Kantara Chapter 1 OTT Release: 'ಕಾಂತಾರ ಚಾಪ್ಟರ್ 1' ಚಿತ್ರದ ಒಟಿಟಿ ರಿಲೀಸ್‌ಗೆ ಮುಹೂರ್ತ ಫಿಕ್ಸ್; ಎಲ್ಲಿ, ಯಾವಾಗ ನೋಡಬಹುದು?
Kantara Chapter 1: ಸದ್ಯ ದೇಶ-ವಿದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ʼಕಾಂತಾರ ಚಾಪ್ಟರ್ 1' ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಮಧ್ಯೆ ಚಿತ್ರದ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹಿಂದಿ ಬಿಟ್ಟು ಉಳಿದ ಭಾಷೆಗಳಲ್ಲಿ ಈ ತಿಂಗಳೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ʼಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ರಿಷಬ್ ಶೆಟ್ಟಿ -
Ramesh B
Oct 27, 2025 5:49 PM
ಬೆಂಗಳೂರು, ಅ. 27: ಸದ್ಯ ರಿಷಬ್ ಶೆಟ್ಟಿ (Rishab Shetty)-ಹೊಂಬಾಳೆ ಫಿಲ್ಮ್ಸ್ (Hombale Films) ಕಾಂಬಿನೇಷನ್ ʼಕಾಂತಾರ ಚಾಪ್ಟರ್ 1' (Kantara Chapter 1) ದೇಶ-ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಜಾಗತಿಕವಾಗಿ ಈಗಾಗಲೇ 800 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದ್ದು, ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಅಲ್ಲದೆ ಕನ್ನಡ ಮತ್ತು ಹಿಂದಿಯಲ್ಲಿ 200 ಕೋಟಿ ರೂ. ಕ್ಲಬ್ ಸೇರುವ ಮೂಲಕ ಇತಿಹಾಸ ಬರೆದಿದೆ. ಜತೆಗೆ 1 ಸಾವಿರ ಕೋಟಿ ರೂ. ಕ್ಲಬ್‌ನತ್ತ ಮುನ್ನುಗ್ಗುತ್ತಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ (Kantara Chapter 1 OTT Release). ಎಲ್ಲಿ, ಯಾವಾಗ ಪ್ರಸಾರವಾಗಲಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
2022ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸಿದೆ. ಅಕ್ಟೋಬರ್ 2ರಂದು ವಿಶ್ವಾದ್ಯಂತ, ವಿವಿಧ ಭಾಷೆಗಳಲ್ಲಿ ರಿಲೀಸ್ ಆದ ʼಕಾಂತಾರ ಚಾಪ್ಟರ್ 1' ತಿಂಗಳೊಳಗೆ ಒಟಿಟಿ ಫ್ಲಾಟ್‌ಫಾರ್ಮ್‌ಗೆ ಲಗ್ಗೆ ಇಡಲಿದೆ.
ಪ್ರೈಮ್ ವಿಡಿಯೊದ ಎಕ್ಸ್ ಪೋಸ್ಟ್ ಇಲ್ಲಿದೆ:
get ready to witness the LEGENDary adventure of BERME 🔥#KantaraALegendChapter1OnPrime, October 31@hombalefilms @KantaraFilm @shetty_rishab @VKiragandur @ChaluveG @rukminitweets @gulshandevaiah #ArvindKashyap @AJANEESHB @HombaleGroup pic.twitter.com/ZnYz3uBIQ2
— prime video IN (@PrimeVideoIN) October 27, 2025
ಅಮೇಜಾನ್ ಪ್ರೈಮ್ ವಿಡಿಯೊದಲ್ಲಿ ಅಕ್ಟೋಬರ್ 31ರಂದು ʼಕಾಂತಾರ ಚಾಪ್ಟರ್ 1' ಚಿತ್ರ ಒಟಿಟಿ ರಿಲೀಸ್ ಆಗಲಿದೆ. ಭಾರತ ಸೇರಿದಂತೆ ಸುಮಾರು 200 ದೇಶಗಳಲ್ಲಿ ಇದು ವೀಕ್ಷಣೆಗೆ ಲಭ್ಯ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ವರ್ಷನ್ ಬಿಡುಗಡೆಯಾಗಲಿದೆ. ಹಿಂದಿ ಡಬ್ ಕೆಲವು ದಿನಗಳ ಬಳಿಕ ಪ್ರಸಾರವಾಗಲಿದೆ ಎಂದು ಪ್ರೈಮ್ ವಿಡಿಯೊ ತಿಳಿಸಿದೆ.
ಮೂಲಗಳ ಪ್ರಕಾರ ʼಕಾಂತಾರ ಚಾಪ್ಟರ್ 1' ಒಟಿಟಿ ಹಕ್ಕು ಬರೋಬ್ಬರಿ 125 ಕೋಟಿ ರೂ.ಗೆ ಮಾರಾಟವಾಗಿದೆಯಂತೆ. ರಿಲೀಸ್ ಆದ 1 ತಿಂಗಳೊಳಗೆ ಒಟಿಟಿಯಲ್ಲಿ ಪ್ರಸಾರ ಮಾಡುವ ಬಗ್ಗೆ ಮೊದಲೇ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಇದರೊಂದಿಗೆ ಅಕ್ಟೋಬರ್ 31ರಂದೇ ಚಿತ್ರದ ಇಂಗ್ಲಿಷ್ ವರ್ಷನ್ ವಿಶ್ವಾದ್ಯಂತ ತೆರೆಗೆ ಬರಲಿದೆ. ಇಂಗ್ಲಿಷ್ ಡಬ್ ಥಿಯೇಟರ್‌ಗೆ ಲಗ್ಗೆ ಇಟ್ಟರೆ ಕಲೆಕ್ಷನ್ 1 ಸಾವಿರ ಕೋಟಿ ರೂ. ಕ್ಲಬ್ ಅನಾಯಾಸವಾಗಿ ಸೇರಲಿದೆ ಎನ್ನುವ ಲೆಕ್ಕಾಚಾರ ಹಾಕಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್ 1! ಕಾಂತಾರ, ಕೆಜಿಎಫ್ ದಾಖಲೆ ಉಡೀಸ್
ಸುಮಾರು 4ನೇ ಶತಮಾನದಲ್ಲಿ, ಕದಂಬರ ಆಡಳಿತ ಕಾಲದಲ್ಲಿ ಕರಾವಳಿಯಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು ಇದು ಹೊಂದಿದ್ದು, ಬುಡಕಟ್ಟು ಜನಾಂಗ-ರಾಜಾಡಳಿತದ ಸಂಘರ್ಷದ ಮೇಲೆ ಬೆಳಕು ಚೆಲ್ಲುತ್ತದೆ. ಜತೆಗೆ ತುಳುನಾಡ ಸಂಸ್ಕೃತಿ, ವಿಶಿಷ್ಟ ಭೂತಾರಾಧನೆಯೂ ಚಿತ್ರದ ಮುಖ್ಯ ತಿರುಳು ಎನಿಸಿಕೊಂಡಿದೆ.
ನಾಯಕ ಬೆರ್ಮೆ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದು, ನಾಯಕಿ ರುಕ್ಮಿಣಿ ವಸಂತ್ ರಾಜಕುಮಾರಿ ಕನಕವತಿಯಾಗಿ ಅಭಿನಯಿಸಿದ್ದಾರೆ. ಇನ್ನು ಮುಖ್ಯ ಪಾತ್ರಗಳಲ್ಲಿ ಜಯರಾಮ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ನಟಿಸಿದ್ದಾರೆ. ನೈಜ ಕಾಡಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದು, ತೆರೆಮೇಲಿನ ದೃಶ್ಯ ವೈಭವಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎನಿಸಿಕೊಂಡಿದೆ.