Dr Kabbinale vasanth Bharadwaj Column: ಮುದ್ದಣ್ಣನ ಸಮಗ್ರ ಕಾವ್ಯ ಭಂಡಾರ
ತಾನು ರಚಿಸಿದ ಕಾವ್ಯ ಎಂಬುದು ಗೊತ್ತಾದರೆ ಕೃತಿಪ್ರಕಟಣೆ ಕೈಗೂಡದೆಂದು ಭಾವಿಸಿದ ಅವನು ಮುದ್ದಣನೆಂಬ ಮರೆಹೆಸರಿನಿಂದ ಮೈಸೂರಿನ ಕರ್ಣಾಟಕ ಕಾವ್ಯಮಂಜರಿಗೆ ಹಸ್ತಪ್ರತಿಯನ್ನು ಕಳುಹಿಸಿದ ವೃತ್ತಾಂತವು ಕನ್ನಡದ ಗ್ರಂಥಪ್ರಕಾಶನದ ಇತಿಹಾಸವನ್ನೂ ನಮ್ಮ ಮುಂದೆ ತೆರೆದಿಡುತ್ತದೆ


Source : Vishwavani Daily News Paper
ಡಾ.ಕಬ್ಬಿನಾಲೆ ವಸಂತ ಭಾರದ್ವಾಜ
ಮುದ್ದಣನ ಎಲ್ಲಾ ಕಾವ್ಯಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ, ಆತನ ಐದೂ ಕಾವ್ಯಗಳಿಗೆ ಪ್ರತ್ಯೇಕವಾದ ಪ್ರಸ್ತಾವನೆ, ಹೊಸಗನ್ನಡದಲ್ಲಿ ಕಥಾಸಾರ ಮತ್ತು ಅರ್ಥಕೋಶ ಗಳನ್ನು ನೀಡಲಾಗಿದೆ. ಕವಿಯು ಪರ್ಯಾಯಪದಗಳ ಬಳಕೆಯಲ್ಲಿ ತೋರಿದ ಜಾಣ್ಮೆಗೆ ಕನ್ನಡಿ ಹಿಡಿಯುವ ನಾಮಾಂತರಸೂಚಿ, ಆಕರಸೂಚಿ, ಕವಿಯ ಬದುಕಿನ ಮೈಲಿಗಲ್ಲುಗಳು ಮತ್ತು ಅಪೂರ್ವಚಿತ್ರಗಳು ಇದರ ಮೌಲ್ಯವನ್ನು ಹೆಚ್ಚಿಸಿವೆ.
ಹಳೆಗನ್ನಡ ಮತ್ತು ಹೊಸಗನ್ನಡಗಳ ಮಧ್ಯಮಣಿಯಾದ ಮುದ್ದಣ ಕವಿ ಐದು ಕಾವ್ಯ ಗಳನ್ನು ರಚಿಸಿದವನು. ರತ್ನಾವತೀ ಕಲ್ಯಾಣ, ಕುಮಾರ ವಿಜಯ ಯಕ್ಷಗಾನ ಕೃತಿಗಳಾದರೆ ಶ್ರೀರಾಮಪಟ್ಟಾಭಿಷೇಕಂ ವಾರ್ಧಕ ಷಟ್ಪದಿಯ ಕಾವ್ಯ. ಶ್ರೀರಾಮಾಶ್ವಮೇಧಂ ಮತ್ತು ಅದ್ಭುತ ರಾಮಾಯಣಂಗಳು ಗದ್ಯಕಾವ್ಯಗಳು. ಇವುಗಳೊಂದಿಗೆ 17 ಸಂಪ್ರದಾಯದ ಹಾಡುಗಳು ಮತ್ತು ಜೋಜೋ ಎಂಬ ಲೇಖನವನ್ನು (ಸುವಾಸಿನೀ ಪತ್ರಿಕೆ-1900) ಅವನು ಬರೆದಿದ್ದಾನೆ. ಈ ಎಲ್ಲ ಕೃತಿಗಳೂ ಸೇರಿ ಕೊಂಡು ಇದೀಗ ಸಮಗ್ರ ಕಾವ್ಯಸಂಪುಟವಾಗಿ ಮುದ್ದಣ ಕೃತಿಕರಜನ ನಮ್ಮ ಮುಂದಿದೆ.
ಇವುಗಳನ್ನು ಬರೆದ ನಂದಳಿಕೆ ಲಕ್ಷ್ಮೀನಾರಾಯಣಯ್ಯ ಉಡುಪಿ-ಕುಂದಾಪುರಗಳ ಪ್ರೌಢಶಾಲೆಗಳಲ್ಲಿ ವ್ಯಾಯಾಮ ಶಿಕ್ಷಕನಾಗಿ, ಕನ್ನಡ ಪಂಡಿತನಾಗಿ ದುಡಿದು ಮೂವ ತ್ತೊಂದರ ಹರೆಯದಲ್ಲೇ (1870-1901) ವಿಧಿವಶನಾದನು. ತಾನು ರಚಿಸಿದ ಕಾವ್ಯ ಎಂಬುದು ಗೊತ್ತಾದರೆ ಕೃತಿಪ್ರಕಟಣೆ ಕೈಗೂಡದೆಂದು ಭಾವಿಸಿದ ಅವನು ಮುದ್ದಣನೆಂಬ ಮರೆಹೆಸರಿನಿಂದ ಮೈಸೂರಿನ ಕರ್ಣಾಟಕ ಕಾವ್ಯಮಂಜರಿಗೆ ಹಸ್ತಪ್ರತಿಯನ್ನು ಕಳುಹಿಸಿದ ವೃತ್ತಾಂತವು ಕನ್ನಡದ ಗ್ರಂಥಪ್ರಕಾಶನದ ಇತಿಹಾಸವನ್ನೂ ನಮ್ಮ ಮುಂದೆ ತೆರೆದಿಡುತ್ತದೆ.
ಶ್ರೀರಾಮಪಟ್ಟಾ ಭಿಷೇಕಂ ಮೈಸೂರಿನಿಂದ ಪ್ರಕಟಗೊಂಡ (1897) ಬಳಿಕ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯವು ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸಂಪಾದನೆಯಲ್ಲಿ ‘ಮುದ್ದಣ ಭಂಡಾರ’ ಎಂಬ ಹೆಸರಿನಲ್ಲಿ ಮುದ್ದಣನ ಸಮಗ್ರ ಕೃತಿ ಗಳನ್ನು (1987) ಪ್ರಕಟಿಸಿತು. ಅದರ ಪ್ರತಿಗಳು ಈಗ ಅಲಭ್ಯವಾಗಿರುವುದರಿಂದ ನಮ್ಮ ನಡುವಿನ ಹಿರಿಯ ವಿದ್ವಾಂಸರಾದ ಪ್ರೊ.ಎ.ವಿ.ನಾವಡ ಅವರು ವೈಯಕ್ತಿಕ ನೆಲೆಯಲ್ಲಿ ಕೈಗೊಂಡ ಈ ಸಾಹಿತ್ಯತಪಸ್ಸು ಗಮನಾರ್ಹವಾದುದು.
ಈ ಗ್ರಂಥದಲ್ಲಿ ಕವಿಮುದ್ದಣನ ಐದೂ ಕಾವ್ಯಗಳಿಗೆ ಪ್ರತ್ಯೇಕವಾದ ಪ್ರಸ್ತಾವನೆ, ಹೊಸ ಗನ್ನಡದಲ್ಲಿ ಕಥಾಸಾರ ಮತ್ತು ಅರ್ಥಕೋಶಗಳನ್ನು ನೀಡಲಾಗಿದೆ. ಕವಿಯು ರ್ಯಾಯ ಪದಗಳ ಬಳಕೆಯಲ್ಲಿ ತೋರಿದ ಜಾಣ್ಮೆಗೆ ಕನ್ನಡಿ ಹಿಡಿಯುವ ನಾಮಾಂತರಸೂಚಿ, ಆಕರಸೂಚಿ, ಕವಿಯ ಬದುಕಿನ ಮೈಲಿಗಲ್ಲುಗಳು ಮತ್ತು ಅಪೂರ್ವಚಿತ್ರಗಳು ಇದರ ಮೌಲ್ಯವನ್ನು ಹೆಚ್ಚಿಸಿವೆ.
ಮುದ್ದಣನ ಕುರಿತು ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರ ಲೇಖನ, ‘ಕೃತಿಕರಜನ’ದ ವೈಶಿಷ್ಟ್ಯ ವನ್ನು ಎತ್ತಿತೋರಿದ ಪ್ರೊ.ಬಸವರಾಜ ಕಲ್ಗುಡಿಯವರ ಮುನ್ನುಡಿ ಮತ್ತು ಸಂಪಾದಕರ
ವೈದುಷ್ಯಪೂರ್ಣ ಪ್ರಸ್ತಾವನೆಗಳು ಮುದ್ದಣ ಕಾವ್ಯಾಭ್ಯಾಸಕ್ಕೆ ಕೈದೀವಿಗೆಗಳಾಗಿವೆ. ಮುದ್ದಣನ ಯಕ್ಷಗಾನ ಕೃತಿಗಳಾದ ರತ್ನಾವತೀ ಕಲ್ಯಾಣ ಮತ್ತು ಕುಮಾರ ವಿಜಯಗಳು (1891) ಅವನ ಜೀವಿತಕಾಲದಲ್ಲೇ ಪ್ರಕಟವಾದರೂ, ಅದರಿಂದ ತಾನು ಕೈಸೋತೆನೆಂದು
ಹೇಳಿಕೊಂಡಿರುವುದು ಕನ್ನಡ ಪುಸ್ತಕಪ್ರಕಾಶನದ ವಿಷಾದಗೀತೆಯ ಮೊದಲ ಪಲ್ಲವಿ ಯಾಗಿದೆ. ಆದುದರಿಂದಲೇ ತನ್ನ ಉಳಿದ ಮೂರು ಕಾವ್ಯಗಳನ್ನು ಅನ್ಯಕರ್ತೃಕವೆಂದು ಅವನು ಹೇಳಿಕೊಳ್ಳಬೇಕಾಯಿತು! ಅದ್ಭುತ ರಾಮಾಯಣವನ್ನು ಕಬ್ಬಿಗರ ಮನೆಯೂಳಿ ಗದನೊರ್ವಂ ಕನ್ನಡಿಗಂ ಎಂದೂ, ಶ್ರೀ ರಾಮಪಟ್ಟಾಭಿಷೇಕವನ್ನು ಚಾವಡಿ ರಂಗಭಟ್ಟ ನಾತ್ಮಜೆ ಮಹಾಲಕ್ಷ್ಮಿ ಎಂದೂ, ಶ್ರೀ ರಾಮಾಶ್ವಮೇಧವನ್ನು ಮುದ್ದಣ ಕವಿಕೃತಂ ಎಂದೂ ಹೇಳಿಕೊಂಡ!
ಇವುಗಳಲ್ಲಿ ಅದ್ಭುತ ರಾಮಾಯಣ (1895) ಮತ್ತು ಶ್ರೀರಾಮಪಟ್ಟಾಭಿಷೇಕ (1897)ಗಳು ಕವಿಯ ಜೀವಿತ ಕಾಲದಲ್ಲೇ ಬೆಳಕು ಕಂಡರೂ, ಅವನ ಶ್ರೇಷ್ಠ ಪ್ರಾತಿನಿಧಿಕ ಕೃತಿ ರಾಮಾ ಶ್ವಮೇಧ ಪ್ರಕಟವಾದಾಗ (1902) ಕವಿಯು ಬದುಕಿರಲಿಲ್ಲ ಎಂಬುದು ನೋವಿನ ಸಂಗತಿ. ಮುದ್ದಣನಿಗೆ ಕಾವ್ಯರಚನಾಕ್ರಮವನ್ನು ಅವನ ಗುರುಗಳಾದ ಮಳಲಿ ಸುಬ್ಬರಾಯರು, ಬವುಳಾಡಿ ವೆಂಕಟರಮಣ ಹೆಬ್ಬಾರರು ಮತ್ತು ಅವರ ತಾಯಿ ಮಹಾಲಕ್ಷ್ಮಿ (ಕವಿಯ ತಾಯಿಯ ಹೆಸರೂ ಮಹಾಲಕ್ಷ್ಮಿಯೇ) ಬೋಧಿಸಿದರೆಂಬ ವಿಚಾರ, ಗೋವಿಂದ ಪೈ, ಬೆನಗಲ್ ರಾಮರಾವ್, ಎಂ.ಎ.ರಾಮಾನುಜೈಯಂಗಾರ್ ಮುಂತಾದ ಮಹನೀಯರು ಕವಿಯ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಅಂತೆಯೇ ಅದ್ಭುತರಾಮಾಯಣದ ಕವಿಯ ಕೈಬರೆಹದ ಮೂಲಪ್ರತಿಯ ಶೋಧ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಕವಿಯ ಸ್ವಹಸ್ತಪ್ರತಿ ರಾಮಾಶ್ವಮೇಧದ ಶಾಸ್ತ್ರೀಯ ಸಂಪಾದನ ಕಾರ್ಯದ ಅಗತ್ಯವನ್ನು ಕನ್ನಡದಲ್ಲಿ ಆಗಬೇಕಾಗಿರುವ ಮಹತ್ವದ ಕೆಲಸಗಳು ಎಂದು ಸಂಪಾದಕರು ಸೂಚಿಸಿರುವುದು ಗಮನಾರ್ಹ.
ಮುದ್ದಣಕವಿಯು ಅಸ್ತಂಗತನಾಗಿ 124 ವರ್ಷಗಳು ಕಳೆದರೂ ಅವನ ಕಾವ್ಯದ ಚರ್ಚೆ ಇನ್ನೂ ಮುಗಿದಿಲ್ಲ! ಹಳಗನ್ನಡದ ಬಳಕೆ, ದೇಶೀ ಪ್ರೀತಿ, ಯಕ್ಷಗಾನದಲ್ಲಿ ನೂತನ ಪದ್ಯ ಬಂಧಗಳ ಸೃಜನೆ, ಗದ್ಯಕಥನದ ಶೈಲಿ, ಸಾಹಿತ್ಯ ವಿಮರ್ಶನ ದೃಷ್ಟಿ, ಹೊಸ ಆಲೋಚನೆ ಗಳ ಮಿಂಚು ಮುಂತಾಗಿ ಮುದ್ದಣನ ಕಾವ್ಯ ಕನ್ನಡಿಗರನ್ನು ಎಚ್ಚರಿಸುತ್ತಲೇ ಇದೆ. ಈ ಬಗ್ಗೆ ವಿದ್ವದ್ವಲಯ ಇನ್ನಷ್ಟು ಕೃಷಿ ಮಾಡಬೇಕೆಂಬ ದಿಸೆಯಲ್ಲಿ ಅಲಭ್ಯವಾದ ಕೃತಿಗಳನ್ನು ಮರುಸಂಪಾದಿಸಿದ ಈ ಕಾರ್ಯ ಪ್ರಶಂಸಾರ್ಹವಾದುದು. ಪ್ರೊ.ಎ.ವಿ.ನಾವಡ ಅವರು ನಮ್ಮ ನಡುವೆ ಕ್ರಿಯಾಶೀಲರಾಗಿರುವ ಹಿರಿಯ ವಿದ್ವಾಂಸರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಭಾಷಾನಿಕಾಯದ ಡೀನ್ ಆಗಿ ನಿವೃತ್ತರು. ಜನಪದ ಸಾಹಿತ್ಯ, ಮಿಷನರಿ ಸಾಹಿತ್ಯ ಮತ್ತು ದಾಸಸಾಹಿತ್ಯದ ಅಧ್ಯಯನಕ್ಕೆ ಹೊಸ ಆಯಾಮಗಳನ್ನು ನೀಡಿದವರು. ಇದೀಗ ಇವರು ಸಂಪಾದಿಸಿದ ‘ಕೃತಿಕರಜನ’ ಮುದ್ದಣ ಕವಿಯ ಕಾವ್ಯಾಭರಣಗಳ ಹೊಸಭಂಡಾರ ಎನ್ನಬಹುದು.