Ravi Hunj Column: ನಿಮಗೆ ಗೊತ್ತಾ, ಆಡಳಿತದ ನೀಲನಕಾಶೆಯ ಚೌಕಟ್ಟೇ ವೇದಗಳು !
ಇವೆರಡೂ ಇಲ್ಲಿನ ಆದಿನೆಲಮೂಲ ಸಂಸ್ಕೃತಿಯ ಆರಾಧನೆಗಳು ಎನ್ನಬಹುದು. ಈ ಸಂಸ್ಕೃತಿಯು ಅದೆಷ್ಟು ಶತಮಾನಗಳ ಪೂರ್ವದಿಂದಲೂ ಇಲ್ಲಿ ಆಚರಣೆಯಲ್ಲಿದ್ದಿತು ಎಂಬುದು ಇಂದಿಗೂ ನಿಗೂಢ!
Source : Vishwavani Daily News Paper
ಬಸವ ಮಂಟಪ
ರವಿ ಹಂಜ್
ಸಿಂಧೂ ನಾಗರಿಕತೆಯಲ್ಲಿದ್ದ ಲಿಂಗಾರಾಧನೆ, ಸರ್ಪಾರಾಧನೆಯಂಥ ಆಚರಣೆಗಳು ಮಾನವ ಸಹಜ ಸ್ವಭಾವಗಳಾದ ಕೃತಜ್ಞತೆ, ಭಯ, ಧನ್ಯತೆ, ಅರ್ಪಣಾ ಭಾವನೆಗಳನ್ನು ವ್ಯಕ್ತಪಡಿಸುವ ಆಚರಣೆ ಗಳಾಗಿದ್ದವು. ಲಿಂಗಾರಾಧನೆಯನ್ನು ಹುಟ್ಟಿನ ಪ್ರತೀಕವಾಗಿ, ಸರ್ಪಾರಾಧನೆಯನ್ನು ಸಾವಿನ ಪ್ರತೀಕವಾಗಿ ಆಚರಿಸುತ್ತಿರಬಹುದು ಎನಿಸುತ್ತದೆ.
ಹಾಗಾಗಿಯೇ ಲಿಂಗರೂಪಿ ಶಿವನೇ ಸೃಷ್ಟಿಕರ್ತನು ಎಂದು ಆಗಮಗಳು ಹೇಳುತ್ತವೆ. ಇದಕ್ಕೆ ಪುರಾವೆ ಯಾಗಿ ಇಲ್ಲಿನ ಉತ್ಖನನದಲ್ಲಿ ಲಿಂಗಗಳು ಮತ್ತು ಸರ್ಪದ ಚಿಹ್ನೆಯ ಪಳೆಯುಳಿಕೆಗಳು ಸಿಕ್ಕಿವೆ. ಹಾಗಾಗಿ ಇವೆರಡೂ ಇಲ್ಲಿನ ಆದಿನೆಲಮೂಲ ಸಂಸ್ಕೃತಿಯ ಆರಾಧನೆಗಳು ಎನ್ನಬಹುದು. ಈ ಸಂಸ್ಕೃತಿಯು ಅದೆಷ್ಟು ಶತಮಾನಗಳ ಪೂರ್ವದಿಂದಲೂ ಇಲ್ಲಿ ಆಚರಣೆಯಲ್ಲಿದ್ದಿತು ಎಂಬುದು ಇಂದಿಗೂ ನಿಗೂಢ!
ಈ ಕಾರಣಕ್ಕಾಗಿಯೇ ವೀರಶೈವದ ರೇಣುಕರು ಯುಗಯುಗಗಳ ಹಿಂದೆ ಲಿಂಗದಿಂದ ಉದ್ಭವ ವಾಗಿದ್ದರು ಎನ್ನುವ ಸಾಂಕೇತಿಕ ನಂಬಿಕೆಯಿರುವುದು. ಈ ಸಾಂಕೇತಿಕ ಉಪಮೆ ಯಾನೆ ಕಾವ್ಯಾ ಲಂಕಾರವನ್ನು ಕನ್ನಡ ಪಂಡಿತರು ಮಾನವಿಕ ಇತಿಹಾಸದ ಸಂಶೋಧನೆಯಲ್ಲಿ ತೊಡಗಿ ಉಪಮೆ ಅಲಂಕಾರಗಳನ್ನು ಬಿಟ್ಟು ‘ಕಲ್ಲಿನಿಂದ ಹುಟ್ಟಿದರೆ?’ ಎಂದು ತಮ್ಮ ಪೂರ್ವಗ್ರಹ ಸಿದ್ಧಾಂತ ವೈಷಮ್ಯಕ್ಕೆ ರೂಪ ಕೊಟ್ಟು ಅಧ್ವಾನಗೊಳಿಸಿದ್ದಾರೆ.
ಇದೇ ರೀತಿಯ ಅಧ್ವಾನ ಕೇವಲ ವೀರಶೈವಕ್ಕಲ್ಲದೆ ಭಾರತದ ಇತಿಹಾಸಕ್ಕೆ ಅನ್ವಯಿಸಿಬಿಟ್ಟಿದೆ, ಇರಲಿ. ಒಟ್ಟಾರೆ ಹನಿಹನಿಗೂಡಿ ಹಳ್ಳ ಎಂಬಂತೆ ಈ ಆರಾಧನೆಗಳು ಮುಂದೆ ಧರ್ಮಗಳಾಗಿ ವಿಕಾಸ ಗೊಂಡವು. ಸಾವಿರ ವರ್ಷಗಳ ನಂತರ ಬಂದ ಆರ್ಯರು ಕೂಡಾ ಈ ಆರಾಧನೆಗಳನ್ನು ತಾವೂ ಅಳವಡಿಸಿಕೊಂಡು, ಇಲ್ಲಿನ ಮೂಲನಿವಾಸಿಗಳೊಟ್ಟಿಗೆ ಸೇರಿ ವೇದಗಳನ್ನು ಪ್ರಕೃತಿ ಯಾರಾ ಧನೆಯ ಚೌಕಟ್ಟುಗಳಾಗಿ ರಚಿಸಿದರು.
ವೇದಗಳ ರಚನೆಗೆ ಮುನ್ನ ಪ್ರಕೃತಿ ಯಾರಾಧನೆಯನ್ನು ವಿಸ್ತೃತವಾಗಿ ಆಕಾಶ, ವರುಣ, ಅಗ್ನಿ, ವಾಯು ಎಂದರು. ನಂತರ ಈ ಶಕ್ತಿಗಳ ಆರಾಧನೆಗೆ ನಿಯಮಗಳನ್ನು ಸೃಷ್ಟಿಸಿದರು. ಸಿಂಧೂ ನದಿ ನಾಗರಿಕತೆಯ ಮೊಹರುಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಕನ್ನಡತಿ ರೇಖಾ ರಾವ್ ಅವರ ‘ದಿ ಡಿಕ್ಷನರಿ ಆ- ಇಂಡಸ್ ಸಿಂಬಲ್ಸ’, ‘ದಿ ಡೆಪಿಕ್ಷನ್ ಆಫ್ ವೇದಿಕ್ ಪ್ರೀಸ್ಟ್ಸ್ ಇನ್ ಇಂಡಸ್ ಸೀಲ್ಸ್’ ಪುಸ್ತಕಗಳನ್ನು ಓದಬಹುದು.
ಇವರ ಸಂಶೋಧನೆಗಳು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತವೆ. ಈ ಆಚರಣೆಗಳು ಅಂದು ಒಂದು ಧರ್ಮವಾಗಿರದೇ ಕೇವಲ ಸೃಷ್ಟಿ ಯಾ ಪ್ರಕೃತಿಯಾರಾಧನೆಯ ಆಚರಣೆಗಳಾಗಿದ್ದವು ಎಂದು ಇತಿಹಾಸಜ್ಞರು ಸಂದೇಹ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕೃಷಿಯಲ್ಲಿ ತೊಡಗಿದ್ದ ಆರ್ಯ ರನ್ನೂ ಒಳಗೊಂಡ ಅಂದಿನ ಜನಾಂಗದವರು ಕೃಷಿಗೆ ಪೂರಕವಾದ ಮಳೆ, ಪ್ರಕೃತಿ, ಅಗ್ನಿಗಳ ಆರಾಧಕರಾಗುತ್ತಾ ವೇದಗಳನ್ನು ಬಹುಮುಖ್ಯವಾಗಿ ಪ್ರಕೃತಿಯಾರಾಧನೆಯಾಗಿ ಸೃಷ್ಟಿಸಿದರೆಂದು ಪಂಡಿತ್ ನೆಹರು ಕೂಡಾ ತಮ್ಮ ‘ದಿ ಡಿಸ್ಕವರಿ ಆಫ್ ಇಂಡಿಯಾ’ ಕೃತಿಯಲ್ಲಿ ಅಭಿಪ್ರಾಯಿಸಿದ್ದಾರೆ.
ವೇದಗಳ ಮೂಲ ಕ್ರಿಸ್ತಪೂರ್ವ ೨೫೦೦ ಎಂಬ ವಾದವಿದ್ದರೂ, ಚಾರಿತ್ರಿಕವಾಗಿ ಕ್ರಿಸ್ತಪೂರ್ವ ೧೫೦೦ ಎನ್ನಲಾಗಿದೆ. ಅಂದರೆ ಆರ್ಯರು ಭಾರತಕ್ಕೆ ಆಗಮಿಸಿದ ಕಾಲದಲ್ಲಿ ವೇದಗಳು ರಚಿತವಾದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವೇದಗಳು ರಚಿತವಾಗಿದ್ದು ಆರ್ಯರು ಭಾರತಕ್ಕೆ ಬಂದ ಕಾಲಘಟ್ಟದಂದೇ ಹೊರತು ಆರ್ಯರು ವೇದಗಳನ್ನು ರಚಿಸಿದರೆಂದಲ್ಲ. ಪ್ರಕೃತಿ, ಲಿಂಗ ಮತ್ತು ಜೀವಾರಾಧನೆ ವೇದಗಳ ಮೂಲವಾಗಿದ್ದು ಅದಕ್ಕೆ ಸಾಮಾಜಿಕ ಸೂತ್ರ, ಶಾಸ್ತ್ರ, ಧಾರ್ಮಿಕತೆಯ ಕಟ್ಟಳೆಗಳನ್ನು ಕಾಲಕಾಲಕ್ಕೆ ಸೇರಿಸಲಾಗಿದೆಯೆಂದು ತಿಳಿದುಬರುತ್ತದೆ.
ಪ್ರಕೃತಿ ಯಾರಾಧನೆಯ ಮಾನವ ಸಹಜ ಭಾವನೆಗಳಿಗೆ ಮೂಲನಿವಾಸಿಗಳೊಟ್ಟಿಗೆ ಆರ್ಯರೂ ಸೇರಿ ಒಂದು ನಿಯಮಬದ್ಧ ಆಚರಣೆಯಾಗಿಸುವ ಉದ್ದೇಶದಿಂದ ಮೊದಲಿಗೆ ಋಗ್ವೇದ ರೂಪಿಸಿದ್ದರು ಎನ್ನಲಾಗಿದೆ. ಆದರೆ ಋಗ್ವೇದದ ರಚನೆಯನ್ನು ಆರ್ಯರಿಗಿಂತ ಮೊದಲೇ ಇಲ್ಲಿನ ಮೂಲ ನಿವಾಸಿ ಗಳು ಆರಂಭಿಸಿದ್ದರು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಮೈಕೆಲ್ ವಿಟ್ಜೆಲ್ ಮತ್ತು ಮ್ಯಾಲರಿ ಜೆ.ಬ್ಲಾಚ್ ಅವರ ಸಂಶೋಧನೆಗಳು ತಿಳಿಸುತ್ತವೆ.
ಹಾಗಾಗಿ ವೇದಗಳು ಕೇವಲ ಆರ್ಯರ ಆವಿಷ್ಕಾರವಲ್ಲ. ವೇದಗಳ ಬುನಾದಿಯನ್ನು ಹಾಕಿದವರು ಭಾರತದ ಮೂಲನಿವಾಸಿಗಳು. ಇದಕ್ಕೆ ಪೂರಕವಾಗಿ ಋಗ್ವೇದದಲ್ಲಿನ ಕುಲಾಯ (ಗೂಡು), ಕುಲ್ಪ (ಗುಲ್ಬ), ದಂಡ, ಕುಳ (ಇಳಿಜಾರು), ಬಿಲ, ಖಲ (ಕಣ) ಎಂಬ ಪದಗಳನ್ನು ಹಾರ್ವರ್ಡಿಗರು ಉದಾ ಹರಿಸುತ್ತಾರೆ. ಋಗ್ವೇದದ ಈ ಪದಗಳೆಲ್ಲವೂ ಕನ್ನಡ ಪದಗಳಾಗಿವೆ ಎಂಬುದು ಗಮನಾರ್ಹ. ಹೀಗೆ ವೇದಗಳು ಅಪ್ಪಟ ನೆಲಮೂಲ ಸಂಸ್ಕೃತಿಯ ಭಾಗವಾಗಿದ್ದವು ಎಂದು ಸಾಬೀತಾಗುತ್ತದೆ.
ಮುಂದೆ ಈ ಆಚರಣೆಗಳು ನಿಯಮಬದ್ಧವಾಗಿ ಪರಿಷ್ಕೃತಗೊಳ್ಳುತ್ತಾ ಇನ್ನೂ ಹೆಚ್ಚಿನ ಆರಾಧನೆ ಗಳನ್ನು ಸಾಮಾಜಿಕ ವಿಕಾಸಕ್ಕೆ ತಕ್ಕಂತೆ ಋಗ್ವೇದದಿಂದ ಇನ್ನಿತರೆ ವೇದಗಳಿಗೆ ವಿಸ್ತೃತಗೊಂಡವು.
ಕ್ರಮೇಣ ವೇದಗಳು ಅಗ್ನಿ (ಋಗ್ವೇದ), ವಾಯು (ಯಜುರ್ವೇದ) ಮತ್ತು ಸೂರ್ಯ (ಸಾಮ/ಸಾಮಾನ್) ರಿಗೆ ಜೋಡಿಸಲ್ಪಟ್ಟವು. ಮುಂದೆ ಸಾಮಾಜಿಕ ಕಟ್ಟಳೆಗಳನ್ನು ಸೇರಿಸುತ್ತ, ಅಧ್ಯಾತ್ಮ ಮುಂಚೂಣಿಗೆ ಬಂದ ಕಾಲಕ್ಕೆ ವೇದಗಳ ಅಂತ್ಯದಲ್ಲಿ ಉಪನಿಷತ್ತುಗಳು ವೇದಾಂತವಾಗಿ ಸೇರಿಸ ಲ್ಪಟ್ಟವು.
ವೇದಗಳ ಈ ಪರಿಷ್ಕರಣೆಯು ಯಾವುದೇ ಒಂದು ವ್ಯವಸ್ಥೆಯು ರೂಪುಗೊಳ್ಳುವ ಸಾಮಾನ್ಯ ಪ್ರಕ್ರಿಯೆಯ ಸ್ವರೂಪವಾಗಿದ್ದಿತು. ಆ ಪ್ರಕ್ರಿಯೆ ಯಾವುದೇ ಒಂದು ಉದ್ಯೋಗ, ಯೋಜನೆ, ಸಂಸ್ಥೆ,
ಗ್ರಂಥರಚನೆ, ಪಟ್ಟಣ ನಿರ್ಮಾಣ ಯಾ ಆಧುನಿಕ ದೇಶದ ಸಂವಿಧಾನಗಳ ರಚನೆಯ ಪ್ರಕ್ರಿಯೆ ಕೂಡಾ! ಒಂದು ನೀಲನಕ್ಷೆಯ ಚೌಕಟ್ಟು ಎಲ್ಲಾ ಯೋಜನೆಗಳಿಗೂ ಅತ್ಯವಶ್ಯಕವೆಂಬಂತೆ ಅಂದಿನ
ಆಚರಣೆಗಳನ್ನು ಕ್ರಮಬದ್ಧಗೊಳಿಸಲು ಸೃಷ್ಟಿಯಾದ ನೀಲನಕಾಶೆಯ ಚೌಕಟ್ಟೇ ವೇದಗಳು. ಆ ಚೌಕಟ್ಟು ಒಂದು ನಿರ್ದಿಷ್ಟ ನಿಯೋಜಿತ ಯೋಜನೆಗೆ ಮಾತ್ರ ಉಪಯೋಗವೇ ಹೊರತು, ಎಲ್ಲಾ ಯೋಜನೆಗಳಿಗೂ ಅಲ್ಲ. ಹಾಗಾಗಿಯೇ ಈ ಚೌಕಟ್ಟುಗಳು ಕಾಲಕಾಲಕ್ಕೆ ತಿದ್ದುಪಡಿಗೊಳಗಾಗುತ್ತ ಆದಿಯಿಂದಲೂ ಜೀವಂತ ಜಂಗಮ (ಚಲನಶೀಲ) ದಸ್ತಾವೇಜುಗಳಾಗಿದ್ದುದು!
ಸಿಂಧೂ ನಾಗರಿಕತೆಯ ಮೂಲನಿವಾಸಿಗಳೊಂದಿಗೆ (ಇಂದು ದ್ರಾವಿಡರೆನ್ನುವ) ಹೊಸ ವಲಸಿಗರಾದ ಆರ್ಯರು ಸಮ್ಮಿಳಿತಗೊಳ್ಳುತ್ತಾ ಹಿಂದೂ ಸಂಸ್ಕೃತಿ ರೂಪುಗೊಂಡಿತು. ಇತಿಹಾಸದುದ್ದಕ್ಕೂ ಈ ರೀತಿ ವಲಸೆ ಬಂದ ಇರಾನಿಯನ್ನರು, ಗ್ರೀಕರು, ಹೂಣರು, ಬಾಕಿಯನ್ನರು, ಇಸ್ಲಾಂ-ಪೂರ್ವ ತುರು ಕರು, ಯಹೂದಿಗಳು, ಅಗ್ನಿ ಆರಾಧಕರನ್ನೆ ತನ್ನವರನ್ನಾಗಿಸಿಕೊಳ್ಳುತ್ತಾ ಹಿಂದೂ ಸಂಸ್ಕೃತಿ ಮತ್ತು ಜನಾಂಗವು ವಿಕಾಸಗೊಳ್ಳುತ್ತಾ ಸಾಗಿತು. ಹಾಗಾಗಿಯೇ ನಮ್ಮ ವಂಶವಾಹಿಗಳು ಈ ಎಲ್ಲಾ
ಕಲಬೆರಕೆಯನ್ನು ಹೊಂದಿದೆ. ಅನುಮಾನವಿದ್ದವರು ತಮ್ಮ ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳ ಬಹುದು!
ಒಂದು ಕಾಲಘಟ್ಟದಲ್ಲಿ ಇವರ ನಡುವೆ ಪರಸ್ಪರ ಗುಂಪುಗಾರಿಕೆ ಹುಟ್ಟಿ ಅಭದ್ರತೆಯನ್ನು ಹುಟ್ಟು ಹಾಕಿರಬಹುದು. ಆ ಅಭದ್ರತೆಯ ಕಾರಣವಾಗಿಯೋ ಭದ್ರತೆಯ ದೃಷ್ಟಿಯಿಂದಲೋ ಅಥವಾ ತಮ್ಮ ಅಸ್ಮಿತೆಯನ್ನು ಗುರುತಿಸುವ ಕಾರಣದಿಂದಲೋ ಆರ್ಯರೆಂದು ಮತ್ತು ಅನಾರ್ಯರೆಂದು ಗುರುತಿಸಿಕೊಳ್ಳಲಾರಂಭಿಸಿದರು ಎಂದು ಸಾಕಷ್ಟು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ಆದರೆ ಆರ್ಯ ಪದವು ಕೇವಲ ಜನಾಂಗೀಯ ಸೂಚಕಪದವಾಗಿರಲಿಲ್ಲ.
ಆರ್ಯ ಪದವು, ಆರ್ಯ/ಅನಾರ್ಯರೀರ್ವರನ್ನೂ ಗೌರವಪೂರ್ವಕವಾಗಿ ( Noble ಎಂಬರ್ಥ ದಲ್ಲಿ) ಸಂಬೋಧಿಸಲು ಉಪಯೋಗಿಸಲ್ಪಡುತ್ತಿತ್ತು. ಈ ಗೌರವಸೂಚಕ ‘ಮಿಸ್ಟರ್/ಮಿಸ್’ ಎನ್ನು ವಂಥ ‘ಆರ್ಯ/ಆರ್ಯೆ’ ಪದವು ಒಂದು ಜನಾಂಗವನ್ನು ಗುರುತಿಸುವ ಪದವೂ ಎನಿಸಿ ಮುಂದೆ ಆರ್ಯಪದ ಹೆಚ್ಚಾಗಿ ಜನಾಂಗೀಯ ಪದವಾಗಿಬಿಟ್ಟಿತೇ ಹೊರತು ನಿಜಾರ್ಥದಲ್ಲಿ ಜನಾಂಗೀಯ ಪದವಾಗಿ ಅಲ್ಲವೇ ಅಲ್ಲ.
ಕ್ರಿ.ಶ.7ನೇ ಶತಮಾನದ ಭಾರತದಲ್ಲಿ ಪ್ರಯಾಣಿಸಿದ್ದ ಚೀನೀ ಯಾತ್ರಿಕ ಐ ತ್ಸಿಂಗ್ “ಈ ದೇಶವನ್ನು ಹಿಂದೂ (ಚೀನಿ ಭಾಷೆಯಲ್ಲಿ ಸಿನ್ಹ್ ದು) ಎಂದು ಕರೆಯುತ್ತಾರಾದರೂ ಅದು ಸರಿಯಾದ ಪದವಲ್ಲ. ಈ ದೇಶವನ್ನು ‘ಆರ್ಯದೇಶ’ ಎಂದು ಕರೆಯಬೇಕು" ಎನ್ನುತ್ತಾನೆ. ಆರ್ಯಧರ್ಮ ಪಾಲಕರ ನಾಡಾದ ಇದನ್ನು ಆರ್ಯದೇಶ ಎಂದು ಕರೆಯುವುದು ಹೆಚ್ಚು ಸೂಕ್ತ ಎನ್ನುತ್ತಾನೆ. ಅಂದರೆ ಹಿಂದೂ ಎಂಬುದು ಒಂದು ಧರ್ಮದ ಕುರಿತಾದ ಪದವಾಗಿ ಬಳಕೆಯಲ್ಲಿರಲಿಲ್ಲ.
ಇಲ್ಲಿ ಆರ್ಯ ಪದವನ್ನು ಉನ್ನತ, ಮಾನ್ಯ ಎಂಬರ್ಥದಲ್ಲಿ ಹೇಳಿದ್ದಾನೆಯೇ ಹೊರತು ಇನ್ಯಾವುದೇ ಜನಾಂಗೀಯ ಕಾರಣದಿಂದಲ್ಲ. ಆರ್ಯಧರ್ಮ ಪದವನ್ನು ಕೂಡಾ ಸತ್ಯ, ಧರ್ಮ, ನೀತಿಗಳ ಅರ್ಥ ದಲ್ಲಿ ಬಳಸುತ್ತಾನೆಯೇ ಹೊರತು ಒಂದು ಧರ್ಮದ ಕುರುಹಾಗಿ ಅಲ್ಲ. ಆರ್ಯಧರ್ಮವೆಂದರೆ ಆರ್ಯರು, ಅನಾರ್ಯರು, ವೈದಿಕ, ಅವೈದಿಕ, ಬೌದ್ಧ, ಜೈನರನ್ನೆಲ್ಲ ಒಳಗೊಂಡಂತೆ ಆರ್ಯ ರೆನ್ನುತ್ತಾನೆಯೇ ಹೊರತು ಒಂದು ಗುಂಪಿನ ಜನರನ್ನಲ್ಲ!
ಬುದ್ಧನು ಕೂಡಾ ತನ್ನ ಮಾರ್ಗವನ್ನು ಆರ್ಯಮಾರ್ಗವೆಂದೇ ಕರೆಯುತ್ತಾನೆ. ಅದಲ್ಲದೇ ಇದೇ ಕ್ರಿ.ಶ.7ನೇ ಶತಮಾನದ ಮತ್ತೊಬ್ಬ ಚೀನಿ ಯಾತ್ರಿಕ ಹುಯೆನ್ ತ್ಸಾಂಗ್ ಕೂಡಾ ಈ ದೇಶವನ್ನು ಹಿಂದೂ (ಚೀನಿ ಭಾಷೆಯಲ್ಲಿ ಸಿನ್ಹ್ ದು) ಎಂದು ಸಂಬೋಧಿಸಿದ್ದಾನೆ. ಅಂದರೆ ಹಿಂದೂ ಎಂಬುದು
ಆಗಲೂ ಒಂದು ಸಂಸ್ಕೃತಿಯಾಗಿದ್ದಿತೇ ಹೊರತು ಧರ್ಮವಾಗಿಯಲ್ಲ. ಅದೇ ರೀತಿ ‘ಆರ್ಯ’ ಎಂಬ ಪದ ಜನಾಂಗ ಸೂಚಕಕ್ಕಿಂತ ಹೆಚ್ಚಾಗಿ ಇಡೀ ಭಾರತೀಯರನ್ನು ‘ಉನ್ನತಿಯನ್ನು ಸಾಧಿಸಿದ’ ಆರ್ಯರೆಂಬ ಅರ್ಥದಲ್ಲಿ ಕರೆಯುತ್ತಿದ್ದರೆನ್ನುವುದು ಹೆಚ್ಚು ಸಮರ್ಪಕವೆನಿಸುತ್ತದೆ.
ಅಂದರೆ ಇಂದು ಭಾರತೀಯ ಜನಾಂಗವನ್ನು ಆರ್ಯ/ದ್ರಾವಿಡ ಎಂದು ವರ್ಗೀಕರಿಸುವುದು ಮೂಲತಃ ಸರಿಯಲ್ಲ. ಆರ್ಯ ಎಂಬುದು ಶಿಷ್ಟಾಚಾರದ ಗೌರವಸೂಚಕ ಪದವಾಗಿದ್ದುದು ಕೆಲ ಇತಿಹಾಸಕಾರರ ತಪ್ಪಿದ ಲೆಕ್ಕಾಚಾರದ ದೆಸೆಯಿಂದ ಹೆಚ್ಚಾಗಿ ಜನಾಂಗವನ್ನು ಗುರುತಿಸುವಿಕೆಯ ಪದವಾಗಿಬಿಟ್ಟಿತು. ಇದೇ ರೀತಿಯ ತಪ್ಪು ಲೆಕ್ಕಾಚಾರವನ್ನು ಇಂದಿನ ಸಾಕಷ್ಟು ಭಾರತೀಯರು ತಮ್ಮ ವಂಶಜರೊಬ್ಬರಿಗೆ ‘ರಾವ್ ಬಹದ್ದೂರ್’, ‘ಯಜಮಾನ್’, ‘ಸರ್ದಾರ್’, ‘ಒಡೆಯರ್’ ಎಂಬ ಬಿರುದಾವಳಿಗಳು ಸಿಕ್ಕಿದ್ದುದನ್ನೇ ತಮ್ಮ ಕುಲನಾಮಗಳಿಗೆ ಅಂಟಿಸಿಕೊಂಡು ತಮ್ಮದೇ ಒಂದು ವಿಶೇಷ ಜನಾಂಗವೆನ್ನುವಂಥ ಭ್ರಮಾಲೋಕವನ್ನೇ ಸೃಷ್ಟಿಸಿಕೊಂಡಿರುವುದು ಇಂಥ ಒಂದು ಮಾನವಿಕ ಭ್ರಮೆಯ ಉದಾಹರಣೆ.
ಜಾಗತಿಕವಾಗಿ ಕೃಷಿಯ ಹುಟ್ಟಿನೊಂದಿಗೇ ಪಿತೃಪ್ರಧಾನ ವ್ಯವಸ್ಥೆ ಹುಟ್ಟಿಕೊಂಡಿದ್ದಿತು. ಕೃಷಿಯೇ ಪ್ರಧಾನವಾಗಿದ್ದ ಹಿಂದೂಗಳು ಕೂಡಾ ಪಿತೃಪ್ರಧಾನ ವ್ಯವಸ್ಥೆಯಿಂದ ಹೊರತಾಗಿರಲಿಲ್ಲ. ಸಮಾಜ ವಿಕಾಸಕ್ಕೆ ತಕ್ಕಂತೆ ಜನಾಂಗಗಳೂ ವಿಕಾಸಗೊಂಡು ಕೃಷಿಕ/ವಣಿಕ/ಕುಶಲಕರ್ಮಿಗಳನ್ನು ವೈಶ್ಯ ರೆಂದೂ, ಸೈನಿಕ/ರಕ್ಷಕ/ಹೋರಾಟಗಾರರನ್ನು ಕ್ಷತ್ರಿಯರೆಂದೂ, ಕ್ರಿಯಾವಿಧಿಗಳನ್ನು ನಡೆಸುವ ಪುರೋಹಿತ/ವಿದ್ಯಾರ್ಥಿ/ರೀತಿ-ನೀತಿಗಳ ರೂಪಿಸುವ ಜ್ಞಾನವಂತರನ್ನು ಬ್ರಾಹ್ಮಣರೆಂದೂ ಮತ್ತು ಕೃಷಿಕರಲ್ಲದ/ಕುಶಲಕರ್ಮಿಗಳಲ್ಲದ ಕೂಲಿ ಕಾರ್ಮಿಕರನ್ನು ಶೂದ್ರರೆಂದೂ ವರ್ಗೀಕರಿಸ ಲಾಯಿತು.
ಎಲ್ಲಾ ಜನಾಂಗವೂ ಈ ನಾಲ್ಕು ವರ್ಗಗಳಲ್ಲಿ ವಿಂಗಡನೆಯಾಗಿದ್ದು, ಮತ್ತಿನ್ಯಾವ ವರ್ಗಗಳೂ ಇರಲಿಲ್ಲ. ಮೂಲತಃ ವೇದಗಳು ಆಚರಣೆಗಳಿಗೆ ಚೌಕಟ್ಟು ಒದಗಿಸಿದರೆ, ಈ ನಾಲ್ಕು ವರ್ಣಗಳು ನಾಗರಿಕತೆಯ ಸಮಾಜವನ್ನು ಮುನ್ನಡೆಸಲು ಬೇಕಾದ ಮಾನವ ಸಂಪನ್ಮೂಲಗಳ ವರ್ಗೀಕರಣ ವಾಗಿದ್ದಿತು. ಆರಂಭದಲ್ಲಿ ವೇದಕ್ಕೂ ವರ್ಣಕ್ಕೂ ಯಾವುದೇ ಸಂಬಂಧವಿರಲಿಲ್ಲ. ಮುಂದೆ ಸಮಾಜ ವಿಕಾಸವಾದಂತೆ ಇವೆರಡಕ್ಕೂ ಸಂಬಂಧ ಕಲ್ಪಿಸಲಾಯಿತು.
ಯಾವುದೇ ಜಾಗತಿಕ ನಾಗರಿಕತೆಯ ಸಂವಿಧಾನಗಳು ತಿದ್ದುಪಡಿಯಾಗುವಂತೆ ವೇದಗಳು ಪರಿಷ್ಕೃತ ಗೊಂಡವು. ವೇದಗಳಲ್ಲಿನ ಯಾವ ಆಚರಣೆಗಳಿಗೆ ಯಾವ ವರ್ಣದ ಜನ ಜವಾಬ್ದಾರಿಯೆಂಬ ಹಿನ್ನೆಲೆಯಲ್ಲಿ ಈ ಜೋಡಣೆಯಾಗಿರಬಹುದು. ಕ್ರಮೇಣ ವೇದಗಳು ಸಮಾಜವನ್ನು ಮುನ್ನಡೆ ಸುವ ಮಾರ್ಗದರ್ಶಿಗಳಾಗಿ, ಸಮಾಜದ ಯಾವ್ಯಾವ ಕಾರ್ಯಗಳಿಗೆ ಯಾರು ಜವಾಬ್ದಾರಿಯೆಂದು ರೂಪುಗೊಳ್ಳುತ್ತಾ ವೇದಕ್ಕೂ ವರ್ಣಕ್ಕೂ ನೇರ ಸಂಬಂಧವುಂಟಾಗಿರಬಹುದು.
ಹೆಚ್ಚಿನ ಜ್ಞಾನ ಸಂಪಾದಿಸಿದವರು ನಿಯಮಗಳನ್ನು ರೂಪಿಸುವಂಥ ಜವಾಬ್ದಾರಿಯುತ ಸ್ಥಾನ ಗಳಲ್ಲಿರುತ್ತಿದ್ದರು. ಹಾಗಾಗಿಯೇ ಆಗಿನಿಂದಲೂ ವಿದ್ಯೆಗೆ ಅತ್ಯಂತ ಮಹತ್ವ ಕೊಡುತ್ತಿದ್ದ ಭಾರತೀ ಯರು ಬ್ರಾಹ್ಮಣ್ಯಕ್ಕೆ ಅತ್ಯಂತ ಪ್ರಮುಖ ಸ್ಥಾನವನ್ನು ಕೊಟ್ಟಿದ್ದರು. ಭಾರತೀಯರಷ್ಟೇ ಅಲ್ಲದೇ ಚೀನಿಯರು ಕೂಡಾ ವಿದ್ಯೆಗೆ ಅತ್ಯಂತ ಪ್ರಮುಖ ಸ್ಥಾನವನ್ನು ಕೊಟ್ಟಿದ್ದರು. ಆ ಒಂದು ಪ್ರಾಮುಖ್ಯ ವೇ ಇಂದಿನ 21ನೇ ಶತಮಾನದ ಭಾರತ ಮತ್ತು ಚೀನಾದಲ್ಲಿ ಯಥಾವತ್ತಾಗಿ ಬೇರೆಡೆಗಿಂತ ಹೆಚ್ಚಾಗಿ ಮುಂದುವರಿದಿದೆ.
ಇದಕ್ಕೆ ಈ ರಾಷ್ಟ್ರಗಳಲ್ಲಿರುವ ಜನಸಂಖ್ಯೆ ಕೂಡಾ ಮುಖ್ಯ ಕಾರಣ. ಎಲ್ಲರಿಗೂ ವಿದ್ಯಾವಂತರಾಗಿ ಬುದ್ಧಿವಂತರಾಗುವ ಆಸೆ ಇರುವುದರಿಂದಲೇ ವಿದ್ಯೆಗೆ ಅಂಥ ಪ್ರಾಮುಖ್ಯ ಬಂದಿರುವುದು. ಆ ಒಂದು ಕಾರಣದಿಂದಲೇ ಇಂದಿನ ಭಾರತದಲ್ಲಿ ಶಿಶುವಿಹಾರಗಳಿಂದ ಉನ್ನತ ವಿದ್ಯಾಭ್ಯಾಸಗಳವರೆಗೆ ಎಲ್ಲೂ ಸ್ಪರ್ಧೆಗಳೇರ್ಪಟ್ಟಿರುವುದು. ಕೆಲವೆಡೆ ಮಾನದಂಡವಾಗಿ ನೂರಕ್ಕೆ ನೂರು ಅಂಕಗಳು ಪ್ರಮುಖವೆನಿಸಿದರೆ, ಇನ್ನೊಂದೆಡೆ ಕಟ್ಟಲಾಗುವ ಶುಲ್ಕದ ಮೊತ್ತ ಅಥವಾ ಅಂಕ/ಶುಲ್ಕ ಎರಡೂ ಪ್ರಮುಖವಾಗುತ್ತದೆ.
ಅಂದರೆ ಕ್ರಿಸ್ತಪೂರ್ವ ಭಾರತದಿಂದ ಇಂದಿನವರೆಗೂ ವಿದ್ಯೆ ಯಾನೆ ಬ್ರಾಹ್ಮಣ್ಯ ಅತ್ಯಂತ ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿದೆ. ಹೀಗಿದ್ದರೂ ವಿದ್ಯಾ-ಬುದ್ದಿ ಪ್ರವೀಣ ಭಾರತೀಯ, ಬ್ರಾಹ್ಮಣ್ಯವನ್ನೀಗ ಬೇರೆಯದಾಗಿಯೇ ನೋಡುತ್ತಿದ್ದಾನೆ. ಅಂದರೆ ವಿದ್ಯೆಯೇ ಬೇರೆ, ಬ್ರಾಹ್ಮಣ್ಯವೇ ಬೇರೆ ಎಂದು ಪರಿಗಣಿಸಿದ್ದಾನೆ.
ಏಕೆಂದರೆ ಪುರಾತನ ಭಾರತೀಯನ ಔದ್ಯೋಗಿಕ ವರ್ಗೀಕರಣವನ್ನು ವಿದ್ಯಾವಂತ ಆಧುನಿಕ ಭಾರ ತೀಯ ಜಾತಿವರ್ಗಗಳನ್ನಾಗಿಸಿದ್ದಾನೆ. ಆ ಜಾತಿ-ವರ್ಗೀಕರಣದ ನಿರ್ವಹಣೆಗೆ ಸಂವಿಧಾನವೆಂಬ ಅನುಶಾಸನವನ್ನೇ ತಂದಿದ್ದಾನೆ. ಪುರಾತನ ಭಾರತೀಯ ತನ್ನ ಉದ್ಯೋಗದ ಪ್ರಕಾರ ವರ್ಣಗಳನ್ನು ಬದಲಾಯಿಸಬಹುದಾಗಿದ್ದುದನ್ನು, ಆಧುನಿಕ ಭಾರತೀಯ ಭವಿಷ್ಯದಲ್ಲಿ ಹುಟ್ಟಲಿರುವ ಭಾರತೀ ಯನೂ ತನ್ನ ವರ್ಣ/ಜಾತಿಯನ್ನು ಬದಲಾಯಿಸಲಾಗದಂತೆ ವ್ಯವಸ್ಥಿತ ನಿಯಮಬದ್ಧ ಶಾಶ್ವತ ನಿರ್ಬಂಧವನ್ನು ಸೃಷ್ಟಿಸಿಕೊಂಡಿದ್ದಾನೆ!
ಇದು ಬ್ರಿಟಿಷ್ ಪ್ರಣೀತ ಮನುಸ್ಮೃತಿ ಸೃಷ್ಟಿಸಿದ ವಿಸ್ಮೃತಿ ಮತ್ತದನ್ನು ಭಾರತೀಯ ಸಂವಿಧಾನ ಮಾನ್ಯ ಮಾಡಿದ ಸುಕೃತಿ. ಈ ಸುಕೃತಿಯು ಭಾರತೀಯ ನಾಗರಿಕನ ಎಲ್ಲಾ ಸಾಂವಿಧಾನಿಕ ಮೂಲ ಭೂತ ಹಕ್ಕುಗಳನ್ನು ಪರೋಕ್ಷವಾಗಿ ಮೊಟಕುಗೊಳಿಸುತ್ತದೆ ಎಂಬುದು ಎಂದೆಂದಿಗೂ ಗುರುತು ಹಾಕಿಕೊಳ್ಳಬೇಕಾದ ಸಂಪ್ರತಿ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Dr Kabbinale vasanth Bharadwaj Column: ಮುದ್ದಣ್ಣನ ಸಮಗ್ರ ಕಾವ್ಯ ಭಂಡಾರ