶುರು ಮಾಡಿದ್ದೇ ಅಂಕಣಗಳ ಹುಚ್ಚಿನಿಂದ. ಆ ಹುಚ್ಚು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಮೊನ್ನಿನ (ಜ.19) ಸಂಚಿಕೆಯಲ್ಲಿ ಪ್ರಕಟವಾದ ‘ಕೇವಲ ಒಬ್ಬ ಶಾಲಾ ಬಾಲಕಿಗಾಗಿ ಮೂರು ವರ್ಷ ಓಡಿದ ರೈಲು’ ಶೀರ್ಷಿಕೆಯ ವಿಶ್ವೇಶ್ವರ ಭಟ್ಟರ ಅಂಕಣ ಬರಹ ಮನಮುಟ್ಟುವಂತಿತ್ತು.
ಸತತ ಒಂದು ತಿಂಗಳಿನಿಂದ ಜಪಾನ್ ಕುರಿತು ಓದುತ್ತಿರುವ ನಾವು, ಅಲ್ಲಿನವರ ಬಹಳಷ್ಟು ಮೌಲ್ಯ ಯುತ ವಿಚಾರಗಳನ್ನು ಅರಿಯುತ್ತಲೇ ಬಂದಿದ್ದೇವೆ. ವಿವಿಧ ಕಾರಣಕ್ಕೆ ವ್ಯವಸ್ಥೆಯನ್ನು ದೂರುವ ನಾವು, ಅದೇ ವ್ಯವಸ್ಥೆಯು ಒಬ್ಬ ಶಾಲಾ ಬಾಲಕಿಗೆ ಇಂಥದೊಂದು ಸೇವೆ ನೀಡಿದ್ದು ನೋಡಿದರೆ ಅದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎನಿಸುತ್ತದೆ.
ಶ್ರೀವತ್ಸ ಜೋಶಿ ಅವರ, ‘ಕೊಟ್ಟಿದ್ದು ಚಿಕ್ಕ ಉಡುಗೊರೆ; ಪ್ರಭಾವಕ್ಕೊಳಗಾಗಿದ್ದು ಇಡೀ ಪ್ರಪಂಚ!’ ಎಂಬ ಅಂಕಣ ಬರಹವೂ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ನಾವು ನೀಡುವ ಮತ್ತು ಪಡೆಯು ವ ಉಡುಗೊರೆಯು ಎಷ್ಟು ಮಹತ್ವದ್ದು ಎಂಬುದನ್ನು ಅತ್ಯದ್ಭುತ ಉದಾಹರಣೆಗಳೊಂದಿಗೆ ವಿವರಿ ಸಿದೆ. ವಿನಾಯಕ ವೆಂ.ಭಟ್ಟರ ‘ಉದಾರಚರಿತರ ಮಹೌದಾರ್ಯವೆಂದರೆ ಇದೇನಾ?’ ಎಂಬ ಅಂಕಣ ಬರಹವೂ ಹೃದ್ಯವಾಗಿತ್ತು.
ಸ್ವತಃ ರಾಮಾಯಣವನ್ನು ರಚಿಸಿದ್ದರೂ ಹನುಮಂತನು ವಾಲ್ಮೀಕಿಗಳ ರಾಮಾಯಣಕ್ಕೆ ಒತ್ತಾಸೆ ಯಾಗಿ ನಿಂತಿದ್ದು ಮತ್ತು ಇನ್ನೊಬ್ಬ ಲೇಖಕರ ‘ನಾಳೆಗೂ ಇರಲಿ ನೀರು’ ಎಂಬ ಕೃತಿಯ ರಚನೆ-ಪ್ರಕಟಣೆ-ಲೋಕಾರ್ಪಣೆಯಲ್ಲಿ ವಿಶ್ವೇಶ್ವರ ಭಟ್ಟರು ಬೆನ್ನೆಲುಬಾಗಿ ನಿಂತಿದ್ದು ಈ ಎರಡು ಮಹೌ ದಾರ್ಯಗಳು ಈ ಬರಹದಲ್ಲಿ ಹೃದಯಂಗಮವಾಗಿ ಮೂಡಿಬಂದಿವೆ.
ಇಂಥ ಹೃದಯವಂತರ ಸಂಖ್ಯೆ ಹೆಚ್ಚಾಗಲಿ. ಯಗಟಿ ರಘು ನಾಡಿಗ್ ಅವರ, ‘ಚಿಣ್ಣರ ಸುಜ್ಞಾನವೂ, ಅಣ್ಣರ ಅಜ್ಞಾನವೂ..!’ ಅಂಕಣಬರಹ ನನ್ನನ್ನು ತುಂಬಾ ಕಾಡಿದ್ದರ ಜತೆಗೆ, ಮಕ್ಕಳಿಂದ ನಾವೆಲ್ಲ ಬದುಕಿನುದ್ದಕ್ಕೂ ಕಲಿಯುವುದು ಬಹಳಷ್ಟಿದೆ ಎನಿಸುವಂತೆ ಮಾಡಿತು. ಬದುಕಿಗೆ ಸ್ಪೂರ್ತಿ ಬೇಕೆಂದು ಏನೆಲ್ಲಾ ಹುಡುಕಹೊರಟ ನಾವುಗಳು, ಮಕ್ಕಳ ಬೆಳವಣಿಗೆಗೆ ಹೇಳಿಕೊಟ್ಟ ನೈತಿಕತೆಯ ಬೇರುಗಳಿಂದ ಸ್ವತಃ ಕಳಚಿಕೊಂಡುಬಿಟ್ಟಿರುತ್ತೇವೆ.
ಆದರೆ, ಅವನ್ನು ನಮಗೆ ನೆನಪಿಸಲೆಂದು ಮುಖಕ್ಕೆ ಲಘುವಾಗಿ ಬಾರಿಸಿದಂತೆ ಹೇಳುವ ಮಕ್ಕಳ ಮಧುರ ಮಾತಿಗೆ ಕಿವಿಯಾಗಬೇಕು ಎಂದೆನಿಸಿತು. ಒಟ್ಟಾರೆಯಾಗಿ ಹೇಳುವುದಾದರೆ, ಈ ನಾಲ್ಕೂ ಅಂಕಣಗಳು ನನಗೆ ತುಂಬಾ ಖುಷಿ ಕೊಟ್ಟು ಭಾನುವಾರವನ್ನು ಇನ್ನಷ್ಟು ಸುಂದರವಾಗಿಸಿದ್ದಂತೂ ದಿಟ.
(ಲೇಖಕರು ಹವ್ಯಾಸಿ ಬರಹಗಾರರು)