Ranjith H Ashwath Column: ಯಾರಿಗೂ ಬೇಡವಾದವೇ ಸ್ಥಳೀಯ ಸಂಸ್ಥೆಗಳು ?

ಅವು ಹೀಗೆ ರಚನೆಯಾದ 3.-4 ದಶಕ ಕಳೆಯುವಷ್ಟರಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ರಾಜಕೀಯ ಪಕ್ಷಗಳೇ ನಿರಾಸಕ್ತಿ ತೋರುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ

Profile Ashok Nayak December 17, 2024
ಅಶ್ವತ್ಥಕಟ್ಟೆ ರಂಜಿತ್‌ ಎಚ್.ಅಶ್ವತ್ಥ ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ ಎಂಬುದು ಮಹಾತ್ಮ ಗಾಂಧಿಯವರ ಗ್ರಹಿಕೆಯಾಗಿತ್ತು. ಈ ಕಾರಣಕ್ಕಾಗಿಯೇ, ‘ಗ್ರಾಮಗಳಿಗೆ ಅಧಿಕಾರ ನೀಡಿ’ ಎಂದು ಅವರು ವಾದಿಸಿದ್ದರು. ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಅಧಿಕಾರದ ವಿಕೇಂದ್ರೀಕರಣ ವಾಗಬೇಕು ಎಂಬುದನ್ನು ಬಲವಾಗಿ ನಂಬಿದ್ದವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ. ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ದೇಶದಲ್ಲಿಟೆಲಿಫೋನ್/ಡಿಜಿಟಲ್ ಕ್ರಾಂತಿಯನ್ನು ಕೈಗೊಂಡಿದ್ದರ ಜತೆಗೆ, ಅಧಿಕಾರ ವಿಕೇಂದ್ರೀಕರಣವೆಂಬ ಅದ್ಭುತ ಕಲ್ಪನೆ ಯೊಂದಿಗೆ ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳು ಸ್ಥಳೀಯ ಮಟ್ಟದಲ್ಲೇ ರೂಪು ಗೊಳ್ಳಬೇಕು ಎನ್ನುವ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳನ್ನು ರಚಿಸಿದರು. ಆದರೆ, ಅವು ಹೀಗೆ ರಚನೆಯಾದ 3.-4 ದಶಕ ಕಳೆಯುವಷ್ಟರಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ರಾಜಕೀಯ ಪಕ್ಷಗಳೇ ನಿರಾಸಕ್ತಿ ತೋರುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ. ಹೌದು, ರಾಜೀವರು ಪ್ರಧಾನಿಯಾದ ಸಮಯದಲ್ಲಿ, ಅಧಿಕಾರ ವಿಕೇಂದ್ರೀಕರಣದ ಮಹದಾಶಯದೊಂದಿಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಪುರಸಭೆ, ನಗರಸಭೆ, ಮಹಾ ನಗರಪಾಲಿಕೆ ಎಂದು ವಿವಿಧ ಹಂತಗಳಲ್ಲಿ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಯಿತು. ಆರಂಭದಲ್ಲಿ ಈ ಎಲ್ಲಾ ಸಂಸ್ಥೆಗಳೂ ತಮ್ಮದೇ ಆದ ರಚನಾತ್ಮಕ ಕಾರ್ಯಗಳನ್ನು ನಡೆಸುತ್ತಾ ಬಂದವು. ಕರ್ನಾಟಕದಲ್ಲಿ ಇದರ ಮುಂದುವರಿದ ಭಾಗವಾಗಿ, ಮಹಿಳೆಯರಿಗೆ ಶೇ.೫೦ರಷ್ಟು ಮೀಸಲನ್ನು ನೀಡುವ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆ ಯರ ಪ್ರಾಬಲ್ಯ ಮತ್ತು ಪ್ರಾತಿನಿಧ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಿಡಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ತಾಂತ್ರಿಕ ಮತ್ತು ಕಾನೂನಾತ್ಮಕ ಕಾರಣ ಗಳನ್ನು ಮುಂದಿಟ್ಟುಕೊಂಡು ಸರಕಾರಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುತ್ತಾ ಬಂದಿವೆ. ಇದರಿಂದಾಗಿ, ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಜನಪ್ರತಿನಿಧಿಗಳ ನಾಯಕತ್ವದಲ್ಲಿ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳು ಅಧಿಕಾರಿ ವರ್ಗದಿಂದ ಮುನ್ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಹಲವರ ಬೇಸರಕ್ಕೆ ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸರಿಯಾದ ಸಮಯಕ್ಕೆ ನಡೆಯದಿರಲು ಕಾರಣ ಮತ್ತು ಅದರಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮೊದಲು, ರಾಜ್ಯದಲ್ಲಿನ ಇವುಗಳ ರಚನಾ-ಸ್ವರೂಪದ ಬಗ್ಗೆ ಕಣ್ಣು ಹಾಯಿಸೋಣ.ಕರ್ನಾಟಕದಲ್ಲಿ 31 ಜಿಲ್ಲಾ ಪಂಚಾಯಿತಿ, 226 ತಾಲೂಕು ಪಂಚಾಯಿತಿ ಮತ್ತು 6022 ಗ್ರಾಮ ಪಂಚಾಯಿತಿಗಳಿವೆ.ಜತೆಗೆ 10 ಮಹಾನಗರ ಪಾಲಿಕೆ, 61 ನಗರಸಭೆ, 123 ಪುರಸಭೆ, 117 ಪಟ್ಟಣ ಪಂಚಾಯಿತಿಗಳಿವೆ. ಈ ಪೈಕಿ ಗ್ರಾಮ ಪಂಚಾಯಿತಿ ಸೇರಿದಂತೆ ಕೆಲ ನಗರಸಭೆ, ಪುರಸಭೆಗಳಿಗೆ ಚುನಾವಣೆ ನಡೆದಿವೆ. ಆದರೆ 2016ರಿಂದ ಈಚೆಗೆ, ಅಂದರೆ ಕಳೆದ 8 ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲ. ಇದರೊಂದಿಗೆ, ಬೆಂಗಳೂರು ಮಹಾನಗರ ಪಾಲಿಕೆಯಂಥ (ಬಿಬಿಎಂಪಿ) ಹಲವು ಮಹಾನಗರ ಪಾಲಿಕೆ ಗಳಿಗೆ ಚುನಾವಣೆ ನಡೆಸದೇ, ಆಡಳಿತಾಧಿಕಾರಿಗಳು ಅವುಗಳ ‘ಶೋ ರನ್’ ಮಾಡುವಂತಾಗಿದೆ. ಚುನಾವಣೆ ನಡೆಸದೇ ಆಡಳಿತಾಧಿಕಾರಿಗಳನ್ನು ನೇಮಿಸಿರುವ ವಿಷಯಕ್ಕೆ ಸಂಬಂಧಿಸಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾದ ಸಿಎಜಿ ವರದಿಯಲ್ಲೂ ಪ್ರಸ್ತಾಪವಾಗಿದೆ. ಹೈಕೋರ್ಟ್‌ನ ಸ್ಪಷ್ಟ ಸೂಚನೆಯ ಹೊರತಾಗಿಯೂ ರಾಜ್ಯ ಸರಕಾರವು ಚುನಾವಣೆಗಳನ್ನು ನಡೆಸಲು ಮನಸ್ಸು ಮಾಡುತ್ತಿಲ್ಲ. ಈ ಹಿಂದಿನ ಬಿಜೆಪಿ ಸರಕಾರವು, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು, ಕರ್ನಾಟಕ ಪಂಚಾಯತ್ ರಾಜ್ ವಿಕೇಂದ್ರೀಕರಣ ಆಯೋಗವನ್ನು ರಚಿಸಿ, ಅದರಿಂದ ವರದಿ ಪಡೆದು ವಿಕೇಂದ್ರೀಕರಣಗೊಳಿಸಿ ಚುನಾವಣೆ ನಡೆಸಲು ತೀರ್ಮಾನಿಸಿತ್ತು. ಆದರೆ ಈ ಆಯೋಗವನ್ನು ರಚಿಸಿ 2 ವರ್ಷ ಕಳೆದರೂ ಈವರೆಗೆ ನಿಲುವು ಅಂತಿಮಗೊಂಡಿಲ್ಲ. ಸಿಎಜಿ ತನ್ನ ವರದಿ ಯಲ್ಲಿ, ಈ ಹಿಂದಿನ ಬಿಜೆಪಿ ಸರಕಾರಕ್ಕೆ ಹೈಕೋರ್ಟ್ ವಿಕೇಂದ್ರೀಕರಣ ಹಾಗೂ ಮೀಸಲು ಕಲ್ಪಿಸಿ ಮೇ, 2023ರೊಳಗೆ ಪೂರ್ಣಗೊಳಿಸಬೇಕು ಎನ್ನುವ ಸೂಚನೆ ನೀಡಿ ಒಂದು ವರ್ಷ ಕಳೆದರೂ ವಿವಿಧ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸುತ್ತಿಲ್ಲ ಎನ್ನುವ ನೇರ ಅಸಮಾಧಾನವನ್ನು ಹೊರ ಹಾಕಿದೆ. ಇನ್ನು, ಸಿಎಜಿ ವರದಿಯಲ್ಲಿರುವ ಮತ್ತೊಂದು ಪ್ರಮುಖ ವಿಷಯವೆಂದರೆ, ಅನುದಾನ ಹಂಚಿಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದಷ್ಟೇ ಅಲ್ಲದೆ, ಇರುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಲಾಗುತ್ತಿಲ್ಲ ಎಂಬುದು. ಇದರೊಂದಿಗೆ, ಅನುದಾನ ಹಂಚಿಕೆ ಹಾಗೂ ಬಳಕೆಯ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕುಎನ್ನುವ ಶಿಫಾರಸನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗೆ ನೋಡಿದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ವಿಷಯದಲ್ಲಿ ಸದ್ಯಕ್ಕೆ ಯಾವುದೇ ಪಕ್ಷಕ್ಕೆಪೂರ್ಣಮನಸ್ಸಿಲ್ಲ. ಅದರಲ್ಲೂ, ಶಾಸಕರಿಗೆ ಈ ವಿಷಯದಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ ಎನ್ನುವುದು ಸ್ಪಷ್ಟ. ಏಕೆಂದರೆ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಒಮ್ಮೆ ಪೂರ್ಣಗೊಂಡರೆ, ಅಭಿವೃದ್ಧಿ ಸಂಬಂಧಿತ ಅನುದಾನವು ಶಾಸಕರಿಂದ ಸ್ಥಳೀಯ ಸಂಸ್ಥೆಗಳಿಗೆ ಹೋಗಲಿದೆ. ಇದರೊಂದಿಗೆ ಹಲವು ಅಧಿಕಾರಗಳು ಶಾಸಕರಿಂದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ವರ್ಗಾವಣೆಯಾಗಲಿದೆ. ಆದ್ದರಿಂದ ಸಾಧ್ಯವಾದಷ್ಟು ದಿನ ಚುನಾವಣೆಗಳನ್ನು ಮುಂದೂಡುವುದೇ ಸೂಕ್ತ ಎನ್ನುವ ಲೆಕ್ಕಾಚಾರದಲ್ಲಿ ಶಾಸಕರಿದ್ದಾರೆ. ಇದರೊಂದಿಗೆ ಕಳೆದ 8-10 ವರ್ಷಗಳಿಂದ ಚುನಾವಣೆ ನಡೆಯದೇ ಇರುವುದರಿಂದ, ಸಹಜ ವಾಗಿಯೇ ಆಕಾಂಕ್ಷಿಗಳ ಸಂಖ್ಯೆಯು ಹನುಮಂತನ ಬಾಲದಂತೆ ಬೆಳೆದಿದೆ. ಈ ಹಂತದಲ್ಲಿ ಚುನಾವಣೆ ನಡೆಸಲು ಮುಂದಾದರೆ, ಒಂದೊಂದು ವಾರ್ಡ್‌ಗೆ ಒಂದೊಂದು ಪಕ್ಷದಿಂದ 10 ಆಕಾಂಕ್ಷಿಗಳು ಇರುತ್ತಾರೆ. ಈ ಪೈಕಿ ಯಾರಿಗೆ ಟಿಕೆಟ್ ಅಂತಿಮಗೊಳಿಸಿದರೂ, ಉಳಿದ 9 ಮಂದಿ ಬಂಡಾಯದ ಬಾವುಟ ಹಾರಿಸುವ ಸಾಧ್ಯತೆಯಿದೆ. ಆದ್ದರಿಂದ ಮೌನವಾಗಿರುವುದೇ ಲೇಸು ಎನ್ನುವ ಲೆಕ್ಕಾಚಾರದಲ್ಲಿ ಬಹುತೇಕ ಶಾಸಕರು ಇರುವುದು ಈ ಪರಿಸ್ಥಿತಿಗೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಇದಿಷ್ಟೇ ಅಲ್ಲದೆ, ರಾಜ್ಯದ ರಾಜಧಾನಿ ಬೆಂಗಳೂರಿನ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೇ 5 ವರ್ಷ ಕಳೆದಿವೆ. ಬಿಬಿಎಂಪಿ ಜನಪ್ರತಿನಿಧಿಗಳ ಅವಧಿ 2019ಕ್ಕೆ ಮುಗಿದ ಬಳಿಕ ಆಡಳಿತಾಧಿಕಾರಿಗಳ ನೇಮಕವಾಯಿತು.ಅಲ್ಲಿಂದ ಇಲ್ಲಿಯವರೆಗೆ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸರಕಾರಗಳು ಚುನಾವಣೆ ನಡೆಸುವ ವಿಷಯದಲ್ಲಿ ಮನಸ್ಸು ಮಾಡಲಿಲ್ಲ. ಇದರ ಹಿಂದಿರುವುದು ತಾಂತ್ರಿಕ ಕಾರಣಕ್ಕಿಂತ ರಾಜಕೀಯ ಕಾರಣವೆಂದರೆ ತಪ್ಪಾಗುವುದಿಲ್ಲ. ಏಕೆಂದರೆ, ಬೆಂಗಳೂರಿನಲ್ಲಿರುವ 28 ಶಾಸಕರು ಪಡೆಯುವ ವಾರ್ಷಿಕ ಅನುದಾನಕ್ಕಿಂತ 8-10 ಪಟ್ಟು ಅನುದಾನ ವನ್ನು ಒಬ್ಬ ವಾರ್ಡ್ ಸದಸ್ಯರು ಪಡೆಯುತ್ತಾರೆ. ಆದರೀಗ ವಾರ್ಡ್ ಸದಸ್ಯರು ಇಲ್ಲ ಎನ್ನುವ ಕಾರಣಕ್ಕೆ ಶಾಸಕರೇ ಇಡೀ ಕ್ಷೇತ್ರವನ್ನು ನಿರ್ವಹಿಸುತ್ತಿದ್ದಾರೆ. ಒಮ್ಮೆ ಚುನಾವಣೆ ನಡೆದರೆ, ವಾರ್ಡ್ ಅಭಿವೃದ್ಧಿಯ ಅನುದಾನವು ಸಂಪೂರ್ಣವಾಗಿ ಕಾರ್ಪೊರೇಟರ್‌ಗಳಿಗೆ ಸಿಗಲಿದೆ. ಆದ್ದರಿಂದ ಬಿಬಿಎಂಪಿಯ ಚುನಾವಣೆಯನ್ನು ಸಾಧ್ಯವಾದಷ್ಟು ಮುಂದೂಡಿ ಎಂಬ ಒತ್ತಡವನ್ನು ಪಕ್ಷಾತೀತವಾಗಿ 28 ಶಾಸಕರು ತಮ್ಮ ಪಕ್ಷದ ನಾಯಕರ ಮೇಲೆ ಹೇರುತ್ತಿದ್ದಾರೆ. ಹಾಗೆ ನೋಡಿದರೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಸರಿಯಾದ ಸಮಯದಲ್ಲಿನಡೆದಿದ್ದರೂ ಮುಂದಿನ ವರ್ಷಕ್ಕೆ 3ನೇ ಬಾರಿಗೆ ಚುನಾವಣೆ ನಡೆಯಬೇಕಿತ್ತು. ಆದರೆ 2016ರ ಬಳಿಕ ಚುನಾವಣೆ ನಡೆಯದ ಕಾರಣದಿಂದಾಗಿ, ಸ್ಥಳೀಯ ಸಂಸ್ಥೆಗಳು ಈಗಲೂ ಆಡಳಿತಾಧಿಕಾರಿಗಳ ನೇತೃತ್ವದಲ್ಲೇ ನಡೆಯುತ್ತಿವೆ. ರಾಜಕೀಯವಾಗಿ ನೋಡಿದರೆ, ಮುಂದಿನ ಕೆಲವರ್ಷ ಯಾವುದೇ ಚುನಾವಣೆ ಇಲ್ಲದಿರುವುದರಿಂದ, ಈ ಹಂತದಲ್ಲಿ ಜಿಲ್ಲಾ, ತಾಲೂಕು ಹಾಗೂ ಮಹಾನಗರಪಾಲಿಕೆಯ ಚುನಾವಣೆಗಳು ನಡೆದು, ಅಸಮಾಧಾನಿತರು ಬಂಡಾಯ ವೆದ್ದರೂ, ವಿಧಾನಸಭಾ ಅಥವಾ ಲೋಕಸಭಾ ಚುನಾವಣೆ ವೇಳೆ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ ಇದೇ ಇನ್ನೊಂದೂವರೆ ವರ್ಷದ ಬಳಿಕ ನಡೆದರೆ, ವಿಧಾನಸಭಾ ಚುನಾವಣೆ ಯಲ್ಲಿ ಅದರ ನೇರಹೊಡೆತ ಬೀಳುವುದು ನಿಶ್ಚಿತ. ಸ್ಥಳೀಯ ಸಂಸ್ಥೆಗಳು ಅಧಿಕಾರ ವಿಕೇಂದ್ರೀಕರಣದ ವಿಷಯದಲ್ಲಿ ಮಾತ್ರವಲ್ಲದೆ ‘ರಾಜಕಾರಣ’ ದ ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನಾಯಕತ್ವವನ್ನು ಬೆಳೆಸುವುದಕ್ಕೂ ಪೂರಕವಾಗಿವೆ. ಆದರೆ, ಕಾನೂನಾತ್ಮಕ ಮತ್ತು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸದಿರುವುದರಿಂದ ಸ್ಥಳೀಯ ಸಂಸ್ಥೆಗಳ ಆಶಯಕ್ಕೆ ಪೆಟ್ಟು ಬೀಳುತ್ತಿದೆ. ಈ ಚುನಾವಣೆಗಳ ಅನಿರ್ದಿಷ್ಟಾವಧಿ ಮುಂದೂಡಿಕೆಗೆ ಯಾವುದೋ ಒಂದೇ ರಾಜಕೀಯ ಪಕ್ಷವು ಹೊಣೆಗಾರನಲ್ಲ. ಮೊದಲೇ ಉಲ್ಲೇಖಿಸಿದಂತೆ, ಸದ್ಯಕ್ಕೆ ಮೂರೂ ಪಕ್ಷದ ರಾಜ್ಯಮಟ್ಟದ ನಾಯಕರಿಗೂ ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿಯಿಲ್ಲ. ಸ್ವಹಿತಾಸಕ್ತಿಯ ಕಾರಣಕ್ಕೆ ನಾಯಕರುಗಳು, ‘ಈ ಸ್ಥಳೀಯ ಸಂಸ್ಥೆಗಳನ್ನು ಜನಪ್ರತಿನಿಧಿಗಳ ಬದಲಿಗೆ ಅಧಿಕಾರಿಗಳಿಂದಲೇ ನಡೆಸಬೇಕು’ ಎಂಬ ಮನಸ್ಥಿತಿಯಲ್ಲಿರುವುದು ಸ್ಪಷ್ಟ. ಅವರು ಇನ್ನಾದರೂ ಈ ಮನಸ್ಥಿತಿ ಯಿಂದ ಹೊರಬಂದು, ಚುನಾವಣೆಗಳನ್ನು ನಡೆಸುವುದಕ್ಕೆ ಆಲೋಚಿಸಬೇಕು. ಇರುವ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಂಡು ಚುನಾವಣೆ ನಡೆಸಲು ಸರಕಾರ ಮುಂದಾಗದಿದ್ದರೆ, ಇದು ಕಾಲಾಂತರದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ! ಇದನ್ನೂ ಓದಿ: Ranjith H Ashwath Column: ಪ್ರತಿಷ್ಠೆಯೇ ಈ ಉಪಸಮರದ ಮೂಲ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ